samachara
www.samachara.com
ಪುಲ್ವಾಮ ದಾಳಿಯ ಬೆನ್ನಲ್ಲೇ ಹುಟ್ಟಿವೆ ಉತ್ತರವಿಲ್ಲದ ಕೆಲವು ಮುಖ್ಯ ಪ್ರಶ್ನೆಗಳು...
COVER STORY

ಪುಲ್ವಾಮ ದಾಳಿಯ ಬೆನ್ನಲ್ಲೇ ಹುಟ್ಟಿವೆ ಉತ್ತರವಿಲ್ಲದ ಕೆಲವು ಮುಖ್ಯ ಪ್ರಶ್ನೆಗಳು...

ಈ ಘಟನೆ ಹಿಂದೆ, “ಸಂಪೂರ್ಣ ಗುಪ್ತಚರ ವೈಫಲ್ಯ ಮತ್ತು ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಉಲ್ಲಂಘನೆಯ ಬಗ್ಗೆ ಹಲವು ಉತ್ತರವಿಲ್ಲದ ಪ್ರಶ್ನೆಗಳಿವೆ,” ಎನ್ನುತ್ತಾರೆ ಗೃಹ ಇಲಾಖೆ ಅಧಿಕಾರಿಯೊಬ್ಬರು.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಸೈನಿಕರ ಮೇಲೆ ದಾಳಿ ನಡೆದು ಎರಡು ದಿನಗಳು ಕಳೆದಿವೆ. ಇದೀಗ ದಾಳಿಯ ವಿವರಗಳು ಒಂದೊಂದಾಗಿ ಹೊರಬರುತ್ತಿವೆ.

ಆರಂಭದಲ್ಲಿ ‘ಸಿಆರ್‌ಪಿಎಫ್‌ ವಾಹನದ ಮೇಲೆ ಸ್ಕಾರ್ಪಿಯೋ ಎಸ್‌ಯುವಿ ಮೂಲಕ ಸ್ಥಳೀಯ ಯುವಕ ಆದಿಲ್‌ ಅಹಮದ್‌ ಧರ್‌ ದಾಳಿ ನಡೆಸಿದ. ಈತ ಕಾರಿನಲ್ಲಿ ಒಟ್ಟು 350 ಕೆಜಿಗೂ ಹೆಚ್ಚಿನ ಸ್ಫೋಟಕಗಳನ್ನು ತುಂಬಿಕೊಂಡಿದ್ದ’ ಎನ್ನಲಾಗಿತ್ತು.

ಆದರೆ ಇದೀಗ ಆತ ಸ್ಕಾರ್ಪಿಯೋ ಅಲ್ಲ ಸೆಡಾನ್‌ ಕಾರ್‌ ಮೂಲಕ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ. 45 ಸಿಆರ್‌ಪಿಎಫ್‌ ಸಿಬ್ಬಂದಿಗಳು ಸಾವನ್ನಪ್ಪಿದ್ದ ಈ ಘಟನೆಯಲ್ಲಿ 80 ಮೀಟರ್‌ ದೂರದವರೆಗೆ ಮೃತ ದೇಹಗಳು ಹಾರಿ ಹೋಗಿದ್ದವು. ಇಷ್ಟೊಂದು ತೀವ್ರತೆಯ ಸ್ಫೋಟಕ್ಕೆ ಆರ್‌ಡಿಎಕ್ಸ್‌ ಬಳಕೆ ಕಾರಣ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಒಟ್ಟು 60 ಕೆಜಿ ಆರ್‌ಡಿಎಕ್ಸ್ (ಸುಧಾರಿತ ಸ್ಫೋಟಕ) ಇತ್ತು ಎಂಬ ವಿವರಗಳು ಲಭ್ಯವಾಗಿವೆ.

ಇದರ ಜತೆಗೆ ಆದಿಲ್‌ ಧರ್‌ ಕಾರನ್ನು ಬಸ್ಸಿಗೆ ಗುದ್ದಿಲ್ಲ ಎಂಬುದು ಗೊತ್ತಾಗಿದೆ. ಸಾಲಾಗಿ ಹೊರಟಿದ್ದ 78 ಸಿಆರ್‌ಪಿಎಫ್‌ ವಾಹನಗಳನ್ನು ಎಡಭಾಗದಿಂದ ಓವರ್‌ಟೇಕ್‌ ಮಾಡಿ ಬಸ್ಸಿನ ಸಮೀಪ ತನ್ನನ್ನು ತಾನು ಆದಿಲ್‌ ಧರ್‌ ಸ್ಫೋಟಿಸಿಕೊಂಡಿದ್ದ. ಸ್ಫೋಟದ ತೀವ್ರತೆಗೆ ಒಟ್ಟು 150 ಮೀಟರ್‌ ವೃತ್ತಾಕಾರದ ವ್ಯಾಪ್ತಿಯಲ್ಲಿ ವಾಹನದ ಭಾಗಗಳು, ವಸ್ತುಗಳು ಹಾರಿ ಹೋಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಇಷ್ಟೊಂದು ತೀವ್ರತೆಯ ದಾಳಿಯಾಗುತ್ತಿದ್ದಂತೆ ಹಲವು ಪ್ರಶ್ನೆಗಳು ಉದ್ಭವಿಸಿವೆ. ಶುಕ್ರವಾರ ನವದೆಹಲಿಯಲ್ಲಿ ನಡೆದ ಗುಪ್ತಚರ ಇಲಾಖೆ ಮತ್ತು ರಾ (ರಿಸರ್ಚ್‌ ಆಂಡ್‌ ಅನಾಲಿಸಿಸ್‌ ವಿಂಗ್‌) ಅಧಿಕಾರಿಗಳ ಸಭೆಯಲ್ಲೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯಚರಿಸುವ ಹಲವು ಭದ್ರತಾ ಸಂಸ್ಥೆಗ ವೈಫಲ್ಯದ ಬಗ್ಗೆ ಚರ್ಚೆ ನಡೆದಿದೆ. ಜತೆಗೆ ‘ಕ್ರೀಯಾಶೀಲ ಗುಪ್ತಚರ ಮಾಹಿತಿ’ಗಳನ್ನು ನೀಡದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ ಎಂದು ‘ದಿ ಟೆಲಿಗ್ರಾಫ್‌’ ವರದಿ ಮಾಡಿದೆ.

ಈ ಘಟನೆ ಹಿಂದೆ, “ಸಂಪೂರ್ಣ ಗುಪ್ತಚರ ವೈಫಲ್ಯ ಮತ್ತು ಸ್ಟಾಂಡರ್ಡ್‌ ಆಪರೇಟಿಂಗ್‌ ಪ್ರೊಸೀಜರ್‌ ಉಲ್ಲಂಘನೆಯ ಬಗ್ಗೆ ಹಲವು ಉತ್ತರವಿಲ್ಲದ ಪ್ರಶ್ನೆಗಳಿವೆ,” ಎಂದು ಗೃಹ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಟೆಲಿಗ್ರಾಫ್‌ ವರದಿ ಮಾಡಿದೆ.

ಜಮ್ಮು - ಶ್ರೀನಗರ ಹೆದ್ದಾರಿ ಕಾಯುತ್ತಿರುವ ಸಿಆರ್‌ಪಿಎಫ್‌ ಯೋಧ.
ಜಮ್ಮು - ಶ್ರೀನಗರ ಹೆದ್ದಾರಿ ಕಾಯುತ್ತಿರುವ ಸಿಆರ್‌ಪಿಎಫ್‌ ಯೋಧ.
/ನ್ಯೂಸ್‌ನೌ

ಉತ್ತರವಿಲ್ಲದ ಪ್ರಶ್ನೆಗಳು...

  1. ಜಮ್ಮು - ಶ್ರೀನಗರ ಹೆದ್ದಾರಿ ಎಂದು ಕರೆಸಿಕೊಳ್ಳುವ ಎನ್‌ಎಚ್‌-44 ದೇಶದ ಅತ್ಯಂತ ಹೆಚ್ಚಿನ ಭದ್ರತೆ ಇರುವ ಹೆದ್ದಾರಿ. ಇದರ ಇಕ್ಕೆಲಗಳಲ್ಲಿ ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ತಂಡಗಳಿರುತ್ತವೆ. ಈ ತಂಡಗಳು ವಾಹನಗಳನ್ನು ತಪಾಸಣೆ ಮಾಡಿಯೇ ಹೆದ್ದಾರಿಯೊಳಕ್ಕೆ ಬಿಡುತ್ತವೆ. ಚೆಕ್‌ಪೋಸ್ಟ್‌, ಟೋಲ್‌ಗಳಲ್ಲಿಯೂ ವಾಹನಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಹೆದ್ದಾರಿಯುದ್ದಕ್ಕೂ ಸಿಆರ್‌ಪಿಎಫ್‌ ಸೈನಿಕರು ಪಹರೆ ಕಾಯುತ್ತಿರುತ್ತಾರೆ. ಯಾವುದೇ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಕ್ವಿಕ್‌ ರೆಸ್ಪಾನ್ಸ್‌ ತಂಡಗಳಿವೆ. ಜತೆಗೆ ನಗರ ಪ್ರದೇಶಗಳು ಬರುವಲ್ಲಿ ಸಿಸಿಟಿವಿಯ ದೊಡ್ಡ ಜಾಲವೇ ಇದೆ. ಹೀಗಿದ್ದೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಪೋಟಕಗಳನ್ನು ಹೊಂದಿದ್ದ ಕಾರು ಹೆದ್ದಾರಿಯನ್ನು ಹೇಗೆ ಪ್ರವೇಶಿಸಿತು?
  2. ದಾಳಿ ಮಾಡಿದ ರೀತಿ, ಹೊಂದಿದ್ದ ಸ್ಫೋಟಕಗಳನ್ನು ನೋಡಿದರೆ ಇದಕ್ಕೆ ತಿಂಗಳಾನುಗಟ್ಟಲೆ ಯೋಜನೆ ರೂಪಿಸಲಾಗಿದೆ. ಹಾಗಿದ್ದರೆ ಇವೆಲ್ಲಾ ಗುಪ್ತಚರ ಇಲಾಖೆಗಳ ಕಣ್ಣಿಗೆ ಬೀಳಲೇ ಇಲ್ವಾ? ಎಲ್ಲರೂ ನಿರ್ಲಕ್ಷಿಸುವ ದಿನನಿತ್ಯದ ಎಚ್ಚರಿಕೆಗಳನ್ನು ನೀಡುವುದಕ್ಕೆ ಮಾತ್ರ ಗುಪ್ತಚರ ಇಲಾಖೆಗಳು ಸೀಮಿತಗೊಂಡವೇ?
  3. ಜನಸಾಮಾನ್ಯರ ಎಲ್ಲಾ ವಾಹನಗಳನ್ನು ಪರಿಶೀಲನೆ ನಡೆಸಬೇಕು ಎಂಬ ನಿಯಮವಿದೆ. ಹೀಗಿರುವಾಗ 22 ವರ್ಷದ ಹುಡುಗನೊಬ್ಬ ಅಷ್ಟೆಲ್ಲಾ ಸ್ಫೋಟಕಗಳನ್ನು ತುಂಬಿಕೊಂಡು 78 ವಾಹನಗಳಿದ್ದ ಸಿಆರ್‌ಪಿಫ್‌ ಕಾನ್ವಾಯ್‌ ಮಧ್ಯೆ ಬರುವಾಗ ಯಾರೂ ಪರಿಶೀಲನೆ ನಡೆಸಲಿಲ್ಲವೇ?
  4. ಭದ್ರತಾ ಸಂಸ್ಥೆಗಳಿಗೆ ಗೊತ್ತಾಗದೆ, ಇಂಥಹದ್ದೊಂದು ವಿಧ್ವಂಸಕ ಕೃತ್ಯ ನಡೆಸಲು ಸೂಕ್ತ ಸಮಯ, ಸ್ಥಳ ಯಾವುದು ಎಂಬುದು ಆದಿಲ್‌ ಧರ್‌ಗೆ ಹೇಗೆ ತಿಳಿಯಿತು? ಉಗ್ರ ಸಂಘಟನೆಗೆ ಇಂಥಹದ್ದೊಂದು ಖಚಿತ ಮಾಹಿತಿ ಸಿಕ್ಕಿದ್ದು ಹೇಗೆ?
  5. ವಾಹನಗಳ ದಟ್ಟಣೆಗೆ ಕೆಟ್ಟ ಹವಾಮಾನವನ್ನು ದೂರಲಾಗುತ್ತಿದೆ. ಆದರೆ 2,500 ಕ್ಕಿಂತಲೂ ಹೆಚ್ಚು ಸೈನಿಕರು ಒಂದೆಡೆ ಒಟ್ಟಾಗಿ, ಹೆಚ್ಚಿನ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಅಗತ್ಯವಾಗಿತ್ತೇ?
  6. ಅರ್ಧಕ್ಕೆ ಶಾಲೆ ಬಿಟ್ಟ 22ರ ಹುಡುಗ ಆದಿಲ್‌ ಧರ್‌ ಸ್ಫೋಟದ ಸ್ಥಳದಿಂದ 10 ಕಿಲೋಮೀಟರ್‌ ದೂರದಲ್ಲಿ ವಾಸವಾಗಿದ್ದ. ಈತ 60 ಕೆಜಿ ಆರ್‌ಡಿಎಕ್ಸ್‌ ಎಲ್ಲಿಂದ ಪಡೆದುಕೊಂಡ. ಅದನ್ನು ಆತನಿಗೆ ತಲುಪಿಸಿದವರು ಯಾರು?
  7. ಎರಡು ದಿನಗಳಿಂದ ಮುಚ್ಚಿದ್ದ ಹೆದ್ದಾರಿಯನ್ನು ಸಿಆರ್‌ಪಿಎಫ್‌ ಕಾನ್ವಾಯ್‌ ಬರುವುದಕ್ಕೂ ಕೆಲವೇ ಗಂಟೆಗಳ ಮೊದಲು ತೆರವುಗೊಳಿಸಲಾಗಿತ್ತು. ಹೀಗಿರುವಾಗ ಆದಿಲ್‌ ಧರ್‌ ಹೆದ್ದಾರಿಯನ್ನು ಹೇಗೆ ಪ್ರವೇಶಿಸಿದ?
  8. ಮೂಲಗಳ ಪ್ರಕಾರ ಪುಲ್ವಾಮಾ ದಾಳಿಗೂ ಎರಡು ದಿನ ಮೊದಲು ಜೈಷ್‌-ಎ-ಮೊಹಮ್ಮದ್‌ ಅಫ್ಘಾನಿಸ್ತಾನದಿಂದ ಕಾರ್‌ ಬಾಂಬ್‌ ದಾಳಿಯ ವಿಡಿಯೋ ಒಂದನ್ನು ಅಪ್ಲೋಡ್‌ ಮಾಡಿತ್ತು. ಮತ್ತು ಈ ವಿಡಿಯೋದಲ್ಲಿ ಇದೇ ರೀತಿಯ ದಾಳಿಯನ್ನು ಕಾಶ್ಮೀರದಲ್ಲಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಈ ವಿಡಿಯೋವನ್ನು ಹಂಚಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ಕ್ರಿಮಿನಲ್‌ ಇನ್ವೆಸ್ಟಿಗೇಷನ್‌ ವಿಭಾಗದವರು ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದರು. ಹೀಗಿದ್ದೂ ಮುನ್ನೆಚ್ಚರಿಕೆ ವಹಿಸಲಿಲ್ಲವೇ?
  9. ಅಧಿಕಾರಿಯೊಬ್ಬರ ಪ್ರಕಾರ ಬಸ್ಸುಗಳು ಕಡಿಮೆ ಅಂತರದಲ್ಲಿ ಚಲಿಸುತ್ತಿದ್ದವು. ಇದು ‘ನಿರ್ದಿಷ್ಠ ಕಾರ್ಯಾಚರಣೆ ಪ್ರಕ್ರಿಯೆ’ಯ ಉಲ್ಲಂಘನೆ. ಸಂಭಾವ್ಯ ದಾಳಿಯ ಸಂದರ್ಭದಲ್ಲಿ ಕಡಿಮೆ ಅಪಾಯವಾಗಬೇಕು ಎಂಬ ಕಾರಣಕ್ಕೆ ಕಾನ್ವಾಯ್‌ನ ಎರಡೂ ವಾಹನಗಳು ಸುರಕ್ಷಿತ ಅಂತರದಲ್ಲಿ ಚಲಿಸಬೇಕು ಎಂಬ ನಿಯಮವಿದೆ. ಇದನ್ನು ಯಾಕೆ ನಿರ್ಲಕ್ಷಿಸಲಾಯಿತು?

ಹೀಗೆ ದಾಳಿಯ ಬೆನ್ನಿಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅದರಲ್ಲೂ ಶ್ರೀನಗರ-ಜಮ್ಮು ಹೆದ್ದಾರಿಯಲ್ಲೇ ಈ ಹಿಂದೆ ಹಲವು ಬಾರಿ ದಾಳಿಗಳು ನಡೆದಿವೆ. ಹೀಗಿದ್ದೂ ಇಲ್ಲಿ ಮತ್ತೆ ಮತ್ತೆ ದಾಳಿಗಳು ಮರುಕಳುಹಿಸುತ್ತಿರುವುದು, ಎಲ್ಲೋ ಏನೋ ಸಮಸ್ಯೆಯಿದೆ ಎಂಬುದನ್ನು ಸೂಚಿಸುತ್ತಿದೆ. ಭಾರತದ ಸೈನಿಕರ ಅಮೂಲ್ಯ ಜೀವಗಳ ದೃಷ್ಟಿಯಿಂದಾದರೂ ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ.

ಚಿತ್ರ ಕೃಪೆ: ಡಿಎನ್‌ಎ

Also read: ಕಂದಹಾರ್‌ ಟು ಪುಲ್ವಾಮಾ: ನಿಷೇಧಿತ ಸಂಘಟನೆ ಜೈಫ್‌- ಎ- ಮೊಹಮ್ಮದ್ ಬಗ್ಗೆ ನಿಮಗೆಷ್ಟು ಗೊತ್ತು? 

Also read: ಕಾಶ್ಮೀರ ಸಂಘರ್ಷದ ಮೂಲ & ರಕ್ತಪಾತಕ್ಕೆ ಕೊನೆಹಾಡಲು ಇರುವ ಪರಿಹಾರ ಏನು ಗೊತ್ತಾ?