samachara
www.samachara.com
ಕಾಶ್ಮೀರ ಸಂಘರ್ಷದ ಮೂಲ & ರಕ್ತಪಾತಕ್ಕೆ ಕೊನೆಹಾಡಲು ಇರುವ ಪರಿಹಾರ ಏನು ಗೊತ್ತಾ?
COVER STORY

ಕಾಶ್ಮೀರ ಸಂಘರ್ಷದ ಮೂಲ & ರಕ್ತಪಾತಕ್ಕೆ ಕೊನೆಹಾಡಲು ಇರುವ ಪರಿಹಾರ ಏನು ಗೊತ್ತಾ?

ಭಾರತ ತನ್ನ ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಎಂದಿಗಿಂತ ಹೆಚ್ಚು ನೆನಪಸಿಕೊಳ್ಳಬೇಕಾದ ತುರ್ತಿದು. ಪ್ರೀತಿಯಿಂದ, ಅಹಿಂಸೆಯಿಂದ ಬ್ರಿಟೀಷರನ್ನೇ ಒದ್ದೋಡಿಸಿದವರಿಗೆ ಕಾಶ್ಮೀರಿಗರ ಮನಸ್ಸು ಗೆಲ್ಲುವುದು ದೊಡ್ಡದೇ?

‘ಜಮ್ಮು ಮತ್ತು ಕಾಶ್ಮೀರ ಇನ್ನು ಹೆಚ್ಚು ಸಮಯ ಭಾರತದ ಜತೆ ಉಳಿಯುವುದಿಲ್ಲ. ಭೌಗೋಳಿಕವಾಗಿಯಷ್ಟೇ ಆ ಭೂಮಿ ನಮ್ಮ ಜತೆಗಿದೆ. ಆದರೆ ಅಲ್ಲಿರುವ ಹೆಚ್ಚಿನವರಿಗೆ ಭಾರತದ ಜತೆಗಿರಲು ಇಷ್ಟವಿಲ್ಲ. ಒಂದಷ್ಟು ಜನರಿಗೆ ಭಾರತದ ಜತೆಗಿರಬೇಕು ಎಂಬ ಮನಸ್ಸಿದೆ. ಇನ್ನೊಂದಷ್ಟು ಜನರಿಗೆ ಪಾಕಿಸ್ತಾನದ ಜತೆ ಹೋಗುವ ತವಕ. ಆದರೆ ಹೆಚ್ಚಿನ ಜನರಿಗೆ ಬೇಕಾಗಿರುವುದು ಸ್ವತಂತ್ರ ರಾಷ್ಟ್ರ.’

ಹೀಗಂಥ ಸುದೀರ್ಘ ಜಮ್ಮು ಮತ್ತು ಕಾಶ್ಮೀರ ಪ್ರವಾಸ ಮುಗಿಸಿ ಬಂದ ದಕ್ಷಿಣ ಕನ್ನಡದ ಕಾಲೇಜೊಂದರ ಪ್ರಾಂಶುಪಾಲರೊಬ್ಬರು 2014ರಲ್ಲಿ ಹೇಳಿದ್ದರು. ಆಗಷ್ಟೇ ಸ್ಕಾಟ್‌ಲ್ಯಾಂಡ್ ಜನಮತಗಣನೆ ಮುಗಿದಿತ್ತು.

ಕಾಶ್ಮೀರದ ಮೂಲ ಸಮಸ್ಯೆಯೂ ಇದೇ ‘ಜನಮತ ಗಣನೆ’ಯಲ್ಲಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಇವತ್ತಿಗೆ ಪರಿಸ್ಥಿತಿಗಳು ಬದಲಾಗಿರಬಹುದು. ಆದರೆ ಆರಂಭದಲ್ಲಿ ಜನಮತ ಗಣನೆಯ ಭರವಸೆ ಬಿತ್ತಿ ಇದೇ ಕಣಿವೆ ರಾಜ್ಯವನ್ನು ಭಾರತದೊಳಕ್ಕೆ ಎಳೆದುಕೊಳ್ಳಲಾಗಿತ್ತು ಎಂಬುದು ಇತಿಹಾಸದಲ್ಲಿ ದಾಖಲಾಗಿರುವ ವಾಸ್ತವ.

ಇದೆಲ್ಲ ಆಗಿದ್ದು ಹೀಗೆ:

ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡ ಭಾರತದ ಭೂಪಟ ಇದ್ದಿದ್ದು ಹೀಗೆ. ಹಳದಿ ಬಣ್ಣದ ಗಡಿ ರೇಖೆಗಳು ನಮ್ಮಲ್ಲಿದ್ದ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳಾಗಿದ್ದವು. ಅಂದಹಾಗೆ ಇದು 1909ರ ಗೆಜೆಟಿಯರ್‌ನಲ್ಲಿ ಪ್ರಕಟಗೊಂಡ ಭೂಪಟ. 
ಸ್ವಾತಂತ್ರ್ಯ ಪೂರ್ವದಲ್ಲಿ ಅಖಂಡ ಭಾರತದ ಭೂಪಟ ಇದ್ದಿದ್ದು ಹೀಗೆ. ಹಳದಿ ಬಣ್ಣದ ಗಡಿ ರೇಖೆಗಳು ನಮ್ಮಲ್ಲಿದ್ದ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟ ಪ್ರದೇಶಗಳಾಗಿದ್ದವು. ಅಂದಹಾಗೆ ಇದು 1909ರ ಗೆಜೆಟಿಯರ್‌ನಲ್ಲಿ ಪ್ರಕಟಗೊಂಡ ಭೂಪಟ. 

1947ರಲ್ಲಿ ಸ್ವಾತಂತ್ರ್ಯ ಸಿಗುವ ಸಂದರ್ಭದಲ್ಲಿ ದೇಶದಲ್ಲಿ ಒಟ್ಟು 650 ಪ್ರಾಂತ್ಯಗಳಿದ್ದವು. ಇವನ್ನು ಬೇರೆ ಬೇರೆ ರಾಜರುಗಳು ಆಳುತ್ತಿದ್ದರು. ಈ ರಾಜ್ಯಗಳು ಭಾರತ ಮತ್ತು ಪಾಕಿಸ್ತಾನಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿಯಮವಾಗಿತ್ತು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಇಕ್ಕಟ್ಟಿನ ಪರಿಸ್ಥಿತಿ ಸೃಷ್ಟಿಯಾಯಿತು.

ಇಲ್ಲಿಯ ರಾಜನಾಗಿದ್ದವನು ಹರಿಸಿಂಗ್‌; ಆತ ಹಿಂದೂವಾಗಿದ್ದು, ಭಾರತದ ಜತೆ ಸೇರುವ ಒಲವು ಹೊಂದಿದ್ದ. ಆದರೆ ಆ ರಾಜ್ಯದ ಬಹುಪಾಲು ಜನರು ಮುಸ್ಲಿಮರು. ಅವರಿಗೆ ಪಾಕಿಸ್ತಾನದ ಜತೆಗೆ ಹೋಗುವ ಮನಸ್ಸಿತ್ತು. ಹೀಗಾಗಿ ಹರಿಸಿಂಗ್‌ ಸುಮ್ಮನೆ ಇದ್ದು ಸ್ವತಂತ್ರ ದೇಶವಾಗುವ ದೂರಾಲೋಚನೆಯಲ್ಲಿದ್ದ. ಆದರೆ ಇದಕ್ಕೆ ಕೆಲವೇ ದಿನಗಳಲ್ಲಿ ತಣ್ಣೀರೆರೆಚಿತು ಪಾಕಿಸ್ತಾನ.

1947ರ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಬುಡಕಟ್ಟು ಮುಸ್ಲಿಮರನ್ನು ಕಾಶ್ಮೀರದ ವಿರುದ್ಧ ಎತ್ತಿಕಟ್ಟಿತು. ದಾರಿ ಕಾಣದಾದ ಹರಿಸಿಂಗ್‌ ಭಾರತಕ್ಕೆ ಓಡಿ ಬಂದು ಸೈನ್ಯದ ನೆರವು ಕೇಳಿದ. ಜತೆಗೆ ಕಾಶ್ಮೀರ ಪ್ರವೇಶಕ್ಕೆ ಭಾರತಕ್ಕೆ ಅವಕಾಶ ನೀಡಿ ಅಕ್ಟೋಬರ್‌ 26ರಂದು ಒಪ್ಪಂದಕ್ಕೆ ಸಹಿ ಹಾಕಿದ.

ಹರಿಸಿಂಗ್‌ ಕೋರಿಕೆ ಮೇರೆಗೆ ಹೀಗೆ ಅಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಮೊದಲ ಯುದ್ಧ ನಡೆದು ಹೋಯಿತು. ಯುದ್ಧದ ನಡುವೆಯೇ ಭಾರತ ಈ ವಾದವನ್ನು ವಿಶ್ವಸಂಸ್ಥೆಯ ಬಾಗಿಲಿಗೆ ಜನವರಿ 1, 1948ರಂದು ಕೊಂಡೊಯ್ಯಿತು.

ಆಗಸ್ಟ್‌ 13, 1948ರ ನಿರ್ಣಯದಲ್ಲಿ ವಿಶ್ವಸಂಸ್ಥೆ ಕಾಶ್ಮೀರದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಿತು. ಒಮ್ಮೆ ಕಾಶ್ಮೀರದಿಂದ ಪಾಕಿಸ್ತಾನ ಸೇನೆಯನ್ನು ಹಿಂತೆಗೆದುಕೊಳ್ಳುತ್ತಿದ್ದಂತೆ ಭಾರತವೂ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು. ನಂತರ ‘ಮುಕ್ತ ಮತ್ತು ನ್ಯಾಯಸಮ್ಮತ ಜನಮತಗಣನೆ’ ಇಲ್ಲಿ ನಡೆಯಬೇಕು ಎಂಬ ಷರತ್ತನ್ನು ಮುಂದಿಡಲಾಯಿತು. ಈ ಮೂಲಕ ತಮ್ಮ ಭವಿಷ್ಯವನ್ನು ಜಮ್ಮು ಮತ್ತು ಕಾಶ್ಮೀರಿಗಳೇ ನಿರ್ಧರಿಸಲಿ ಎಂಬ ನಿರ್ಧಾರಕ್ಕೆ ಬರಲಾಯಿತು.

ಅವತ್ತಿಗೆ ಜಮ್ಮು ಮತ್ತು ಕಾಶ್ಮೀರದ ಜನಪ್ರಿಯ ನಾಯಕರಾಗಿದ್ದ ಶೇಖ್‌ ಅಬ್ದುಲ್ಲಾ (ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ತಂದೆ, ಓಮರ್‌ ಅಬ್ದುಲ್ಲಾ ಅಜ್ಜ) ಭಾರತದ ಪರವಾಗಿದ್ದರಿಂದ ಸುಲಭವಾಗಿ ಜನಮತಗಣನೆ ಗೆಲ್ಲಬಹುದು ಎಂಬ ನಿರೀಕ್ಷೆ ಭಾರತಕ್ಕಿತ್ತು. ಹೀಗಾಗಿ ಅಕ್ಟೋಬರ್‌ 30ರಂದು ತಾತ್ಕಾಲಿಕ ಸರಕಾರವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ರಚಿಸಲಾಯಿತು. ಶೇಖ್‌ ಅಬ್ದುಲ್ಲಾರನ್ನು ಈ ಸರಕಾರದ ಪ್ರಧಾನಿಯಾಗಿ ಆಯ್ಕೆ ಮಾಡಲಾಯಿತು.

ಕಾಶ್ಮೀರ ಸಂಘರ್ಷ ಆರಂಭ:

ಇದಾದ ನಂತರ ಆರಂಭವಾಗಿದ್ದೇ ನಿಜವಾದ ಕಾಶ್ಮೀರ ಸಂಘರ್ಷ. ಪಾಕಿಸ್ತಾನ ವಿಶ್ವಸಂಸ್ಥೆಯ ಅಭಿಪ್ರಾಯವನ್ನು ತಳ್ಳಿ ಹಾಕಿ ಸಂಘರ್ಷ ಮುಂದುವರಿಸಿತು. ಪರಿಣಾಮ ಹಲವು ಯುದ್ಧಗಳು, ಘರ್ಷಣೆಗಳು ಉಭಯ ದೇಶಗಳ ನಡುವೆ ನಡೆದವು. ಅತ್ತ ಭಾರತವೂ ವಿಶ್ವಸಂಸ್ಥೆಗೆ ನೀಡಿದ್ದ ಮಾತನ್ನು ಮರೆತು ಜನಾಭಿಪ್ರಾಯ ಸಂಗ್ರಹಕ್ಕೆ ಕೈಹಾಕಲೇ ಇಲ್ಲ.

ಕೊನೆಗೊಮ್ಮೆ 1957ರಲ್ಲಿ ಸಂವಿಧಾನದ 370ನೇ ವಿಧಿಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭೂಪಟದೊಳಕ್ಕೆ ಅಧಿಕೃತವಾಗಿ ಎಳೆದುಕೊಳ್ಳಲಾಯಿತು. ಆದರೆ ಅಲ್ಲಿನ ಜನರ ಮನಸ್ಸನ್ನು ಭಾರತದೊಳಕ್ಕೆ ಎಳೆದುಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ ಮುಂದೆ ನಡೆದಿದ್ದೆಲ್ಲಾ ಇಂದಿಗೆ ಇತಿಹಾಸ.

ಭಾರತ ಮತ್ತು ಪಾಕಿಸ್ತಾನಗಳು ಜಮ್ಮು ಮತ್ತು ಕಾಶ್ಮೀರದ ಹೆಸರಿನಲ್ಲಿ ಹಲವು ಯುದ್ಧಗಳನ್ನು ನಡೆಸಿದವು. ಜತೆ ಜತೆಗೆ ಇಲ್ಲಿನ ಯುವಕರು ಬಂಡುಕೋರ ಸಂಘಟನೆ ಸೇರುವ, ಭಾರತದಿಂದ ಮಾನಸಿಕವಾಗಿ ದೂರವಾಗುವ ಬೆಳವಣಿಗೆಗಳು ನಡೆದವು.

ಕಾಶ್ಮೀರದ ನಿಜವಾದ ಸಮಸ್ಯೆಯೇನು?

ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿರುವುದು ನಂಬಿಕೆಯ ಸಮಸ್ಯೆ ಎನ್ನುತ್ತಾರೆ ಇತ್ತೀಚೆಗಷ್ಟೇ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕಾರಣ ಪ್ರವೇಶಿಸಲು ಹೊರಟಿರುವ ಇಲ್ಲಿನ ಶಾ ಫೈಸಲ್‌.

ಭಾರತದ ಕೋನದಿಂದ ನೋಡಿದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ನಿಜ. ಆದರೆ ಜಮ್ಮು ಮತ್ತು ಕಾಶ್ಮೀರದ ದೃಷ್ಟಿಯಿಂದ ಅಲ್ಲ ಎನ್ನುತ್ತಾರೆ ಅವರು. ಅಂದರೆ ಭಾರತದಿಂದ ಕಣಿವೆ ರಾಜ್ಯದ ಯುವಕರು ತುಂಬಾ ದೂರು ನಡೆದು ಹೋಗಿದ್ದಾರೆ. ಯುವಕರ ಪರಿಸ್ಥಿತಿ ‘ಅತ್ತ ಧರಿ ಇತ್ತ ಪುಲಿ’ ಎಂಬಂತಾಗಿದೆ ಎನ್ನುತ್ತಾರೆ ಶಾ ಫೈಸಲ್‌.

ಚುನಾವಣಾ ರಾಜಕೀಯದ ಮೇಲಿನ ನಂಬಿಕೆಯನ್ನು ಇವರುಗಳು ಕಳೆದುಕೊಂಡಿದ್ದಾರೆ. ಚುನಾವಣೆಗಳಿಂದ ಉತ್ತಮ ಆಡಳಿತ ಸಿಗುತ್ತದೆ ಎಂಬ ಭರವಸೆ ಇವರಿಗಿಲ್ಲ. ಈ ಕಾರಣಕ್ಕೆ ಇಲ್ಲಿನ ಕೆಲವು ಕಡೆ ಮತದಾನದ ಸರಾಸರಿ ಇಂದಿಗೂ ಎರಡಂಕಿ ದಾಟುವುದಿಲ್ಲ.

1989ರಿಂದ 2014ರ ನಡುವೆ ನಡೆದ ಲೋಕಸಭೆ ಚುನಾವಣೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಆದ ಸರಾಸರಿ ಮತದಾನದ ವಿವರ. ಒಟ್ಟಾರೆ ರಾಜ್ಯದ ಸರಾಸರಿ ಅತ್ಯಂತ ಕಳಪೆ ಪ್ರದರ್ಶನವನ್ನು ಹೇಳುತ್ತದೆ. 
1989ರಿಂದ 2014ರ ನಡುವೆ ನಡೆದ ಲೋಕಸಭೆ ಚುನಾವಣೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಆದ ಸರಾಸರಿ ಮತದಾನದ ವಿವರ. ಒಟ್ಟಾರೆ ರಾಜ್ಯದ ಸರಾಸರಿ ಅತ್ಯಂತ ಕಳಪೆ ಪ್ರದರ್ಶನವನ್ನು ಹೇಳುತ್ತದೆ. 
/ಫ್ಯಾಕ್ಟ್ಲಿ ಡಾನ್ ಇನ್. 

ಈ ಕಾರಣಕ್ಕೆ ಯುವಕರು ಸಾರ್ವಜನಿಕ ಕಟ್ಟಡಗಳು, ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿರುತ್ತಾರೆ. ಅದರಲ್ಲೂ ಯುವಕರಿಗೆ ಸೇನೆಯ ಮೇಲೆ ಅತೀವ ಸಿಟ್ಟಿದೆ. ಇದಕ್ಕಾಗಿ ಹೋರಾಡಲು ಬಂಡುಕೋರ ಸಂಘಟನೆಗಳಿಗೆ ಸೇರುತ್ತಾರೆ. ಇನ್ನೂ ‘ಹೆಚ್ಚಿನ ಯುವಕರಿಗೆ, 14-16 ವರ್ಷದ ಅಪ್ರಾಪ್ತರಿಗೆ ಬಂದೂಕು ಹಿಡಿಯುವ, ತಮ್ಮ ನೆಲಕ್ಕಾಗಿ ಹುತಾತ್ಮರಾಗುವ ಬಯಕೆ ಇದೆ. ಆದರೆ ಅವರಿಗೆ ಸಾಕಷ್ಟು ಬಂದೂಕು ಸಿಗುತ್ತಿಲ್ಲ,” ಎಂಬುದಾಗಿ ಸ್ಥಳೀಯ ಪರಿಸ್ಥಿತಿಯ ಗಂಭೀರತೆಯನ್ನು ಬಿಜೆಪಿ ನಾಯಕರೇ ಆಗಿದ್ದ ಯಶವಂತ್ ಸಿನ್ಹಾ ಹಲವು ಬಾರಿ ಸಂದರ್ಶನಗಳಲ್ಲಿ ವಿವರಿಸಿದ್ದಾರೆ. ಇವರು ಕಣಿವೆ ರಾಜ್ಯದ ಆಂತರಿಕ ಪರಿಸ್ಥಿತಿಯನ್ನು ದಶಕಗಳ ಕಾಲ ಮೇಲ್ವಿಚಾರಣೆ ನಡೆಸಿದವರು.

ಪರಿಸ್ಥಿತಿ ಹೀಗಿರುವಾಗ 2014ರಲ್ಲಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಈ ಸಮಸ್ಯೆಯನ್ನು ಒಂದೇ ಏಟಿಗೆ ಮುಗಿಸಿ ಬಿಡುತ್ತೇನೆ ಎಂದು ಅಬ್ಬರಿಸಿದರು. ಬಲ ಪ್ರಯೋಗದಿಂದ ಉಗ್ರರ ಹುಟ್ಟಡಗಿಸುವ ಮಾತುಗಳನ್ನಾಡಿದರು. ಭಯೋತ್ಪಾದಕ ಹೆಸರಿನಲ್ಲಿ ನೋಟ್‌ ಬ್ಯಾನ್‌ ಯೋಜನೆ ಜಾರಿಗೊಳಿಸಿದರು.

ಆದರೆ ಐದು ವರ್ಷ ಮುಗಿದ ನಂತರ ಇವತ್ತಿಗೂ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಏನೂ ಬದಲಾಗಿಲ್ಲ. ಕಣಿವೆ ರಾಜ್ಯ ಕಳೆದ ಐದು ವರ್ಷದಲ್ಲಿ ಎಂದಿಗಿಂತ ಹೆಚ್ಚು ಪ್ರಕ್ಷುಬ್ಧವಾಗಿದೆ. ತಮ್ಮಲ್ಲೇ ಸೀಮಿತವಾಗಿದ್ದ ಬಂಡುಕೋರರು ಅಪಾರ ಜನಬೆಂಬಲ ಗಳಿಸುತ್ತಿದ್ದಾರೆ. ಅದಕ್ಕೆ ಬುರ್ಹಾನ್‌ ವನಿ ಎಂಬ 21ರ ತರುಣ ಸೇನೆಯ ಗುಂಡಿಗೆ ಬಲಿಯಾದಾಗ ಸೇರಿದ 10 ಸಾವಿರಕ್ಕಿಂತ ಹೆಚ್ಚಿನ ಜನರೇ ಸಾಕ್ಷಿ.

ಹಾಗಂಥ ಜಮ್ಮು ಮತ್ತು ಕಾಶ್ಮೀರವನ್ನು ಕಳೆದುಕೊಳ್ಳಲು ಭಾರತ ಸಿದ್ಧವಿಲ್ಲ. ಹಾಗಿದ್ದರೆ ಉಳಿಸಿಕೊಳ್ಳಲು ಏನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತದೆ. ಮತ್ತು ಇದು ಅತಿ ಮುಖ್ಯವಾದುದು.

ಕಾಶ್ಮೀರ ಉಳಿಸಿಕೊಳ್ಳುವುದು ಹೇಗೆ?

ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಭೂಪ್ರದೇಶವನ್ನು ಹೊಂದಿರುವ ಕೆಲವೇ ಪ್ರದೇಶಗಳ ಪೈಕಿ ಕಾಶ್ಮೀರ ಕೂಡ ಒಂದು. 
ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಭೂಪ್ರದೇಶವನ್ನು ಹೊಂದಿರುವ ಕೆಲವೇ ಪ್ರದೇಶಗಳ ಪೈಕಿ ಕಾಶ್ಮೀರ ಕೂಡ ಒಂದು. 

ಮಾನಸಿಕವಾಗಿ ಹೆಚ್ಚು ಕಡಿಮೆ ಭಾರತದಿಂದ ದೂರ ಸರಿದಿರುವು ಜಮ್ಮು ಮತ್ತು ಕಾಶ್ಮೀರವನ್ನು ಉಳಿಸಿಕೊಳ್ಳಲು ಇನ್ನೂ ಅವಕಾಶಗಳಿವೆ ಎನ್ನುತ್ತಾರೆ ಮಾಜಿ ಹಣಕಾಸು ಮತ್ತು ವಿದೇಶಾಂಗ ಸಚಿವ ಯಶವಂತ್‌ ಸಿನ್ಹಾ.

“ನಾವು ನೈಜ ಆಶಯದೊಂದಿಗೆ ಕಾಶ್ಮೀರಿಗರನ್ನು ಸಂಪರ್ಕಿಸಿದರೆ, ‘ನಾವಿಲ್ಲಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಬಂದಿದ್ದೇವೆ’ ಎಂದು ಅವರ ಜತೆ ಸಮಾಲೋಚನೆ ನಡೆಸಿದರೆ, ನನಗೆ ಈಗಲೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂಬ ಭರವಸೆ ಇದೆ,” ಎನ್ನುತ್ತಾರೆ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಸಿನ್ಹಾ.

ಇದೇ ಮಾತುಗಳನ್ನು ಪುನರುಚ್ಛರಿಸುತ್ತಾರೆ ಶಾ ಫೈಸಲ್‌. “ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಭಾರತ ಅರ್ಥ ಮಾಡಿಕೊಳ್ಳಬೇಕು ಮತ್ತು ಅದನ್ನು ಪರಿಹರಿಸಲು ಯತ್ನಿಸಬೇಕು,” ಎಂಬುದು ಅವರ ಒನ್‌ಲೈನ್‌ ಪರಿಹಾರ.

ಆಳಕ್ಕಿಳಿದರೆ, “ಇಲ್ಲಿನ ಎಲ್ಲಾ ಶಕ್ತಿಗಳನ್ನು ಒಟ್ಟುಗೂಡಿಸಿ ಭಾರತ ಮಾತುಕತೆಗೆ ಇಳಿಯಬೇಕು. ಇಲ್ಲಿನವರಲ್ಲಿ ವಿಶ್ವಾಸ ತುಂಬ ಬೇಕು. ಈ ಸಂದರ್ಭದಲ್ಲಿ ಈ ಯತ್ನವನ್ನು ಘಾಸಿಗೊಳಿಸುವ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ ಭಾರತ ಧೃತಿಗೆಡಬಾರದು. ಅವರಿಗೆ ತಾಳ್ಮೆ ಇಲ್ಲ. ಆದರೆ ನಮಗೆ ತಾಳ್ಮೆ ಇರಬೇಕು. ಆಗ ಮಾತ್ರ ಒಂದಷ್ಟಾದರೂ ಕಾಶ್ಮೀರದಲ್ಲಿ ಶಾಂತಿ ನಲೆಸಲು ಸಾಧ್ಯ,” ಎಂದು ಪ್ರತಿಪಾದಿಸುತ್ತಾರೆ ಸಿನ್ಹಾ.

ಸೇನೆಯ ಹಿಂತೆಗೆತ, ಕಠಿಣ ಕಾನೂನುಗಳನ್ನು ರದ್ದುಪಡಿಸುವುದು ಮತ್ತು ರಾಜಕೀಯ ಕೈದಿಗಳ ಬಿಡುಗಡೆ ತಕ್ಷಣಕ್ಕೆ ಬಂದೂಕು ಹಿಡಿಯಲು ಹೊರಟಿರುವು ಯುವಕರ ಮನಸ್ಸು ಗೆಲ್ಲಲು ಇರುವ ಸಣ್ಣ ಆಯ್ಕೆಗಳು ಎನ್ನುತ್ತಾರೆ ಸರಕಾರದ ಆಡಳಿತದಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ ಫೈಸಲ್‌.

ಇದರ ಜತೆಗೆ ಸ್ವಾಯತ್ತತೆ, ಸ್ವಯಂ ನಿರ್ಣಯದ ಹಕ್ಕು, ಸಾಧಿಸಬಹುದಾದ ರಾಷ್ಟ್ರದ ಸ್ಥಾನಮಾನ ಕಾಶ್ಮೀರದ ಸಮಸ್ಯೆಗೆ ಪರಿಹಾರವಾಗಬಹುದು ಎನ್ನುತ್ತಾರೆ ಅವರು. ಇದೆಲ್ಲವೂ ಸಾಧ್ಯವಾಗುವುದು ಭಾರತ ಮನಸ್ಸು ಮಾಡಿದರೆ ಮಾತ್ರ ಎಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ.

ಕಾಶ್ಮೀರಕ್ಕೆ ಬೇಕಾಗಿದ್ದನ್ನು ಅಮೆರಿಕಾ ಅಥವಾ ಬ್ರಿಟನ್‌ನಿಂದ ಪಡೆಯಲು ಸಾಧ್ಯವಿಲ್ಲ. ಅದನ್ನು ಪಡೆಯಬೇಕಾಗಿದ್ದು ಭಾರತದಿಂದ ಮಾತ್ರ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಚುನಾಯಿತ ಸರಕಾರಗಳು ನವದೆಹಲಿಯ ಜತೆ ದೃಢವಾಗಿ ನಿಂತರೆ, ನಿರಂತರ ಸಮಾಲೋಚನೆ ನಡೆಸಿದರೆ ಈ ದಿಗ್ಭಂಧನ ಸಂಸ್ಕೃತಿಯನ್ನು ಕೊನೆಗೊಳಿಸಲು ಸಾಧ್ಯ ಎನ್ನುತ್ತಾರೆ ಸ್ವತಃ ಕಾಶ್ಮೀರಿಗರಾದ ಶಾ ಫೈಸಲ್‌.

ಫೈಸಲ್‌ ಮತ್ತು ಸಿನ್ಹಾ ಪ್ರಕಾರ ಪ್ರೀತಿ ಮತ್ತು ವಿಶ್ವಾಸದಿಂದ ಮಾತ್ರ ಕಬ್ಬಿಣದ ಬಂದೂಕುಗಳ ಮೇಲೆ ಗುಲಾಬಿ ಅರಳಿಸಲು ಸಾಧ್ಯ. ನಂಬಿಕೆ ಕಳೆದುಕೊಂಡ ಯುವಕರಲ್ಲಿ ಭರವಸೆಯ ಚಿಲುಮೆ ಬಿತ್ತಬಹುದು. ಭಾರತ ತನ್ನ ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಎಂದಿಗಿಂತ ಹೆಚ್ಚು ನೆನಪಸಿಕೊಳ್ಳಬೇಕಾದ ತುರ್ತಿದು. ಪ್ರೀತಿಯಿಂದ, ಅಹಿಂಸೆಯಿಂದ ಬ್ರಿಟೀಷರನ್ನೇ ಒದ್ದೋಡಿಸಿದವರಿಗೆ ಕಾಶ್ಮೀರಿಗರ ಮನಸ್ಸು ಗೆಲ್ಲುವುದು ದೊಡ್ಡದೇ?

ಪ್ರತಿಬಾರಿ ಇಂತಹ ದಾಳಿಗಳು ನಡೆದಾಗ ಭಾವೋನ್ಮಾದಕ್ಕೆ ಒಳಗಾಗುವ ಮತ್ತು ಅಷ್ಟೆ ಬೇಗ ಮರೆತು ಇತರೆ ಲಾಭದಾಯಕ ವಿಚಾರಗಳಿಗೆ ಹಾರುವ ಜನರಿಗೆ ಇಂತಹ ಸಮತೋಲಿತ ವಿಚಾರವನ್ನು ಮೊದಲು ಅರ್ಥ ಪಡಿಸುವ ಜರೂರಿದೆ.