samachara
www.samachara.com
ರಫೇಲ್ ಡೀಲ್‌ಗೂ ಮೊದಲು ಭ್ರಷ್ಟಾಚಾರ ವಿರೋಧಿ ನಿಯಮಗಳಿಗೆ ತಿಲಾಂಜಲಿ ಇಟ್ಟಿತ್ತು ಮೋದಿ ಸರಕಾರ...
COVER STORY

ರಫೇಲ್ ಡೀಲ್‌ಗೂ ಮೊದಲು ಭ್ರಷ್ಟಾಚಾರ ವಿರೋಧಿ ನಿಯಮಗಳಿಗೆ ತಿಲಾಂಜಲಿ ಇಟ್ಟಿತ್ತು ಮೋದಿ ಸರಕಾರ...

ನಿಯಮಗಳಲ್ಲಿ ಬದಲಾವಣೆ ಮಾಡಿ “ಐಎಎಫ್‌ನಿಂದ ಅನಿಲ್‌ ಅಂಬಾನಿಗೆ 30,000 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲು ಸ್ವತಃ ಚೌಕಿದಾರರು ಬಾಗಿಲು ತೆರೆದುಕೊಟ್ಟಿದ್ದಾರೆ,” ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಕಾರಣಗಳೂ ಇವೆ. 

Team Samachara

ಫ್ರಾನ್ಸ್‌ ಜತೆ 64 ಸಾವಿರ ಕೋಟಿ ರೂಪಾಯಿ ಮೊತ್ತದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಪ್ರಧಾನಿ ನರೇಂದ್ರ ಮೋದಿ ಸರಕಾರ, ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಕೈ ಬಿಟ್ಟಿರುವುದು ತಿಳಿದು ಬಂದಿದೆ.

ಈ ಕುರಿತು ಮತ್ತೊಂದು ಎಕ್ಸ್‌ಕ್ಲೂಸಿವ್‌ ವರದಿ ಪ್ರಕಟಿಸಿರುವ 'ದಿ ಹಿಂದೂ', ರಫೇಲ್‌ ಡೀಲ್‌ಗಾಗಿ ‘ಭ್ರಷ್ಟಾಚಾರ ವಿರೋಧಿ ದಂಡ ಮತ್ತು ಎಸ್ಕ್ರೊ (ಮೂರನೇ ವ್ಯಕ್ತಿಗಳ) ಖಾತೆಯ ಮೂಲಕ ಹಣ ಪಾವತಿಸುವ ನಿಯಮ’ಗಳನ್ನು ಕೈ ಬಿಟ್ಟಿರುವುದಾಗಿ ಹೇಳಿದೆ.

ಭಾರತ ಮತ್ತು ಫ್ರಾನ್ಸ್‌ ಒಪ್ಪಂದಕ್ಕೆ ಸಹಿ ಹಾಕುವ ಕೆಲವೇ ದಿನಗಳ ಮೊದಲು ನಿಯಮಾವಳಿಗಳಲ್ಲಿನ ಈ ಬದಲಾವಣೆಗಳನ್ನು ಮಾಡಲಾಗಿತ್ತು. ‘ದಿ ಹಿಂದೂ’ ಪ್ರಕಾರ ನರೇಂದ್ರ ಮೋದಿ ಸರಕಾರ, ರಕ್ಷಣಾ ಸ್ವಾಧೀನ ಪ್ರಕ್ರಿಯೆಯ ಷರತ್ತುಗಳನ್ನು ರದ್ದುಗೊಳಿಸಿತ್ತು. ಪೂರೈಕೆಯ ಶಿಷ್ಟಾಚಾರಗಳಲ್ಲಿ ಇದ್ದ, 'ಅನಗತ್ಯ ಪ್ರಭಾವ, ಮಧ್ಯವರ್ತಿಗಳು/ ಏಜೆನ್ಸಿ ಕಮಿಷನ್ ಬಳಕೆಗೆ ಇದ್ದ ದಂಡ ಮತ್ತು ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಮತ್ತು ಎಮ್‌ಬಿಡಿಎ ಕಂಪೆನಿಯ ಖಾತೆಗಳ ಪರಿಶೀಲನೆಗೆ’ ಇದ್ದ ಅವಕಾಶಗಳ ಮೇಲಿನ ನಿಯಮಗಳನ್ನು ರದ್ದುಗೊಳಿಸಲಾಗಿತ್ತು.

ರಫೇಲ್‌ ಯುದ್ಧ ವಿಮಾನ ಪೂರೈಕೆದಾರ ಕಂಪನಿಯಾದರೆ, ಎಂಬಿಡಿಎ ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಪೂರೈಕೆ ಮಾಡುವ ಕಂಪನಿಯಾಗಿತ್ತು. ಈ ಹಿಂದೆ ವರದಿ ಮಾಡಿದಂತೆ ಈ ರೀತಿಯ ಶಿಷ್ಟಾಚಾರ ಉಲ್ಲಂಘನೆಗಳನ್ನು ಸರಕಾರಿ ಅಧಿಕಾರಿಗಳೇ ವಿರೋಧಿಸಿದ್ದರು.

ಪತ್ರಿಕೆಯ ವರದಿ ಪ್ರಕಾರ, ಪರಿಕ್ಕರ್‌ ನೇತೃತ್ವದ ರಕ್ಷಣಾ ಸ್ವಾಧೀನ ಸಮಿತಿ ಸೆಪ್ಟೆಂಬರ್‌ 2016ರಲ್ಲಿ ‘ಐಜಿಎ, ಪೂರೈಕೆ ಶಿಷ್ಟಾಚಾರ, ಆಫ್‌ಸೆಟ್‌ ಕಾಂಟ್ರಾಕ್ಟ್‌ ಮತ್ತು ಆಫ್‌ಸೆಟ್‌ ವೇಳಾಪಟ್ಟಿ’ಯಲ್ಲಿ 8 ಬದಲಾವಣೆಗಳಿಗೆ ಒಪ್ಪಿಗೆ ಸೂಚಿಸಿತ್ತು. ಆಗಸ್ಟ್‌ 2016ರಲ್ಲಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿ ಐಜಿಎ ಮತ್ತು ಇತರ ದಾಖಲೆಗಳಿಗೆ ಒಪ್ಪಿಗೆ ನೀಡಿದ ನಂತರ ಈ ಬೆಳವಣಿಗೆ ನಡೆದಿತ್ತು.

ಐಜಿಎ ಅಡಿಯಲ್ಲಿ ವ್ಯಾವಹಾರಿಕ ಪೂರೈಕೆದಾರರ ಜತೆ ನೇರ ಒಪ್ಪಂದ ಕುದುರಿಸುತ್ತಿರುವುದನ್ನು ಫ್ರಾನ್ಸ್‌ ಜತೆಗಿನ ಸಮಾಲೋಚನೆ ತಂಡದ ಮೂವರು ಸದಸ್ಯರು ವಿರೋಧಿಸಿದ್ದರು. ಬೆಲೆಗಳ ಬಗೆಗಿನ ಸಲಹೆಗಾರರಾದ ಎಂ.ಪಿ. ಸಿಂಗ್‌, ವಾಯುಸೇನೆ ಹಣಕಾಸು ವ್ಯವಸ್ಥಾಪಕ ಎ.ಆರ್‌. ಸುಳೆ ಮತ್ತು ಸ್ವಾಧೀನ ವ್ಯವಸ್ಥಾಪಕ ಹಾಗೂ ವಾಯುಸೇನೆಯ ಜಂಟಿ ಕಾರ್ಯದರ್ಶಿ ರಾಜೀವ್‌ ವರ್ಮಾ ಸರಕಾರ ನಡೆಸಲು ಹೊರಟಿದ್ದ ಒಪ್ಪಂದವನ್ನು ಗಟ್ಟಿ ದನಿಯಲ್ಲಿ ವಿರೋಧಿಸಿದ್ದರು.

ಸ್ವಾಧೀನ ಪ್ರಕ್ರಿಯೆಲ್ಲಿ ಬ್ಯಾಂಕ್‌ ಭದ್ರತೆ ನೀಡುವ ಪ್ರಕ್ರಿಯೆಯನ್ನು ಕೈ ಬಿಟ್ಟಿದ್ದೂ ಈ ಐಜಿಎ ಬದಲಾವಣೆಗಳಲ್ಲಿ ಸೇರಿತ್ತು. ಇದಕ್ಕೂ ಅಧಿಕಾರಿಗಳ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಲ್ಲದೆ ಲೆಟರ್‌ ಆಫ್‌ ಕಂಫರ್ಟ್‌ ಜಾರಿಯಾದ ನಂತರ ಮಾಜಿ ರಕ್ಷಣಾ ಅಧಿಕಾರಿ ಸುಧಾಂಶು ಮೊಹಾಂತಿ ಮನವಿಯೊಂದನ್ನು ಸಲ್ಲಿಸಿದ್ದರು. ಇದನ್ನೂ ಒಪ್ಪಂದದ ಸಂದರ್ಭದಲ್ಲಿ ತಳ್ಳಿ ಹಾಕಲಾಗಿತ್ತು.

ಇದಕ್ಕೂ ಮೊದಲು ಫ್ರಾನ್ಸ್‌ ಎಸ್ಕ್ರೋ ಖಾತೆಯನ್ನು ಹೊಂದಿರಬೇಕು ಎಂಬ ಪ್ರಸ್ತಾಪವನ್ನೂ ತಳ್ಳಿ ಹಾಕಲಾಗಿತ್ತು. ಇದರ ಪ್ರಕಾರ ಭಾರತ ಖಾತೆಯೊಂದಕ್ಕೆ ಹಣವನ್ನು ಬಿಡುಗಡೆ ಮಾಡುತ್ತಿತ್ತು. ನಂತರ ಐಜಿಎ ಷರತ್ತುಗಳಿಗೆ ಎರಡೂ ಸರಕಾರಗಳು ಒಪ್ಪಿದಂತೆ ಫ್ರಾನ್ಸ್‌ ಸರಕಾರ ಈ ಹಣವನ್ನು ಕಂಪನಿಗೆ ಬಿಡುಗಡೆ ಮಾಡಬೇಕಿತ್ತು.

"ಇದು ಸ್ವಾಧೀನ ಪ್ರಕ್ರಿಯೆಗೆ ಫ್ರೆಂಚ್‌ ಸರಕಾರವನ್ನು ನೈತಿಕವಾಗಿ ಮತ್ತು ವಸ್ತುನಿಷ್ಠವಾಗಿ ಜವಾಬ್ದಾರಿಯನ್ನಾಗಿ ಮಾಡುತ್ತಿತ್ತು," ಎಂದು ದಿ ಹಿಂದೂಗೆ ಸಿಕ್ಕಿರುವ ದಾಖಲೆಯಲ್ಲಿ ಮೊಹಾಂತಿ ಹೇಳುತ್ತಾರೆ. ಆದರೆ ಇದನ್ನು ಸರಕಾರ ಸಾರಾ ಸಗಟಾಗಿ ತಳ್ಳಿ ಹಾಕಿತು.

ರಕ್ಷಣಾ ಇಲಾಖೆ ಆರ್ಥಿಕ ಸಲಹೆಗಾರ ಸುಧಾಂಶು ಮೊಹಾಂತಿ ಪತ್ರ.
ರಕ್ಷಣಾ ಇಲಾಖೆ ಆರ್ಥಿಕ ಸಲಹೆಗಾರ ಸುಧಾಂಶು ಮೊಹಾಂತಿ ಪತ್ರ.
/ದಿ ಹಿಂದೂ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ನಿಯಮಗಳಲ್ಲಿ ಬದಲಾವಣೆ ಮಾಡಿ “ಐಎಎಫ್‌ನಿಂದ ಅನಿಲ್‌ ಅಂಬಾನಿಗೆ 30,000 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲು ಸ್ವತಃ ಚೌಕಿದಾರರು ಬಾಗಿಲು ತೆರೆದುಕೊಟ್ಟಿದ್ದಾರೆ,” ಎಂದು ಆರೋಪಿಸಿದ್ದಾರೆ.

ಈ ಹಿಂದೆ ರಫೇಲ್‌ ಡೀಲ್‌ನಲ್ಲಿ ಪ್ರಧಾನಿ ಸಚಿವಾಲಯ ನೇರವಾಗಿ ಭಾಗಿಯಾಗಿದೆ ಎಂಬುದಕ್ಕೆ ಸಾಕ್ಷ್ಯ ನೀಡಿದ್ದ ‘ದಿ ಹಿಂದೂ’ ಇದೀಗ ಒಪ್ಪಂದದ ಸಂದರ್ಭದಲ್ಲಿ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿತ್ತು ಎಂಬುದಕ್ಕೆ ಪುರಾವೆ ನೀಡಿದೆ. ಒಂದು ಕಾಲದಲ್ಲಿ ಬೋಫೋರ್ಸ್‌ ಹಗರಣವನ್ನು ಜನರ ಮುಂದಿಟ್ಟು ಅದರ ಸುತ್ತ ಚುನಾವಣಾ ಚರ್ಚೆಯ ಕೇಂದ್ರವಿರುವಂತೆ ನೋಡಿಕೊಂಡಿದ್ದ ‘ದಿ ಹಿಂದೂ’ ಮುಂದಿನ ದಿನಗಳಲ್ಲಿ ರಫೇಲ್‌ ಕುರಿತು ಪ್ರಕಟಿಸಲಿರುವ ಸುದ್ದಿಗಳು ಕುತೂಹಲ ಹುಟ್ಟಿಸಿವೆ.

Also read: ‘ದಿ ಹಿಂದೂ’ ರಫೇಲ್‌ EXCLUSIVE: ಸುಪ್ರೀಂಗೆ ಸುಳ್ಳು ಮಾಹಿತಿ, ಡೀಲ್‌ನಲ್ಲಿ ಪಿಎಂಓ ಕೈವಾಡ