samachara
www.samachara.com
‘ಮಾತು ಸಹಿಸದ ಭಾರತ’; ಅಮೋಲ್‌ ಪಾಲೇಕರ್‌ ಭಾಷಣಕ್ಕೆ ಅಡ್ಡಿಯಾಗಿದ್ದೇನು?
COVER STORY

‘ಮಾತು ಸಹಿಸದ ಭಾರತ’; ಅಮೋಲ್‌ ಪಾಲೇಕರ್‌ ಭಾಷಣಕ್ಕೆ ಅಡ್ಡಿಯಾಗಿದ್ದೇನು?

ಕಲಾವಿದರ ಮಾತುಗಳಿಗೆ, ಅಭಿವ್ಯಕ್ತಿಗೆ ಅಸಹಿಷ್ಣುತೆ ತೋರುವ ಸಮಾಜ ನಿಜಕ್ಕೂ ‘ಎಲೈಟ್‌ ಸೊಸೈಟಿ’ ಆಗಲು ಸಾಧ್ಯವಿಲ್ಲ.

ದಯಾನಂದ

ದಯಾನಂದ

ಕಸವರಮೆಂಬುದು ನೆರೆ ಸೈ
ರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ
ಕಸವೇಂ ಕಸವರಮೇನು
ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ.

ಕವಿರಾಜಮಾರ್ಗಕಾರ ಶ್ರೀವಿಜಯನ ಈ ಜನಪ್ರಿಯ ಪದ್ಯದ ಮೊದಲ ಎರಡು ಸಾಲುಗಳನ್ನು ಈಗಾಗಲೇ ಸವೆದು ಹೋಗುವಷ್ಟು ಬಳಸಲಾಗಿದೆ. ಈ ಎರಡು ಸಾಲುಗಳು ಎಂದಿಗೂ ಸವಕಲಾಗುವ ನಾಣ್ಯಗಳಲ್ಲ. ಆದರೆ, ಈ ಪದ್ಯದ ಕೊನೆಯ ಎರಡು ಸಾಲುಗಳ ಉಲ್ಲೇಖ ಬಹಳ ಕಡಿಮೆ.

ಕೇವಲ ನಾಲ್ಕು ಸಾಲುಗಳಲ್ಲಿ ಅರಿವಿನ ಎಚ್ಚರ ಮೂಡಿಸುವ ಈ ಪದ್ಯದ ಅರ್ಥ ಇದು: ‘ಪರ ವಿಚಾರವನ್ನು, ಪರ ಧರ್ಮವನ್ನು ಸಹಿಸಿಕೊಳ್ಳುವುದೇ ನಿಜವಾದ ಸಂಪತ್ತು. ಪರ ವಿಚಾರ, ಪರ ಧರ್ಮವನ್ನು ಸಹಿಸಲಾರದೆ ಅಸಹನೆ ತೋರಿದರೆ ಅಂಥವರ ಬಳಿ ಕಸ ಇದ್ದರೇನು, ಸಂಪತ್ತಿದ್ದರೇನು ಎರಡೂ ಅವರಿಗೆ ಕಷ್ಟವನ್ನೇ ಕೊಡುತ್ತವೆ’.

ಎಂಟನೇ ಶತಮಾನ, ಅಂದರೆ ಸುಮಾರು 1,200 ವರ್ಷಗಳ ಹಿಂದೆ ಶ್ರೀವಿಜಯ ಹೇಳಿರುವ ಈ ಪದ್ಯದ ಸಾಲುಗಳನ್ನು ಇಂದು ತಂದು ನಿಲ್ಲಿಸಿಕೊಂಡಿರುವುದಕ್ಕೆ ಕಾರಣ ಇಂದು ಪರ ವಿಚಾರಗಳನ್ನು ಸಹಿಸುವುದಿರಲಿ, ಪರರು ಹೇಳುವ ಮಾತುಗಳನ್ನೇ ಸಹಿಸದ ಸನ್ನಿವೇಶ ದೇಶದಲ್ಲಿ ಸೃಷ್ಟಿಯಾಗಿದೆ. ಪರ ವಿಚಾರ, ಪರ ಧರ್ಮಗಳನ್ನು ಸಹಿಸುವ ಉದಾತ್ತತೆ ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಮಾತುಗಳನ್ನೇ ಸಹಿಸದ ಅಸಹಿಷ್ಣುತೆಯ ಉಬ್ಬಸ ಕಲಾಲೋಕದಲ್ಲೂ ಹೆಚ್ಚಾಗುತ್ತಿದೆ.

ಇಂಥ ಮಾತನ್ನು ಸಹಿಸದಿರುವ ಮನಸ್ಥಿತಿಗಳೇ ನಟ- ನಿರ್ದೇಶಕ ಅಮೋಲ್‌ ಪಾಲೇಕರ್‌ ಮಾತುಗಳಿಗೆ ಮುಂಬೈನಲ್ಲಿ ಅಡ್ಡಿಪಡಿಸಿರುವುದು. ಮಾತುಗಳಿಗೂ ಸೆನ್ಸಾರ್‌ಷಿಪ್‌ ಹೇರುತ್ತಿರುವ ಬಗ್ಗೆ ಅಮೋಲ್‌ ಇಂದು ಬೇಸರ ಹೊರ ಹಾಕಿದ್ದಾರೆ. ಕಲಾವಿದರ ಮಾತುಗಳಿಗೆ, ಅಭಿವ್ಯಕ್ತಿಗೆ ಅಸಹಿಷ್ಣುತೆ ತೋರುವ ಸಮಾಜ ನಿಜಕ್ಕೂ ‘ಎಲೈಟ್‌ ಸೊಸೈಟಿ’ ಆಗಲು ಸಾಧ್ಯವಿಲ್ಲ.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್‌ (ಎನ್‍ಜಿಎಂಎ) ಮುಂಬೈ ಕೇಂದ್ರದಲ್ಲಿ ಶುಕ್ರವಾರ ಕಲಾವಿದ ಪ್ರಭಾಕರ್ ಬರ್ವೆ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಮೋಲ್ ಪಾಲೇಕರ್‌ ಅವರನ್ನು ಅಹ್ವಾನಿಸಲಾಗಿತ್ತು. ಅಮೋಲ್‌ ಕಲಾವಿದರ ಸಲಹಾ ಸಮಿತಿ ಹಾಗೂ ಸರಕಾರದ ಬಗ್ಗೆ ವಿಮರ್ಶಾತ್ಮಕ ಮಾತುಗಳನ್ನು ಆಡುತ್ತಿದ್ದ ವೇಳೆ ಅವರ ಭಾಷಣಕ್ಕೆ ಅಡ್ಡಿಪಡಿಸಲಾಗಿದೆ.

ಮುಂಬೈ ಮತ್ತು ಬೆಂಗಳೂರಿನ ಎನ್‍ಜಿಎಂಎ ಪ್ರಾದೇಶಿಕ ಕೇಂದ್ರಗಳಲ್ಲಿ ಸಲಹಾ ಸಮಿತಿಯನ್ನು ರದ್ದುಗೊಳಿಸಿರುವುದನ್ನು ಪ್ರಸ್ತಾಪಿಸಿದ ಅಮೋಲ್‌, “ನಿಮ್ಮಲ್ಲಿ ಕೆಲವರಿಗೆ ಈ ವಿಚಾರ ಬಹುಶಃ ತಿಳಿದಿಲ್ಲ ಎನಿಸುತ್ತದೆ. ಈ ಕೇಂದ್ರದಲ್ಲಿ ಇಂದು ನಡೆಯುತ್ತಿರುವ ಈ ಕಾರ್ಯಕ್ರಮವೇ ಕೊನೆಯ ಪ್ರದರ್ಶನ ಆಗಲಿದೆ. ಇದಕ್ಕೆ ಕಾರಣ ಅಧಿಕಾರಿಗಳೂ ಅಲ್ಲ, ಸರಕಾರದ ಏಜೆಂಟ್‌ಗಳೂ ಅಲ್ಲ. ಈ ನಿರ್ಧಾರ ತೆಗೆದುಕೊಂಡಿರುವುದು ಸ್ಥಳೀಯ ಕಲಾವಿದರ ಸಲಹಾ ಸಮಿತಿ” ಎಂದು ಹೇಳಿದ್ದರು.

ಮುಂಬೈ ಮತ್ತು ಬೆಂಗಳೂರಿನ ಎನ್‌ಜಿಎಂಎ ಪ್ರಾದೇಶಿಕ ಕೇಂದ್ರಗಳಲ್ಲಿರುವ ಸಲಹಾ ಸಮಿತಿಗಳನ್ನು 2018ರ ನವೆಂಬರ್ 13ರಂದು ರದ್ದುಗೊಳಿಸಲಾಗಿದೆ. ಈ ವಿಚಾರವನ್ನು ಅಮೋಲ್ ಪ್ರಸ್ತಾಪಿಸಿದ್ದಕ್ಕೆ ಎನ್‌ಜಿಎಂಎ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಮೋಲ್‌ ಮಾತನಾಡುತ್ತಿರುವಾಗಲೇ ನೀವು ಸಲಹಾ ಸಮಿತಿ ವಿಚಾರಗಳನ್ನು ಮಾತನಾಡಬೇಡಿ, ಪ್ರಭಾಕರ್ ಬರ್ವೆ ಅವರ ಬಗ್ಗೆಯಷ್ಟೇ ಮಾತನಾಡಿ ಎಂದು ಎನ್‌ಜಿಎಂಎ ಸದಸ್ಯರು ಅಮೋಲ್‌ ಮಾತಿಗೆ ಅಡ್ಡಿ ಮಾಡಿದ್ದಾರೆ.

ಅಮೋಲ್‌ ಮಾತುಗಳಿಗೆ ಎನ್‌ಜಿಎಂಎ ಸದಸ್ಯರೇ ಅಡ್ಡಿಪಡಿಸಿರುವ ವಿಡಿಯೊ ವೈರಲ್ ಆದ ಬಳಿಕ ಭಾನುವಾರ ಇದಕ್ಕೆ ಪ್ರತಿಕ್ರಿಯಿಸಿರುವ ಅಮೋಲ್‌, “ಪ್ರದರ್ಶನದ ಕ್ಯುರೇಟರ್‌ ಜೆಸಲ್‌ ಥಕ್ಕರ್ ನಾನು ಕೇವಲ ಪ್ರಭಾಕರ್‌ ಬರ್ವೆ ಅವರ ಬಗ್ಗೆ ಮಾತ್ರ ಮಾತನಾಡಬೇಕು, ಅದನ್ನು ಬಿಟ್ಟು ಬೇರೆ ಮಾತನಾಡುವಂತಿಲ್ಲ ಎಂದು ತಾಕೀಕು ಮಾಡಿದರು” ಎಂದಿದ್ದಾರೆ.

ಮಾತನಾಡುವಂತೆ ಆಹ್ವಾನಿಸಿ ಮಾತುಗಳ ಮೇಲೇ ಸೆನ್ಸಾರ್‌ಶಿಪ್‌ ಹೇರುವ ಬಗ್ಗೆ ಅಮೋಲ್‌ ತಮ್ಮ ಅಸಮಾಧಾನವನ್ನು ಆ ವೇದಿಕೆಯಲ್ಲೇ ಹೊರಹಾಕಿದ್ದಾರೆ. ಅಲ್ಲದೆ, ನಯನತಾರಾ ಸೆಹಗಲ್‌ ಅವರನ್ನು ಸಾಹಿತ್ಯ ಸಮಾವೇಶಕ್ಕೆ ಆಹ್ವಾನಿಸಿ ಬಳಿಕ, ಅವರ ಮಾತುಗಳು ವಿವಾದಕ್ಕೆ ಕಾರಣವಾಗುತ್ತವೆ ಎಂಬ ಕಾರಣಕ್ಕೆ ಆಹ್ವಾನಿತರ ಪಟ್ಟಿಯಿಂದ ಅವರ ಹೆಸರನ್ನು ತೆಗೆದು ಹಾಕಿದ್ದನ್ನು ಅಮೋಲ್‌ ಉಲ್ಲೇಖಿಸಿದ್ದರು. ಆದರೆ, ವೇದಿಕೆಯಲ್ಲಿದ್ದರು ಪದೇ ಪದೇ ತಮ್ಮ ಮಾತುಗಳಿಗೆ ಅಡ್ಡಿಪಡಿಸಿದ ಕಾರಣ ಅಮೋಲ್‌ ಮಾತು ಮೊಟಕುಗೊಳಿಸಿದ್ದರು.

ಮಾತುಗಳು, ವಿಚಾರಗಳು ಸಮ್ಮತವಾಗದಿದ್ದರೂ ಪರವಾಗಿಲ್ಲ, ಅದನ್ನು ವಿರೋಧಿಸಲು ಮಾರ್ಗಗಳಿವೆ. ಆದರೆ, ಮಾತನ್ನೇ ಆಡದಂತೆ ತಡೆಯುವುದು, ಮಾತಿಗೇ ತಡೆ ಒಡ್ಡುವುದು ಅಭಿವ್ಯಕ್ತಿಗೆ ಎದುರಾಗಿರುವ ಅಪಾಯದ ಸೂಚನೆಯೇ. ಕಲಾವಿದರ ಮಾತುಗಳಿಗೆ ಇತರರು ಅಸಹನೆ ಹೊರಹಾಕುತ್ತಿದ್ದುದು ಈವರೆಗೂ ಕಾಣುತ್ತಿತ್ತು. ಈಗ ಕಲಾ ವಲಯದವರೇ ಕಲಾವಿದರ ಮಾತುಗಳಿಗೆ ಅಡ್ಡಿ ಉಂಟು ಮಾಡುತ್ತಿರುವುದು ಸಮಾಜ ಪರ ವಿಚಾರವನ್ನಿರಲಿ, ಪರರ ಮಾತನ್ನೇ ಸಹಿಸದ ಮಟ್ಟಿಗೆ ಅಸಹಿಷ್ಣುವಾಗಿದೆ ಎಂಬುದನ್ನು ತೋರುತ್ತಿದೆ. ಅಮೋಲ್‌ ಘಟನೆ ಇದಕ್ಕೆ ಒಂದು ಉದಾಹರಣೆಯಷ್ಟೆ.