samachara
www.samachara.com
ಇದು ಹಿಂದೆಂದೂ ನಡೆಯದ ರಕ್ತಸಿಕ್ತ ದಾಳಿ: 20 ವರ್ಷದ ಸ್ಥಳೀಯನ ಕೈಗೆ ಬಾಂಬ್ ಕೊಟ್ಟವರು ಯಾರು?
COVER STORY

ಇದು ಹಿಂದೆಂದೂ ನಡೆಯದ ರಕ್ತಸಿಕ್ತ ದಾಳಿ: 20 ವರ್ಷದ ಸ್ಥಳೀಯನ ಕೈಗೆ ಬಾಂಬ್ ಕೊಟ್ಟವರು ಯಾರು?

ಸೇನಾ ಪಡೆಗಳ ನೆಲೆಗಳ ಮೇಲೆ ದಾಳಿ, ಮಿಲಿಟರಿ ಕಾನ್ವಾಯ್ ಮೇಲಿನ ದಾಳಿಗಳ ಕಳೆದ ಐದು ವರ್ಷದಲ್ಲಿ ನಡೆದು ಹೋಗಿವೆ. ಇವೆಲ್ಲಕ್ಕೂ ಹೋಲಿಸಿದರೆ ಗುರುವಾರ ದಾಳಿ ಅತ್ಯಂತ ರಕ್ತಸಿಕ್ತವಾದುದು ಎಂದು ಕಾಶ್ಮೀರದ ಮಾಧ್ಯಮಗಳು ಕರೆದಿವೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜಧಾನಿ ಶ್ರೀನಗರ ಸಮೀಪದ ಪುಲ್ವಾಮ ಜಿಲ್ಲೆಯ ಹೆದ್ದಾರಿ ಹಿಂದೆಂದೂ ಕಾಣದ ರಕ್ತಸಿಕ್ತ ದಾಳಿಗೆ ಸಾಕ್ಷಿಯಾಗಿದೆ.

ಗುರುವಾರ ಮಧ್ಯಾಹ್ನ 3.15ರ ಸುಮಾರಿಗೆ ಅತ್ಯಂತ ಬಿಗಿ ಭದ್ರತೆ ಹೊಂದಿರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಗೆ ಈವರೆಗೆ ಸುಮಾರು 45 ಸಿಆರ್‌ಪಿಎಫ್‌ ಸಿಬ್ಬಂದಿ ಬಲಿಯಾಗಿದ್ದಾರೆ. ಘಟನೆ ಅಂತಾರಾಷ್ಟ್ರೀಯ ಮಟ್ಟದ ಖಂಡನೆಗೆ ಒಳಗಾಗಿದೆ.

ಶ್ರೀನಗರ ಹಾಗೂ ಜಮ್ಮು ನಡುವಿನ ರಾಷ್ಟ್ರೀಯ ಹೆದ್ದಾರಿಯ ಆವಂತಿಪೋರಾ ಪ್ರದೇಶದಲ್ಲಿ 78 ಮಿಲಿಟರಿ ವಾಹನಗಳಲ್ಲಿ 2,500 ಅರೆ ಸೇನಾಪಡೆಯ ಸೈನಿಕರು ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ 20 ವರ್ಷದ ಸ್ಥಳೀಯ ಯುವಕ, ವರ್ಷದ ಹಿಂದಷ್ಟೆ ಪಾಕ್‌ ಮೂಲದ ಜೈಶ್‌- ಎ- ಮೊಹಮದ್ ಭಯೋತ್ಪಾದಕ ಸಂಘಟನೆ ಸೇರಿದ್ದ ‘ಫಿದಾಯೀನ್‌’, ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋವನ್ನು ಸಿಆರ್‌ಪಿಎಫ್ ಯೋಧರು ಸಂಚರಿಸುತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸ್ಫೋಟದ ತೀವ್ರತೆಗೆ ಸಿಆರ್‌ಪಿಎಫ್ ಸಿಬ್ಬಂದಿಯ ಮೃತದೇಹಗಳು ರಸ್ತೆಯಲ್ಲಿ ಛಿದ್ರಗೊಂಡು ಬಿದ್ದಿದ್ದವು. ಅನೇಕ ಯೋಧರ ಮೃತದೇಹದ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಬಾಂಬ್‌ಗಳನ್ನು ತುಂಬಿಸಿಕೊಂಡು ಬಂದಿದ್ದ ಎಸ್‌ಯುವಿ ವಾಹನ ಒಡೆದು ಚೂರು ಚೂರುಗಳಾಗಿದೆ.

ಘಟನೆ ಬೆನ್ನಲ್ಲೇ ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿತು. ಪುಲ್ವಾಮ ಜಿಲ್ಲೆಯ ಕಾಕಾಪೋರ ಗ್ರಾಮಕ್ಕೆ ಸೇರಿದ ಯುವಕ ಆದಿಲ್ ಅಹಮದ್ ಈ ದಾಳಿಯನ್ನು ನಡೆಸಿದ್ದು, ದಾಳಿ ನಡೆಸುವುದಕ್ಕೂ ಮುಂಚೆ ಆತ ಮಾತನಾಡಿರುವ 10 ನಿಮಿಷದ ವಿಡಿಯೋ ಒಂದನ್ನು ಸಂಘಟನೆ ಬಿಡುಗಡೆ ಮಾಡಿತು.

ಸಿಆರ್‌ಪಿಎಫ್‌ ಕಾನ್ವಾಯ್‌ ಮೇಲೆ ರಕ್ತಸಿಕ್ತ ದಾಳಿ ನಡೆಸಿದ ಆದಿಲ್ ಅಹಮದ್ ದಾರ್ ದಕ್ಷಿಣ ಕಾಶ್ಮೀರದ ಸ್ಥಳೀಯ ಯುವಕ ಎಂದು ಗುರುತಿಸಲಾಗಿದೆ. ತಾಯಿ ಮತ್ತು ಇಬ್ಬರು ಸಹೋದರರನ್ನು ಬಿಟ್ಟು ವರ್ಷದ ಹಿಂದಷ್ಟೇ ಈತ ಭಯೋತ್ಪಾದಕ ಸಂಘಟನೆ ಸೇರಿದ್ದ ಎನ್ನುತ್ತವೆ ವರದಿಗಳು.
ಸಿಆರ್‌ಪಿಎಫ್‌ ಕಾನ್ವಾಯ್‌ ಮೇಲೆ ರಕ್ತಸಿಕ್ತ ದಾಳಿ ನಡೆಸಿದ ಆದಿಲ್ ಅಹಮದ್ ದಾರ್ ದಕ್ಷಿಣ ಕಾಶ್ಮೀರದ ಸ್ಥಳೀಯ ಯುವಕ ಎಂದು ಗುರುತಿಸಲಾಗಿದೆ. ತಾಯಿ ಮತ್ತು ಇಬ್ಬರು ಸಹೋದರರನ್ನು ಬಿಟ್ಟು ವರ್ಷದ ಹಿಂದಷ್ಟೇ ಈತ ಭಯೋತ್ಪಾದಕ ಸಂಘಟನೆ ಸೇರಿದ್ದ ಎನ್ನುತ್ತವೆ ವರದಿಗಳು.

ಕಾರ್‌ ಬಾಂಬ್ ಸ್ಫೋಟದ ಸದ್ದು ಘಟನಾ ಸ್ಥಳದಿಂದ ಹಲವು ಕಿಲೋಮೀಟರ್‌ವರೆಗೂ ಕೇಳಿಸಿತು. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು. ಘಟನಾ ಸ್ಥಳದಿಂದ 300 ಮೀಟರ್ ದೂರದಲ್ಲಿರುವ ಆವಂತಿಪೊರಾ ಮಾರುಕಟ್ಟೆಯಲ್ಲಿದ್ದ ಜನರು, ಸ್ಫೋಟದ ಸದ್ದಿಗೆ ಬೆಚ್ಚಿಬಿದ್ದು, ಸುರಕ್ಷಿತ ಸ್ಥಳಗಳತ್ತ ಓಡಲು ಶುರು ಮಾಡಿದ್ದರು. ಸ್ಫೋಟದಿಂದಾಗಿ ಅನೇಕ ಮನೆಗಳಿಗೆ ಹಾನಿಯಾಗಿದೆ ಎಂಬುದಾಗಿ ‘ಕಾಶ್ಮೀರ ರೀಡರ್’ ಪತ್ರಿಕೆ ವರದಿ ಮಾಡಿದೆ.

ಬಾಂಬ್ ಸ್ಫೋಟ ಸಂಭವಿಸುತ್ತಿದ್ದಂತೆ ಮತ್ತೊಂದು ಸಂಭವನೀಯ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಅನುಮಾನಗೊಂಡ ಸೈನಿಕರು ತಮ್ಮ ಬಸ್‌ಗಳಿಂದ ಹೊರಗೆ ಜಿಗಿದು ವಸತಿ ಪ್ರದೇಶಗಳಲ್ಲಿ ಆಶ್ರಯ ಪಡೆದಿದ್ದರು. ಇವರುಗಳು ಸತತ 5 ನಿಮಿಷಗಳ ಕಾಲ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸ್ಥಳದಲ್ಲಿ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪತ್ರಕರ್ತರಿಗೆ ಪ್ರವೇಶ ನಿಷೇಧ:

ಬಾಂಬ್ ಸ್ಫೋಟದಿಂದಾಗಿ ಪುಲ್ವಾಮ ಹೆದ್ದಾರಿಯನ್ನು ಭಾರತೀಯ ಸೇನೆ ಸಂಪೂರ್ಣ ಬಂದ್ ಮಾಡಿದೆ. ಪ್ರಯಾಣಿಕರಿಗೆ ಸುರಕ್ಷಿತ ಮಾರ್ಗಗಳಲ್ಲಿ ಸಂಚರಿಸುವಂತೆ ಹೇಳಲಾಗುತ್ತಿದೆ. ಅಲ್ಲದೆ ಘಟನೆ ನಡೆದ ಸ್ಥಳಗಳಿಗೆ ಪತ್ರಕರ್ತರ ಪ್ರವೇಶವನ್ನೂ ನಿಷೇಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪತ್ರಕರ್ತರು “ನಾವು ಘಟನೆಯ ಕುರಿತು ವರದಿ ಮಾಡಲು ಘಟನಾ ಸ್ಥಳಕ್ಕೆ ತೆರಳಿದ್ದೆವು. ಆದರೆ ಎರಡು ಗಂಟೆಗಳಾದರೂ ನಮಗೆ ಅನುಮತಿ ನೀಡಲಿಲ್ಲ ಪರಿಣಾಮ ಶ್ರೀನಗರಕ್ಕೆ ವಾಪಾಸ್ ಆದೆವು,” ಎಂದಿದ್ದಾರೆ.

ಸಿಆರ್‌ಪಿಎಫ್‌ ಕಾನ್ವಾಯ್ ಮೇಲಿನ ದಾಳಿಯ ತೀವ್ರತೆಯನ್ನು ಬಿಂಬಿಸುವ ಒಂದು ಚಿತ್ರ. 
ಸಿಆರ್‌ಪಿಎಫ್‌ ಕಾನ್ವಾಯ್ ಮೇಲಿನ ದಾಳಿಯ ತೀವ್ರತೆಯನ್ನು ಬಿಂಬಿಸುವ ಒಂದು ಚಿತ್ರ. 

ಈ ನಡುವೆ ದಕ್ಷಿಣ ಕಾಶ್ಮೀರದ ಛಾಯಾಗ್ರಾಹಕರೊಬ್ಬರು ಸ್ಥಳಕ್ಕೆ ಧಾವಿಸಿ ಕೆಲವು ಪೋಟೋಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಯೋಧರು ಪತ್ರಕರ್ತ ತೆಗೆದ ಪೋಟೋಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಕಾರಿನಿಂದ ಹೊರಗೆಳೆದು ಥಳಿಸಿದರು ಎಂದು ಆರೋಪಿಸಲಾಗಿದೆ.

ಕಾಶ್ಮೀರದಲ್ಲಿ ರೆಡ್ ಅಲರ್ಟ್:

ದಾಳಿ ಹಿನ್ನೆಲೆ ಕಣಿವೆ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಿರುವ ಸರಕಾರ ನಾಲ್ಕು ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಜಮ್ಮು-ಕಾಶ್ಮೀರ ಪೊಲೀಸ್ ಇಲಾಖೆ, "ಈ ಘಟನೆಯ ಕುರಿತು ಪೊಲೀಸ್ ಇಲಾಖೆ ಎನ್‌ಎಸ್‌ಜಿ ಕಮಾಂಡೋ ಪಡೆ, ಬಾಂಬ್‌ ಸ್ಕ್ಯಾಡ್ ಹಾಗೂ ಪೋರೆನ್ಸಿಕ್ ಸಿಬ್ಬಂದಿಯ ಜೊತೆಗೆ ತನಿಖೆ ನಡೆಸಿ ವರದಿಯನ್ನು ಶೀಘ್ರದಲ್ಲಿ ಕೇಂದ್ರ ಗೃಹ ಇಲಾಖೆಗೆ ನೀಡಲಾಗುವುದು" ಎಂದಿದೆ.

ಗತದ ದಾಳಿಗಳು ಹಾಗೂ ಭವಿಷ್ಯ:

ಭಾರತದ ಮುಕುಟ ಎಂದು ಕರೆಸಿಕೊಳ್ಳುವ ಈ ರಾಜ್ಯ ಅತ್ಯಂತ ಹೆಚ್ಚು ಮಿಲಿಟರಿ ಪಡೆಗಳ ಕಣ್ಗಾವಲಿನಲ್ಲಿರುವ ಜಗತ್ತಿನ ಏಕೈಕ ಪ್ರದೇಶ ಎಂದೂ ಕರೆಸಿಕೊಂಡಿದೆ. ಈ ಹಿಂದೆಯೂ ಇಲ್ಲಿ ಇಂತಹ ದಾಳಿಗಳು ನಡೆದುಕೊಂಡು ಬಂದಿವೆ. ಸೇನಾ ಪಡೆಗಳ ನೆಲೆಗಳ ಮೇಲೆ ದಾಳಿ, ಮಿಲಿಟರಿ ಕಾನ್ವಾಯ್ ಮೇಲಿನ ದಾಳಿಗಳ ಕಳೆದ ಐದು ವರ್ಷದಲ್ಲಿ ನಡೆದು ಹೋಗಿವೆ. ಇವೆಲ್ಲಕ್ಕೂ ಹೋಲಿಸಿದರೆ ಗುರುವಾರ ದಾಳಿ ಅತ್ಯಂತ ರಕ್ತಸಿಕ್ತವಾದುದು ಎಂದು ಕಾಶ್ಮೀರದ ಮಾಧ್ಯಮಗಳು ಕರೆದಿವೆ. ಅಂದಹಾಗೆ, 2014ರಿಂದ ಈವರೆಗೆ ಇಲ್ಲಿ ಇಂತಹ ಒಟ್ಟು 7 ದಾಳಿಗಳು ನಡೆದಿವೆ.

  1. ಜನವರಿ 2018: ಲೆತ್ಪೋರದ ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲೆ ಆತ್ಮಾಹುತಿ ಬಾಂಬ್ ದಾಳಿ; ಐವರು ಯೋಧರ ಸಾವು
  2. ಜುಲೈ 2018: ಶ್ರೀನಗರದ ವಿಮಾನ ನಿಲ್ದಾಣದ ಸಮೀಪದಲ್ಲಿದ್ದ ಬಿಎಸ್‌ಎಫ್‌ ಕ್ಯಾಂಪ್‌ ಮೇಲೆ ಫಿದಾಯೀನ್‌ ಗುಂಪಿನ ದಾಳಿ; ಓರ್ವ ಅಧಿಕಾರಿ ಸಾವು, ನಾಲ್ವರಿಗೆ ಗಾಯ.
  3. ಜುಲೈ 2018: ಪುಲ್ವಾಮಾದ ಪೊಲೀಸ್‌ ಲೈನ್‌ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರಗಾಮಿಗಳು, ಘಟನೆಯಲ್ಲಿ ಎಂಟು ಪೊಲೀಸ್‌ ಸಿಬ್ಬಂದಿಗಳ ಬಲಿ.
  4. ಸೆಪ್ಟೆಂಬರ್‌ 2016: ಬಾರಾಮುಲ್ಲಾದ ಉರಿಯ ಸೇನಾ ಕ್ಯಾಂಪ್‌ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು, ಒಟ್ಟು 17 ಸೈನಿಕರ ಸಾವು.
  5. ಜೂನ್‌ 2016: ಪಂಪೂರಾ ಬಳಿಯ ರಾಷ್ಟ್ರೀಯ ಹೆದ್ದಾರಿಯ ಫ್ರೆಸ್ಟ್‌ಬಾಲ್‌ ಎಂಬಲ್ಲಿ ಕಾನ್ವಾಯ್‌ ಮೇಲೆ ದಾಳಿ ನಡೆಸಿದ ಉಗ್ರರು, 8 ಸಿಆರ್‌ಪಿಎಫ್‌ ಸಿಬ್ಬಂದಿ ಬಲಿ.
  6. ಫೆಬ್ರವರಿ 2016: ಪಾಂಪೊರಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೂರು ಆರ್ಮಿ ಕಾಮಾಂಡೋಗಳು ಸೇರಿದಂತೆ ಇಬ್ಬರು ಕ್ಯಾಪ್ಟನ್‌ ದರ್ಜೆಯ ಮಿಲಿಟರಿ ಅಧಿಕಾರಿಗಳ ಬಲಿ.
  7. ಡಿಸೆಂಬರ್‌ 2014: ಗಡಿ ರೇಖೆಗೆ ಹತ್ತಿರದಲ್ಲಿರುವ ಬಾರಾಮುಲ್ಲಾದ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆಸಿದ 6 ಭಯೋತ್ಪಾದಕರು, ಒಬ್ಬರು ಅಧಿಕಾರಿ, ಮೂರು ಪೊಲೀಸ್ ಸಿಬ್ಬಂದಿ ಹಾಗೂ 7 ಸೈನಿಕರ ಸಾವು.

ದಾಳಿ ನಂತರ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಆದಿಲ್, ನನ್ನಂತೆಯೇ ಇನ್ನೂ ಸಾವಿರಾರು ಜನ ತಯಾರಾಗಿದ್ದಾರೆ. ಇದು ಇಂತಹ ಹಲವು ದಾಳಿಗಳಿಗೆ ಮುನ್ನಡಿ ಎಂದಿದ್ದಾನೆ. ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭವಿಷ್ಯದಲ್ಲಿ ಶಾಂತಿ ನೆಲೆಸುವ ಸಾಧ್ಯತೆಗಳನ್ನು ತಳ್ಳಿ ಹಾಕುತ್ತಿದೆ. ಅಂದಹಾಗೆ, ಏನಕ್ಕೆ ಈ ಪ್ರಮಾಣದ ರಕ್ತಪಾತಕ್ಕೆ ಭಾರತದ ಒಂದು ಪುಟ್ಟ ರಾಜ್ಯ ಈಡಾಗುತ್ತಿದೆ? ಇವೆಲ್ಲಕ್ಕೆ ಪರಿಹಾರ ಅಂತ ಇಲ್ಲವಾ? ತಕ್ಷಣ ಭಾವೋನ್ಮಾದಗಳನ್ನು ಕಳೆದುಕೊಂಡು, ವಿಚಾರಗಳ ಆಳಕ್ಕಿಳಿದ ಹೊಸ ಆಯಾಮಗಳು ಕಾಶ್ಮೀರದ ಆಂತರಿಕ ವಿಚಾರದಲ್ಲಿ ಕಾಣಸಿಗುತ್ತವೆ. ಅವನ್ನು ‘ಸಮಾಚಾರ’ದ ಮುಂದಿನ ವರದಿಯಲ್ಲಿ ಬಿಡಿಸಿಡಲಾಗುವುದು.

ಹುತಾತ್ಮರ ಪಟ್ಟಿ:

ಗುರುವಾರದ ದಾಳಿಯಲ್ಲಿ ಈವರೆಗೆ ಸಾವನ್ನಪ್ಪಿದ ಸೈನಿಕರ ಸಂಖ್ಯೆ 45 ಎಂದು ವರದಿಯಾಗುತ್ತಿದೆ. ಸದ್ಯ ಸಿಆರ್‌ಪಿಎಫ್‌ ಒಟ್ಟು 42 ಸೈನಿಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಂಡ್ಯ ಜಿಲ್ಲೆಯ ಗುರು ಎಚ್‌. ಕೂಡ ಹುತಾತ್ಮರ ಪಟ್ಟಿಯಲ್ಲಿದ್ದಾರೆ. ಇನ್ನುಳಿದ ಸೈನಿಕ ಹೆಸರುಗಳು ಹೀಗಿವೆ.

ಸಿಆರ್‌ಪಿಎಫ್‌ ಬಿಡುಗಡೆ ಮಾಡಿದ ಮಡಿದ ಸೈನಿಕರ ಹೆಸರುಗಳು ಹಾಗೂ ಅವರ ಹುದ್ದೆಗಳ ವಿವರ. 
ಸಿಆರ್‌ಪಿಎಫ್‌ ಬಿಡುಗಡೆ ಮಾಡಿದ ಮಡಿದ ಸೈನಿಕರ ಹೆಸರುಗಳು ಹಾಗೂ ಅವರ ಹುದ್ದೆಗಳ ವಿವರ.