samachara
www.samachara.com
ಸುಪ್ರೀಂ ಆದೇಶವನ್ನೇ ತಿರುಚಿದರು, ಎದುರಾಳಿ ಕೈಗೆ ಸಿಕ್ಕಿ ಬಿದ್ದರು: ಇದು ಶ್ರೀಮಂತ ಉದ್ಯಮಿಯ ಮತ್ತೊಂದು ಕರ್ಮಕಾಂಡ
COVER STORY

ಸುಪ್ರೀಂ ಆದೇಶವನ್ನೇ ತಿರುಚಿದರು, ಎದುರಾಳಿ ಕೈಗೆ ಸಿಕ್ಕಿ ಬಿದ್ದರು: ಇದು ಶ್ರೀಮಂತ ಉದ್ಯಮಿಯ ಮತ್ತೊಂದು ಕರ್ಮಕಾಂಡ

ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಿದ ಆದೇಶದಲ್ಲಿ ಏನೋ ವ್ಯತ್ಯಾಸ ನಡೆದಿದೆ ಎಂಬುದು ಎರಿಕ್ಸನ್‌ ಕಂಪನಿಯ ಪ್ರತಿನಿಧಿಗಳ ಗಮನಕ್ಕೆ ಬಂದಿತ್ತು. ಇದನ್ನು ಎರಿಕ್ಸನ್‌ ಪ್ರತಿನಿಧಿಗಳು ನ್ಯಾ. ನಾರಿಮನ್‌ ಗಮನಕ್ಕೆ ತಂದಿದ್ದರು.

Team Samachara

ಅನಿಲ್‌ ಅಂಬಾನಿಯ ರಿಮೋಟ್‌ ಕಂಟ್ರೋಲ್‌ನಲ್ಲಿ ರಾಜಕೀಯದಾಚೆಗೆ ನ್ಯಾಯಾಂಗದಲ್ಲೂ ಜನರಿದ್ದಾರೆ ಎಂಬುದಕ್ಕೆ ಸಣ್ಣ ಪುರಾವೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ಸಿಕ್ಕಿದೆ. ಅಂಬಾನಿ ಪರವಾಗಿ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ನೀಡಿದ ಆದೇಶವನ್ನೇ ರಿಜಿಸ್ಟಾರ್‌ಗಳಿಬ್ಬರು ತಿದ್ದುಪಡಿ ಮಾಡಿ ಇದೀಗ ಕೆಲಸ ಕಳೆದುಕೊಂಡಿದ್ದಾರೆ.

ಆಗಿದ್ದೇನು?

ಅಂಬಾನಿಯ ರಿಲಯನ್ಸ್‌ ಕಮ್ಯುನಿಕೇಷನ್ಸ್‌ (ಆರ್‌ಕಾಂ) ತನಗೆ ನೀಡಬೇಕಾಗಿದ್ದ 550 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಎರಿಕ್ಸನ್‌ ಇಂಡಿಯಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಹಲವು ಗಡುವುಗಳ ನಂತರವೂ ಅನಿಲ್‌ ಅಂಬಾನಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್‌ ಅನಿಲ್‌ ಅಂಬಾನಿ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಿತ್ತು.

ಜನವರಿ 7ರಂದು ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಂದಿನ ವಿಚಾರಣೆ ವೇಳೆ ಅನಿಲ್‌ ಅಂಬಾನಿ ನ್ಯಾಯಾಲಯದಲ್ಲಿ ಖುದ್ದು ಹಾಜರಿರಬೇಕು ಎಂದು ಆದೇಶ ನೀಡಿತ್ತು. ಇದರ ಆದೇಶವನ್ನು ಅಂದೇ ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಲಾಗಿತ್ತು. ಆದರೆ ಅದರಲ್ಲಿ, ‘ಅಂಬಾನಿಯ ವೈಯಕ್ತಿಕ ಹಾಜರಿ ಬೇಕಾಗಿಲ್ಲ’ ಎಂಬ ಅರ್ಥದಲ್ಲಿ ವಾಕ್ಯವೊಂದಿತ್ತು.

ನ್ಯಾಯಾಲಯದ ಆದೇಶದಲ್ಲಿ ತಿದ್ದುಪಡಿ.
ನ್ಯಾಯಾಲಯದ ಆದೇಶದಲ್ಲಿ ತಿದ್ದುಪಡಿ.
/ದಿ ಟೆಲಿಗ್ರಾಫ್‌

ಆದರೆ ಮೂಲ ಆದೇಶ ಹಾಗಿರಲಿಲ್ಲ. ಕೆಲವೇ ಗಂಟೆಗಳ ಮೊದಲು ನೀಡಿದ ಆದೇಶದಲ್ಲಿ, ನ್ಯಾ. ಆರ್. ಎಫ್‌. ನಾರಿಮನ್‌ ಮತ್ತು ವಿನೀತ್‌ ಶರಣ್‌ ಅವರಿದ್ದ ನ್ಯಾಯಪೀಠ, ನ್ಯಾಯಂಗ ನಿಂದನೆ ವಿಚಾರಣೆ ಸಂದರ್ಭದಲ್ಲಿ ಅಂಬಾನಿ ಖುದ್ದು ಹಾಜರಿರಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಯಾರ ವಿರುದ್ಧ ವಿಚಾರಣೆ ನಡೆಯುತ್ತಿದೆಯೋ ಅವರು ನ್ಯಾಯಾಲಯದಲ್ಲಿ ಖುದ್ದು ಹಾಜರರಿಬೇಕು ಎಂದು ಆದೇಶ ನೀಡುವುದು ಸಾಮಾನ್ಯ. ಒಂದೊಮ್ಮೆ ನ್ಯಾಯಾಲಯ ತನಗಿರುವ ವಿವೇಚನಾಧಿಕಾರದ ಮೇಲೆ ಮಾತ್ರ ಖುದ್ದು ಹಾಜರಿ ಬೇಡವೆಂದು ತೀರ್ಮಾನಿಸಬಹುದು ಅಷ್ಟೇ.

ಈ ಹಿನ್ನೆಲೆಯಲ್ಲಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಿದ ಆದೇಶದಲ್ಲಿ ಏನೋ ವ್ಯತ್ಯಾಸ ನಡೆದಿದೆ ಎಂಬುದು ಎರಿಕ್ಸನ್‌ ಕಂಪನಿಯ ಪ್ರತಿನಿಧಿಗಳ ಗಮನಕ್ಕೆ ಬಂದಿತ್ತು. ಇದನ್ನು ಎರಿಕ್ಸನ್‌ ಪ್ರತಿನಿಧಿಗಳು ನ್ಯಾ. ನಾರಿಮನ್‌ ಗಮನಕ್ಕೆ ತಂದಿದ್ದರು. ಬೆನ್ನಿಗೆ ಜನವರಿ 10ರಂದು ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಿದ್ದ ಆದೇಶವನ್ನು ಬದಲಾವಣೆ ಮಾಡಲಾಗಿತ್ತು!

ಈ ಬೆಳವಣಿಗೆ ತನ್ನ ಗಮನಕ್ಕೆ ಬರುತ್ತಿದ್ದಂತೆ ಆಂತರಿಕ ತನಿಖೆಗೆ ನ್ಯಾಯಾಲಯ ಆದೇಶ ನೀಡಿತ್ತು. ಈ ತನಿಖೆಯಲ್ಲಿ ಅಧಿಕಾರಿಗಳು ತಪ್ಪೆಸಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಬ್ಬರನ್ನು ವಜಾಗೊಳಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಅದರಂತೆ ಆದೇಶವನ್ನು ತಿರುಚಿದ ನ್ಯಾಯಾಲಯದ ಇಬ್ಬರು ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾಗೊಳಿಸಿದೆ. ಕಲಂ 311ರ ಅಡಿಯಲ್ಲಿ ಉನ್ನತ ಅಧಿಕಾರವನ್ನು ಬಳಸಿದ ಕೋರ್ಟ್‌ ಸಹಾಯಕ ರೆಜಿಸ್ಟಾರ್‌ಗಳಾದ ಮಾನವ್‌ ಶರ್ಮಾ ಮತ್ತು ತಪನ್‌ ಕುಮಾರ್‌ ಚಕ್ರಬರ್ತಿಯನ್ನು ಕೆಲಸದಿಂದ ವಜಾಗೊಳಿಸಿದೆ.

ತೆರೆದ ನ್ಯಾಯಾಲಯದಲ್ಲಿ ಅಥವಾ ನ್ಯಾಯಾಧೀಶರ ಕೊಠಡಿಯಲ್ಲಿ ಬಾಯಲ್ಲಿ ಹೇಳುವ ಆದೇಶಗಳನ್ನು ಬರೆದುಕೊಳ್ಳುವುದು ಕೋರ್ಟ್‌ ಮಾಸ್ಟರ್‌ಗಳ ಕರ್ತವ್ಯವಾಗಿರುತ್ತದೆ. ಇದರಲ್ಲಿ ಬೇಕೆಂದೇ ತಪ್ಪು ಎಸಗಿದ, ನ್ಯಾಯಾಧಿಶರ ಆದೇಶವನ್ನು ತಿರುಚಿದ ಅಧಿಕಾರಗಳನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಬುಧವಾರ ಸಂಜೆ ವಜಾಗೊಳಿಸಿದ್ದಾರೆ.

ವಿಚಾರಣೆ ನಂತರ ನ್ಯಾಯಾಲಯದಿಂದ ಹೊರ ಬರುತ್ತಿರುವ ಅನಿಲ್‌ ಅಂಬಾನಿ.
ವಿಚಾರಣೆ ನಂತರ ನ್ಯಾಯಾಲಯದಿಂದ ಹೊರ ಬರುತ್ತಿರುವ ಅನಿಲ್‌ ಅಂಬಾನಿ.
/ಬ್ಲೂಂಬರ್ಗ್‌

ಈ ಎಲ್ಲಾ ಬೆಳವಣಿಗೆಗಳ ನಡುವೆ ಅನಿಲ್‌ ಅಂಬಾನಿ ತಲೆ ತಗ್ಗಿಸಿಕೊಂಡು ಫೆಬ್ರವರಿ 12 ಮತ್ತು 13ರಂದು ವಿಚಾರಣೆ ವೇಳೆ ಖುದ್ದು ಹಾಜರಿದ್ದರು. ಮಂಗಳವಾರ ಸುಮಾರು ಎರಡು ಗಂಟೆ ನ್ಯಾಯಾಲಯದಲ್ಲಿದ್ದ ಅವರು, ಬುಧವಾರ ದಿನ ಪೂರ್ತಿ ಕೋರ್ಟ್‌ ಆವರಣದಲ್ಲೇ ಇದ್ದರು.

ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆಯೂ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಒಂದು ಕಾಲದ ಶ್ರೀಮಂತ ಉದ್ಯಮಿ ಅನಿಲ್‌ ಅಂಬಾನಿಗೆ ಸಂಬಂಧಿಸಿದ ಆದೇಶದಲ್ಲಾಗಿರುವ ತಪ್ಪು ಆಕಸ್ಮಿಕವಲ್ಲ ಎಂದು ಮೂಲಗಳು ಹೇಳಿರುವುದಾಗಿ ‘ದಿ ಟೆಲಿಗ್ರಾಫ್‌’ ವರದಿ ಮಾಡಿದೆ. ಈ ತಿರುಚುವಿಕೆ ಹಿಂದೆ ಕೆಲವು ವಕೀಲರ ಕೈವಾಡವೂ ಇರುವ ಅನುಮಾನಗಳಿದ್ದು ಈ ಕುರಿತು ಒಂದಷ್ಟು ಜನರ ಮೇಲೆ ಕಣ್ಗಾವಲು ಇಡಲಾಗಿದೆ. ವಾಣಿಜ್ಯೊದ್ಯಮಿಗಳು ಯಾವ ಹಂತಕ್ಕೆ ಇಳಿದಾದರೂ ತಮ್ಮನ್ನು ತಾವು ಉಳಿಸಿಕೊಳ್ಳುವ ಪ್ರಯತ್ನ ನಡೆಸಬಲ್ಲರು ಎಂಬುದಕ್ಕೆ ನ್ಯಾಯಾಂಗದಲ್ಲಿ ನಡೆದ ಈ ತಿರುಚುವಿಕೆ ಮತ್ತೊಂದು ಸಾಕ್ಷಿ.