samachara
www.samachara.com
ತಮಿಳು ಸಿನಿಮಾ ನಟರಿಗೆ ಬಿಜೆಪಿ ಚುಂಬನ; ಹಿಂದೆ ಕಾಂಗ್ರೆಸ್‌ಗೂ ಆಗಿತ್ತು ದಂತ ಭಗ್ನ!
COVER STORY

ತಮಿಳು ಸಿನಿಮಾ ನಟರಿಗೆ ಬಿಜೆಪಿ ಚುಂಬನ; ಹಿಂದೆ ಕಾಂಗ್ರೆಸ್‌ಗೂ ಆಗಿತ್ತು ದಂತ ಭಗ್ನ!

1967 ರಲ್ಲಿ ಸಿಎಂ ಪದವಿಗೆ ಏರಿದ ಸಿ.ಎನ್.ಅಣ್ಣಾದುರೈ ಅವರಿಂದ ಮೊನ್ನೆ ಮೊನ್ನೆ ಸಾವಿಗೀಡಾದ ಜೆ.ಜಯಲಲಿತಾವರೆಗೆ ಕಳೆದ 5 ದಶಕದಲ್ಲಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಏರಿದ ಎಲ್ಲರೂ ಸಿನಿಮಾ ಹಿನ್ನೆಲೆ ಉಳ್ಳವರೆ ಎಂಬುದು ಉಲ್ಲೇಖಾರ್ಹ.

ಲೋಕಸಭಾ ಚುನಾವಣೆ ಹತ್ತಿರಾಗುತ್ತಿದೆ. ಎಲ್ಲಾ ಪಕ್ಷಗಳು ತಮ್ಮ ಮತ ಬ್ಯಾಂಕ್‌ಗಳನ್ನು ಭದ್ರಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿವೆ. ಆಡಳಿತರೂಢ ಬಿಜೆಪಿ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಆದರೆ ದಕ್ಷಿಣ ಭಾರತದಲ್ಲಿ ಕರ್ನಾಟಕದ ಹೊರತಾಗಿ ಬೇರೆಲ್ಲೂ ಬಿಜೆಪಿಗೆ ಗಟ್ಟಿ ನೆಲೆ ಇಲ್ಲ. ಕಮ್ಯೂನಿಸ್ಟರ ಕೈಲಿರುವ ಕೇರಳ, ಪ್ರಾದೇಶಿಕ ಪಕ್ಷಗಳ ಹಿಡಿತದಲ್ಲಿರುವ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಕಮಲವನ್ನು ಅರಳಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಎಂದಿಗಿಂತಲೂ ಈಗ ಬಿಜೆಪಿಗೆ ಸ್ಪಷ್ಟವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ತನ್ನ ಸಂಪೂರ್ಣ ಗಮನವನ್ನು ದೇಗುಲಗಳ ನಾಡು ತಮಿಳುನಾಡಿನತ್ತ ಹರಿಸಿದೆ. ಇಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಆ ಪಕ್ಷ ರೂಪಿಸಿರುವ ತಂತ್ರ ಸಿನಿಮಾ ರಾಜಕಾರಣ.

2014 ಲೋಕಸಭಾ ಚುನಾವಣೆ ಮುಗಿದಂದಿನಿಂದ ಬಿಜೆಪಿ ತಮಿಳುನಾಡಿನಲ್ಲಿ ಕಮಲವನ್ನು ಅರಳಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ತಮಿಳರ ಪ್ರತಿಭಟನೆಯ ನಡುವೆಯೂ ಆಗಿದಾಂಗ್ಗೆ ತಮಿಳುನಾಡಿಗೆ ಭೇಟಿ ನೀಡುತ್ತಲೇ ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕೃತಕ ಮಳೆ ಸುರಿಸಿಯಾದರೂ ಕಮಲವನ್ನು ಅರಳಿಸಿಯೇ ತೀರುವುದಾಗಿ ಹೋದಲ್ಲಿ ಬಂದಲ್ಲೆಲ್ಲಾ ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ತಮಿಳರು ಮಾತ್ರ ಈವರೆಗೆ ಬಿಜೆಪಿಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಪರಿಣಾಮ ಬಿಜೆಪಿ ತನ್ನ ಕೊನೆಯ ಅಸ್ತ್ರ ಎಂಬಂತೆ ಪ್ರಖ್ಯಾತ ಸಿನಿಮಾ ನಟರನ್ನು ತನ್ನ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿದೆ.

ತಮಿಳರ ಸಿನಿಮಾ ಪ್ರೀತಿ ಹಾಗೂ ರಾಜಕಾರಣ

ಹಾಗೆ ನೋಡಿದರೆ ತಮಿಳರ ಸಿನಿಮಾ ಪ್ರೀತಿ ಅಲ್ಲಿನ ರಾಜಕಾರಣದ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಇತಿಹಾಸ ಸಾರಿ ಹೇಳುತ್ತದೆ. 1967ರಲ್ಲಿ ಎಂ. ಭಕ್ತವತ್ಸಲಂ ನೇತೃತ್ವದ ಕಾಂಗ್ರೆಸ್ ಪಕ್ಷ ತಮಿಳುನಾಡಿನಲ್ಲಿ ಸೋತು, ಮೊದಲ ಬಾರಿಗೆ ಕಾಂಗ್ರೆಸೇತರ ಡಿಎಂಕೆ ಪಕ್ಷ ಅಧಿಕಾರ ಹಿಡಿಯುವಲ್ಲಿ ಸಿನಿಮಾ ಪ್ರಮುಖ ಪಾತ್ರವಹಿಸಿತ್ತು.

ಅಂದಿನ ದ್ರಾವಿಡ ಚಳುವಳಿಯ ಮುಂಚೂಣಿ ನಾಯಕರಾದ ಸಿ. ಎನ್. ಅಣ್ಣಾದುರೈ ಹಾಗೂ ಎಂ. ಕರುಣಾನಿಧಿ ಮೂಲತಃ ಸಿನಿಮಾ ರಂಗದವರು. ಚಿತ್ರಕಥೆ ಹಾಗೂ ಸಂಭಾಷಣೆ ಬರಹಗಾರರಾಗಿದ್ದ ಇವರು ದ್ರಾವಿಡ ಚಳವಳಿಗೆ ಸಿನಿಮಾ ಟಚ್ ನೀಡುವಲ್ಲಿ ಯಶಸ್ವಿಯಾಗಿದ್ದರು. ದ್ರಾವಿಡ ಸಿದ್ಧಾಂತವನ್ನೇ ಸಿನಿಮಾವನ್ನಾಗಿಸಿ ಜನ ಮನ ಗೆಲ್ಲುವ ತಂತ್ರ ರೂಪಿಸಿದ್ದರು. ಇದಕ್ಕೆ ಅಂದಿನ ಪ್ರಖ್ಯಾತ ನಟ ತಮಿಳರ ಆರಾಧ್ಯ ದೈವ ಎನಿಸಿಕೊಂಡ ಎಂ. ಜಿ. ರಾಮಚಂದ್ರನ್ ಸಹಮತವಿತ್ತು.

ಪರಿಣಾಮ 60-70 ರ ದಶಕದಲ್ಲಿ ಕರುಣಾನಿಧಿ ಬರವಣಿಗೆಯಲ್ಲಿ ಎಂ.ಜಿ.ರಾಮಚಂದ್ರನ್ ನಟಿಸಿದ ಎಲ್ಲಾ ಚಿತ್ರಗಳ ಕಥೆ ಸಂಭಾಷಣೆಗಳಿಂದ ಹಾಡುಗಳವರೆಗೆ ದ್ರಾವಿಡ ಸಿದ್ಧಾಂತವನ್ನೇ ತುಂಬಲಾಗಿತ್ತು. ಕಾಂಗ್ರೆಸ್ ಸರಕಾರವನ್ನು ಟೀಕಿಸಲಾಗಿತ್ತು. ಕಾಲ ಕ್ರಮೇಣ ಜನ ಬದಲಾಗತೊಡಗಿದರು. ಈ ಮೂವರ ಜೋಡಿ ಫಲ ನೀಡಿತ್ತು. ಸಿನಿಮಾದವರು ಮನಸ್ಸು ಮಾಡಿದರೆ ಸರಕಾರವನ್ನೇ ಬದಲಿಸಬಹುದು ಎಂಬುದನ್ನು 1967ರ ಚುನಾವಣೆ ಸಾಬೀತುಪಡಿಸಿತ್ತು.

1967ರಲ್ಲಿ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಕಾಂಗ್ರೆಸೇತರ ಪಕ್ಷ ಅಧಿಕಾರ ಹಿಡಿದಿತ್ತು. ಡಿಎಂಕೆ ಪಕ್ಷದ ಅಣ್ಣಾದುರೈ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಚಿತ್ರರಂಗದ ಹಿನ್ನೆಲೆಯುಳ್ಳ ವ್ಯಕ್ತಿಯೋರ್ವ ರಾಜ್ಯದ ಉನ್ನತ ಪದವಿಗೆ ಏರಿದ ಇತಿಹಾಸ ನಿರ್ಮಿಸಿದರು.

ವಿಶೇಷವೇನೆಂದರೆ 1967 ರಲ್ಲಿ ಸಿಎಂ ಪದವಿಗೆ ಏರಿದ ಸಿ.ಎನ್.ಅಣ್ನಾದುರೈ ಅವರಿಂದ ಮೊನ್ನೆ ಮೊನ್ನೆ ಸಾವಗೀಡಾದ ಜೆ.ಜಯಲಲಿತಾವರೆಗೆ ಕಳೆದ 5 ದಶಕದಲ್ಲಿ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಏರಿದ ಎಲ್ಲರೂ ಸಿನಿಮಾ ಹಿನ್ನೆಲೆ ಉಳ್ಳವರೆ ಎಂಬುದು ಉಲ್ಲೇಖಾರ್ಹ. ಈಗಲೂ ತಮಿಳುನಾಡಿನ ರಾಜಕಾರಣದ ದಿಕ್ಕನ್ನು ನಿರ್ಧರಿಸುವ ಶಕ್ತಿ ಕೇಂದ್ರ ಸಿನಿಮಾ ರಂಗದವರ ಕೈನಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ.

ತಮಿಳುನಾಡು ರಾಜಕಾರಣದ ಈ ಹಿನ್ನೆಲೆಯನ್ನರಿಯದಷ್ಟು ಮೂರ್ಖರಲ್ಲ ಬಿಜೆಪಿಗರು. ಇದೇ ಕಾರಣಕ್ಕೆ ಪ್ರಖ್ಯಾತ ಸಿನಿಮಾ ನಟರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಕಳೆದ 4 ವರ್ಷದಿಂದ ಸತತ ರಣತಂತ್ರ ರೂಪಿಸುತ್ತಲೇ ಇದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದವರು ಸೂಪರ್ ಸ್ಟಾರ್ ರಜನಿಕಾಂತ್.

ನಯವಾಗಿ ನಿರಾಕರಿಸಿದ ರಜನಿ:

ರಜನಿಕಾಂತ್.
ರಜನಿಕಾಂತ್.

ನಟ ರಜನಿಕಾಂತ್ರ ಸಿನಿ ಕೆರಿಯರ್‌ ಜತೆ ರಾಜಕೀಯ ಮೊದಲ ಬಾರಿಗೆ ಬೆಸೆದದ್ದು 1992 ರಿಂದ 1996ರ ಅವಧಿಯಲ್ಲಿ. ಅಂದಿನ ಭಾರತದ ಪ್ರಧಾನಿ ಪಿ. ವಿ. ನರಸಿಂಹರಾವ್ ಹೇಗಾದರು ರಜನಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದು ಮತ್ತೆ ತಮಿಳುನಾಡಿನಲ್ಲಿ ಕೈ ಮೇಲುಗೈ ಸಾಧಿಸುವಂತೆ ಮಾಡಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ ಅಂದಿನ ಪ್ರಧಾನಿಯ ಆಹ್ವಾನಕ್ಕೆ ರಜನಿ ಸೊಪ್ಪು ಹಾಕಿರಲಿಲ್ಲ.

ಆದರೆ 1996ರಲ್ಲಿ ಮೊದಲ ಬಾರಿಗೆ ಜೆ. ಜಯಲಲಿತಾ ಅವರ ಆಡಳಿತವನ್ನು ವಿರೋಧಿಸಿದ್ದ ರಜನಿ ಇನ್ನೊಮ್ಮೆ ಜಯಲಲಿತಾ ಮುಖ್ಯಮಂತ್ರಿಯಾದರೆ ಆ ದೇವರಿಂದಲೂ ತಮಿಳುನಾಡನ್ನು ಕಾಪಾಡಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದರು. ರಜನಿ ಹೇಳಿಕೆಯಿಂದ ಅಂದಿನ ಎಐಎಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ತಮಿಳುನಾಡಿನಲ್ಲಿ ಹೀನಾಯ ಸೋಲನುಭವಿಸಿತ್ತು. ಆದರೆ ರಜನಿ ಮಾತ್ರ ನಿರೀಕ್ಷೆಯಂತೆ ಸಕ್ರಿಯ ರಾಜಕಾರಣಕ್ಕೆ ಧುಮುಕಲಿಲ್ಲ. ಆಗಿಂದಾಗ್ಗೆ ತಮ್ಮ ಚಿತ್ರಗಳ ಬಿಡುಗಡೆ ಸಂದರ್ಭದಲ್ಲಿ ಮಾತ್ರ ತಮ್ಮ ರಾಜಕೀಯ ಎಂಟ್ರಿ ಕುರಿತು ಗಾಳಿಸುದ್ದಿ ತೇಲಿ ಬಿಡುವುದು ಬಿಟ್ಟರೆ, ಸಕ್ರಿಯ ರಾಜಕಾರಣದಿಂದ ಮಾರು ದೂರವೇ ಉಳಿದು ಬಿಟ್ಟರು.

2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದ ನರೇಂದ್ರ ಮೋದಿ ತಮಿಳುನಾಡಿಗೆ ಅಗಮಿಸಿ ರಜನಿಯವರನ್ನು ಭೇಟಿಯಾಗಿದ್ದರು. ಪರಿಣಾಮ ಮತ್ತೊಮ್ಮೆ ಅವರ ರಾಜಕೀಯ ಎಂಟ್ರಿ ವಿಚಾರ ಚಾಲ್ತಿಗೆ ಬಂದಿತ್ತು. ರಜನಿ ಬಹುತೇಕ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದು, ಅವರನ್ನು ತಮಿಳುನಾಡಿನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗಿತ್ತು. ಆದರೆ ಇದನ್ನು ತಳ್ಳಿಹಾಕಿದ್ದ ರಜನಿ, “ಇದು ಕೇವಲ ಸ್ನೇಹಪೂರ್ವಕ ಭೇಟಿಯಷ್ಟೇ. ಇದಕ್ಕೆ ರಾಜಕೀಯ ಬಣ್ಣ ನೀಡುವುದು ಬೇಡ,” ಎಂದು ಬಿಟ್ಟರು.

ಈ ನಡುವೆ 2016ರಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮರಣದ ನಂತರ ತಮಿಳುನಾಡಿನಲ್ಲಿ ಉಂಟಾದ ರಾಜಕೀಯ ನಿರ್ವಾತ ಮತ್ತೊಮ್ಮೆ ರಜನಿ ಸಕ್ರಿಯ ರಾಜಕೀಯಕ್ಕೆ ಬರುವ ಸೂಚನೆ ನೀಡಿತ್ತು. ಇದಕ್ಕೆ ಪೂರಕವಾಗಿ ಮೋದಿಯವರ ಸ್ವಚ್ಛ ಭಾರತ, ನೋಟ್ ಬ್ಯಾನ್ ಸೇರಿದಂತೆ ಅನೇಕ ಯೋಜನೆಗಳನ್ನು ಹಾಡಿ ಹೊಗಳಿದ್ದ ರಜನಿ, ಮೋದಿ ಓರ್ವ ಪ್ರಭಾವಿ ನಾಯಕ ಎಂದು ಶ್ಲಾಘಿಸಿದ್ದರು. ಹೀಗಾಗಿ ರಜನಿ ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನಲಾಗಿತ್ತಾದರು ಕಳೆದ ವರ್ಷ ತಮ್ಮ ಅಭಿಮಾನಿಗಳ ಸಭೆ ಕರೆದಿದ್ದ ಅವರು ತಾವು ಯಾವುದೇ ಪಕ್ಷದ ಜೊತೆಗೆ ಸೇರದೆ, ‘ಆಧ್ಯಾತ್ಮಿಕ ರಾಜಕಾರಣ’ವನ್ನು ಆರಂಭಿಸುವುದಾಗಿ ತಿಳಿಸುವ ಮೂಲಕ ಬಿಜೆಪಿ ಆಸೆಗೆ ಶಾಶ್ವತವಾಗಿ ತಣ್ಣೀರೆರಚಿದ್ದರು.

ಬಿಜೆಪಿ ವಿರೋಧಿಯಾದ ಕಮಲ್:

ಚಿತ್ರನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸ್ಥಾಪಕ ಕಮಲಹಾಸನ್.
ಚಿತ್ರನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸ್ಥಾಪಕ ಕಮಲಹಾಸನ್.
/ದಿ ನ್ಯೂಸ್‌ ಮಿನಿಟ್‌

ತಮಿಳುನಾಡಿನಲ್ಲಿ ರಜನಿಯಷ್ಟೇ ಅಭಿಮಾನಿಗಳನ್ನು ಹೊಂದಿರುವ ಮತ್ತೊಬ್ಬ ಪ್ರಖ್ಯಾತ ನಟ ಕಮಲ್ ಹಾಸನ್. ಜೆ. ಜಯಲಲಿತಾ ಅವರ ಅಕಾಲಿಕ ಮರಣದ ನಂತರ ತಾವು ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಿಸಿದ್ದ ಕಮಲ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಬಿಜೆಪಿ ಸಾಕಷ್ಟು ಕಸರತ್ತು ನಡೆಸಿತ್ತು.

ಆರಂಭದಿಂದಲೂ ಬಿಜೆಪಿ ಹಾಗೂ ಕೋಮುವಾದಿಗಳ ವಿರುದ್ಧವೇ ಮಾತನಾಡುತ್ತಾ ಬಂದ ಕಮಲ್ ಒಂದು ಹಂತದಲ್ಲಿ ತಮಿಳುನಾಡಿಗೆ ಒಳಿತಾಗುವುದಾದರೆ ತಾವು ಯಾರ ಜೊತೆಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂಬ ರೀತಿಯ ಹೇಳಿಕೆಗಳನ್ನು ನೀಡಿದ್ದರು. ಅಲ್ಲದೆ ಮೋದಿ ಅವರ ನೋಟ್ ಬ್ಯಾನ್ ನಿರ್ಧಾರವನ್ನು ಸ್ವಾಗತಿಸಿದ್ದರು. ರಾಜ್ಯ ಸರಕಾರದ ವಿರುದ್ಧ ಕಟು ಟೀಕಾಪ್ರಹಾರ ನಡೆಸುತ್ತಿದ್ದ ಕಮಲ್, ಕೇಂದ್ರ ಸರಕಾರದ ಬಗ್ಗೆ ಮೃದು ಧೋರಣೆ ತಾಳಿದ್ದರು. ಕಮಲ್ ಅವರ ಈ ನಡೆಗಳು ಅವರು ಶೀಘ್ರದಲ್ಲಿ ಬಿಜೆಪಿ ಪಾಳಯಕ್ಕೆ ಸೇರಲಿದ್ದಾರೆ ಎಂಬ ವಾದಗಳನ್ನು ರಾಜಕೀಯ ವಲಯದಲ್ಲಿ ಸೃಷ್ಟಿಸಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಅನೇಕ ಸ್ಥಳೀಯ ಬಿಜೆಪಿ ನಾಯಕರುಗಳು ಸಹ ಕಮಲ್‌ ಹಾಸನ್ ಅವರನ್ನು ಸಂಪರ್ಕಿಸಿ ಪಕ್ಷ ಸೇರುವ ಕುರಿತು ಮಾತುಕತೆ ನಡೆಸಿದ್ದರು.

ಆದರೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆಯೇ ಮಾತನಾಡುತ್ತಿದ್ದ ಕಮಲ್ ಅವರನ್ನು ಬಿಜೆಪಿ ನಾಯಕರು ನಿಯಂತ್ರಿಸುತ್ತಿದ್ದಾರೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿಬರಲಾರಂಭಿಸಿದವು. ಈ ಆರೋಪದಿಂದ ಮುಕ್ತರಾಗಲು ನಿಶ್ಚಯಿಸಿದ್ದ ಕಮಲ್ ಕಳೆದ ಒಂದು ವರ್ಷದಿಂದ ನಿರಂತರವಾಗಿ ಮೋದಿ ಹಾಗೂ ಬಿಜೆಪಿಯ ಧರ್ಮ ಆಧಾರಿತ ರಾಜಕಾರಣದ ವಿರುದ್ಧ ಟೀಕೆ ಮಾಡುವುದನ್ನೇ ತಮ್ಮ ಒನ್‌ಲೈನ್ ಅಜೆಂಡವನ್ನಾಗಿರಿಸಿಕೊಂಡರು. ವಾರ ಪತ್ರಿಕೆಯೊಂದಕ್ಕೆ ಬರೆದಿದ್ದ ಅಂಕಣದಲ್ಲಿ, ಹಿಂದೂ ಉಗ್ರವಾದ ಎಂಬ ಪದ ಬಳಸಿದ್ದರು. ಇದು ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಕಮಲ್‌ ಓರ್ವ ಮಾನಸಿಕ ಅಸ್ವಸ್ಥ ಎಂದು ಬಿಜೆಪಿ ನಾಯಕರು ಜರಿದಿದ್ದರು.

ಕೊನೆಗೂ ಕಳೆದ ವರ್ಷ 'ಮಕ್ಕಳ್ ನೀಧಿ ಮಯ್ಯಂ' ಎಂಬ ಹೊಸ ಪಕ್ಷವನ್ನು ಸ್ಥಾಪಿಸುವ ಮೂಲಕ ಕಮಲ್ ಅಧಿಕೃತವಾಗಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಬಿಜೆಪಿಯನ್ನು ಅರಳಿಸುವ ನಾಯಕರ ಕನಸಿಗೆ ಮುಳ್ಳಾಗಿ ಪರಿಣಮಿಸಿದ್ದಾರೆ.

ಮೆರ್ಸಲ್ ಸೃಷ್ಟಿಸಿದ ಆವಾಂತರ

ಚಿತ್ರನಟ ಜೋಸೆಫ್ ವಿಜಯ್. 
ಚಿತ್ರನಟ ಜೋಸೆಫ್ ವಿಜಯ್. 

ಈ ತಲೆಮಾರಿನ ಜನಪ್ರಿಯ ತಮಿಳು ನಟರಲ್ಲಿ ವಿಜಯ್‌ಗೆ ಅಗ್ರಸ್ಥಾನ. ಅಭಿಮಾನಿಗಳು ಪ್ರೀತಿಯಿಂದ ‘ಇಳಯ ದಳಪತಿ’ ಎಂದೇ ಕರೆಸಿಕೊಳ್ಳುವ ವಿಜಯ್ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ, ಯುವ ಜನತೆ ಆರಾಧಿಸುವ ನಟ. ಇವರನ್ನು ತಮ್ಮ ಪಕ್ಷದತ್ತ ಸೆಳೆಯಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿತ್ತು.

2014ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಜನಿಯನ್ನು ಭೇಟಿ ಮಾಡಲು ತಮಿಳುನಾಡಿಗೆ ಆಗಮಿಸಿದ್ದ ನರೇಂದ್ರ ಮೋದಿ, ವಿಜಯ್ ಮನೆಯಲ್ಲೇ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮೋದಿಯ ಈ ನಡೆ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಮಾಡಿತ್ತು. ನಟ ವಿಜಯ್ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ವರದಿಗಳಾಗಿದ್ದವು. ಆದರೆ ಭೇಟಿ ಬಳಿಕ ಪತ್ರಕರ್ತರ ಎದುರು ಮಾತನಾಡಿದ್ದ ವಿಜಯ್, ರಾಜಕೀಯ ಪ್ರವೇಶವನ್ನು ತಳ್ಳಿ ಹಾಕಿದ್ದರು.

2014ರಿಂದ 2016 ರವರೆಗೆ ಮತ್ತೆ ವಿಜಯ್ ರಾಜಕೀಯಕ್ಕೆ ಎಂಟ್ರಿಯಾಗುವ ಕುರಿತು ಯಾವುದೇ ಸುದ್ದಿ ಇರಲಿಲ್ಲ. ಆದರೆ 2016ರ ನವೆಂಬರ್‌ನಲ್ಲಿ ಮೋದಿ ತೆಗೆದುಕೊಂಡ ನೋಟ್ ಬ್ಯಾನ್ ತೀರ್ಮಾನವನ್ನು ತಮಿಳುನಾಡಿನ ಅನೇಕ ನಟರು ಸ್ವಾಗತಿದ್ದರು. ವಿಜಯ್ ಮಾತ್ರ ಮೋದಿ ತೀರ್ಮಾನದ ವಿರುದ್ಧ ಹೇಳಿಕೆ ನೀಡಿದ್ದರು. ನೋಟ್‌ಬ್ಯಾನ್ ತೀರ್ಮಾನದ ಹಿಂದಿನ ಉದ್ದೇಶ ಸರಿಯಿದ್ದರೂ, ಅದನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸೋತಿದೆ. ಇದರಿಂದ ಬಡವರು ಸಂಕಷ್ಟ ಎದುರಾಗುತ್ತಿದ್ದಾರೆ ಎಂಬ ಹೇಳಿಕೆ ನೀಡಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇನ್ನು 2017ರಲ್ಲಿ ಬಿಡುಗಡೆಯಾದ 'ಮೆರ್ಸಲ್' ಚಿತ್ರ ತಮಿಳುನಾಡಿನಲ್ಲಿ ದೊಡ್ಡ ಮಟ್ಟದ ಬಿಕ್ಕಟ್ಟನ್ನೇ ಸೃಷ್ಟಿಸಿತ್ತು. ಈ ಚಿತ್ರದಲ್ಲಿ ವಿಜಯ್ ನೇರಾನೇರವಾಗಿ ಮೋದಿ ಅವರ ಜಿಎಸ್‌ಟಿ, ನೋಟ್‌ಬ್ಯಾನ್ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಗಳನ್ನು ಟೀಕಿಸಿದ್ದರು. ಪರಿಣಾಮ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಈ ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಬೀದಿಗಿಳಿದು ಹೋರಾಟ ನಡೆಸಿದ್ದರು. ಸ್ಥಳೀಯ ನಾಯಕ ಹೆಚ್‌. ರಾಜಾ ಸಾರ್ವಜನಿಕ ಸಭೆಯಲ್ಲಿ ವಿಜಯ್ ಅವರ ಗುರುತಿನ ಚೀಟಿಯನ್ನು ಹಿಡಿದು ಅವರ ಹೆಸರು ಜೋಸೆಫ್ ವಿಜಯ್ ಎಂದು ಬಹಿರಂಗವಾಗಿ ಹೇಳುವ ಮೂಲಕ ನಟನ ಧರ್ಮವನ್ನು ಈ ಪ್ರಕರಣದ ಒಳಗೆ ಎಳೆದು ತಂದಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗರು ಹಾಗೂ ವಿಜಯ್ ಅಭಿಮಾನಿಗಳು ಕದನಕ್ಕಿಳಿದಿದ್ದರು. ರಾಹುಲ್ ಗಾಂಧಿ ನಟ ವಿಜಯ್‌ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದರು. ಆದರೂ ವಿಜಯ್ ಮಾತ್ರ ಮೌನ ಮುರಿದಿರಲಿಲ್ಲ. ಈ ನಡುವೆ ‘ಮೆರ್ಸಲ್’ ಚಿತ್ರ ದೊಡ್ಡ ಮಟ್ಟದ ಹಿಟ್ ಆಗಿತ್ತು. ಈ ಚಿತ್ರದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಮಾತನಾಡಿದ್ದ ವಿಜಯ್ ಟೀಕೆಗಳು ಎದುರಾಗುತ್ತವೆ ಎಂದು ತಿಳಿದಿದ್ದೇ ತಾವು ಈ ಸಂಭಾಷಣೆಗಳನ್ನು ಹೇಳಿದ್ದಾಗಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಹೀಗೆ ರಜನಿ ಜೊತೆಗಿನ ಸ್ನೇಹ ಹಾಗೂ ಕಮಲ್, ವಿಜಯ್ ಜೊತೆಗಿನ ಮುನಿಸಿನ ನಂತರ ಬಿಜೆಪಿ ಕಣ್ಣಿಗೆ ಕಾಣಿಸಿಕೊಂಡ ಮತ್ತೊಬ್ಬ ಸ್ಟಾರ್ ನಟ ಅಜಿತ್ ಕುಮಾರ್.

ರಾಜಕೀಯಕ್ಕೂ ತನಗೂ ಸಂಬಂಧವಿಲ್ಲ ಎಂದ ಅಜಿತ್

ಚಿತ್ರನಟ ಅಜಿತ್ ಕುಮಾರ್.
ಚಿತ್ರನಟ ಅಜಿತ್ ಕುಮಾರ್.

ಪ್ರಾಮಾಣಿಕ ವ್ಯಕ್ತಿ ಹಾಗೂ ನಟ ಎಂದು ಅಭಿಮಾನಿಗಳಿಂದ ಪ್ರಶಂಸೆಗೆ ಒಳಗಾದ ನಟ ಅಜಿತ್ ಕುಮಾರ್. ಪ್ರಜ್ಞಾಪೂರ್ವಕವಾಗಿಯೇ ರಾಜಕೀಯ ದಾರಿಯಿಂದ ದೂರ ಉಳಿದವರು. ಕೇವಲ ನಟನೆಯಷ್ಟೇ ನನ್ನ ಕೆಲಸ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಅಜಿತ್, ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಪಾಲ್ಗೊಂಡವರಲ್ಲ. ಆದರೆ ಕಳೆದ ವಾರ ತಮಿಳುನಾಡಿನ ಬಿಜೆಪಿ ನಾಯಕರು ನೀಡಿದ್ದ ಹೇಳಿಕೆಯೊಂದು ಅಜಿತ್ ಬಿಜೆಪಿ ಸೇರಲಿದ್ದಾರೆ ಎಂಬ ವಾದಕ್ಕೆ ಪುಷ್ಠಿ ನೀಡಿತ್ತು.

ಜನವರಿ 20, 2019ರಂದು ತಿರುಪ್ಪೂರ್ ಜಿಲ್ಲೆಯಲ್ಲಿ ಇತರೆ ಪಕ್ಷದ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸುವ ಸಮಾರಂಭವೊಂದರಲ್ಲಿ ಮಾತನಾಡಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥೆ ತಮಿಳಿಸೈ ಸೌಂದರರಾಜನ್, “ಅಜಿತ್ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಆತ ತಾನು ದುಡಿದ ಹಣವನ್ನು ಜನರಿಗಾಗಿ ವಿನಿಯೋಗಿಸುತ್ತಾರೆ. ಅವರಂತೆ ಅವರ ಅಭಿಮಾನಿಗಳು ಪ್ರಾಮಾಣಿಕರು. ಇಂತಹ ಅಜಿತ್ ಅಭಿಮಾನಿಗಳು ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಜಿತ್ ಅಭಿಮಾನಿಗಳೆಲ್ಲ ಒಟ್ಟಾಗಿ ಮೋದಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು. ತಮಿಳುನಾಡಿನಲ್ಲಿ ಕಮಲವನ್ನು ಅರಳಿಸಬೇಕು” ಎಂದು ಹೇಳಿದ್ದರು.

ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿತ್ತು. ಬಿಜೆಪಿ ನಟ ಅಜಿತ್‌ರನ್ನು ತನ್ನ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು. ಇದರ ಮರು ದಿನವೇ ಅಂದರೆ ಜನವರಿ 21, 2019 ರಂದು ಅಭಿಮಾನಿಗಳಿಗೆ ಪತ್ರ ಬರೆದು ತನ್ನ ನಿರ್ಧಾರವನ್ನು ಘೋಷಿಸಿದ ಅಜಿತ್, “ನಾನು ನನ್ನ ವೈಯಕ್ತಿಕ ಬದುಕು ಹಾಗೂ ಸಿನಿಮಾಗಳಲ್ಲಿ ಎಲ್ಲಿಯೂ ರಾಜಕೀಯ ನುಸುಳಬಾರದು ಎಂಬುದರ ಕುರಿತು ಸ್ಪಷ್ಟವಾಗಿದ್ದೇನೆ. ಚುನಾವಣಾ ಸಂದರ್ಭದಲ್ಲಿ ಸಾಲಾಗಿ ನಿಂತು ಮತ ಚಲಾಯಿಸುವುದು ಮಾತ್ರ ನನ್ನ ಅತ್ಯುಚ್ಛ ರಾಜಕೀಯ ಕರ್ತವ್ಯ. ನನ್ನ ಅಭಿಮಾನಿಗಳೂ ಹಾಗೆ ಇರಬೇಕು ಎಂಬುದೇ ನನ್ನ ಬಯಕೆ,” ಎಂದು ಹೇಳುವ ಮೂಲಕ ಬಿಜೆಪಿ ಕನಸಿಗೆ ತಣ್ಣೀರೆರೆಚಿದ್ದಾರೆ.

ಒಟ್ಟಾರೆ ತಮಿಳುನಾಡಿನಲ್ಲಿ ಸಿನಿಮಾ ಹಿನ್ನೆಲೆ ಇಲ್ಲದೆ ಯಾವ ಪಕ್ಷಗಳು ಗೆಲುವು ಸಾಧಿಸುವುದು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಬಿಜೆಪಿ ರಜನಿಯಿಂದ ಅಜಿತ್‌ವರೆಗೆ ಎಲ್ಲಾ ಸ್ಟಾರ್ ನಟರನ್ನೂ ತನ್ನತ್ತ ಸೆಳೆಯಲು, ಆ ಮೂಲಕ ತಮಿಳುನಾಡಲ್ಲಿ ಬಲವಾಗಿ ಹೆಜ್ಜೆಯೂರಲು ಪ್ರಯತ್ನಿಸಿತ್ತು. ಆದರೆ ಯಾವೊಬ್ಬ ನಟನೂ ಬಿಜೆಪಿಯ ಕೋರಿಕೆಗೆ ಸೊಪ್ಪು ಹಾಕಿಲ್ಲ. ಜತೆಗೆ ತಮಿಳುನಾಡಿನಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬಲ್ಲ ಪ್ರಬಲ ನಾಯಕರೂ ಬಿಜೆಪಿಯಲ್ಲಿಲ್ಲ.

ಹೀಗೆ 2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಖಾತೆ ತೆರೆಯಲು ಬಿಜೆಪಿ ಪ್ರಯತ್ನಿಸಿದ ಎಲ್ಲಾ ದಾರಿಗಳು ಇಂದು ಮುಚ್ಚಿಹೋಗಿವೆ. ಇದಲ್ಲದೆ ತಮಿಳುನಾಡಿನಲ್ಲಿ ಪ್ರತಿನಿತ್ಯ ಜನ ಮೋದಿ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದರ ನಡುವೆ ತಮಿಳುನಾಡಿನ ಸ್ಥಳೀಯ ಬಿಜೆಪಿ ನಾಯಕರ ಸ್ಥಿತಿ ತ್ರಿಶಂಕು ಸ್ವರ್ಗದಂತಾಗಿದೆ. ಇಂಥಹ ಸ್ಥಿತಿಯಲ್ಲಿ ಲೋಕಸಭಾ ಚುನಾವಣೆಯ ನಂತರ ತಮಿಳುನಾಡು ಬಿಜೆಪಿ ಕಥೆ ಏನಾಗಲಿದೆ ಎಂಬುದರ ಕುರಿತು ಊಹಿಸುವುದೂ ಕಷ್ಟ ಎನ್ನುತ್ತಿದ್ದಾರೆ ತಮಿಳು ರಾಜಕೀಯ ವಿಶ್ಲೇಷಕರು.