samachara
www.samachara.com
ಕೊಟ್ಟಿರುವ ‘ಮಾತು’ ಉಳಿಸಿಕೊಂಡರೆ ಸಾಕು; ಕುಮಾರಸ್ವಾಮಿ ಬಜೆಟ್‌ ಬಗ್ಗೆ ಇಷ್ಟೇ ನಿರೀಕ್ಷೆ!
COVER STORY

ಕೊಟ್ಟಿರುವ ‘ಮಾತು’ ಉಳಿಸಿಕೊಂಡರೆ ಸಾಕು; ಕುಮಾರಸ್ವಾಮಿ ಬಜೆಟ್‌ ಬಗ್ಗೆ ಇಷ್ಟೇ ನಿರೀಕ್ಷೆ!

ಸಮ್ಮಿಶ್ರ ಸರಕಾರದ ಎರಡನೇ ಬಜೆಟ್‌ನಲ್ಲಿ ಏನೇನು ಇರಲಿದೆ, ಏನೇನು ಇರುವುದಿಲ್ಲ ಎಂಬುದು ನಾಳೆ ಇಷ್ಟೊತ್ತಿಗೆ ಬಹಿರಂಗವಾಗಿರುತ್ತದೆ.

Team Samachara

ಸಮ್ಮಿಶ್ರ ಸರ್ಕಾರದ ಅಸ್ತಿತ್ವವೇ ಡೋಲಾಯಮಾನವಾಗಿರುವ ಸಂದರ್ಭದಲ್ಲಿ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ಬಜೆಟ್‌ ಮೇಲೆ ರಾಜ್ಯದ ಜನತೆ ಅಪಾರ ನಿರೀಕ್ಷೆಗಳನ್ನೂ ಇಟ್ಟುಕೊಂಡಿದ್ದಾರೆ.

ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮತಾಕರ್ಷಣೆಯ ಯೋಜನೆಗಳನ್ನು ಪ್ರಕಟಿಸಿತ್ತು. ಇದೀಗ ಕುಮಾರಸ್ವಾಮಿ ಕೂಡ ಇದೇ ಮಾದರಿಯನ್ನು ಅನುಸರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ದೋಸ್ತಿ ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು, ಈಗಾಗಲೇ ಆಯವ್ಯಯ ಮಂಡನೆಗೆ ಭರ್ಜರಿ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ ಅತೃಪ್ತ ಶಾಸಕರು ಯಾವುದೇ ಸಂದರ್ಭದಲ್ಲೂ ಕೈ ಕೊಡುವ ಭೀತಿ ಎದುರಾಗಿರುವುದರಿಂದ ಬಜೆಟ್ ಮಂಡನೆ ಮೇಲೆ ಅಸ್ಥಿರತೆಯ ಛಾಯೆ ಆವರಿಸಿದೆ.

ರೈತರ ಸಾಲಮನ್ನಾ, ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದಿಂದಾಗಿ ಸರಕಾರದ ಬೊಕ್ಕಸಕ್ಕೆ ಆಗುವ ಹೊರೆ ತಪ್ಪಿಸುವ ಕ್ರಮಗಳನ್ನೂ ಕುಮಾರಸ್ವಾಮಿ ತೆಗೆದುಕೊಳ್ಳಬೇಕಾಗಿದೆ. ಪ್ರತಿಪಕ್ಷಗಳು ಮಾಡುತ್ತಿರುವ ಎಲ್ಲಾ ಟೀಕೆಗಳಿಗೆ ಬಜೆಟ್‌ ಮೂಲಕವೇ ಉತ್ತರ ಕೊಡಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಸಾಲಮನ್ನಾ ಯೋಜನೆಯ ಪೂರ್ಣ ಮೊತ್ತ 46 ಸಾವಿರ ಕೋಟಿ ರೂಪಾಯಿಯನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಚುಕ್ತಾ ಮಾಡುವ ಬಗ್ಗೆ ಈ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಈ ಬಜೆಟ್‍ನಲ್ಲಿ ಹಿರಿಯ ನಾಗರಿಕರ ವೃದ್ಧಾಪ್ಯ ವೇತನವನ್ನು ಒಂದು ಸಾವಿರ ರೂಪಾಯಿಯಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಳ ಮಾಡುವ ಇಂಗಿತವನ್ನೂ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.

ಮದ್ಯದ ಮೇಲಿನ ಅಬಕಾರಿ ಸುಂಕ ಶೇಕಡ 5 ರಷ್ಟು ಹೆಚ್ಚಳ, ಅಬಕಾರಿ ಸುಂಕ 17 ಸ್ಲ್ಯಾಬ್ ಗಳಿಗೆ ಶೇಕಡ 15 ರಿಂದ ಶೇಕಡ 34ಕ್ಕೆ ಏರಿಕೆ, ಡೀಸೆಲ್ ಮಾರಾಟದ ಮೇಲಿನ ಸೆಸ್ ಏರಿಕೆ, ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ ಮಾಡುವ ಮೂಲಕ ಸರಕಾರದ ಬೊಕ್ಕಸವನ್ನು ಭದ್ರ ಮಾಡಿಕೊಳ್ಳುವ ಯೋಜನೆಯಲ್ಲಿದ್ದಾರೆ ಕುಮಾರಸ್ವಾಮಿ.

ಪ್ರತಿ ಯೂನಿಟ್ ಮೇಲೆ 15 ರಿಂದ 25 ಪೈಸೆ ಬೆಲೆ ಏರಿಕೆ, ವಿದ್ಯುತ್ ಮೇಲಿನ ತೆರಿಗೆ ಶೇ 6ರಿಂದ ಶೇ9ಕ್ಕೆ ಏರಿಕೆಯಾಗುವ ಸಂಭವವಿದೆ. ಸಿರಿಧಾನ್ಯಗಳಾದ ನವಣೆ, ಸಾಮೆ, ಅರಕ ಹಾಗೂ ಬರಗ, ದ್ವಿದಳ ಧಾನ್ಯ, ತೆಂಗಿನ ಕಾಯಿ ಸಿಪ್ಪೆಯ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಯುವ ಸಾಧ್ಯತೆ ಇದೆ.

ಸಾಲಮನ್ನಾಕ್ಕೆ ಹಣ ಬಿಡುಗಡೆ ಮಾಡುವುದಾಗಿ ಈಗಾಗಲೇ ಕುಮಾರಸ್ವಾಮಿ ಹೇಳಿದ್ದಾರೆ. ಎಷ್ಟು ಸಾವಿರ ಕೋಟಿ ಹಣ ಬಿಡುಗಡೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕುಮಾರಸ್ವಾಮಿ ಮಂಡಿಸಿದ್ದ ಕಳೆದ ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಇಲ್ಲ ಎಂದು ದೊಡ್ಡ ಮಟ್ಟದಲ್ಲಿ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿಯ ಬಜೆಟ್‍ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಗಬಹುದು ಎಂಬ ನಿರೀಕ್ಷೆ ಇದೆ.

Also read: ಚುನಾವಣಾ ಪೂರ್ವ ಬಜೆಟ್‌; ಜನಪ್ರಿಯ ಘೋಷಣೆಗಳ ಕಡೆಗೇ ಸರಕಾರದ ಚಿತ್ತ?

ಉತ್ತರ ಕರ್ನಾಟಕ ಭಾಗಕ್ಕೆ ವಿಶೇಷವಾಗಿ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ನೀಡುವ ಸಾಧ್ಯತೆ ಇದೆ. ಕೆಲವು ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಘೋಷಣೆಯೂ ಬಜೆಟ್‍ನಲ್ಲೇ ಆಗುವ ಸಂಭವ ಇದೆ.

ಕಾರ್ಮಿಕ ವಲಯ ಹಾಗೂ ಮಧ್ಯಮ ವರ್ಗಕ್ಕೂ ಹಲವು ಯೋಜನೆಗಳನ್ನು ನಿರೀಕ್ಷಿಸಲಾಗಿದ್ದು, ಕಂದಾಯ ಇಲಾಖೆಯ ಕೆಲವಾರು ತೆರಿಗೆ ಮತ್ತು ಶುಲ್ಕಗಳನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ಮೀನುಗಾರರಿಗೆ ಸರಳ ಸಾಲ ಸೌಲಭ್ಯ ಜೊತೆಗೆ ಅನುದಾನಗಳನ್ನು ನೀಡುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ 'ರೈತ ಬೆಳಕು' ಯೋಜನೆಗೆ ಕುಮಾರಸ್ವಾಮಿ ಎಳ್ಳು ನೀರು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಮಂಡಿಸಿದ್ದ ಕೊನೆ ಬಜೆಟ್‌ನಲ್ಲಿ, ಒಣಭೂಮಿ ರೈತರಿಗೆ ನೆರವು ನೀಡುವ ಉದ್ದೇಶದಿಂದ 'ರೈತ ಬೆಳಕು' ಯೋಜನೆಯನ್ನು ಘೋಷಿಸಿದ್ದರು.

ಬಜೆಟ್‌ ಬಗ್ಗೆ ಜನ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವುದು ಈಗಿನ ಸಂದರ್ಭದಲ್ಲಿ ಕಷ್ಟ. ಚುನಾವಣಾ ಪ್ರಣಾಳಿಕೆಯಲ್ಲಿ ಏನೇನು ಭರವಸೆ ಕೊಟ್ಟಿದ್ದರೋ ಆ ಭರಸವೆಗಳನ್ನು ಈಡೇರಿಸಿದರೆ ಅಷ್ಟೇ ಸಾಕು.
- ಚಿರಂಜೀವಿ ಸಿಂಗ್‌, ನಿವೃತ್ತ ಐಎಎಸ್‌ ಅಧಿಕಾರಿ

2018 ಜುಲೈ 5ರಂದು ಸಮ್ಮಿಶ್ರ ಸರಕಾರದ ಮೊದಲ ಬಜೆಟ್ ಮಂಡಿಸಿದ್ದ ಕುಮಾರಸ್ವಾಮಿ, ಹಿಂದೆ ಸಿದ್ದರಾಮಯ್ಯ ಘೋಷಿಸಿದ್ದ ಎಲ್ಲಾ ಯೋಜನೆಗಳನ್ನು ಮುಂದುವರೆಸುವುದಾಗಿ ಹೇಳಿದ್ದರು. ಆದರೆ, ಸಾಲಮನ್ನಾ ಯೋಜನೆಗಾಗಿ 'ರೈತ ಬೆಳಕು' ಯೋಜನೆಯನ್ನು ಕೈಬಿಟ್ಟಿದ್ದರು.

ಅಂತರ್ಜಲ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಭೂ ಮೇಲ್ಮೈ ಭಾಗದ ನೀರನ್ನು ಬಳಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸುಮಾರು 53 ಸಾವಿರ ಕೋಟಿ ರೂಪಾಯಿಯ ಬೃಹತ್ ಯೋಜನೆ ಘೋಷಣೆಯಾಗುವ ನಿರೀಕ್ಷೆ ಇದೆ. ವಿವಿಧ ವರ್ಗಗಳ ಮಾಸಾಶನ ಹೆಚ್ಚಳ, ಅಂಗನವಾಡಿ ನೌಕರರ ವೇತನ ಪರಿಷ್ಕರಣೆಗೆ ಕುಮಾರಸ್ವಾಮಿ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಕೃಷಿ ವರ್ಗಕ್ಕೆ ವಿಶೇಷವಾಗಿ ವಿಮಾ ಸೌಲಭ್ಯವನ್ನು ನೀಡಲು ಕುಮಾರಸ್ವಾಮಿ ಮುಂದಾಗಿದ್ದು, ಫಸಲ್ ಭೀಮಾ ಯೋಜನೆ ರೈತರಿಗೆ ಸರಿಯಾಗಿ ತಲುಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ವಿಶೇಷ ವಿಮಾ ಯೋಜನೆಯನ್ನು ಸಿದ್ಧಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರ ಬಜೆಟ್‍ನಲ್ಲಿ ಘೋಷಿಸಿರುವ ರೈತರಿಗೆ ವಾರ್ಷಿಕ 6000 ರೂಪಾಯಿ ಸಹಾಯ ಧನದ ಯೋಜನೆಗಿಂತಲೂ ಜನಪ್ರಿಯವಾದ ಯೋಜನೆಗಳನ್ನು ಕುಮಾರಸ್ವಾಮಿ ನಾಳೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ರೈತರ ಸಾಲಮನ್ನಾ ಮತ್ತು ಸರಕಾರಿ ನೌಕರರ 6ನೇ ವೇತನ ಆಯೋಗದ ವರದಿ ಜಾರಿಯಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕುಮಾರಸ್ವಾಮಿ ಹರಸಾಹಸಪಟ್ಟಿದ್ದು, ಆರ್ಥಿಕ ಶಿಸ್ತು ಕಾಪಾಡಲು ಹೆಚ್ಚಿನ ಒತ್ತು ನೀಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಹೊಸ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ, ತಾಲ್ಲೂಕು ಆಸ್ಪತ್ರೆಗಳ ಉನ್ನತೀಕರಣದಂತಹ ಯೋಜನೆಗಳು ಬಜೆಟ್‍ನಲ್ಲಿವೆ ಎಂದು ಹೇಳಲಾಗಿದೆ. ಹೊಸದಾಗಿ 1000 ಇಂಗ್ಲಿಷ್ ಮಾಧ್ಯಮ ಶಾಲೆಗಳ ಆರಂಭ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಸುಮಾರು 500 ಕೋಟಿ ರೂಪಾಯಿ ಅನುದಾನ ಮೀಸಲಿಡುವ ನಿರೀಕ್ಷೆಯೂ ಇದೆ.