samachara
www.samachara.com
‘ಆಡಿಯೊ ನನ್ನದೇ, ಉಳಿದ ಭಾಗ ಸದನದಲ್ಲಿ ಬಿಡುತ್ತೇನೆ’: ‘ಧ್ವನಿ ತಂತ್ರ’ಕ್ಕೆ ಬಿಎಸ್‌ವೈ ಟ್ವಿಸ್ಟ್‌!
COVER STORY

‘ಆಡಿಯೊ ನನ್ನದೇ, ಉಳಿದ ಭಾಗ ಸದನದಲ್ಲಿ ಬಿಡುತ್ತೇನೆ’: ‘ಧ್ವನಿ ತಂತ್ರ’ಕ್ಕೆ ಬಿಎಸ್‌ವೈ ಟ್ವಿಸ್ಟ್‌!

ಮಂಜುನಾಥನ ಮುಂದೆ ನಿಂತು ಎಚ್‍ಡಿಕೆ ಮಾತನಾಡಿದ್ದಕ್ಕೆ ಬಿಎಸ್‍ವೈ ಬೆದರಿದ್ದಾರಾ ಅಥವಾ ಪ್ರಕರಣದ ತನಿಖೆಗೆ ಬೆದರಿ ಯಡಿಯೂರಪ್ಪ ನಿಜ ಒಪ್ಪಿಕೊಂಡಿದ್ದಾರಾ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಎದ್ದಿದೆ.

Team Samachara

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೊದಲ್ಲಿನ ಧ್ವನಿ ನನ್ನದೇ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಈ ಮೂಲಕ ಆಪರೇಷನ್ ಕಮಲದ ಮೂಲಕ ಬಿಜೆಪಿ ಹಣದ ಆಮಿಷವೊಡ್ಡಿ,‌ ತಮ್ಮ ಪಕ್ಷದ ಶಾಸಕರನ್ನು ಸೆಳೆಯುತ್ತದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗಿದೆ.

“ಯಡಿಯೂರಪ್ಪನವರಿಗೆ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳಲು ಆ ಮಂಜುನಾಥ ಸ್ವಾಮಿ ಈಗಲಾದರೂ ಬುದ್ದಿ ಕೊಟ್ಡಿರುವುದು ತುಂಬಾ ಸಂತೋಷ” ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಇನ್ನು ಕಾಂಗ್ರೆಸ್ ಬಿಎಸ್‌ವೈ ತಾವೇ ಹೇಳಿದಂತೆ ರಾಜಕೀಯ ನಿವೃತ್ತಿ ಪಡೆಯಬೇಕೆಂದು ಆಗ್ರಹಿಸಿದೆ.

ಶನಿವಾರ ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಾಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಚ್‍.ಡಿ. ಕುಮಾರಸ್ವಾಮಿ, ಬಜೆಟ್‌ಗೂ ಮುನ್ನ ತಾವು ಬಿಡುಗಡೆ ಮಾಡಿದ್ದ ಆಡಿಯೊ ಬಗ್ಗೆ ಮಾತನಾಡಿದ್ದರು. ಆಡಿಯೊದಲ್ಲಿರುವುದು ಯಡಿಯೂರಪ್ಪ ಅವರದ್ದೇ ಧ್ವನಿಯಾಗಿದೆ. ಒಂದು ವೇಳೆ ಇದು ಸಾಬೀತಾಗದಿದ್ದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದರು.

ಮಂಜುನಾಥನ ಮುಂದೆ ನಿಂತು ಎಚ್‍ಡಿಕೆ ಮಾತನಾಡಿದ್ದಕ್ಕೆ ಬಿಎಸ್‍ವೈ ಬೆದರಿದ್ದಾರಾ ಅಥವಾ ಪ್ರಕರಣದ ತನಿಖೆಗೆ ಬೆದರಿ ಯಡಿಯೂರಪ್ಪ ನಿಜ ಒಪ್ಪಿಕೊಂಡಿದ್ದಾರಾ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಎದ್ದಿದೆ.

ಭಾನುವಾರ ಹುಬ್ಬಳ್ಳಿಯಲ್ಲಿ ಮಾತನಾಡಿದ ಯಡಿಯೂರಪ್ಪ, “ನನ್ನ ಬಳಿ ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಅವರ ಪುತ್ರ ಶರಣ್ ಗೌಡ ಮಾತನಾಡಿದ್ದು ನಿಜ. ಆದರೆ ಅವರನ್ನು ಕುಮಾರಸ್ವಾಮಿ ಅವರೇ ನನ್ನ ಬಳಿ ಕಳುಹಿಸಿಕೊಟ್ಟಿದ್ದಾರೆ. ಆಡಿಯೊ ಹಿಂದೆ ಅವರು ಕುತಂತ್ರ ರಾಜಕೀಯ ನಡೆಸಿದ್ದಾರೆ” ಎಂದಿದ್ದಾರೆ.

“ಆಡಿಯೊದಲ್ಲಿ ನಾನು ಮಾತನಾಡಿದ ವಿಚಾರಗಳು ಬೇರೆಯೇ ಇದೆ. ಆದರೆ ಕುಮಾರಸ್ವಾಮಿ ಅವರಿಗೆ ಬೇಕಾಗಿರುವುದನ್ನು ಮಾತ್ರ ಬಳಸಿಕೊಂಡು ಸತ್ಯವನ್ನು ಮರೆಮಾಚಿದ್ದಾರೆ. ಆಮೂಲಕ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಆಡಿಯೊದ ಮುಂದುವರಿದ ಭಾಗವನ್ನು ಸೋಮವಾರ ಸದನದಲ್ಲಿ ಬಿಡುಗಡೆ ಮಾಡುತ್ತೇನೆ” ಎಂದಿದ್ದಾರೆ ಬಿಎಸ್‌ವೈ.

Also read: ‘ಐ ಆಮ್ ಎಕ್ಸ್‌ಪೋಸಿಂಗ್ ನೌ’: ಯಡಿಯೂರಪ್ಪ ಆಡಿಯೊ ಟೇಪ್‌; ಕುಮಾರಸ್ವಾಮಿ ಪತ್ರಿಕಾಗೋಷ್ಠಿ 

“ನಾನು ದೇವದುರ್ಗದ ಪ್ರವಾಸಿ ಮಂದಿರದಲ್ಲಿ ತಂಗಿದ್ದಾಗ ಅವನು ಬಂದದ್ದು ನಿಜ. ನನ್ನ ಜೊತೆಗೆ ಮಾತನಾಡಿದ್ದೂ ನಿಜ. ನನ್ನ ಬಳಿಯೂ ಆ ಬಗ್ಗೆಯೂ ಆಡಿಯೊ ಇದೆ. ಅಲ್ಲಿ ಏನು ನಡಿಯಿತು ಎಂಬುದು ಆನಂತರ ನೋಡೋಣ. ಈ ಬಗ್ಗೆ ನಾಳೆ ಸದಸದಲ್ಲಿಯೇ ಸಾಕ್ಷಿ ಸಹಿತ ಮಾತನಾಡುತ್ತೇವೆ” ಎಂದು ಹೇಳಿದ್ದಾರೆ.

“ಸಿಎಂ ಇಂತಹ ಕೆಳಮಟ್ಟಕ್ಕೆ ಇಳಿದಿರುವುದು ನೋಡಿದರೆ ಅವರ ನೀಚ ರಾಜಕಾರಣಕ್ಕೆ ಹಾಗೂ ಅವರ ದುಸ್ಸಾಹಸಕ್ಕೆ ಇದು ಕೈಗನ್ನಡಿಯಾಗಿದೆ. ಅವರೇ ಕುತಂತ್ರ ಮಾಡಿ ಮೊದಲೇ ಒಂದು ರಣತಂತ್ರ ರೂಪಿಸಿ ನನ್ನ ಬಳಿ ಕಳುಹಿಸಿರುವುದು ಈ ರಾಜ್ಯದ ದುರಂತ. ಈ ಮಟ್ಟದ ರಾಜಕೀಯ ಮುಖ್ಯಮಂತ್ರಿಯಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ” ಎಂದು ಪ್ರಶ್ನಿಸಿದ್ದಾರೆ.

“ನಾನು ಆಡಿಯೊ ಕುರಿತು ಯಾವುದೇ ತನಿಖೆಗೆ ಸಿದ್ದ. ಅವರು ವಿಜುಗೌಡಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಲು 25 ಕೋಟಿ ರೂಪಾಯಿ ಬೇಡಿಕೆ ಇಟ್ಟ ಆಡಿಯೊ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸೂಟ್ ಕೇಸ್ ರಾಜಕಾರಣದ ಬಗ್ಗೆಯೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಾಯಿ ಬಿಡಲಿ” ಎಂದು ಸವಾಲ್ ಹಾಕಿದ್ದಾರೆ.

ಆಡಿಯೊದಲ್ಲಿ ಸ್ಪೀಕರ್ ಸೇರಿದಂತೆ ನ್ಯಾಯಾಧೀಶರ ಹೆಸರು ಉಲ್ಲೇಖಿಸಲಾಗಿದೆ. ಹೀಗಾಗಿಯೇ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕುಮಾರಸ್ವಾಮಿ ಈಗಾಗಲೇ ದೂರು ನೀಡಿದ್ದಾರೆ. ಇನ್ನು ದೂರು ಸ್ವೀಕರಿಸಿದ ಬಳಿಕ ಹಿರಿಯ ಪೋಲಿಸ್ ಅಧಿಕಾರಿಗಳ ಜತೆ ಸ್ಪೀಕರ್ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ ಎನ್ನಲಾಗಿದೆ. ನಂತರ ಈ ಸಂಬಂಧ ದೂರು ದಾಖಲಿಸುವ ಸಾಧ್ಯತೆ ಇದೆ. ಸದನ ಸಮಿತಿ ರಚಿಸಿ ಆಡಿಯೊ ಪ್ರಕರಣದ ಕುರಿತು ತನಿಖೆಗೆ ಆದೇಶಿಸುವ ಸಾಧ್ಯತೆಗಳೂ ಇವೆ. ಈ ಮದ್ಯೆ ನಾಳೆ ಬಿಎಸ್‌ವೈ ಸದನದಲ್ಲಿ ಬಿಡುಗಡೆ ಮಾಡಲಿರುವ ಆಡಿಯೊದಲ್ಲಿ ಯಾವೆಲ್ಲಾ ‘ಗುಟ್ಟಾದ’ ವಿಷಯಗಳಿವೆ ಎಂಬ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ.

Also read: ಆಡಿಯೊ ತಂತ್ರಕ್ಕೆ ವಿಡಿಯೊ ಪ್ರತಿತಂತ್ರ; ಇದು ರಾಜಕೀಯದ ‘ಕಳ್ಳ-ಪೊಲೀಸ್’ ಆಟ!