samachara
www.samachara.com
‘ಐ ಆಮ್ ಎಕ್ಸ್‌ಪೋಸಿಂಗ್ ನೌ’: ಯಡಿಯೂರಪ್ಪ ಆಡಿಯೊ ಟೇಪ್‌; ಕುಮಾರಸ್ವಾಮಿ ಪತ್ರಿಕಾಗೋಷ್ಠಿ 
COVER STORY

‘ಐ ಆಮ್ ಎಕ್ಸ್‌ಪೋಸಿಂಗ್ ನೌ’: ಯಡಿಯೂರಪ್ಪ ಆಡಿಯೊ ಟೇಪ್‌; ಕುಮಾರಸ್ವಾಮಿ ಪತ್ರಿಕಾಗೋಷ್ಠಿ 

ಬಜೆಟ್ ಮಂಡನೆಗೂ ಮುನ್ನವೇ ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಕುಮಾರಸ್ವಾಮಿ ‘ಆಪರೇಷನ್ ಕಮಲ’ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯೊಂದನ್ನು ಮುಂದಿಟ್ಟಿದ್ದಾರೆ.

Team Samachara

ಬಜೆಟ್ ಮಂಡನೆಗೂ ಮುನ್ನವೇ ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಕುಮಾರಸ್ವಾಮಿ ‘ಆಪರೇಷನ್ ಕಮಲ’ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯೊಂದನ್ನು ಮುಂದಿಟ್ಟಿದ್ದಾರೆ.

ಪ್ರತಿಪಕ್ಷ ನಾಯಕ ಬಿ. ಎಸ್. ಯಡಿಯೂರಪ್ಪ ಗುರುಮಿಠ್ಕಲ್ ಶಾಸಕ ನಾಗನಗೌಡ ಕುಂದಕೂರ್ ಪುತ್ರ ಶರಣ ಗೌಡ ಜತೆಯಲ್ಲಿ ನಡೆಸಿದ ಸಂಭಾಷಣೆ ದ್ವನಿಸುರಳಿಯೂ ಸೇರಿದಂತೆ ಎರಡು ದ್ವನಿಮುದ್ರಿಕೆಗಳನ್ನು ಗೋಷ್ಠಿಯ ಕೊನೆಯಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ಬಿ. ಎಸ್. ಯಡಿಯೂರಪ್ಪ ಅರಕೆರ, ವೀರಗೋಟ್‌ ಎಂಬಲ್ಲಿಗೆ ಭೇಟಿ ನೀಡಿದ್ದರು. ಅಲ್ಲಿಂದ ದೇವದುರ್ಗಕ್ಕೆ ತೆರಳಿದ್ದರು. ಈ ಸಮಯದಲ್ಲಿ ಗುರುಮಿಠ್ಕಲ್ ಶಾಸಕರ ಪುತ್ರನಿಗೆ ಕರೆ ಮಾಡಿದ್ದರು. ನಂತರ ಆತನನ್ನು ದೇವದುರ್ಗದ ಸರಕಾರಿ ಪ್ರವಾಸಿ ಬಂಗಲೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಇದೆಲ್ಲವನ್ನೂ ರೆಕಾರ್ಡ್‌ ಮಾಡಿಕೊಳ್ಳಲಾಗಿದ್ದು, ಸಿಎಂ ಕುಮಾರಸ್ವಾಮಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಶರಣ ಗೌಡ ಕೂಡ ಹಾಜರಿದ್ದು, ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ನಡೆದಿದ್ದೇನು?:

“ನಿನ್ನೆ ರಾತ್ರಿ ಸುಮಾರು 11-11.30ಕ್ಕೆ ನನಗೆ ಕರೆ ಬಂತು. ಯಡಿಯೂರಪ್ಪ ಮಾತನಾಡುತ್ತಾರೆ ಅಂತ. ಮೊದಲು ಕಟ್ ಮಾಡಿದೆ. ಎರಡನೇ ಸಾರಿನೂ ರಿಸೀವ್ ಮಾಡಲಿಲ್ಲ. ಮೂರನೇ ಬಾರಿ ಬೇರೆ ನಂಬರ್‌ನಿಂದ ಕರೆ ಬಂತು. ಯಾದಗಿರಿಯಲ್ಲಿದ್ದೇನೆ ಎಂದೆ. ದೇವದುರ್ಗ ಐಬಿಗೆ 30-40 ನಿಮಿಷದಲ್ಲಿ ಬರಬೇಕು ಅಂದರು. ನಾಲ್ಕನೇ ಸಾರಿ ಮತ್ತೆ ಕರೆ ಬಂದಾಗ ‘ಅಣ್ಣೋರಿಗೆ’ ಕನೆಕ್ಟ್ ಮಾಡಿದೆ. ಐದು ನಿಮಿಷ ಸಮಯ ಕೊಡಿ, ತಂದೆಯವರಿಗೆ ಕರೆ ಮಾಡಿ ಮರಳಿ ಮಾಡುತ್ತೇನೆ ಎಂದು ಹೇಳಿದೆ. ಅಣ್ಣೋರ (ಸಿಎಂ ಕುಮಾರಸ್ವಾಮಿ) ಜತೆ ಮಾತುಕತೆ ನಂತರ ನಾನು ಯಾದಗಿರಿ ಐಬಿಗೆ ಹೋದೆ,’’ ಎಂದು ಶರಣ ಗೌಡ ಐಬಿಯೊಳಗೆ ಯಡಿಯೂರಪ್ಪ ಜತೆ ನಡೆದ ಮಾತುಕತೆಗೂ ಮುನ್ನ ನಡೆದ ಘಟನೆಯನ್ನು ಮುಂದಿಟ್ಟರು.

“ನಾನು ಐಬಿಗೆ ಹೋದಾಗ ಮೈಸೂರು ಮೂಲದ ಹಿರಿಯ ಪತ್ರಕರ್ತ ಮರಮ್ಕಲ್, ಯಾದಗಿರಿ ಶಾಸಕ ವೆಂಕಟ ರೆಡ್ಡಿ ಮುದ್ನಾಳ್, ಹಾಸನ ಎಂಎಲ್‌ಎ ಪ್ರೀತಂ ಗೌಡ ಹಾಗೂ ಯಡಿಯೂರಪ್ಪ ಇದ್ದರು. ನಿಮ್ಮ ತಂದೆಗೆ (ಗುರುಮಿಠ್ಕಲ್ ಶಾಸಕ) ವಯಸ್ಸಾಗಿದೆ. ನಿನ್ನನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡ್ತೀವಿ. ಎಲ್ಲಾ ಓಕೆ ಆಗಿದೆ. ನಾಳೆ ಸಂಜೆ ಒಳಗೆ ಎಲ್ಲಾ ಮುಗಿದು ಹೋಗುತ್ತೆ. ಹಣಕಾಸಿನ ವ್ಯವಹಾರವನ್ನು ವಿಜಯೇಂದ್ರ ಮುಂಬೈನಲ್ಲಿ ಕುಳಿತುಕೊಂಡು ನೋಡಿಕೊಳ್ಳುತ್ತಿದ್ದಾರೆ. ನ್ಯಾಯಾಲಯಗಳನ್ನು ಅಮಿತ್ ಶಾ (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ) ನೋಡಿಕೊಳ್ಳುತ್ತಾರೆ ಎಂದು ಯಡಿಯೂರಪ್ಪ ನನಗೆ ತಿಳಿಸಿದರು,’’ ಎಂದು ಶರಣ ಗೌಡ ವಿವರಿಸಿದರು.

ಇದೇ ಸಮಯದಲ್ಲಿ ‘ಸ್ಪೀಕರ್ ರಮೇಶ್ ಕುಮಾರ್ ಅವರನ್ನೂ 50 ಲಕ್ಷಕ್ಕೆ ಬುಕ್ ಮಾಡಿದ್ದೇವೆ’ ಎಂದು ಯಡಿಯೂರಪ್ಪ ಹೇಳಿದ್ದಾಗಿ ಶರಣ ಗೌಡ ಹಾಗೂ ಸಿಎಂ ಕುಮಾರಸ್ವಾಮಿ ಆರೋಪಿಸಿದರು. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಈ ಹೇಳಿಕೆ ಒಂದಷ್ಟು ವಿವಾದವನ್ನು ಸದಸನದ ಒಳಗೂ ಸೃಷ್ಟಿಸುವ ಸಾಧ್ಯತೆ ಇದೆ.

“ನನಗೆ ಯಡಿಯೂರಪ್ಪ ಅವರನ್ನು ಟ್ರ್ಯಾಪ್ ಮಾಡುವ ಉದ್ದೇಶ ಇಲ್ಲ. ದೇವೇಗೌಡ ಕುಟುಂಬದ ಜತೆಗೆ ನನ್ನದು ಮೂರನೇ ತಲೆಮಾರಿನ ಸಂಬಂಧ. ಕುಮಾರಸ್ವಾಮಿ ಅವರು ಕಷ್ಟದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಅದಕ್ಕೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ಇದು ಮೊದಲ ಬಾರಿ ಏನಲ್ಲ. ಈ ಹಿಂದೆಯೂ ಟಿಕೆಟ್ ಕೊಡುತ್ತೀವಿ, ದುಡ್ಡು ಕೊಡುತ್ತೀವಿ ಎಂದು ಬಂದಿದ್ದರು. ಆದರೆ ಈ ಬಾರಿ ಬಿಜೆಪಿ ನಡೆಗಳನ್ನು ತಿಳಿಸುವ ಹಿನ್ನೆಲೆಯಲ್ಲಿ ಬಹಿರಂಗಪಡಿಸುತ್ತಿದ್ದೇನೆ,’’ ಎಂದು ಶರಣು ಗೌಡ ತಿಳಿಸಿದರು. ನೈತಿಕತೆಯ ಮಾದರಿ ರಾಜಕಾರಣ ಮಾಡಿ ಎಂದು ಬಿಜೆಪಿಗೆ ಕಿವಿ ಮಾತು ಹೇಳಿದರು.

ತನಿಖೆಗೆ ಒತ್ತಾಯ:

ಧ್ವನಿ ಮುದ್ರಿಕೆಗಳನ್ನು ಆಧಾರವಾಗಿಟ್ಟುಕೊಂದು ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ನೈತಿಕ ರಾಜಕಾರಣವನ್ನೇ ಮಾಡುತ್ತಿದ್ದರೆ, ಪ್ರಧಾನಿ ನರೇಂದ್ರ ಮೋದಿ ಮೊದಲು ಈ ಕುರಿತು ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

“ಮೋದಿ ಮಾತಿನಲ್ಲಿ ಪ್ರಜಾಪ್ರಭುತ್ವ ಉಳಿಸುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಅವರ ಸ್ನೇಹಿತರೇ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳುವ ಮೂಲಕ ಮೋದಿ ಕೂಡ ನಿಜಬಣ್ಣ ಪ್ರದರ್ಶಿಸುತ್ತಿದ್ದಾರೆ,’’ ಎಂದು ಸಿಎಂ ಹರಿಹಾಯ್ದರು.

ಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ಸಾ. ರಾ. ಮಹೇಶ್, ಬಂಡೆಪ್ಪ ಕಾಶಂಪೂರ್, ಸಿ. ಎಸ್. ಪುಟ್ಟರಾಜು ಮತ್ತಿತರಿದ್ದರು.

ಹೊಣೆಗೇಡಿ ಸರಕಾರ:

ಕುಮಾರಸ್ವಾಮಿ ಪತ್ರಿಕಾಗೋಷ್ಠಿ ಬೆನ್ನಲ್ಲೇ ಮಾಧ್ಯಮಗಳ ಜತೆ ಮಾತನಾಡಿದ ಬಿ. ಎಸ್. ಯಡಿಯೂರಪ್ಪ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಹಿಡಿದು ನರೇಗಾ ಯೋಜನೆ ಅನುಷ್ಠಾನದವರೆಗೆ ರಾಜ್ಯ ಸರಕಾರ ವಿಫಲವಾಗಿದೆ ಎಂದರು.

ಆಯವ್ಯಯ ಅಧಿವೇಶನದಲ್ಲಿ, ಚರ್ಚೆಯಲ್ಲಿ ಭಾಗವಹಿಸುತ್ತೇವೆ. ಏಳೆಂಟು ತಿಂಗಳಲ್ಲಿ ರಾಜ್ಯದಲ್ಲಿ ನಡೆದಿರುವ ಕರ್ಮಕಾಂಡಗಳನ್ನು ಮುಂದಿಡುತ್ತೇವೆ. ಸತ್ಯ ಹರೀಶ್ಚಂದ್ರರ ರೀತಿಯಲ್ಲಿ ಮಾತನಾಡುವ ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಇಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಗಂಭೀರ ಆರೋಪಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, “ಅದು ಫೇಕ್ ಆಡಿಯೋ. ನಾನು ಯಾರನ್ನೂ ಭೇಟಿ ಮಾಡಿಲ್ಲ. ಸರಕಾರದ ಹುಳುಕುಗಳನ್ನು ಮುಚ್ಚಿಕೊಳ್ಳಲು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ,” ಎಂದರು. ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯಿಸಿದ ಅವರ, “ಕುಮಾರಸ್ವಾಮಿ ಸಿನೆಮಾ ನಿರ್ಮಾಪಕರು. ಅವರು ಆಡಿಯೋ ಟೇಪ್ ಸೃಷ್ಟಿಸುವುದರಲ್ಲಿ ನಿಸ್ಸೀಮರು,’’ ಎಂದರು.