samachara
www.samachara.com
ಆಡಿಯೊ ಹಗರಣಕ್ಕೆ ಎಸ್‌ಐಟಿ ತನಿಖೆ; ‘ಎಂಡ್‌ ಆಫ್‌ ದಿ ಸ್ಟೇಟ್‌’ನಲ್ಲಿ ಮಾನ ಉಳಿಸಿಕೊಂಡ ಸದನ
COVER STORY

ಆಡಿಯೊ ಹಗರಣಕ್ಕೆ ಎಸ್‌ಐಟಿ ತನಿಖೆ; ‘ಎಂಡ್‌ ಆಫ್‌ ದಿ ಸ್ಟೇಟ್‌’ನಲ್ಲಿ ಮಾನ ಉಳಿಸಿಕೊಂಡ ಸದನ

ಸದನದಲ್ಲಿ ಘನತೆಯ ಬಗ್ಗೆ ಅಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದರೂ ಆಡಿಯೊ ಪ್ರಕರಣದ ಗಂಭೀರ ಆರೋಪ ಹೊತ್ತಿರುವ ಯಡಿಯೂರಪ್ಪ ಮಾತ್ರ ಸದನದಲ್ಲಿ ತುಟಿ ಬಿಚ್ಚಲಿಲ್ಲ.

ದಯಾನಂದ

ದಯಾನಂದ

ರಾಜ್ಯ ರಾಜಕೀಯದ ಆಡಿಯೊ ಪ್ರಕರಣ ರಾಜ್ಯ ವಿಧಾನಸಭೆಯಲ್ಲಿ ಮಾತ್ರವಲ್ಲದೆ ಲೋಕಸಭೆಯಲ್ಲೂ ಚರ್ಚೆಗೆ ಬಂದಿದೆ. ರಾಜ್ಯ ವಿಧಾನಸಭೆಯಲ್ಲಿ ಸೋಮವಾರ ಮೊದಲ ಭಾಗದ ಕಲಾಪ ಪೂರ್ತಿಯಾಗಿ ಆಡಿಯೊದಲ್ಲಿ ಸ್ಪೀಕರ್‌ ವಿರುದ್ಧ ಕೇಳಿಬಂದಿರುವ ಆರೋಪಗಳ ಮೇಲೆ ಚರ್ಚೆ ನಡೆಯಿತು. ಅಂತಿಮವಾಗಿ 15 ದಿನಗಳೊಳಗೆ ಈ ಆಡಿಯೊ ಪ್ರಕರಣದ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಸ್ಪೀಕರ್‌ ರಮೇಶ್ ಕುಮಾರ್‌ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ರಾಜ್ಯದಲ್ಲಿ ಈ ಹೊಸ ಆಡಿಯೊ ರಾಜಕಾರಣದ ಕಿಡಿ ಹೊತ್ತಿದ್ದು ಶುಕ್ರವಾರ ಬೆಳಿಗ್ಗೆ. ಸದನಕ್ಕೆ ಗೈರಾಗಿದ್ದ ಅತೃಪ್ತ ಶಾಸಕರ ಕಾರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಸಮ್ಮಿಶ್ರ ಸಕಾರಕ್ಕೆ ಬಹುಮತವಿಲ್ಲ ಎಂದು ಬಜೆಟ್‌ ಅಧಿವೇಶನದ ಮೊದಲ ದಿನದಿಂದಲೂ ಸದನದಲ್ಲಿ ಗದ್ದಲ ಎಬ್ಬಿಸಿತ್ತು. ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆಯ ವೇಳೆಯಲ್ಲೂ ಬಿಜೆಪಿ ಸದಸ್ಯರು ಇದೇ ವಿಚಾರಕ್ಕೆ ಗದ್ದಲ ಎಬ್ಬಿಸಬಹುದು ಎಂಬ ನಿರೀಕ್ಷೆ ಇತ್ತು.

ಆದರೆ, ಶುಕ್ರವಾರ ಬೆಳಿಗ್ಗೆ ಕುಮಾರಸ್ವಾಮಿ ತುರ್ತು ಪತ್ರಿಕಾಗೋಷ್ಠಿ ಕರೆದು ಆಡಿಯೊ ಬಾಂಬ್‌ ಒಂದನ್ನು ಹಾಕಿದ್ದರು. ಈ ಆಡಿಯೊ ವಿಚಾರ ವಿಪಕ್ಷ ಬಿಜೆಪಿಯನ್ನು ಎಷ್ಟರ ಮಟ್ಟಿಗೆ ವಿಚಲಿತಗೊಳಿಸಿತ್ತೆಂದರೆ ಸರಕಾರದ ‘ಕಾವಲುನಾಯಿ’ಯಾಗಿ ಕೆಲಸ ಮಾಡಬೇಕಾದ ವಿಪಕ್ಷವೇ ಅಡುಗೆ ಮನೆಗೆ ನುಗ್ಗಿ ಮಡಕೆ ಒಡೆದಿರುವ ಆರೋಪಿತ ಸ್ಥಾನದಲ್ಲಿ ನಿಂತಿತ್ತು.

ಬಜೆಟ್‌ ದಿನ ಸಭಾತ್ಯಾಗ ಮಾಡಿ ಹೊರ ಹೋದ ಬಿಜೆಪಿ ಸದಸ್ಯರು, ಸೋಮವಾರ ಸದನದಲ್ಲಿ, “ಆಡಿಯೊದಲ್ಲಿ ಪ್ರಸ್ತಾಪವಾಗಿರುವ ಸ್ಪೀಕರ್‌ ವಿರುದ್ಧದ ಆರೋಪದ ಬಗ್ಗೆ ಮಾತ್ರ ತನಿಖೆ ನಡೆಯಬೇಕು” ಎಂಬ ಎಳಸುತನ ತೋರಿದರು. ಬಿಜೆಪಿ ಪರ ಆರಂಭದಲ್ಲೇ ರಕ್ಷಣೆಗೆ ನಿಂತ ಜೆ.ಸಿ. ಮಾದುಸ್ವಾಮಿ, ಪದೇ ಪದೇ ಯಡಿಯೂರಪ್ಪ ಅವರ ಬಳಿ ಹೋಗಿ ಮಾತನಾಡಿ ಬಳಿಕ ಬಂದು ಮಾತನಾಡುತ್ತಿದ್ದರು. ಆದರೆ, ಇಡೀ ಪ್ರಕರಣದಲ್ಲಿ ಗಂಭೀರ ಆರೋಪ ಹೊತ್ತಿರುವ ಯಡಿಯೂರಪ್ಪ ಮಾತ್ರ ಸದನದಲ್ಲಿ ತುಟಿ ಬಿಚ್ಚಲಿಲ್ಲ.

Also read: ‘ಐ ಆಮ್ ಎಕ್ಸ್‌ಪೋಸಿಂಗ್ ನೌ’: ಯಡಿಯೂರಪ್ಪ ಆಡಿಯೊ ಟೇಪ್‌; ಕುಮಾರಸ್ವಾಮಿ ಪತ್ರಿಕಾಗೋಷ್ಠಿ 

ಚುನಾವಣಾ ಫಲಿತಾಂಶದ ದಿನ ಬಹುಮತ ಪಡೆದ ಬಿಜೆಪಿಯ ಸಂಭ್ರಮ ಹೆಚ್ಚು ಹೊತ್ತು ಉಳಿದಿರಲಿಲ್ಲ. ಕಾರಣ ಚುನಾವಣಾ ಫಲಿತಾಂಶ ಪೂರ್ತಿಯಾಗುವ ಮೊದಲೇ ಕಾಂಗ್ರೆಸ್‌ ಜೆಡಿಎಸ್‌ ಪಕ್ಷದ ಬಾಗಿಲು ಬಡಿದು ಸರಕಾರ ರಚನೆಗೆ ಬೇಷರತ್‌ ಬೆಂಬಲ ನೀಡುವುದಾಗಿ ಹೇಳಿತ್ತು. 38 ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್‌ ಈ ಸಂದರ್ಭ ಅಳೆದು ತೂಗಿ, “ಹಿಂದೆ ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ ಕಳಂಕ ತೊಳೆದುಕೊಳ್ಳಲು ಇದು ದೇವರೇ ಕೊಟ್ಟಿರುವ ಅವಕಾಶ” ಎಂದು ಕೊನೆಗೂ ಸರಕಾರ ರಚನೆಗೆ ಮುಂದಾಗಿದ್ದತ್ತು.

ಮೂರು ದಿನಗಳ ಮುಖ್ಯಮಂತ್ರಿಯಾಗಿ ಅಧಿಕಾರ ಬಿಟ್ಟುಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮೇಲೆ ಈಗ ಗಂಭೀರ ಆರೋಪ ಎದುರಾಗಿದೆ. 50 ಕೋಟಿ ಕೊಟ್ಟು ಸ್ಪೀಕರ್‌ ಬುಕ್‌ ಮಾಡಿಕೊಂಡಿದ್ದೇವೆ ಎಂಬ ಮಾತು ಆಡಿಯೊ ಕ್ಲಿಪ್‌ನಲ್ಲಿದೆ. ಈ ಆಡಿಯೊದಲ್ಲಿರುವ ಧ್ವನಿ ನನ್ನದೇ ಎಂದೂ ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಆದರೆ, ಈ ಹಿಂದೆ ಹೇಳಿದ್ದಂತೆ ಆಡಿಯೊದ ಉಳಿದ ಭಾಗ ಹಾಗೂ ವಿಡಿಯೊವನ್ನು ಬಿಜೆಪಿ ಸೋಮವಾರ ಸದನದಲ್ಲಿ ಬಿಡುಗಡೆ ಮಾಡಿಲ್ಲ. ಅಲ್ಲದೆ, ಆಡಿಯೊ- ವಿಡಿಯೊ ಬಿಡುಗಡೆ ಮಾಡುವ ಯಾವ ಲಕ್ಷಣಗಳೂ ಇಂದು ಸದನದಲ್ಲಿ ಕಾಣಲಿಲ್ಲ.

ಸ್ಪೀಕರ್‌ ವಿರುದ್ಧವೇ ಹಣ ಪಡೆದ ಆರೋಪ ಕೇಳಿಬಂದಿದ್ದರಿಂದ ಈ ಪ್ರಕರಣ ಸಹಜವಾಗಿಯೇ ದೇಶದ ಗಮನ ಸೆಳೆದಿತ್ತು. ಲೋಕಸಭೆಯಲ್ಲೂ ಈ ವಿಚಾರವನ್ನು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ನಡೆಸುತ್ತಿರುವ ಆಪರೇಷನ್‌ ಕಮಲದ ಬಗ್ಗೆ ಖರ್ಗೆ ಆಡಿಯೊ ಪ್ರಕರಣದ ಹಿನ್ನೆಲೆಯಲ್ಲಿ ಆರೋಪ ಮಾಡಿದ್ದಾರೆ.

ಹಣೆ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಸಿಕೊಂಡಿರುವ ವಿಧಾನಸೌಧ 
ಹಣೆ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂದು ಬರೆಸಿಕೊಂಡಿರುವ ವಿಧಾನಸೌಧ 
/ ಸ್ಟಾರ್‌ ಆಫ್‌ ಮೈಸೂರ್

ಆಡಿಯೊ ಸುದ್ದಿಯಾಗಿದ್ದು...

ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಮೇ ತಿಂಗಳಲ್ಲೇ ಕಾಂಗ್ರೆಸ್‌ ಶಾಸಕರನ್ನು ಸೆಳೆಯುವ ಪ್ರಯತ್ನಗಳನ್ನು ಬಿಜೆಪಿ ನಡೆಸಿತ್ತು. ಸಮ್ಮಿಶ್ರ ಸರಕಾರ ಅಸ್ಥಿತ್ವಕ್ಕೆ ಬರುವ ಮುನ್ನವೇ ಯಡಿಯೂರಪ್ಪ ತಮ್ಮ ಸರಕಾರ ಭದ್ರಪಡಿಸಿಕೊಳ್ಳುವ ಪ್ರಯತ್ನವಾಗಿ ಕಾಂಗ್ರೆಸ್‌ ಶಾಸಕರಿಗೆ ಆಮಿಷವೊಡ್ಡುವ ಪ್ರಯತ್ನ ನಡೆಸಿದ್ದರು. ಕಾಂಗ್ರೆಸ್‌ ಶಾಸಕ ಬಿ.ಸಿ. ಪಾಟೀಲ್‌ ಮತ್ತು ಯಡಿಯೂರಪ್ಪ ನಡುವೆ ನಡೆದಿದ್ದ ಸಂಭಾಷಣೆಯ ಆಡಿಯೊ ಆಗಲೇ ಸದ್ದು ಮಾಡಿತ್ತು.

ಬಿ.ಸಿ. ಪಾಟೀಲ್‌ ಜತೆಗಿನ ಆಡಿಯೊ ಸಂಭಾಷಣೆಯಲ್ಲಿ ಇರುವುದು ನನ್ನ ಧ್ವನಿಯೇ ಎಂದು ಯಡಿಯೂರಪ್ಪ ಆಗಲೂ ಒಪ್ಪಿಕೊಂಡಿದ್ದರು. ಈಗಲೂ ಆಡಿಯೊದಲ್ಲಿರುವ ಧ್ವನಿ ನನ್ನದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಸಮ್ಮಿಶ್ರ ಸರಕಾರ ಉರುಳಿಸುವ ಪ್ರಯತ್ನಗಳ ಆಡಿಯೊಗಳಲ್ಲಿ ಇರುವುದು ತಮ್ಮದೇ ಧ್ವನಿ ಎಂದು ಯಡಿಯೂರಪ್ಪ ಹೀಗೆ ಪದೇ ಪದೇ ಒಪ್ಪಿಕೊಳ್ಳುತ್ತಿರುವುದು ರಾಷ್ಟ್ರೀಯ ಮಟ್ಟದಲ್ಲೂ ಬಿಜೆಪಿಗೆ ಮುಖಭಂಗ ಉಂಟಾಗುವಂತೆ ಮಾಡಿದೆ. ಹೀಗಾಗಿಯೇ ಭಾನುವಾರ ಹುಬ್ಬಳ್ಳಿಗೆ ಬಂದಿದ್ದ ಮೋದಿ ಆಡಿಯೊ ವಿಚಾರ ಕೆದಕದೆ ಮಾಮೂಲಿಯಾದ ಚುನಾವಣಾ ಪ್ರಚಾರದ ಭಾಷಣ ಮುಗಿಸಿ ಹೋಗಿದ್ದಾರೆ.

Also read: ಆಡಿಯೊ ತಂತ್ರಕ್ಕೆ ವಿಡಿಯೊ ಪ್ರತಿತಂತ್ರ; ಇದು ರಾಜಕೀಯದ ‘ಕಳ್ಳ-ಪೊಲೀಸ್’ ಆಟ!

ದೂರವಾಣಿ ಕದ್ದಾಲಿಕೆ & ಹೆಗಡೆ ರಾಜೀನಾಮೆ

80ರ ದಶಕದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣ ಭಾರೀ ರಾಜಕೀಯ ಸಂಚಲನ ಸೃಷ್ಟಿಸಿತ್ತು ಎನ್ನುತ್ತದೆ ಇತಿಹಾಸ. 1988ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಎಚ್‌.ಡಿ. ದೇವೇಗೌಡ ಸೇರಿದಂತೆ ಪಕ್ಷದ ಹಾಗೂ ವಿಪಕ್ಷಗಳ ನಾಯಕರ ದೂರವಾಣಿ ಸಂಭಾಷಣೆಗಳನ್ನು ಕದ್ದಾಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪವನ್ನು ಅಲ್ಲಗಳೆದರೂ ರಾಮಕೃಷ್ಣ ಹೆಗಡೆ ಈ ಆರೋಪದ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಮುಂದೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ವೀರೇಂದ್ರ ಪಾಟೀಲ್‌ 1990ರಲ್ಲಿ ರಾಮಕೃಷ್ಣ ಹೆಗಡೆ ವಿರುದ್ಧ ದೂರವಾಣಿ ಕದ್ದಾಲಿಕೆಯ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಆದರೆ, ಅಷ್ಟೊತ್ತಿಗೆ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿ ಎರಡು ವರ್ಷವಾಗಿತ್ತು. ಇದೆಲ್ಲಾ ಮೂರು ದಶಕದ ಹಿಂದಿನ ರಾಜಕೀಯ. ಈಗಿನ ರಾಜಕೀಯ ಸಂದರ್ಭದಲ್ಲಿ ಸಾರ್ವಜನಿಕ ಬದುಕಿನ ನಾಚಿಕೆ, ರಾಜಕೀಯ ಲಜ್ಜೆ ಎಂಬುದಕ್ಕೆ ಬೆಲೆ ಉಳಿದಿಲ್ಲ. ಈ ಕಾರಣಕ್ಕಾಗಿಯೇ ಸೋಮವಾರ ಸದಸನದಲ್ಲಿ ಮಾತನಾಡಿದ ಸಚಿವ ಡಿ. ಕೆ. ಶಿವಕುಮಾರ್, ಶಾಸಕರ ಗೌರವ ಉಳಿಸುವ ನಿಟ್ಟಿನಲ್ಲಿ ಮುಂದಾಗಿ ಎಂದ ಸ್ವೀಕರ್‌ಗೆ ಮನವಿ ಮಾಡಿದರು.

ರಾಮಕೃಷ್ಣ ಹೆಗಡೆ ಜತೆಗೆ ದೇವೇಗೌಡ
ರಾಮಕೃಷ್ಣ ಹೆಗಡೆ ಜತೆಗೆ ದೇವೇಗೌಡ
/ ಔಟ್‌ಲುಕ್‌

ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಆಡಳಿತ ಪಕ್ಷ ಒಂದು ಆಡಿಯೊ ಬಿಡುಗಡೆ ಮಾಡಿದರೆ, ಆಡಳಿತ ಪಕ್ಷದ ವಿರುದ್ಧ ವಿಪಕ್ಷ ಮತ್ತೊಂದು ಆಡಿಯೊ ಬಿಡುಗಡೆ ಮಾಡುವ ಸನ್ನಿವೇಶ ಈಗ ಸೃಷ್ಟಿಯಾಗಿದೆ. ಯಡಿಯೂರಪ್ಪ ಆಡಿಯೊ ಬಿಡುಗಡೆಯ ಹಿಂದೆಯೇ ಬಿಜೆಪಿ ಕುಮಾರಸ್ವಾಮಿ - ವಿಜುಗೌಡ ಬೆಂಬಲಿಗರ ಮಾತುಕತೆಯ ಆಡಿಯೊ ಬಿಡುಗಡೆ ಮಾಡಿದೆ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇಬ್ಬರೂ ಹೇಳುತ್ತಿರುವುದು ಏನೆಂದರೆ, ಆಡಿಯೊದಲ್ಲಿರುವ ಧ್ವನಿ ತಮ್ಮದೇ. ಆದರೆ, ವಿರೋಧಿಗಳು ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಎಡಿಟ್‌ ಮಾಡಿದ್ದಾರೆ ಎಂದು.

ಯಡಿಯೂರಪ್ಪ ಸ್ಪೀಕರ್‌ಗೇ 50 ಕೋಟಿ ಕೊಟ್ಟು ಬುಕ್‌ ಮಾಡಿರುವ ಮಾತನಾಡಿರುವುದು ಹಾಗೂ ಕುಮಾರಸ್ವಾಮಿ 6 ವರ್ಷಗಳ ಹಿಂದೆ ಎಂಎಲ್‌ಸಿ ಸ್ಥಾನಕ್ಕಾಗಿ 25 ಕೋಟಿ ಕೊಡಬೇಕಾಗುತ್ತೆ ಎಂದು ಹೇಳಿರುವುದು ಎರಡೂ ಸಮರ್ಥನೀಯವಲ್ಲ. ಯಡಿಯೂರಪ್ಪ ಮಾತನಾಡಿರುವ ಆಡಿಯೊ ಮಾಡಿಸಿದ್ದೇ ನಾನು ಎಂದು ಹೇಳಿದ್ದ ಕುಮಾರಸ್ವಾಮಿಯೂ ಕೂಡಾ ಈಗ ಈ ಪ್ರಕರಣದ ಕಟಕಟೆಯಕಲ್ಲೇ ನಿಂತಿದ್ದಾರೆ. ಹೀಗಾಗಿ ಸ್ಪೀಕರ್‌ ಅವರೇ ತನಿಖೆಗೆ ಆದೇಶಿಸಲಿ ಎಂದು ಬಿಜೆಪಿ ಒತ್ತಾಯಿಸುತ್ತಿದೆ.

ಸೋಮವಾರದ ಕಲಾಪದ ವೇಳೆ ತಮ್ಮ ವಿರುದ್ಧದ ಆರೋಪದ ಬಗ್ಗೆ ಭಾವುಕರಾಗೇ ಮಾತನಾಡಿದ ಸ್ಪೀಕರ್‌ ರಮೇಶ್‌ ಕುಮಾರ್‌ ಸದನದ ಘನತೆಯನ್ನು ಕಾಯಬೇಕಾದ ಹೊಣೆ ಸದನದ ಸದಸ್ಯರೆಲ್ಲರಿಗೂ ಇದೆ ಎಂಬುದನ್ನು ನೆನಪಿಸಿದ್ದಾರೆ. ಶಾಸನ ಸಭೆಯ ಘನತೆಯ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಯುವ ಸಂದರ್ಭದ ಒಂದು ಹಂತದಲ್ಲಿ ರಮೇಶ್‌ ಕುಮಾರ್‌, "ಈ ಸಭೆಗೆ ಈ ಯೋಗ್ಯತೆಯೂ ಇದೆ ಎಂದು ಮಾಧ್ಯಮದರಿಗೆ ಅನಿಸಿರಬಹುದು" ಎಂದಿದ್ದಾರೆ.

Also read: ‘ಆಡಿಯೊ ನನ್ನದೇ, ಉಳಿದ ಭಾಗ ಸದನದಲ್ಲಿ ಬಿಡುತ್ತೇನೆ’: ‘ಧ್ವನಿ ತಂತ್ರ’ಕ್ಕೆ ಬಿಎಸ್‌ವೈ ಟ್ವಿಸ್ಟ್‌!

ಸ್ಪೀಕರ್‌ಗೆ ಸಂವಿಧಾನದತ್ತವಾಗಿ ಬಂದಿರುವ ಕರ್ತವ್ಯಗಳ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರೆ, ಡಿ.ಕೆ. ಶಿವಕುಮಾರ್, ಸಾ.ರಾ. ಮಹೇಶ್‌, ಎ.ಟಿ. ರಾಮಸ್ವಾಮಿ ಜನಪ್ರತಿನಿಧಿಗಳ ಬಗ್ಗೆ ಜನ ಸಾಮಾನ್ಯರು ತುಚ್ಛವಾಗಿ ಮಾತನಾಡಿಕೊಳ್ಳುವ ಪರಿಸ್ಥಿತಿಯನ್ನು ನಾವು ನಿರ್ಮಿಸಿದ್ದೇವೆ ಎಂದಿದ್ದಾರೆ. ಸದನದ ಘನತೆ ಹಾಳಾದರೆ ಅದು 'ಎಂಡ್‌ ಆಫ್‌ ದಿ ಸ್ಟೇಟ್‌' ಎಂಬ ಮಾತುಗಳನ್ನು ರಮೇಶ್‌ ಕುಮಾರ್‌ ತಮ್ಮ ಮಾತಿನ ಆರಂಭದಲ್ಲಿ ಉಲ್ಲೇಖಿಸಿದ್ದೂ ಇದೇ ಕಾರಣಕ್ಕೆ. ಜನಪ್ರತಿನಿಧಿಗಳು ಎಂದರೆ ಜನರು ಕಳ್ಳರು, ಅಪ್ರಾಮಾಣಿಕರು, ಲಂಪಟರು ಎಂಬಂತೆ ಕಾಣುತ್ತಿರುವುದಕ್ಕೆ ಕಾರಣ ಜನಪ್ರತಿನಿಧಿಗಳ ಇತ್ತೀಚಿನ ನಡವಳಿಕೆಗಳು.

ಲಜ್ಜೆಗೆಟ್ಟ ರಾಜಕಾರಣಕ್ಕೆ ನಿಂತಿರುವ ಜನಪ್ರತಿನಿಧಿಗಳು ಇಂದು ಸದನದಲ್ಲಿ ತುಸು ಹೆಚ್ಚೇ ಘನತೆಯಿಂದ ವರ್ತಿಸಿದ್ದಾರೆ. ಒಳಗೊಳಗೆ ನಾವೆಷ್ಟೇ ಕಿತ್ತಾಡಿಕೊಂಡರೂ ಹೊರಗೆ ನೋಡುವವರಿಗೆ ‘ನೂರೈವರಾವಲ್ಲವೆ’ ಎಂಬಂತೆ ಇದ್ದು ಸದನದ ಘನತೆ ಕಾಪಾಡಿಕೊಳ್ಳುವ ಬಗ್ಗೆ ಒಂದಿಷ್ಟು ಆತ್ಮಾವಲೋಕನಕ್ಕೆ ಇಂದಿನ ಕಲಾಪ ಸಾಕ್ಷಿಯಾದಂತಿತ್ತು.

ಆಡಿಯೊ ಪ್ರಕರಣದ ಹಿನ್ನೆಲೆಯಲ್ಲಿ ಇಡೀ ದೇಶವೇ ಇಂದು ರಾಜ್ಯ ವಿಧಾನಸಭೆಯ ಕಲಾಪವನ್ನು ಕುತೂಹಲದಿಂದ ನೋಡುತ್ತಿರುತ್ತದೆ ಎಂಬ ಕಾರಣಕ್ಕೆ ಇಂದು ಕಲಾಪ ಹೀಗಿತ್ತೋ ಅಥವಾ ನಿಜಕ್ಕೂ ಜನಪ್ರತಿನಿಧಿಗಳಿಗೆ ಸ್ವಲ್ಪವಾದರೂ ತಮ್ಮ ಸ್ಥಾನದ ಬಗ್ಗೆ ಘನತೆಯ ಅರಿವು ಮೂಡಿದೆಯೋ ಎಂಬುದು ಮುಂದಿನ ದಿನಗಳಲ್ಲಿ ಅವರ ನಡೆಗಳಿಂದಲೇ ಗೊತ್ತಾಗುತ್ತದೆ.