samachara
www.samachara.com
ಹೋರಾಟ, ಅಧಿಕಾರ, ಭಿನ್ನದನಿ; ರೈತ ಸಂಘದ ಒಳ ಜಗಳ ಮತ್ತು ಚಳವಳಿಯ ಭವಿಷ್ಯ
COVER STORY

ಹೋರಾಟ, ಅಧಿಕಾರ, ಭಿನ್ನದನಿ; ರೈತ ಸಂಘದ ಒಳ ಜಗಳ ಮತ್ತು ಚಳವಳಿಯ ಭವಿಷ್ಯ

ಹಲವು ಸಂಘಗಳಾಗಿ ಒಡೆದುಹೋಗಿರುವ ಮೂಲ ರೈತ ಸಂಘದೊಳಗೂ ಈಗ ಒಡಕು ಮೂಡಿದೆ. ಇದಕ್ಕೆ ಕಾರಣವೇನು?

ದಯಾನಂದ

ದಯಾನಂದ

ಎಲ್ಲಿ ಅಧಿಕಾರ ಇರುತ್ತದೋ ಅಲ್ಲಿ ಅಧಿಕಾರಕ್ಕಾಗಿ ಸಂಘರ್ಷಗಳಿರುವುದೂ ಸಾಮಾನ್ಯ. ಆದರೆ, ಚಳವಳಿಗಾಗಿ ಹುಟ್ಟಿದ ಸಂಘಟನೆ ಅಧಿಕಾರದ ಕಾರಣಕ್ಕೆ ಒಡೆದು ಹಲವು ಹೋಳಾಗಿ, ಸಂಘದೊಳಗಿನ ಸ್ಥಾನಮಾನ, ಅಧಿಕಾರಗಳ ಗದ್ದಲ ಮುನ್ನೆಲೆಗೆ ಬಂದು ಚಳವಳಿ ಮಂಕಾಗುವುದು ದುರಂತ. ರಾಜ್ಯ ರೈತ ಸಂಘ ಇಂದು ಬಹುತೇಕ ಇಂಥ ದುರಂತದ ದಾರಿಯಲ್ಲಿದೆ. ರೈತರ, ಕೃಷಿ ಕೂಲಿ ಕಾರ್ಮಿಕರ ಪರ ಹೋರಾಟಕ್ಕಾಗಿ ಹುಟ್ಟಿಕೊಂಡ ರೈತ ಸಂಘ ಇಂದು ಹಲವು ಸಂಘಗಳಾಗಿ ಒಡೆದುಹೋಗಿದೆ. ಮೂಲ ರೈತ ಸಂಘದೊಳಗೂ ಈಗ ಒಡಕು ಮೂಡಿದೆ.

ಫೆಬ್ರುವರಿ 5ರಂದು ಚಿತ್ರದುರ್ಗದಲ್ಲಿ ನಡೆದ ರೈತ ಸಂಘದ ಸಭೆಯಲ್ಲಿ ಬಡಗಲಪುರ ನಾಗೇಂದ್ರ ಅವರನ್ನು ರೈತ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೆ, ಈ ಆಯ್ಕೆ ಪ್ರಕ್ರಿಯೆ ಪ್ರಜಾಸತ್ತಾತ್ಮಕವಾಗಿಲ್ಲ ಎಂಬ ಕಾರಣಕ್ಕೆ ರೈತ ಸಂಘದ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಹಲವು ಪದಾಧಿಕಾರಿಗಳು ಅಂದಿನ ಸಭೆಯಲ್ಲೇ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು. ಈ ವಿಚಾರಕ್ಕೆ ಈಗ ರೈತ ಸಂಘದೊಳಗೆ ಒಳಜಗಳ ಶುರುವಾಗಿದೆ.

“ಬಡಗಲಪುರ ನಾಗೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಆಯ್ಕೆ ಪ್ರಕ್ರಿಯೆ ಪ್ರಜಾಸತ್ತಾತ್ಮಕವಾಗಿ ನಡೆದಿಲ್ಲ. ರಾಜ್ಯ ಸಮಿತಿ ಸದಸ್ಯರು ತಾವು ತಾವೇ ನಿರ್ಣಯ ತೆಗೆದುಕೊಳ್ಳುವುದಾದರೆ ಚಿತ್ರದುರ್ಗದ ಸಭೆಗೆ ಯಾಕೆ ಎಲ್ಲಾ ಪದಾಧಿಕಾರಿಗಳನ್ನು ಕರೆಯಬೇಕಿತ್ತು” ಎಂದು ಚುಕ್ಕಿ ಪ್ರಶ್ನಿಸಿದ್ದಾರೆ.

“ಸಂಘಟನೆಯ ನಿಲುವುಗಳು ಪ್ರಜಾಸತ್ತಾತ್ಮಕವಾಗಿಲ್ಲ ಎಂದಾಗ ಅದನ್ನು ವಿರೋಧಿಸಬೇಕಾಗುತ್ತದೆ. ಸಂಘದ ಈಗಿನ ಬೆಳವಣಿಗೆಗಳನ್ನು ವಿರೋಧಿಸಿ ನಾನು ಕಾರ್ಯಾಧ್ಯಕ್ಷೆ ಹುದ್ದೆಗೆ ರಾಜೀನಾಮೆ ನೀಡಲು ನಿರ್ದರಿಸಿದ್ದೇನೆ. ಸಂಘದ ಸಾಮಾನ್ಯ ಕಾರ್ಯಕರ್ತೆಯಾಗಿ ನಾನು ಕೆಲಸ ಮಾಡುತ್ತೇನೆ. ಚಳವಳಿಗಳಲ್ಲಿ ಸಾಮಾನ್ಯ ಕಾರ್ಯಕರ್ತರ ಶಕ್ತಿ ಏನು ಎಂಬುದು ನನಗೆ ಗೊತ್ತಿದೆ” ಎನ್ನುತ್ತಾರೆ ಚುಕ್ಕಿ ನಂಜುಂಡಸ್ವಾಮಿ.

ಸಂಘದೊಳಗೆ ನಡೆದಿದ್ದೇನು?

ಜನವರಿ 5ರಂದು ಸಭೆ ಸೇರಿದ್ದ ರೈತ ಸಂಘದ ರಾಜ್ಯ ಸಮಿತಿಯ ಸದಸ್ಯರು ಈ ಹಿಂದಿನ ಅಧ್ಯಕ್ಷ ಕೆ.ಟಿ. ಗಂಗಾಧರ್‌ ಅವರ ಬದಲಿಗೆ ಹೊಸಬರನ್ನು ಅಧ್ಯಕ್ಷ ಹುದ್ದೆಗೆ ಆರಿಸಲು ನಿರ್ಧರಿಸಿದ್ದರು. ಗಂಗಾಧರ್‌ ಅನಾರೋಗ್ಯದ ಕಾರಣಕ್ಕೆ ತಾವು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಆ ಸಭೆಗೆ ಪತ್ರ ಕಳಿಸಿದ್ದರು. ಸಂಘದ ಅಧ್ಯಕ್ಷರ ಅಧಿಕಾರಾವಧಿ 3 ವರ್ಷ. ಗಂಗಾಧರ್‌ 2 ವರ್ಷ 5 ತಿಂಗಳು ಅಧಿಕಾರದಲ್ಲಿದ್ದರು. ಉಳಿದ 7 ತಿಂಗಳ ಅವಧಿಗಾಗಿ ಮಾತ್ರ ಹೊಸಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಜ. 5ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅಲ್ಲದೆ, 7 ತಿಂಗಳ ಅವಧಿಗೆ ಯಾರು ಅಧ್ಯಕ್ಷರಾಗಬೇಕೆಂಬುದನ್ನು ರಾಜ್ಯ ಸಮಿತಿ ಸದಸ್ಯರೇ ನಿರ್ಧರಿಸುವುದೆಂದು ಅಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ರೈತ ಸಂಘದೊಳಗಿನ ಬೆಳವಣಿಗೆಗಳ ಬಗ್ಗೆ ‘ಸಮಾಚಾರ’ದೊಂದಿಗೆ ಮಾತನಾಡಿದ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್‌, “ಗಂಗಾಧರ್‌ ಅನಾರೋಗ್ಯದ ಕಾರಣಕ್ಕೆ ತಾವು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಪತ್ರ ಕಳಿಸಿದ್ದು ನಿಜ. ಆದರೆ, ಅವರು ಮತ್ತೊಂದು ಪ್ರಮಾದ ಎಸಗಿದ್ದರು. ಅವರು ಸಂಘದ ರಾಜ್ಯ ಸಮಿತಿಯ ನಿರ್ಣಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು” ಎಂದು ತಿಳಿಸಿದರು.

ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿರೋಧಿಸಿ ಚಿತ್ರದುರ್ಗದ ಸಭೆಯಲ್ಲಿ ನಡೆದ ಗದ್ದಲ
ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿರೋಧಿಸಿ ಚಿತ್ರದುರ್ಗದ ಸಭೆಯಲ್ಲಿ ನಡೆದ ಗದ್ದಲ

ಸಮಸ್ಯೆ ಶುರುವಾಗಿದ್ದೆಲ್ಲಿ?
“ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಸಾಲಮನ್ನಾ ವಿಚಾರವಾಗಿ 2018ರ ನವೆಂಬರ್‌ 19ರಂದು ಬೆಂಗಳೂರಿನಲ್ಲಿ ರೈತರ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಮರುದಿನ ನ. 20ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಏರ್ಪಾಟಾಗಿತ್ತು. ಆದರೆ, ಆ ಸಭೆಗೆ ಸರಕಾರದಿಂದ ಅಧಿಕೃತವಾಗಿ ಆಹ್ವಾನ ಬರುವವರೆಗೂ ರೈತರ ಪ್ರತಿನಿಧಿಗಳಾಗಿ ನಮ್ಮ ಸಂಘದಿಂದ ಯಾರೂ ಹೋಗಬಾರದು ಎಂದು ಸಂಘದ ರಾಜ್ಯ ಸಮಿತಿ ಸದಸ್ಯರೆಲ್ಲರೂ ಸಭೆ ನಡೆಸಿ ನಿರ್ಧಾರಕ್ಕೆ ಬಂದಿದ್ದೆವು. ಆದರೆ, ನ.20ರಂದು ಆಸ್ಪತ್ರೆಗೆ ಹೋಗಬೇಕೆಂದು ಹೇಳಿದ್ದ ಗಂಗಾಧರ್, ಸರಕಾರದ ಅಧಿಕೃತ ಆಹ್ವಾನ ಇಲ್ಲದಿದ್ದರೂ ಮುಖ್ಯಮಂತ್ರಿ ನಡೆಸಿದ ಸಭೆಗೆ ಹೋಗಿದ್ದರು. ಇದು ಸಂಘದ ನಿರ್ಣಯಕ್ಕೆ ವಿರುದ್ಧವಾಗಿತ್ತು” ಎನ್ನುತ್ತಾರೆ ಮಾಲಿ ಪಾಟೀಲ್ .

“ಗಂಗಾಧರ್‌ ಅವರ ಈ ನಡೆಯ ಬಗ್ಗೆ ಚರ್ಚಿಸಲು ಜನವರಿ 5ರಂದು ರಾಜ್ಯ ಸಮಿತಿಯ ಸಭೆ ಕರೆದಿದ್ದೆವು. ಆದರೆ, ಆ ಸಭೆಗೆ ಬಾರದ ಗಂಗಾಧರ್‌ ತಾವು ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಪತ್ರ ಕಳಿಸಿದ್ದರು. ಜನವರಿ 5ರಂದು ಸಭೆ ನಡೆಸುವ ಬಗ್ಗೆ ಚುಕ್ಕಿ ನಂಜುಂಡಸ್ವಾಮಿ ಅವರಿಗೂ ಮೊದಲೇ ತಿಳಿಸಲಾಗಿತ್ತು. ಆದರೆ, ವಿದೇಶದಲ್ಲಿದ್ದ ಕಾರಣ ಅವರು ಆ ಸಭೆಗೆ ಬರಲಾಗಲಿಲ್ಲ. ಆ ಸಭೆಯಲ್ಲಿ ಏನು ನಿರ್ಣಯ ತೆಗೆದುಕೊಂಡಿದ್ದೆವು ಎಂದೂ ಅವರಿಗೆ ಗೊತ್ತಿರಲಿಲ್ಲ. ಚಿತ್ರದುರ್ಗದ ಸಭೆಗೂ ಅವರು ತಡವಾಗಿ ಬಂದರು. ಅಷ್ಟರಲ್ಲಿ ಅಧ್ಯಕ್ಷರ ಆಯ್ಕೆ ಘೋಷಣೆ ಆಗಿತ್ತು. ಈ ಹಿಂದಿನ ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳ ಮಾಹಿತಿ ಇಲ್ಲದೆ ಅವರು ಮಾಧ್ಯಮಗಳ ಎದುರು ಈ ಆಯ್ಕೆಯನ್ನು ವಿರೋಧ ಮಾಡಿದ್ದರು. ಆದರೆ, ಅವರಿಗೆ ಎಲ್ಲವನ್ನೂ ಮನವರಿಕೆ ಮಾಡಿದ್ದೇವೆ” ಎಂಬುದು ಅವರ ಮಾತು.

ರೈತ ಸಂಘದದೊಳಗೆ ದೊಡ್ದಮಟ್ಟದ ಭಿನ್ನಾಭಿಪ್ರಾಯಗಳೇನಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟವನ್ನು ಮುಂದೆ ತೆಗೆದುಕೊಂಡು ಹೋಗುತ್ತೇನೆ. ಸಂಘಕ್ಕೆ ಒಂದು ಆಂತರಿಕ ಸಂವಿಧಾನ ಬೇಕಿದೆ. ಅದರ ಕರಡೂ ಸಿದ್ಧವಿದೆ. ಆದಷ್ಟು ಬೇಗ ಅದನ್ನು ಅನುಷ್ಠಾನಕ್ಕೆ ತರುತ್ತೇವೆ. ಸಂಘಕ್ಕೆ ಆಂತರಿಕ ಸಂವಿಧಾನ ಜಾರಿಯಾದರೆ ಅಧಿಕಾರದ ಬಗೆಗಿನ ಗೊಂದಲಗಳು ಒಂದುಮಟ್ಟಕ್ಕೆ ತಗ್ಗುತ್ತವೆ.
- ಬಡಗಲಪುರ ನಾಗೇಂದ್ರ, ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಅಧ್ಯಕ್ಷ

ಸಂಘದ ರಾಜ್ಯ ಸಮಿತಿ ಈ ಮೊದಲೇ ತೆಗೆದುಕೊಂಡಿದ್ದ ನಿರ್ಣಯವನ್ನು ಮೀರಿ ಕೆ.ಟಿ. ಗಂಗಾಧರ್‌ ಮುಖ್ಯಮಂತ್ರಿ ಜತೆಗಿನ ಸಭೆಗೆ ಹೋದ ಬಗ್ಗೆ ಸಂಘದೊಳಗೆ ತೀವ್ರ ಅಸಮಾಧಾನವಿತ್ತು. ಇದೇ ಕಾರಣಕ್ಕೆ ಗಂಗಾಧರ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಮಾತುಗಳು ಆಗಲೇ ಕೇಳಿ ಬಂದಿದ್ದವು. ಆದರೆ, ಅಷ್ಟರಲ್ಲಿ ಗಂಗಾಧರ್‌ ಅವರೇ ಅನಾರೋಗ್ಯದ ಕಾರಣಕ್ಕೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದರು. ಈ ಬಗ್ಗೆ ಜನವರಿ 5ರ ಸಭೆಗೆ ಪತ್ರವನ್ನೂ ಕಳಿಸಿದ್ದರು.

“ಸಂಘದ ನಿರ್ಣಯದಂತೆ ಸರಕಾರದಿಂದ ಅಧಿಕೃತ ನಿರ್ಧಾರ ಬರುವವರೆಗೂ ರೈತ ಸಂಘದಿಂದ ಮುಖ್ಯಮಂತ್ರಿ ಸಭೆಗೆ ಹೋಗಬಾರದೆಂಬುದೇ ನನ್ನ ನಿಲುವೂ ಆಗಿತ್ತು. ನವೆಂಬರ್‌ 20ರಂದು ನಾನು ಆಸ್ಪತ್ರೆಗೆ ಹೋಗಿದ್ದೆ. ಆಸ್ಪತ್ರೆಗೇ ಬಂದ ಉತ್ತರ ಕರ್ನಾಟಕ ಭಾಗದ ರೈತ ಮುಖಂಡರು ಮುಖ್ಯಮಂತ್ರಿಯೊಂದಿಗಿನ ಸಭೆಗೆ ಬಂದು ರೈತರ ಪರವಾಗಿ ಮಾತನಾಡುವಂತೆ ಒತ್ತಡ ಹೇರಿದರು. ಈ ವಿಷಯವನ್ನು ಸಂಘದ ರಾಜ್ಯ ಸಮಿತಿ ಸದಸ್ಯರಿಗೆ ತಿಳಿಸಲೂ ನಾನು ಪ್ರಯತ್ನಿಸಿದೆ. ಆದರೆ, ತಕ್ಷಣಕ್ಕೆ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಬೆಳಗಾವಿ ರೈತರ ಒತ್ತಡಕ್ಕೆ ಮಣಿದು ನಾನು ಸಭೆಗೆ ಹೋಗಿದ್ದೆನೇ ಹೊರತು ಸರಕಾರದ ಒಲೈಕೆಗಲ್ಲ” ಎನ್ನುತ್ತಾರೆ ರೈತ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಟಿ. ಗಂಗಾಧರ್‌.

ಅಧಿಕಾರ ಮುಖ್ಯವಾಗಿದ್ದು ಯಾಕೆ?
ರೈತ ಸಂಘದೊಳಗೆ ಅಧಿಕಾರಕ್ಕಾಗಿ ಒಳ ಜಗಳಗಳು ಇಂದು ನಿನ್ನೆಯದಲ್ಲ. ಅಷ್ಟಕ್ಕೂ ಈಗ ಆಯ್ಕೆ ಪ್ರಕ್ರಿಯೆಯನ್ನಷ್ಟೇ ಪ್ರಶ್ನಿಸಲಾಗುತ್ತಿದೆ. ಈ ಹಿಂದೆ ಅಧ್ಯಕ್ಷರ ಆಯ್ಕೆಯನ್ನೇ ಪ್ರಶ್ನಿಸಿ ಹಲವರು ಸಂಘದಿಂದ ಚದುರಿ ಹೋಗಿ ಬೇರೆ ಬೇರೆ ಬಣಗಳಾಗಿ ಸಂಘ ಕಟ್ಟಿಕೊಂಡು ಇಂದು ಹಸಿರು ಶಾಲು ಹೊದ್ದು, ಹಸಿರು ದೀಪದ ಕಾರುಗಳಲ್ಲಿ ಓಡಾಡುತ್ತಾ ರಾಜಕೀಯ ಅಧಿಕಾರಕ್ಕೂ ಹತ್ತಿರವಾಗಿದ್ದಾರೆ.

“ರೈತ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ನಾನೂ ಒಬ್ಬ. ರೈತ ಸಂಘದೊಳಗೆ ಆರಂಭದಲ್ಲಿ ಅಧಿಕಾರಕ್ಕಾಗಿ ಸಂಘರ್ಷಗಳು ಇರಲಿಲ್ಲ. ನಂಜುಂಡಸ್ವಾಮಿ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ ಎಂಬ ಕಾರಣಕ್ಕೆ ಕೆ.ಎಸ್‌. ಪುಟ್ಟಣ್ಣಯ್ಯ ತಾವೊಂದು ರೈತ ಸಂಘ ಕಟ್ಟಿಕೊಂಡರು. ಮುಂದೆ ಕೋಡಿಹಳ್ಳಿ ಚಂದ್ರಶೇಖರ್‌, ಬಾಬಾಗೌಡ ಪಾಟೀಲ್‌ ಒಂದೊಂದು ರೈತ ಸಂಘ ಕಟ್ಟಿಕೊಂಡರು. ಹೀಗೆ ರೈತ ಸಂಘದಿಂದ ಚದುರಿ ಹೋದ ಸುಮಾರು 10-11 ರೈತ ಸಂಘಗಳು ರಾಜ್ಯದಲ್ಲಿವೆ. ಸಂಘಟನೆಯೊಳಗೆ ಅಧಿಕಾರಕ್ಕಾಗಿ ಎದ್ದ ಭಿನ್ನಾಭಿಪ್ರಾಯದ ಫಲ ಇದು” ಎಂಬುದು ಗಂಗಾಧರ್‌ ಅವರ ಮಾತು.

“ರೈತ ಸಂಘ ಚುನಾವಣಾ ರಾಜಕೀಯಕ್ಕೆ ಬರುವವರೆಗೂ ಸಂಘದೊಳಗೆ ಯಾರಿಗೂ ಅಧಿಕಾರದ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲ. ಯಾವಾಗ ನಂಜುಂಡಸ್ವಾಮಿ ನಂತರ ಪುಟ್ಟಣ್ಣಯ್ಯ ಕೂಡಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾದರೋ ಆಗಿನಿಂದ ರೈತ ಸಂಘದ ಮುಂಚೂಣಿಯಲ್ಲಿದ್ದರೆ ರಾಜಕೀಯ ಅಧಿಕಾರವೂ ಸಿಗುತ್ತದೆ ಎಂಬ ಭಾವನೆ ಕೆಲವರಲ್ಲಿ ಬೆಳೆಯಿತು. ಇದರಿಂದ ಕೆಲವರು ಹೋರಾಟವನ್ನು ಹಿಂದಿಕ್ಕಿ ಅಧಿಕಾರದ ಕಡೆಗೆ ಗಮನ ಕೊಡಲು ಶುರು ಮಾಡಿದರು. ಆದರೆ, ಈಗ ಸಂಘದ ನಿರ್ಣಯದ ವಿರುದ್ಧ ದನಿ ಎತ್ತಿರುವ ಚುಕ್ಕಿ ನಂಜುಂಡಸ್ವಾಮಿ ಅವರಿಗೆ ಅಧಿಕಾರಕ್ಕೆ ಬರಬೇಕೆಂಬ ಬಗ್ಗೆ ಹೆಚ್ಚು ಆಸಕ್ತಿಯೇನೂ ಇಲ್ಲ. ಸಂಘದ ನಿರ್ಣಯಗಳು ಪ್ರಜಾಸತ್ತಾತ್ಮಕವಾಗಿರಬೇಕು ಎಂಬುದಷ್ಟೇ ಅವರ ಒತ್ತಾಯ” ಎನ್ನುತ್ತಾರೆ ಅವರು.

ರಾಜ್ಯದಲ್ಲಿ ಇಂದು ಹಲವು ರೈತ ಸಂಘಗಳು ಹುಟ್ಟಿಕೊಂಡಿವೆ. ರಾಜಕೀಯ ಪಕ್ಷಗಳ ಒಳಗೂ ರೈತ ವಿಭಾಗಗಳು ಶುರುವಾಗಿದೆ. ರೈತ ಸಂಘವೂ ಸಕ್ರಿಯ ರಾಜಕೀಯದಿಂದೇನೂ ದೂರವಿಲ್ಲ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಪುಟ್ಟಣ್ಣಯ್ಯ ಅವರ ಮಗ ದರ್ಶನ್‌ ರೈತ ಸಂಘದ ಬೆಂಬಲದೊಂದಿಗೆ ಸ್ವರಾಜ್ ಅಭಿಯಾನದಿಂದ ಚುನಾವಣೆಗೆ ಸ್ಪರ್ಧಿಸಿದ್ದರೂ ಗೆಲ್ಲಲಾಗಲಿಲ್ಲ. ಪುಟ್ಟಣ್ಣಯ್ಯ ಸಾವಿನ ಅನುಕಂಪ, ರೈತ ಸಂಘದ ವರ್ಚಸ್ಸು ಕೂಡಾ ಇಂದಿನ ಚುನಾವಣಾ (ಅ)ವ್ಯವಸ್ಥೆಯಲ್ಲಿ ಚಳವಳಿ ರಾಜಕಾರಣವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಪರಿಸ್ಥಿತಿ ಹೀಗಿರುವಾಗ ರಾಜಕೀಯ ಆಸಕ್ತಿಗಿಂತ ಚಳುವಳಿಯೇ ಮುಖ್ಯವಾಗುವ ಕಡೆಗೆ ರೈತ ಸಂಘಟನೆಗಳು ಯೋಚಿಸಬೇಕು. ಆಂತರಿಕ ಸಂಘರ್ಷವನ್ನು ಬಹಿರಂಗಗೊಳಸಿ ಈಗಾಗಲೇ ಹಲವು ಹೋಳಾಗಿರುವ ಸಂಘವನ್ನು ಇನ್ನಷ್ಟು ಹೋಳಾಗಲು ಬಿಡಬಾರದು ಎಂಬ ವಿವೇಕದ ಎಚ್ಚರವೂ ಚಳವಳಿಯ ಮುಂಚೂಣಿಯಲ್ಲಿ ಇರುವವರಿಗೆ ಬೇಕು. ಇರುವ ಹಲವಾರು ರೈತ ಸಂಘಗಳನ್ನು ಒಗ್ಗೂಡಿಸಿಕೊಂಡು ಬಲವಾದ ರೈತ ಸಂಘಟನೆಗಳ ಒಕ್ಕೂಟ ರಚಿಸಿಕೊಂಡು ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಹೋರಾಟ ರೂಪಿಸಬೇಕು. ಈ ಮಾತುಗಳೆಲ್ಲವೂ ಆದರ್ಶ ಸಂಘಟನೆಯ ಆಶಯಗಳಾದರೂ ಇಂಥ ಆಶಯಗಳ ಅನುಷ್ಠಾನ ಇಂದಿನ ರೈತ ಹೋರಾಟಕ್ಕೆ ಅನಿವಾರ್ಯ.