samachara
www.samachara.com
ಹೇಮಾ ಮಾಲಿನಿ ನಾಟ್ಯ ವಿಹಾರ, ವಾರಣಾಸಿಯ ಕಲ್ಯಾಣಿ ಶುದ್ಧೀಕರಣ; ಓಎನ್‌ಜಿಸಿ ಸಿಎಸ್‌ಆರ್‌ಗೆ ಕೇಸರಿ ಜೋಳಿಗೆ...
COVER STORY

ಹೇಮಾ ಮಾಲಿನಿ ನಾಟ್ಯ ವಿಹಾರ, ವಾರಣಾಸಿಯ ಕಲ್ಯಾಣಿ ಶುದ್ಧೀಕರಣ; ಓಎನ್‌ಜಿಸಿ ಸಿಎಸ್‌ಆರ್‌ಗೆ ಕೇಸರಿ ಜೋಳಿಗೆ...

ಸಂಘಪರಿವಾರದ ಸಂಸ್ಥೆಗಳಾದ ರಾಷ್ಟ್ರೋಥ್ಥಾನ ಪರಿಷತ್‌, ಭಾರತ್‌ ಲೋಕ ಶಿಕ್ಷಾ ಪರಿಷತ್‌, ಸೇವಾ ಇಂಟರ್‌ನ್ಯಾಷನಲ್‌ ಮತ್ತು ವನವಾಸಿ ಕಲ್ಯಾಣ್‌ ಆಶ್ರಮಗಳಿಗೆ ಭರಪೂರ ಹಣ ಹರಿದು ಬರುತ್ತಿದೆ. ಇದನ್ನೇ ಸಾಮಾಜಿಕ ಹೊಣೆಗಾರಿಕೆ ಎಂದು ಕರೆಯಲಾಗುತ್ತಿದೆ.

Team Samachara

ಭಾರತದ ಉದ್ಯಮ ಕ್ಷೇತ್ರದಲ್ಲಿ ಸಿಎಸ್‌ಆರ್‌ ನಿಧಿ (ಕಾರ್ಪೊರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ) ಎಂಬ ಪರಿಕಲ್ಪನೆ ಇದೆ. ಇದರ ಪ್ರಕಾರ ಖಾಸಗಿ ಮತ್ತು ಸಾರ್ವಜನಿಕ ರಂಗದ (ಪಿಎಸ್‌ಯು) ಸಂಸ್ಥೆಗಳು ತಮ್ಮ ಲಾಭದಲ್ಲಿ ಕನಿಷ್ಠ (ಸತತ ಮೂರು ವರ್ಷದ ಸರಾಸರಿ ಲಾಭದಲ್ಲಿ ಶೇಕಡಾ 2 ಪಾಲು) ಹಣವನ್ನು ಸಾಮಾಜಿಕ ಕಾರ್ಯಗಳಿಗಾಗಿ ಕಡ್ಡಾಯವಾಗಿ ಖರ್ಚು ಮಾಡಬೇಕು.

ಹೀಗೊಂದು ನಿಯಮ ಇರುವ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ನಿರ್ಮಾಣವಾದ ಸರ್ದಾರ್‌ ವಲ್ಲಭಬಾಯಿ ಪಟೇಲರ ಏಕತಾ ಪ್ರತಿಮೆಗೆ ಸಾರ್ವಜನಿಕ ರಂಗದ ಕಂಪನಿಗಳು 100 ಕೋಟಿ ರೂಪಾಯಿಗೂ ಹೆಚ್ಚು ಸಿಎಸ್‌ಆರ್‌ ಹಣ ಖರ್ಚು ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ‘ಏಕತೆಯ ಪ್ರತಿಮೆಗೆ ಹಣ ನೀಡಿದ್ದು ಸಾಮಾಜಿಕ ಜವಾಬ್ದಾರಿಯ ಚಟುವಟಿಕೆಯಾಗುವುದಿಲ್ಲ’ ಎಂದು ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್‌ (ಸಿಎಜಿ) ಆಕ್ಷೇಪವನ್ನೂ ಸಲ್ಲಿಸಿತ್ತು. ಸರ್ದಾರ್‌ ಪಟೇಲರ ಪ್ರತಿಮರ ಪಾರಂಪರಿಕ ತಾಣವಲ್ಲ ಎಂದು ತೈಲ ಕಂಪನಿಗಳಿಗೆ ಚಾಟಿ ಬೀಸಿತ್ತು.

ಆದರೆ ಇದು ಕಣ್ಣಿಗೆ ಕಾಣಿಸಿದ ಉದಾಹರಣೆ ಮಾತ್ರ.

ಇದರಾಚೆಗೆ ದೊಡ್ಡ ಮಟ್ಟದ ಅಚ್ಚರಿಯ ಹಣದ ಹರಿವು ಸಿಎಸ್‌ಆರ್‌ ಫಂಡ್‌ ಹೆಸರಿನಲ್ಲಿ ನಡೆದಿದೆ ಎಂಬ ವಿವರಗಳು ಲಭ್ಯವಾಗಿವೆ. ಇವುಗಳಲ್ಲಿ ‘ಆಯಿಲ್‌ ಆಂಡ್ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಒಎನ್‌ಜಿಸಿ)‘ಯ ಸಿಎಸ್‌ಆರ್‌ ಫಂಡ್‌ ಹಂಚಿಕೆಯನ್ನು ‘ದಿ ವೈರ್‌’ ವಿಶ್ಲೇಷಣೆಗೆ ಒಳಪಡಿಸಿದ್ದು, ಕೇಂದ್ರ ಸರಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟಿರುವುದು ಕಾಣಿಸುತ್ತದೆ. ಓಎನ್‌ಜಿಸಿ ತೋರಿಕೆಯ ಸಾಮಾಜಿಕ ಜವಾಬ್ದಾರಿ ಹೆಸರಿನಲ್ಲಿ ತನ್ನ ನಿಧಿಯನ್ನೂ ಖರ್ಚು ಮಾಡಿ ಅತ್ತ ರಾಜಕೀಯ ಪಕ್ಷವನ್ನು ಓಲೈಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ವಿವರ ಇಲ್ಲಿದೆ.

ಒಎನ್‌ಜಿಸಿ ಒಂದಷ್ಟು ಹಣವನ್ನು ಬಿಜೆಪಿಯ ಮಾತೃ ಸಂಘಟನೆ ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಗಳಿಗೆ ಮತ್ತೊಂದಷ್ಟು ನಿಧಿಯನ್ನು ಬಿಜೆಪಿಯ ಸಾಂಸ್ಕೃತಿಕ ಅಜೆಂಡಾಗಳಾದ ಯೋಗ, ಸಂಸ್ಕೃತ, ಗೋವಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ನೀಡಿರುವುದು ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳಿಂದ ತಿಳಿದು ಬರುತ್ತದೆ. ಇನ್ನೆರಡು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರ ವಾರಣಾಸಿಯ ಯೋಜನೆಗಳಿಗೆ ಹಣ ನೀಡಲಾಗಿದೆ.

ಮೋದಿಯವರ ವೈಯಕ್ತಿಕ ಯೋಗ ಗುರು ಎಚ್‌.ಆರ್‌. ನಾಗೇಂದ್ರ ಅವರು ಸ್ಥಾಪಿಸಿರುವ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನಕ್ಕೆ ಸುಮಾರು 8 ಕೋಟಿ ರೂಪಾಯಿಗಳನ್ನು ಒಎನ್‌ಜಿಸಿ ನೀಡಿದೆ. ಈ ಕೇಂದ್ರ ಬೆಂಗಳೂರಿನಲ್ಲಿದೆ.

ಇದರ ಜತೆಗೆ ಸಂಘಪರಿವಾರದ ಸಂಸ್ಥೆಗಳಾದ ರಾಷ್ಟ್ರೋಥ್ಥಾನ ಪರಿಷತ್‌, ಭಾರತ್‌ ಲೋಕ ಶಿಕ್ಷಾ ಪರಿಷತ್‌, ಸೇವಾ ಇಂಟರ್‌ನ್ಯಾಷನಲ್‌ ಮತ್ತು ವನವಾಸಿ ಕಲ್ಯಾಣ್‌ ಆಶ್ರಮಗಳಿಗೂ ಭರಪೂರ ಹಣ ನೀಡಲಾಗಿದೆ.

ಸರಕಾರಿ ಸಂಬಂಧ:

ಸಾಮಾನ್ಯವಾಗಿ ಒಎನ್‌ಜಿಸಿ ಸಿಎಸ್‌ಆರ್‌ನಲ್ಲಿ ದೊಡ್ಡ ಮೊತ್ತದ ಒಂದು ಪಾಲನ್ನು ಸರಕಾರಿ ಯೋಜನೆಗಳಿಗೆ ಖರ್ಚು ಮಾಡುತ್ತದೆ. ಆಯಾಯ ಕಾಲಕ್ಕೆ ಯಾವ ಸರಕಾರಗಳು ಅಧಿಕಾರದಲ್ಲಿರುತ್ತಾವೋ ಅವುಗಳ ಕನಸಿನ ಯೋಜನೆಗಳಿಗೆ ಒಎನ್‌ಜಿಸಿ ನೀರೆರೆಯುತ್ತದೆ.

ಯುಪಿಎ ಕಾಲದಲ್ಲಿ ಆರಂಭಿಸಲಾದ ‘ರಾಜೀವ್‌ ಗಾಂಧಿ ಗ್ರಾಮೀಣ ಎಲ್‌ಪಿಜಿ ವಿತರಕ್‌ ಯೋಜನೆ’ಗೆ 2016ರವರೆಗೂ ಒಎನ್‌ಜಿಸಿ ಹಣ ನೀಡುತ್ತಿತ್ತು. ಮುಂದೆ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ ಜಾರಿಯಾದಾಗ ಅದಕ್ಕೂ ಇದೇ ಒಎನ್‌ಜಿಸಿ ಹಣ ನೀಡುತ್ತಾ ಬಂದಿದೆ. 2016-17ರಲ್ಲಿ ಉಜ್ವಲ ಯೋಜನೆಗೆ ಒಎನ್‌ಜಿಸಿ ಫೌಂಡೇಷನ್‌ 107 ಕೋಟಿ ರೂಪಾಯಿಗಳನ್ನು ನೀಡಿದೆ.

ಇನ್ನು 2017-18ರಲ್ಲಿ ಅತೀ ದೊಡ್ಡ ಮೊತ್ತವನ್ನು ನಾಗಪುರದ ನ್ಯಾಷನಲ್‌ ಕ್ಯಾನ್ಸರ್‌ ಆಸ್ಪತ್ರೆಗೆ ನೀಡಲಾಗಿದೆ. ಇದನ್ನು ಡಾ. ಆಬಾಜಿ ತಟ್ಟೆ ಸೇವಾ ಔರ್‌ ಅನುಸಂಧಾನ್‌ ಸಂಸ್ಥಾ ಟ್ರಸ್ಟ್‌ ನಡೆಸುತ್ತದೆ. ಕೋಲ್‌ ಇಂಡಿಯಾ ಮೊದಲಾದ ಸರಕಾರಿ ಸಂಸ್ಥೆಗಳಿಂದ ಭರಪೂರ ದೇಣಿಗೆ ಪಡೆದುಕೊಳ್ಳುವ ಈ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿಯ ಅಗ್ರಗಣ್ಯ ನಾಯಕಾರದ ನಿತಿನ್‌ ಗಡ್ಕರಿ, ಪಿಯೂಷ್‌ ಗೋಯಲ್‌, ಧರ್ಮೇಂದ್ರ ಪ್ರಧಾನ್‌, ದೇವೇಂದ್ರ ಫಡ್ನವೀಸ್‌ ಮೊದಲಾದವರು ಭಾಗವಹಿಸಿದ್ದರು. ಇದರ ಟ್ರಸ್ಟಿಗಳಿಗೂ ಬಿಜೆಪಿ ಜತೆ ನೇರ ಸಂಬಂಧವಿದ್ದು, ಅಘೋಷಿತ ಸಂಘಪರಿವಾರದ ಆಸ್ಪತ್ರೆಯಾಗಿ ಇದನ್ನು ನೋಡಲಾಗುತ್ತದೆ.

ಇನ್ನು ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಯ ಎರಡು ಯೋಜನೆಗಳಿಗೂ ಒಎನ್‌ಜಿಸಿ ಹಣ ನೀಡಿದೆ. 2016-17ರಲ್ಲಿ ಇಲ್ಲಿನ ನಾಲ್ಕು ಐತಿಹಾಸಿಕ ಕಲ್ಯಾಣಿಗಳ ಶುದ್ಧೀಕರಣಕ್ಕಾಗಿ 7.64 ಕೋಟಿ ರೂಪಾಯಿಗಳನ್ನು ಸಂಸ್ಥೆ ನೀಡಿತ್ತು. 2017-18ರಲ್ಲಿ ಹೆಣಗಳನ್ನು ಹೊತ್ತೊಯ್ಯುವ ಜಲ್ ಶವ್‌ ವಾಹಿನಿಗೆ 17.26 ಲಕ್ಷ ರೂಪಾಯಿಗಳನ್ನು ನೀಡಿತ್ತು. ಇದೇ ವರ್ಷ ಇಲ್ಲಿನ ಸುರ್‌ ಗಂಗಾ ಫೆಸ್ಟಿವಲ್‌ ಆಫ್‌ ಮ್ಯೂಸಿಕ್‌ಗೂ 28 ಲಕ್ಷ ರೂಪಾಯಿಗಳನ್ನು ನೀಡಿತ್ತು.

ಇದೇ ರೀತಿ ಬಿಜೆಪಿ ಸಂಸದೆಯೊಬ್ಬರಿಗೆ ಸಂಬಂಧಿಸಿದ ಟ್ರಸ್ಟ್‌ನ ಕಾರ್ಯಕ್ರಮಕ್ಕೂ ಹಣ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸಂಸದೆ ಹೇಮಾ ಮಾಲಿನಿ ಜತೆ ಸಂಬಂಧ ಹೊಂದಿರುವ ನಾಟ್ಯಾವಿಹಾರ್ ಕಲಾಕೇಂದ್ರ ಚಾರಿಟಿ ಟ್ರಸ್ಟ್‌ ನಡೆಸುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮ ‘ಸೈನೆರ್ಜಿ’ಗೆ 2017-18ರಲ್ಲಿ 17.7 ಲಕ್ಷ ರೂಪಾಯಿ ಹಣ ನೀಡಿತ್ತು.

ಆಡಳಿತ ಪಕ್ಷದ ಜತೆಗಿನ ದೇಣಿಗೆಯ ಕಥೆಗಳು ಹೀಗಾದರೆ ಅಪವಾದ ಎಂಬಂತೆ ಒಂದಷ್ಟು ಬೇರೆ ಉದ್ದೇಶಗಳಿಗೂ ಹಣ ನೀಡಲಾಗಿದೆ. ಉದಾಹರಣೆಗೆ 2016-17ರಲ್ಲಿ ಕಾಸರಗೋಡಿನ ‘ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ’ಕ್ಕೆ ಒಎನ್‌ಜಿಸಿ 15.75 ಲಕ್ಷ ರೂಪಾಯಿ ದೇಣಿಗೆ ನೀಡಿದೆ. ಸಂಸದ ವೀರಪ್ಪ ಮೊಯ್ಲಿ ಈ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ರಾಜಸ್ಥಾನದ ಲಾಲ್‌ ಬಹದ್ದೂರ್‌ ಶಾಸ್ತ್ರಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಸೌರ ವಿದ್ಯುತ್‌ ವ್ಯವಸ್ಥೆ ಅಳವಡಿಕೆಗೆ 10 ಲಕ್ಷ ನೀಡಲಾಗಿದೆ.

ವಿಚಿತ್ರ ಬೆಳವಣಿಗೆಯಲ್ಲಿ ರಾಜಸ್ಥಾನದ ಗಣಿ ಇಂಜಿನಿಯರ್‌ಗಳ ಸಂಘಟನೆಗೆ ಅತಿಥಿ ಗೃಹ ನಿರ್ಮಾಣಕ್ಕೆ 10 ಲಕ್ಷ ರೂಪಾಯಿಗಳನ್ನು 2016-17ರಲ್ಲಿ ನೀಡಲಾಗಿದೆ. ಇದು ಸಾಮಾಜಿಕ ಜವಾಬ್ದಾರಿಯ ಯಾವ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದನ್ನು ಸಂಸ್ಥೆಯೇ ಹೇಳಬೇಕಷ್ಟೆ!

ದೇಣಿಗೆ ಹಿಂದಿನ ಉದ್ದೇಶ

ದೇಶ ನಿರ್ಮಾಣಕ್ಕೆ ಖಾಸಗಿ ಮತ್ತು ಸಾರ್ವಜನಿಕ ಕಂಪನಿಗಳು ತಮ್ಮ ಲಾಭದಲ್ಲಿ ಒಂದಷ್ಟು ಪಾಲನ್ನು ನೀಡಬೇಕು ಎಂಬುದು ಸಿಎಸ್‌ಆರ್‌ ಹಿಂದಿನ ಸರಳ ಉದ್ದೇಶ.

ಇದರಲ್ಲಿರುವ ಕೆಲವು ನಿಯಮಾವಳಿಗಳನ್ನು ಬಳಸಿಕೊಂಡು ಸಂಸ್ಥೆಗಳು ಆಡಳಿತರೂಢ ಪಕ್ಷಗಳನ್ನು ಮೆಚ್ಚಿಸುವ ಕೆಲಸವನ್ನು ಮಾಡುತ್ತಾ ಬಂದಿರುವುದನ್ನು ದಾಖಲೆಗಳು ಋಜುವಾತುಪಡಿಸುತ್ತವೆ. ಉದಾಹರಣೆಗೆ 2014-15 ರಿಂದ 2017-18ರವರೆಗೆ ಪಟ್ಟಿ ಮಾಡಲಾದ 41 ಸಂಸ್ಥೆಗಳ 70 ದೇಣಿಗೆಗಳನ್ನು ಗೋ ಸಂಬಂಧಿತ ಉದ್ದೇಶಗಳಿಗೆ ನೀಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆದ ಬದಲಾವಣೆಗಳಲ್ಲಿ ಇದೂ ಒಂದು.

‘ಇದರಲ್ಲೇನೂ ತಪ್ಪಿಲ್ಲ’ ಎನ್ನುತ್ತಾರೆ ಸಿಎಸ್‌ಆರ್‌ ಚಟುವಟಿಕೆಗಳ ಬಗ್ಗೆಯೇ ಅಧ್ಯಯನ ಮಾಡಿರುವ ಪುಷ್ಪ ಸುಂದರ್‌. ಆದರೆ ಇದೇ ಅವಧಿಯಲ್ಲಿ ಶಿಶು ಮರಣ ಪ್ರಮಾಣ ತಗ್ಗಿಸಲು, ಅತೀವ ಬಡತನವನ್ನು ಹೋಗಲಾಡಿಸಲು ಕೇವಲ ಶೇಕಡಾ 6ರಷ್ಟು ಸಿಎಸ್‌ಆರ್‌ ಹಣವನ್ನು ವಿನಿಯೋಗ ಮಾಡಲಾಗಿದೆ. ಇದು ವಿಪರ್ಯಾಸ ಎನ್ನುತ್ತಾರೆ ಅವರು.

ರಾಜಕಾರಣಿಗಳು ಮತ್ತು ಸಂಸ್ಥೆಗಳ ಜತೆ ಸಿಎಸ್‌ಆರ್‌ ಸಂಬಂಧದ ಕೊಂಡಿಯಾಗಿದೆ ಎಂದು ದೂರುತ್ತಾರೆ ಸಿಎಸ್‌ಆರ್‌ ಫಂಡ್ ಬಗ್ಗೆ ಕಾರ್ಯಾಗಾರ ಮೊದಲಾದುವುಗಳನ್ನು ನಡೆಸುವ ಬಿಸಿನೆಸ್‌ ಆಂಡ್‌ ಕಮ್ಯೂನಿಟಿ ಫೌಂಡೇಷನ್‌ನ ಅಮಿತ್‌ ಜೋಸೆಫ್‌. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಿಎಸ್ಆರ್‌ ಎಂಬುದು ಸಾಮಾಜಿಕ ಜವಾಬ್ದಾರಿಯಿಂದ ರಾಜಕೀಯ ಹೊಂದಾಣಿಕೆಯ ಅಸ್ತ್ರವಾಗುವ ಅಪಾಯ ಇದೆ.

ಕೃಪೆ: ದಿ ವೈರ್‌