samachara
www.samachara.com
ಭಾವನಾತ್ಮಕ ಅಪಾಯ, ರಾಷ್ಟ್ರಭಕ್ತಿ, ಪುಲ್ವಾಮ ದಾಳಿ ಮತ್ತು ಎಲ್ಲರೊಳಗಿನ ‘ನಾಝಿ ಹಿಟ್ಲರ್‌’
COVER STORY

ಭಾವನಾತ್ಮಕ ಅಪಾಯ, ರಾಷ್ಟ್ರಭಕ್ತಿ, ಪುಲ್ವಾಮ ದಾಳಿ ಮತ್ತು ಎಲ್ಲರೊಳಗಿನ ‘ನಾಝಿ ಹಿಟ್ಲರ್‌’

ರಾಷ್ಟ್ರ ರಾಷ್ಟ್ರಗಳ ನಡುವಿನ ಯುದ್ಧ ಎಂದರೆ ನೆರೆ ಹೊರೆಯ ಮನೆಯವರು ಬಡಿದಾಡಿಕೊಳ್ಳುವ ಸಾಮಾನ್ಯ ಜಗಳವಲ್ಲ ಎಂಬ ಪ್ರಜ್ಞೆ ನಾಗರಿಕ ಸಮಾಜಕ್ಕೆ ಅಗತ್ಯ.

ಜನಸಮೂಹದ ದಿಕ್ಕು ಬದಲಾಯಿತು. ಜನ ಗಂಗಾರಾಮನ ಪುತ್ಥಳಿ ಮೇಲೆ ಹಠಾತ್ತನೆ ಎರಗಿದರು. ದೊಣ್ಣೆ ಬೀಸಿದರು. ಕಲ್ಲು ಇಟ್ಟಿಗೆಗಳನ್ನು ತೂರಿದರು. ಒಬ್ಬ ಮುಖಕ್ಕೆ ಡಾಂಬರ್ ಬಳಿದ. ಇನ್ನೊಬ್ಬ ಹಳೆಯ ಚಪ್ಪಲಿಗಳ ಹಾರ ಮಾಡಿ ಪುತ್ಥಳಿಯ ಕೊರಳಿಗೆ ಹಾಕಲು ಮುನ್ನುಗ್ಗಿದ. ಅಷ್ಟರಲ್ಲಿ ಪೊಲೀಸರು ಬಂದರು. ಗೋಲೀಬಾರ್ ಆಯಿತು. ಚಪ್ಪಲಿ ಹಾರ ಹಾಕಬೇಕೆಂದುಕೊಂಡವನು ಗಾಯಗೊಂಡ. ಹೀಗಾಗಿ ಚಿಕಿತ್ಸೆಗೆಂದು ಅವನನ್ನು ಸರ್ ಗಂಗಾರಾಮ ಆಸ್ಪತ್ರೆಗೆ ಸಾಗಿಸಲಾಯಿತು.

***

ಇಬ್ಬರು ಗೆಳೆಯರು ಹತ್ತಿಪ್ಪತ್ತು ಯುವತಿಯರಲ್ಲಿ ಒಬ್ಬಳನ್ನು ಆಯ್ಕೆ ಮಾಡಿಕೊಂಡರು. 42 ರೂಪಾಯಿ ಕೊಟ್ಟು ಖರೀದಿಸಿದರು. ರಾತ್ರಿ ಕಳೆದ ಮೇಲೆ ಒಬ್ಬ ನಿನ್ನ ಹೆಸರೇನು?’ಎಂದು ಯುವತಿಯನ್ನು ಕೇಳಿದ. ಯುವತಿ ತನ್ನ ಹೆಸರು ಹೇಳಿದೊಡನೆ ಅವನಿಗೆ ತುಂಬ ಬೇಸರವಾಯಿತು. ನೀನು ಬೇರೆ ಧರ್ಮದವಳೆಂದು ಅವನು ಹೇಳಿದ್ದನಲ್ಲ. ಅವನು ಸುಳ್ಳು ಹೇಳಿದ್ದ ಆಕೆ ಉತ್ತರಿಸಿದಳು. ಇದನ್ನು ಕೇಳುತ್ತಲೇ ಅವನು ಗೆಳೆಯನ ಬಳಿ ದಾವಿಸಿ ಹೋದ. ಅವನು ಹೀಗೆಂದ: ಆ ಹರಾಮಖೋರ ನಮಗೆ ಮೋಸ ಮಾಡಿದ್ದಾನೆ. ನಮ್ಮ ಧರ್ಮದ ಹುಡುಗಿಯನ್ನೇ ನಮಗೆ ಮಾರಿದ್ದಾನೆ. ನಡೀ ವಾಪಸ್ಸು ಕೊಟ್ಟು ಬರೋಣ

***

ಯಾರೋ ಇಬ್ಬರು ಯಾವುದೋ ಕಾರಣಕ್ಕೆ ಜಗಳವಾಡತೊಡಗುತ್ತಾರೆ. ಜಗಳ ಉಲ್ಬಣವಾಗುತ್ತ ನಡೆದು, ಅದರ ಭರದಲ್ಲಿ ಒಬ್ಬ ಇನ್ನೊಬ್ಬನ ಹೆಸರು ಕೇಳುತ್ತಾನೆ; ಆ ಇನ್ನೊಬ್ಬ ತನ್ನ ಹೆಸರು ಹೇಳಿಕೊಳ್ಳುತ್ತಾನೆ. ಅವನ ಹೆಸರು ತಿಳಿದದ್ದೆ ಆ ಮೊದಲನೆಯವನು ಈ ಎರಡನೆಯವನಿಗೆ ಚೂರಿ ಹಾಕಿ ಕೊಲ್ಲುತ್ತಾನೆ. ಅದನ್ನು ನೋಡಿದ ಮೂರನೆಯ ವ್ಯಕ್ತಿಯೊಬ್ಬ ‘ಇದೇನು, ಅವನ ಹೆಸರು ಕೇಳಿದ್ದೆ ಚೂರಿಯಿಂದಿರಿದು ಆತನನ್ನು ಕೊಂದೆಯಲ್ಲ, ನಿನಗೆ ಅವನ ಮೇಲೆ ಅದೇನು ಸಿಟ್ಟಿತು?’ ಎಂದು ಚೂರಿ ಹಾಕಿದವನನ್ನು ಪ್ರಶ್ನಿಸುತ್ತಾನೆ.

ಅದಕ್ಕೆ ಆ ಇರಿದವನು ‘ಅವನು ನಮ್ಮ ಯೇಸುಕ್ರಿಸ್ತನನ್ನು ಕೊಂದವನು, ಅಂದರೆ ಯೇಸುವನ್ನು ಕೊಂದ ಯಹೂದ್ಯರ ಮತದವನು; ಹಾಗಾಗಿಯೇ ನಾನು ಅವನನ್ನು ಪ್ರತೀಕಾರಕ್ಕೆಂದು ಕೊಂದೆ’ ಎಂದು ಉತ್ತರಿಸುತ್ತಾನೆ. ಅದಕ್ಕೆ ಆ ಮೂರನೆಯವನು ‘ಅಲ್ಲ, ಯೇಸುವಿನ ಹತ್ಯೆಯಾದದ್ದು ಎರಡು ಸಾವಿರ ವರ್ಷಗಳ ಹಿಂದೆಯಲ್ಲವಾ? ಆ ಕೃತ್ಯಕ್ಕಾಗಿ ಈಗ ಇವನನ್ನು ಕೊಂದೆಯಲ್ಲ, ಇದ್ಯಾವ ಬಗೆಯ ತರ್ಕ? ಯಾವ ಬಗೆಯ ನ್ಯಾಯ?’ ಎಂದು ಕೇಳಿದಾಗ ಮೊದಲನೆಯವನು ಹೇಳುತ್ತಾನೆ: ‘ಯೇಸುವಿನ ದುರ್ಮರಣಕ್ಕೆ ಯಹೂದಿಗಳು ಕಾರಣರಾದದ್ದು ಅತಿಪುರಾತನ ಘಟನೆಯ ಇರಬಹುದು, ಆದರೆ ಆ ದುರ್ಘಟನೆಗೆ ಇವರು ಕಾರಣರೆಂಬ ವಿಷಯ ನನಗೆ ಗೊತ್ತಾದದ್ದು ನಿನ್ನೆಯಷ್ಟೇ’

***

ಮೇಲಿನ ಎರಡು ಕಿರುಕಥೆಗಳು ಸಾದತ್‌ ಹಸನ್‌ ಮಾಂಟೋ ದೇಶ ವಿಭಜನೆಯ ಸಂದರ್ಭದಲ್ಲಿ ಬರೆದಂಥವು. ಮೂರನೆಯದ್ದು ‘ಹಿಂಸೆಯ ಎಡಬಲ’ದ ಬಗ್ಗೆ ಹೇಳುತ್ತಾ ಯು.ಆರ್‌. ಅನಂತಮೂರ್ತಿ ಪ್ರಸ್ತಾಪಿಸುವ ಕಥೆ. ಈ ಕಥೆಗಳನ್ನು ಓದಿದರೂ ಸಾಕು, ಭಾರತದ ಈ ಹೊತ್ತಿನ ಭಾವನಾತ್ಮಕ ಅಪಾಯದ ಹಿನ್ನೆಲೆ ಮತ್ತು ಅದರ ಪರಿಣಾಮಗಳು ಕಾಣುತ್ತವೆ.

ಪುಲ್ವಾಮದಲ್ಲಿ ದಾಳಿ ನಡೆದು ಯೋಧರು ಸಾವನ್ನಪ್ಪಿದ್ದಾರೆ, ಈ ಕೃತ್ಯಕ್ಕಾಗಿ ಖಂಡನೆ ವ್ಯಕ್ತವಾಗಿದೆ, ಭಾರತ ಪಾಕಿಸ್ತಾನಕ್ಕೆ ಹಾಗೂ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ನೀಡಿದ್ದ ವಿಶೇಷ ಸವಲತ್ತುಗಳನ್ನು ನಿಲ್ಲಿಸಿದೆ. ಯುದ್ಧ ನಡೆದೇ ತೀರಬೇಕು ಎಂಬ ಉದ್ವಿಗ್ನತೆಯಲ್ಲಿ ದೇಶದ ಒಂದು ಮನಸ್ಥಿತಿ ಇದೆ. ‘ನನ್ನ ಕೈಗೆ ಬಂದೂಕು ಕೊಡಿ ಇಡೀ ಪಾಕಿಸ್ತಾನವನ್ನು ಹೊಡೆದು ಹಾಕುತ್ತೇನೆ’ ಎಂಬ ಮನಸ್ಥಿತಿಯಲ್ಲೇ ಕೆಲವರು ಅತಿ ಭಾವನಾತ್ಮಕವಾಗಿ ಈ ವಿಚಾರವನ್ನು ನೋಡುತ್ತಿದ್ದಾರೆ.

ಇಂತಹ ಉದ್ವಿಗ್ನತೆಯ ಮನಸ್ಸೇ ಹಲವು ಕಡೆ ಕಾಶ್ಮೀರಿ ಯುವಜನರ ಮೇಲೆ ದಾಳಿ ನಡೆಸುತ್ತಿರುವುದು. ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ದಾಳಿ ನಡೆದರೆ, ಕರ್ನಾಟಕದಲ್ಲಿರುವ ಮರಾಠಿಗರ ಮೇಲೆ ದಾಳಿ ಮಾಡುವ ಹಾಗೂ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದಾಳಿ ನಡೆದರೆ ಕರ್ನಾಟಕದಲ್ಲಿರುವ ತಮಿಳರ ಮೇಲೆ ದಾಳಿ ಮಾಡುವ ಮನಸ್ಥಿತಿಗಳೇ ಈಗ ಇಂತಹ ದಾಳಿಗಳಿಗೆ ಮುಂದಾಗಿರುವುದು.

ಕಾಶ್ಮೀರಿ ಯುವಕರು ಇಂದು ಅನುಭವಿಸುತ್ತಿರುವ ಆತಂಕ ದೇಶ ವಿಭಜನೆಯ ಕಾಲದಿಂದಲೂ ದೇಶದ ಮುಸ್ಲಿಮರಲ್ಲಿದೆ. ಬಾಬ್ರಿ ಮಸೀದಿ ಧ್ವಂಸದ ಬಳಿಕವಂತೂ ದೇಶದಲ್ಲಿ ಧರ್ಮದ ಆಧಾರದಲ್ಲಿ ಹಿಂದೂಗಳು- ಮುಸ್ಲಿಮರು ಒಡೆದು ಹೋಗಿದ್ದಾರೆ. ಪಾಕಿಸ್ತಾನದ ವಿಚಾರ ಬಂದಾಗೆಲ್ಲಾ, ಗಡಿಯಲ್ಲಿ ದಾಳಿಗಳು ನಡೆದಾಗೆಲ್ಲಾ ಹಿಂದೂಗಳ ಸಿಟ್ಟು ನೇರವಾಗಿ ಅಕ್ಕಪಕ್ಕದ ಮುಸ್ಲಿಮರ ಕಡೆಗೆ ತಿರುಗುತ್ತದೆ. ಇಂತಹ ದುರ್ಬಲ ಮನಸ್ಥಿತಿ ‘ಮುಸ್ಲಿಮರೆಲ್ಲರೂ ಭಯೋತ್ಪಾದಕರು’ ಎಂಬ ನಿರ್ಧಾರಕ್ಕೆ ಬರುವುದು ಸುಲಭ. ಇಂತಹ ದುರ್ಬಲ ಮನಸ್ಸುಗಳನ್ನೇ ಕಾಲಾಳುಗಳಾಗಿ ಬಳಸಿಕೊಂಡು ಇಂದಿನ ಹಿಂದೂ ರಾಜಕಾರಣ ನಡೆಯುತ್ತಿರುವುದು.

ಹೀನ ಕೃತ್ಯವನ್ನು ಯಾರೇ ಮಾಡಿದ್ದರೂ ಅದನ್ನು ವಿರೋಧಿಸಬೇಕು. ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ, ಕೃತ್ಯ ಎಸಗಿರುವ ಸಮುದಾಯವನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುವ ಕ್ರಮ ಸರಿಯಲ್ಲ. ಯಾವುದೇ ಸಮುದಾಯ ಈ ರೀತಿಯ ಪ್ರತಿದಾಳಿ ನಡೆಸಿದರೂ ಅದು ಮೂಲ ದಾಳಿಗೆ ಆಗಬಹುದಾದ ಶಿಕ್ಷೆಯ ಪ್ರಮಾಣದಷ್ಟೇ ಶಿಕ್ಷಾರ್ಹ. ನಾಗರಿಕ ಸಮಾಜದ ಸಿಟ್ಟು ಧರ್ಮಾಂಧತೆಯ ದುರ್ಬಲ ಮನಸ್ಸುಗಳ ಕೈಗೆ ಆಯುಧ, ಬಾಂಬ್‌ ಕೊಡುವವರ ವಿರುದ್ಧ ತಿರುಗಬೇಕೇ ಹೊರತು ಯಾವುದೇ ಧರ್ಮದ ಅಮಾಯಕ ಜನಸಾಮಾನ್ಯರ ವಿರುದ್ಧವಲ್ಲ.

ಸರ್ಕಲ್‌ಗಳಲ್ಲಿ ವಂದೇ ಮಾತರಂ, ಭಾರತ್‌ ಮಾತಾಕಿ ಜೈ ಘೋಷಣೆಗಳ ಜತೆಗೇ ‘ಬೇಕೇ ಬೇಕು ಯುದ್ಧ ಬೇಕು’ ಎಂಬ ಘೋಷಣೆಗಳನ್ನೂ ಕೂಗಿಸಲಾಗುತ್ತಿದೆ. ‘ಯುದ್ಧ ನಡೆದೇ ತೀರಬೇಕು’ ಎಂದು ಹಲವರು ಕಡ್ಡಿತುಂಡು ಮಾಡಿದಂತೆ ಹೇಳುತ್ತಿದ್ದಾರೆ. “ನಮ್ಮ ಕೈಗೆ ಬಂದೂಕು ಕೊಟ್ಟರೆ ಈಗಲೇ ಪಾಕಿಸ್ತಾನದ ಎಲ್ಲರನ್ನೂ ಕೊಂದು ಹಾಕುತ್ತೇವೆ”, “ಇಡೀ ಪಾಕಿಸ್ತಾನವನ್ನು ಉಡೀಸ್‌ ಮಾಡಿ ಬಿಡಬೇಕು” ಎಂಬ ಮಾತುಗಳನ್ನು ಆಡುತ್ತಿರುವ ಎಷ್ಟು ಮಂದಿ ತಮ್ಮ ಮಕ್ಕಳನ್ನು, ತಮ್ಮ ಅಣ್ಣತಮ್ಮಂದಿರನ್ನು, ಕೊನೆಗೆ ತಾವೇ ಸೈನ್ಯಕ್ಕೆ ಸೇರಲು ಸಿದ್ಧರಾಗಿದ್ದಾರೆ?

ರಾಷ್ಟ್ರ ರಾಷ್ಟ್ರಗಳ ನಡುವಿನ ಯುದ್ಧ ಎಂದರೆ ನೆರೆ ಹೊರೆಯ ಮನೆಯವರು ಬಡಿದಾಡಿಕೊಳ್ಳುವ ಸಾಮಾನ್ಯ ಜಗಳವಲ್ಲ ಎಂಬ ಪ್ರಜ್ಞೆ ನಾಗರಿಕ ಸಮಾಜಕ್ಕೆ ಅಗತ್ಯ. ಇಂತಹ ಪ್ರಜ್ಞೆ ಇಲ್ಲದಾಗಲೆ ಪ್ರತಿಯೊಬ್ಬರ ಒಳಗೂ ನಾಝಿ ಹಿಟ್ಲರ್‌ ಹುಟ್ಟಿಕೊಳ್ಳುತ್ತಾರೆ. ಇಂತಹ ಹಿಟ್ಲರ್‌ ಮನಸ್ಥಿತಿಗೆ ಇಂಥದ್ದೇ ಧರ್ಮ ಎಂಬ ಮಿತಿ ಇಲ್ಲ. ದುರ್ಬಲ ಮನಸ್ಥಿತಿಯ ಯಾವುದೇ ಧರ್ಮದ ಧರ್ಮಾಂಧರಲ್ಲೂ ಇಂತಹ ಹಿಟ್ಲರ್‌ ಹುಟ್ಟಿಕೊಳ್ಳುತ್ತಾನೆ. ಹೀಗಾಗಿಯೇ ಪುಲ್ವಾಮ ಘಟನೆಯನ್ನು ವಿರೋಧಿಸುತ್ತಿರುವವರ ನಡುವೆಯೂ ಘಟನೆಯನ್ನು ಸಮರ್ಥಿಸಿಕೊಳ್ಳುವಂತಹ ಮನಸ್ಸುಗಳು ಇಣುಕುತ್ತಿವೆ.

ಎಳವೆಯಲ್ಲಿ ಚಿತ್ರಕಾರನಾಗಬೇಕೆಂದು ಕನಸು ಕಂಡು ಬೆಳೆಯುತ್ತಾ ಹೋದಂತೆ ಮಾನವ ಜನಾಂಗದ ಕರಾಳ ಅಧ್ಯಾಯವಾದ ಹಿಟ್ಲರ್‌ನ ಅಮಾನವೀಯ ನರಮೇಧದ ಮನಸ್ಥಿತಿ ಇಂದು ದೇಶದ ಅನೇಕರಲ್ಲಿದೆ. ನಾವು ಎಡವೂ ಅಲ್ಲ, ಬಲವೂ ಅಲ್ಲ ಎಂದು ಹೇಳಿಕೊಳ್ಳುವ ಹಲವರ ಮನಸ್ಸುಗಳ ಒಳಮನೆಯೊಳಗೂ ಇಂಥ ಮನಸ್ಥಿತಿ ಸುಪ್ತವಾಗಿದೆ. ಅವಕಾಶ ಸಿಕ್ಕಲ್ಲೆಲ್ಲಾ ಈ ಹಿಟ್ಲರ್‌ ಹೊರಬಂದು ಅಮಾಯಕರ ನರಮೇಧ ನಡೆಸುತ್ತಾನೆ.

ನಮ್ಮ ನಮ್ಮೊಳಗಿನ ಭಿನ್ನಾಭಿಪ್ರಾಯಗಳು, ಸಂಘರ್ಷಗಳು ಏನೇ ಇದ್ದರೂ ದೇಶದ ವಿಚಾರ ಬಂದಾಗ, ಏಕತೆಯ ವಿಚಾರ ಬಂದಾಗ ‘ನೂರೈವರಾವಲ್ಲವೆ’ (ಹೊರಗಿನವರು ದಾಳಿ ನಡೆಸಿದಾಗ ನೂರು ಮಂದಿ ಕೌರವರು, ಐವರು ಪಾಂಡವರಾದ ನಾವು ಎಲ್ಲರೂ ಒಂದೇ ಎನ್ನುತ್ತಾನೆ ಯುಧಿಷ್ಠಿರ) ಎಂಬ ನಿಲುವು ಬೇಕು. ಇಂತಹ ವಿವೇಕವಿಲ್ಲದೆ ಕೇವಲ ಭಾವನಾತ್ಮಕ ನೆಲೆಯಲ್ಲಿ ದಾಳಿಗಳನ್ನು ಗ್ರಹಿಸುವುದು ಹಾಗೂ ಅದಕ್ಕೆ ಅವಸರದ ಪ್ರತಿಕ್ರಿಯೆ ಕೊಡುವುದು ಯಾವುದೇ ಸಮಾಜಕ್ಕೆ ಒಳ್ಳೆಯದಲ್ಲ.

ಉಗ್ರ ರಾಷ್ಟ್ರೀಯವಾದದಿಂದ ಮನುಷ್ಯ ಮನುಷ್ಯನನ್ನು ಅರಿತು ಬಾಳಲು ಸಾಧ್ಯವಿಲ್ಲ ಎಂಬ ಸೂಕ್ಷ್ಮ ಎಚ್ಚರ ದೇಶದ ಎಲ್ಲರಿಗೂ ಅಗತ್ಯ. ಯುದ್ಧದ ಅಪಾಯಗಳನ್ನು ವಾಸ್ತವದ ವಿವೇಕದಿಂದ ನೋಡದೆ ಹೋದರೆ ಯುದ್ಧವೂ ಪಬ್‌ಜಿ ಆಟದಂತೆ ರೋಚಕವಾಗಿ ಕಾಣುತ್ತದೆ ಅಷ್ಟೆ.