samachara
www.samachara.com
ಆರ್ಮಿ Vs ಆರ್ಮಿ: ಸೈನಿಕನ ಹತ್ಯೆ ಹಿಂದೆ ಸೈನಿಕರು, ಸೇನಾ ಕ್ಯಾಂಪ್‌ನಲ್ಲಿ ದೌರ್ಜನ್ಯ
COVER STORY

ಆರ್ಮಿ Vs ಆರ್ಮಿ: ಸೈನಿಕನ ಹತ್ಯೆ ಹಿಂದೆ ಸೈನಿಕರು, ಸೇನಾ ಕ್ಯಾಂಪ್‌ನಲ್ಲಿ ದೌರ್ಜನ್ಯ

ಔರಂಗಜೇಬ್‌ ಸಾವಿನ ಬೆನ್ನತ್ತಿ ತನಿಖೆಗೆ ಇಳಿದ ಸೇನೆ ತನ್ನ ಕ್ಯಾಂಪ್‌ಗೆ ಬಂದು ತಲುಪಿದೆ. ಕೊಲೆಗಡುಕರು ಹೊರಗಿಲ್ಲ; ಸೇನೆಯ ಒಳಗೇ ಇದ್ದಾರೆ ಎಂಬ ಪ್ರಾಥಮಿಕ ಮಾಹಿತಿಗಳು ತನಿಖಾಧಿಕಾರಿಗಳಿಗೆ ಸಿಕ್ಕಿವೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಸಂಘರ್ಷ ಪೀಡಿತ ಜಮ್ಮು ಮತ್ತು ಕಾಶ್ಮೀರ ಮತ್ತೆ ಸುದ್ದಿಯಲ್ಲಿದೆ. ಸದಾ ಶಸ್ತ್ರ ಸಜ್ಜಿತ ಬಂಡುಕೋರರ ಕಾರಣಗಳಿಗೆ ಸುದ್ದಿಯಾಗುತ್ತಿದ್ದ ರಾಜ್ಯದಲ್ಲಿ ಇದೀಗ ಅಪರೂಪಕ್ಕೆ ತನ್ನದೇ ವಿವಾದಗಳ ಮೂಲಕ ಸೇನೆ ಸುದ್ದಿಕ್ಕೆ ಬಂದಿದೆ.

ಆತನ ಹೆಸರು ಔರಂಗಜೇಬ್‌. ಜಮ್ಮು ಮತ್ತು ಕಾಶ್ಮೀರದ ಈ ತರುಣ ದೇಶಸೇವೆಯ ಕನಸು ಹೊತ್ತು ಭಾರತೀಯ ಸೇನೆ ಸೇರಿದ್ದ. 44 ರಾಷ್ಟ್ರೀಯ ರೈಫಲ್ಸ್‌ನಲ್ಲಿ ಆತ ಸೇವೆ ಸಲ್ಲಿಸುತ್ತಿರಬೇಕಾದರೆ ಕಳೆದ ವರ್ಷ ಜೂನ್‌ನಲ್ಲಿ ಒಂದಷ್ಟು ದಿನಗಳ ಕಾಲ ರಜೆ ಪಡೆದು ಪೂಂಚ್‌ನಲ್ಲಿರುವ ತನ್ನ ಮನೆಯತ್ತ ಬಸ್‌ನಲ್ಲಿ ಹೊರಟಿದ್ದ. ಸರಕಾರಿ ಸಾರಿಗೆ ಬಸ್‌ನಲ್ಲಿ ಪಯಣಿಸುತ್ತಿದ್ದಾಗ ಬಸ್‌ ನಿಲ್ಲಿಸಿ ಪುಲ್ವಾಮ ಸಮೀಪ ಆತನನ್ನು ಅಪಹರಿಸಲಾಗಿತ್ತು. ನಂತರ ಜೂನ್‌ 14ರಂದು ಗುಂಡಿನ ದಾಳಿಯಿಂದ ಛಿದ್ರವಾದ ಆತನ ದೇಹ ಗುಸ್ಸು ಗ್ರಾಮದಲ್ಲಿ ಸಿಕ್ಕಿತ್ತು. ಹೀಗೆ ದೇಶ ಸೇವೆಯ ಕನಸಿನ ಮಧ್ಯದಿಂದ ಔರಂಗಜೇಬ್‌ ಬಾರದ ಲೋಕಕ್ಕೆ ತೆರಳಿದ್ದ.

ಹೀಗೆ ಅಕಾಲಿಕ ಸಾವನ್ನಪ್ಪಿದ ಔರಂಗಜೇಬ್‌ಗೆ ಮೊನ್ನೆ ಮೊನ್ನೆ ನಡೆದ ಗಣರಾಜ್ಯೋತ್ಸವದಲ್ಲಿ ಅಶೋಕ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಣಿವೆ ರಾಜ್ಯದ ಬಂಡುಕೋರರ ಕೈಯಲ್ಲಿ ಆತ ಸತ್ತಿದ್ದಾನೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಹೇಗೆ ಸತ್ತ? ಆತನ ಬಗ್ಗೆ ಅಷ್ಟೊಂದು ಖಚಿತ ಮಾಹಿತಿ ನೀಡಿದವರು ಯಾರು ಎಂದು ಹುಡುಕಿಕೊಂಡು ಹೊರಟಾಗ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.

ಔರಂಗಜೇಬ್‌ ಸಾವಿನ ಬೆನ್ನತ್ತಿ ತನಿಖೆಗೆ ಇಳಿದ ಸೇನೆ ತನ್ನ ಕ್ಯಾಂಪ್‌ಗೆ ಬಂದು ತಲುಪಿದೆ. ಕೊಲೆಗಡುಕರು ಹೊರಗಿಲ್ಲ; ಸೇನೆಯ ಒಳಗೇ ಇದ್ದಾರೆ ಎಂಬ ಪ್ರಾಥಮಿಕ ಮಾಹಿತಿಗಳು ತನಿಖಾಧಿಕಾರಿಗಳಿಗೆ ಸಿಕ್ಕಿವೆ.

ಔರಂಗಜೇಬ್‌ ಅಪಹರಿಸಲು ಬಂಡುಕೋರರಿಗೆ ಸೈನಿಕರೇ ಮಾಹಿತಿಗಳನ್ನು ನೀಡಿದ್ದರು ಎಂಬ ವಿಚಾರ ತಿಳಿದು ಬಂದಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ. ಮೂವರು ಸೈನಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಕೃತ್ಯದಲ್ಲಿ ಇನ್ನೂ ಹೆಚ್ಚಿನವರು ಪಾಲ್ಗೊಂಡಿರಬಹುದು ಎಂಬ ಅನುಮಾನಗಳು ಮೂಡಿದ್ದು ತನಿಖೆ ಮುಂದುವರಿದಿದೆ.

ಮೇಜರ್‌ ರೋಹಿತ್‌ ಶುಕ್ಲಾ ವೈಯಕ್ತಿಕ ಅಂಗರಕ್ಷಕರಾಗಿದ್ದ 44 ರಾಷ್ಟ್ರೀಯ ರೈಫಲ್ಸ್‌ನ ಔರಂಗಜೇಬ್‌.
ಮೇಜರ್‌ ರೋಹಿತ್‌ ಶುಕ್ಲಾ ವೈಯಕ್ತಿಕ ಅಂಗರಕ್ಷಕರಾಗಿದ್ದ 44 ರಾಷ್ಟ್ರೀಯ ರೈಫಲ್ಸ್‌ನ ಔರಂಗಜೇಬ್‌.
/ಇಂಡಿಯನ್‌ ಎಕ್ಸ್‌ಪ್ರೆಸ್‌

ಔರಂಗಜೇಬ್‌ ಸಾವಿಗೂ ಮುನ್ನ ಮೇಜರ್‌ ರೋಹಿತ್‌ ಶುಕ್ಲಾ ವೈಯಕ್ತಿಕ ಅಂಗರಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಇದೇ ಶುಕ್ಲಾ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಔರಂಗಜೇಬ್‌ ಅಪಹರಣ ಪ್ರಕರಣದ ನಂತರ ನಾಪತ್ತೆಯಾಗಿರುವ ಮತ್ತೋರ್ವ 44 ರಾಷ್ಟ್ರೀಯ ರೈಫಲ್ಸ್‌ ಸೈನಿಕ ಅವಿದ್‌ ಹುಸೇನ್‌ ತಮ್ಮನನ್ನು ಶಾದಿ ಮಾರ್ಗ್‌ ಸೇನಾ ಕ್ಯಾಂಪ್‌ಗೆ ಕರೆಸಿಕೊಂಡು ಹಲ್ಲೆ ಮಾಡಿದ, ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ.

ತೌಸೀಫ್‌ ಅಹಮದ್‌ ವನಿ ಕಣ್ಣೀರ ಕಥೆ:

ಫೆಬ್ರವರಿ 4ರಂದು ವನಿ ಮನೆಯಲ್ಲಿದ್ದಾಗ ಫೋನ್‌ ರಿಂಗಣಿಸಿತ್ತು. ಪುಲ್ವಾಮಾ ಜಿಲ್ಲೆಯ ಶಾದಿಮಾರ್ಗ್‌ ಸೇನಾ ಕ್ಯಾಂಪ್‌ಗೆ ಬರುವಂತೆ ಅವರಿಗೆ ಸೂಚಿಸಲಾಯಿತು. ಕುಟುಂಬ ಸದಸ್ಯರಿಗೆ ತಿಳಿಸದೆ ನೇರವಾಗಿ ಕಾರ್‌ ಏರಿ 2 ಗಂಟೆ ಹೊತ್ತಿಗೆ ಕ್ಯಾಂಪ್‌ ಪ್ರವೇಶಿಸಿದ ಸೈನಿಕನೋರ್ವನ ತಮ್ಮ ವನಿಗೆ ಶಾಕ್‌ ಕಾದಿತ್ತು. "ನನ್ನನ್ನು ಒಳಗೆ ಕರೆದುಕೊಂಡು ಹೋಗಿ ಮೇಜರ್‌ (ರೋಹಿತ್‌) ಶುಕ್ಲಾ ಮುಂದೆ ನಿಲ್ಲಿಸಿದರು. ಅವರು ಎರಡು ಬಾರಿ ನನ್ನ ಕೆನ್ನೆಗೆ ಬಾರಿಸಿ ಕ್ಯಾಂಪ್‌ನ ಇನ್ನೊಂದು ತುದಿಗೆ ಕರೆದೊಯ್ಯುವಂತೆ ಅಲ್ಲಿದ್ದವರಿಗೆ ಸೂಚಿಸಿದರು," ಎಂದು ‘ದಿ ವೈರ್‌’ಗೆ ವನಿ ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಮ್ಮೆ ನನ್ನನ್ನು ಶುಕ್ಲಾ ಮುಂದೆ ನಿಲ್ಲಿಸುವ ಮೊದಲು ಈ ವ್ಯಕ್ತಿಗಳು ನನಗೆ ಸರಿಯಾಗಿ ಹೊಡೆದರು ಎಂಬುದಾಗಿ ಅವರು ವಿವರಿಸಿದ್ದಾರೆ. “ನಂತರ ಭುಜದ ಮೇಲೆ ಬಂದೂಕು ಇಟ್ಟು ಫೋಟೋಗೆ ಪೋಸ್‌ ನೀಡುವಂತೆ ನನಗೆ ಹೇಳಿದರು. ನಾನು ವಿರೋಧಿಸಿದಾಗ ಮತ್ತೆ ಹೊಡೆಯಲು ಆರಂಭಿಸಿದರು. ನಂತರ ವಿವಸ್ತ್ರಗೊಳಿಸಿ, ಬಂದೂಕು ಜತೆಗಿರುವ ಫೋಟೋವನ್ನು ಫೇಸ್‌ಬುಕ್‌ಗೆ ಅಪ್ಲೋಡ್‌ ಮಾಡದಿದ್ದಲ್ಲಿ ಎನ್‌ಕೌಂಟರ್‌ನಲ್ಲಿ ಮುಗಿಸುವುದಾಗಿ ಧಮಕಿ ಹಾಕಿದರು.”

“ಇಷ್ಟಾದ ಮೇಲೆ ನನ್ನನ್ನು ಬಿಟ್ಟು ಕಳುಹಿಸುತ್ತಾರೆ ಅಂದುಕೊಂಡೆ. ಆದರೆ, ಸ್ವಲ್ಪ ಹೊತ್ತಿನಲ್ಲಿ ನನ್ನನ್ನು ಕ್ಯಾಂಪ್‌ ಒಳಗಿದ್ದ ಆಕ್ರೋಡ ಮರಕ್ಕೆ ಕೈ ಕಾಲು ಕಟ್ಟಿ ಹಾಕಿ ಒಂದೇ ಸಮನೆ ಹೊಡೆಯಲು ಆರಂಭಿಸಿದರು. ಸ್ವಲ್ಪ ಸಮಯದಲ್ಲಿ ನನಗೆ ಪ್ರಜ್ಞೆ ತಪ್ಪಿ ಹೋಯಿತು. ನಂತರ ಏನಾಯಿತು ಎಂಬುದು ಗೊತ್ತಿಲ್ಲ. ನಂತರ ಕ್ಯಾಂಪ್‌ ಹೊರಗೆ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಬಿದ್ದಿದ್ದ ನನ್ನನ್ನು ಸ್ಥಳೀಯರು ನೋಡಿ ಜಿಲ್ಲಾಸ್ಪತ್ರೆಗೆ ಸೇರಿಸಿದರು. ಅಲ್ಲಿಂದ ನನ್ನನ್ನು ಶ್ರೀನಗರಕ್ಕೆ ಕರೆತರಲಾಯಿತು," ಎನ್ನುತ್ತಾರೆ ಹಾಸಿಗೆ ಮೇಲೆ ಮಲಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವನಿ. ವನಿ ಮೇಲಿನ ಈ ದೌರ್ಜನ್ಯ ಕಣಿವೆ ರಾಜ್ಯದಲ್ಲಿ ಆಕ್ರೋಶವನ್ನು ಹುಟ್ಟು ಹಾಕಿದೆ.

ಮಂಗಳವಾರ ಸಂಜೆ ಪಿಡಿಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆಸ್ಪತ್ರೆಗೆ ಭೇಟಿ ನೀಡಿ ವನಿಗೆ ಸಾಂತ್ವಾನ ಹೇಳಿದ್ದಾರೆ. ವನಿ ಮೇಲಿನ ದಾಳಿಯನ್ನು ಖಂಡಿಸಿರುವ ಮುಫ್ತಿ, “ಮೇಜರ್‌ ಶುಕ್ಲಾ ಧೈರ್ಯವಂತ ಅಧಿಕಾರಿ ಎಂದು ಕೇಳಲ್ಪಟ್ಟಿದೆ. ಮುಗ್ಧರ ಮೇಲೆ ಹೊಡೆದು ದೌರ್ಜನ್ಯ ನಡೆಸುವುದರಲ್ಲಿ ಎಂತಹ ಧೈರ್ಯ? ಯುವಕನೊಬ್ಬನನ್ನು ಕ್ಯಾಂಪ್‌ಗೆ ಕರೆಸಿಕೊಂಡು ಹೊಡೆಯುವುದರಲ್ಲಿ ಯಾವ ಧೈರ್ಯವೂ ಇಲ್ಲ," ಎಂದು ಕಿಡಿಕಾರಿದ್ದಾರೆ.

ಮತ್ತು ಈ ಘಟನೆ ಬಗ್ಗೆ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಮತ್ತು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಮಧ್ಯ ಪ್ರವೇಶ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇನ್ನು ಇತ್ತೀಚೆಗೆ ಐಎಎಸ್‌ ತೊರೆದು ರಾಜಕಾರಣ ಪ್ರವೇಶಿಸುವ ನಿರ್ಧಾರ ಘೋಷಿಸಿದ್ದ ಶಾ ಫೈಸಲ್‌, ಹಲ್ಲೆ ನಡೆಸಿದ ಅಧಿಕಾರಿಯನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ವನಿ ಕುಟುಂಬದ ನಾಪತ್ತೆ ಕಥೆ:

ಇಂಗ್ಲಿಷ್ ಎಂಎ ಓದುತ್ತಿರುವ ವನಿ ಪುಲ್ವಾಮದ ಸೇಬು ಬೆಳೆಯುವ ಕುಟುಂಬಕ್ಕೆ ಸೇರಿದವರು. ಅವರ ತಂದೆ ಓರ್ವ ಗುತ್ತಿಗೆದಾರರಾಗಿದ್ದು, 2002ರಲ್ಲಿ ಬಂಡುಕೋರರಿಂದ ಅಪಹರಣಕ್ಕೆ ಒಳಗಾದ ನಂತರ ನಾಪತ್ತೆಯಾಗಿದ್ದಾರೆ. ಅವರು ಏನಾದರು ಎಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಇದರ ನಡುವೆ ಔರಂಗಜೇಬ್‌ ಅಪಹರಣ ಹತ್ಯೆ ನಂತರ ಸೈನಿಕರಾಗಿದ್ದ ಅವರ ಅಣ್ಣ ಅವಿದ್‌ ಹುಸೇನ್‌ ಕೂಡ ನಾಪತ್ತೆಯಾಗಿದ್ದು ಅವರ ಕುರಿತೂ ಯಾವುದೇ ಮಾಹಿತಿಗಳಿಲ್ಲ. ಜಮ್ಮು ಮತ್ತು ಕಾಶ್ಮೀರ ಲೈಟ್‌ ಇನ್‌ಫ್ಯಾಂಟ್ರಿ ವಿಭಾಗದಲ್ಲಿ (ಜೆಎಕೆಎಲ್‌ಐ) ಕೆಲಸ ಮಾಡುತ್ತಿದ್ದ ಅವರು ಔರಂಗಜೇಬ್‌ ಹತ್ಯೆ ಸಂದರ್ಭದಲ್ಲಿ ಮನೆಯಲ್ಲಿದ್ದರು. ಅದೇ ದಿನ ಅವರನ್ನು ಶಾದಿಮಾರ್ಗ್‌ ಕ್ಯಾಂಪ್‌ಗೆ ಕರೆಸಿಕೊಳ್ಳಲಾಯಿತು. ನಂತರ ಜೆಎಕೆಎಲ್‌ಐ ಹೈದರಾಬಾದ್‌ ವಿಭಾಗಕ್ಕೆ ವರ್ಗಾಯಿಸಲಾಯಿತು.

ಅಲ್ಲಿಂದ ಕೆಲವು ದಿನಗಳ ಕಾಲ ಅವರು ಕುಟುಂಬಸ್ಥರ ಸಂಪರ್ಕದಲ್ಲಿದ್ದರು. “ಕೊನೆಯ ಬಾರಿ ನಾನು ಸಹೋದರನ ಜತೆ ಜುಲೈನಲ್ಲಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ‘ಹೈದರಾಬಾದ್‌ನಲ್ಲಿದ್ದೇನೆ, ಚೆನ್ನಾಗಿದ್ದೇನೆ’ ಎಂದಿದ್ದರು” ಎನ್ನುತ್ತಾರೆ ವನಿ.

ಆದರೆ ಜುಲೈ 14ರ ನಂತರ ಅವರ ಮೊಬೈಲ್‌ ಫೋನ್‌ ಸ್ವಿಚ್‌ಆಫ್‌ ಆಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸರಿಗೆ ದೂರು ನೀಡಿದಾಗ ಇದು ಸೇನೆಯ ಆಂತರಿಕ ವಿಚಾರ ಎಂಬ ಕಾರಣಕ್ಕೆ ದೂರು ಸ್ವೀಕರಿಸಿಲ್ಲ ಎನ್ನುತ್ತಾರೆ ವನಿ. ಇದೆಲ್ಲಾ ಆಗಿ ಜನವರಿ 28ರಂದು ವನಿಗೆ ಅಪರಿಚಿತ ದೂರವಾಣಿ ಸಂಖ್ಯೆಯಿಂದ ಕರೆ ಬಂತು. “ಅದು ಅಣ್ಣನ (ಹುಸೇನ್‌) ಕರೆಯಾಗಿತ್ತು. ಸುಮಾರು ಎರಡು ನಿಮಿಷಗಳ ಕಾಲ ನಾವು ಮಾತನಾಡಿದೆವು. ನನ್ನ ತಾಯಿ ಮತ್ತು ತಂಗಿ ಜೊತೆಗೂ ಮಾತನಾಡಿದ... ನಾನು ಆರಾಮವಾಗಿದ್ದೇನೆ ಎನ್ನುತ್ತಿದ್ದಂತೆ ಒಮ್ಮೆಲೆ ಕರೆ ನಿಂತಿತು,” ಎನ್ನುತ್ತಾರೆ ವನಿ.

ಹಾಗಾದರೆ ಅವಿದ್‌ ಹುಸೇನ್‌ ಏನಾದರು? ಆ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಕೆಲವು ಮೂಲಗಳ ಪ್ರಕಾರ ಔರಂಗಜೇಬ್‌ ಹತ್ಯೆ ಪ್ರಕರಣದಲ್ಲಿ ವಶದಲ್ಲಿ ಸೈನಿಕರಲ್ಲಿ ಅವಿದ್‌ ಹುಸೇನ್‌ ಕೂಡ ಇದ್ದಾರೆ. ಆದರೆ ಅದಿನ್ನೂ ಅಧಿಕೃತಗೊಂಡಿಲ್ಲ. ಹೀಗೆ ಬಂಡುಕೋರರ ನಡುವೆ ಸೈನ್ಯ ತನ್ನದೇ ಆದ ವಿವಾದಗಳ ಮೂಲಕ ಸುದ್ದಿಗೆ ಗ್ರಾಸವಾಗಿದೆ. ದೇಶಭಕ್ತಿಯ ವಿಚಾರ ಬಂದಾಗೆಲ್ಲಾ ಸೇನೆಯ ಬಗ್ಗೆ ಅತಿ ಭಾವುಕವಾಗಿ ಹೆಮ್ಮೆ ಪಡುವ ದೇಶಭಕ್ತರು ಸೇನೆಯ ಒಳಗಿನ ಹುಳುಕುಗಳ ಬಗ್ಗೆಯೂ ತೆರೆದ ಮನಸ್ಸಿನಿಂದ ಯೋಚಿಸಬೇಕಿದೆ.

Also read: ವನಿ ಎಂಬ 21ರ ತರುಣ: ನಮ್ಮ ಪಾಲಿನ ಈ ಭಯೋತ್ಪಾದಕ ಕಾಶ್ಮೀರಿಗಳ ಕಣ್ಣಲ್ಲಿ ಹೀರೊ ಆಗಿದ್ದೇಕೆ?