samachara
www.samachara.com
‘ಎಸ್‌ಐಟಿ ತನಿಖೆ’ಗೆ ಬಿಜೆಪಿ ವಿರೋಧ; ಸದನ ಸಮಿತಿ ತನಿಖೆಗೆ ರಚ್ಚೆ ಹಿಡಿದ ಬಿಎಸ್‌ವೈ
COVER STORY

‘ಎಸ್‌ಐಟಿ ತನಿಖೆ’ಗೆ ಬಿಜೆಪಿ ವಿರೋಧ; ಸದನ ಸಮಿತಿ ತನಿಖೆಗೆ ರಚ್ಚೆ ಹಿಡಿದ ಬಿಎಸ್‌ವೈ

“ಈಗಲೂ ಕಾಲ ಮಿಂಚಿಲ್ಲ ಸದನ ಸಮಿತಿ ರಚಿಸುವ ಬಗ್ಗೆ ಯೋಚಿಸಿ. ನಿಮ್ಮ ಕೊಠಡಿಗೆ ನಮ್ಮನ್ನೆಲ್ಲಾ ಕರೆಸಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬನ್ನಿ” - ಯಡಿಯೂರಪ್ಪ.

Team Samachara

'ಆಪರೇಷನ್ ಕಮಲ ಆಡಿಯೋ ಪ್ರಕರಣ' ಮಂಗಳವಾರವೂ ವಿಧಾನಸಭೆಯಲ್ಲಿ ಭಾರೀ ಸದ್ದು ಮಾಡಿತು. ವಿರೋಧ ಪಕ್ಷದ ಸದಸ್ಯರು ಪ್ರಕರಣದ ಬಗ್ಗೆ 'ಎಸ್‍ಐಟಿ ತನಿಖೆ ಬೇಡ, ನ್ಯಾಯಾಂಗ ತನಿಖೆಯೇ ಆಗಬೇಕು' ಎಂದು ಪಟ್ಟು ಹಿಡಿದಿದ್ದರೆ, ಆಡಳಿತ ಪಕ್ಷ ಮತ್ತು ಸ್ಪೀಕರ್ ತಮ್ಮ ನಿಲುವಿನಿಂದ ಹಿಂದೆ ಸರಿಯದಿರಲು ತೀರ್ಮಾನಿಸಿದ್ದರಿಂದ ದಿನ ಪೂರ್ತಿ ಕಲಾಪ ವ್ಯರ್ಥಾಲಾಪವಾಗಿ ಬದಲಾಯಿತು.

ಒಂದು ಹಂತದಲ್ಲಿ, "ಈ ಪ್ರಕರಣವನ್ನು ದೊಡ್ಡದು ಮಾಡುವುದು ಬೇಡ. ನಮ್ಮಿಂದ ತಪ್ಪಾಗಿದೆ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಪ್ರಕರಣವನ್ನು ಇಲ್ಲಿಗೆ ಕೈಬಿಡಿ. ಇದರ ಬಗ್ಗೆ ಎಸ್‍ಐಟಿ ತನಿಖೆ ಮಾಡುವುದರಿಂದ ಯಾವುದೇ ಉದ್ದೇಶವನ್ನು ಸಾಧಿಸಿದಂತೆ ಆಗುವುದಿಲ್ಲ," ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಎಸ್‍ಐಟಿ ಬಗ್ಗೆ ವಿರೋಧ ಪಕ್ಷಕ್ಕೆ ಭಯ ಬೇಡ ಎಂದು ಭರವಸೆ ನೀಡಿದರು. ಈ ಹಿಂದೆ ನಾನು ಬಿಜೆಪಿ ಬೆಂಬಲದಲ್ಲಿ ಸಿಎಂ ಆಗಿದ್ದಾಗಲೂ ನನ್ನ ವಿರುದ್ಧ 150 ಕೋಟಿ ರೂಪಾಯಿಗಳ ಕಿಕ್ ಬ್ಯಾಕ್ ಆರೋಪ ಮಾಡಿದ್ದರು ಆಗಲೂ ಸಹ ನಾನು ಯಾರ ವಿರುದ್ಧವೂ ಕ್ರಮ ಕೈಗೊಂಡಿರಲಿಲ್ಲ ಎಂದು ಹೇಳಿದರು.

ಆದರೆ, ಸ್ಪೀಕರ್‌ಗೆ 50 ಕೋಟಿ ರೂಪಾಯಿ ನೀಡಲಾಗಿದೆ ಎನ್ನುವ ಸಂಭಾಷಣೆಯ ಸತ್ಯಾಸತ್ಯತೆ ಅರಿಯಲು ಸಭಾಪತಿ ರಮೇಶ್‍ ಕುಮಾರ್ ವಿಶೇಷ ತನಿಖಾ ತಂಡ ರಚಿಸುವಂತೆ ಸೂಚಿಸಿದ್ದರು. ಹೀಗಾಗಿ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಎಸ್‌ಐಟಿಗೆ ಬಿಜೆಪಿ ವಿರೋಧ

ಆದರೆ ಬಿಜೆಪಿ ಸದಸ್ಯರು ಮಂಗಳವಾರ ಕಲಾಪ ಆರಂಭವಾದಂದಿನಿಂದ ಎಸ್‌ಐಟಿ ತನಿಖೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದರು. ಮೊದಲಿಗೆ ಎದ್ದು ನಿಂತ ಬಿಜೆಪಿ ಸದಸ್ಯ ಮಾಧುಸ್ವಾಮಿ, "ಎಸ್ಐಟಿ ತನಿಖೆ ಉದ್ದೇಶವಾದರೂ ಏನು? 15 ದಿನಗಳಲ್ಲಿ ಎಸ್ಐಟಿ ಏನು ಮಾಡಲು ಸಾಧ್ಯ? ಹೀಗಾಗಿ ಇದನ್ನು ಮತ್ತೊಮ್ಮೆ ಪರಿಶೀಲಿಸಿ, ಸದನ ಸಮಿತಿ ತನಿಖೆಗೆ ವಹಿಸಿ," ಎಂದು ಸ್ಪೀಕರ್ ಮನವೊಲಿಸಲು ಮುಂದಾದರು.

"ಎಸ್ಐಟಿ ತನಿಖೆಗೆ ವಹಿಸುವ ಮೂಲಕ ಸರ್ಕಾರಕ್ಕೆ ಆಯುಧ ನೀಡುತ್ತಿದ್ದೀರಿ. ಈ ಆಯುಧ ಬಳಸಿ ನಮ್ಮಂತವರ ಮೇಲೂ ಕ್ರಮ ಕೈಗೊಳ್ಳಬಹುದು. ಹೀಗಾಗಿ ಎಸ್ಐಟಿ ಬದಲು ನ್ಯಾಯಾಂಗ ತನಿಖೆಗೆ ವಹಿಸಿ. ಅಥವಾ ತನಿಖೆ ನಡೆಸದಿದ್ದರೆ ಒಳ್ಳೆಯದು," ಎಂದು ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ಅವರು "ತನಿಖೆಯ ವಿಚಾರದಲ್ಲಿ ನಮಗೇನೂ ಹಠವಿಲ್ಲ. ಆದರೆ, ಎಸ್‍ಐಟಿ ತನಿಖೆಯ ವಿಚಾರದಲ್ಲಿ ನಮಗೆ ದೊಡ್ಡ ಹಠವಿದೆ. ಆ ವಿಚಾರದಲ್ಲಿ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನಿಮ್ಮ ಕಾಲದಲ್ಲಿ ಶಾಸಕರನ್ನು ಕ್ರಿಮಿನಲ್ ಪ್ರಕರಣದ ವ್ಯಾಪ್ತಿಗೆ ತರುವ ಕೆಲಸ ಆಗುವುದು ಬೇಡ,'' ಎಂದರು. ಇದಕ್ಕೆ ಧ್ವನಿಗೂಡಿಸಿ ಇತರ ಬಿಜೆಪಿ ನಾಯಕರು ಮಾತನಾಡಿದರು.

ಮಾಧುಸ್ವಾಮಿ ನಂತರ ಮಾತನಾಡಿದ ಬಿ. ಶ್ರೀರಾಮುಲು, "ನಿಮ್ಮ (ರಮೇಶ್‍ಕುಮಾರ್) ಪ್ರಾಮಾಣಿಕತೆ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಸದನದಲ್ಲಿ ನೀವು ದೊಡ್ಡ ಸ್ಥಾನದಲ್ಲಿ ಇದ್ದೀರಿ. ಸ್ಪೀಕರ್ ಆಗಿ ನೀವು ಎರಡು ಕಡೆಯವರಿಗೂ ನ್ಯಾಯ ಕೊಡಬೇಕು,'' ಎಂದು ಮನವಿ ಮಾಡಿದರು.

"ಹಕ್ಕು ಬಾಧ್ಯತಾ ಸಮಿತಿ ಇರುವುದೇ ಈ ರೀತಿಯ ಪ್ರಕರಣಗಳನ್ನು ತೀರ್ಮಾನ ಮಾಡಲು. ನಾವು ಹಲವು ಎಸ್‍ಐಟಿ ತನಿಖೆಗಳನ್ನು ನೋಡಿದ್ದೇವೆ. ಸದನಕ್ಕೆ ಸಂಬಂಧಿಸಿದ ವಿಚಾರ ಎಸ್‍ಐಟಿಗೆ ವಹಿಸುವುದು ಸೂಕ್ತವಲ್ಲ. ನಿಮ್ಮಿಂದ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಬೇಡ," ಎಂದು ಬಿಜೆಪಿ ನಾಯಕ ಸುರೇಶ್‍ ಕುಮಾರ್ ಹೇಳಿದರು.

"ಸದನ ಜನತಾ ನ್ಯಾಯಾಲಯ. ಈ ನ್ಯಾಯಾಲಯ ನಿಮ್ಮ ಮೇಲಿನ ಆರೋಪಗಳನ್ನು ಮುಕ್ತಗೊಳಿಸಿದೆ. ಹಕ್ಕು ಬಾಧ್ಯತಾ ಸಮಿತಿ ರಚನೆ ಮಾಡಿ ಆ ಮೂಲಕ ತನಿಖೆ ನಡೆಸಿ. ಈ ಸಮಿತಿ ಯಾವುದೇ ಅನುಭವಿಗಳ ಸಹಾಯ ಪಡೆಯಬಹುದು," ಎಂದು ಅವರು ಮತ್ತೊಂದು ಬೇಡಿಕೆ ಮುಂದಿಟ್ಟರು.

ಎಸ್‌ಐಟಿ ತನಿಖೆ ರದ್ದುಗೊಳಿಸಲು ಮತ್ತೊಂದಿಷ್ಟು ನೆಪಗಳನ್ನು ಮುಂದಿಟ್ಟ ಸುರೇಶ್‌ ಕುಮಾರ್‌, "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್‌ ಭಾನುವಾರ ಬೆಂಗಳೂರಿಗೆ ಬರುತ್ತಿದ್ದಾಗ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಿಧಾನ ಪರಿಷತ್ ಸದಸ್ಯರೊಬ್ಬರು ನಾಳೆ ಈ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಲಾಗುತ್ತದೆ ಎಂದಿದ್ದಾರೆ. ವಿಧಾನ ಪರಿಷತ್ ಸದಸ್ಯರು ಜ್ಯೋತಿಷಿಯೇನಲ್ಲ. ಅಂದರೆ ಈ ಪ್ರಕರಣ ನಿಷ್ಪಕ್ಷಪಾತವಾಗಿ ನಡೆಯುವುದಿಲ್ಲ ಎಂದರ್ಥ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು. ಹಾಗಾಗಿ ಎಸ್‍ಐಟಿ ತನಿಖೆಗೆ ಬೇಡ,'' ಎಂದು ಒತ್ತಾಯಿಸಿದರು.

"ತನಿಖೆ ಆಗಲೇಬೇಕು ಎನ್ನುವುದಾದರೆ, ಸದನ ಸಮಿತಿ ರಚನೆಯಾಗಲಿ. ಎಸ್‍ಐಟಿ ಬೇಡ. ಎಸ್‍ಐಟಿ ಸಿಎಂ ಮಾತೇ ಕೇಳುತ್ತದೆ. ಅಥವಾ ನ್ಯಾಯಾಂಗ ತನಿಖೆ ಆಗಬೇಕು. ನಿವೃತ್ತ ನ್ಯಾಯಾಧೀಶರ ಬದಲು ಬೇಕಾದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆಗೆ ಮುಂದಾಗಲಿ," ಎಂದು ಕೆಜಿ ಬೋಪಯ್ಯ ಈ ಸಂದರ್ಭದಲ್ಲಿ ಒತ್ತಾಯಿಸಿದರು.

"ಸ್ಪೀಕರ್ ಮೇಲೆ ಕೇಳಿ ಬಂದಿರುವ ಆರೋಪ ಸುಳ್ಳು ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ. ಇದು ಎರಡು ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆ. ಹೀಗೆ ಆಗಬಾರದಿತ್ತು. ಆದರೆ, ಆಗಿ ಹೋಗಿದೆ. ಬಜೆಟ್ ಮಂಡನೆ ಬಿಟ್ಟು ಮುಖ್ಯಮಂತ್ರಿಯಾದವರು ಸುದ್ದಿಗೋಷ್ಠಿ ಕರೆದು ಸಭಾಧ್ಯಕ್ಷರ ಹೆಸರು ಪ್ರಕಟಿಸುವ ಅಗತ್ಯವೇನಿತ್ತು. ಸಭಾಧ್ಯಕ್ಷರ ಕೊಠಡಿಯಲ್ಲೇ ಸಭೆ ಕರೆದು ಮೂರು ಪಕ್ಷಗಳ ಪ್ರಮುಖರ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದಿತ್ತು,'' ಎಂಬುದಾಗಿ ಅವರು ಆರೋಪವನ್ನು ಕುಮಾರಸ್ವಾಮಿ ತಲೆಗೆ ಕಟ್ಟಲು ಯತ್ನಿಸಿದರು.

ನನ್ನ ವಿರುದ್ದ ಕೊಲೆ ಸಂಚು :

ಆದರೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದರು. "ಸಂಪುಟ ಸದಸ್ಯನೊಬ್ಬನನ್ನು ಕೊಲೆ ಮಾಡುವ ಹುನ್ನಾರ ನಡೆಸಿದ್ದೇನೆ ಎಂದು ಈ ಹಿಂದೆ ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದಿರಿ. ಆವಾಗಲೂ ಸಹ ನಾನು ಯಾರ ವಿರುದ್ಧವೂ ಕ್ರಮಕ್ಕೆ ಮುಂದಾಗಲಿಲ್ಲ. ನಾನು ಎಂದೂ ಸರ್ಕಾರದ ಸಂಸ್ಥೆಗಳನ್ನು ನನ್ನ ಸ್ವ-ಹಿತಾಸಕ್ತಿಗಾಗಲಿ, ರಾಜಕೀಯಕ್ಕಾಗಲೀ ಬಳಸಿಕೊಂಡಿಲ್ಲ," ಎಂದು ಹೇಳಿದರು.

2008ರಲ್ಲಿ ನಡೆದ ಘಟನೆಯ ಸಿಡಿ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, "ಆ ಬಗ್ಗೆ ನಾನು ಚರ್ಚೆಗೆ ಸಿದ್ಧನಿದ್ದೇನೆ. ತನಿಖೆ ಮಾಡಿದರೂ ಸಹ ನಾನು ಎದುರಿಸಲು ಸಿದ್ಧನಿದ್ದೇನೆ. ನಿಮ್ಮ ಹಾಗೆ ಪಲಾಯನ ಮಾಡುವುದಿಲ್ಲ. ಹೇಗೋ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆಯಲ್ಲ ಅವರಿಂದಲೇ ತನಿಖೆ ಮಾಡಿಸಿ," ಎಂದು ವಿರೋಧ ಪಕ್ಷದ ನಾಯಕರಿಗೆ ಸವಾಲು ಹಾಕಿದರು.

"2008ರ ಘಟನೆ ನನ್ನ ಮನೆಯಲ್ಲಿ, ನನ್ನದೇ ಪಕ್ಷದ ವ್ಯಕ್ತಿಯೊಬ್ಬನ ಜೊತೆ ನಡೆದಿದ್ದು. ಒಬ್ಬ ವ್ಯಕ್ತಿಯನ್ನು ಎಂಎಲ್‍ಸಿ ಮಾಡುವ ಸಂಬಂಧ ನಡೆದಿದ್ದ ಸಂಭಾಷಣೆ ಅದು. ಅದು ನನ್ನ ಪಕ್ಷದ ವಿಷಯ. ಬೇಕಿದ್ದರೆ ಅದನ್ನೂ ಚರ್ಚೆಗೆ ತನ್ನಿ ಮಾತನಾಡುತ್ತೇನೆ. ಆದರೆ ಈ ವಿಷಯವನ್ನು ಅದಕ್ಕೆ ಬೆರೆಸಬೇಡಿ," ಎಂದು ಕುಮಾರಸ್ವಾಮಿ ಹೇಳಿದರು.

ನಾರಾಯಣಗೌಡ ಬಂಧನದಲ್ಲಿ

ಈ ಸಂದರ್ಭದಲ್ಲಿ ಚಿಕಿತ್ಸೆಗೆಂದು ಮುಂಬೈಗೆ ತೆರಳಿದ್ದ ನಮ್ಮ ಪಕ್ಷದ ಶಾಸಕ ನಾರಾಯಣಗೌಡರನ್ನು ಬಂಧನದಲ್ಲಿ ಇರಿಸಿದ್ದಾರೆ. ಅವರ ಸಂಬಂಧಿಕರಿಗೂ ನೋಡಲು ಬಿಡುತ್ತಿಲ್ಲ ಎಂದು ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಆರೋಪಿಸಿದರು.

ನಾರಾಯಣಗೌಡರನ್ನು ಯಾರು ಬಂಧಿಸಿಟ್ಟಿದ್ದಾರೆಂದು ನಮಗೆ ಗೊತ್ತಿಲ್ಲ. ಆದರೆ, ಅವರನ್ನು ಅಲ್ಲಿಂದ ಹೊರಕ್ಕೆ ಕರೆದುಕೊಂಡು ಬರಲು ಆಗುತ್ತಿಲ್ಲ. ಸಮ್ಮಿಶ್ರ ಸರ್ಕಾರ ರಚನೆಯಾದ ಕಳೆದ ಎಂಟು ತಿಂಗಳಿನಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿಯವರು ತೀವ್ರ ಕಿರುಕುಳ ನೀಡಿದ್ದಾರೆ. ಇದರಿಂದ ಹೆಚ್ಚಿನ ಸಂಖ್ಯೆಯ ಶಾಸಕರು ನೊಂದಿದ್ದಾರೆ. ಇದರ ಶಾಪ ಬಿಜೆಪಿಯವರಿಗೆ ತಟ್ಟುತ್ತದೆ ಎಂದು ಕಿಡಿಕಾರಿದರು.

ಆಪರೇಷನ್ ಕಮಲ ನಡೆಸಲು ಸಭಾಧ್ಯಕ್ಷರನ್ನೇ ಬುಕ್ ಮಾಡಲಾಗಿದೆ ಎಂದು ಆರೋಪಿಸಿರುವುದು ನಮಗೆ ಬಹಳ ನೋವುಂಟುಮಾಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

"ಆಡಿಯೋ ರೆಕಾರ್ಡಿಂಗ್‌ ದೇವದುರ್ಗದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆ ಇಡೀ ರಾಜ್ಯದ ರಾಜಕೀಯ ಸನ್ನಿವೇಶವನ್ನೇ ಅಸ್ಥಿರಗೊಳಿಸುವ ಪ್ರಯತ್ನವಾಗಿದೆ. ಈ ಕೆಟ್ಟ ಕೃತ್ಯದಲ್ಲಿ ಸಭಾಧ್ಯಕ್ಷರನ್ನು ಎಳೆದು ತಂದಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಪ್ರಧಾನಿಯವರ ಹೆಸರನ್ನು ತರಲಾಗಿದೆ; ನ್ಯಾಯಮೂರ್ತಿಗಳ ಹೆಸರನ್ನು ಸಹ ಎಳೆದು ತಂದಿದ್ದಾರೆ. ಇಂತಹ ಗಂಭೀರ ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಡಲು ಹೇಗೆ ಸಾಧ್ಯ?" ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.

ಬಿಜೆಪಿ ನಾಯಕರು ಮಾತೆತ್ತಿದರೆ ಈ ಸರ್ಕಾರದಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಹೇಳುತ್ತಾರೆ. ಹಾಗಾದರೆ ಇನ್ನು ಯಾವ ಸರ್ಕಾರವನ್ನು ತರಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಿಬಿಐ ಮೋದಿ ರಚಿಸಿದ್ದೇ?

ಇದಕ್ಕೆ ಧ್ವನಿ ಗೂಡಿಸಿದ ಸಚಿವ ಆರ್.ವಿ. ದೇಶಪಾಂಡೆ. ಬಿಜೆಪಿಯವರು ಪ್ರತಿಯೊಂದು ಸಂಸ್ಥೆಯ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರೆ ಹೇಗೆ ಎಂದು ಅಸಮಾಧಾನ ಪ್ರದರ್ಶಿಸಿದರು.

ವಿಶೇಷ ತನಿಖಾ ದಳವು ಮುಖ್ಯಮಂತ್ರಿ ಅವರ ಅಧೀನದಲ್ಲಿ ಬರುತ್ತದೆ ನಿಜ. ಆದರೆ, ಅದನ್ನು ಅವರೇ ರಚಿಸಿದ್ದಾರಾ? ಸಿಬಿಐ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಡುತ್ತದೆ. ಹಾಗಾದರೆ ಅದನ್ನು ಮೋದಿ ಅವರು ಸೃಷ್ಟಿಮಾಡಿದ್ದೇ? ಎಂದು ಪ್ರಶ್ನಿಸಿದರು.

ನಿನ್ನೆ ಬೆಳಗ್ಗೆಯಿಂದ ಮೌನಕ್ಕೆ ಜಾರಿದ್ದ ಪ್ರಕರಣದ ಕೇಂದ್ರ ಬಿಂದು ವಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ ದಿನದ ಕೊನೆಯಲ್ಲಿ ಎದ್ದು ನಿಂತು, “ಎಸ್‌ಐಟಿ ತನಿಖೆ ಬಗ್ಗೆ ನಮ್ಮ ಅಂದರೆ ಬಿಜೆಪಿಯ 104 ಸದಸ್ಯರ ವಿರೋಧವಿದೆ. ಸದನ ಸಮಿತಿ ರಚಿಸಿ,” ಎಂದು ಮನವಿ ಮಾಡಿಕೊಂಡರು.

“ಆಡಿಯೋದಲ್ಲಿ ನಾನು ಸ್ಪೀಕರ್ ಬಗ್ಗೆ ಮಾತನಾಡಿದ್ದರೆ ನಾನು ರಾಜಕೀಯ ನಿವೃತ್ತಿಗೆ ಸಿದ್ಧ ಎಂದಿದ್ದೆ. ಅದಕ್ಕೆ ನಾನು ಈಗಲೂ ಬದ್ಧವಾಗಿದ್ದೇನೆ. ಹಣದ ವ್ಯವಹಾರದ ಬಗ್ಗೆ ಮಾತನಾಡುವಾಗ ನಾನು ಇದ್ದೆ ಎಂದು ಈಗ ಸಾಬೀತು ಮಾಡಿದರೂ ನಾನು ನಿವೃತ್ತಿಗೆ ಸಿದ್ಧವಾಗಿದ್ದೇನೆ,” ಎಂದು ಯಡಿಯೂರಪ್ಪ ಸನ್ಯಾಸತ್ವದ ಸವಾಲು ಹಾಕಿದರು.

ಕುಮಾರಸ್ವಾಮಿ ವಿರುದ್ಧ ಮುಗಿ ಬಿದ್ದ ಅವರು “40 ನಿಮಿಷಗಳ ಬದಲು ಎಡಿಟ್‌ ಮಾಡಿ ಎರಡು ಮೂರು ನಿಮಿಷಗಳ ಆಡಿಯೋ ಮಾತ್ರ ಬಿಟ್ಟಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮಾಡಿದ ಆರೋಪ ಮುಖ್ಯಮಂತ್ರಿಗಳ ಮೇಲಿದೆ. ಮತ್ತು ಅದು ಗೊತ್ತಿದ್ದೂ ಅದನ್ನು ಬಿಡುಗಡೆ ಮಾಡುವ ಮೂಲಕ ಕುಮಾರಸ್ವಾಮಿ ತಪ್ಪು ಮಾಡಿದ್ದಾರೆ. ಮುಖ್ಯಮಂತ್ರಿಗಳು ಈ ಘಟನೆಯನ್ನು ದುರುಪಯೋಗ ಪಡಿಸಿಕೊಂಡು ಸ್ವಾರ್ಥಕ್ಕೆ, ಕುರ್ಚಿ ಉಳಿಸಿಕೊಳ್ಳಲು ಬಳಸಿದರು ಎಂಬುದು ನನ್ನ ಆರೋಪ. ಇದು ಅವರ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ,” ಎಂದು ಹೇಳಿದರು.

ಜತೆಗೆ ಸಭಾಧ್ಯಕ್ಷರಿಗೆ, ‘ಈಗಲೂ ಕಾಲ ಮಿಂಚಿಲ್ಲ ಸದನ ಸಮಿತಿ ರಚಿಸುವ ಬಗ್ಗೆ ಯೋಚಿಸಿ. ನಿಮ್ಮ ಕೊಠಡಿಗೆ ನಮ್ಮನ್ನೆಲ್ಲಾ ಕರೆಸಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬನ್ನಿ’ ಎಂದು ಪರಿ ಪರಿಯಾಗಿ ಬೇಡಿಕೊಂಡರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ “ಎಸ್‌ಐಟಿ ತೀರ್ಮಾನ ನನ್ನದಲ್ಲ. ಸ್ಪೀಕರ್‌ ಸೂಚನೆ ಮೇರೆಗೆ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ಎಸ್‌ಐಟಿ ರಚಿಸಿದ ತಕ್ಷಣ ಅಧಿಕಾರಿಗಳು ನಾನು ಹೇಳಿದ ಹಾಗೆಯೇನೂ ಕೇಳುವುದಿಲ್ಲ,” ಎಂದು ವಿವರಿಸಿದರು. “40 ನಿಮಿಷ ಆಡಿಯೋ ಬಿಡುಗಡೆ ಮಾಡಿಲ್ಲ ಎನ್ನುತ್ತಿದ್ದಾರೆ. ಎರಡು ಮೂರು ನಿಮಿಷದ್ದು ಬಿಟ್ಟಿದ್ದಕ್ಕೆ ಹೀಗೆ ಆಗಿದೆ. ಎಲ್ಲಾ ಬಿಟ್ರೆ ನಿಮ್ಮ ಗತಿ ಏನು?” ಎಂದು ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳನ್ನು ತಿವಿದರು.

ಕೊನೆಗೆ ಎರಡೂ ಬದಿಗಳ ವಾದವನ್ನು ಆಲಿಸಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, ನಾಳೆ ಬೆಳಿಗ್ಗೆ 10.30 ಕ್ಕೆ ತಮ್ಮ ಕೊಠಡಿಗೆ ಚರ್ಚೆಗೆ ಬರುವಂತೆ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರನ್ನು ಆಹ್ವಾನಿಸಿದರು. ಇಲ್ಲಿಂದ ಪ್ರಕರಣ ಯಾವ ತಿರುವನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.