samachara
www.samachara.com
ಬೀಡಾಡಿ ದನಗಳಿಂದ ಬೇಸತ್ತ ರೈತ; ಯೋಗಿ ನಾಡಲ್ಲಿ ಮೋದಿಗೆ ಹಿಡಿಶಾಪ
COVER STORY

ಬೀಡಾಡಿ ದನಗಳಿಂದ ಬೇಸತ್ತ ರೈತ; ಯೋಗಿ ನಾಡಲ್ಲಿ ಮೋದಿಗೆ ಹಿಡಿಶಾಪ

“ಗೋವುಗಳನ್ನು ನಾವೂ ಪವಿತ್ರವೆಂದೇ ನಂಬುತ್ತೇವೆ. ಇದೇ ಆಲೋಚನೆಯ ಹಿನ್ನೆಲೆಯಲ್ಲಿ ಸರಕಾರ ಕೈಗೊಂಡ ಕ್ರಮಗಳು ರೈತರು, ಗ್ರಾಮೀಣ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ,” ಎಂದು ದೂರುತ್ತಾರೆ ದೀಪಕ್‌ ಚೌಧರಿ. 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕತ್ತಲಾಗುತ್ತಿದ್ದಂತೆ ಉತ್ತರ ಪ್ರದೇಶದ ಮಹಾಬನ್‌ನಲ್ಲಿ ವಾಸಿಸುವ ಗೋಪಿ ಚಂದ್‌ ಯಾದವ್‌ರ ಹೊಸ ಕೆಲಸ ಆರಂಭವಾಗುತ್ತದೆ. ಹೊಸದು ಯಾಕೆಂದರೆ ಇದು ಇತ್ತೀಚೆಗೆ ಆರಂಭವಾಗಿದ್ದು; ಮೊದಲು ಇರಲಿಲ್ಲ.

ಗೋಪಿಚಂದ್‌ ಕಷ್ಟಪಟ್ಟು ತಮ್ಮ ಜಮೀನಿನಲ್ಲಿ ಸಾಸಿವೆ ಬೆಳೆ ಬೆಳೆದಿದ್ದಾರೆ. ಅವುಗಳಿಗೀಗ ಬೀಡಾಡಿ ದನಗಳ ಕಾಟ ಆರಂಭವಾಗಿದೆ. ಹಾಗಾಗಿ ಕತ್ತಲು ಕವಿಯುತ್ತಿದ್ದಂತೆ ಹೊಲದ ಮಧ್ಯದಲ್ಲಿ ನಿರ್ಮಿಸಿದ ಮರದ ಅಟ್ಟಣಿಗೆ ಹತ್ತಿ ಕುಳಿತುಕೊಳ್ಳುತ್ತಾರೆ. ರಾತ್ರಿಯ ಥರಗುಡುವ ಚಳಿಗೆ ಕಂಬಳಿ ಹೊದ್ದುಕೊಂಡು, ಕ್ಷೀಣ ಬೆಳಕಿನಲ್ಲಿ ಎಲ್ಲಿ ಯಾವ ದನ ತನ್ನ ಬೆಳೆಯನ್ನು ಹಾಳು ಮಾಡುತ್ತದೋ ಎಂದು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುವುದೇ ಅವರ ಈ ಹೊಸ ಕೆಲಸ.

ಒಂದೊಮ್ಮೆ ದನ ಬಂದರೆ ಬಿದಿರಿನ ಕೋಲು ಎತ್ತಿಕೊಂಡು ಹೋಗಿ ಓಡಿಸುತ್ತಾರೆ. ಮತ್ತೆ ಬಂದು ತಮ್ಮ ಅಟ್ಟಣಿಗೆಯಲ್ಲಿ ಕುಳಿತುಕೊಳ್ಳುತ್ತಾರೆ. ಪುನಃ ಅದೇ ಪುನರಾವರ್ತನೆ; ಬೆಳಿಗ್ಗಿನವರೆಗೆ ನಡೆಯುತ್ತದೆ.

ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಕಾಡುತ್ತಿರುವ ಹೊತ್ತಲ್ಲಿ ಇಂಥಹದ್ದೊಂದು ಹೊಸ ಉದ್ಯೋಗವನ್ನು ಸೃಷ್ಟಿಸಿದ್ದಾರೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌.

ಮತ್ತಿದು ಗೋಪಿಚಂದ್‌ ಒಬ್ಬರ ಕತೆಯಲ್ಲ. ಸಾವಿರಾರು ರೈತರು ಹೀಗೆಯೇ ತಮ್ಮ ಬೆಳೆಗಳನ್ನು ರಾತ್ರ-ಹಗಲು ಕಾಯುತ್ತಾ ಕುಳಿತುಕೊಳ್ಳುತ್ತಿದ್ದಾರೆ. ಮೊದಲೇ ಬೆಳೆಗೆ ಬೆಲೆಯಿಲ್ಲ. ಹೀಗಿರುವಾಗ ಬಂದ ಬೆಳೆಯನ್ನೂ ಎಲ್ಲಿ ಬೀಡಾಡಿ ದನಗಳು ತಿಂದು ತೇಗುತ್ತವೋ ಎಂಬ ಹೊಸ ಚಿಂತೆ ದೇಶದ ಗ್ರಾಮೀಣ ಭಾಗದ ರೈತರನ್ನು ಕಾಡುತ್ತಿದೆ.

ಮೋದಿ ಮೇನಿಯಾ:

ಇದೆಲ್ಲಾ ಆರಂಭವಾಗಿದ್ದು ಕೆಲವೇ ವರ್ಷಗಳ ಅಂತರದಲ್ಲಿ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಗೋ ಸಂರಕ್ಷಣೆಯ ಮಂತ್ರ ಪಠಣ ಆರಂಭಿಸಿತು. ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಲಾಯಿತು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಗೋರಕ್ಷಕರು ಗೋ ಸಾಗಣೆಗೆ ಯತ್ನಿಸಿದ, ದನದ ಮಾಂಸ ತಿಂದ, ಸತ್ತ ದನಗಳ ಚರ್ಮ ಸುಲಿದವರ ಮೇಲೆಲ್ಲಾ ಮನಸೋ ಇಚ್ಛೆ ಹಲ್ಲೆ ಮಾಡಿದರು.

ಬೆನ್ನಿಗೆ ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂತು. ಯೋಗಿ ಆದಿತ್ಯನಾಥ್‌ ದೇಶದ ಅತೀ ದೊಡ್ಡ ರಾಜ್ಯದ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಈ ಘಟನೆಗಳು ಮತ್ತಷ್ಟು ಹೆಚ್ಚಾದವು. ಎಲ್ಲಿಯವರೆಗೆ ಎಂದರೆ ದನಗಳ ಕಾರಣಕ್ಕೆ ಪೊಲೀಸ್‌ ಅಧಿಕಾರಿಗಳೇ ಕೊಲೆಯಾದರು.

ಹೀಗಾಗಿ ಈ ದನಗಳ ಸಹವಾಸವೇ ಬೇಡವೆಂದು ಕೃಷಿಕರು ಮುದಿ, ಗೊಡ್ಡು ದನಗಳನ್ನು ನೇರವಾಗಿ ಬೀದಿಗೆ ಬಿಡುತ್ತಿದ್ದಾರೆ. ಬೇಸಿಗೆ ಬರುತ್ತಿದ್ದಂತೆ ಈ ದನಗಳೀಗ ಮೇವು, ನೀರು ಸಿಗದೆ ಸಿಕ್ಕ ಸಿಕ್ಕ ಹೊಲ ಗದ್ದೆಗಳಿಗೆ ನುಗ್ಗುತ್ತಿವೆ. ಪರಿಣಾಮ ಮೊದಲೇ ಬೆಲೆ ಇಳಿಕೆಯಿಂದ ಕಂಗಾಲಾಗಿರುವ ರೈತರು ತಮ್ಮ ವರ್ಷದ ದುಡಿಮೆಯನ್ನು ಕಳೆದುಕೊಳ್ಳಲು ಆರಂಭಿಸಿದ್ದಾರೆ.

"ನಮಗೆ ಈಗಾಗಲೇ ಬೇಕಾದಷ್ಟು ಸಮಸ್ಯೆಗಳಿವೆ. ಇದೀಗ ಸರಕಾರ ಮತ್ತೊಂದನ್ನು ಸೃಷ್ಟಿಸಿದೆ,” ಎನ್ನುತ್ತಾರೆ ಕಕ್ರಿಪುರ್ ಗ್ರಾಮದ ಬಾಬುರಾವ್‌ ಸೈನಿ. ಈ ಕಾರಣಕ್ಕೆ ನಾವೀಗ ಮೊದಲ ಬಾರಿಗೆ ಬೆಳೆಗಳನ್ನು ರಕ್ಷಿಸಲು ರಾತ್ರಿ ಹೊತ್ತು ಹೊಲಗಳಲ್ಲಿ ಉಳಿಯಬೇಕಾಗಿದೆ ಎನ್ನುತ್ತಾರೆ ಅವರು.

ಬೀಡಾಡಿ ದನಗಳನ್ನು ಅಟ್ಟುತ್ತಿರುವ ಅಲಿಘರ್‌ ಗ್ರಾಮಸ್ಥರು.
ಬೀಡಾಡಿ ದನಗಳನ್ನು ಅಟ್ಟುತ್ತಿರುವ ಅಲಿಘರ್‌ ಗ್ರಾಮಸ್ಥರು.
/ಟೈಮ್ಸ್‌ ಆಫ್‌ ಇಂಡಿಯಾ

“ಗೋವುಗಳನ್ನು ನಾವೂ ಪವಿತ್ರವೆಂದೇ ನಂಬುತ್ತೇವೆ. ಆದರೆ ಇಂತಹ ಆಲೋಚನೆ ಹಿನ್ನೆಲೆಯಲ್ಲಿ ಸರಕಾರ ತೆಗೆದುಕೊಂಡ ಕ್ರಮಗಳು ರೈತರು, ಗ್ರಾಮೀಣ ಆರ್ಥಿಕತೆಯನ್ನೇ ಬುಡಮೇಲು ಮಾಡಿದೆ,” ಎಂದು ದೂರುತ್ತಾರೆ ದೀಪಕ್‌ ಚೌಧರಿ.

ಈ ಹಿಂದೆ ಭಾರತದ ದನಗಳನ್ನು ಮಾಂಸಕ್ಕಾಗಿ ವಧೆ ಮಾಡಲಾಗುತ್ತಿತ್ತು. ಇನ್ನೊಂದಷ್ಟನ್ನು ಚರ್ಮಕ್ಕಾಗಿ ಬಾಂಗ್ಲಾದೇಶಕ್ಕೆ ಮಾರಾಟಗೊಳ್ಳುತ್ತಿದ್ದವು. ಇದೀಗ ಗೋ ರಕ್ಷಕರ ಕಾಟದಿಂದ ನಿರುಪಯುಕ್ತ ದನಗಳಿಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿದ್ದವರು ಅವುಗಳಿಂದ ಹೊರ ಬಂದಿದ್ದಾರೆ.

ಬೆನ್ನಿಗೆ ಬೀಡಾಡಿ ದನಗಳ ಸಂಖ್ಯೆ ಬೇಕಾಬಿಟ್ಟಿ ಏರಿಕೆಯಾಗಿದ್ದು ಸರಕಾರ ಆದಷ್ಟು ಬೇಗೆ ಗೋಶಾಲೆಗಳನ್ನು ತೆರೆಯಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ಆದರೆ ಗೋ ಕಲ್ಯಾಣ ಸೆಸ್‌ ಸಂಗ್ರಹಕ್ಕೆ ಇಳಿದ ಉತ್ತರ ಪ್ರದೇಶ ಸರಕಾರ ಇನ್ನೂ ಸಾಕಷ್ಟು ಗೋಶಾಲೆಗಳನ್ನು ತೆರೆದಿಲ್ಲ. ಹೊಸತಾಗಿ ಮಂಡನೆಯಾದ ಬಜೆಟ್‌ನಲ್ಲಿ ಲಕ್ಷಾಂತರ ದನಗಳ ಸಾಕಣೆಗೆ ಜುಜುಬಿ 450 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು ಅದರಲ್ಲಿನ್ನೂ ಶಾಲೆಗಳ ನಿರ್ಮಾಣ ಆರಂಭವಾಗಬೇಕಿದೆ.

ಬೀಡಾಡಿ ದನಗಳು ಸೃಷ್ಟಿಸಿದ ಬಿಕ್ಕಟ್ಟು:

ಸರಕಾರ ತನ್ನ ನಿರ್ಧಾರದ ಬಗ್ಗೆ ಮುಂದಾಲೋಚನೆ ಇಲ್ಲದೆ, ಪರ್ಯಾಯ ಏನು ಎಂಬುದರ ಬಗ್ಗೆ ಆಲೋಚನೆ ಮಾಡದೆ ಜಾರಿಗೆ ತಂದಿದ್ದರ ಪರಿಣಾಮಗಳಿವು ಎನ್ನುತ್ತಾರೆ ದೀಪಕ್‌ ಚೌಧರಿ. ಸರಕಾರಕ್ಕೆ ಹೇಗೂ ಪರ್ಯಾಯದ ಬಗ್ಗೆ ಯೋಚನೆಯಿಲ್ಲ, ಇತ್ತ ಜನರಿಗೂ ಸಮಸ್ಯೆಗೆ ಉತ್ತರ ಸಿಗುತ್ತಿಲ್ಲ. ಹೀಗಾಗಿ ದಾರಿ ಕಾಣದೆ ಕೆಲವು ಕಾನೂನು ವಿರೋಧಿ ಚಟುವಟಿಕೆಗಳನ್ನು ನಡೆಸಿ ಕೇಸುಗಳನ್ನು ಮೈಮೇಲೆ ಜಡಿಸಿಕೊಳ್ಳುತ್ತಿದ್ದಾರೆ.

ಶಾಲೆಯ ಆವರಣದಲ್ಲಿ ದನಗಳನ್ನು ಕಟ್ಟಿರುವ ಗ್ರಾಮಸ್ಥರು.
ಶಾಲೆಯ ಆವರಣದಲ್ಲಿ ದನಗಳನ್ನು ಕಟ್ಟಿರುವ ಗ್ರಾಮಸ್ಥರು.
/ಹಿಂದೂಸ್ಥಾನ್‌ ಟೈಮ್ಸ್‌

ಉದಾಹರಣೆಗೆ ಜನವರಿ 19ರಂದು ದಕಿಲ್‌ಪುರದ ಗ್ರಾಮಸ್ಥರು ತಮ್ಮ ದನಗಳನ್ನು ಶಾಲೆಯ ಆವರಣದಲ್ಲಿ ಕಟ್ಟಲು ಅವಕಾಶ ನೀಡದ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಕೇಸು ಹಾಕಿಸಿಕೊಂಡಿದ್ದರು. ಇದು ಇಲ್ಲಿಯ ಕಥೆ ಮಾತ್ರವಲ್ಲ. ಹಲವು ಕಡೆಗಳಲ್ಲಿ ಇದೇ ರೀತಿ ಆಗಿದೆ.

ಇದೀಗ ಕೇಸು ಹಾಕಿಸಿಕೊಂಡ ರೈತರ ಸಿಟ್ಟು ಮತ್ತಷ್ಟು ಹೆಚ್ಚಾದಾಗ ಸರಕಾರ ರೈತರ ಮೇಲಿನ ಕೇಸುಗಳನ್ನು ಹಿಂತೆಗೆದುಕೊಳ್ಳುವ ತಾತ್ಕಾಲಿಕ ಆಕ್ರೋಶ ಶಮನ ಕಾರ್ಯ ಆರಂಭಿಸಿದೆ. ಜನವರಿ 26ರಂದು ಇದೇ ರೀತಿ ದಕಿಲ್‌ಪುರದ ಗ್ರಾಮಸ್ಥರ ಮೇಲಿನ ಕೇಸುಗಳನ್ನು ರದ್ದುಗೊಳಿಸಲಾಗಿದೆ. ಇನ್ನು ಫೆಬ್ರವರಿ 4ರಂದು, ಬಡೌಲಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದನಗಳನ್ನು ಕೂಡಿ ಹಾಕಿ ಕೇಸು ಹಾಕಿಸಿಕೊಂಡಿದ್ದ 19 ಜನರು ಮತ್ತು 106 ಅಪರಿಚಿತರ ಮೇಲಿನ ಮೊಕದ್ದಮೆಗಳನ್ನೂ ವಾಪಸ್‌ ಪಡೆಯಲಾಗಿದೆ.

ಜನವರಿ 28ರಂದು ಶಾಮ್ಲಿಯಲ್ಲಿ ದನಗಳನ್ನು ಕೋಣೆಯಲ್ಲಿ ಕಟ್ಟಿ ಹಾಕಿ ತರಗತಿಗಳನ್ನು ಹೊರಗಡೆ ಮಾಡುವಂತೆ ಒತ್ತಾಯಿಸಿದ್ದ ರೈತರನ್ನು ಬಂಧಿಸಲಾಗಿತ್ತು. ಅವರನ್ನೀಗ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ದನಗಳನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಶಹಜಾನ್‌ಪುರದ 28 ರೈತರು, ಹತ್ರಾಸ್‌ ಜಿಲ್ಲೆಯ ಪಟೇನಿಯ ಅಪರಿಚಿತ ರೈತರ ಮೇಲಿನ ಕೇಸುಗಳನ್ನೂ ಯೋಗಿ ಸರಕಾರ ಕೈ ಬಿಟ್ಟಿದೆ. ಹೀಗೆ ಸುಖಾಸುಮ್ಮನೆ ಕೇಸು ಹಾಕಿಸಿಕೊಂಡ ರೈತರೆಲ್ಲಾ ಈಗ ಸರಕಾರದ ವಿರುದ್ಧ, ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

‘ರಾಯ್ಟರ್ಸ್‌’ ಸುದ್ದಿ ಸಂಸ್ಥೆ ಜತೆ ಮಾತನಾಡಿರುವ ಮಹಾಬನ್‌ನ ಕನಿಷ್ಠ 50 ಗ್ರಾಮಸ್ಥರು ಮುಂದಿನ ಬಾರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮತ ಹಾಕುವ ಮೊದಲು ಎರಡೆರಡು ಬಾರಿ ಯೋಚನೆ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮದೇ ಆಲೋಚನೆಯ ನೇರಕ್ಕೆ ಯೋಜನೆಗಳನ್ನು ತಂದರೆ ಏನಾಗುತ್ತದೆ ಎಂಬುದಕ್ಕೆ ಉತ್ತರ ಪ್ರದೇಶದ ಈ ಬಿಕ್ಕಟ್ಟು ಪಾಠದಂತಿದೆ ಸರಕಾರಗಳಿಗೆ.

ಪೂರಕ ಮಾಹಿತಿ: ಅಲ್‌ಜಝೀರಾ, ಇಂಡಿಯನ್‌ ಎಕ್ಸ್‌ಪ್ರೆಸ್‌, ರಾಯ್ಟರ್ಸ್‌

Also read: ಯೋಗಿ ರಾಜ್ಯದಲ್ಲಿ ‘ಎಣ್ಣೆ ಪಾರ್ಟಿ’ಗಳಿಗೆ ಬೀಡಾಡಿ ದನಗಳ ಕಾಟ!