samachara
www.samachara.com
‘ದಿ ಹಿಂದೂ’ ರಫೇಲ್‌ EXCLUSIVE: ಸುಪ್ರೀಂಗೆ ಸುಳ್ಳು ಮಾಹಿತಿ, ಡೀಲ್‌ನಲ್ಲಿ ಪಿಎಂಓ ಕೈವಾಡ
COVER STORY

‘ದಿ ಹಿಂದೂ’ ರಫೇಲ್‌ EXCLUSIVE: ಸುಪ್ರೀಂಗೆ ಸುಳ್ಳು ಮಾಹಿತಿ, ಡೀಲ್‌ನಲ್ಲಿ ಪಿಎಂಓ ಕೈವಾಡ

‘ದಿ ಹಿಂದೂ’ಗೆ ಸಿಕ್ಕಿರುವ ದಾಖಲೆಗಳಲ್ಲಿ, ಪಿಎಂಒ ತೆಗೆದುಕೊಂಡ ನಿರ್ಧಾರಕ್ಕೆ ರಕ್ಷಣಾ ಸಚಿವಾಲಯ ವಿರೋಧ ವ್ಯಕ್ತಪಡಿಸಿರುವುದು ಉಲ್ಲೇಖವಾಗಿದೆ. ಇದು ರಫೇಲ್ ಸುತ್ತ ನಡೆಯುತ್ತಿರುವ ರಾಜಕೀಯ ಹೋರಾಟಕ್ಕೆ ಹೊಸ ಆಯಾಮವನ್ನೇ ನೀಡಿದೆ. 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಭಾರತ ಮತ್ತು ಫ್ರಾನ್ಸ್‌ ನಡುವೆ 64 ಸಾವಿರ ಕೋಟಿ ರೂಪಾಯಿ ಮೊತ್ತದ ರಫೇಲ್‌ ಯುದ್ಧ ವಿಮಾನ ಖರೀದಿ ಚರ್ಚೆಗಳು ನಡೆಯುತ್ತಿರುವಾಗ ಸಮನಾಂತರವಾಗಿ ಪ್ರಧಾನ ಮಂತ್ರಿ ಕಾರ್ಯಾಲಯವೂ ಚರ್ಚೆಯಲ್ಲಿ ಪಾಲ್ಗೊಂಡಿತ್ತು. ಮತ್ತು ಇದಕ್ಕೆ ರಕ್ಷಣಾ ಸಚಿವಾಲಯ ವಿರೋಧ ವ್ಯಕ್ತಪಡಿಸಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ‘ದಿ ಹಿಂದೂ’ ಹೊರಹಾಕಿದೆ.

ಪ್ರಧಾನಿ ಕಾರ್ಯಾಲಯದ ಮಧ್ಯ ಪ್ರವೇಶದಿಂದಾಗಿ ರಕ್ಷಣಾ ಸಚಿವಾಲಯ ಮತ್ತು ಭಾರತದ ಸಮಾಲೋಚನೆ ತಂಡದ ಶಕ್ತಿ ಕುಂದಿತು ಎಂಬುದಾಗಿ ನವೆಂಬರ್‌ 24, 2015ರ ರಕ್ಷಣಾ ಸಚಿವಾಲಯದ ಪತ್ರವೊಂದು ಹೇಳುತ್ತಿದೆ. ಮತ್ತು ಈ ವಿಚಾರವನ್ನು ಆಗಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್ ಗಮನಕ್ಕೆ ತರಲಾಗಿತ್ತು.

ಈ ವಿಚಾರವೀಗ ಶುಕ್ರವಾರ ದೇಶದಲ್ಲಿ ಕೋಲಾಹಲವೆಬ್ಬಿಸಿದೆ.

ನವೆಂಬರ್‌ 24, 2015ರ ರಕ್ಷಣಾ ಸಚಿವಾಲಯದ ಪತ್ರ.
ನವೆಂಬರ್‌ 24, 2015ರ ರಕ್ಷಣಾ ಸಚಿವಾಲಯದ ಪತ್ರ.
/ದಿ ಹಿಂದೂ
ಈ ಪತ್ರದಲ್ಲಿ ಕೈ ಬರಹದಲ್ಲಿ ತಮ್ಮ ಮಾತುಗಳನ್ನೂ ಸೇರಿಸುವ ರಕ್ಷಣಾ ಕಾರ್ಯದರ್ಶಿ ಜಿ. ಮೋಹನ್‌ ಕುಮಾರ್‌, “ಈ ರೀತಿಯ ಚರ್ಚೆಯನ್ನು ಪ್ರಧಾನಿ ಕಾರ್ಯಾಲಯ ತಪ್ಪಿಸಬಹುದು. ಇದು ನಮ್ಮ ಸಂಧಾನದ ಸ್ಥಾನವನ್ನು ಗಂಭೀರವಾಗಿ ಕಡಿಮೆಗೊಳಿಸುತ್ತದೆ,” ಎಂದಿದ್ದಾರೆ.

“ಭಾರತದ ಸಮಾಲೋಚನೆ ತಂಡದ ಸದಸ್ಯರಲ್ಲದವರು ಫ್ರೆಂಚ್‌ ಸರಕಾರದ ಜತೆ ಸಮನಾಂತರವಾಗಿ ಚರ್ಚೆ ನಡೆಸದಂತೆ ನಾವು ಪ್ರಧಾನಿ ಕಾರ್ಯಾಲಯಕ್ಕೆ ಸಲಹೆ ನೀಡಬಹುದು,” ಎಂದು ಪತ್ರದಲ್ಲಿ ಹೇಳಲಾಗಿದೆ. “ಒಂದೊಮ್ಮೆ ರಕ್ಷಣಾ ಸಚಿವಾಲಯ ನಡೆಸುತ್ತಿರುವ ಸಮಾಲೋಚನೆಯ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ನಂಬಿಕೆ ಇಲ್ಲದಿದ್ದಲ್ಲಿ, ಸರಿಯಾದ ಹಂತದಲ್ಲಿ ಪ್ರಧಾನಿ ಕಾರ್ಯಾಲಯ ಪರಿಷ್ಕೃತ ಸಮಾಲೋಚನೆ ನಡೆಸಬಹುದಾಗಿದೆ,” ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.

ರಕ್ಷಣಾ ಇಲಾಖೆಯ ದಾಖಲೆಗಳೇ ಇದನ್ನು ಹೇಳುತ್ತಿದ್ದರೂ ಸರಕಾರ ಮಾತ್ರ ಅಕ್ಟೋಬರ್‌ 2018ರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ದಾಖಲೆಗಳಲ್ಲಿ, ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಏರ್‌ ಸ್ಟಾಫ್‌ ಉಪ ಮುಖ್ಯಸ್ಥರ ನೇತೃತ್ವದ 7 ಜನರ ತಂಡ ಮಾತುಕತೆ ನಡೆಸಿದೆ ಎಂದು ಹೇಳಿತ್ತು. ಮತ್ತು ಇದರಲ್ಲಿ ಪ್ರಧಾನಿ ಸಚಿವಾಲಯದ ಪಾತ್ರದ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ.

ಆದರೆ ‘ದಿ ಹಿಂದೂ’ಗೆ ಸಿಕ್ಕಿರುವ ದಾಖಲೆಗಳಲ್ಲಿ, ಪಿಎಂಒ ತೆಗೆದುಕೊಂಡ ನಿರ್ಧಾರಕ್ಕೆ ರಕ್ಷಣಾ ಸಚಿವಾಲಯ ವಿರೋಧ ವ್ಯಕ್ತಪಡಿಸಿರುವುದು ಉಲ್ಲೇಖವಾಗಿದೆ. ಮತ್ತು ರಕ್ಷಣಾ ಸಚಿವಾಲಯ ಹಾಗೂ ಸಮಾಲೋಚನೆ ತಂಡ ತೆಗೆದುಕೊಂಡ ನಿರ್ಧಾರ ಪರಸ್ಪರ ವಿರುದ್ಧವಾಗಿತ್ತು ಎನ್ನುವುದು ಪತ್ರಗಳಲ್ಲಿ ದಾಖಲಾಗಿದೆ.

ಗಟ್ಟಿ ದನಿಯ ವಿರೋಧ:

ನವೆಂಬರ್‌ 24, 2015ರಂದು ವಾಯು ಸೇನೆ ಉಪ ಕಾರ್ಯದರ್ಶಿ ಎಸ್‌. ಕೆ. ಶರ್ಮಾ ತಯಾರಿಸಿದ ಪತ್ರದಲ್ಲಿ ಪ್ರಧಾನಿ ಕಾರ್ಯಾಲಯದ ನಡೆಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಇದಕ್ಕೆ ವಾಯು ಸೇನೆ ಜಂಟಿ ಕಾರ್ಯದರ್ಶಿ & ಸ್ವಾಧೀನ ನಿರ್ವಾಹಕರು ಮತ್ತು ಡೈರೆಕ್ಟರ್‌ ಜನರಲ್‌ (ಸ್ವಾಧೀನ) ಕೂಡ ಬೆಂಬಲಿಸಿ ಸಹಿ ಹಾಕಿದ್ದಾರೆ.

ಏಪ್ರಿಲ್‌ 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್‌ಗೆ ತೆರಳಿದ್ದ ಸಂದರ್ಭ ಹೊಸ ರಫೇಲ್‌ ಡೀಲ್‌ನ್ನು ಘೋಷಿಸಿದ್ದರು. ಇದಾದ ನಂತರ 2016ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತಕ್ಕೆ ಬಂದಿದ್ದ ಫ್ರಾನ್ಸ್‌ ಅಧ್ಯಕ್ಷ ಫ್ರಾಕೋಯಿಸ್‌ ಹೊಲಾಂಡ್‌ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದ್ದರು. ಬಳಿಕ 36 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಸೆಪ್ಟೆಂಬರ್‌ 23ರಂದು ಸರಕಾರಿ ಮಟ್ಟದಲ್ಲಿ ಒಪ್ಪಂದ ನಡೆದಿತ್ತು.

ಈ ಎಲ್ಲಾ ಪ್ರಕ್ರಿಯೆಯ ಆರಂಭದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದ ಮಧ್ಯ ಪ್ರವೇಶ ರಕ್ಷಣಾ ಸಚಿವಾಲಯದ ಗಮನಕ್ಕೆ ಬಂದಿರಲಿಲ್ಲ. 2015ರ ಅಕ್ಟೋಬರ್‌ 23ರಂದು ಫ್ರಾನ್ಸ್‌ ಸಮಾಲೋಚನೆ ತಂಡದ ಸದಸ್ಯ ಜನರಲ್‌ ಸ್ಟೀಫನ್‌ ರೆಬ್‌ ಬರೆದ ಪತ್ರದಿಂದಾಗಿ ಪಿಎಂಒ ಮಧ್ಯ ಪ್ರವೇಶ ಬಹಿರಂಗವಾಗಿತ್ತು. ರೆಬ್‌ ಬರೆದ ಪತ್ರದಲ್ಲಿ, “ಪ್ರಧಾನ ಮಂತ್ರಿ ಕಾರ್ಯಾಲಯದ ಜಂಟಿ ಕಾರ್ಯದರ್ಶಿ ಶ್ರೀ ಜಾವೇದ್‌ ಅಶ್ರಫ್‌ ಮತ್ತು ಫ್ರೆಂಚ್‌ ರಕ್ಷಣಾ ಸಚಿವರ ರಾಜತಾಂತ್ರಿಕ ಸಲಹೆಗಾರ ಲೂಯಿಸ್‌ ವ್ಯಾಸ್‌ ನಡುವೆ ನಡೆದ ಸಂಭಾಷಣೆಯ ಉಲ್ಲೇಖವಿದೆ. ಈ ಸಂಭಾಷಣೆ 2015ರ ಅಕ್ಟೋಬರ್‌ 20ರಂದು ನಡೆದಿತ್ತು” ಎಂದು ಹೇಳಲಾಗಿತ್ತು.

ಜನರಲ್‌ ರೆಬ್‌ರ ಈ ಪತ್ರವನ್ನು ರಕ್ಷಣಾ ಸಚಿವಾಲಯ ಪಿಎಂಒ ಕಚೇರಿಯ ಗಮನಕ್ಕೆ ತಂದಿತ್ತು. ಜತೆಗೆ ಭಾರತದ ಸಮಾಲೋಚನೆ ತಂಡದ ಮುಖ್ಯಸ್ಥ ಏರ್‌ ಮಾರ್ಷಲ್‌ ಎಸ್‌. ಬಿ. ಪಿ. ಸಿನ್ಹಾ, ಎವಿಎಸ್‌ಎಂ ವಿಎಂ, ಏರ್‌ ಸ್ಟಾಫ್‌ ವಿಭಾಗದ ಉಪ ಮುಖ್ಯಸ್ಥರು ಕೂಡ ಪ್ರಧಾನಿಗಳ ಜಂಟಿ ಕಾರ್ಯದರ್ಶಿ ಅಶ್ರಫ್‌ಗೆ ಈ ಸಂಬಂಧ ಪತ್ರಗಳನ್ನು ಬರೆದಿದ್ದರು.

ಇದಕ್ಕೆ ಪ್ರತಿಯಾಗಿ 2015ರ ನವೆಂಬರ್‌ 11ರಂದು ಏರ್‌ ಮಾರ್ಷಲ್‌ ಸಿನ್ಹಾರಿಗೆ ಪತ್ರ ಬರೆದ ಅಶ್ರಫ್‌, ಫ್ರೆಂಚ್‌ ರಕ್ಷಣಾ ಸಚಿವರ ರಾಜತಾಂತ್ರಿಕ ಸಲಹೆಗಾರ ಲೂಯಿ ವ್ಯಾಸ್‌ ಜತೆ ಸಂಭಾಷಣೆ ನಡೆಸಿದ್ದನ್ನು ಖಚಿತಪಡಿಸಿದ್ದರು. ಜತೆಗೆ ಪತ್ರದಲ್ಲಿ, ‘ಫ್ರೆಂಚ್‌ ಅಧ್ಯಕ್ಷರ ಕಚೇರಿಯ ಸಲಹೆ ಮೇರೆಗೆ ವ್ಯಾಸ್‌ ತಮ್ಮ ಬಳಿಯಲ್ಲಿ ಮಾತನಾಡಿದ್ದಾರೆ’ ಎಂದು ತಿಳಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳು ನಡೆದ ನಂತರ ಫ್ರಾನ್ಸ್‌ ಸುದ್ದಿ ಸಂಸ್ಥೆ ‘ಎಎಫ್‌ಪಿ’ಗೆ 2018ರ ಸಪ್ಟೆಂಬರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಫ್ರಾನ್ಸ್‌ ಮಾಜಿ ಅಧ್ಯಕ್ಷ ಹೊಲಾಂಡ್‌, “ರಫೇಲ್‌ ಡೀಲ್‌ನಲ್ಲಿ ನಡೆದ ಹೊಸ ಚರ್ಚೆಯ ಪ್ರಕಾರ ರಿಲಯನ್ಸ್‌ ಗ್ರೂಪ್‌ ಹೆಸರು ಕೇಳಿ ಬಂತು. ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಸರಕಾರ ಈ ನಿರ್ಧಾರ ತೆಗೆದುಕೊಂಡಿತು,” ಎಂದಿದ್ದರು. ಈ ಮೂಲಕ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಡಿಫೆನ್ಸ್‌ ಹೆಸರು ಹೇಗೆ ಈ ರಫೇಲ್‌ ಡೀಲ್‌ನಲ್ಲಿ ಥಳುಕು ಹಾಕಿಕೊಂಡಿತು ಎಂಬುದರ ವಿವರಣೆ ನೀಡಿದ್ದರು.

ಇದನ್ನು ರಕ್ಷಣಾ ಇಲಾಖೆಯ ಪತ್ರವೂ ಪುಷ್ಟೀಕರಿಸುತ್ತಿದೆ. ರಕ್ಷಣಾ ಇಲಾಖೆ ರಚಿಸಿದ ಭಾರತೀಯ ಸಮಾಲೋಚನಾ ತಂಡ ಫ್ರೆಂಚ್‌ ತಂಡದ ಜತೆ ಅಧಿಕೃತ ಚರ್ಚೆ ನಡೆಸುತ್ತಿದ್ದಾಗ ಪ್ರಧಾನ ಮಂತ್ರಿಗಳ ಜಂಟಿ ಕಾರ್ಯದರ್ಶಿಗಳು ಫ್ರೆಂಚ್‌ ರಕ್ಷಣಾ ಸಚಿವರ ರಾಜತಾಂತ್ರಿಕ ಸಲೆಹಗಾರರ ಜತೆ ಸಮನಾಂತರವಾಗಿ ಚರ್ಚೆ ನಡೆಸುತ್ತಿದ್ದರು ಎಂದು ಪತ್ರ ಸ್ಪಷ್ಟವಾಗಿ ಹೇಳುತ್ತದೆ. ಮತ್ತು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೂ ಪತ್ರದಲ್ಲಿ ದಾಖಲಾಗಿದೆ.

“ಇಂತಹ ಸಮಾನ ಸಮಾಲೋಚನೆಗಳು ನಮ್ಮ ಹಿತಾಸಕ್ತಿಗಳಿಗೆ ಹಾನಿಕರವಾಗಬಹುದು. ಭಾರತೀಯ ಸಮಾಲೋಚನೆ ತಂಡ ತೆಗೆದುಕೊಂಡ ನಿರ್ಧಾರವನ್ನು ದುರ್ಬಲಗೊಳಿಸುವುದರ ಮೂಲಕ ಫ್ರೆಂಚ್ ತಂಡವು ಇದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಬಹುದು,” ಎಂದು ಪತ್ರದ ಮೂಲಕ ಪಿಎಂಒ ಕಚೇರಿಯನ್ನು ಎಚ್ಚರಿಸಲಾಗಿದೆ.

‘ದಿ ಹಿಂದೂ’ ರಫೇಲ್‌ EXCLUSIVE: ಸುಪ್ರೀಂಗೆ ಸುಳ್ಳು ಮಾಹಿತಿ, ಡೀಲ್‌ನಲ್ಲಿ ಪಿಎಂಓ ಕೈವಾಡ
/ದಿ ಹಿಂದೂ

“‘ರಾಜತಾಂತ್ರಿಕ ಸಲಹೆಗಾರರು, ಫ್ರಾನ್ಸ್‌ ರಕ್ಷಣಾ ಸಚಿವರು ಮತ್ತು ಪ್ರಧಾನ ಮಂತ್ರಿಗಳ ಜಂಟಿ ಕಾರ್ಯದರ್ಶಿಗಳ ನಡುವಿನ ಸಂಭಾಷಣೆಯಂತೆ ರಫೇಲ್‌ ಡೀಲ್‌ನಲ್ಲಿ ಯಾವುದೇ ಬ್ಯಾಂಕ್‌ ಖಾತರಿಯ ಅಗತ್ಯ ಇರುವುದಿಲ್ಲ’ ಎಂದು ರೆಬ್‌ ಪತ್ರದಲ್ಲಿ ಹೇಳಿದ್ದಾರೆ. ಇದು ಇಲಾಖೆ ತೆಗೆದುಕೊಂಡ ತೀರ್ಮಾನಕ್ಕೆ ವಿರುದ್ಧವಾಗಿದೆ,” ಎಂದು ಪತ್ರದಲ್ಲಿ ಹೇಳಲಾಗಿದೆ.

ಇದೊಂದೇ ಅಲ್ಲದೆ, ರಫೇಲ್‌ ಡೀಲ್‌ನ ಉದ್ದಕ್ಕೂ ಹಲವು ಸಂದರ್ಭಗಳಲ್ಲಿ ಎರಡು ತಂಡಗಳು ಏಕಕಾಲಕ್ಕೆ ಚರ್ಚೆ ನಡೆಸುತ್ತಾ ಪರಸ್ಪರ ವಿರುದ್ಧ ತೀರ್ಮಾನಗಳನ್ನು ತೆಗೆದುಕೊಂಡಿವೆ. ಜನವರಿ 2016ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಫ್ರೆಂಚ್‌ ತಂಡದ ಜತೆ ಪ್ಯಾರಿಸ್‌ನಲ್ಲಿ ಚರ್ಚೆ ನಡೆಸಿದ್ದಾರೆ ಎಂಬುದು ಈ ಹಿಂದೆ ವರದಿಯಾಗಿತ್ತು. ಅಲ್ಲದೆ ರಫೇಲ್ ಒಪ್ಪಂದಕ್ಕೆ ಸಾರ್ವಭೌಮ ಭದ್ರತೆ ಅಥವಾ ಬ್ಯಾಂಕ್ ಖಾತರಿ ನೀಡುವುದರಿಂದ ದೂರ ಇರುವಂತೆ ಅಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ಗೆ ಸಲಹೆ ನೀಡಿದ್ದನ್ನೂ ರಕ್ಷಣಾ ಸಚಿವರು ಒಂದು ಕಡತದಲ್ಲಿ ದಾಖಲಿಸಿದ್ದಾರೆ.

ಚೌಕಿದಾರ್‌ ಕಳ್ಳ ಎಂಬುದು ಸಾಬೀತಾಗಿದೆ: ರಾಹುಲ್‌

ವರದಿ ಪ್ರಕಟವಾಗುತ್ತಿದ್ದಂತೆ ದೆಹಲಿಯ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ, ಚೌಕಿದಾರ್‌ ಚೋರ್‌ ಎಂಬುದು ಸಾಬೀತಾಗಿದೆ ಎಂದು ಕಿಡಿಕಾರಿದ್ದಾರೆ.

“ಯಾರಿಗಾಗಿ ಅವರು ಸಮಾನ ಚರ್ಚೆಯಲ್ಲಿ ಪಾಲ್ಗೊಂಡಿದ್ದರು? ನಿಮಗಾಗಿ ನನಗಾಗಿ ಅಲ್ಲ. ಅನಿಲ್‌ ಅಂಬಾನಿಗಾಗಿ,” ಎಂದು ಹೇಳಿರುವ ಅವರು, “ಈ ಮೂಲಕ ಪ್ರಧಾನ ಮಂತ್ರಿ ಪ್ರಕ್ರಿಯೆಗಳನ್ನು ಉಲ್ಲಂಘಿಸಿ ತಮ್ಮ ಗೆಳೆಯ ಅನಿಲ್‌ ಅಂಬಾನಿಗೆ ಲಾಭ ಮಾಡಿಕೊಟ್ಟಿದ್ದಲ್ಲದೆ ನಿಮ್ಮ 30,000 ಕೋಟಿ ರೂಪಾಯಿ ಹಣವನ್ನು ಕದ್ದಿದ್ದಾರೆ,” ಎಂದು ನೇರವಾಗಿ ಆರೋಪಿಸಿದ್ದಾರೆ.

‘ಹಿಂದೂ’ ವರದಿ ಅಲ್ಲೋಲ ಕಲ್ಲೋಲ ಉಂಟು ಮಾಡುತ್ತಿದ್ದಂತೆ ತಮ್ಮ ಸ್ಟೋರಿ ಬಗ್ಗೆ ಎನ್‌ಡಿಟಿವಿಗೆ ಪ್ರತಿಕ್ರಿಯೆ ನೀಡಿರುವ ಪತ್ರಿಕೆಯ ಅಧ್ಯಕ್ಷ ಎನ್‌. ರಾಮ್‌, “ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಈವರೆಗೆ ದೇಶದ ಆನ್‌ಲೈನ್‌ ಮಾಧ್ಯಮಗಳಷ್ಟೇ ಸುದ್ದಿ ಮಾಡುತ್ತಿದ್ದವು. ಈ ವರದಿಯೊಂದಿಗೆ ದೇಶದ ಪತ್ರಿಕೋದ್ಯಮ ಮತ್ತೆ ತನ್ನ ಹಾದಿಗೆ ಮರಳಿದೆ,” ಎಂದು ಪ್ರತಿಕ್ರಿಯಿಸಿದ್ದಾರೆ.