samachara
www.samachara.com
ಎಸ್‌ಐಟಿಗೇ ಸರಕಾರ ಪಟ್ಟು, ಹಾಸನದಲ್ಲಿ ಬಿಜೆಪಿಗೆ ಪೆಟ್ಟು; ಆಡಿಯೊ ಪ್ರಕರಣಕ್ಕೆ ಕಲಾಪ ಬಲಿ
COVER STORY

ಎಸ್‌ಐಟಿಗೇ ಸರಕಾರ ಪಟ್ಟು, ಹಾಸನದಲ್ಲಿ ಬಿಜೆಪಿಗೆ ಪೆಟ್ಟು; ಆಡಿಯೊ ಪ್ರಕರಣಕ್ಕೆ ಕಲಾಪ ಬಲಿ

ಸರಕಾರ ಎಸ್‌ಐಟಿ ತನಿಖೆಗೆ ಪಟ್ಟು ಹಿಡಿದ್ದರೆ, ವಿಪಕ್ಷ ಬಿಜೆಪಿ ಎಸ್‌ಐಟಿ ತನಿಖೆ ವಿರೋಧಿಸುತ್ತಿದೆ. ಒಟ್ಟಿನಲ್ಲಿ ಆಡಿಯೊ ಗದ್ದಲಕ್ಕೆ ಬಲಿಯಾಗಿದ್ದು ಕಲಾಪ.

Team Samachara

ಶಾಸಕರನ್ನು ಸೆಳೆದು ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಆಪರೇಷನ್ ಕಮಲ ಆಡಿಯೊ ಪ್ರಕರಣದಲ್ಲಿ ಆಡಳಿತ ಪಕ್ಷಗಳು ಮತ್ತು ಪ್ರತಿಪಕ್ಷ ತಂತಮ್ಮ ನಿಲುವಿಗೆ ಅಂಟಿಕೊಂಡಿದ್ದರಿಂದ ಬುಧವಾರವೂ ವಿಧಾನಸಭೆಯಲ್ಲಿ ಗದ್ದಲ ಉಂಟಾಗಿ ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ.

ಇದರ ನಡುವೆ ಹಾಸನದಲ್ಲಿ ಶಾಸಕ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಪ್ರತಿಭಟನೆ ನಡೆಸಿದ್ದರಿಂದ ಸದನದಲ್ಲಿ ಆಡಳಿತ, ಪ್ರತಿಪಕ್ಷಗಳ ನಡುವೆ ವಾಕ್ಸಮರ ನಡೆದು ಕಲಾಪವನ್ನು ಸ್ಪೀಕರ್ ರಮೇಶ್ ಕುಮಾರ್ ಗುರುವಾರ 11 ಗಂಟೆಗೆ ಮುಂದೂಡಿದರು.

ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ಸ್ಪೀಕರ್ ರಮೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಮೂರೂ ಪಕ್ಷಗಳ ನಾಯಕರ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆಡಿಯೊ ಪ್ರಕರಣವನ್ನು ಆಡಳಿತಾರೂಢ ಕಾಂಗ್ರೆಸ್- ಜೆಡಿಎಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ಮೂಲಕವೇ ತನಿಖೆ ನಡೆಸಬೇಕೆಂದು ಪಟ್ಟು ಹಿಡಿದರೆ, ಪ್ರತಿಪಕ್ಷ ಬಿಜೆಪಿ ಮಾತ್ರ ಎಸ್‌ಐಟಿ ಬದಲಿಗೆ ನ್ಯಾಯಾಂಗ ತನಿಖೆ ಇಲ್ಲವೆ, ಸದನ ಸಮಿತಿ ಮೂಲಕ ತನಿಖೆ ನಡೆಸಬೇಕೆಂಬ ನಿಲುವಿನಿಂದ ಹಿಂದೆ ಸರಿಯಲಿಲ್ಲ.

ಮೊದಲ ಸಭೆ ವಿಫಲವಾಗಿದ್ದರಿಂದ ಸ್ಪೀಕರ್ ಪುನಃ ಎರಡನೇ ಬಾರಿಗೆ ಮೂರೂ ಪಕ್ಷಗಳ ನಾಯಕರ ಸಭೆ ನಡೆಸಿದರು. ಜೆಡಿಎಸ್‌ನಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ಕೃಷ್ಣ ಬೈರೇಗೌಡ, ಡಿ.ಕೆ.ಶಿವಕುಮಾರ್, ಬಿಜೆಪಿಯಿಂದ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ, ಉಪನಾಯಕ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಸುರೇಶ್‌ಕುಮಾರ್ ಭಾಗವಹಿಸಿದ್ದರು.

ಎರಡನೇ ಬಾರಿ ನಡೆದ ಸಭೆಯಲ್ಲಿ ಮತ್ತೆ ಆಡಳಿತ ಪಕ್ಷಗಳು ಮತ್ತು ಪ್ರತಿಪಕ್ಷ ತಂತಮ್ಮ ನಿಲುವಿನಿಂದ ಹಿಂದೆ ಸರಿಯದ ಕಾರಣ ಸಭೆಯನ್ನು ಸ್ಪೀಕರ್ ಅರ್ಧಕ್ಕೇ ಮೊಟಕುಗೊಳಿಸಿ ದಿನದ ಕಲಾಪವನ್ನು ಪ್ರಾರಂಭಿಸಲು ಮುಂದಾದರು. ಇತ್ತ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಯಾವುದೇ ಕಾರಣಕ್ಕೂ ಆಡಿಯೊ ಪ್ರಕರಣವನ್ನು ಎಸ್‌ಐಟಿಗೆ ವಹಿಸಬಾರದೆಂದು ಪ್ರತಿಭಟನೆ ನಡೆಸಿದರು.

Also read: ಬೀದಿಗೆ ಬಂದ ಆಡಿಯೋ ರಂಪಾಟ: ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ಬೀಸಿದ್ಯಾಕೆ?

ಆಡಳಿತ ಪಕ್ಷದ ಸದಸ್ಯರೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಹೀಗೆ ಪರಸ್ಪರ ಆರೋಪ- ಪ್ರತ್ಯಾರೋಪ, ಮಾತಿನ ಚಕಮಕಿ ನಡೆದ ಪರಿಣಾಮ ಕಲಾಪವನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು.

ಮಧ್ಯಾಹ್ನ ಕಲಾಪ ಆರಂಭಗೊಂಡಾಗ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ತಮ್ಮ ಪ್ರತಿಭಟನೆ ಮುಂದುವರೆಸುತ್ತಿದ್ದಂತೆ ಬಿಜೆಪಿ ನಾಯಕ ಆರ್. ಅಶೋಕ್ ಹಾಸನದ ಘಟನೆಯನ್ನು ಪ್ರಸ್ತಾಪಿಸಲು ಮುಂದಾದರು.

"ಹಾಸನದಲ್ಲಿ ನಮ್ಮ ಪಕ್ಷದ ಶಾಸಕ ಪ್ರೀತಂಗೌಡ ಅವರ ತಂದೆ- ತಾಯಿ, ಬೆಂಬಲಿಗರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಗೂಂಡಾಗಳಂತೆ ವರ್ತಿಸಿರುವ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇದಕ್ಕೆ ಸರ್ಕಾರದ ಕುಮ್ಮಕ್ಕು ಇದೆ" ಎಂದು ನೇರವಾಗಿ ಆರೋಪಿಸಿದರು.

ಅಶೋಕ್ ಅವರ ಆರೋಪಕ್ಕೆ ದನಿಗೂಡಿಸಿದ ಯಡಿಯೂರಪ್ಪ, "ಕುಮಾರಸ್ವಾಮಿ ಕುಮ್ಮಕ್ಕಿನಿಂದ ಈ ರಾದ್ಧಾಂತ ನಡೆದಿದೆ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಪ್ರಾಣ ಬೆದರಿಕೆ ಹಾಕಲಾಗಿದೆ. ಇದು ಗೂಂಡಾ ಸರ್ಕಾರವೇ" ಎಂದು ಪ್ರಶ್ನಿಸಿದರು. ಸಚಿವರಾದ ಕೃಷ್ಣ ಬೈರೇಗೌಡ, ಸಿ.ಎಸ್. ಪುಟ್ಟರಾಜು, ಜಮೀರ್ ಅಹಮ್ಮದ್, ಆರ್.ವಿ. ದೇಶಪಾಂಡೆ ಸೇರಿದಂತೆ ಅನೇಕರು ಈ ವೇಳೆ ಬಿಜೆಪಿಗೆ ತಿರುಗೇಟು ನೀಡಿದರು.

"ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಗ್ಗೊಲೆ ಮಾಡಲು ಹೊರಟಿದ್ದೀರಿ. ನಿಮ್ಮಿಂದ ನಾವು ಪಾಠ ಕಲಿಯಬೇಕಾದ ಅಗತ್ಯವಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಹಾಸನ ಜಿಲ್ಲೆಯ ಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ. ಬಿಜೆಪಿಯವರು ವಿಷಯಾಂತರ ಮಾಡಲು ಹೊರಟಿದ್ದಾರೆ" ಎಂದು ಆಡಳಿತ ಪಕ್ಷದ ಸದಸ್ಯರು ದೂರಿದರು.

ಹೀಗೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲ ಉಂಟಾದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.

ಪಟ್ಟು ಸಡಿಲಿಸದ ಸಿದ್ದರಾಮಯ್ಯ

ಆಡಿಯೊ ಪ್ರಕರಣದ ತನಿಖೆ ವಿಚಾರವಾಗಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, "ನನ್ನದೇನೂ ಅಭ್ಯಂತರವಿಲ್ಲ. ಸ್ಪೀಕರ್ ಯಾವ ಬಗೆಯ ತನಿಖೆ ಮಾಡಿಸಬೇಕು ಎನ್ನುತ್ತಾರೋ? ಅದೇ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ" ಎಂದರು.

ಅಲ್ಲಿಗೆ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಣ ಸಂಘರ್ಷ ನಿಂತು ವಿಧಾನಸಭೆಯ ಕಲಾಪ ನಿರಾತಂಕವಾಗಿ ನಡೆಯುತ್ತದೆ ಎಂಬ ವಾತಾವರಣ ಕಾಣಿಸಿತು. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಣ್ಣೀರೆರೆಚಿದರು. ಆಡಿಯೊ ಪ್ರಕರಣವನ್ನು ಎಸ್ಐಟಿ ಹೊರತು ಪಡಿಸಿ ಯಾವ ತನಿಖೆಗೆ ಒಳಪಡಿಸಿದರೂ ಅದರಿಂದ ಗುರಿ ಸಾಧನೆಯಾಗುವುದಿಲ್ಲ. ಅದನ್ನು ಮುಚ್ಚಿ ಹಾಕುವುದು ನಮ್ಮ ಗುರಿಯೋ? ಅಥವಾ ಸತ್ಯ ತಿಳಿಯಬೇಕು ಎಂಬುದೋ? ಎಂದು ಪ್ರಶ್ನಿಸಿದರು.

Also read: ‘ಗದ್ದಲದಲ್ಲೇ ನಡೆದ ಹರಾಜು’; ವಿಧೇಯಕಗಳ ಮಂಡನೆ ಎಂಬ ಸಾಂವಿಧಾನಿಕ ಪ್ರಕ್ರಿಯೆ ಸುತ್ತ...

ಪ್ರಕರಣವನ್ನು ಹಕ್ಕುಚ್ಯುತಿ ಸಮಿತಿಗೆ, ನ್ಯಾಯಾಂಗ ತನಿಖೆಗೆ, ಸದನ ಸಮಿತಿಗೆ ಒಪ್ಪಿಸಿದರೆ ಏನೂ ಪ್ರಯೋಜನವಿಲ್ಲ. ಆದರೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೆಲಸ ಮಾಡಲು ಎಸ್ಐಟಿಗೆ ಸಾಧ್ಯವಿರುವುದರಿಂದ ಆ ಸಂಸ್ಥೆಯ ಮೂಲಕವೇ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದರು.

ಸಿದ್ದರಾಮಯ್ಯ ಪಟ್ಟು ಹಿಡಿದ ಮೇಲೆ ಕುಮಾರಸ್ವಾಮಿ ಸುಮ್ಮನಾದರೂ ಅಂತಿಮವಾಗಿ ಈ ಪ್ರಕರಣವನ್ನು ಸುಖಾಂತ್ಯಗೊಳಿಸಲು ಅವರೂ ಉತ್ಸುಕರಾಗಿದ್ದರು. ಹೀಗಾಗಿ ಬಿಜೆಪಿ ಬೇಡಿಕೆಯನ್ನು ಪೂರೈಸಲು ಅವರು ಸಿದ್ದರಾಗಿದ್ದರು. ಆದರೆ, ಅಂಗಪಕ್ಷ ಕಾಂಗ್ರೆಸ್ನ ನಾಯಕ ಸಿದ್ದರಾಮಯ್ಯ ಅಷ್ಟು ಖಡಾಖಂಡಿತವಾದ ಧ್ವನಿಯಲ್ಲಿ ಮಾತನಾಡಿದ ಮೇಲೆ ಅವರು ಮೌನಕ್ಕೆ ಶರಣಾದರು.

ಬಿಜೆಪಿ ಕೂಡಾ ಎಸ್ಐಟಿ ಹೊರತುಪಡಿಸಿ ಬೇರೆ ತನಿಖೆ ಮಾಡಿಸಬೇಕು ಎಂಬ ತನ್ನ ನಿರ್ಧಾರದಿಂದ ಹೊರಬರಲಿಲ್ಲ. ಸರ್ಕಾರವೂ ತನ್ನ ನಿರ್ಧಾರದಿಂದ ಹೊರಬರಲಿಲ್ಲ. ಪರಿಣಾಮ ಈಗ ಬಿಜೆಪಿಯ ಹಲವು ನಾಯಕರಿಗೆ, ಈ ಪ್ರಕರಣವನ್ನು ಎಸ್ಐಟಿಗೇ ಕೊಡಬೇಕು ಎಂಬ ಸಿದ್ದರಾಮಯ್ಯ ವಿಲನ್ ಆಗಿ ಕಾಣತೊಡಗಿದ್ದಾರೆ. ಮುಖ್ಯಮಂತ್ರಿ ತಮ್ಮ ನಿಲುವು ಸಡಿಲಿಸಲು ತಯಾರಿದ್ದರೂ ಸಿದ್ದರಾಮಯ್ಯ ತಯಾರಿಲ್ಲದೇ ಇದ್ದುದನ್ನು ನೋಡಿದರೆ ವಿವಿಧ ರೀತಿಯ ಅನುಮಾನಗಳು ಕಾಡುತ್ತವೆ ಎಂದು ಈ ನಾಯಕರು ವಿಧಾನಸಭೆಯ ಮೊಗಸಾಲೆಯಲ್ಲಿ ಖಾಸಗಿ ಸಂಭಾಷಣೆಯ ವೇಳೆ ಹೇಳುತ್ತಿದ್ದರು.

ಒಟ್ಟಿನಲ್ಲಿ ಸ್ಪೀಕರ್‌ ಸಂಧಾನ ಸಭೆಯಿಂದ ಸುಖಾಂತ್ಯವಾಗುತ್ತದೆ ಎಂದುಕೊಂಡಿದ್ದ ಆಡಿಯೊ ಪ್ರಕರಣ ಎಸ್‌ಐಟಿ ತನಿಖೆಗೇ ಕಟ್ಟು ಬಿದ್ದು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವಿನ ಸಂಘರ್ಷ ಮುಂದುವರಿಯುವಂತಾಗಿದೆ. ಗುರುವಾರವೂ ಇದೇ ವಿಚಾರವಾಗಿ ವಿಪಕ್ಷಗಳು ಸದನದಲ್ಲಿ ಗದ್ದಲ ಎಬ್ಬಿಸುವ ಸಾಧ್ಯತೆ ಇದೆ.