samachara
www.samachara.com
ಬಂಡಿ ಹೊಸೂರಿಗೆ ಕೊಪ್ಪಳ ಡಿಸಿ ಭೇಟಿ; 10 ಜನರ ವಿರುದ್ಧ FIR, ಊರುಬಿಟ್ಟ ಆರೋಪಿಗಳು
COVER STORY

ಬಂಡಿ ಹೊಸೂರಿಗೆ ಕೊಪ್ಪಳ ಡಿಸಿ ಭೇಟಿ; 10 ಜನರ ವಿರುದ್ಧ FIR, ಊರುಬಿಟ್ಟ ಆರೋಪಿಗಳು

“ನಾವು ಗ್ರಾಮದಲ್ಲಿ ಘನತೆಯಿಂದ ಬಾಳಲು ಸರಕಾರ ಪ್ರತಿ ದಲಿತ ಕುಟುಂಬಕ್ಕೆ ತಲಾ 2 ಎಕರೆ ಜಮೀನು ನೀಡಿ, ಬೋರ್‌ವೆಲ್‌ ಹಾಕಿಸಿಕೊಡಬೇಕು” ಎಂಬ ಒತ್ತಾಯ ಗ್ರಾಮದ ದಲಿತರದ್ದು.

ಡಿಸಿ ಬಂದರು, ಗ್ರಾಮದ ಸವರ್ಣೀಯರು ಹಾಗೂ ದಲಿತರನ್ನು ದೇವಾಲಯದ ಮುಂಭಾಗದಲ್ಲಿ ಕೂರಿಸಿ ‘ಶಾಂತಿ ಮಾತುಕತೆ’ ನಡೆಸಿದರು. ಅಸ್ಪೃಶ್ಯತೆ ಹಾಗೂ ಸಮ ಸಮಾಜದ ಬಗ್ಗೆ ಒಂದಷ್ಟು ಕಾನೂನು ಪಾಠ ಮಾಡಿದರು. ಕಾರು ಹತ್ತಿ ಹೊರಟು ಹೋದರು...

ಅಸ್ಪೃಶ್ಯತೆ ಜೀವಂತವಾಗಿರುವ ಕೊಪ್ಪಳದ ಬಂಡಿ ಹೊಸೂರು ಗ್ರಾಮದಲ್ಲಿ ಕಳೆದ ಶುಕ್ರವಾರ (ಡಿಸೆಂಬರ್‌ 8) ಸಮಾನತೆಯ ಆಶಯವನ್ನು ಜಾರಿಗೆ ತರಲು ಅಲ್ಲಿನ ಜಿಲ್ಲಾಡಳಿತ ಮಾಡಿದ್ದಿಷ್ಟು.

ಗ್ರಾಮದ ದಲಿತರನ್ನು ದಲಿತರನ್ನು ದೇವಾಲಯದ ಅಂಗಳದವರೆಗೆ ಕರೆದೊಯ್ಯುವ ಮೂಲಕ, ಕ್ಷೌರಿಕರಿಗೆ ದಲಿತರಿಗೂ ಕ್ಷೌರ ಮಾಡುವಂತೆ ಎಚ್ಚರಿಸುವ ಮೂಲಕ ಅಸ್ಪೃಶ್ಯತೆಯನ್ನು ತೊಲಗಿಸಿಯಾಯ್ತು ಎಂದುಕೊಂಡ ಜಿಲ್ಲಾಧಿಕಾರಿ ಅದೇ ಭಾವದಲ್ಲಿ ಜಿಲ್ಲಾ ಕೇಂದ್ರಕ್ಕೆ ತೆರಳಿದ್ದರು.

ಗ್ರಾಮದ ದಲಿತರು ಹಾಗೂ ದಲಿತಪರ ಸಂಘಟನೆಗಳು ಒತ್ತಾಯಿಸುತ್ತಿದ್ದ ಕಾನೂನು ಕ್ರಮಕ್ಕೆ ಮುಂದಾಗದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ‘ಶಾಂತಿ ಮಾತುಕತೆ’ ಯಶಸ್ವಿಯಾಗಿದೆ ಎಂದೇ ಭಾವಿಸಿರುವಂತಿದೆ. ಈ ಪ್ರಕರಣಕ್ಕೆ ಕಾನೂನಿನ ಮೂಲಕವೇ ತಾರ್ಕಿಕ ಅಂತ್ಯ ಕಾಣಿಸಬೇಕೆಂದು ನಿರ್ಧರಿಸಿರುವ ಗ್ರಾಮದ ದಲಿತರು ಅಸ್ಪೃಶ್ಯತೆ ಆಚರಿಸಿದ ಗ್ರಾಮದ 10 ಜನರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಬಂಡಿ ಹೊಸೂರಿಗೆ ಕೊಪ್ಪಳ ಡಿಸಿ ಭೇಟಿ; 10 ಜನರ ವಿರುದ್ಧ FIR, ಊರುಬಿಟ್ಟ ಆರೋಪಿಗಳು
ಬಂಡಿ ಹೊಸೂರಿಗೆ ಕೊಪ್ಪಳ ಡಿಸಿ ಭೇಟಿ; 10 ಜನರ ವಿರುದ್ಧ FIR, ಊರುಬಿಟ್ಟ ಆರೋಪಿಗಳು
ಬಂಡಿ ಹೊಸೂರಿಗೆ ಕೊಪ್ಪಳ ಡಿಸಿ ಭೇಟಿ; 10 ಜನರ ವಿರುದ್ಧ FIR, ಊರುಬಿಟ್ಟ ಆರೋಪಿಗಳು
ಬಂಡಿ ಹೊಸೂರಿಗೆ ಕೊಪ್ಪಳ ಡಿಸಿ ಭೇಟಿ; 10 ಜನರ ವಿರುದ್ಧ FIR, ಊರುಬಿಟ್ಟ ಆರೋಪಿಗಳು

Also read: ಕೊಪ್ಪಳ ಎಂಬ ಅಸ್ಪೃಶ್ಯತೆ ಕೂಪದಲ್ಲಿ ಗಣತಂತ್ರದ ಅಣಕ; ದಲಿತರ ಪಾಲಿಗಿದು ನಿತ್ಯ ನರಕ

ಬಂಡಿ ಹೊಸೂರಿನಲ್ಲಿ ಭೂ ರಹಿತ ದಲಿತರಿಗೆ ಭೂಮಿ ಕೊಡಿಸುವ ಹಾಗೂ ನಿರುದ್ಯೋಗಿ ದಲಿತ ಯುವಜನರಿಗೆ ಉದ್ಯೋಗ ಕೊಡಿಸುವ ಸಂಬಂಧ ಹೋರಾಟ ರೂಪಿಸುತ್ತೇವೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಸಚಿವರೊಂದಿಗೆ ಮಾತನಾಡುತ್ತೇನೆ.
- ಮಾವಳ್ಳಿ ಶಂಕರ್‌, ಹಿರಿಯ ದಲಿತ ಮುಖಂಡ

ಗ್ರಾಮದ ದಲಿತರು ದೂರನ್ನೇನೋ ದಾಖಲಿಸಿದ್ದಾರೆ. ಆದರೆ, ದೂರು ಹಿಂಪಡೆಯುವಂತೆ ಜಿಲ್ಲೆಯ ಹಿರಿಯ ಪೊಲೀಸ್‌ ಅಧಿಕಾರಿಗಳೇ ಒತ್ತಡ ತರುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಈ ಮಧ್ಯೆ ತಮ್ಮ ವಿರುದ್ಧ ಪೊಲೀಸ್‌ ದೂರು ದಾಖಲಾಗುತ್ತಿದ್ದಂತೆ ಹೋಟೆಲ್‌, ಟೀ ಅಂಗಡಿ ನಡೆಸುತ್ತಿದ್ದವರು, ಕ್ಷೌರದ ಅಂಗಡಿ ಇಟ್ಟುಕೊಂಡಿದ್ದವರು ರಾತ್ರೋರಾತ್ರಿ ಊರು ಖಾಲಿ ಮಾಡಿದ್ದಾರೆ.

“ದೂರು ಹಿಂಪಡೆದು ಮಾತುಕತೆ ಮೂಲಕ ಈ ಪ್ರಕರಣ ಮುಗಿಸಿಕೊಳ್ಳಿ ಎಂದು ಅಧಿಕಾರಿಗಳು ಪದೇ ಪದೇ ಹೇಳುತ್ತಿದ್ದಾರೆ. ನಾವು ಗ್ರಾಮದಲ್ಲಿ ಘನತೆಯಿಂದ ಬಾಳಲು ಸರಕಾರ ಪ್ರತಿ ದಲಿತ ಕುಟುಂಬಕ್ಕೆ ತಲಾ 2 ಎಕರೆ ಜಮೀನು ನೀಡಿ, ಬೋರ್‌ವೆಲ್‌ ಹಾಕಿಸಿಕೊಡಬೇಕು” ಎಂಬ ಒತ್ತಾಯ ಗ್ರಾಮದ ದಲಿತರದ್ದು.

“ನಮ್ಮ ಕಾಲ ಮೇಲೆ ನಾವು ನಿಂತರೆ ಊರಿನ ಸವರ್ಣಿಯರ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ. ಇಲ್ಲವಾದರೆ, ಮತ್ತೆ ನಾಳೆ ನಾವು ಅವರ ಜಮೀನುಗಳಿಗೇ ಕೂಲಿಗೆ ಹೋಗಬೇಕಾಗುತ್ತದೆ. ಅಸ್ಪೃಶ್ಯತೆಯನ್ನು ಸಹಿಸಿಕೊಂಡೇ ಅವರ ಕೂಲಿಗಳಾಗಿ ಬದುಕಬೇಕಾಗುತ್ತದೆ” ಎನ್ನುತ್ತಾರೆ ಅವರು.

ಮುಂದೇನು?

ಕೊಪ್ಪಳದ ಡಿಸಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದನ್ನು ಖಂಡಿಸಿ ಜಿಲ್ಲೆಯ ದಲಿತ ಮುಖಂಡರು ಇಡೀ ಜಿಲ್ಲೆಯಾದ್ಯಂತ ಅಧಿಕಾರಿಗಳ ವಿರುದ್ಧ ಕರಪತ್ರ ಹಂಚಿದ್ದಾರೆ. ಸೋಮವಾರ ಬೆಂಗಳೂರಿಗೆ ಆಗಮಿಸಲಿರುವ ದಲಿತ ಮುಖಂಡರು ಸಮಾಜ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿ ಈ ಕುರಿತು ಲಿಖಿತ ದೂರು ನೀಡಲಿದ್ದಾರೆ. ಅಲ್ಲದೆ ಕೊಪ್ಪಳದಲ್ಲಿ ಪ್ರತಿಭಟನೆಗೂ ಮುಂದಾಗಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರತಿಕ್ರಿಯೆಗಾಗಿ ಪ್ರಯತ್ನಿಸಲಾಯಿತು. ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

Also read: ಬಂಡಿ ಹೊಸೂರಿಗೆ ನಾಳೆ ಕೊಪ್ಪಳ ಡಿಸಿ ಭೇಟಿ; ಅಸ್ಪೃಶ್ಯತೆ ವಿರುದ್ಧ ಕಾನೂನು ಕ್ರಮ ಯಾವಾಗ?