samachara
www.samachara.com
ಆಪರೇಷನ್‌ ಕಮಲಕ್ಕೆ ಕೈ ಹೈಕಮಾಂಡ್‌ ಕಿಡಿ; ಆಡಿಯೊ ಕ್ಲಿಪ್‌ ಬಗ್ಗೆ ತನಿಖೆಗೆ ಒತ್ತಾಯ
COVER STORY

ಆಪರೇಷನ್‌ ಕಮಲಕ್ಕೆ ಕೈ ಹೈಕಮಾಂಡ್‌ ಕಿಡಿ; ಆಡಿಯೊ ಕ್ಲಿಪ್‌ ಬಗ್ಗೆ ತನಿಖೆಗೆ ಒತ್ತಾಯ

ಯಡಿಯೂರಪ್ಪ ಆಡಿಯೊ ಕ್ಲಿಪ್‌ ಬಗ್ಗೆ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದೆ.

Team Samachara

ಆಪರೇಷನ್ ಕಮಲದ ಮೂಲಕ ಬಿಜೆಪಿ ನಾಯಕರು ಜೆಡಿಎಸ್- ಕಾಂಗ್ರೆಸ್‍ನ ಕರ್ನಾಟಕದ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ದೇಶವೇ ನಾಚಿಕೆ ಪಡಬೇಕಾದ ವಿಷಯ ಎಂದು ಕಾಂಗ್ರೆಸ್ ಹೈಕಮಾಂಡ್ ಟೀಕಿಸಿದೆ.

ಆಪರೇಷನ್ ಕಮಲ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಡಿಯೊ ಕ್ಲಿಪ್ ಬಿಡುಗಡೆ ಮಾಡಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಇಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಆಡಿಯೊ ಕ್ಲಿಪ್ ಮತ್ತು ಕುದುರೆ ವ್ಯಾಪರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು. ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಕುದುರೆ ವ್ಯಾಪಾರಕ್ಕೆ ಬಳಸಲಾಗುತ್ತಿದೆ ಎನ್ನಲಾದ 200 ಕೋಟಿ ರೂಪಾಯಿ ಹಣ ಯಾವ ಮೂಲದಿಂದ ಬಂದಿದೆ ಎಂಬುದನ್ನು ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

Also read: ‘ಐ ಆಮ್ ಎಕ್ಸ್‌ಪೋಸಿಂಗ್ ನೌ’: ಯಡಿಯೂರಪ್ಪ ಆಡಿಯೊ ಟೇಪ್‌; ಕುಮಾರಸ್ವಾಮಿ ಪತ್ರಿಕಾಗೋಷ್ಠಿ 

ಕೆ.ಸಿ.ವೇಣುಗೋಪಾಲ್ ಮಾತನಾಡಿ, "ಪ್ರತಿ ಶಾಸಕರಿಗೆ 10 ಕೋಟಿ ಹಣ ನೀಡಲಾಗುವುದು, ನಮ್ಮ ಜತೆ 18 ಎಂಎಲ್‍ಎಗಳಿದ್ದಾರೆ, ಸರಕಾರವನ್ನು ಪತನಗೊಳಿಸುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಕಾಂಗ್ರೆಸ್- ಜೆಡಿಎಸ್ ಪಕ್ಷವನ್ನು ತೊರೆಯುವ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸದಂತೆ ವಿಧಾನಸಭಾಧ್ಯಕ್ಷರ ಜತೆ ಮಾತುಕತೆ ನಡೆಸಲಾಗಿದೆ ಹಾಗೂ ನ್ಯಾಯಾಲಯದಲ್ಲೂ ನಮ್ಮ ಪರವಾಗಿಯೇ ತೀರ್ಪು ನೀಡುವಂತೆ ನ್ಯಾಯಧೀಶರ ಜತೆಯೂ ಮಾತುಕತೆ ನಡೆದಿದೆ ಎಂದು ಬಿಜೆಪಿ ನಾಯಕರು ಹೇಳಿರುವುದು ಆಡಿಯೊ ಕ್ಲಿಪ್‍ನಲ್ಲಿದೆ" ಎಂದಿದ್ದಾರೆ.

"ಬಿಜೆಪಿ ನಾಯಕರು ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ರಚನೆಯಾದ ದಿನದಿಂದಲೂ ಅದನ್ನು ಅತಂತ್ರಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಕುದುರೆ ವ್ಯಾಪಾರದ ಮೂಲಕ ಶಾಸಕರ ಖರೀದಿಗೆ ಮುಂದಾಗಿರುವುದು ನಾಚಿಕೆಗೇಡಿನ ವಿಷಯ. ಬಿಜೆಪಿಯ ರಾಷ್ಟ್ರೀಯ ನಾಯಕರು ಈ ರೀತಿಯ ಕೆಟ್ಟ ರಾಜಕಾರಣವನ್ನು ನಿಲ್ಲಿಸಬೇಕು. ಬಿಜೆಪಿ ನಾಯಕರ ಆಡಿಯೊ ಕ್ಲಿಪ್ ಬಗ್ಗೆ ಪ್ರಧಾನಿ ಮೋದಿ ಅವರು ಸ್ಪಷ್ಟನೆ ನೀಡಬೇಕು" ಎಂದು ಒತ್ತಾಯಿಸಿದರು.

ಸಚಿವ ಡಿ.ಕೆ. ಶಿವಕುಮಾರ್ ಅವರ ಆದಾಯದ ಮೂಲದ ಬಗ್ಗೆ ಇಂಚಿಂಚೂ ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಗಳು ಬಿಜೆಪಿ ಕುದುರೆ ವ್ಯಾಪಾರಕ್ಕಾಗಿ 200 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದರ ಬಗ್ಗೆ ಏಕೆ ತನಿಖೆ ನಡೆಸಬಾರದು ಎಂದು ಅವರು ಪ್ರಶ್ನಿಸಿದರು.

ಬಿಜೆಪಿಯವರು ಎಷ್ಟೇ ಪ್ರಯತ್ನ ಪಟ್ಟರೂ ಕರ್ನಾಟಕದ ಸಮ್ಮಿಶ್ರ ಸರಕಾರಕ್ಕೆ ಯಾವ ತೊಂದರೆಯೂ ಆಗುವುದಿಲ್ಲ. ಆಡಿಯೊ ಕ್ಲಿಪ್ ಬಗ್ಗೆ ಈಗಾಗಲೇ ನಾವು ಕರ್ನಾಟಕದ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇವೆ ಎಂದರು.

ರಣದೀಪ್ ಸುರ್ಜೆವಾಲಾ ಮಾತನಾಡಿ, ಅಮಿತ್ ಷಾ, ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರಿರುವ ಈ ಮೂವರ ಗ್ಯಾಂಗ್ ನಾಚಿಕೆಗೇಡಿನ ರಾಜಕಾರಣ ಮಾಡುತ್ತಿದೆ. ಭ್ರಷ್ಟಾಚಾರ ಮಾಡುವುದು, ಲಂಚಕೊಟ್ಟು ಶಾಸಕರನ್ನು ಖರೀದಿಸುವುದು ಅವರ ವ್ಯವಹಾರಗಳಾಗಿವೆ. ಸಂವಿಧಾನದ ಆಶಯಗಳನ್ನು ಮೂಲೆಗುಂಪು ಮಾಡಿ ಜನರಿಂದ ಆಯ್ಕೆಯಾದ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು.

ಆಡಿಯೊ ಕ್ಲಿಪ್‍ನಲ್ಲಿ ಸುಪ್ರೀಂಕೋರ್ಟ್‍ನ ನ್ಯಾಯಾಧೀಶರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಡಿಯೊ ಕ್ಲಿಪ್‌ ಬಗ್ಗೆ ಸುಪ್ರೀಂಕೋರ್ಟ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದೆ.

ಚಿತ್ರಕೃಪೆ: Speak In Loud