samachara
www.samachara.com
ಬಂಡಿ ಹೊಸೂರಿಗೆ ನಾಳೆ ಕೊಪ್ಪಳ ಡಿಸಿ ಭೇಟಿ; ಅಸ್ಪೃಶ್ಯತೆ ವಿರುದ್ಧ ಕಾನೂನು ಕ್ರಮ ಯಾವಾಗ?
COVER STORY

ಬಂಡಿ ಹೊಸೂರಿಗೆ ನಾಳೆ ಕೊಪ್ಪಳ ಡಿಸಿ ಭೇಟಿ; ಅಸ್ಪೃಶ್ಯತೆ ವಿರುದ್ಧ ಕಾನೂನು ಕ್ರಮ ಯಾವಾಗ?

ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಸಂವೇದನೆ ಕಳೆದುಕೊಂಡಿರುವುದಕ್ಕೆ ಜೀವಂತ ಸಾಕ್ಷಿ ಎಂಬಂತೆ ಬಂಡಿ ಹೊಸೂರು ಗ್ರಾಮದಲ್ಲಿ ಈವರೆಗೆ ಯಾವುದೇ ಕಾನೂನು ಕ್ರಮಗಳು ಜರುಗಿಲ್ಲ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

“ನಮ್ ಹಳ್ಳಿ ಬಗ್ಗೆ ‘ಸಮಾಚಾರ’ದಲ್ಲಿ ವರದಿ ಬಂದ್‌ಮೇಲೆ ಇಡೀ ಹಳ್ಳಿ ಹೊಟ್ಯಾಗ ಬೆಂಕಿ ಬಿದ್ದಂಗ್ ಬುಸ್‌ಗುಡತೈತ್ರಿ. ಯಾವಾಗ ಯಾರು ಏನ್ ಮಾಡ್ತಾರೋ ಅನ್ನೋ ಜೀವ ಭಯದಾಗ ಬದುಕಂಗ್ ಆಗೇತ್ರಿ ಸರ. ಹಳ್ಳೀಲಿ ಪರಿಸ್ಥಿತಿ ಭಾಳ್‌ ಕೆಟ್ಟದ”

- ಕೊಪ್ಪಳದ ಬಹದ್ದೂರ್ ಬಂಡಿ ಹೊಸೂರು ಗ್ರಾಮದ ದಲಿತ ಕೇರಿಯ ಯುವಕನೊಬ್ಬನ ಮಾತಿದು. ಗ್ರಾಮದಲ್ಲಿ ಜೀವಂತವಿರುವ ಅಸ್ಪೃಶ್ಯತೆಯ ಬಗ್ಗೆ ‘ಸಮಾಚಾರ’ ವಿಶೇಷ ವರದಿ ಪ್ರಕಟಿಸಿ ಇಂದಿಗೆ 11 ದಿನ. ಈ ವರದಿ ಪ್ರಕಟವಾದ ಬಳಿಕ ಇತರೆ ಮಾಧ್ಯಮಗಳು, ಪೊಲೀಸರು, ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರೂ ಗ್ರಾಮಸ್ಥರನ್ನು ಭೇಟಿಯಾಗಿ ‘ನ್ಯಾಯ ಕೊಡಿಸುವ’ ಭರವಸೆ ನೀಡಿದ್ದಾರೆ. ಆದರೆ, ಗ್ರಾಮದ ಆಂತರ್ಯದೊಳಗೆ ಸವರ್ಣೀಯರ ಅಸಹನೆಯೊಂದು ಇಂದಿಗೂ ಕುದಿಯುತ್ತಿದೆ.

“ಆಗೋದ್ ಆಗ್ಲಿ ನಡೀರಿ ಸರ. ನಾವು ಎಷ್ಟು ದಿನ ಅಂತ ಇವ್ರ ಕ್ಯಾಮೆ ಮಾಡ್ಕೊಂಡ್ ಮೇಲ್ಚಾತಿ ಜನಾನ ಮುಟ್ಟುಸ್ಕೋಳ್ದೆ ಅಸ್ಪೃಶ್ಯತೆಗೆ ಒಳಗಾಗಿ ಅವಮಾನದಿಂದ ತಲೆ ತಗ್ಸೋದು. ಅದು ನಮ್ಮಪ್ಪನ ಕಾಲಕ್ಕೆ ಮುಗೀತು. ನಾವು ಶಾಲೆ ಕಲ್ತೀವಿ, ಕಾನೂನು ನಮಗೂ ಗೊತ್ತದ. ಬಂದದ್ದು ಬರಲಿ” ಎಂಬ ಧೈರ್ಯದ ಮಾತು ಮತ್ತೊಬ್ಬ ದಲಿತ ಹುಡುಗನದ್ದು.

ಜನವರಿ 26ರ ಗಣರಾಜ್ಯೋತ್ಸವದ ದಿನದಿಂದು ಇಲ್ಲಿನ ಅನಾಗರಿಕ ಅಸ್ಪೃಶ್ಯತೆಯನ್ನು ಸಾಕ್ಷಿ ಸಮೇತ ತೆರೆದಿಟ್ಟ ವರದಿಯೇ ‘ಕೊಪ್ಪಳ ಎಂಬ ಅಸ್ಪೃಶ್ಯತೆ ಕೂಪದಲ್ಲಿ ಗಣತಂತ್ರದ ಅಣಕ; ದಲಿತರ ಪಾಲಿಗಿದು ನಿತ್ಯ ನರಕ’.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ತಹಶೀಲ್ದಾರ್‌ವರೆಗೆ ಎಲ್ಲರೂ ಗ್ರಾಮಕ್ಕೆ ದೌಡಾಯಿಸಿದ್ದರು. ಅಧಿಕಾರಿಗಳೇನೋ ಗ್ರಾಮಕ್ಕೆ ಬಂದರು, ಹೋದರು. ಆದರೆ ದಲಿತರಿಗೆ ನ್ಯಾಯ ಎಂಬುದು ಮಾತ್ರ ಇನ್ನೂ ದೊರೆತಿಲ್ಲ. ಈ ನಡುವೆ ಸರಕಾರಿ ಅಧಿಕಾರಿಗಳಿಂದಲೇ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸವೂ ನಡೆದಿದೆ ಎಂಬ ಆರೋಪಗಳಿವೆ. ಈ ನಡುವೆ ಕೊನೆಗೂ ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ್ ನಾಳೆ (ಫೆಬ್ರವರಿ 8) ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.

ಅಂದು ನಡೆದಿತ್ತು ಅಧಿಕಾರಿಗಳ ಹೈ ಡ್ರಾಮ:

‘ಸಮಾಚಾರ’ದಲ್ಲಿ ಬಹದ್ದೂರ್ ಬಂಡಿ ಹೊಸೂರು ಗ್ರಾಮದ ಕುರಿತು ವರದಿಯಾದ ನಂತರ ಇಡೀ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಗ್ರಾಮದ ಸವರ್ಣೀಯರು ದಲಿತರೇ ಮುಂದೆ ನಿಂತು ಈ ಕೆಲಸ ಮಾಡಿದ್ದಾರೆ ಎಂದು ಕಾಲೇಜು ಕಲಿಯುತ್ತಿರುವ ಕೆಲವು ದಲಿತ ಯುವಕರ ವಿರುದ್ಧ ಧಮಕಿ ಹಾಕಿದ್ದಾರೆ, ಹೆದರಿಸಿದ್ದಾರೆ. ಈ ನಡುವೆ ಗ್ರಾಮಕ್ಕೆ ಅಧಿಕಾರಿಗಳ ಭೇಟಿ ಎಂಬ ಹೈಡ್ರಾಮವೂ ಸೆಟ್ಟೇರಿತ್ತು.

ಗ್ರಾಮದಲ್ಲಿ ಅಸ್ಪೃಶ್ಯತೆ ಕುರಿತು ಎಲ್ಲಾ ಸುದ್ದಿ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಜಿಲ್ಲಾಧಿಕಾರಿ, ಈ ಕುರಿತು ವರದಿ ನೀಡುವಂತೆ ಜನವರಿ 27 ರಂದು ತಹಶೀಲ್ದಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಡಿಸಿ ಸೂಚನೆ ಮೇರೆಗೆ ಹಳ್ಳಿಗೆ ಆಗಮಿಸಿದ್ದ ತಹಶೀಲ್ದಾರ್ ಜೆ.ಬಿ. ಮಜ್ಜಿಗಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ್ ಹಾಗೂ ಕಲ್ಲೇಶ್ ಅವರಿಂದ ಈ ಪ್ರಕರಣದ ಗಂಭೀರತೆಯನ್ನು ತೇಲಿಸಿ, ಇದನ್ನು ಮುಚ್ಚಿಹಾಕುವ ಎಲ್ಲಾ ಪ್ರಯತ್ನಗಳು ನಡೆದಿದ್ದವು.

ಮೊದಲು ದಲಿತರ ಕೇರಿಗೆ ಆಗಮಿಸಿದ್ದ ಅಧಿಕಾರಿಗಳು ಕೆಲವು ಹಿರಿಯ ದಲಿತರನ್ನು ಅಸ್ಪೃಶ್ಯತೆ ಕುರಿತು ಪ್ರಶ್ನಿಸಿದ್ದಾರೆ. ಆದರೆ ಜೀವ ಭಯದಿಂದ ಯಾರೂ ತಮ್ಮ ಮೇಲಿನ ದೌರ್ಜನ್ಯವನ್ನು ಧೈರ್ಯವಾಗಿ ಹೇಳುವ ಮನಸ್ಸು ಮಾಡಿರಲಿಲ್ಲ. ಆದರೆ, ಈ ಕುರಿತು ಸತ್ಯಾಸತ್ಯತೆಯನ್ನು ತಿಳಿದು ಸರಿಯಾದ ವಿಚಾರಣೆ ನಡೆಸಬೇಕಾಗಿದ್ದ ಅಧಿಕಾರಿಗಳು ಈ ಗ್ರಾಮದಲ್ಲಿ ಅಸ್ಪೃಶ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲು ಮುಂದಾಗಿದ್ದರು. ಅಸ್ಪೃಶ್ಯತೆಯಂತಹ ನೀಚ ಆಚರಣೆಯನ್ನು ತೊಡೆದುಹಾಕಬೇಕಾಗಿದ್ದ ಅಧಿಕಾರಿಗಳು ಕೇವಲ ಒಂದೇ ದಿನದಲ್ಲಿ 40 ನಿಮಿಷಗಳ ವಿಚಾರಣೆಯಲ್ಲೇ ದೊಡ್ಡ ತೀರ್ಮಾನಕ್ಕೆ ಬಂದದ್ದು ಅಧಿಕಾರಿಗಳ ಬೇಜವಾಬ್ದಾರಿತನವನ್ನು ತೋರುತ್ತದೆ.

ಅಧಿಕಾರಿಗಳು ಈ ಪ್ರಕರಣವನ್ನು ಮುಚ್ಚಿಹಾಕಲು ಎಲ್ಲಾ ಪ್ರಯತ್ನವನ್ನೂ ನಡೆಸಿದ್ದರು. ಆದರೆ ಕೊಪ್ಪಳದ ದಲಿತಪರ ಸಂಘಟನೆಗಳು ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ನ್ಯಾಯಕ್ಕಾಗಿ ಒತ್ತಡ ಹೇರಲು ಮುಂದಾಗಿದ್ದವು. ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬಹದ್ದೂರ್ ಬಂಡಿ ಹೊಸೂರು ಗ್ರಾಮದಲ್ಲಿ ಸಭೆಯನ್ನು ಏರ್ಪಡಿಸಿತ್ತು. ದಲಿತರಲ್ಲಿ ಧೈರ್ಯ ತುಂಬಿ ಸತ್ಯವನ್ನು ಅಧಿಕಾರಿಗಳ ಎದುರು ಹೇಳುವಂತೆ ಪ್ರೇರೇಪಿಸಿತ್ತು. ಅಲ್ಲದೆ ಹೊಸೂರು ಸೇರಿದಂತೆ ಕೊಪ್ಪಳದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿರುವ ಎಲ್ಲಾ ಗ್ರಾಮಗಳ ಬಗ್ಗೆ ಕರಪತ್ರಗಳನ್ನು ಇಡೀ ಜಿಲ್ಲೆಗೆ ಹಂಚಿತ್ತು. ಜಿಲ್ಲಾಧಿಕಾರಿಗಳಿಂದ ರಾಜ್ಯ ಸಮಾಜ ಕಲ್ಯಾಣ ಇಲಾಖೆಯವರೆಗೆ ಈ ಕುರಿತು ದೂರು ಸಲ್ಲಿಸಿತ್ತು.

ದಲಿತ ಕೇರಿಯಲ್ಲಿ ಸಭೆ ನಡೆಸಿದ್ದ ಡಿಎಸ್ಎಸ್ ಮುಖಂಡರು
ದಲಿತ ಕೇರಿಯಲ್ಲಿ ಸಭೆ ನಡೆಸಿದ್ದ ಡಿಎಸ್ಎಸ್ ಮುಖಂಡರು

ಇಷ್ಟೆಲ್ಲ ಆದ ನಂತರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟದೆ ಇರಲಿಲ್ಲ. ಪರಿಣಾಮ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಮತ್ತೆ ಜನವರಿ 30ರಂದು ಗ್ರಾಮಕ್ಕೆ ಬಂದು ಪ್ರಕರಣದ ಕುರಿತು ಪಂಚನಾಮೆ ಮಾಡಿದ್ದಾರೆ. ದಲಿತರ ಹೇಳಿಕೆಯನ್ನು ಪಡೆದು ಈ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಿದೆ ಎಂಬ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿದ್ದಾರೆ. ಅಲ್ಲಿಗೆ ಒಂದು ಹಂತಕ್ಕೆ ಅಸ್ಪೃಶ್ಯತೆ ವಿರುದ್ಧದ ಹೋರಾಟ ಯಶಸ್ಸು ಕಂಡಿದೆ.

ಗ್ರಾಮದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆಗಾಗಿ ಕಳೆದ 10 ದಿನಗಳಿಂದ ಕೊಪ್ಪಳದ ಜಿಲ್ಲಾಧಿಕಾರಿ ಹಾಗೂ ಎಸ್‌ಪಿಗೆ ‘ಸಮಾಚಾರ’ ನಿರಂತರವಾಗಿ ಕರೆ ಮಾಡುತ್ತಲೇ ಇದೆ. ಆದರೆ, ಇಬ್ಬರೂ ಕರೆ ಸ್ವೀಕರಿಸುತ್ತಿಲ್ಲ. ಈಗ ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡುವ ಮನಸ್ಸು ಮಾಡಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಅಧಿಕಾರಿಗಳು ‘ಅಸ್ಪೃಶ್ಯತಾ ನಿಷೇಧ ಕಾಯ್ದೆ- 1986’ರ ಪ್ರಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಆದರೆ, ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆ ಸಂವೇದನೆ ಕಳೆದುಕೊಂಡಿರುವುದರ ಜೀವಂತ ಸಾಕ್ಷಿ ಎಂಬಂತೆ ಈ ಗ್ರಾಮದಲ್ಲಿ ಈವರೆಗೆ ಯಾವುದೇ ಕಾನೂನು ಕ್ರಮಗಳು ಜರುಗಿಲ್ಲ. ಈ ಮಧ್ಯೆ ಜಿಲ್ಲಾಧಿಕಾರಿ ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ಗ್ರಾಮದ ದಲಿತರಲ್ಲಿ ಆಶಾವಾದವೊಂದನ್ನು ಹುಟ್ಟಿಹಾಕಿದೆ.