samachara
www.samachara.com
ಬೀದಿಗೆ ಬಂದ ಆಡಿಯೋ ರಂಪಾಟ: ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ಬೀಸಿದ್ಯಾಕೆ?
COVER STORY

ಬೀದಿಗೆ ಬಂದ ಆಡಿಯೋ ರಂಪಾಟ: ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ಬೀಸಿದ್ಯಾಕೆ?

ಈ ಹಿಂದೆ ಹಾಸನದಲ್ಲಿ ಹಲವು ಬಾರಿ ಪ್ರಜ್ವಲ್‌ ರೇವಣ್ಣ ಮತ್ತು ಪ್ರೀತಂ ಗೌಡ ಬೆಂಬಲಿಗರ ನಡುವೆ ಬೀದಿ ರಂಪಾಟಗಳು ನಡೆದಿತ್ತು. ಪ್ರಜ್ವಲ್ ರೇವಣ್ಣ ಸರಕಾರಿ ಕಾರಿನಲ್ಲಿ ಜಿಲ್ಲೆಯಲ್ಲಿ ಪ್ರಯಾಣಿಸಿದ್ದ ಕೂಡ ತಿಕ್ಕಾಟಕ್ಕೆ ಕಾರಣವಾಗಿತ್ತು. 

Team Samachara

ಸದನದ ಒಳಗೆ ಅಸಹ್ಯಕರ ಸನ್ನಿವೇಶ ಸೃಷ್ಟಿಸಿದ್ದ ಆಡಿಯೋ ಪ್ರಕರಣ ಇದೀಗ ಬೀದಿಗೆ ಬಂದು ನಿಂತಿದೆ. ಹಾಸನದಲ್ಲಿ ಜೆಡಿಎಸ್‌ ಕಾರ್ಯಕರ್ತರು ಎನ್ನಲಾದ ಒಂದಷ್ಟು ಮಂದಿ ಶಾಸಕ ಪ್ರೀತಂ ಗೌಡ ಮನೆಯ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ನಡುವೆ, ಕಿಡಿಗೇಡಿಯೊಬ್ಬ ಕಲ್ಲು ತೂರಿದ್ದಾನೆ. ಪ್ರೀತಂ ಗೌಡ ಹಾಸನ ಜಿಲ್ಲೆಯ ಏಕೈಕ ಬಿಜೆಪಿ ಶಾಸಕ. ಬುಧವಾರ ಬೆಳಗ್ಗೆ ಅಷ್ಟೆ ಅವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಕುರಿತು ಅನಪೇಕ್ಷಿತ ಹೇಳಿಕೆಗಳನ್ನು ನೀಡಿದ್ದ ಆಡಿಯೋ ಹೊರಬಿದ್ದಿತ್ತು.

ಮಾಧ್ಯಮಗಳಲ್ಲಿ ಹಾಸನದ ಜಿಲ್ಲೆಯ ಜೆಡಿಎಸ್‌ ರಾಜಕಾರಣ ಹಾಗೂ ಪಕ್ಷದ ಕಾರ್ಯಕರ್ತರ ಕುರಿತು ಪ್ರೀತಂ ಗೌಡ ಹೇಳಿಕೆ ಸ್ಥಳೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮ ಜೆಡಿಎಸ್‌ ಬೆಂಬಲಿಗರು ಶಾಸಕರ ಮನೆ ಮುಂದೆ ಪ್ರತಿಭಟನೆಗೆ ನಾಂದಿ ಹಾಡಿತು.

ಪ್ರೀತಂ ಗೌಡ ಮನೆಯ ಮುಂದೆ ಜೆಡಿಎಸ್‌ ಬೆಂಬಲಿಗರ ಪ್ರತಿಭಟನಾ ದಾಳಿ. 
ಪ್ರೀತಂ ಗೌಡ ಮನೆಯ ಮುಂದೆ ಜೆಡಿಎಸ್‌ ಬೆಂಬಲಿಗರ ಪ್ರತಿಭಟನಾ ದಾಳಿ. 

ಒಂದೆಡೆ ಎಸ್‌ಐಟಿ ಕುರಿತು ಚರ್ಚೆ, ಪ್ರತಿಭಟನೆ, ವಿಧೇಯಕಗಳ ಮಂಡನೆ ಮುಗಿಸಿ ಸದನವನ್ನು ಮುಂದೂಡಲಾಗಿತ್ತು. ಈ ಸಮಯದಲ್ಲಿ ಹಾಸನದಲ್ಲಿ ನಡೆದ ಪ್ರತಿಭಟನೆಯ ಸುದ್ದಿ ಬಂತು. ವಿಧಾನಸೌಧದಲ್ಲಿಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರೀತಂ ಗೌಡ, "ನಾನು ಹೇಡಿಯಲ್ಲ ಇದರ ವಿರುದ್ಧ ಹೋರಾಡುತ್ತೇನೆ," ಎಂದಿದ್ದಾರೆ. ಜತೆಗೆ ಮುಖ್ಯಮಂತ್ರಿಗಳ ಮೇಲೆ ಕೊಲೆ ಆರೋಪ ಮಾಡಿರುವ ಅವರು "ಸ್ಥಳದಲ್ಲಿದ್ದ ಜೆಡಿಎಸ್‌ ಕಾರ್ಯಕರ್ತರು, ‘ಪ್ರೀತಂ ಗೌಡ ಮತ್ತು ಅವರ ಕುಟುಂಬಸ್ಥರು ಕೊಲೆ ಮಾಡಿ. ನಾವು ನೋಡಿಕೊಳ್ಳುತ್ತೇವೆ’ ಎಂದು ಕುಮಾರಸ್ವಾಮಿ ಮತ್ತು ರೇವಣ್ಣ ಹೇಳಿದ್ದಾಗಿ ತಿಳಿಸಿದರು," ಎಂದಿದ್ದಾರೆ.

ಘಟನೆ ಬಗ್ಗೆ ನಾವು ಪೊಲೀಸರಿಗೆ ದೂರು ನೀಡಲಿದ್ದೇವೆ. ಮತ್ತು ಪಕ್ಷದ ನಾಯಕರು ಇದರ ಬಗ್ಗೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಪ್ರೀತಂ ಗೌಡ ಮಾಧ್ಯಮಗಳಿಗೆ ವಿವರ ನೀಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಬಿಜೆಪಿ ನಾಯಕ ಬಿ. ಶ್ರೀರಾಮುಲು, "ಪ್ರೀತಂ ಗೌಡ ಮನೆ ಮೇಲೆ ದಾಳಿ ಮಾಡಲು ಮುಖ್ಯಮಂತ್ರಿಗಳು ಗೂಂಡಾಗಳಿಗೆ ಕುಮ್ಮಕ್ಕು ನೀಡಿದ್ದಾರೆ," ಎಂದು ಆರೋಪಿಸಿದ್ದಾರೆ.

ಇಂದು ಬೆಳಿಗ್ಗೆಯಷ್ಟೇ ಆಪರೇಷನ್‌ ಕಮಲದ ಬಗೆಗಿನ ಆಡಿಯೋ ಸೋರಿಕೆಯಾಗಿತ್ತು. ಇದರಲ್ಲಿ ಪ್ರೀತಂ ಗೌಡ ಅವರ ಧ್ವನಿ ಇದೆ ಎನ್ನಲಾಗಿದ್ದು ಅದರಲ್ಲಿ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ತೀರಾ ಕೀಳು ಮಟ್ಟದ ಮಾತುಗಳನ್ನಾಡಿದ್ದರು. ಮೇಲ್ನೋಟಕ್ಕೆ ಆಡಿಯೋ ಮೇಲಿನ ಆಕ್ರೋಶ ಮನೆ ಮೇಲಿನ ದಾಳಿಗೆ ಕುಮ್ಮಕ್ಕು ನೀಡಿದಂತೆ ಕಾಣಿಸುತ್ತಿದೆ.

ಇದರ ಬಗ್ಗೆ ಮಾತನಾಡಿರುವು ಆಪರೇಷನ್‌ ಆಡಿಯೋದ ಕೇಂದ್ರ ಬಿಂದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, “ಮುಖ್ಯಮಂತ್ರಿ ಕುಮಾರಸ್ವಾಮಿ ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಕೆಲವು ಸಮಯದ ಹಿಂದೆ ಅವರು, ‘ಅಗತ್ಯ ಬಿದ್ದರೆ ನಾವು ನಮ್ಮ ಕಾರ್ಯಕರ್ತರನ್ನು ಹಾಸನದಲ್ಲಿ ಬೀದಿಗೆ ಇಳಿಸುತ್ತೇವೆ’ ಎಂದಿದ್ದರು. ಇದೀಗ ಅವರು ಕಾರ್ಯಕರ್ತರನ್ನು ಬೀದಿಗೆ ಇಳಿಸಿದ್ದಾರೆ. ಇದರಿಂದ ಏನಾದರೂ ಸಾಧಿಸಲಿದ್ದೇವೆ ಎಂದು ರೇವಣ್ಣ ಮತ್ತು ಕುಮಾರಸ್ವಾಮಿ ಅಂದುಕೊಂಡಿದ್ದರೆ ಅದು ಅವರ ಭ್ರಮೆ,” ಎಂದು ಕಿಡಿಕಾರಿದ್ದಾರೆ.

ಮುಂದುವರಿದ ಮಾತನಾಡಿದ ಅವರು ಎಂದಿನ ದಾಟಿಯಲ್ಲಿ, “ನಾನು ಹಾಸನಕ್ಕೆ ಹೋಗಿ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತೇನೆ. ರಾಜ್ಯದ ಜನತೆಗೆ ಈ ವಿಷಯ ಮನವರಿಕೆ ಮಾಡುತ್ತೇನೆ. ಇದನ್ನು ಕೇಂದ್ರ ಗೃಹ ಸಚಿವರ ರಾಜನಾಥ್‌ ಸಿಂಗ್‌ ಗಮನಕ್ಕೂ ತರಲಿದ್ದೇವೆ,” ಎಂದಿದ್ದಾರೆ.

ಈ ಹಿಂದೆ ಹಾಸನದಲ್ಲಿ ಹಲವು ಬಾರಿ ಪ್ರಜ್ವಲ್‌ ರೇವಣ್ಣ ಮತ್ತು ಪ್ರೀತಂ ಗೌಡ ಬೆಂಬಲಿಗರ ನಡುವೆ ಬೀದಿ ರಂಪಾಟಗಳು ನಡೆದಿತ್ತು. ಪ್ರಜ್ವಲ್ ರೇವಣ್ಣ ಸರಕಾರಿ ಕಾರಿನಲ್ಲಿ ಜಿಲ್ಲೆಯಲ್ಲಿ ಪ್ರಯಾಣಿಸುತ್ತಾರೆ ಎಂದು ಪ್ರೀತಂ ಗೌಡ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದರು. ಇದು ಜಿಲ್ಲೆಯ ಉಭಯ ಪಕ್ಷಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿತ್ತು.

Update:

ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣ ಇಂದು ವಿಧಾನ ಸಭೆಯಲ್ಲೂ ಪ್ರಸ್ತಾಪವಾಯಿತು. ಜೆಡಿಎಸ್‌ ಕಾರ್ಯಕರ್ತರ ನಡೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಶಾಸಕರು 3.30ಕ್ಕೆ ಕಲಾಪ ಆರಂಭವಾದಾಗ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಬಿಜೆಪಿಗರ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸದನವನ್ನು ಸ್ಪೀಕರ್‌ ರಮೇಶ್‌ ಕುಮಾರ್‌ ಅನಿವಾರ್ಯವಾಗಿ ನಾಳೆಗೆ ಮುಂದೂಡಿದರು.