samachara
www.samachara.com
ಅರ್ಧದಲ್ಲೇ ಓದು ಬಿಟ್ಟ 20ರ ಯುವಕ ಅದಿಲ್‌ ದರ್‌ ಬಾಂಬ್‌ ಹಿಡಿಯಲು ಕಾರಣ ಯಾರು?
COVER STORY

ಅರ್ಧದಲ್ಲೇ ಓದು ಬಿಟ್ಟ 20ರ ಯುವಕ ಅದಿಲ್‌ ದರ್‌ ಬಾಂಬ್‌ ಹಿಡಿಯಲು ಕಾರಣ ಯಾರು?

ಅದಿಲ್‌ ದರ್‌ ಇಂಥಹದ್ದೊಂದು ಹೀನ ಕೃತ್ಯವನ್ನು ಈತ ಏಕೆ ನಡೆಸಿದ? ತನ್ನನ್ನೇ ತಾನು ಸ್ಫೋಟಿಸಿಕೊಳ್ಳುವ ಧೈರ್ಯವೇಕೆ ತಂದುಕೊಂಡ? ಅವನ ಇಂಥ ನಿರ್ಧಾರಕ್ಕೆ ಕಾರಣಗಳೇನು?

ಅದಿಲ್ ಅಹಮದ್‌ ದರ್‌ ಸದ್ಯ ಎಲ್ಲರಿಗೂ ಪರಿಚಯವಿರುವ ಹೆಸರಿದು. ಕಾರಣ ಈತ ನಡೆಸಿದ ಕೃತ್ಯ. ಗುರುವಾರ ಕಾರ್‌ನಲ್ಲಿ ಸ್ಫೋಟಕ ತುಂಬಿಕೊಂಡು ಈತ ಜಮ್ಮು-ಶ್ರೀನಗರ ಹೆದ್ದಾರಿಯ ಆವಂತಿಪೊರಾದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ 46 ಸಿಆರ್‌ಪಿಎಫ್‌ ಯೋಧರು ಸಾವನ್ನಪ್ಪಿದ್ದರು. ಇಂಥಹದ್ದೊಂದು ಹೀನ ಕೃತ್ಯವನ್ನು ಈತ ಏಕೆ ನಡೆಸಿದ? ತನ್ನನ್ನೇ ತಾನು ಸ್ಫೋಟಿಸಿಕೊಳ್ಳುವ ಧೈರ್ಯವೇಕೆ ತಂದುಕೊಂಡ? ಅವನ ಇಂಥ ನಿರ್ಧಾರಕ್ಕೆ ಕಾರಣಗಳೇನು?

ಇದಕ್ಕೆ ಆತನದ್ದೇ ಆದ ಕತೆಗಳಿವೆ. ಸಾಯುವಾಗ ಅದಿಲ್‌ ದರ್‌ಗೆ ಹೆಚ್ಚೆಂದರೆ 20 ವರ್ಷ ವಯಸ್ಸು. ಇಷ್ಟು ಸಣ್ಣ ವಯಸ್ಸಲ್ಲಿ ಆತ ಇಂಥ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಮೂರು ವರ್ಷ ಹಿಂದೆ ಆತನ ಮೇಲೆ ನಡೆದ ದೌರ್ಜನ್ಯವೇ ಕಾರಣ ಎನ್ನುತ್ತಾರೆ ಆತನ ಪೋಷಕರು.

ಏನದು?

ಇದೆಲ್ಲಾ ನಡೆದಿದ್ದು 2016ರಲ್ಲಿ. ಪುಲ್ವಾಮ ಜಿಲ್ಲೆಯ ಗುಂಡಿಭಾಗ್‌ ಗ್ರಾಮದಲ್ಲಿ ಅದಿಲ್‌ ದರ್‌ನ ಮನೆಯಿತ್ತು. ಅದೊಂದು ದಿನ ಕಾಲೇಜು ಮುಗಿಸಿ ಅದಿಲ್‌ ದರ್‌ ಮತ್ತು ಆತನ ಸಂಗಡಿಗರು ಮನೆಗೆ ವಾಪಸಾಗುತ್ತಿದ್ದರು. ಈ ಸಂದರ್ಭದಲ್ಲಿ ಆದಿಲ್‌ ದರ್‌ ಮತ್ತು ಸಹಪಾಠಿಗಳನ್ನು ‘ಸ್ಪೆಷಲ್‌ ಟಾಸ್ಕ್‌ ಫೋರ್ಸ್‌’ನ ಪೊಲೀಸರು ತಡೆದಿದ್ದರು. ನಂತರ ಅವರನ್ನು ಥಳಿಸಿ ದೌರ್ಜನ್ಯ ಎಸಗಿದ್ದರು.

ಪೊಲೀಸ್‌ ಜೀಪಿನ ಸುತ್ತ ತನ್ನ ಮೂಗಿನಿಂದ ವೃತ್ತ ಎಳೆಯುವಂತೆ ಆತನನ್ನ ಪೊಲೀಸರು ಬಲವಂತ ಪಡಿಸಿದ್ದರು. ಅದು ಆತನ ಮೇಲೆ ಭಾರಿ ಪರಿಣಾಮ ಬೀರಿತ್ತು. “ಅದನ್ನು ಆತ ಪದೇ ಪದೇ ಹೇಳುತ್ತಿದ್ದ,” ಎನ್ನುತ್ತಾರೆ ಅದಿಲ್ ದರ್‌ ತಂದೆ ಗುಲಾಮ್‌ ಹಸನ್‌ ದರ್‌. ಆಗ ಆತನಿಗೆ 17 ವರ್ಷ ವಯಸ್ಸು.

ತನಗಾದ ಅವಮಾನದಿಂದ ಕುದ್ದು ಹೋದ ದರ್‌ , “ಘಟನೆ ನಂತರ ಸಶಸ್ತ್ರ ಗುಂಪು ಸೇರುವ ನಿರ್ಧಾರ ತೆಗೆದುಕೊಂಡ,” ಎಂದು ಹೇಳುತ್ತಾರೆ ಆತನ ಪೋಷಕರು. ‘ರಾಯ್ಟರ್ಸ್‌’ ಸುದ್ದಿ ಸಂಸ್ಥೆ ಜತೆ ಮಾತನಾಡಿರುವ ಆತನ ತಾಯಿ ಫಮೀದ, ‘ಇದು ಆತನಲ್ಲಿ ಭಾರತೀಯ ಸೈನಿಕರ ವಿರುದ್ಧ ಆಕ್ರೋಶ ಹುಟ್ಟುಹಾಕಿತು,” ಎಂದು ವಿವರಿಸುತ್ತಾರೆ. ಅಲ್ಲಿಂದ ಆತನ ದಿಕ್ಕು ಮತ್ತು ಗುರಿ ಬದಲಾಯಿತು. ಅದಕ್ಕೂ ಮೊದಲು ಆತ ಹೀಗಿರಲಿಲ್ಲ ಎನ್ನುತ್ತಾರೆ ಆತನ ತಂದೆ.

‘ಆತನೊಬ್ಬ ಜವಾಬ್ದಾರಿಯುತ ಮನುಷ್ಯನಾಗಿದ್ದ. ತನ್ನ ಕಿಸೆಯಲ್ಲಿ 10 ರೂಪಾಯಿ ಇದ್ದರೆ ಅದರಲ್ಲಿ ಐದು ರೂಪಾಯಿಯನ್ನು ಉಳಿಸುತ್ತಿದ್ದ. ತನ್ನ ತಾಯಿಯ ಬಗ್ಗೆ ಕಾಳಜಿವಹಿಸುತ್ತಿದ್ದ. ಮನೆಯ ದಿನ ನಿತ್ಯ ಆಗುಹೋಗುಗಳನ್ನು ಆತನೇ ನೋಡಿಕೊಳ್ಳುತ್ತಿದ್ದ’ಎನ್ನುತ್ತಾ ಕಣ್ಣೀರಾಗುತ್ತಾರೆ ಮನೆ ಮನೆಗೆ ಬಟ್ಟೆ ವ್ಯಾಪಾರ ಮಾಡಿ ಕೂಲಿ ಸಂಪಾದಿಸುವ ಹಸನ್‌ ದರ್‌.

12ನೇ ತರಗತಿ ಓದು ಮುಗಿಸಿದ ನಂತರ ಆತ ಕೆಲವು ಧಾರ್ಮಿಕ ಕೋರ್ಸ್‌ಗಳನ್ನು ತೆಗೆದುಕೊಂಡ. ಆತನಿಗೆ ಧರ್ಮಗುರುವಾಗಬೇಕು ಎಂಬ ಆಸೆ ಇತ್ತು. ಮಧ್ಯದಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿಕೊಂಡು ಸಂಪಾದನೆ ಮಾಡುತ್ತಿದ್ದ. 2017ರಲ್ಲಿ ಮರದ ಮಿಲ್‌ ಒಂದರಲ್ಲಿ ಮರದ ಪೆಟ್ಟಿಗೆಗಳನ್ನು ಮಾಡಿ 50-60 ಸಾವಿರ ಸಂಪಾದಿಸಿದ್ದ ಎಂದು ಅಳುತ್ತಲೇ ವಿವರಿಸುತ್ತಾರೆ ಹಸನ್‌ ದರ್‌.

ದರ್‌ ಕುಟುಂಬ ಆತನನ್ನು ಕೊನೆಯ ಬಾರಿ ನೋಡಿದ್ದು ಕಳೆದ ವರ್ಷ ಮಾರ್ಚ್‌ 19ರಂದು. ಆಗ ಆತ ಇಲ್ಲಿನ ಸ್ಥಳೀಯ ನಿರ್ಮಾಣ ಪ್ರದೇಶದಲ್ಲಿ ಕಲ್ಲು ಒಡೆಯುವವನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಅವತ್ತು ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದವನು ಊಟ ಮಾಡಿ ಸೈಕಲ್‌ ಜತೆ ಮನೆ ಬಿಟ್ಟಿದ್ದ. ನಂತರ ಆತ ಮನೆಗೆ ವಾಪಸ್‌ ಬಂದಿರಲಿಲ್ಲ. "ಆತನಿಗಾಗಿ ನಾವು ಮೂರು ತಿಂಗಳು ಹುಡುಕಾಡಿದೆವು. ಸಿಗದಾದಾಗ ಆತನನ್ನು ಮರಳಿ ಮನೆಗೆ ಕರೆತರುವ ಪ್ರಯತ್ನ ನಿಲ್ಲಿಸಿದೆವು," ಎನ್ನುತ್ತಾರೆ ಅವರು.

ಅದಿಲ್‌ ಹಸನ್‌ ದರ್‌ ತಾಯಿ ಫಮೀದ (ಎಡ).
ಅದಿಲ್‌ ಹಸನ್‌ ದರ್‌ ತಾಯಿ ಫಮೀದ (ಎಡ).
/ರಾಯ್ಟರ್ಸ್‌

ಕೆಲವು ದಿನಗಳ ನಂತರ ಕೈಯಲ್ಲಿ ಗನ್‌ ಹಿಡಿದಿದ್ದ ಆತನ ಫೊಟೋ ವೈರಲ್‌ ಆಗಿತ್ತು. ಇದೆಲ್ಲಾ ಹೇಗಾಯ್ತು ಎಂಬುದು ತಮಗೆ ತಿಳಿದಿಲ್ಲ ಎನ್ನುತ್ತಾರೆ ದರ್‌ ಪೋಷಕರು.

ದರ್‌ ಕುಟುಂಬಕ್ಕೆ ಜಮ್ಮು ಕಾಶ್ಮೀರದ ಹೋರಾಟಗಳಲ್ಲಿ ಭಾಗವಹಿಸಿದ, ತೀವ್ರವಾದಿ ಸಂಘಟನೆಗಳ ಸಕ್ರಿಯ ಸದಸ್ಯರಾದ ಹಿನ್ನೆಲೆ ಇದೆ. ಅದಿಲ್‌ ದರ್‌ ಮಾವ ಅಬ್ದುಲ್‌ ರಶೀದ್‌ 2016ರ ಬುರ್ಹಾನ್‌ ವನಿ ಸಾವಿನ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ತನ್ನ ಕಾಲಿಗೆ ಗುಂಡು ತಾಗಿಸಿಕೊಂಡಿದ್ದರು. “ಸುಮಾರು ಮೂರು ತಿಂಗಳ ಕಾಳ ಕಾಲಿನಲ್ಲಿ ಬ್ಯಾಂಡೆಜ್‌ ಇತ್ತು,” ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಇವರ ಮಗ ಮನ್ಸೂರ್‌ ರಶೀದ್‌ ದರ್‌ 2016ರಲ್ಲಿ ಲಷ್ಕರ್‌ ಇ ತಯ್ಯಬಾ ಸೇರಿದ್ದ. ಜೂನ್‌ 30, 2016ರಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಈತ ಸಾವನ್ನಪ್ಪಿದ. ಇವರ ಇನ್ನೋರ್ವ ಮಗ ತೌಸೀಫ್‌ ಅಹಮದ್‌ ಕೂಡ ಕಳೆದ ವರ್ಷ ಮಾರ್ಚ್‌ನಲ್ಲಿ ಮನೆ ಬಿಟ್ಟು ಹೋಗಿದ್ದ. ಈತ ಹೋದ ನಾಲ್ಕು ದಿನಗಳ ನಂತರ ಅದಿಲ್‌ ಮನೆ ಬಿಟ್ಟಿದ್ದ. “14 ದಿನಗಳ ನಂತರ ನನ್ನ ಮಗ ಮನೆಗೆ ವಾಪಸ್‌ ಬಂದ. ಆದರೆ ಆದಿಲ್‌ ಬರಲಿಲ್ಲ,” ಎನ್ನುತ್ತಾರೆ ಅಬ್ದುಲ್ ರಶೀದ್‌.

ಹೀಗೆ ಬಂದೂಕು ಕೆಳಗಿಟ್ಟು ಬಂದ ತೌಸೀಫ್‌ ಅಹಮದ್‌ ದರ್ ಇನ್ನೂ ಜೈಲಿನಲ್ಲಿದ್ದಾನೆ. “ಈ ಬಂಡುಕೋರರ ಗುಂಪು ಬಿಟ್ಟು ಬಂದ ಮೇಲೆ ಆತನನ್ನು ಕೆಲಸಕ್ಕೆ ದುಬೈಗೆ ಕಳುಹಿಸುತ್ತೇವೆ ಎಂದು ನಾವು ಪೊಲೀಸರಿಗೆ ಹೇಳಿದೆವು. ಆದರೆ ನಾವು ಆತನಿಗೆ ಪಾಸ್‌ಪೋರ್ಟ್‌ ಪಡೆಯುವ ಪ್ರಕ್ರಿಯೆಯಲ್ಲಿದ್ದರೆ ‘ಸಾರ್ವಜನಿಕ ಭದ್ರತಾ ಕಾಯ್ದೆಯಡಿಯಲ್ಲಿ ಆತನನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋದರು. ಕಳೆದ ಮೂರು ತಿಂಗಳಿನಿಂದ ನಮ್ಮ 19 ವರ್ಷದ ಮಗ ಜಮ್ಮುವಿನ ಕೋಟ್‌ ಬಲ್ವಾಲ್‌ ಜೈಲಿನಲ್ಲಿದ್ದಾನೆ,” ಎನ್ನುತ್ತಲೇ ಖಿನ್ನರಾಗುತ್ತಾರೆ ರಶೀದ್‌.

ಮುಂದೆಂದೂ ದರ್‌ ಮನೆಗೆ ವಾಪಸಾಗಲಿಲ್ಲ. ಆತನ ಸಾವಿನಿಂದ ಕುಟುಂಬಸ್ಥರಿಗೆ ಅಚ್ಚರಿಯೇನೂ ಆಗಿಲ್ಲ. ಆದರೆ ಆತ ಇಂಥದ್ದೊಂದು ದಾಳಿ ನಡೆಸುತ್ತಾನೆ ಎಂಬುದರ ಕಲ್ಪನೆಯೂ ಕುಟುಂಬಸ್ಥರಿಗೆ ಇರಲಿಲ್ಲ. “ಆತ ಮನೆ ಬಿಟ್ಟು ಬಂದೂಕುಧಾರಿಗಳ ಜತೆ ಸೇರಿದಾಗಲೇ ನಮ್ಮ ಪಾಲಿಗೆ ಆತ ಮೃತಪಟ್ಟಿದ್ದ. ಆದರೆ ಕೊನೆಯ ಬಾರಿ ಆತನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವಲ್ಲ ಎಂಬ ಕೊರಗಿದೆ,” ಎನ್ನುತ್ತಾರೆ ತಂದೆ ಗುಲಾಮ್‌ ಹಸನ್‌ ದರ್‌.

ಅದಿಲ್‌ ಅಹಮದ್‌ ದರ್‌ ತಂದೆ ಗುಲಾಮ್‌ ಹಸನ್‌ ದರ್‌.
ಅದಿಲ್‌ ಅಹಮದ್‌ ದರ್‌ ತಂದೆ ಗುಲಾಮ್‌ ಹಸನ್‌ ದರ್‌.
/ರಾಯ್ಟರ್ಸ್‌

ತನ್ನನ್ನು ತಾನು ಸ್ಫೋಟಿಸಿಕೊಂಡ ನಂತರ ಅದಿಲ್‌ ದರ್‌ನ 10 ನಿಮಿಷಗಳ ವಿಡಿಯೋ ಒಂದು ವೈರಲ್‌ ಆಗಿತ್ತು. ಅದರಲ್ಲಿ ಆತ ತನ್ನ ಯೋಜನೆಗಳನ್ನು ವಿವರಿಸಿದ್ದ. ಮಿಲಿಟರಿ ರೀತಿಯ ದಿರಿಸು ತೊಟ್ಟು ಕೈಯಲ್ಲಿ ಅಟೋಮ್ಯಾಟಿಕ್‌ ಗನ್‌ ಹಿಡಿದಿದ್ದ ಆತ, ‘ಈ ವಿಡಿಯೋ ನಿಮ್ಮನ್ನು ತಲುಪುವಷ್ಟರಲ್ಲಿ ನಾನು ಸ್ವರ್ಗಕ್ಕೆ ಹೋಗಿರುತ್ತೇನೆ’ ಎಂದು ಹೇಳಿದ್ದ.

ತನ್ನ ಕೃತ್ಯದ ನಂತರ ಆತ ಎಲ್ಲಿಗೆ ಹೋದನೋ ಗೊತ್ತಿಲ್ಲ. ಆದರೆ ಇವತ್ತು ಅದಿಲ್‌ ದರ್‌ನ ತಂದೆ ತಾಯಿ ಇಬ್ಬರೂ ದುಃಖದಲ್ಲಿದ್ದಾರೆ. ಆತನ ಸಾವಿನ ಸುದ್ದಿ ಸಿಕ್ಕಿದ ನಂತರ ಮೃತದೇಹಕ್ಕಾಗಿ ದರ್‌ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದರು. ಆದರೆ ಪೊಲೀಸರು ‘ಸ್ಫೋಟದ ಸ್ಥಳದಲ್ಲಿ ದಾರ್‌ನ ಯಾವ ಕುರುಹೂ ಇಲ್ಲ. ಎಲ್ಲಾ ಛಿದ್ರವಾಗಿದೆ’ ಎಂದು ಹೇಳಿದರು. ಕೊನೆಗೆ ಫೆಬ್ರವರಿ 14ರಂದು ಮೃತದೇಹವಿಲ್ಲದೆ ಗುಂಡಿಭಾಗ್‌ನ ಮನೆಯಲ್ಲಿ ಅದಿಲ್‌ ದರ್‌ಗೆ ಅಂತ್ಯಸಂಸ್ಕಾರ ನಡೆಸಲಾಯಿತು.

ತನ್ನ ಈ ಮಗನ ಸಾವಿಗೆ ರಾಜಕಾರಣಿಗಳೇ ಕಾರಣ ಎಂದು ದೂರುತ್ತಾರೆ ಹಸನ್‌ ದರ್‌. ಕಾಶ್ಮೀರದ ವಿಚಾರದ ಬಗ್ಗೆ ಮಾತನಾಡುವ ಅವರು, “ಮಾತುಕತೆ ಮೂಲಕವೇ ಅವರು (ರಾಜಕಾರಣಿಗಳು) ಈ ವಿಚಾರವನ್ನು ಪರಿಹರಿಸಿಕೊಳ್ಳಬೇಕು,” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಒಂದೊಮ್ಮೆ ಕುಟುಂಬದೊಳಗೆ ಸಮಸ್ಯೆ ಇದ್ದರೆ ಕುಟುಂಬದ ಮುಖ್ಯಸ್ಥರು ಅದನ್ನು ಪರಿಹರಿಸಬೇಕು. ಕಾಶ್ಮೀರ ವಿಚಾರದಲ್ಲಿಯೂ ಹೀಗೆಯೇ. “ಎಲ್ಲಾ ಪಕ್ಷಗಳನ್ನು ಆಹ್ವಾನಿಸಿ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜಕಾರಣಿಗಳಿಗೆ ಏಕೆ ಸಾಧ್ಯವಾಗುವುದಿಲ್ಲ? ಈ ರಕ್ತಪಾತ ಯಾರಿಗೆ ಬೇಕು?” ಎಂದು ಪ್ರಶ್ನಿಸುತ್ತಾರೆ ಗುಲಾಮ್‌ ದರ್‌.

“ರಾಜಕಾರಣಿಗಳಿಗೆಲ್ಲಾ ಅಧಿಕಾರ ಬೇಕು. ದಿನಂಪ್ರತಿ ಕುರುಡರಾಗುವ, ಕೊಲೆಯಾಗುವ, ಎನ್ಕೌಂಟರ್‌ಗಳ ಬಗ್ಗೆ ಇವರು ಯಾರೂ ಮಾತನಾಡುವುದಿಲ್ಲ, ಈ ಯುವಕರು ಉಗ್ರರಾಗಲು ರಾಜಕಾರಣಿಗಳೇ ಕಾರಣ. ಇದರಿಂದಾಗಿ ಭಾರತೀಯ ಸೈನಿಕರಾಗಲಿ ಅಥವಾ ನಮ್ಮ ಮಕ್ಕಳಿರಲಿ; ಒಟ್ಟಿನಲ್ಲಿ ಸಾಮಾನ್ಯ ಜನರು ಇಲ್ಲಿ ಸಾಯುತ್ತಿದ್ದಾರೆಯೇ ಹೊರತು ರಾಜಕಾರಣಿಗಳಲ್ಲ" ಎನ್ನುತ್ತಾರೆ ಹಸನ್‌ ದರ್‌.

ಇವತ್ತು ನನ್ನ ನೋವು ಸಾವಿಗೀಡಾದ ಸೈನಿಕರ ಕುಟುಂಬಸ್ಥರು ಅನುಭವಿಸುತ್ತಿರುವ ನೋವಿಗಿಂತ ಬೇರೆಯಲ್ಲ ಎನ್ನುತ್ತಾ ಮೌನವಾಗುತ್ತಾರೆ ಹಸನ್‌ ದರ್‌.

ಪೂರಕ ಮಾಹಿತಿ: ರಾಯ್ಟರ್ಸ್‌, ಹಿಂದೂಸ್ಥಾನ್‌ ಟೈಮ್ಸ್‌, ಸ್ಕ್ರಾಲ್‌