samachara
www.samachara.com
ಶಾರದ ಬಿಡಿ; ಕರ್ನಾಟಕದಲ್ಲೇ ನಡೆದ 5 ಚಿಟ್ ಫಂಡ್ ಪ್ರಕರಣಗಳ ಪರಿಸ್ಥಿತಿ ಏನಾಗಿದೆ ನೋಡಿ...
COVER STORY

ಶಾರದ ಬಿಡಿ; ಕರ್ನಾಟಕದಲ್ಲೇ ನಡೆದ 5 ಚಿಟ್ ಫಂಡ್ ಪ್ರಕರಣಗಳ ಪರಿಸ್ಥಿತಿ ಏನಾಗಿದೆ ನೋಡಿ...

ಕರ್ನಾಟಕಕ್ಕೆ ಬಂದರೆ ಹಣಕಾಸು ವಂಚನೆ ಪ್ರಕರಣಗಳು ಸಾಕಷ್ಟು ನಡೆದಿವೆ. ಅವುಗಳ ತನಿಖೆ ಕೂಡ ಹೆಚ್ಚು ಕಡಿಮೆ ಶಾರದ ಚಿಟ್ ಫಂಡ್ ಹಗರಣದ ತನಿಖೆಯನ್ನೇ ಹೋಲುತ್ತಿವೆ. 

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ದೇಶವನ್ನು ಬೆಚ್ಚಿ ಬೀಳಿಸಿದ ಹಗರಣಗಳ ಪೈಕಿ ಪಶ್ಚಿಮ ಬಂಗಾಳದ ಶಾರದ ಚಿಟ್ ಫಂಡ್ ಹಗರಣಕ್ಕೆ ಅಗ್ರಸ್ಥಾನ. ಪಶ್ಚಿಮ ಬಂಗಾಳದಲ್ಲಿ ಸುಮಾರು 17 ಲಕ್ಷ ಜನರಿಂದ ಚಿಟ್ ಫಂಡ್ ಹೆಸರಿನಲ್ಲಿ ಸುಮಾರು 20-30 ಸಾವಿರ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ ಹಗರಣ ಇದು. ಜಾರಿ ನಿರ್ದೇಶನಾಲಯದ ಪ್ರಕಾರ ಶಾರದ ಚಿಟ್ ಫಂಡ್ ಹಗರಣದ ಒಟ್ಟು ಮೊತ್ತ, 15,520 ಕೋಟಿ ರೂಪಾಯಿಗಳು. ಆದರೆ ಕೆಲವು ಮೂಲಗಳ ಪ್ರಕಾರ, ವಂಚನೆ ಪ್ರಮಾಣ 40 ಸಾವಿರ ಕೋಟಿ ಸುತ್ತ- ಮುತ್ತ ಇದೆ. ಒಟ್ಟಾರೆ, ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕ ವಂಚನೆ ಪ್ರಕರಣದ ತನಿಖೆ ಹಾಗೂ ಬೆಳವಣಿಗೆ ಇವತ್ತಿಗೆ ರಾಜಕೀಯ ತಿರುವು ಪಡೆದುಕೊಂಡಿದೆ. ಇದು ಪಶ್ಚಿಮ ಬಂಗಾಳದ ವಿಷಯ.

ಇನ್ನು, ಕರ್ನಾಟಕಕ್ಕೆ ಬಂದರೆ ಇಂತಹ ಹಣಕಾಸು ವಂಚನೆ ಪ್ರಕರಣಗಳು ಸಾಕಷ್ಟು ನಡೆದಿವೆ. ಅವುಗಳ ತನಿಖೆ ಕೂಡ ಹೆಚ್ಚು ಕಡಿಮೆ ಶಾರದ ಚಿಟ್ ಫಂಡ್ ಹಗರಣದ ತನಿಖೆಯನ್ನೇ ಹೋಲುತ್ತಿವೆ. ಹಣ ವಿಚಾರ ಬಂದಾಗ, ‘ಕೊಟ್ಟೋನು....’ ಗಾದೆಯನ್ನು ಇವು ಕೂಡ ನೆನಪಿಸುತ್ತಿವೆ. ಅಂದಹಾಗೆ, ಕರ್ನಾಟಕದಲ್ಲಿ ನಡೆದ ಪ್ರಮುಖ ಆರ್ಥಿಕ ವಂಚನೆ ಪ್ರಕರಣಗಳ ಸಂಕ್ಷಿಪ್ತ ವಿವರ ಇಲ್ಲಿದೆ.

1. ವಿನಿವಿಂಕ್ ಶಾಸ್ತ್ರಿ ಬಹುಕೋಟಿ ಹಗರಣ

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಚಿಟ್ ಫಂಡ್ ಹಗರಣ ಎಂದರೆ ವಿನಿವಿಂಕ್ ಸೌಹಾರ್ದ ಕೋ-ಆಪರೇಟಿವರ್ ಸೊಸೈಟಿ ಅಲಿಯಾಸ್ ವಿನಿವಿಂಕ್ ಶಾಸ್ತ್ರಿ ಬಹುಕೋಟಿ ಹಗರಣ.

2004ರಲ್ಲಿ ಬೆಳಕಿಗೆ ಬಂದ ಈ ಹಗರಣ ಇಡೀ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿತ್ತು. ವಿನಿವಿಂಕ್ ಕಂಪನಿಯ ಹಣ ದ್ವಿಗುಣಗೊಳಿಸುವ (money doubling) ತೋಪು ಯೋಜನೆಯ ದುರಾಸೆಗೆ ಬಿದ್ದು ರಾಜ್ಯಾದ್ಯಂತ ಹಣ ಕಳೆದುಕೊಂಡವರ ಸಂಖ್ಯೆ ಬರೋಬ್ಬರಿ 20,184. ಹಗರಣದ ಒಟ್ಟು ಮೊತ್ತ 200 ಕೋಟಿಗೂ ಅಧಿಕ.

ಮೈಸೂರು ಮೂಲದ ಶ್ರೀನಿವಾಸ ಶಾಸ್ತ್ರಿ ಒಡೆತನದ ಈ ಕಂಪನಿ ಬೆಂಗಳೂರು, ತುಮಕೂರು, ಶಿವಮೊಗ್ಗ ರಾಯಚೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜನರಿಗೆ ಅಧಿಕ ಬಡ್ಡಿ ಆಸೆ ತೋರಿಸಿ ಹಣ ವಸೂಲಿ ಮಾಡಿತ್ತು. ಕಂಪನಿಯಲ್ಲಿ ಹಣ ಹೂಡಿದವರಿಗೆ ಕನಿಷ್ಟ ಶೇ.10 ರಷ್ಟು ಬಡ್ಡಿ ನೀಡುವುದಾಗಿ ಭರವಸೆ ನೀಡಿತ್ತು. ಹಣದ ಆಸೆಗೆ ಬಿದ್ದ ಜನ ವಿನಿವಿಂಕ್ ಕಂಪೆನಿಯಲ್ಲಿ ಹಣ ಹೂಡಲು ಮುಗಿಬಿದ್ದರು.

2005ರ ವೇಳೆಗೆ ಈ ಕಂಪೆನಿಯಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಠೇವಣಿದಾರರು ಹಣ ಹೂಡಿದ್ದರು. ಆದರೆ ಸರಿಯಾದ ಸಮಯಕ್ಕೆ ಠೇವಣಿದಾರರಿಗೆ ಹಣ ಹಿಂದಿರುಗಿಸುವಲ್ಲಿ ಕಂಪೆನಿ ವಿಫಲವಾಗಿತ್ತು.

ರಾಜ್ಯಾದ್ಯಂತ ಹಣ ಕಳೆದುಕೊಂಡವರು ವಿನಿವಿಂಕ್ ಕಂಪೆನಿಯ ಮುಂದೆ ಮುಗಿಬಿದ್ದರು, ಪೊಲೀಸ್‌ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾದವು. ಈ ಸಮಯದಲ್ಲಿ ವಿನಿವಿಂಕ್ ಸೌಹಾರ್ದ ಕೋ-ಆಪರೇಟಿವರ್ ಸೊಸೈಟಿ ಅಧ್ಯಕ್ಷ ಶ್ರೀನಿವಾಸ ಶಾಸ್ತ್ರಿ ತಲೆ ಮರೆಸಿಕೊಂಡ. ರಾಜ್ಯ ಸರಕಾರ ಈ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಿತ್ತು. ಪ್ರಕರಣದ ಬೆನ್ನತ್ತಿದ ಅಧಿಕಾರಿಗಳು ಕೊನೆಗೂ ವಿಶಾಖಪಟ್ಟಣಂ ನಲ್ಲಿ ತಲೆ ಮರೆಸಿಕೊಂಡಿದ್ದ ವಿನಿವಿಂಕ್ ಶಾಸ್ತ್ರಿಯನ್ನು 2005 ರಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು. ಈತನ ಜೊತೆಗೆ ಪ್ರಕರಣದ ಸಂಬಂಧ 19 ಜನರನ್ನು ಬಂಧಿಸಲಾಗಿತ್ತು.

ವಿನಿವಿಂಕ್ ಶಾಸ್ತ್ರಿ. 
ವಿನಿವಿಂಕ್ ಶಾಸ್ತ್ರಿ. 

ವಿನಿವಿಂಕ್ ಶಾಸ್ತ್ರಿ ವಿರುದ್ಧ ರಾಜ್ಯಾದ್ಯಂತ ವಿವಿಧಕಡೆಗಳಲ್ಲಿ 14 ಪ್ರಕರಣಗಳು ದಾಖಲಾದವು. 2005ರಲ್ಲಿ ತನಿಖೆ ಆರಂಭಿಸಿದ ಸಿಓಡಿ ಅಧಿಕಾರಿಗಳು 2008 ಆಗಸ್ಟ್ 13ರಂದು ಬೆಂಗಳೂರಿನ ಎಸಿಎಂಎಂ ಕೋರ್ಟ್‌ನಲ್ಲಿ ಶಾಸ್ರ್ತಿ ಸೇರಿದಂತೆ ಒಟ್ಟು 20 ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಠೇವಣಿದಾರರ ಹಣದಲ್ಲಿ ವಿನಿವಿಂಕ್ ಶಾಸ್ತ್ರಿ ಹೊಸಕೋಟೆಯಲ್ಲಿ 25 ಎಕರೆ ಜಮೀನು ರಾಜ್ಯದ ಸುಮಾರು 49 ನಿವೇಶನಗಳನ್ನು ಖರೀದಿ ಮಾಡಿದ್ದ. ಇದರ ಮೌಲ್ಯ 88 ಕೋಟಿ ಎಂದು ಅಂದಾಜಿಸಲಾಗಿತ್ತು. ಅಲ್ಲದೆ ಸಿಓಡಿ ಅಧಿಕಾರಿಗಳು ವಿಚಾರಣೆ ಸಂದರ್ಭದಲ್ಲಿ 4 ಕೋಟಿ ಹಣ, ಚಿನ್ನಾಭರಣ ಹಾಗೂ ವಾಹನಗಳನ್ನು ಜಪ್ತಿ ಮಾಡಿದ್ದರು. ಈ ಕುರಿತು ತೀರ್ಪು ನೀಡಿದ್ದ ಸಿವಿಲ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ವಿನಿವಿಂಕ್ ಸಂಸ್ಥೆ ಹಾಗೂ ಅದರ ಮುಖ್ಯಸ್ಥರಿಗೆ ಸೇರಿದ ಸ್ಥಿರ ಮತ್ತು ಚರಾಸ್ತಿಗಳನ್ನು ಹರಾಜು ಹಾಕಿ ಅದರಿಂದ ಬರುವ ಹಣವನ್ನು ಠೇವಣಿದಾರರ ಆದ್ಯತೆ ಮೇರೆಗೆ ಪಾವತಿಸುವಂತೆ ಆದೇಶಿಸಿತ್ತು.

ಇವತ್ತಿಗೂ ಒಂದಷ್ಟು ನಿರಾಶ್ರಿತರು ಹಣ ಸಿಗದೆ, ನಡೆದ ವಂಚನೆಯನ್ನು ನೆನಪಿಸಿಕೊಂಡು ಮರಗುತ್ತಿದ್ದಾರೆ.

2. ತುಲ್ಸಿಯಾನ್ ಕಂಪನಿ ವಂಚನೆ

ವಿನಿವಿಂಕ್ ಶಾಸ್ತ್ರಿ ಚಿಟ್‌ಫಂಡ್ ಪ್ರಕರಣದ ಕಾವು ಇನ್ನೂ ಆರುವ ಮುನ್ನವೇ ತುಲ್ಸಿಯಾನ್ ಎಂಬ ಚಿಟ್ ಫಂಡ್ ಕಂಪೆನಿ 2009ರಲ್ಲಿ ಬೆಂಗಳೂರಿನ ಸುಮಾರು 500 ಜನರಿಗೆ ಉಂಡೆನಾಮ ತಿಕ್ಕಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಉತ್ತರ ಭಾರತ ಮೂಲದ ರಮೇಶ್ ತುಲ್ಸಿಯಾನ್, ದಿನೇಶ್ ಬನ್ಸಾಲಿ, ಕೈಲಾಶ್ ಅಗರ್ವಾಲ್, ಜಿತೇಂದ್ರ ಸಂಗ್ರಾಮ್, ಡಾ. ಆರ್. ಸಿ. ಜೈನ್ ಹಾಗೂ ಬಸವರಾಜು ಎಂಬವರು 2005 ರಲ್ಲಿ ಬೆಂಗಳೂರಿನಲ್ಲಿ ತಲ್ಸಿಯಾನ್ ಎಂಬ ಹೊಸ ಖಾಸಗಿ ಚಿಟ್‌ ಫಂಡ್ ಕಂಪನಿ ಆರಂಭಿಸಿದ್ದರು. ಮಾಗಡಿ ರಸ್ತೆ, ಕನಕಪುರ ಮುಖ್ಯ ರಸ್ತೆ ಸೇರಿದಂತೆ ಬೆಂಗಳೂರಿನ 5 ಕಡೆಗಳಲ್ಲಿ ಈ ಕಂಪನಿ ತನ್ನ ಕಚೇರಿಯನ್ನು ತೆರೆದಿತ್ತು.

ಹೋಟೆಲ್, ಟ್ರಾವೆಲ್ಸ್, ಯೋಗ, ಗಾರ್ಮೆಂಟ್ಸ್ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ವಹಿವಾಟು ನಡೆಸಲು ಹಣ ತೊಡಗಿಸಿದರೆ ಹೆಚ್ಚಿನ ಬಡ್ಡಿ ನೀಡುವುದಾಗಿ ಜನರನ್ನು ನಂಬಿಸಿತ್ತು. 1 ಲಕ್ಷ ಹಣಕ್ಕೆ ಮಾಸಿಕ ಶೇ.6 ರಷ್ಟು ಹಾಗೂ ವಾರ್ಷಿಕ ಶೇ.20 ರಷ್ಟು ಬಡ್ಡಿ ನೀಡುವುದಾಗಿ ಆಶ್ವಾಸನೆ ನೀಡಿತ್ತು.

ಇವರ ಮೋಡಿಯ ಮಾತಿಗೆ ಮರುಳಾಗಿದ್ದ ಜನರು ಈ ಕಂಪೆನಿಯಲ್ಲಿ ಲಕ್ಷಾಂತರ ರೂಪಾಯಿ ಹಣ ತೊಡಗಿಸಿದ್ದರು. 500 ಕ್ಕೂ ಅಧಿಕ ಠೇವಣಿದಾರರ ಮೂಲಕ ಸುಮಾರು 20 ಕೋಟಿಗೂ ಅಧಿಕ ಹಣವನ್ನು ವಸೂಲಿ ಮಾಡಲಾಗಿತ್ತು.

ಆದರೆ 2009 ಜನವರಿ ತಿಂಗಳಿನಿಂದ ಠೇವಣಿದಾರರಿಗೆ ಕಂಪನಿ ನೀಡಿದ ಚೆಕ್ ಬ್ಯಾಂಕ್‌ನಲ್ಲಿ ಬೌನ್ಸ್ ಆಗಲು ಪ್ರಾರಂಭಿಸಿದವು. ಎಚ್ಚೆತ್ತ ಠೇವಣಿದಾರರು ತಮ್ಮ ಹಣ ಹಿಂದಿರುಗಿಸುವಂತೆ ಪಟ್ಟು ಹಿಡಿದರು. ಕಂಪೆನಿಯೂ ಸಾಬೂಬು ಹೇಳುತ್ತಾ ಕಾಲ ಕಳೆಯಿತು. ತಾಳ್ಮೆ ಕಳೆದುಕೊಂಡ ಜನ ಕೊನೆಗೂ ಮೇ ತಿಂಗಳಲ್ಲಿ ಕಚೇರಿಯ ಎದುರೇ ಪ್ರತಿಭಟನೆ ಮಾಡಿದ್ದರು. ಪೊಲೀಸರಿಗೆ ದೂರು ನೀಡಿದ್ದರು.

ಕಂಪನಿಯ 5 ನಿರ್ದೇಶಕರನ್ನು ವಶಕ್ಕೆ ಪಡೆದ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದರು. ಆದರೆ ಠೇವಣಿದಾರರಿಗೆ ಈವರೆಗೆ ಹಣ ಈವರೆಗೆ ಹಿಂದಿರುಗಿಲ್ಲ.

ಸ್ವಯಂ ಕೃಷಿ ಚಿಟ್ ಫಂಡ್ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ಕರೆದೊಯ್ದ ಪೊಲೀಸರು. 
ಸ್ವಯಂ ಕೃಷಿ ಚಿಟ್ ಫಂಡ್ ವಂಚನೆ ಪ್ರಕರಣದಲ್ಲಿ ಆರೋಪಿಯನ್ನು ಕರೆದೊಯ್ದ ಪೊಲೀಸರು. 

3. ಸ್ವಯಂ ಕೃಷಿ ಹೆಸರಲ್ಲಿ ವಂಚನೆ

ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ 2011 ರ ಸುಮಾರಿಗೆ ತುಮಕೂರಿನ ಪಾವಗಡ ತಾಲ್ಲೂಕು ಭಾಗದಲ್ಲಿ ಆರಂಭವಾದ ಕಂಪನಿ ಸ್ವಯಂ ಕೃಷಿ ಚಿಟ್‌ ಫಂಡ್.

ಪಾವಗಡ ತಾಲೂಕಿನ ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ಹಣ ದ್ವಿಗುಣಗೊಳಿಸುವ ಆಸೆ ತೋರಿಸಿದ್ದ ಕಂಪೆನಿ 400 ರೈತರಿಂದ ತಲಾ 5 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿತ್ತು. ಆದರೆ ಒಂದೇ ವರ್ಷದಲ್ಲಿ ಬಾಗಿಲು ಎಳೆದುಕೊಂಡ ಕಂಪನಿ ರೈತರಿಗೆ ಹಣ ಹಿಂತಿರುಗಿಸದೆ ಕೋಟ್ಯಾಂತರ ಹಣ ವಂಚಿಸಿತ್ತು. ಕೊನೆಗೆ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಸ್ವಯಂ ಕೃಷಿ ಕಂಪನಿ ಆಡಳಿತ ಮಂಡಳಿಯಲ್ಲಿದ್ದ ಎಂ. ಮುರಳಿ, ಎನ್. ವೀರೇಂದ್ರ ಬಾಬು, ರಾಮಕೃಷ್ಣಾಚಾರಿ, ವಿ. ಎನ್. ರಮೇಶ್, ಮಾರೇಗೌಡ, ಗೋವಿಂದರಾಜು ಮತ್ತು ರಾಜ್‌ಗೋಪಾಲ್ ಅವರನ್ನು ಬಂಧಿಸಿದರು. ಅಷ್ಟೆ, ಪ್ರಕರಣದಲ್ಲಿ ಹಣ ಕಳೆದುಕೊಂಡವರಲ್ಲಿ ಕೆಲವರಿನ್ನೂ ನ್ಯಾಯಾಲಯ ಮೆಟ್ಟಿಲು ಸವೆಸುತ್ತಿದ್ದಾರೆ.

4. ಇಪಿಸಿ ಎಸ್‌. ಆರ್ ವಂಚನೆ

ತೀರಾ ಇತ್ತೀಚೆಗೆ 2018ರಲ್ಲಿ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ -ವಿನಿವಿಂಕ್ ಶಾಸ್ತ್ರಿಯನ್ನೂ ಮೀರಿಸುವ- ಮತ್ತೊಂದು ಚಿಟ್‌ ಫಂಡ್ ವಂಚನೆ ಪ್ರಕರಣವೇ ಇಪಿಸಿ ಎಸ್.ಆರ್.

ಈ ಕಂಪನಿಯ ಮಾಲೀಕ ಆಂಧ್ರಪ್ರದೇಶ ಮೂಲದ ಚಂದ್ರಶೇಖರ್ ಗಜ್ಜಾಲ್.

ಇಪಿಸಿ ಎಸ್.ಆರ್ ಚೈನ್ ಲಿಂಕ್ ಮಾರ್ಕೆಟಿಂಗ್ ಕಂಪನಿ. ರಾಷ್ಟ್ರಾದ್ಯಂತ ತನ್ನ ಶಾಖೆಗಳನ್ನು ಹೊಂದಿರುವ ಈ ಕಂಪನಿಯ ಕಮಿಷನ್ ಆಸೆಗೆ ಕರ್ನಾಟಕದ ಜನರೂ ಮರುಳಾಗಿದ್ದರು. ಬೆಂಗಳೂರು, ಮೈಸೂರು, ಚಿತ್ರದುರ್ಗ, ಕೋಲಾರ ಹಾಗೂ ಮಾಲೂರಿನಲ್ಲೂ ಕಂಪೆನಿ ತನ್ನ ಕಚೇರಿ ತೆರೆದಿತ್ತು.

ಕಮಿಷನ್ ಆಸೆಗೆ ಬಿದ್ದ ಸಾವಿರಾರು ಜನ ಒಂದು ಲಕ್ಷದಿಂದ 1 ಕೋಟಿ ವರೆಗೆ ಈ ಕಂಪೆನಿಯಲ್ಲಿ ಹಣ ಹೂಡಿದ್ದರು. ಆದರೆ ಕಂಪನಿಗೆ ಕೋಟ್ಯಾಂತರ ರೂಪಾಯಿ ಹಣ ಬರುತ್ತಿದ್ದಂತೆ ಮಾಲೀಕ ಚಂದ್ರಶೇಖರ್ ಗುಜ್ಜಾಲ್ ಹಣದ ಜೊತೆ ಪರಾರಿಯಾಗಿದ್ದನು. ದೇಶದಾದ್ಯಂತ 2 ಲಕ್ಷ ಸದಸ್ಯರನ್ನು ಹೊಂದಿರುವ ಈ ಕಂಪನಿ 3000 ಕೋಟಿ ಹಣ ವಂಚಿಸಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 400 ಕೋಟಿಗೂ ಅಧಿಕ ಹಣ ವಂಚಿಸಲಾಗಿದೆ.

ಬೆಂಗಳೂರಿನ ಹೆಚ್‌.ಎಸ್‌.ಆರ್ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ ಪ್ರಕರಣದ ವಿಚಾರಣೆ ನಡೆಯುತ್ತಿದೆ.

5. ವಿಕ್ರಂ ಚಿಟ್‌ ಫಂಡ್

2018 ರಲ್ಲಿ ಬಯಲಾದ ಮತ್ತೊಂದು ದೊಡ್ಡ ಹಣ ವಂಚನೆ ಪ್ರಕರಣವೇ ವಿಕ್ರಂ ಚಿಟ್ ಫಂಡ್. ಸಾಮಾನ್ಯವಾಗಿ ಎಲ್ಲರೂ ಹಣ ದ್ವಿಗುಣಗೊಳಿಸುವ ಹಾಗೂ ಕಮಿಷನ್ ಆಸೆ ತೋರಿಸಿ ಸಾಮಾನ್ಯ ಜನರಿಗೆ ಮಂಕುಬೂದಿ ಎರಚಿದರೆ, ಸಿನಿಮಾ ನಟರು ಹಾಗೂ ಕ್ರೀಡಾಪಟುಗಳಿಗೆ ಟೋಪಿ ಹಾಕಿದ ಕೀರ್ತಿ ವಿಕ್ರಂ ಚಿಟ್ ಫಂಡ್‌ಗೆ ಸಲ್ಲುತ್ತದೆ.

ಬೆಂಗಳೂರಿನಲ್ಲಿ ಹಲವೆಡೆ ಕಚೇರಿ ತೆಗೆದಿದ್ದ ಈ ಕಂಪನಿ 2002 ರಿಂದ 2018ರ ವರೆಗೆ ವ್ಯವಹಾರ ನಡೆಸಿದೆ. ಖ್ಯಾತ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ, ಖ್ಯಾತ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರಿದಂತೆ ಹಲವಾರು ಜನರಿಗೆ ಸುಮಾರು 431 ಕೋಟಿಗೂ ಅಧಿಕ ಹಣ ವಂಚಿಸಿತ್ತು.

550 ಜನ ಈವರೆಗೆ ತಮಗೆ ವಂಚನೆ ನಡೆದಿದೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ವಿಚಾರಣೆ ವೇಳೆ ವಿಕ್ರಂ ಚಿಟ್‌ ಫಂಡ್ ಕಂಪೆನಿಯ ಹೆಸರಿನಲ್ಲಿ ಯಾವುದೇ ಆಸ್ತಿ ಇರುವುದು ಕಂಡು ಬಂದಿಲ್ಲ. ಅಲ್ಲದೆ ಒಬ್ಬರಿಂದ ಹೂಡಿಕೆ ಮಾಡಿಕೊಂಡ ಹಣವನ್ನು ಮತ್ತೊಬ್ಬರಿಗೆ ಬಡ್ಡಿ ರೂಪದಲ್ಲಿ ರಿಟರ್ನ್ ಮಾಡಲಾಗಿದೆ. ಹೀಗಾಗಿ ಈ ಕಂಪನಿ ಖಾತೆಯಲ್ಲಿ ಹಣವಾಗಲಿ, ಕಂಪನಿ ಹೆಸರಿನಲ್ಲಿ ಯಾವುದೇ ಆಸ್ತಿಯಾಗಲಿ ಇಲ್ಲದ ಕಾರಣ ವಂಚನೆಗೆ ಒಳಗಾಗಿರುವ ಠೇವಣಿದಾರರಿಗೆ ಹಣ ಹಿಂದಿರುಗುವ ಯಾವುದೇ ಸೂಚನೆಗಳು ಇಲ್ಲದಾಗಿದೆ.

ಚಿಟ್‌ ಫಂಡ್‌ ಕಂಪೆನಿಯ ರಾಘವೇಂದ್ರ, ಸುರೇಶ್, ನಾಗರಾಜ್ ಹಾಗೂ ನರಸಿಂಹ ವಿರುದ್ಧ ನಗರದ 16 ಪೊಲೀಸ್ ಠಾಣೆಯಲ್ಲಿ 300 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳನ್ನು ಜೈಲಿಗೆ ಅಟ್ಟಿದ್ದರು. ಆದರೆ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡಿದೆ.

ಒಟ್ಟಾರೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಚಿಟ್‌ ಫಂಡ್ ಹೆಸರಿನಲ್ಲಿ ಜನರನ್ನು ವಂಚಿಸುವ ದೊಡ್ಡ ಜಾಲವೇ ಇದೆ. ಬದಲಾದ ಕಾಲಘಟ್ಟದಲ್ಲಿ ಹೊಸ ಹೊಸ ಯೋಚನೆಗಳ ಜೊತೆಗೆ ಜನರ ಎದುರು ಬರುವ ಇಂತಹ ಚಿಟ್‌ ಫಂಡ್‌ನವರಿಗೆ ಸಮಾಜದ ತಳ ಹಾಗೂ ಮಧ್ಯಮ ವರ್ಗದವರ ದುರಾಸೆಯನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಹಣ ದ್ವಿಗುಣವಾಗುತ್ತದೆ ಎಂದು ಆಸೆಗೆ ಬೀಳುವ ಜನ ಕಂಪೆನಿಗಳಲ್ಲಿ ಹಣ ಹೂಡುತ್ತಾರೆ. ಒಂದು ಹಂತದವರೆಗೆ ಸರಿಯಾಗಿಯೇ ಹಣ ಪಾವತಿಸುವ ಇಂತಹ ಕಂಪೆನಿಗಳು ಕೊನೆಗೊಂದು ದಿನ ಹಣದೊಂದಿಗೆ ಪರಾರಿಯಾಗುತ್ತವೆ.

ಹಣ ಕಳೆದುಕೊಂಡು ಬೀದಿಗೆ ಬೀಳುವ ಜನ ಮೋಸ ಮಾಡಿದವರ ವಿರುದ್ಧ ಪ್ರಕರಣ ದಾಖಲು ಮಾಡುತ್ತಾರೆ. ತನಿಖೆಯೂ ನಡೆಯುತ್ತದೆ. ಆದರೆ ಜನರ ಸ್ಮೃತಿ ಪಟಲದಿಂದ ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದೆಡೆ ಇಂತಹದ್ದೇ ಮತ್ತೊಂದು ಪ್ರಕರಣ ದಾಖಲಾಗಿರುತ್ತದೆ. ಎಲ್ಲೋ ಕೆಲವು ಪ್ರಕರಣಗಳು ಮಾತ್ರ ರಾಜಕೀಯ ಕಾರಣಗಳಿಗೆ ಬಹುಕಾಲ ಜೀವಂತವಾಗಿರುತ್ತವೆ; ಶಾರದಾ ಚಿಟ್‌ ಫಂಡ್ ಹಗರಣ ಅದಕ್ಕೊಂದು ಉದಾಹರಣೆ ಅಷ್ಟೆ.