samachara
www.samachara.com
ಜನಪ್ರಿಯ ಮಾರ್ಗದಲ್ಲಿ ಎಚ್‌ಡಿಕೆ ಆಯವ್ಯಯ; ಎಲ್ಲರನ್ನೂ ಓಲೈಸುವ ‘ಸಮತೋಲಿತ’ ಬಜೆಟ್‌!
COVER STORY

ಜನಪ್ರಿಯ ಮಾರ್ಗದಲ್ಲಿ ಎಚ್‌ಡಿಕೆ ಆಯವ್ಯಯ; ಎಲ್ಲರನ್ನೂ ಓಲೈಸುವ ‘ಸಮತೋಲಿತ’ ಬಜೆಟ್‌!

ಎಲ್ಲ ವರ್ಗಗಳನ್ನೂ ಓಲೈಸುವಂಥ ಜನಪ್ರಿಯ ಮಾರ್ಗದ ಸಮತೋಲಿನ ಬಜೆಟ್‌ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದಾರೆ.

Team Samachara

ರೈತರು, ಮಹಿಳೆಯರು, ಮಧ್ಯಮ ವರ್ಗ, ಹಿರಿಯ ನಾಗರಿಕರು, ಆಶಾ ಕಾರ್ಯಕರ್ತೆಯರು, ಆಟೊ ಚಾಲಕರು, ಬೀದಿಬದಿ ವ್ಯಾಪಾರಿಗಳು, ಅಲ್ಪಸಂಖ್ಯಾತರು, ಮಠಗಳು - ಹೀಗೆ ಎಲ್ಲರನ್ನೂ ಓಲೈಸುವ, ಯಾರಿಗೂ ಹೊರೆಯಾಗದ ಜನಾಕರ್ಷಣೆಯ ಬಜೆಟ್‍ ಅನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ್ದಾರೆ.

ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ನಡುವೆಯೂ ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಎರಡನೇ ಬಜೆಟ್‍ ಮಂಡಿಸಿ ನಾಡಿನ ಜನತೆಗೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ. ವಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ಎಂಬಂತೆ ರೈತರ ಸಾಲಮನ್ನಾ ಮಾಡಿಯೇ ತೀರುತ್ತೇವೆ ಎಂದು ಪ್ರಕಟಿಸಿರುವ ಕುಮಾರಸ್ವಾಮಿ ಇದಕ್ಕಾಗಿ ಎಷ್ಟೇ ಸಮಸ್ಯೆಗಳು ಎದುರಾದರೂ ಒನ್‌ ಟೈಮ್ ಸೆಟ್ಲಮೆಂಟ್‍ನಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ಈವರೆಗೂ ಸಾಲಮನ್ನಾ ಯೋಜನೆಯಡಿ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ನಡಿ ರೈತರ ಖಾತೆಗಳಿಗೆ 5,450 ಕೋಟಿ ರೂಪಾಯಿ ಹಣ ಬಿಡಗಡೆ ಮಾಡಲಾಗಿದೆ. ಸಹಕಾರಿ ಬ್ಯಾಂಕ್‍ಗಳ 2 ಲಕ್ಷ ಖಾತೆಗಳ 1,027 ಕೋಟಿ ಹಾಗೂ ವಾಣಿಜ್ಯ ಬ್ಯಾಂಕ್‍ಗಳ 1.9 ಲಕ್ಷ ಖಾತೆಗಳ 843 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ತೆರಿಗೆದಾರರ ಹಣ ಪೋಲಾಗದಂತೆ ಸರಕಾರ ಎಚ್ಚರಿಕೆ ವಹಿಸಿದ್ದು, ರೈತರ ಖಾತೆಗಳಿಗೆ ನೇರವಾಗಿ ಸಾಲಮನ್ನಾದ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು ದೇಶದಲ್ಲೇ ಅತ್ಯಂತ ಪಾರದರ್ಶಕ ಯೋಜನೆಯಾಗಿದೆ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಕುಮಾರಸ್ವಾಮಿಯವರು, ಯಾವುದೇ ಹೊಸ ತೆರಿಗೆಗಳನ್ನು ಈ ಬಾರಿ ಜಾರಿ ಮಾಡಿಲ್ಲ. ಬದಲಿಗೆ ಸರಕಾರದ ಬೊಕ್ಕಸಕ್ಕೆ ಉಂಟಾಗಲಿರುವ ಹೊರೆಯನ್ನು ತಗ್ಗಿಸಲು ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಬಿಯರ್‌ ಪ್ರಿಯರಿಗೆ ಸ್ವಲ್ಪ ಬಿಸಿ ಮುಟ್ಟಿಸಿದ್ದಾರೆ.

ಸಂಧ್ಯಾ ಸುರಕ್ಷಾ ಯೋಜನೆಯಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು 600ರಿಂದ 1000 ರೂಪಾಯಿಗೆ ಹೆಚ್ಚಿಸಲಾಗಿದೆ. ಆಶಾ ಕಾರ್ಯಕರ್ತೆಯರ ಗೌರವಧನದಲ್ಲಿ 500 ರೂಪಾಯಿ ಏರಿಕೆ ಮಾಡಿದ್ದಾರೆ. ಒಂದು ಲೀಟರ್ ಹಾಲಿನ ಪ್ರೋತ್ಸಾಹ ಧನವನ್ನು 5ರಿಂದ 6 ರೂಪಾಯಿಗೆ ಹೆಚ್ಚಿಸಲಾಗಿದೆ.

ಸಮ್ಮಿಶ್ರ ಸರಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪಕ್ಕೆ ಪ್ರತ್ಯುತ್ತರ ಎಂಬಂತೆ ಗದಗ, ಹಾವೇರಿ, ಕುಂದಗೋಳ, ಹುಬ್ಬಳ್ಳಿ ಹಾಗೂ ಅಣ್ಣಗೇರಿಯಲ್ಲಿ ಮೆಣಸು ಮತ್ತು ಹೆಸರುಬೇಳೆಗಳ ಗುಣ ವಿಶ್ಲೇಷಣೆ ಮತ್ತು ಸಂಸ್ಕರಣಾ ಘಟಕ ಸ್ಥಾಪಿಸಲು 160 ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಹಣವನ್ನು ಈ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಕರಾವಳಿ ಭಾಗಕ್ಕೂ ಆದ್ಯತೆ ನೀಡಿರುವ ಕುಮಾರಸ್ವಾಮಿ, ಮೀನುಗಾರಿಕೆ ದೋಣಿಗಳಿಗೆ ಇಸ್ರೊ ಅಧಿಕೃತಗೊಳಿಸಿರುವ ಉಪಕರಣಗಳನ್ನು ಅಳವಡಿಸಲು ಶೇಕಡ 50ರಷ್ಟು ಸಹಾಯಧನ ನೀಡಲು 50 ಕೋಟಿ ರೂಪಾಯಿ, ಸೀಗಡಿ ಮತ್ತು ಮೀನು ಕೃಷಿಯ 400 ಘಟಕಗಳಿಗೆ 2 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಮತ್ಸ್ಯಾಶ್ರಯ ಯೋಜನೆಯಡಿ 2,500 ಮನೆ ನಿರ್ಮಾಣ, ಡೀಸೆಲ್ ಮತ್ತು ಸೀಮೆಎಣ್ಣೆ ಪಾಸ್‍ಬುಕ್ ಪಡೆದಿರುವ ದೋಣಿಗಳಿಗೆ ಸಬ್ಸಿಡಿ ನೀಡಲು 148.5 ಕೋಟಿ ರೂಪಾಯಿ ಮೀಸಲಿರಿಸಿದ್ದಾರೆ.

ಕೆರೆ ತುಂಬಿಸಲು 1,680 ಕೋಟಿ

ಶಾಶ್ವತ ಬರಪೀಡಿತ ಎಂಬ ಹಣಪಟ್ಟಿ ಹೊತ್ತಿರುವ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಭರವಸೆಯನ್ನು ನೀಡಿದ್ದಾರೆ. ಕೆರೆ ತುಂಬಿಸುವ ಯೋಜನೆಗಳಿಗಾಗಿ ಈ ಬಜೆಟ್‌ನಲ್ಲಿ 1,680 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಜೆಡಿಎಸ್‍ನ ಭದ್ರಕೋಟೆ ಎನಿಸಿರುವ ಹಳೇ ಮೈಸೂರು ಭಾಗಕ್ಕೂ ಈ ಬಜೆಟ್‌ನಲ್ಲಿ ಸಿಂಹಪಾಲು ನೀಡಲಾಗಿದೆ. ರಾಮನಗರದಲ್ಲಿ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ, ಮಂಡ್ಯ ಜಿಲ್ಲೆಯ ವಿಸಿ ಫಾರಂನ ಕೃಷಿ ಪ್ರಾತ್ಯಕ್ಷಿಕೆ ಸಂಸ್ಥೆ ಸ್ಥಾಪನೆಗೆ 10 ಕೋಟಿ ರೂಪಾಯಿ, ಚಾಮರಾಜನಗರ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ, ಸಂತೇಮರಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಮತ್ತು ಯುವಕರಿಗೆ ತರಬೇತಿ ನೀಡಲು 2 ಕೋಟಿ, ರಾಮನಗರದಲ್ಲಿರುವ ರೇಷ್ಮೆ ಮಾರುಕಟ್ಟೆ ಆಧುನೀಕರಣ ಮತ್ತು ಬಲವರ್ಧನೆಗೆ 10 ಕೋಟಿ, ಚನ್ನಪಟ್ಟಣದ ರೇಷ್ಮೆ ವಲಯದ ಸಾಧನಗಳ ಪ್ರದರ್ಶನ ಮತ್ತು ರೇಷ್ಮೆ ಉತ್ಪನ್ನಗಳ ಅಭಿವೃದ್ಧಿಗೆ 10 ಕೋಟಿ ರೂ. ಒದಗಿಸಲಾಗಿದೆ.

ಈ ಬಜೆಟ್‌ ರೈತರಿಗೆ ಸಿಹಿಯೂ ಅಲ್ಲ, ಕಹಿಯೂ ಅಲ್ಲ. ಚುನಾವಣಾ ಕೇಂದ್ರಿಯ ಜನರ ಓಲೈಕೆಯ ಬಜೆಟ್‌ ಇದು. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಜಾರಿಯಾಗುವುದೇ ಅನುಮಾನ.
- ಕುರುಬೂರು ಶಾಂತಕುಮಾರ್‌, ಹಿರಿಯ ರೈತ ಮುಖಂಡ

ಹಿಂದುಳಿದ ವರ್ಗಗಳ ಮೊರಾರ್ಜಿ ಪದವಿ ಪೂರ್ವ ಕಾಲೇಜುಗಳಲ್ಲಿ ನೀಟ್ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲು 4 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ವಿಶ್ವಕರ್ಮ ಸಮುದಾಯದ ಸಮಗ್ರ ಅಭಿವೃದ್ದಿ 25 ಕೋಟಿ, ಅಮರ ಶಿಲ್ಪಿ ಜಕಣಾಚಾರ್ಯ ಕೇಂದ್ರ ಪ್ರಾರಂಭ, ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ, ಹಿಂದುಳಿದ ವರ್ಗದಲ್ಲಿರುವ ಸೂಕ್ಷ್ಮ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 134 ಕೋಟಿ ರೂಪಾಯಿಯನ್ನು ಕಾಯ್ದಿರಿಸಲಾಗಿದೆ.

ಮುಸ್ಲಿಂ ಸಮುದಾಯದಲ್ಲಿ ಆಧುನಿಕ ಶಿಕ್ಷಣ, ಮುಸ್ಲಿಂ ಸಮುದಾಯದಲ್ಲಿ ಆಧುನಿಕ ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವನೆ ಮೂಡಿಸಲು ಮೌಲಾನ ಅಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂಪಾಯಿ, ಮುಸ್ಲಿಂ ಖಬರಸ್ತಾನಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 10 ಕೋಟಿ ರೂಪಾಯಿ, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಸೌಲಭ್ಯಕ್ಕೆ 400 ಕೋಟಿ, ರಾಜ್ಯದ 5 ಕಡೆ 5 ಮೊರಾರ್ಜಿ ದೇಸಾಯಿ ಮುಸ್ಲಿಂ ಹೆಣ್ಣುಮಕ್ಕಳ ವಸತಿ ಶಾಲೆ ನಿರ್ಮಿಸಲು 25 ಕೋಟಿ ರೂಪಾಯಿ, ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗಿದೆ.

2019-20ನೇ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ ಒಟ್ಟು 20,950 ಕೋಟಿ ರೂಪಾಯಿ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿದೆ. ಮಲೆನಾಡು ಭಾಗದಲ್ಲಿ ಹೆಚ್ಚಾಗಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ತರಲು ಲಸಿಕೆ ಉತ್ಪಾದನೆಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 5 ಕೋಟಿ ರೂಪಾಯಿ ಅನುದಾನವನ್ನು ಪ್ರಕಟಿಸಲಾಗಿದೆ. ಒಂದು ಸಾವಿರ ಗ್ರಾಮ ಪಂಚಾಯತಿಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಿಸಿ ನೀಡುವ ಉದ್ದೇಶದಿಂದ 'ಸ್ವಚ್ಛ ಮೇವ ಜಯತೆ' ಆಂದೋಲನ ಕೈಗೊಳ್ಳಲು ತೀರ್ಮಾನಿಸಲಾಗಿದೆ.

2019ರನ್ನು ಜಲವರ್ಷವೆಂದು ಘೋಷಣೆ ಮಾಡಲಾಗಿದ್ದು, ಜಲಾಮೃತ ಯೋಜನೆಯಡಿ 20 ಸಾವಿರ ಜಲಸಂರಕ್ಷಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬರೋಬ್ಬರಿ 500 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಸುಭದ್ರ ಶಾಲೆ ಯೋಜನೆಯಡಿ ರಾಜ್ಯದ 6,825 ಗ್ರಾಮೀಣ ಶಾಲೆಗಳಿಗೆ ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಿಸಲು 90 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ.

ಗಾರ್ಮೆಂಟ್‌ ಫ್ಯಾಕ್ಟರಿಗಳ ಮಹಿಳಾ ಕಾರ್ಮಿಕರಿಗೆ ಶಿಶುಪಾಲನಾ ಕೇಂದ್ರ ಸ್ಥಾಪನೆ ಮತ್ತಿತರ ಸೌಲಭ್ಯ ಕಲ್ಪಿಸಲು 10 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್, ಎಸ್‍ಸಿ- ಎಸ್‍ಟಿ ಪಂಗಡದ 25 ಸಾವಿರ ಮಹಿಳಾ ಕಾರ್ಮಿಕರ ಕೌಶಲ್ಯ ಉನ್ನತೀಕರಣಕ್ಕೆ 37.5 ಕೋಟಿ ರೂಪಾಯಿ ನೆರವು ಒದಗಿಸಲಾಗಿದೆ.

ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ಗುಂಪು ವಿಮೆ ಸೌಲಭ್ಯ, ಪೆಟ್ರೋಲ್ ಆಟೊಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲು ಸಹಾಯಧನ, ಅಪಘಾತ ರಹಿತ ಚಾಲಕರಿಗೆ 25 ಸಾವಿರ ರೂಪಾಯಿ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ. ಆಟೊ ಚಾಲಕರಿಗೆ ಸಾರಥಿಯ ಸೂರು ಬಾಡಿಗೆ ಆಧಾರದ ವಸತಿ ಯೋಜನೆಗೆ 50 ಕೋಟಿ ರೂಪಾಯಿ ವಿಶೇಷ ಯೋಜನೆ ಪ್ರಕಟಿಸಲಾಗಿದೆ.

ಹೆಬ್ಬಾಳ ಮತ್ತು ಕೆ.ಆರ್.ಪುರಂ ಫ್ಲೈ ಓವರ್‍ಗಳಲ್ಲಿ ಹೆಚ್ಚುವರಿ ಲೂಪ್ ಮತ್ತು ಗೊರಗುಂಟೆಪಾಳ್ಯದಲ್ಲಿ ಅಂಡರ್‍ಪಾಸ್ ನಿರ್ಮಾಣಕ್ಕೆ 195 ಕೋಟಿ ರೂಪಾಯಿ ನೀಡಲಾಗಿದೆ. ಬೆಂಗಳೂರು ನಗರದಲ್ಲಿ 87 ಆಯ್ದ ರಸ್ತೆಗಳಲ್ಲಿ 10 ಸಾವಿರ ವಾಹನ ನಿಲ್ದಾಣಗಳಿಗೆ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ರೂಪಿಸಲಾಗುತ್ತಿದೆ. ಜತೆಗೆ ಪಾರ್ಕಿಂಗ್ ನಿಯಮ ಅನುಷ್ಠಾನ ಯೋಜನೆಯ ನೀತಿಯನ್ನು ಜಾರಿಗೆ ತರಲಾಗುತ್ತಿದೆ.

1000 ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭ

ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಒಂದು ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಹಂತ ಹಂತವಾಗಿ ಒಂದು ಸಾವಿರ ಶಾಲೆಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ ಕುಮಾರಸ್ವಾಮಿ.

ಈ ಬಾರಿಯ ಬಜೆಟ್‌ನಲ್ಲಿ 4 ಹೊಸ ತಾಲ್ಲೂಕುಗಳ ರಚನೆ ಘೋಷಣೆಯಾಗಿದೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು, ಬಾಗಲಕೋಟೆ ಜಿಲ್ಲೆಯ ತೆರೆದಾಳ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಳಸ ಹೊಸ ತಾಲ್ಲೂಕುಗಳನ್ನಾಗಿ ಘೋಷಿಸಲಾಗಿದೆ. ಕಂದಾಯ ಇಲಾಖೆಯಲ್ಲಿ ಆಯುಕ್ತಾಲಯವನ್ನು ರಚನೆ ಮಾಡಲು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ಅನಿರೀಕ್ಷಿತ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ಅಭಯ ಹಸ್ತ ನೀಡಲು 500 ಕೋಟಿ ರೂಪಾಯಿ ವೆಚ್ಚದಲ್ಲಿ ರೈತ ಕಣಜ ಯೋಜನೆ ಘೋಷಿಸಲಾಗಿದೆ. ಮಾರುಕಟ್ಟೆ ಬೆಲೆ ಮತ್ತು ಮಾರ್ಗಸೂಚಿ ಬೆಲೆ ನಡುವಿನ ವ್ಯತ್ಯಾಸದ ಹಣವನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ಪಾವತಿ ಮಾಡಲು 50 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಹಾಪ್‌ಕಾಮ್ಸ್‌ ಹಾಗೂ ನಂದಿನಿ ಮಳಿಗೆಗಳಲ್ಲಿ ಸಿರಿಧಾನ್ಯ ಮಾರಾಟ ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸಂಯೋಜಿಸಿ 'ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ' ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 1.15 ಕೋಟಿ ಬಡ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕೇಂದ್ರದ ಆರ್‌ಎಸ್‍ಡಿವೈ ಯೋಜನೆಯಡಿ ರಾಜ್ಯದ 62.5 ಲಕ್ಷ ಬಡ ಕುಟುಂಬಗಳಿಗೆ ಮಾತ್ರ ಶೇ.60ರಷ್ಟು ನೆರವು ಸಿಗುತ್ತಿತ್ತು. ಉಳಿದ 52.5 ಲಕ್ಷ ಬಡ ಕುಟುಂಬಗಳಿಗೂ ಶೇ.100ರಷ್ಟು ನೆರವಿನೊಂದಿಗೆ ಈ ಪ್ರಸ್ತುತ ಯೋಜನೆ ವಿಸ್ತರಿಸಲಾಗುತ್ತದೆ. ಎಪಿಎಲ್ ಕುಟುಂಬಗಳು ಕೂಡ ಸಹ ಪಾವತಿ ಆಧಾರದಲ್ಲಿ 1.5 ಲಕ್ಷ ರೂಪಾಯಿವರೆಗಿನ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ.

ಕುಮಾರಸ್ವಾಮಿ ಮಂಡಿಸಿದ ಬಜೆಟ್‌ ಭಾಷಣದ ಪೂರ್ಣ ಪಾಠ ಇಲ್ಲಿದೆ.