samachara
www.samachara.com
ಕಂದಹಾರ್‌ ಟು ಪುಲ್ವಾಮಾ: ನಿಷೇಧಿತ ಸಂಘಟನೆ ಜೈಫ್‌- ಎ- ಮೊಹಮ್ಮದ್ ಬಗ್ಗೆ ನಿಮಗೆಷ್ಟು ಗೊತ್ತು? 
COVER STORY

ಕಂದಹಾರ್‌ ಟು ಪುಲ್ವಾಮಾ: ನಿಷೇಧಿತ ಸಂಘಟನೆ ಜೈಫ್‌- ಎ- ಮೊಹಮ್ಮದ್ ಬಗ್ಗೆ ನಿಮಗೆಷ್ಟು ಗೊತ್ತು? 

ಭಾರತದ ಜೈಲಿನಿಂದ ಬಿಡುಗಡೆಯಾದ ನಂತರ 2000ನೇ ಇಸವಿಯಲ್ಲಿ ಮಸೂದ್‌ ಅಜರ್‌ ಹುಟ್ಟು ಹಾಕಿದ ಸಂಘಟನೆಯೇ ಜೈಷ್‌-ಎ-ಮೊಹಮ್ಮದ್‌. 

ಭಾರತದ ಜಮ್ಮು-ಕಾಶ್ಮೀರ ಕಣಿವೆ ರಾಜ್ಯದಲ್ಲಿ ಕಳೆದ 19 ವರ್ಷಗಳಿಂದ ಸಕ್ರಿಯವಾಗಿರುವ ಉಗ್ರಗಾಮಿ ಸಂಘಟನೆ ಹೆಸರು ಜೈಷ್-ಎ-ಮೊಹಮ್ಮದ್. ಅಂದರೆ ‘ಮೊಹಮ್ಮದ್‌ನ ಸೇನೆ’ ಎಂದರ್ಥ. ಮಸೂದ್‌ ಅಝರ್‌ ಇದರ ಸ್ಥಾಪಕ.

ಪುಲ್ವಾಮದಲ್ಲಿ 45 ಸಿಆರ್‌ಪಿಎಫ್‌ ಸಿಬ್ಬಂದಿಗಳನ್ನು ಬಲಿ ಪಡೆದ ಆತ್ಮಾಹುತಿ ಬಾಂಬ್‌ ದಾಳಿಯ ಹೊಣೆಯನ್ನು ಇದೇ ಸಂಘಟನೆ ಹೊತ್ತುಕೊಂಡಿದೆ. ಇದರ ಸ್ಥಾಪಕನದ್ದೊಂದು ರೋಚಕ ಇತಿಹಾಸ.

ಮೌಲಾನಾ ಮಸೂದ್‌ ಅಝರ್‌:

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಾವಲ್ಪುರ್‌ ಗ್ರಾಮದಲ್ಲಿ ಜುಲೈ 10, 1968 ರಲ್ಲಿ ಅಲ್ಲಾ ಭಕ್ಷ್ ಶಬ್ಬೀರ್ ಅವರ 11 ಮಕ್ಕಳ ಪೈಕಿ ಮೂರನೆಯವನಾಗಿ ಜನಿಸಿದವನೇ ಈ ಮೌಲಾನಾ ಮಸೂದ್ ಅಝರ್. ತಂದೆ ಸರಕಾರಿ ಶಾಲೆಯ ಹೆಡ್‌ಮಾಸ್ಟರ್. ಆದರೆ ಕಾರಾಚಿಯಲ್ಲಿ ಶಿಕ್ಷಣ ಪಡೆದ ಮಸೂದ್ ಮಾತ್ರ ಸೋವಿಯತ್-ಅಫ್ಘಾನ್‌ ಯುದ್ಧದ ನಂತರ ನಟೋರಿಯಸ್ ಹರ್ಕತ್-ಉಲ್-ಅನ್ಸರ್‌ ಎಂಬ ಉಗ್ರಗಾಮಿ ಸಂಘಟನೆಯ ಭಾಗವಾಗುತ್ತಾನೆ.

ಇದಕ್ಕೊಂದು ಕಥೆಯಿದೆ. ಈ ಹರ್ಕತ್-ಉಲ್-ಅನ್ಸರ್‌ ಪಾಕಿಸ್ತಾನದ ಸೇನೆಯ ಕೃಪಕಟಾಕ್ಷದಿಂದಲೇ ಆರಂಭವಾದ ಉಗ್ರ ಸಂಘಟನೆ. 1980ರಲ್ಲಿ ರಷ್ಯಾ-ಅಫ್ಘಾನಿಸ್ತಾನದ ನಡುವಿನ ಯುದ್ಧದ ಸಂದರ್ಭದಲ್ಲಿ ರಷ್ಯಾದ ವಿರುದ್ಧ ಹೋರಾಡಲು ಅಮೆರಿಕಾದ ಕೋರಿಕೆಯ ಮೇರಿಗೆ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ ಇದನ್ನು ಸ್ಥಾಪಿಸಿತ್ತು ಎನ್ನಲಾಗುತ್ತದೆ.

ಮುಂದೆ ‘ಮುಸ್ಲಿಂ ದೇಶ’ ಸ್ಥಾಪನೆಯ ಕನಸಿನೊಂದಿಗೆ ಹರ್ಕತ್-ಉಲ್-ಅನ್ಸರ್‌ ಸೇರಿದ್ದ ಅಝರ್‌ ಸಂಘಟನೆಯಲ್ಲಿ ಹೆಚ್ಚು ಚುರುಕಾಗಿದ್ದ. ಸಂಘಟನೆಗೆ ಹಣ ಹೊಂದಿಸುವ ಸಲುವಾಗಿ ನೈರೋಬಿ, ಸೊಮಾಲಿಯಾ, ಕೀನ್ಯಾ, ಯಮೆನ್‌ಗೆ ಪ್ರಯಾಣಿಸಿ ಅಲ್ಲಿನ ಉಗ್ರ ಸಂಘಟನೆಗಳ ಜತೆಗೆ ಸಾಕಷ್ಟು ಸಂಪರ್ಕ ಸಾಧಿಸಿದ್ದ. ಸಂಘಟನೆಯನ್ನು ಬಲಪಡಿಸುವಲ್ಲಿ ಈತನ ಪಾತ್ರ ಮಹತ್ವದ್ದಾಗಿತ್ತು.

ಈ ನಡುವೆ ಜಮ್ಮು-ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ ಹರ್ಕತ್-ಉಲ್-ಅನ್ಸರ್, ಹರ್ಕತ್-ಉಲ್-ಜಿಹಾದ್ ಹಾಗೂ ಅಲ್-ಇಸ್ಲಾಮಿ ಸಂಘಟನೆಗಳ ನಡುವೆ ಕಿತ್ತಾಟ ಆರಂಭವಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಮೌಲಾನ ಮಸೂದ್ ಅಝರ್ 1994ರ ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ ಬರಬೇಕಾಯಿತು. ಶ್ರೀನಗರಕ್ಕೆ ಅಝರ್‌ ಬರುವ ಸುಳಿವು ಭಾರತೀಯ ಸೇನಾ ಪಡೆಗಳಿಗೆ ಸಿಕ್ಕಿತ್ತು. ಹೀಗಾಗಿ ಖಚಿತ ಮಾಹಿತಿಯೊಂದಿಗೆ ದಾಳಿ ನಡೆಸಿದ ಭಾರತೀಯ ಸೇನಾ ಪಡೆ ಆತನಿಗೆ ಹೆಡೆಮುರಿ ಕಟ್ಟಿತ್ತು.

ಆದರೆ ಇದು ಮುಂದೊಂದು ದಿನ ವಿಧ್ವಂಸಕ ಕೃತ್ಯಗಳಿಗೆ ಮುನ್ನುಡಿಯಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಮೌಲಾನಾ ಮಸೂದ್‌ ಅಝರ್‌.
ಮೌಲಾನಾ ಮಸೂದ್‌ ಅಝರ್‌.
/ಡಿಎನ್‌ಎ

ಬಿಡುಗಡೆ ಪ್ರಯತ್ನ

ಅಂದಿಗೆ ಅಝರ್‌ ಹರ್ಕತ್‌-ಉಲ್‌-ಅನ್ಸರ್‌ನ ಪ್ರಮುಖ ನಾಯಕನಾಗಿ ಬೆಳೆದಿದ್ದ. ಆತನ ಜತೆಗೆ ಇನ್ನೂ ಕೆಲವು ಭಯಾನಕ ಉಗ್ರರು ಜೈಲು ಪಾಲಾಗಿದ್ದರು. ಇವರನ್ನು ಕಳೆದುಕೊಳ್ಳಲು ಉಗ್ರ ಸಂಘಟನೆಗಳು ಸುತಾರಾಂ ಸಿದ್ಧವಿರಲಿಲ್ಲ. ಹೀಗಾಗಿ ಆತನ ಬಿಡುಗಡೆಗಾಗಿ ತರಹೇವಾರಿ ನಾಟಕಗಳು ಆರಂಭಗೊಂಡವು.

ಮೊದಲ ಬಾರಿಗೆ ಅಝರ್‌ ಬಿಡುಗಡೆಗಾಗಿ ಹರ್ಕತ್-ಉಲ್- ಅನ್ಸರ್‌ ಸಂಘಟನೆ 1994ರಲ್ಲಿ ಅಮೆರಿಕಾ ಮತ್ತು ಬ್ರಿಟನ್‌ ಪ್ರಜೆಗಳನ್ನು ನವದೆಹಲಿಯಲ್ಲಿ ಅಪಹರಣ ನಡೆಸಿತು. ಹೀಗಿದ್ದೂ ಭಾರತ ಸರಕಾರ ಅಝರ್‌ನನ್ನು ಬಿಡುಗಡೆ ಮಾಡದಿದ್ದಾಗ 1995 ರಲ್ಲಿ ಜಮ್ಮು-ಕಾಶ್ಮೀರದಲ್ಲಿ 6 ಜನ ವಿದೇಶಿ ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿಕೊಂಡು ಮತ್ತೆ ಬ್ಲ್ಯಾಕ್‌ಮೇಲ್‌ಗೆ ಇಳಿಯಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿದರೂ ಭಾರತ ಸರಕಾರ ಮಾತ್ರ ಅಝರ್‌ ಬಿಡುಗಡೆಗೆ ಮನಸ್ಸು ಮಾಡಲಿಲ್ಲ. ಒತ್ತೆಯಾಳುಗಳ ಪೈಕಿ ಓರ್ವ ತಪ್ಪಿಸಿಕೊಂಡರೆ, ಮತ್ತೊರ್ವ ಸಾವನ್ನಪ್ಪಿದ್ದ. ಉಳಿದ ನಾಲ್ವರು ಏನಾದರು ಎಂಬುದರ ಕುರಿತು ಈವರೆಗೂ ಮಾಹಿತಿ ಸಿಕ್ಕಿಲ್ಲ.

ಇವೆಲ್ಲದರ ನಡುವೆ 1997ರ ಹೊತ್ತಿಗೆ ಈ ಸಂಘಟನೆ ಅಮೆರಿಕಾ ವಿರೋಧಿ ಒಸಾಮಾ ಬಿನ್ ಲಾಡನ್‌ ಜತೆಗೆ ಸಂಪರ್ಕ ಬೆಳೆಸಿಕೊಂಡಿತ್ತು. ಹಾಗಾಗಿ ಒಂದು ಕಡೆ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲಾಯಿತು. ಈ ನಿಷೇಧದಿಂದ ಹೊರ ಬರಲು ಸಂಘಟನೆ ತನ್ನ ಹೆಸರನ್ನು 'ಹರ್ಕತ್-ಉಲ್-ಮುಜಾಹಿದ್ದೀನ್' ಎಂದು ಬದಲಾಯಿಸಿಕೊಂಡಿತು. ಜತೆಗೆ ಅಷ್ಟೊತ್ತಿಗಾಗಲೇ ಸಂಘಟನೆ ಅಫ್ಘಾನಿಸ್ತಾನದ ಪ್ರಬಲ ಉಗ್ರಗಾಮಿ ಸಂಘಟನೆಗಳಾದ ಅಲ್‌ಖೈದಾ ಮತ್ತು ತಾಲಿಬಾನ್‌ ಜತೆ ಸಂಪರ್ಕ ಬೆಳೆಸಿತ್ತು. ಈ ಬಾರಿ ಹೊಸ ಬಲದೊಂದಿಗೆ ಸಂಘಟನೆ ಅಝರ್‌ ಬಿಡುಗಡೆಗೆ ಕೈ ಹಾಕಿತು.

ಆಗ ಹುಟ್ಟಿದ್ದೇ ಕಂದಹಾರ್‌ ವಿಮಾನ ಅಪಹರಣದ ಪ್ರಳಯಾಂತಕ ಐಡಿಯಾ. ಅಂದಿಗೆ ಅಝರ್‌ ಬಂಧಿತನಾಗಿ ಸರಿಯಾಗಿ ನಾಲ್ಕು ವರ್ಷ ಕಳೆದಿತ್ತು.

ಅವತ್ತು ಡಿಸೆಂಬರ್‌ 24...

'ಇಂಡಿಯನ್‌ ಏರ್‌ಲೈನ್ಸ್ 814' ವಿಮಾನ 1999ರ ಡಿಸೆಂಬರ್ 24 ರಂದು ಕಠ್ಮಂಡುವಿನಿಂದ ನವದೆಹಲಿಯತ್ತ ಹೊರಟಿತ್ತು. ಇದನ್ನು ಮಾರ್ಗಮಧ್ಯೆ ಅಪಹರಿಸಿದ್ದ 'ಎಚ್‌ಯುಎಂ' ಅಮೃತಸರಕ್ಕೆ, ಅಲ್ಲಿಂದ ಲಾಹೋರ್‌ಗೆ, ನಂತರ ದುಬೈಗೆ ಕೊಂಡೊಯ್ದು ಬಳಿಕ ತಾಲಿಬಾನ್‌ ಕಪಿಮುಷ್ಠಿಯಲ್ಲಿದ್ದ ಕಂದಹಾರ್‌ಗೆ ತಂದು ಇಳಿಸಿತ್ತು. 173 ಪ್ರಯಾಣಿಕರು, 15 ಸಿಬ್ಬಂದಿಗಳಲ್ಲಿ ಒಂದಷ್ಟು ಜನರನ್ನು ದುಬೈನಲ್ಲಿ ಇಳಿಸಿ ಸುಮಾರು 150 ಜನರನ್ನು ಒತ್ತೆಯಾಳುಗಳಾಗಿಸಿಕೊಂಡ ಉಗ್ರರು ಅಝರ್‌ ಬಿಡುಗಡೆಗಾಗಿ ಈ ಬಾರಿ ಪ್ರಬಲ ದಾಳವನ್ನು ಉರುಳಿಸಿದ್ದರು.

ಅಂದು ಭಾರತದ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದವರು ಸೋ ಕಾಲ್ಡ್‌ ಜೇಮ್ಸ್‌ ಬಾಂಡ್‌, ಭಾರತದ ಮುಖ್ಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌. ಏನೇನೋ ನೆಪಗಳನ್ನು ಹೇಳಿದ ದೋವಲ್‌ರಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಉಗ್ರರ ಜತೆ ಸಮಾಲೋಚನೆಗೆ ಭಾರತ ತಂಡವೊಂದನ್ನು ಕಳುಹಿಸಿಕೊಟ್ಟಿತು. ಇದರಲ್ಲಿ ಅಜಿತ್‌ ದೋವಲ್‌ ಕೂಡ ಇದ್ದರು.

ತಂಡ ಸತತ 7 ದಿನಗಳ ಮಾತುಕತೆ ನಡೆಸಿತು. ಕೊನೆಗೆ ಉಗ್ರರ ಮುಂದೆ ಮಂಡಿಯೂರಿದ ಅಂದಿನ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಅಝರ್‌ ಮತ್ತು ಆತನ ಸಹಚರರಾದ ಮುಷ್ತಾಕ್ ಅಹಮದ್ ಸರ್ಗರ್ ಹಾಗೂ ಅಹಮದ್ ಓಮರ್ ಸೈಯದ್ ಶೇಕ್‌ನನ್ನು ಬಿಡುಗಡೆಗೊಳಿಸಲು ಒಪ್ಪಿಕೊಂಡಿತು. ಸ್ವತಃ ಅಂದಿನ ವಿದೇಶಾಂಗ ಖಾತೆ ಸಚಿವ ಜಸ್ವಂತ್‌ ಸಿಂಗ್‌ ಅಝರ್‌ ಮತ್ತಿತರರನ್ನು ಕರೆದುಕೊಂಡು ಹೋಗಿ ಕಂದಹಾರ್‌ನಲ್ಲಿ ಬಿಟ್ಟು ಬಂದರು.

ಭಾರತ ಸೇನೆ ಹೆಡೆಮುರಿ ಕಟ್ಟಿದ್ದ ಮಸೂದ್ ಅಜಾರ್, ಮುಷ್ತಾಕ್ ಅಹಮದ್ ಹಾಗೂ ಓಮರ್ ಸಯೀದ್.
ಭಾರತ ಸೇನೆ ಹೆಡೆಮುರಿ ಕಟ್ಟಿದ್ದ ಮಸೂದ್ ಅಜಾರ್, ಮುಷ್ತಾಕ್ ಅಹಮದ್ ಹಾಗೂ ಓಮರ್ ಸಯೀದ್.
/ ಇಂಡಿಯಾ ಟಿವಿ.

ಈ ಬಿಡುಗಡೆಯ ನಂತರ 2000ನೇ ಇಸವಿಯಲ್ಲಿ ಮಸೂದ್‌ ಅಜರ್‌ ಹುಟ್ಟು ಹಾಕಿದ ಸಂಘಟನೆಯೇ ಜೈಷ್‌-ಎ-ಮೊಹಮ್ಮದ್‌. ಆತನ ಬಿಡುಗಡೆಗೆ ಸಹಾಯ ಮಾಡಿದ್ದ ಅಫ್ಘಾನಿಸ್ತಾನದ ತಾಲಿಬಾನ್‌ ಮತ್ತು ಅಲ್‌ಖೈದಾ ಸಂಘಟನೆಗಳು ಈ ಬಾರಿ ಈತನ ನೆರವಿಗೆ ನಿಂತಿದ್ದವು. ಇವರುಗಳ ಆರ್ಥಿಕ, ಸಂಘಟನೆಯ ಸಹಕಾರದಿಂದ ಈತ ಉಗ್ರರ ಪಡೆಯೊಂದನ್ನು ಕಟ್ಟಿ ನಿಲ್ಲಿಸಿದ ಎನ್ನುತ್ತವೆ ವಿಶ್ವಸಂಸ್ಥೆಯ ವರದಿಗಳು.

ಹೀಗೆ ಬಿಡುಗಡೆಗೊಂಡವ ಭಾರತದ ವಿರುದ್ಧ ಸೇಡು ತೀರಿಸುವ ತೀರ್ಮಾನಕ್ಕೆ ಬಂದ. ಮುಂದೆ ನಡೆದಿದೆಲ್ಲಾ ಇಂದಿಗೆ ಇತಿಹಾಸ. ಪಾಕಿಸ್ತಾನ ಮೂಲದ ಮೌಲಾನ ಮಸೂದ್ ಅಝರ್ ಎಂಬ ವ್ಯಕ್ತಿಯಿಂದ ಆರಂಭವಾದ ಈ ಸಂಘಟನೆ ಭಾರತದಲ್ಲಿ ಅನೇಕ ವಿಧ್ವಂಸಕಕಾರಿ ಘಟನೆಗಳನ್ನು ನಡೆಸುತ್ತಾ ಬಂತು.2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ಶಾಸನ ಸಭೆ ಕಾರ್ಯಾಲಯದ ಮೇಲೆ ದಾಳಿ ಮಾಡಿ 31 ಜನರನ್ನು ಕೊಂದ. ಇಡೀ ವಿಶ್ವವೇ ಬೆಚ್ಚಿ ಬಿದ್ದ ಭಾರತದ ಸಂಸತ್ ಭವನದ ಮೇಲಿನ ದಾಳಿಯಲ್ಲಿ 9 ಜನರು ಅಸುನೀಗಿದರು.

ಮಾತ್ರವಲ್ಲದೆ ಅಫ್ಘಾನಿಸ್ತಾನ ಸರಕಾರ ಮತ್ತು ಅಂತರಾಷ್ಟ್ರೀಯ ಪಡೆಗಳ ವಿರುದ್ಧ ದಾಳಿ ಮಾಡಲು ತಾಲಿಬಾನ್‌ಗೆ ಸಹಕಾರವನ್ನೂ ನೀಡುತ್ತಾ ಬಂದ. ಈ ಸಂದರ್ಭದಲ್ಲಿ ಭಾರತ ಮತ್ತು ಅಂತರಾಷ್ಟ್ರೀಯ ಒತ್ತಡ ಹೆಚ್ಚಾದಾಗ 2002ರಲ್ಲೊಮ್ಮೆ ಪಾಕಿಸ್ತಾನದ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಈ ಸಂಘಟನೆಯನ್ನು ನಿಷೇಧಿಸಿದ್ದರು. ಆಗ ಅವರು ಅಝರ್‌ನನ್ನು ಗೃಹಬಂಧನದಲ್ಲಿ ಇಟ್ಟಿದ್ದರು. ಆದರೆ ಆತ ಲಾಹೋರ್ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರ ಬಂದಿದ್ದ.

ಜೈಷ್‌-ಎ-ಮೊಹಮದ್ ಸಂಘಟನೆಯ ಒಂದು ಚಿತ್ರ. 
ಜೈಷ್‌-ಎ-ಮೊಹಮದ್ ಸಂಘಟನೆಯ ಒಂದು ಚಿತ್ರ. 

ಹೊರ ಬಂದವನೇ 2003ರಲ್ಲಿ ಎರಡೆರಡು ಬಾರಿ ಸ್ವತಃ ಮು‍ಷರಫ್‌ ಹತ್ಯೆಗೆ ಕೈ ಹಾಕಿದ್ದ. ಆದರೆ ಕೂದಲೆಳೆ ಅಂತರದಲ್ಲಿ ಮುಷರಫ್‌ ಪಾರಾಗಿದ್ದರು. ಈ ಸಂದರ್ಭದಲ್ಲಿ ಸಂಘಟನೆ ಮೇಲೆ ಸಮರ ಸಾರಿದ್ದ ಮುಷರಫ್‌ ಉಗ್ರ ಸಂಘಟನೆಗೆ ಸೇರಿದ ಆಸ್ತಿಗಳ ಜಪ್ತಿಗೆ ಮುಂದಾಗಿದ್ದರು. ಆಗ ಅಝರ್‌ ಪಾಕಿಸ್ತಾನದ ಬ್ಯಾಂಕ್‌, ರಿಯಲ್‌ ಎಸ್ಟೇಟ್‌, ಕೆಲವು ಉತ್ಪನ್ನಗಳ ಉತ್ಪಾದನೆ ಮೇಲೆ ಮಾಡಿದ್ದ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದ.

ನಾನಾ ವರಸೆ:

ಮುಂದೆ ಈತ ತನ್ನ ವರಸೆಗಳನ್ನು ಬದಲಿಸಿಕೊಂಡ. ಹೀಗೆಯೇ ಇದ್ದರೆ ಉಳಿಗಾಲವಿಲ್ಲ ಎಂಬುದು ಆತನಿಗೂ ಅರ್ಥವಾಗಿತ್ತು. ಪಾಕಿಸ್ತಾನದಲ್ಲಿ ಎರಡು ಅಂತರಾಷ್ಟ್ರೀಯ ಮಾನವೀಯ ನೆರವು ಸಂಸ್ಥೆಗಳನ್ನು ಹುಟ್ಟುಹಾಕಿದ: ಅಲ್‌-ಅಖ್ತರ್‌ ಟ್ರಸ್ಟ್‌ ಇಂಟರ್ನ್ಯಾಷನಲ್‌ ಮತ್ತು ಅಲ್ಖರ್‌ ಟ್ರಸ್ಟ್‌.

ಇವುಗಳ ಮೂಲಕ ಈತ ತನ್ನ ಸಕಲ ವ್ಯವಹಾರಗಳನ್ನು ನಡೆಸುತ್ತಾ ಬಂದಿದ್ದಾನೆ. ಇವುಗಳ ಮುಖವಾಡ ತೊಟ್ಟು ಸಂತ್ರಸ್ತರಿಗೆ ನೆರವು ನೀಡುವ ನೆಪದಲ್ಲಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಬೇಕಾದಲ್ಲಿಗೆ ಸಾಗಿಸುತ್ತಾನೆ ಎನ್ನುತ್ತದೆ ವಿಶ್ವಸಂಸ್ಥೆಯ ವರದಿ.

ಹೀಗೊಂದು ವ್ಯವಸ್ಥಿತ ಜಾಲ ನಿರ್ಮಿಸಿಕೊಂಡ ಚಾಣಾಕ್ಷ ಉಗ್ರ ಮೌಲಾನ ಮಸೂದ್‌ ಅಝರ್‌ 2014ರ ನಂತರ ಮತ್ತೆ ಚಟುವಟಿಕೆ ಆರಂಭಿಸಿದ್ದಾನೆ. ಕಳೆದೈದು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದ ಕಣಿವೆಯಲ್ಲಿ ಈತ ರಕ್ತದ ಕೋಡಿಯನ್ನೇ ಹರಿಸುತ್ತಿದ್ದಾನೆ. ಅದಕ್ಕೆ ಉದಾಹರಣೆಯಾಗಿ ಕಳೆದ 5 ವರ್ಷದಲ್ಲಿ ಕಣಿವೆ ರಾಜ್ಯದಲ್ಲಿ ಸುಮಾರು 102 ಪ್ರಾಣಬಲಿ ನಡೆದಿವೆ ಎನ್ನುತ್ತಿವೆ ಅಂಕಿ ಅಂಶಗಳು.

ಇವುಗಳಲ್ಲಿ ಕೆಲವು ನಿರಂತರ ಸಣ್ಣ ಪುಟ್ಟ ದಾಳಿಗಳಾದರೆ 2016ರಲ್ಲಿ ಪಠಾನ್‌ಕೋಟ್‌ ದಾಳಿಯ ಮೂಲಕ ತಾನು ಹಿಂದಿನಷ್ಟೇ ಪ್ರಬಲನಾಗಿದ್ದೇನೆ ಎಂಬ ಸಂದೇಶವನ್ನು ನೀಡಿದ್ದ. ಪಠಾನ್‌ಕೋಟ್‌ ದಾಳಿಯ ನಂತರ 2016ರಲ್ಲಿ ಆತನನ್ನು ಮತ್ತೊಮ್ಮೆ ಪಾಕಿಸ್ತಾನ ಬಂಧನಕ್ಕೆ ಒಳಪಡಿಸಿತ್ತು.

2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿಯ ದೃಶ್ಯ.
2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿಯ ದೃಶ್ಯ.
/ಇಂಡಿಯನ್‌ ಎಕ್ಸ್‌ಪ್ರೆಸ್‌

ಆದರೆ ಬಿಡುಗಡೆಯಾದವ ಅದೇ ವರ್ಷದ ಅಂತ್ಯದಲ್ಲಿ ಉರಿ ದಾಳಿ ಮೂಲಕ ಸೇಡು ತೀರಿಸಿಕೊಂಡಿದ್ದ. ಇವತ್ತಿಗೆ ಆತ ಎಲ್ಲಿದ್ದಾನೆ ಎಂದು ಯಾರಿಗೂ ಗೊತ್ತಿಲ್ಲ. ಜೈಲಿನಿಂದ ಬಿಡುಗಡೆಯಾದವ ಮತ್ತೆಂದೂ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ.

ಆದರೆ ಪಾಕಿಸ್ತಾನ ಈ ಸಂಘಟನೆಯನ್ನು ನಿಷೇಧ ಮಾಡಿದ್ದರೂ ಇಂದಿಗೂ ಪೇಶಾವರ ಮತ್ತು ಮುಝಾಫುರಾಬಾದ್‌ನಿಂದು ಅಝರ್‌ ಸಂಘಟನೆಗಳು ಕಾರ್ಯಚರಿಸುತ್ತಿವೆ. ಭಾರತದ ವಶದಲ್ಲಿರುವ ಕಾಶ್ಮೀರವನ್ನು ಪಾಕಿಸ್ತಾನದ ಜೊತೆಗೆ ಸೇರ್ಪಡೆಗೊಳಿಸಬೇಕು ಎಂಬ ಒನ್‌ಲೈನ್ ಅಜೆಂಡಾದೊಂದಿಗೆ ಹೋರಾಡುತ್ತಿರುವ ಈತನ ಸಂಘಟನೆಯನ್ನು ವಿಶ್ವದ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆಗಳ ಪಟ್ಟಿಗೆ ವಿಶ್ವ ಸಂಸ್ಥೆ ಸೇರಿಸಿದೆ.

ಆದರೆ ಆತನ ಜಾಲ ಒಂದಿನಿತೂ ಕಡಿಮೆಯಾಗಿಲ್ಲ. ಪಾಕ್‌ ವಶದಲ್ಲಿ ಕಾಶ್ಮೀರದ ಭಾಗ ಅಜಾದ್‌ ಕಾಶ್ಮೀರ, ಪಾಕಿಸ್ತಾನ, ದಕ್ಷಿಣ ಕಾಶ್ಮೀರ, ಇಲ್ಲಿನ ದೊಡ ಜಿಲ್ಲೆಗಳಲ್ಲಿ ಜೈಷ್‌ ಎ ಮೊಹಮ್ಮದ್‌ ಅಪಾರ ಬೆಂಬಲಿಗರನ್ನು ಹೊಂದಿದೆ. ಪರಿಣಾಮ ಇವತ್ತು ಉಗ್ರ ಸಂಘಟನೆಯೊಂದು ಭಾರತೀಯ ಸೇನೆಗೆ ಸವಾಲು ಹಾಕುವ ಮಟ್ಟಕ್ಕೆ ಬೆಳೆದು ನಿಂತಿದೆ.

ಪರಿಣಾಮ ನಡೆದಿದ್ದೇ ಆವಂತಿಪೊರಾದಲ್ಲಿ ನಿನ್ನೆ ನಡೆದ ದಾಳಿ. ಅಂದ ಹಾಗೆ ಅಂದು ಅಝರ್‌ ಮಸೂದ್‌ ಬಿಡುಗಡೆ ಸಂದರ್ಭದಲ್ಲಿ ಐಬಿ ಮುಖ್ಯಸ್ಥರಾಗಿದ್ದ ಅಜಯ್‌ ದೋವಲ್‌, ಈ ಅಪಹರಣಕ್ಕೆ ಐಎಸ್‌ಐ ಬೆಂಬಲವಿಲ್ಲದಿದ್ದಲ್ಲಿ ಕಾರ್ಯಾಚರಣೆ ನಡೆಸುತ್ತೇನೆ ಎಂದು ಅಬ್ಬರಿಸಿದ್ದರು. ಇಂದು ದೇಶದ ಭದ್ರತಾ ಸಲಹೆಗಾರರಾಗಿದ್ದಾರೆ. ಅವರ ಕೈ ಕೆಳಗೆ ಇದೀಗ ಮತ್ತೊಂದು ಭಯಾನಕ ಬಾಂಬ್‌ ಸ್ಫೋಟಿಸಿದ್ದಾನೆ ಮಸೂದ್‌ ಅಝರ್‌. ಈ ಬಾರಿ ಅವರು ಯಾವ ವಿವರಣೆ ನೀಡಲಿದ್ದಾರೆ ಕಾದು ನೋಡಬೇಕಿದೆ.