samachara
www.samachara.com
ತಮಿಳುನಾಡಿನ ಹೋರಾಟದ ಕಣದಲ್ಲಿ ‘ಮೋದಿ ಎಂಬ ಖಳನಾಯಕ’ ಸೃಷ್ಟಿಯಾದ ಕತೆ...
COVER STORY

ತಮಿಳುನಾಡಿನ ಹೋರಾಟದ ಕಣದಲ್ಲಿ ‘ಮೋದಿ ಎಂಬ ಖಳನಾಯಕ’ ಸೃಷ್ಟಿಯಾದ ಕತೆ...

ಈ ರಾಜ್ಯದಲ್ಲಿ ಮಾತ್ರ ಮೋದಿ ಬಂದರೆ ಸಾಕು ಕಪ್ಪು ಬಾವುಟ ಹಿಡಿದು ಜನ ರಸ್ತೆಯಲ್ಲೆ ಹೋರಾಟಕ್ಕೆ ನಿಂತು ಬಿಡುತ್ತಾರೆ. ಆ ರಾಜ್ಯ ಬೇರೆ ಯಾವುದೂ ಅಲ್ಲ ಕರ್ನಾಟಕದ ಪಕ್ಕದಲ್ಲಿಯೇ ಇರುವ ತಮಿಳುನಾಡು. ಯಾಕೆ ಹೀಗೆ?

Team Samachara

ಪ್ರಧಾನಿ ನರೇಂದ್ರ ಮೋದಿ ಭಾರತದ ಜನಪ್ರಿಯ ನಾಯಕ. ಬಿಜೆಪಿ ಸ್ಟಾರ್ ಕ್ಯಾಂಪೈನರ್. ಇಡೀ ರಾಷ್ಟ್ರದಲ್ಲಿ ಎಲ್ಲಿಗೆ ಹೋದರೂ ಅವರಿಗೆ ಮಾತ್ರ ಅದ್ದೂರಿ ಸ್ವಾಗತ ಖಚಿತ. ಆದರೆ ಈ ರಾಜ್ಯದಲ್ಲಿ ಮಾತ್ರ ಮೋದಿ ಬಂದರೆ ಸಾಕು ಕಪ್ಪು ಬಾವುಟ ಹಿಡಿದು ಜನ ರಸ್ತೆಯಲ್ಲೆ ಹೋರಾಟಕ್ಕೆ ನಿಂತು ಬಿಡುತ್ತಾರೆ. ಮೋದಿ ಹೋದಲ್ಲಿ ಬಂದಲ್ಲೆಲ್ಲಾ ಕೆಟ್ಟ ಕನಸಂತೆ ಕಾಡುತ್ತಿದ್ದಾರೆ. ಆ ರಾಜ್ಯ ಬೇರೆ ಯಾವುದೂ ಅಲ್ಲ ಕರ್ನಾಟಕದ ಪಕ್ಕದಲ್ಲಿಯೇ ಇರುವ ತಮಿಳುನಾಡು.

ಯಾಕೆ ಹೀಗೆ? ಈ ಕುರಿತು ‘ಬಿಬಿಸಿ ತಮಿಳು’ ವೆಬ್‌ಸೈಟ್‌ ಪ್ರಕಟಿಸಿದ ವಿಶ್ಲೇಷಣಾತ್ಮಕ ವರದಿಯ ಕನ್ನಡಾನುವಾದ ಇಲ್ಲಿದೆ.

ತಮಿಳುನಾಡಿನಲ್ಲಿ ಕಪ್ಪು ಬಾವುಟಗಳ ಕಾರುಬಾರು ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳಲ್ಲಂತೂ ನೆಟ್ಟಿಗರು ಮೋದಿಯನ್ನು ಪದೇ ಪದೇ ಅವಮಾನಕ್ಕೀಡು ಮಾಡುತ್ತಿದ್ದಾರೆ. ಮೋದಿ ಬಗೆಗಿನ ಈ ವಿರೋಧ ಹಾಗೂ ಕಪ್ಪು ಬಾವುಟ ಹೋರಾಟ ನಿಜಕ್ಕೂ ತಮಿಳು ಜನರ ಮನಸ್ಥಿಯನ್ನ, ಮೋದಿ ವಿರುದ್ಧದ ಅವರ ಆಕ್ರೋಶವನ್ನ ಪ್ರತಿಫಲಿಸುತ್ತಿದೆಯೇ..? ಹೀಗೊಂದು ಪ್ರಶ್ನೆ ಕಳೆದ ಒಂದು ವರ್ಷದಿಂದ ಸ್ವತಃ ಬಿಜೆಪಿಯ ಒಳಗೆ ಎದ್ದಿದೆ. ಅದಕ್ಕೆ ಕಾರಣಗಳು ಇಲ್ಲದೆ ಏನಿಲ್ಲ.

ಫೆಬ್ರವರಿ10 2019 ರಂದು ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಹಲವಾರು ಸರಕಾರಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಆಗಮಿಸಿದ್ದರು. ಕಳೆದ ಒಂದು ವರ್ಷದಲ್ಲಿ ಅವರು ತಮಿಳುನಾಡಿಗೆ ಭೇಟಿ ನೀಡುತ್ತಿರುವುದು ಇದು ಮೂರನೇ ಬಾರಿ. ಆದರೆ ಈ ಬಾರಿಯೂ ಮೋದಿಗೆ ಮುಖಭಂಗ ಅನುಭವಿಸುವುದು ಮಾತ್ರ ತಪ್ಪಲಿಲ್ಲ.

ತಮಿಳುನಾಡಿಗೆ ಮೋದಿ ಅಗಮನವನ್ನು ಖಂಡಿಸಿ ಪ್ರತಿಭಟಿಸುತ್ತಿರುವ ತಮಿಳುನಾಡು ವಿರೋಧ ಪಕ್ಷಗಳು.
ತಮಿಳುನಾಡಿಗೆ ಮೋದಿ ಅಗಮನವನ್ನು ಖಂಡಿಸಿ ಪ್ರತಿಭಟಿಸುತ್ತಿರುವ ತಮಿಳುನಾಡು ವಿರೋಧ ಪಕ್ಷಗಳು.
/ಬಿಬಿಸಿ

ಒಂದೆಡೆ ಮೋದಿ ಸರಕಾರಿ ಯೋಜನೆಗಳನ್ನು ಉದ್ಘಾಟಿಸುತ್ತಿದ್ದರೆ, ಮತ್ತೊಂದೆಡೆ 'ಮರುಮಲರ್ಚಿ ದ್ರಾವಿಡ ಮುನ್ನೇಟ್ರ ಕಳಗಂ’ ಪಕ್ಷದ ಅಧ್ಯಕ್ಷ, ತಮಿಳುನಾಡಿನ ಪ್ರಬಲ ರಾಜಕೀಯ ನಾಯಕ ವೈಕೋ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಮೋದಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ #gobackmodi ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗುವಂತೆ ನೋಡಿಕೊಂಡರು. ಅಂದು ಸರಕಾರಿ ಸಭೆಯಲ್ಲಿ ಮೋದಿ ಆಡಿದ ಮಾತುಗಳಿಗಿಂತ ಈ ಹೋರಾಟವೇ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಮೋದಿ ಎಲ್ಲೆ ಹೋದರು ರೋಡ್ ಶೋ ಮಾಡುವುದು ವಾಡಿಕೆ. ಆದರೆ ತಮಿಳರು ಎಂದಿಗೂ ಇದಕ್ಕೆ ಅವಕಾಶ ಕೊಟ್ಟಿಲ್ಲ. ಎಂದಿನಂತೆ ಈ ಬಾರಿಯೂ ಮೋದಿ ಓಡಾಡುವ ಎಲ್ಲಾ ರಸ್ತೆಗಳಲ್ಲೂ ತಮಿಳರು ಕಪ್ಪು ಬಾವುಟ ಪ್ರದರ್ಶಿಸಿ ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ಧವಾಗಿದ್ದರು. ಇದನ್ನರಿತ ಪ್ರಧಾನಿ ಬೆಂಗಾವಲು ಪಡೆ ಚೆನ್ನೈ ವಿಮಾನ ನಿಲ್ದಾಣದಿಂದ ಮೋದಿಯನ್ನು ನೇರವಾಗಿ ಹೆಲಿಕಾಪ್ಟರ್‌ ಮೂಲಕ ಸಭೆಗೆ ಕರೆತಂದಿತ್ತು. ಅಲ್ಲದೆ ಪ್ರಧಾನಿ ಹೋಗಬೇಕಿದ್ದ ಎಲ್ಲಾ ಜಾಗಗಳಿಗೂ ಅವರನ್ನು ಹೆಲಿಕಾಪ್ಟರ್ ಮೂಲಕವೇ ಕರೆದೊಯ್ಯಲಾಗಿತ್ತು. ಆದರೂ ತಮಿಳರು ಕಪ್ಪು ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಹಾಗಂತ ಮೋದಿ ವಿರುದ್ಧ ತಮಿಳರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2018 ಏಪ್ರಿಲ್ 12 ರಂದು ರಾಜಧಾನಿ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ರಕ್ಷಣಾ ಇಲಾಖೆಗೆ ಸಂಬಂಧಪಟ್ಟ ವಸ್ತು ಪ್ರದರ್ಶನ 'ಡಿಫೆನ್ಸ್ ಎಕ್ಸ್‌ಪೋ-2018' ಕಾರ್ಯಕ್ರಮವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ತಮಿಳುನಾಡಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ತಮಿಳುನಾಡಿನ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಮೋದಿ ಹೋದಲ್ಲಿ ಬಂದಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶಿಸಿ ಕೇಂದ್ರ ಸರಕಾರಕ್ಕೆ ಇರುಸು ಮುರುಸು ಉಂಟಾಗುವಂತೆ ಮಾಡಿದ್ದರು.

2018ರಲ್ಲಿಯೇ ಮೋದಿ ಸಂಚರಿಸುವ ದಾರಿಯಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ್ದ ಮಹಿಳೆಯರು. 
2018ರಲ್ಲಿಯೇ ಮೋದಿ ಸಂಚರಿಸುವ ದಾರಿಯಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟಿಸಿದ್ದ ಮಹಿಳೆಯರು. 
/ಬಿಬಿಸಿ

ಇದಾಗಿ ಸರಿಯಾಗಿ 10 ತಿಂಗಳ ನಂತರ ಜನವರಿ 27, 2019 ರಂದು ಮಧುರೈ ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆ ಶಂಕುಸ್ಥಾನಪನೆಗಾಗಿ ಪ್ರಧಾನಿ ತಮಿಳರ ನಾಡಿಗೆ ಬಂದಿದ್ದರು. ಆಗಲೂ ಸಹ ತಮಿಳರು ಮೋದಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಹೋರಾಟ ನಡೆಸಿದ್ದರು. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ #gobackmodi ಹ್ಯಾಷ್‌ಟ್ಯಾಗ್ ಕ್ರಿಯೇಟ್ ಮಾಡುವ ಮೂಲಕ ಮೋದಿಗೆ ರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗುವಂತೆ ಮಾಡಿದ್ದರು.

ತಮಿಳುನಾಡಿನ ಕೆಲವು ಇತಿಹಾಸ ತಜ್ಞರು ಮೋದಿ ವಿರುದ್ಧದ ತಮಿಳರ ಈ ಹೋರಾಟವನ್ನು ಜಾನ್ ಸೈಮನ್ ಕಮಿಷನ್ ವಿರುದ್ಧ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರು ನಡೆಸಿದ ‘simon go back’ ಹೋರಾಟಕ್ಕೆ ಹೋಲಿಸಿದ್ದಾರೆ.

ಪ್ರಸ್ತುತ #go back modi ಹ್ಯಾಷ್‌ಟ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದ್ದು ಭಾರತ ಮಾತ್ರವಲ್ಲ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇದು ಬಿಜೆಪಿ ನಾಯಕರ ಪಾಲಿಗಂತು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಿಂದೆ ಯಾವ ಪ್ರಧಾನಿಗೂ ಇಲ್ಲದಷ್ಟು ವಿರೋಧ ಯಾಕೆ ಎದ್ದಿದೆ ಎಂಬುದಕ್ಕೆ ಇತ್ತೀಚಿನ ಕೆಲವು ಬೆಳವಣಿಗೆಗಳು ಕಾರಣವಾಗಿವೆ.

1. ಜಲ್ಲಿಕಟ್ಟು ಸೃಷ್ಟಿಸಿದ ಬಿಕ್ಕಟ್ಟು

ಮೆರೀನಾ ಬೀಚ್‌ನಲ್ಲಿ ನಡೆದ ಜಲ್ಲಿಕಟ್ಟು ಹೋರಾಟ.
ಮೆರೀನಾ ಬೀಚ್‌ನಲ್ಲಿ ನಡೆದ ಜಲ್ಲಿಕಟ್ಟು ಹೋರಾಟ.
/ದಿನಮಲ್ಲರ್

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮಿಳರ ಆಕ್ರೋಶ ಭುಗಿಲೇಳಲು ಮೊದಲ ಕಾರಣ 'ಜಲ್ಲಿಕಟ್ಟು' ನಿಷೇಧ ತೀರ್ಮಾನ. ಸಂಕ್ರಾಂತಿ ಹಬ್ಬದ ದಿನ ಆಚರಿಸಲಾಗುವ 'ಜಲ್ಲಿಕಟ್ಟು' ತಮಿಳರ ಸಂಸ್ಕೃತಿಯ ಒಂದು ಭಾಗ. ಅದರೆ 2017 ರಂದು ದಿಢೀರೆಂದು ಜಲ್ಲಿಕಟ್ಟು ಆಚರಣೆಯನ್ನು ನಿಷೇಧಿಸಲಾಗಿತ್ತು. ಈ ಆಚರಣೆಯ ನಿಷೇಧದ ಹಿಂದೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಕೈವಾಡ ಎಷ್ಟರ ಮಟ್ಟಿಗಿದೆಯೊ ಗೊತ್ತಿಲ್ಲ. ಆದರೆ ಆ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ನಾಯಕರು ನೀಡಿದ ತದ್ವಿರುದ್ಧ ಹೇಳಿಕೆಗಳು ಮಾತ್ರ ತಮಿಳರ ಆಕ್ರೋಶವನ್ನು ಮೋದಿ ವಿರುದ್ಧ ತಿರುಗಿಸಿತ್ತು.

ಬಿಜೆಪಿ ದ್ರಾವಿಡ ಹಾಗೂ ತಮಿಳು ಸಂಸ್ಕೃತಿ ಸಂಪ್ರದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂಬ ವ್ಯಾಪಕ ವಿಮರ್ಶೆಗಳನ್ನು ಈ ಪಕ್ಷ ಎದುರಿಸಬೇಕಾಯಿತು. ಇಡೀ ರಾಜ್ಯದ ಯುವಕರು ಹಾಗೂ ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಚೆನ್ನೈನ ವಿಶ್ವ ವಿಖ್ಯಾತ ಮೆರಿನಾ ಕಡಲ ಕಿನಾರೆಯಲ್ಲಿ ಆರಂಭಿಸಿದ ಜಲ್ಲಿಕಟ್ಟು ಹೋರಾಟ, ತಮಿಳರ ಸಂಪ್ರದಾಯದ ಉಳಿವಿನ ಹೋರಾಟ ಎಂಬುದಕ್ಕಿಂತ ಹೆಚ್ಚಾಗಿ ಮೋದಿ ಹಾಗೂ ಬಿಜೆಪಿ ಎದುರಿನ ಹೋರಾಟ ಎಂದೇ ಬಿಂಬಿಸಲಾಗಿತ್ತು.

2. ಕಾವೇರಿಯ ಕಾವು

ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಹಾಗೂ ಕೇರಳ ರಾಜ್ಯಗಳ ಜೀವನದಿ ಕಾವೇರಿ. ಕಳೆದ ಎಂಟು ದಶಕಗಳಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ವ್ಯಾಜ್ಯವಿದೆ. ಕಾವೇರಿ ವ್ಯಾಜ್ಯ ಎರಡೂ ರಾಜ್ಯಗಳಲ್ಲಿ ಅನೇಕ ಬಾರಿ ಸಾಕಷ್ಟು ಹಿಂಸಾಚಾರಗಳನ್ನು ಸೃಷ್ಟಿಸಿದೆ. 2016ರಲ್ಲಿ ಉಂಟಾದ ಹಿಂಸಾಚಾರ ರಾಷ್ಟ್ರಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು.

ಈ ವಿವಾದದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್ 2018 ಮಾರ್ಚ್ ತಿಂಗಳ ಒಳಗಾಗಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಸ್ಥಾಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಆದರೆ ಕೇಂದ್ರ ಸರಕಾರ ಈವರೆಗೆ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸಿಲ್ಲ. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಇದ್ದ ಕಾರಣಕ್ಕೆ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿಯೇ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸದೆ ತಮಿಳುನಾಡಿಗೆ ದ್ರೋಹ ಬಗೆದಿದೆ ಎಂಬುದು ತಮಿಳರ ನೇರ ಆರೋಪ.

3. ನೀಟ್ ಪರೀಕ್ಷೆಗೆ ತಕರಾರು

ನೀಟ್ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವುದು.
ನೀಟ್ ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವುದು.

ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳ ರಾಜ್ಯ ಮಟ್ಟದಲ್ಲಿ ಸಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವೈದ್ಯಕೀಯ ಸೇರಿದಂತೆ ತಮಗೆ ಇಷ್ಟವಾದ ಶಿಕ್ಷಣ ಪಡೆಯುವುದು ವಾಡಿಕೆ. ಆದರೆ ಕಳೆದ ವರ್ಷ ಕೇಂದ್ರ ಸರಕಾರ "ಎನ್‌ಇಇಟಿ" (ನೀಟ್) ಪರೀಕ್ಷೆಯನ್ನು ಪರಿಚಯಿಸಿತ್ತು. ಅಲ್ಲದೆ ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಚಿಸುವ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಈ ಪರೀಕ್ಷೆಯಲ್ಲಿ ಪಾಸಾಗಲೇಬೇಕು ಎಂಬ ನಿಯಮವನ್ನು ಜಾರಿಗೆ ತಂದಿತ್ತು.

ಕೇಂದ್ರ ಸರಕಾರದ ಈ ನಡೆ ಗ್ರಾಮೀಣ ಭಾಗದಲ್ಲಿ ಓದುವ ವಿದ್ಯಾರ್ಥಿಗಳ ಪಾಲಿಗೆ ಮರಣ ಶಾಸನ ಎಂದು ವಿರೋಧಿಸಿ ತಮಿಳುನಾಡಿನ ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಪಕ್ಷಗಳು ಬೀದಿಗೆ ಇಳಿದು ಹೋರಾಟ ನಡೆಸಿದ್ದವು. ಅನಿತಾ ಎಂಬ ದಲಿತ ವಿದ್ಯಾರ್ಥಿನಿ ಕೇಂದ್ರ ಸರಕಾರದ ಈ ನೀತಿಯ ವಿರುದ್ಧ ಸುಪ್ರೀಂ ಮೆಟ್ಟಿಲೇರಿ ಕೊನೆಗೆ ಸೋತು ಆತ್ಮಹತ್ಯೆಗೆ ಶರಣಾಗಿದ್ದಳು. ಈಕೆಯ ಸಾವಿನ ನಂತರ ನೀಟ್ ಪರೀಕ್ಷೆಯ ಹೋರಾಟ ಮತ್ತೊಂದು ಆಯಾಮಕ್ಕೆ ಹೊರಳಿತು. ಈಗಲೂ ಆಕೆಯ ಸಾವಿಗೆ ನರೇಂದ್ರ ಮೋದಿಯೇ ಕಾರಣ ಎಂಬುದು ತಮಿಳರ ಆರೋಪ.

4. ರೈತರ ಹೋರಟಕ್ಕೆ ಕ್ಯಾರೆ ಎನ್ನದ ಮೋದಿ

ಮೋದಿ ವಿರುದ್ಧ ತಮಿಳುನಾಡಿನ ರೈತರ ಪ್ರತಿಭಟನೆ.
ಮೋದಿ ವಿರುದ್ಧ ತಮಿಳುನಾಡಿನ ರೈತರ ಪ್ರತಿಭಟನೆ.

ಕಳೆದ ವರ್ಷ ತಮಿಳುನಾಡಿನ ಕಾವೇರಿ ಡೆಲ್ಟಾ ಸೇರಿದಂತೆ ವಿವಿಧ ಜಿಲ್ಲೆಗಳಿಂದ ದೆಹಲಿಗೆ ಆಗಮಿಸಿದ್ದ ಸಾವಿರಾರು ರೈತರು ಕೇಂದ್ರ ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಬೇಕು ಎಂದು ಒತ್ತಾಯಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಕೆಲವರು ಸಾಲದ ಭೀತಿಗೆ ಆತ್ಮಹತ್ಯೆ ಮಾಡಿಕೊಂಡ ರೈತರ ತಲೆಬುರುಡೆಗಳನ್ನು ತಂದಿದ್ದು ದೇಶದ ಗಮನ ಸೆಳೆದಿತ್ತು.

ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎಂದಿರಲಿಲ್ಲ. ನೆಪಮಾತ್ರಕ್ಕಾದರೂ ರೈತರ ಸಮಸ್ಯೆಗಳನ್ನು ಆಲಿಸಲು ಮುಂದಾಗಿರಲಿಲ್ಲ. ಇದು ಸ್ವಾಭಾವಿಕವಾಗಿ ತಮಿಳರ ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿತ್ತು.

ತೂತುಕುಡಿ ಜಿಲ್ಲೆಯ ಸ್ಟೆರ್ಲೈಟ್ ಕೈಗಾರಿಕೆಯ ಎದುರಿನ ಪ್ರತಿಭಟನೆ.
ತೂತುಕುಡಿ ಜಿಲ್ಲೆಯ ಸ್ಟೆರ್ಲೈಟ್ ಕೈಗಾರಿಕೆಯ ಎದುರಿನ ಪ್ರತಿಭಟನೆ.
/ಇಂಡಿಯನ್‌ ಎಕ್ಸ್‌ಪ್ರೆಸ್‌. 

5. ಬಗೆಹರಿಯದ ಸ್ಟೆರ್ಲೈಟ್

ತಮಿಳುನಾಡಿನ ಕರಾವಳಿ ಪ್ರದೇಶವಾದ ತೂತುಕುಡಿ ಜಿಲ್ಲೆಯಲ್ಲಿ ಆರಂಭವಾಗಿರುವ ತಾಮ್ರವನ್ನು ಕರಗಿಸುವ ಸ್ಟೆರ್ಲೈಟ್ ಕಂಪೆನಿ ಸುತ್ತಲ ಪರಿಸರವನ್ನು ನಾಶ ಮಾಡುತ್ತಿದೆ. ಇಲ್ಲಿಂದ ಹೊರಡುವ ವಿಷ ಅನಿಲಗಳು ವಾಯುಮಾಲಿನ್ಯಕ್ಕೆ ಕಾರಣವಾಗಲಿದ್ದು, ಜನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಈ ಕೈಗಾರಿಕೆಯನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಆಡಳಿತರೂಢ ಎಐಎಡಿಎಂಕೆ ಹಾಗೂ ಕೇಂದ್ರ ಸರಕಾರದ ವಿರುದ್ಧ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರು ಹಾಗೂ ಪರಿಸರವಾದಿಗಳು ಹೋರಾಟ ನಡೆಸುತ್ತಿದ್ದಾರೆ.

ಅದರೆ ತಮಿಳರ ಈ ಹೋರಾಟವನ್ನು ಹತ್ತಿಕ್ಕುವಲ್ಲಿ ಆಡಳಿತರೂಢ ಎಐಎಡಿಎಂಕೆ ಪಕ್ಷ ಬಿಜೆಪಿ ಆಣತಿ ಮೇರೆಗೆ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಅಲ್ಲದೆ ಈ ಹೋರಾಟದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಸುಮಾರು 13 ಜನ ಸಾವನ್ನಪ್ಪಿದ್ದರು. ಇದು ಸ್ವಾಭಾವಿಕವಾಗಿ ಸ್ಥಳೀಯ ಆಡಳಿತ ಪಕ್ಷದ ಮೇಲೆ ಆಕ್ರೋಶ ಹೆಚ್ಚಾಗಲು ಕಾರಣವಾಗಿತ್ತು. ಆದರೆ ಇಂತಹ ಸಂದರ್ಭದಲ್ಲೂ ತಮಿಳುನಾಡಿನ ಬಿಜೆಪಿ ನಾಯಕರು ಈ ಹೋರಾಟದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ತಮಿಳರ ಶಾಶ್ವತ ಆಕ್ರೋಶಕ್ಕೆ ಗುರಿಯಾದರು.

ಇದಲ್ಲದೆ ಕಾವೇರಿ ಡೆಲ್ಟಾ ಭಾಗಗಳಲ್ಲಿ ಮಿಥೇನ್ ಹಾಗೂ ಹೈಡ್ರೋ ಕಾರ್ಬನ್ ತೆಗೆಯುವ ಕೇಂದ್ರ ಸರಕಾರದ ಯೋಜನೆಗಳ ವಿರುದ್ಧವೂ ತಮಿಳುನಾಡಿನಲ್ಲಿ ವ್ಯಾಪಕ ಹೋರಾಟಗಳು ಪ್ರತಿದಿನ ನಡೆಯುತ್ತಲೇ ಇವೆ.

ಕಳೆದ ಮೂರು ವರ್ಷಗಳಿಂದ ತಮಿಳುನಾಡು ಎಂಬುದು ಸತತ ಹೋರಾಟದ ಕಣವಾಗಿ ಬದಲಾಗಿದೆ. ಆದರೆ ಈ ಎಲ್ಲಾ ಹೋರಾಟಗಳು ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧದ ಹೋರಾಟ ಎಂಬುದು ಉಲ್ಲೇಖಾರ್ಹ. ಈ ಎಲ್ಲಾ ಹೋರಾಟಗಳ ಮೂಲಕ ಮೋದಿ ಎಂಬ ಮುಖ ತಮಿಳರ ಪಾಲಿಗಂತು ಮರೆಯಲಾಗದ ಶಾಶ್ವತ ಖಳನಾಯಕನದ್ದಾಗಿದೆ.

ತಮಿಳುನಾಡಿನಲ್ಲಿ ಬಿಜೆಪಿಗೆ ನೆಲೆಯಿಲ್ಲ. ಹಿಂದುತ್ವವಾದಿ ಪಕ್ಷ ಎಂಬ ಮುಖವಾಡ ಹೊತ್ತಿರುವ ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಹ ಯಾವ ಪಕ್ಷಗಳು ಮುಂದಾಗುತ್ತಿಲ್ಲ. ಚಿತ್ರ ನಟರಿಗೆ ಗಾಳ ಹಾಕುವ ಬಿಜೆಪಿ ಯೋಜನೆಯೂ ಫಲಿಸಲಿಲ್ಲ.

ಕಳೆದ ಬಾರಿ ಕನ್ಯಾಕುಮಾರಿ ಎಂಬ ಏಕೈಕ ಕ್ಷೇತ್ರದಲ್ಲಿ ಸ್ಪರ್ಧಿಸಿ ಹೀನಾಯ ಸೋಲನುಭವಿಸಿದ್ದ ಬಿಜೆಪಿ, ಈ ಬಾರಿಯ ಲೋಕಸಭೆಯಲ್ಲಿ ಕನಿಷ್ಟ ಇಬ್ಬರನ್ನು ಸಂಸದರನ್ನಾಗಿ ಗೆಲ್ಲಿಸಿಕೊಳ್ಳುವ ಗುರಿ ಹೊಂದಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಾಚರಣೆಗಳನ್ನೂ ಆರಂಭಿಸಿದೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಮೋದಿ ವಿರುದ್ಧ ತಮಿಳರು ವ್ಯಕ್ತಪಡಿಸುತ್ತಿರುವ ಈ ಪರಿಯ ಆಕ್ರೋಶ ಬಿಜೆಪಿಗೆ ತಮಿಳುನಾಡಿನಲ್ಲಿ ನೆಲೆ ಇಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.

ಕೃಪೆ: ಬಿಬಿಸಿ ತಮಿಳು.