samachara
www.samachara.com
ಐಎಎಸ್‌ ಅಧಿಕಾರಿಗಳ ಸರಳ ವಿವಾಹ: ಹೆಣ್ಣು ಮಕ್ಕಳ ಶಿಕ್ಷಣಕ್ಕಿಂತ ಮದುವೆ ವೆಚ್ಚ ಅಧಿಕವಾಗದಿರಲಿ...
COVER STORY

ಐಎಎಸ್‌ ಅಧಿಕಾರಿಗಳ ಸರಳ ವಿವಾಹ: ಹೆಣ್ಣು ಮಕ್ಕಳ ಶಿಕ್ಷಣಕ್ಕಿಂತ ಮದುವೆ ವೆಚ್ಚ ಅಧಿಕವಾಗದಿರಲಿ...

2011-12ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಮದುವೆಗೆಂದೆ ಖರ್ಚು ಮಾಡಲಾಗುವ ಹಣದ ಪ್ರಮಾಣ ಬರೋಬ್ಬರಿ 1 ಲಕ್ಷ ಕೋಟಿ ರೂ.. ಕೇವಲ ಊಟ ಉಪಚಾರಕ್ಕಾಗಿಯೇ 35,000 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. 

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

‘ಪ್ರೇಮಿಗಳ ದಿನ’ದಂದು ನಡೆದಿರುವ ಐಎಎಸ್‌ ಅಧಿಕಾರಿಗಳಿಬ್ಬರ ಮದುವೆ ಸಹಜವಾಗಿಯೇ ರಾಜ್ಯದಲ್ಲಿ ಸುದ್ದಿಗೆ ಗ್ರಾಸವಾಗಿದೆ. ದಾವಣಗೆರೆಯ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಸಿಇಓ ಸಿ.ಅಶ್ವತಿ ಇಂದು ಕೇರಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಜೋಡಿಗಳು ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರು ದಾವಣಗೆರೆಯಲ್ಲಿ ಒಟ್ಟಿಗೆ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಹೀಗಾಗಿ ಫೆಬ್ರವರಿ 1 ರಂದು ಇವರು ಮದುವೆ ಆಮಂತ್ರಣ ಪತ್ರಿಕೆ ನೀಡಿದಾಗ ಸ್ವತಃ ಜಿಲ್ಲಾಧಿಕಾರಿ, ಸಿಇಒ ಕಚೇರಿ ಸಿಬ್ಬಂದಿಗಳೇ ತಬ್ಬಿಬ್ಬಾಗಿದ್ದರು.

ಹೀಗೆ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸಿ ವ್ಯಾಲೆಂಟೈನ್‌ ಡೇ ದಿನ ವಧುವಿನ ಸ್ವಂತ ಊರಾದ ಕೇರಳದ ಕೋಯಿಕ್ಕೋಡ್‌ನಲ್ಲಿ ಬೆಳಗ್ಗೆ 10.30ಕ್ಕೆ ಈ ಜೋಡಿ ಸರಳ ವಿವಾಹವಾಗಿದ್ದಾರೆ. ಯಾವುದೇ ಆಡಂಬರವಿಲ್ಲದ ಈ ಮದುವೆ ಪ್ರಕ್ರಿಯೆ ಕೇವಲ 30 ನಿಮಿಷದಲ್ಲಿ ಮುಗಿದು ಹೋಗಿದೆ.

ಹೆಸರಿಗೆ ಐಎಎಸ್‌ ಅಧಿಕಾರಿಗಳಾದರೂ ಡಾ.ಬಗಾದಿ ಗೌತಮ್ ಮತ್ತು ಸಿ.ಅಶ್ವತಿಯವರೇನೋ ಸರಳವಾಗಿ ಮದುವೆಯಾಗಿದ್ದಾರೆ. ಆದರೆ ಭಾರತದ ಪರಿಸ್ಥಿತಿ ಹಾಗಿಲ್ಲ.

ಆಡಂಬರದ ಮದುವೆ ಎಂಬ ಪ್ರತಿಷ್ಠೆಯಲ್ಲಿ ದೇಶದ ಅರ್ಧಕರ್ಧ ಜನರು ನೆಮ್ಮದಿ ಕೆಡಿಸಿಕೊಂಡಿದ್ದಾರೆ. ಜತೆಗೆ ಹೆಣ್ಣಿನ ಶಿಕ್ಷಣಕ್ಕೆ ಖರ್ಚು ಮಾಡುವುದಕ್ಕಿಂತ ಹೆಚ್ಚು ಹಣವನ್ನು ಇಲ್ಲಿ ಆಕೆಯ ಮದುವೆಗೆ ವಿನಿಯೋಗಿಸಲಾಗುತ್ತಿದೆ. ಇದಿಷ್ಟೇ ಅಲ್ಲದೆ ವರದಕ್ಷಿಣೆ ಸಾವುಗಳಿಗೂ ಈ ದೇಶ ಸಾಕ್ಷಿಯಾಗುತ್ತಲೇ ಬಂದಿದೆ.

ಭಾರತದಲ್ಲಿ ಮದುವೆ ಖರ್ಚು

ಐಎಎಸ್‌ ಅಧಿಕಾರಿಗಳ ಸರಳ ವಿವಾಹ: ಹೆಣ್ಣು ಮಕ್ಕಳ ಶಿಕ್ಷಣಕ್ಕಿಂತ ಮದುವೆ ವೆಚ್ಚ ಅಧಿಕವಾಗದಿರಲಿ...

ವಿಶ್ವದಲ್ಲೇ ಮದುವೆಯನ್ನು ಅದ್ದೂರಿಯಾಗಿ ಆಚರಿಸುವ ದೇಶ ಭಾರತ. ಅನಿವಾರ್ಯತೆಗೋ, ಅವಶ್ಯಕತೆ ಇಲ್ಲದಕ್ಕೋ ಒಂದು ಕಾಲದಲ್ಲಿ ಭಾರತದಲ್ಲಿ ಮದುವೆಯನ್ನು ತುಂಬಾ ಸಾಧಾರಣವಾಗಿ ನೆರವೇರಿಸುತ್ತಿದ್ದ ದಿನಗಳು ಇದ್ದವು ಎನ್ನುತ್ತಾರೆ ಹಿರಿಯರು. ಅವತ್ತಿಗೆಲ್ಲಾ ಒಂದೇ ದಿನದಲ್ಲಿ ಮದುವೆ ಮಾಡಿ ಮುಗಿಸಲಾಗುತ್ತಿತ್ತಂತೆ. ಆದರೆ ಇಂದು ಮದುವೆಯೆಂಬುದು ಕನಿಷ್ಠ ಮೂರು ದಿನಗಳ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ. ಅದ್ಧೂರಿ ಮದುವೆಗಳು ತಮ್ಮ ಘನತೆಯನ್ನು ಹೆಚ್ಚಿಸುತ್ತವೆ ಎಂದು ಬಲವಾಗಿ ನಂಬಿದ ಸಮುದಾಯ ಇವತ್ತು ನಮ್ಮ ನಡುವೆ ಇದೆ.

ಮದುವೆ ಮಂಟಪ, ಮಂಟಪದ ಅಲಂಕಾರ, ಭೂರಿ ಭೋಜನ, ಆಡಂಬರದ ಉಡುಗೆ, ಚಿನ್ನ ಖರೀದಿ ಹೀಗೆ ಮದುವೆಯ ಹೆಸರಲ್ಲಿ ಭಾರತೀಯರು ಅಪಾರ ಹಣವನ್ನು ಪೋಲು ಮಾಡುತ್ತಿದ್ದಾರೆ ಎನ್ನುತ್ತಿವೆ ಕೆಲವು ಸಮೀಕ್ಷೆಗಳು.

2011-12ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ ಮದುವೆಗೆಂದೆ ಖರ್ಚು ಮಾಡಲಾಗುವ ಹಣದ ಪ್ರಮಾಣ ಬರೋಬ್ಬರಿ 1 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಊಟೋಪಚಾರಕ್ಕಾಗಿಯೇ ಖರ್ಚಾಗುವ ಹಣ 35,000 ಕೋಟಿ ರೂಪಾಯಿ ಎನ್ನುತ್ತಿದೆ ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆ.

ಈ ಸಮೀಕ್ಷೆ ಪ್ರಕಾರ ಭಾರತದಲ್ಲಿ ಮಧ್ಯಮ ವರ್ಗದ ಜನ ಮದುವೆಗಾಗಿ ಕನಿಷ್ಟ 5 ರಿಂದ 10 ಲಕ್ಷ ವ್ಯಯಿಸುತ್ತಿದ್ದಾರೆ. ಮೇಲ್ಮಧ್ಯಮ ವರ್ಗದವರು ಕನಿಷ್ಠ 25 ಲಕ್ಷದವರೆಗೆ ಖರ್ಚು ಮಾಡಿದರೆ, ಶ್ರೀಮಂತರ ಮದುವೆಗಳಲ್ಲಿ ಕೋಟಿಗಳ ಲೆಕ್ಕದಲ್ಲಿ ಹಣ ಚೆಲ್ಲಲಾಗುತ್ತದೆ.

ಮಹಿಳೆಯರ ಶಿಕ್ಷಣಕ್ಕಿಂತ ಮದುವೆಗೆ ಹೆಚ್ಚು ವೆಚ್ಚ

ಆದರೆ ಮದುವೆಗೆ ತೋರುವ ಈ ಕಾಳಜಿಯನ್ನು ಭಾರತೀಯರು ಅದೇ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ತೋರುತ್ತಿಲ್ಲ. ಉದಾಹರಣೆಗೆ ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅವರ ಮದುವೆಗೆ ಖರ್ಚು ಮಾಡುವಷ್ಟು ಹಣವನ್ನೂ ವ್ಯಯಿಸುತ್ತಿಲ್ಲ.

ನಮ್ಮ ಸಮಾಜದಲ್ಲಿ ಕುಟುಂಬದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆಗೆ ತನ್ನ ಜೀವಮಾನದ ದುಡಿಮೆಯ ಶೇ.60 ರಷ್ಟು ಹಣವನ್ನು ವ್ಯಯಿಸುತ್ತಿದ್ದಾನೆ. ಅದೇ ವ್ಯಕ್ತಿ ಮದುವೆಗೆ ಖರ್ಚು ಮಾಡಿದ ಶೇ.18ರಷ್ಟು ಹಣವನ್ನಷ್ಟೇ ಆಕೆಯ ಶಿಕ್ಷಣಕ್ಕೆ ಖರ್ಚು ಮಾಡಲು ಮುಂದಾಗುತ್ತಿದ್ದಾನೆ. ಪರಿಣಾಮ ಹೆಣ್ಣು ಮಕ್ಕಳ ದೊಡ್ಡ ಸಮೂಹವೊಂದು ಈಗಲೂ ಶಿಕ್ಷಣದಿಂದ ವಂಚಿತವಾಗಿದೆ ಅಥವಾ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿಲ್ಲ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಪುರುಷರ ಸಾಕ್ಷರತಾ ಪ್ರಮಾಣ ಶೇ.82.14 ರಷ್ಟಿದ್ದರೆ ಮಹಿಳೆಯರ ಶಿಕ್ಷಣ ಪ್ರಮಾಣ ಕೇವಲ ಶೇ.65.46 ಮಾತ್ರ. ಈ ಶೈಕ್ಷಣಿಕ ಹಿನ್ನೆಡೆ ಮತ್ತು ಸಾಮಾಜಿಕ ಅರಿವಿನ ಕೊರತೆ ಸಮಾಜದ ಇತರ ಹಲವು ಸಮಸ್ಯೆಗಳಿಗೆ ಮುನ್ನುಡಿಯಾಗುತ್ತಿದೆ.

ಎಲ್ಲಾ ಬದಲಾವಣೆಗಳಾಚೆಗೆ ‘ಹೆಣ್ಣು ಹೆತ್ತರೆ ದುಬಾರಿ’ ಎಂಬ ಮಾತು ಇಂದಿಗೂ ಚಾಲ್ತಿಯಲ್ಲಿದೆ. ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುವುದೇ ಒಂದು ಸಮಸ್ಯೆಯಾದರೆ, ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಹೆಣ್ಣು ಹೆತ್ತವರನ್ನು ಕಿತ್ತು ತಿನ್ನುತ್ತಿದೆ. ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತೀ ಗಂಟೆಗೆ ಒಂದು ಹೆಣ್ಣು ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪುತ್ತಿದ್ದಾಳೆ. ಏಷ್ಯನ್‌ ವುಮನ್ಸ್‌ ರೈಟ್ಸ್‌ ಕೌನ್ಸಿಲ್‌ 2009ರಲ್ಲಿ ನೀಡಿದ ವರದಿ ದೇಶದಲ್ಲಿ 15 ರಿಂದ 34 ವರ್ಷ ವಯಸ್ಸಿನ ಒಟ್ಟು 25,000 ಮಹಿಳೆಯರು ವರದಕ್ಷಿಣೆಗೆ ಬಲಿಯಾಗಿದ್ದಾರೆ ಎಂದು ತಿಳಿಸಿತ್ತು.

2012 ರಲ್ಲಿ ಒಂದೇ ವರ್ಷದಲ್ಲಿ ಸುಮಾರು 8,233 ಮಹಿಳೆಯರು ವರದಕ್ಷಿಣೆ ಗೆ ಬಲಿಯಾಗಿದ್ದಾರೆ ಎಂದು ಹೇಳುತ್ತದೆ ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ. ಇನ್ನು ಇದೇ ವರ್ಷ ಗಂಡ ಹಾಗೂ ಆತನ ಮನೆಯವರ ವಿರುದ್ಧ ದಾಖಲಾದ ಕುಟುಂಬ ಕಿರುಕುಳ ಪ್ರಕರಣಗಳ ಸಂಖ್ಯೆ 1,06,527. ಆದರೆ ಈ ಎಲ್ಲಾ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಮಾತ್ರ ಶೇ. 34.7 ಮಾತ್ರ. ಇದೂ ದಾಖಲಾದ ಪ್ರಕರಣಗಳಷ್ಟೆ. ಅನಕ್ಷರತೆ, ಕಟ್ಟುಪಾಡುಗಳು, ಸಾಮಾಜಿಕ ಬಂಧನಗಳ ಕಾರಣಕ್ಕೆ ದಾಖಲಾಗದೇ ಇರುವ ಪ್ರಕರಣಗಳೇ ಅಸಂಖ್ಯಾತ ಇವೆ.

ಈ ಸಂಕೀರ್ಣ ಕಾರಣಗಳಿಗೆ ಭಾರತದಲ್ಲಿ ಹುಟ್ಟುವ 100 ಹೆಣ್ಣು ಮಕ್ಕಳ ಪೈಕಿ 6 ಮಕ್ಕಳನ್ನು ಪೋಷಕರೇ ಕೊಲ್ಲುತ್ತಿದ್ದಾರೆ ಎಂಬ ಆಘಾತಕಾರಿ ಅಂಕಿ ಅಂಶಗಳನ್ನು ಸಮೀಕ್ಷೆಗಳು ನೀಡುತ್ತವೆ. ಇದರಾಚೆಗೆ ಉಳಿದುಕೊಂಡವರೂ ಬಾಲ್ಯ ವಿವಾಹ ದಂತಹ ನೀಚ ಪದ್ಧತಿಗಳಿಗೆ ಬಲಿಯಾಗುತ್ತಿದ್ದಾರೆ. ವರದಕ್ಷಿಣೆಯ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ.

ಇದಕ್ಕೆಲ್ಲಾ ಇರುವ ಸುಲಭ ಪರಿಹಾರಗಳಲ್ಲಿ ಸರಳ ವಿವಾಹವೂ ಒಂದು. ಐಎಎಸ್‌ ಜೋಡಿಗಳ ಮದುವೆ ನೆಪದಲ್ಲಾದರೂ ಇದನ್ನಿವತ್ತು ನೆನೆಸಿಕೊಳ್ಳಬೇಕಿದೆ. ವಿವಾಹದಾಚೆಗಿನ ಮಹಿಳೆಯರ ಬದುಕಿನ ಶೈಕ್ಷಣಿಕ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ.