samachara
www.samachara.com
ಮೋದಿಯ ರಫೇಲ್‌ ಡೀಲ್‌ ಕಾಂಗ್ರೆಸ್‌ ಡೀಲ್‌ಗಿಂತ ಕಳಪೆ; ತಜ್ಞರ ಆಯಾಮ ಬಯಲಿಗಿಟ್ಟ ‘ದಿ ಹಿಂದೂ’
COVER STORY

ಮೋದಿಯ ರಫೇಲ್‌ ಡೀಲ್‌ ಕಾಂಗ್ರೆಸ್‌ ಡೀಲ್‌ಗಿಂತ ಕಳಪೆ; ತಜ್ಞರ ಆಯಾಮ ಬಯಲಿಗಿಟ್ಟ ‘ದಿ ಹಿಂದೂ’

ನರೇಂದ್ರ ಮೋದಿ ಸಹಿ ಹಾಕಲು ಹೊರಟಿದ್ದ #ರಫೇಲ್‌_ಡೀಲ್‌ಗೆ ಭಾರತದ ಸಮಾಲೋಚನೆ ತಂಡದಲ್ಲಿದ್ದ ರಕ್ಷಣಾ ಸಚಿವಾಲಯದ ಕನಿಷ್ಠ ಮೂವರು ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ‘ದಿ ಹಿಂದೂ’ ಸರಣಿ ವರದಿ ಬಿಚ್ಚಿಟ್ಟ ಇನ್ನೊಂದು ಆಯಾಮ. 

ರಫೇಲ್‌ ಡೀಲ್‌ನಲ್ಲಿ ಹಗರಣದ ವಾಸನೆ ಕೇಳಿ ಬರುತ್ತಿದ್ದಂತೆ ಬಿಜೆಪಿ ನಾಯಕರು ಹೇಳುತ್ತಿದ್ದ ಒಂದೇ ಮಾತು; ಪ್ರಧಾನಿ ನರೇಂದ್ರ ಮೋದಿ ಸರಕಾರದ ರಫೇಲ್‌ ಡೀಲ್‌ ಈ ಹಿಂದಿನ ಯುಪಿಎ ಕಾಲದ ಒಪ್ಪಂದಕ್ಕಿಂತ ಉತ್ತಮವಾಗಿತ್ತು ಎಂಬುದು. ಆದರೆ ಇದು ಸಂಪೂರ್ಣ ಸುಳ್ಳು ಎನ್ನುತ್ತಿದೆ 'ದಿ ಹಿಂದೂ' ಪ್ರಕಟಿಸಿರುವ ಮತ್ತೊಂದು ಎಕ್ಸ್‌ಕ್ಲೂಸಿವ್‌ ವರದಿ.

'ನರೇಂದ್ರ ಮೋದಿ ಸಹಿ ಹಾಕಲು ಹೊರಟಿದ್ದ ರಫೇಲ್‌ ಡೀಲ್‌ಗೆ ಭಾರತದ ಸಮಾಲೋಚನೆ ತಂಡದಲ್ಲಿದ್ದ ರಕ್ಷಣಾ ಸಚಿವಾಲಯದ ಕನಿಷ್ಠ ಮೂವರು ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು' ಹೀಗಂತ ರಫೇಲ್‌ ಬಗ್ಗೆ ಸರಣಿ ವರದಿಗಳನ್ನು ಪ್ರಕಟಿಸುತ್ತಿರುವ 'ದಿ ಹಿಂದೂ' ಮುಂದಿಟ್ಟಿದೆ. ಈ ಹಿಂದೆ ರಫೇಲ್ ಡೀಲ್‌ನಲ್ಲಿ ಪ್ರಧಾನಿ ಸಚಿವಾಲಯ ಸಮಾನಾಂತರವಾಗಿ ಮೂಗು ತೂರಿಸುತ್ತಿದೆ ಮತ್ತು ಡೀಲ್‌ ವೇಳೆ ಕೆಲವು ಷರತ್ತುಗಳನ್ನು ಕೈ ಬಿಟ್ಟಿದೆ ಎಂದು ದಾಖಲೆ ಸಮೇತ ವರದಿ ಮಾಡಿತ್ತು.

ಇದೀಗ ಹೊಸ ವರದಿಯಲ್ಲಿ, ಡೀಲ್‌ಗೆ ಸಂಬಂಧಿಸಿದಂತೆ ಭಾರತದ ಮೂವರು ತಜ್ಞರು ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದೆ. ಜತೆಗೆ ಅದಕ್ಕೆ ಸೂಕ್ತ ದಾಖಲೆಯನ್ನೂ ಅದು ಜನರ ಮುಂದಿಟ್ಟಿದೆ.

ಫ್ರಾನ್ಸ್‌ ತಂಡದ ಜತೆ ಸಮಾಲೋಚನೆ ಪೂರ್ಣಗೊಂಡ ನಂತರ ಮತ್ತು ಡೀಲ್‌ಗೆ ಸಹಿ ಹಾಕುವ (ಸೆಪ್ಟೆಂಬರ್‌ 23, 2016) ಒಂದು ತಿಂಗಳ ಮೊದಲು ಈ ಪತ್ರವನ್ನು ಬರೆಯಲಾಗಿದೆ. ತಮ್ಮ 8 ಪುಟಗಳ ಪತ್ರದಲ್ಲಿ ನರೇಂದ್ರ ಮೋದಿ ಸರಕಾರದ ಈ ಡೀಲ್‌ಗೆ, ಬೆಲೆಗಳ ಬಗೆಗಿನ ಸಲಹೆಗಾರರಾದ ಎಂ.ಪಿ. ಸಿಂಗ್‌, ವಾಯುಸೇನೆ ಹಣಕಾಸು ವ್ಯವಸ್ಥಾಪಕ ಎ.ಆರ್‌. ಸುಳೆ ಮತ್ತು ಸ್ವಾಧೀನ ವ್ಯವಸ್ಥಾಪಕ ಹಾಗೂ ವಾಯುಸೇನೆಯ ಜಂಟಿ ಕಾರ್ಯದರ್ಶಿ ರಾಜೀವ್‌ ವರ್ಮಾ ವಿರೋಧ ವ್ಯಕ್ತಪಡಿಸಿದ್ದರು.

ಎಂ.ಪಿ. ಸಿಂಗ್‌, ಎ.ಆರ್‌. ಸುಳೆ ಮತ್ತು ರಾಜೀವ್‌ ವರ್ಮಾ ಬರೆದ ಪತ್ರ.
ಎಂ.ಪಿ. ಸಿಂಗ್‌, ಎ.ಆರ್‌. ಸುಳೆ ಮತ್ತು ರಾಜೀವ್‌ ವರ್ಮಾ ಬರೆದ ಪತ್ರ.
/ದಿ ಹಿಂದೂ

ಹೊಸ ರಫೇಲ್‌ ಡೀಲ್‌ನ 7.87 ಬಿಲಿಯನ್‌ ಯೂರೋಗಳ ಅಂತಿಮ ಮೊತ್ತದ ಬಗ್ಗೆ ಪ್ರತಿಕ್ರಿಯೆ ನೀಡುವ ಈ ತಜ್ಞರು, “ಫ್ರಾನ್ಸ್‌ ಸರಕಾರ ತಾನು ಮುಂದಿಟ್ಟ ಬೆಲೆಗೆ ಯಾವುದೇ ಸರಿಯಾದ ವಿವರಣೆಗಳನ್ನು ನೀಡಿಲ್ಲ. ‘ಎಂಎಂಆರ್‌ಸಿ(medium multi-role combat aircraft)’ಗೆ ಹೋಲಿಕೆ ಮಾಡಿದರೆ ಫ್ರಾನ್ಸ್‌ ಸರಕಾರದ ಅಂತಿಮ ಬೆಲೆ ಪ್ರಸ್ತಾಪವನ್ನು ಉತ್ತಮ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಜಂಟಿ ಹೇಳಿಕೆಯನ್ನು ಸಮ್ಮತಿಸಲು ಸಾಧ್ಯವಿಲ್ಲ,” ಎಂಬುದಾಗಿ ಅಧಿಕಾರಿಗಳು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಇದರ ಜತೆಗೆ 36 ರಫೇಲ್‌ ಯುದ್ಧ ವಿಮಾನಗಳಲ್ಲಿ 18ರ ಪೂರೈಕೆಗೆ ನಿಗದಿ ಪಡಿಸಿದ್ದ ಸಮಯವೂ ಮೂಲ ಸ್ವಾಧೀನ ಪ್ರಕ್ರಿಯೆಯಲ್ಲಿ ಇದ್ದಿದ್ದಕ್ಕಿಂತ ನಿಧಾನಗತಿಯಲ್ಲಿದೆ ಎಂದು ಪತ್ರಿಕೆ ವರದಿ ಮಾಡಿದೆ.

ವರದಿ ಹೊರ ಬರುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ವರದಿಯು ಸಂಸತ್‌ ಮತ್ತು ಸುಪ್ರೀಂ ಕೋರ್ಟ್‌ ಮುಂದೆ ಸರಕಾರ ಮಂಡಿಸಿದ ವಾದವನ್ನು ತಲೆಕೆಳಗು ಮಾಡುತ್ತಿದೆ ಎಂದಿದ್ದಾರೆ. ಅನಿಲ್‌ ಅಂಬಾನಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ ಸರಕಾರ ಹೆಚ್ಚಿನ ಬೆಲೆಯ ಡೀಲ್‌ಗೆ ಸಹಿ ಹಾಕಿದೆ ಎಂದೂ ಅವರು ಆರೋಪಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ಸಂಸತ್‌ನಲ್ಲಿ ಸಿಎಜಿ ವರದಿಯನ್ನು ಮಂಡಿಸಲಾಗಿದೆ. ‘ದಿ ಹಿಂದೂ’ ವರದಿಗೆ ಇದು ವ್ಯತಿರಿಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದು, ಈ ಹಿಂದಿನ ಡೀಲ್‌ಗೆ ಹೋಲಿಸಿದರೆ ಹೊಸ ಡೀಲ್‌ ಶೇಕಡಾ 2.86ರಷ್ಟು ಅಗ್ಗವಾಗಿದೆ ಎಂದು ವರದಿ ಹೇಳುತ್ತಿದೆ.

Also read: ‘ದಿ ಹಿಂದೂ’ ರಫೇಲ್‌ EXCLUSIVE: ಸುಪ್ರೀಂಗೆ ಸುಳ್ಳು ಮಾಹಿತಿ, ಡೀಲ್‌ನಲ್ಲಿ ಪಿಎಂಓ ಕೈವಾಡ

Also read: ರಫೇಲ್ ಡೀಲ್‌ಗೂ ಮೊದಲು ಭ್ರಷ್ಟಾಚಾರ ವಿರೋಧಿ ನಿಯಮಗಳಿಗೆ ತಿಲಾಂಜಲಿ ಇಟ್ಟಿತ್ತು ಮೋದಿ ಸರಕಾರ...