samachara
www.samachara.com
ದಶಕದ ಬಳಿಕ ಒಂದೇ ವೇದಿಕೆಯಲ್ಲಿ ಮೋದಿ-ನಿತೀಶ್; ಐತಿಹಾಸಿಕ ರ್ಯಾಲಿಗೆ ಸಜ್ಜಾಗುತ್ತಿದೆ ಬಿಹಾರ
COVER STORY

ದಶಕದ ಬಳಿಕ ಒಂದೇ ವೇದಿಕೆಯಲ್ಲಿ ಮೋದಿ-ನಿತೀಶ್; ಐತಿಹಾಸಿಕ ರ್ಯಾಲಿಗೆ ಸಜ್ಜಾಗುತ್ತಿದೆ ಬಿಹಾರ

ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಲು ಬಿಜೆಪಿ ಹಾಗೂ ಸಂಯುಕ್ತ ಜನತಾದಳ ಬಯಸಿವೆ. ಇದೇ ಕಾರಣಕ್ಕೆ ಮೋದಿ ಹಾಗೂ ನಿತೀಶ್ ವೈಮನಸ್ಯ ಮರೆತು 10 ವರ್ಷಗಳ ನಂತರ ಮತ್ತೆ ಒಟ್ಟಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

ಕಳೆದ ಒಂದು ದಶಕಗಳಿಗಿಂತ ಹೆಚ್ಚು ಕಾಲ ವೈಮನಸ್ಯದಿಂದಾಗಿ ದೂರ ಉಳಿದಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಗಾಂಧಿ ಮೈಧಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ಹೇಳಿದೆ.

40 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಲು ಬಿಜೆಪಿ ಹಾಗೂ ಸಂಯುಕ್ತ ಜನತಾದಳ ಬಯಸಿವೆ. ಇದೇ ಕಾರಣಕ್ಕೆ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ವೈಮನಸ್ಯ ಮರೆತು 10 ವರ್ಷಗಳ ನಂತರ ಮತ್ತೆ ಒಟ್ಟಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎನ್ನುತ್ತವೆ ಬಿಜೆಪಿ ಪಕ್ಷದ ಮೂಲಗಳು.

ಹಾಗೆ ನೋಡಿದರೆ ಈ ಇಬ್ಬರೂ ನಾಯಕರು ಒಟ್ಟಾಗುವಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಜನತಾದಳ ಪಕ್ಷ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ನೇರ ಕಾರಣ.

ಬಿಹಾರದಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ಒಟ್ಟಾಗಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿವೆ. ಫೆ.3 ರಂದು ರಾಹುಲ್ ಗಾಂಧಿ ಪಾಲ್ಗೊಂಡ ಪಾಟ್ನಾ ರ್ಯಾಲಿ ಹಾಗೂ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. 3 ದಶಕಗಳ ನಂತರ ಬಿಹಾರದಲ್ಲಿ ಕಾಂಗ್ರೆಸ್ ನಡೆಸಿದ ಮೊದಲ ರ್ಯಾಲಿ ಇದಾಗಿತ್ತು ಎಂಬುದು ಉಲ್ಲೇಖಾರ್ಹ.

ಇದಲ್ಲದೆ ಆರ್‌ಜೆಡಿ ಪಕ್ಷದ ಯುವ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಬಿಹಾರದಲ್ಲಿ ಈವರೆಗೆ ಜನರ ನಡುವೆ 400 ಸಭೆ ನಡೆಸಿದ್ದು ಪ್ರಬಲರಾಗುವ ಸೂಚನೆ ನೀಡಿದ್ದಾರೆ. ಇವೆಲ್ಲ ಒಟ್ಟಾಗಿ ಎನ್‌ಡಿಎ ಮೈತ್ರಿ ಕೂಟದಲ್ಲಿ ತಣ್ಣನೆಯ ನಡುಕ ಸೃಷ್ಠಿಯಾಗಿದೆ. ಹೀಗಾಗಿಯೇ ರಾಹುಲ್ ರೋಡ್ ಶೋಗೆ ಪ್ರತಿಕ್ರಿಯೆಯಾಗಿ ಮಾರ್ಚ್ 3ರಂದು ಬಿಜೆಪಿ ಹಾಗೂ ಮೈತ್ರಿ ಪಕ್ಷಗಳು ಅದೇ ಪಾಟ್ನಾದ ಗಾಂಧಿ ಮೈದಾನದಲ್ಲಿ ಸಮಾವೇಶ ಆಯೋಜಿಸಿವೆ.

ಮೋದಿ ಎಂದರೆ ಮಾರು ದೂರ ಓಡುತ್ತಿದ್ದ ನಿತೀಶ್

ನಿತೀಶ್ ಕುಮಾರ್ ಬಿಹಾರದ ಯಶಸ್ವಿ ಮುಖ್ಯಮಂತ್ರಿ ಹಾಗೂ ಸಂಯುಕ್ತ ಜನತಾದಳ ಪಕ್ಷದ ರಾಷ್ಟ್ರಾಧ್ಯಕ್ಷ. 1999ರಿಂದಲೂ ಕೇಂದ್ರ ಎನ್‌ಡಿಎ ಸರಕಾರಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ನಿತೀಶ್ ಕುಮಾರ್, 2005ರಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಮೊದಲ ಬಾರಿಗೆ ಬಿಹಾರದ ಮುಖ್ಯಮಂತ್ರಿ ಹುದ್ದೆ ಏರಿದ್ದರು. ಶಾಂತ ಸ್ವಭಾವದ ವ್ಯಕ್ತಿ ಎಂದೇ ಹೆಸರುಗಳಿಸಿದ್ದ ನಿತೀಶ್, ಬಿಹಾರದ ಅಂಧಾ ಕಾನೂನನ್ನು ಹೆಡೆಮುರಿಗೆ ಕಟ್ಟಿ ಉತ್ತಮ ಆಡಳಿತ ನೀಡುವ ಸಾಹಸ ಮಾಡಿದ್ದರು. ಇದು ದೇಶದಾದ್ಯಂತ ಅವರ ಜನಪ್ರಿಯತೆಗೆ ಕಾರಣವಾಗಿತ್ತು.

ಎನ್‌ಡಿಎ ಮೈತ್ರಿಕೂಟದಲ್ಲಿ ನಿತೀಶ್ ಕುಮಾರ್ ಅವರಿಗೆ ಹೆಚ್ಚು ಪ್ರಾಮುಖ್ಯತೆ ಇತ್ತು. ಆದರೆ 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡವನ್ನು ನಿತೀಶ್ ಕುಮಾರ್ ಬಲವಾಗಿ ಖಂಡಿಸಿದ್ದರು. ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಡೆಯನ್ನು ನೇರವಾಗಿ ವಿರೋಧಿಸಿದ್ದರು. ಅಂದಿನಿಂದ ಎನ್‌ಡಿಎ ಕೂಟದಲ್ಲಿ ಮೋದಿ ಹಾಗೂ ನಿತೀಶ್ ಕುಮಾರ್ ಉತ್ತರ ಧೃವ- ದಕ್ಷಿಣ ಧೃವದಂತಾಗಿಬಿಟ್ಟಿದ್ದರು. ಮೋದಿ ಹೆಸರು ಹೇಳಿದರೆ ಸಾಕು ನಿತೀಶ್ ಮಾರು ದೂರು ಹೋಗುತ್ತಿದ್ದರು.

ಮೋದಿ ಜೊತೆಗೆ ಗುರುತಿಸಿಕೊಂಡರೆ ಅಲ್ಪಸಂಖ್ಯಾತ ಸಮುದಾಯದ ಓಟು ಕೈತಪ್ಪಿ ಹೋಗುತ್ತದೆ ಎಂಬ ಕಾರಣಕ್ಕಾಗಿಯೇ ನಿತೀಶ್ ಯಾವುದೇ ರಾಜಕೀಯ ಸಮಾವೇಶದಲ್ಲಿ ಮೋದಿ ಜೊತೆಗೆ ವೇದಿಕೆ ಹಂಚಿಕೊಂಡಿರಲಿಲ್ಲ.

ಮೋದಿ ಹಾಗೂ ನಿತೀಶ್ ಕೊನೆಯ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು 2010 ರಲ್ಲಿ ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ಲೋಕಸಭಾ ಚುನಾವಣಾ ಸಮಾವೇಶದಲ್ಲಿ. ಒಲ್ಲದ ಮನಸ್ಸಿನಿಂದಲೇ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ನಿತೀಶ್. ಸಮಾವೇಶದ ಕೊನೆಯ ಹಂತದಲ್ಲಿ ಅವರ ಬಳಿ ಬಂದಿದ್ದ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಒತ್ತಾಯಪೂರ್ವಕಾಗಿ ಅವರ ಕೈಯನ್ನು ಹಿಡಿದು ಮೇಲೆತ್ತಿದ್ದರು. ಆದರೆ ಇದು ಇಷ್ಟವಾಗದ ನಿತೀಶ್ ತಮ್ಮ ಕೈಯನ್ನು ಬಿಡುವಂತೆ ಮೋದಿಗೆ ತಿಳಿಸಿ ಹಾಗೆ ಸುಮ್ಮನೆ ನಿಂತಿದ್ದರು. ನಿತೀಶ್ ಅವರ ಈ ವರ್ತನೆ ಅಂದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಇದಾದ ಕೆಲವೇ ದಿನಗಳಲ್ಲಿ ಪಾಟ್ನಾದಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಭೆಗೆ ನಿತೀಶ್ ಕುಮಾರ್ ಆಗಮಿಸಿದ್ದರು. ಆದರೆ ಪಾಟ್ನಾ ರಸ್ತೆಗಳ ಇಕ್ಕೆಲಗಳಲ್ಲೆಲ್ಲ ಲೂಧಿಯಾನ ಸಮಾವೇಶದಲ್ಲಿ ಮೋದಿ-ನಿತೀಶ್ ಕೈಹಿಡಿದ ಪೋಟೊಗಳೇ ರಾರಾಜಿಸಿದ್ದವು. ಆದರೆ ಇದು ನಿತೀಶ್‌ಗೆ ಇಷ್ಟವಾಗಿರಲಿಲ್ಲ. ಅಲ್ಲದೆ ಅಂದು ಸಂಜೆ ಮೋದಿ ಜೊತೆಗೆ ಏರ್ಪಡಿಸಲಾಗಿದ್ದ ಔತಣ ಕೂಟವನ್ನೂ ನಿತೀಶ್ ರದ್ದುಗೊಳಿಸಿ ಹೊರಟು ಹೋಗಿದ್ದರು.

ಆದರೆ ಇಷ್ಟಕ್ಕೆ ಸುಮ್ಮನಾಗಲಿಲ್ಲ ನಿತೀಶ್ ಕುಮಾರ್. 2010 ರಲ್ಲಿ ಬಿಹಾರದಲ್ಲಿ ಅತಿವೃಷ್ಟಿ ಉಂಟಾಗಿ ರಾಜ್ಯಾದ್ಯಂತ ಅಪಾರ ಪ್ರಮಾಣದ ಪ್ರಾಣಹಾನಿ ಸಂಭವಿಸಿತ್ತು. ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನರೇಂದ್ರ ಮೋದಿ ನೀಡಿದ್ದ 5 ಕೋಟಿ ಪರಿಹಾರದ ಚೆಕ್‌ ಅನ್ನು ವಾಪಾಸ್ ಕಳುಹಿಸುವ ಮೂಲಕ ಮತ್ತೊಮ್ಮೆ ಮೋದಿಗೆ ಅವಮಾನಿಸಿದ್ದರು ನಿತೀಶ್.

ನಿತೀಶ್ ಅವರ ಈ ನಡೆಗಳನ್ನು ಆಗ ಎನ್‌ಡಿಎ ಕೂಟದಲ್ಲಿ ಪ್ರಶ್ನಿಸುವವರೆ ಇಲ್ಲದಾಗಿದ್ದರು. ಎಲ್‌. ಕೆ. ಅಡ್ವಾಣಿ ಸೇರಿದಂತೆ ಯಾವೊಬ್ಬ ನಾಯಕನೂ ಅವರನ್ನು ಪ್ರಶ್ನಿಸುವ ಧೈರ್ಯ ಮಾಡಿರಲಿಲ್ಲ.

ಮೋದಿಯಿಂದಾಗಿ ಎನ್‌ಡಿಎ ಕೂಟಕ್ಕೆ ಗುಡ್‌ಬೈ

ನಿತೀಶ್ ಹಾಗೂ ಮೋದಿ ನಡುವೆ ಮಿನಿಸು ಬಹಿರಂಗಗೊಂಡಾಗ ಮಾಧ್ಯಮಗಳು ತೋರಿಸಿದ ಕ್ರೀಯಾಶೀಲತೆ ಹೀಗಿತ್ತು. 
ನಿತೀಶ್ ಹಾಗೂ ಮೋದಿ ನಡುವೆ ಮಿನಿಸು ಬಹಿರಂಗಗೊಂಡಾಗ ಮಾಧ್ಯಮಗಳು ತೋರಿಸಿದ ಕ್ರೀಯಾಶೀಲತೆ ಹೀಗಿತ್ತು. 
/news nation

ಎನ್‌ಡಿಎ ಕೂಟದಲ್ಲೇ ಇದ್ದರು ಮೋದಿ ಹಾಗೂ ನಿತೀಶ್ ನಡುವೆ ಪ್ರತಿನಿತ್ಯ ವೈಮನಸ್ಸು ಬೆಳೆಯುತ್ತಲೇ ಇತ್ತು. ಆದರೆ ಇದು ಅಂತಿಮ ಹಂತ ತಲುಪಿದ್ದು ಮಾತ್ರ 2013ರಲ್ಲಿ. ಈ ವರ್ಷದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಎನ್‌ಡಿಎ ಕೂಟದ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿತು. ಬಿಜೆಪಿಯ ಈ ತೀರ್ಮಾನವನ್ನು ಬಲವಾಗಿ ಖಂಡಿಸಿದವರಲ್ಲಿ ನಿತೀಶ್ ಪ್ರಮುಖರು.

ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಿಗೆ ಎನ್‌ಡಿಎ ಮೈತ್ರಿಕೂಟದಿಂದ ಹೊರ ನಡೆದ ನಿತೀಶ್ 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಫರ್ದಿಸಿದ್ದರು. ಬಹುಮತ ಸಿಗದ ಕಾರಣ ರಾಷ್ಟ್ರೀಯ ಜನತಾ ದಳ ಪಕ್ಷದ ಲಾಲೂ ಪ್ರಸಾದ್ ಯಾದವ್ ಅವರ ಜೊತೆ ಸೇರಿ ಬಿಹಾರದಲ್ಲಿ ಸರಕಾರ ರಚಿಸಿ ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಲಾಲೂ ಪ್ರಸಾದ್ ಅವರ ಮಗ ತೇಜಸ್ವಿ ಪ್ರಸಾದ್ ಯಾದವ್ ಉಪ ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ್ದರು.

ಆದರೆ ಲಾಲೂ ಪ್ರಸಾದ್ ಯಾದವ್ ಜೊತೆಗೆ ಮೈತ್ರಿ ಮಾಡಿಕೊಂಡು ಸರಕಾರ ನಡೆಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಪರಿಣಾಮ ಸಂಯುಕ್ತ ಜನತಾದಳ ಹಾಗೂ ರಾಷ್ಟ್ರೀಯ ಜನತಾದಳ ಮೈತ್ರಿ ಸರಕಾರ 2017ರಲ್ಲಿ ಮುರಿದು ಬಿತ್ತು. ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ಗಂಟೆಗಳಲ್ಲಿ ಮತ್ತೆ ಬಿಜೆಪಿಯ ಜೊತೆಗೆ ಕೈಜೋಡಿಸಿ ಮುಖ್ಯಮಂತ್ರಿ ಹುದ್ದೆಗೆ ಏರಿದರು. ಇವೆಲ್ಲ ಇಂದು ಹಳೆಯ ಕಥೆಯಾಗಿದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ದವಾಗಿರುವ ನಿತೀಶ್ ಕುಮಾರ್ 40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ತಲಾ 17 ಸ್ಥಾನಗಳನ್ನು ಬಿಜೆಪಿ ಜೊತೆಗೆ ಹಂಚಿಕೊಂಡಿದ್ದಾರೆ. ಉಳಿದ 6 ಸ್ಥಾನಗಳನ್ನು ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿಗೆ ನೀಡಲು ನಿರ್ಧರಿಸಲಾಗಿದೆ.

ಒಟ್ಟಿನಲ್ಲಿ 10 ವರ್ಷಗಳ ನಂತರ ಕೊನೆಗೂ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳಲು ನಿತೀಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಇಬ್ಬರೂ ಒಟ್ಟಾಗಿ ಮಾರ್ಚ್ 3 ರಂದು ಗಾಂಧಿ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಕಾಂಗ್ರೆಸ್-ಆರ್‌ಜೆಡಿ ಮೈತ್ರಿಯ ವಿರುದ್ಧ ರಣಕಹಳೆ ಊದಲು ಅಣಿಯಾಗಿದ್ದಾರೆ. ಮೋದಿ ಮತ್ತು ನಿತೀಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನೇ ತನ್ನ ಪಕ್ಷದ ಪ್ರಚಾರದ ಸರಕಾಗಿ ಬಳಸಿಕೊಳ್ಳುತ್ತಿದೆ ಬಿಜೆಪಿ.

ಆದರೆ ದಶಕಗಳ ಕಾಲ ಒಂದೇ ರಾಗ ಹಾಡುತ್ತಿದ್ದ ಮೋದಿಯನ್ನು ಕಂಡರೆ ಕೆಂಡಕಾರುತ್ತಿದ್ದ ನಿತೀಶ್ ಅವರ ಇಂದಿನ ನಡೆ ಮಾತ್ರ ರಾಜಕೀಯದಲ್ಲಿ ಯಾರೂ ಶಾಶ್ವತ ಶತೃಗಳು ಇಲ್ಲ, ಮಿತ್ರರೂ ಇಲ್ಲ- ಎಂಬ ಜನಪ್ರಿಯ ರಾಜಕೀಯ ಮಾತಿಗೆ ಉದಾಹರಣೆಯಂತಿದೆ.