samachara
www.samachara.com
ನಿಜಕ್ಕೂ ಕೇಂದ್ರದ 6000 ರೂಪಾಯಿ ನೆಚ್ಚಿಕೊಂಡಿದ್ದಾರೆಯೇ ದೇಶದ ಸಣ್ಣ ರೈತರು?
COVER STORY

ನಿಜಕ್ಕೂ ಕೇಂದ್ರದ 6000 ರೂಪಾಯಿ ನೆಚ್ಚಿಕೊಂಡಿದ್ದಾರೆಯೇ ದೇಶದ ಸಣ್ಣ ರೈತರು?

ದೇಶದ ಸಣ್ಣ ರೈತರು ಇಂದು ನೆಮ್ಮದಿ ಜೀವನ ನಡೆಸುತ್ತಿಲ್ಲ. ಹಾಗೆಂದು ಕೇಂದ್ರ ಸರಕಾರದ 6000 ರೂಪಾಯಿಗಳನ್ನೇ ನೆಚ್ಚಿಕೊಳ್ಳುವಷ್ಟು ನಿಕೃಷ್ಟವಾಗಿಯೂ ಅವರ ಪರಿಸ್ಥಿತಿ ಇಲ್ಲ. ರೈತರ ಅಂಕಿ ಅಂಶಗಳ ನೋಡಿದರೆ ಹೊಸ ಆಯಾಮವೊಂದು ಸಿಗುತ್ತದೆ. 

ದಯಾನಂದ

ದಯಾನಂದ

“ಮಳೆ ಕಡಿಮೆ ಆಯ್ತು ಅಂದ್ರೆ ಹೊಲಕ್ಕೆ ಹುಳ್ಳಿ ಚೆಲ್ಲುದ್ರೂ ನಾಕ್‌ ಚೀಲ ಹುಳ್ಳಿಕಾಳು ಆಯ್ತವೆ. ಒಂದ್‌ ಚೀಲಕ್ಕೆ ಕಮ್ಮಿ ಅಂದ್ರೂ 3 ಸಾವ್ರ ಸಿಕ್ರೂ, ಒಂದ್‌ ಮೂಟೆ ಮನೆಗ್‌ ಇಟ್ಟಕಂಡು ಮೂರ್‌ಮೂಟೆ ಹುಳ್ಳಿ ಮಾರ್‌ಕಂಡ್ರೂ ಏನಿಲ್ಲ ಅಂದ್ರೂ 9 ಸಾವ್ರ ಸಿಗ್ತದೆ. ಇವ್ರು ನೋಡುದ್ರೆ ವರ್ಷುಕ್ಕೆ 6 ಸಾವ್ರ ಕೊಟ್ಟು ರೈತ್ರ ಉದ್ಧಾರ ಮಾಡ್ತೀವಿ ಅಂತಾವ್ರೆ...”

ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಡಿ. ಪಾಳ್ಯದ ಸಣ್ಣ ರೈತ ಕೆಂಪಣ್ಣ ಅವರ ಕಣ್ಣಿಗೆ ಕೇಂದ್ರ ಸರಕಾರದ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ’ ಕಾಣುತ್ತಿರುವುದು ಹೀಗೆ. ಕೆಂಪಣ್ಣ ಅವರಿಗಿರುವುದು 2 ಎಕರೆ ಹೊಲ.

ಈ ಎರಡು ಎಕರೆ ಹೊಲದಲ್ಲಿ ಮಳೆಯಾಶ್ರಯದಲ್ಲಿ ರಾಗಿ ಬೆಳೆಯುವ ಅವರು ಉತ್ತಮ ಮಳೆಯಾದರೆ ವರ್ಷಕ್ಕೆ ಸುಮಾರು 20 ಚೀಲ ರಾಗಿ ಬೆಳೆಯುತ್ತಾರೆ. ಮುಂಗಾರಿನಲ್ಲಿ ಹೆಸರು, ಇಲ್ಲವೇ ಹುರುಳಿ ಬೆಳೆಯುವ ಕೆಂಪಣ್ಣ ಹಿಂಗಾರಿಗೆ ಮುಖ್ಯ ಬೆಳೆ ರಾಗಿ ಬೆಳೆದು ಮಾರಾಟದಿಂದ ವರ್ಷಕ್ಕೆ ಕನಿಷ್ಠ 40 ಸಾವಿರ ರೂಪಾಯಿ ಆದಾಯ ಗಳಿಸುತ್ತಾರೆ.

ಹೆಸರು ಅಥವಾ ಹುರುಳಿ ಬೆಳೆಗಳ ಮಾರಾಟದಿಂದ ಕನಿಷ್ಠ 10 ಸಾವಿರ ರೂಪಾಯಿ ಆದಾಯ ಕೆಂಪಣ್ಣ ಅವರಿಗಿದೆ. ಕೃಷಿಯ ಜತೆಗೆ 10ರಿಂದ 15 ಮೇಕೆಗಳನ್ನು ಹೊಂದಿರುವ ಅವರಿಗೆ ಇದರಿಂದ ವರ್ಷಕ್ಕೆ ಏನಿಲ್ಲವೆಂದರೂ 30ರಿಂದ 40 ಸಾವಿರ ರೂಪಾಯಿ ವರಮಾನ ಸಿಗುತ್ತದೆ. 50ರಿಂದ 60 ಕೋಳಿಗಳೂ ಅವರ ಮನೆಯಲ್ಲಿವೆ. ಸ್ಥಳೀಯ ಸಂತೆಯಲ್ಲೇ ನಾಟಿ ಕೋಳಿಯೊಂದಕ್ಕೆ 300 ರೂಪಾಯಿಯಿಂದ 500 ರೂಪಾಯಿ ಬೆಲೆ ಇದೆ. ಸಂತೆಯ ಖರ್ಚಿಗೆ (ದಿನದ ಮನೆಯ ದಿನಸಿ, ಇನ್ನಿತರ ಖರ್ಚಿಗೆ) ಅವರು ಕೋಳಿಗಳನ್ನು ಮಾರಿಕೊಳ್ಳುತ್ತಾರೆ.

ಕೃಷಿಯನ್ನೇ ನೆಚ್ಚಿಕೊಂಡಿರುವ ಕೆಂಪಣ್ಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬ ಹೆಣ್ಣು ಮಗಳ ಮದುವೆಯಾಗಿದೆ. ಇನ್ನೊಬ್ಬಳು 10ನೇ ತರಗತಿ ಓದುತ್ತಿದ್ದಾಳೆ. ಕೆಂಪಣ್ಣ ಅವರಿಗೆ ಕೃಷಿ ಬಿಟ್ಟರೆ ಬೇರೆ ಆದಾಯದ ಮೂಲ ಇಲ್ಲ. ಕೃಷಿ ಹಾಗೂ ಸಣ್ಣ ಪ್ರಮಾಣದ ಮೇಕೆ, ಕೋಳಿ ಸಾಕಾಣಿಕೆಗಳಿಂದ ಕೆಂಪಣ್ಣ ಅವರಿಗೆ ವಾರ್ಷಿಕ ಕನಿಷ್ಠ 1 ಲಕ್ಷ ರೂಪಾಯಿ ಮೀರಿದ ಆದಾಯವಿದೆ.

ಸಣ್ಣ ರೈತರಿಗೆ ವಾರ್ಷಿಕ 6000 ರೂಪಾಯಿ ಸಹಾಯ ಧನ ನೀಡುವ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ’ಯಿಂದ ಬಡ ರೈತರಿಗೆ ಭಾರೀ ಅನುಕೂಲವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿಕೊಳ್ಳುತ್ತಿದೆ. ಇದನ್ನೇ ದೇಶದ ಕೃಷಿ ಬಿಕ್ಕಟ್ಟಿನ ಸಮಸ್ಯೆಗೆ ತಾವು ನೀಡಿದ ಪರಿಹಾರವೆಂದೂ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಸಾರುತ್ತಿರುವ ಬಿಜೆಪಿ, ಚುನಾವಣೆ ವೇಳೆಗೆ ಇದನ್ನೇ ಪ್ರಮುಖ ವಿಚಾರವಾಗಿ ಬಳಸಿಕೊಳ್ಳಲು ಈಗಾಗಲೇ ಸಿದ್ಧತೆ ನಡೆಸಿದೆ.

ಈ ಸಹಾಯ ಧನ ಯೋಜನೆಯನ್ನು ಒಂದು ಕಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯಾಗಿ ಆಡಳಿತ ಪಕ್ಷದ ಎಲ್ಲಾ ನಾಯಕರು ತಮ್ಮ ಸರಕಾರದ ಮಹಾ ಸಾಧನೆ ಎಂದು ಹೇಳಿಕೊಂಡು ತಿರುಗುತ್ತಿದ್ದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷಗಳ ಮುಖಂಡರು ಈ ಸಹಾಯ ಧನದಿಂದ ರೈತರಿಗೆ ಏನೇನೂ ಪ್ರಯೋಜನವಿಲ್ಲ ಎಂದು ಟೀಕಿಸುತ್ತಿದ್ದಾರೆ.

ಬಜೆಟ್‌ನಲ್ಲಿ ಈ ಯೋಜನೆ ಘೋಷಣೆಯಾದ ದಿನವೇ ಇದನ್ನು ಮೋದಿ ಉದ್ದೇಶಿಸಿ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ, “ಅಧಿಕಾರದಲ್ಲಿದ್ದ 5 ವರ್ಷದಲ್ಲಿ ರೈತರ ಬದುಕನ್ನು ಹಾಳು ಮಾಡಿ ಈಗ ದಿನಕ್ಕೆ 17 ರೂಪಾಯಿ ನೀಡುವ ಮೂಲಕ ರೈತರನ್ನು ಅಪಮಾನಿಸಲಾಗುತ್ತಿದೆ” ಎಂದಿದ್ದರು. ಕೇಂದ್ರ ಸರಕಾರ ರೈತರ ಮತಬ್ಯಾಂಕ್‌ ಗಟ್ಟಿ ಮಾಡಿಕೊಳ್ಳಲೆಂದೇ ಈ ಯೋಜನೆಯನ್ನು ಘೋಷಿಸಿದೆ ಎಂದು ವಿಪಕ್ಷಗಳು ಟೀಕಿಸಿದ್ದವು.

ವಿಪಕ್ಷಗಳ ಟೀಕೆಗೆ ಲೇಹ್‌ನಲ್ಲಿ ಭಾನುವಾರ ಪ್ರತಿಕ್ರಿಯಿಸಿದ್ದ ನರೇಂದ್ರ ಮೋದಿ, “ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ರೈತರ ಪಾಲಿಗೆ ಅನುಕೂಲವಾದ ಯೋಜನೆ. ಬಡ ರೈತರ ಪಾಲಿಗೆ 6000 ರೂಪಾಯಿಯ ಮಹತ್ವ ಏನು ಎಂಬುದು ದೆಹಲಿಯಲ್ಲಿ ಎಸಿ ರೂಮ್‌ನಲ್ಲಿ ಕುಳಿತವರಿಗೇನು ಗೊತ್ತಾಗುತ್ತದೆ” ಎಂದು ತಮ್ಮ ಸರಕಾರದ ಹೊಸ ಯೋಜನೆಯನ್ನು ಸಮರ್ಥಿಸಿಕೊಂಡಿದ್ದರು.

ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಮುಖಂಡರು ಈ ವಿಚಾರವಾಗಿ ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ಮುಳುಗಿದ್ದಾರೆಯೇ ಹೊರತು ರೈತರ ನೈಜ ಆದಾಯ ಬಗ್ಗೆ ಎರಡೂ ಕಡೆಯವರು ಸೊಲ್ಲೆತ್ತಲಿಲ್ಲ. ನರೇಂದ್ರ ಮೋದಿ ಮತ್ತು ರಾಹುಲ್‌ ಗಾಂಧಿ ಈವರೆಗೆ ಹೇಳದಿರುವ ವಿಷಯವೆಂದರೆ ದೇಶದ ಸಣ್ಣ ರೈತರ ವಾರ್ಷಿಕ ತಲಾ ಆದಾಯ ಎಷ್ಟು ಎಂಬುದು.

ಕೇಂದ್ರ ಸರಕಾರದ ಈ 6000 ರೂಪಾಯಿ ಸಹಾಯ ಧನ ಸಣ್ಣ ಹಾಗೂ ಮಧ್ಯಮ ರೈತರ ವಾರ್ಷಿಕ ತಲಾ ಆದಾಯದ 6 ಪಟ್ಟು ಹೆಚ್ಚು ಎಂದು ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಹೇಳಿದ್ದಾರೆ. ಆದರೆ, ತಮ್ಮ ಈ ಹೇಳಿಕೆಗೆ ಅಂಕಿಸಂಖ್ಯೆಗಳ ಮೂಲವೇನು ಎಂಬುದನ್ನು ಸುಬ್ರಮಣಿಯನ್‌ ಬಹಿರಂಗ ಪಡಿಸಿಲ್ಲ.

ಹಾಗಾದರೆ ನಿಜಕ್ಕೂ ದೇಶದ ರೈತರ ವಾರ್ಷಿಕ ತಲಾ ಆದಾಯ ಎಷ್ಟು? ಸರಕಾರ ಒಂದು ವರ್ಷಕ್ಕೆ 6000 ರೂಪಾಯಿ ಕೊಟ್ಟರೆ ರೈತರಿಗೆ ಅದರಿಂದ ಭಾರೀ ಪ್ರಮಾಣದ ಪ್ರಯೋಜನವೇನಾದರೂ ಆಗಲಿದೆಯೇ? ದೇಶದ ಸಣ್ಣ ರೈತರ ತಲಾ ಆದಾಯ 6000 ರೂಪಾಯಿಗಿಂತ ಕಡಿಮೆ ಇದೆಯೇ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ದೇಶದ ಅನ್ನದಾತ ಸಮುದಾಯದ ಪರಿಸ್ಥಿತಿ ತೀರಾ ಕೇಂದ್ರ ಸರಕಾರ ಹೇಳುತ್ತಿರುವ ಮಟ್ಟಕ್ಕೆ ನಿಕೃಷ್ಟವಾಗಿಲ್ಲ ಎಂಬುದು ಕಾಣುತ್ತದೆ.

ದೇಶದ ಸಣ್ಣ ರೈತರ ಸರಾಸರಿ ವಾರ್ಷಿಕ ತಲಾ ಆದಾಯಕ್ಕೆ ಹೋಲಿಸಿದರೆ ಕೇಂದ್ರ ಸರಕಾರ ಘೋಷಿಸಿರುವ ಈ 6000 ರೂಪಾಯಿ ಸಹಾಯ ಧನ ಸಣ್ಣ ರೈತರ ತಲಾ ಆದಾಯದ ಶೇಕಡ 5ರಷ್ಟು ಮಾತ್ರ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹೇಳುತ್ತಿರುವಂತೆ ವರ್ಷಕ್ಕೆ 6000 ರೂಪಾಯಿ ಕೊಡುವುದು ರೈತರಿಗೆ ಮಹಾ ಉಪಕಾರ ಮಾಡಿದಂತೇನೂ ಅಲ್ಲ. ಯಾಕೆಂದರೆ ಅತಿ ಸಣ್ಣ ರೈತರೂ ತಿಂಗಳಿಗೆ ಸರಾಸರಿ 6000ಕ್ಕಿಂತ ಹೆಚ್ಚು ಆದಾಯವನ್ನು ಈಗಾಗಲೇ ಹೊಂದಿದ್ದಾರೆ.

2018-19ರಲ್ಲಿ ದೇಶದ ಸಾಮಾನ್ಯ ರೈತರ ಮಾಸಿಕ ತಲಾ ಆದಾಯ ಅಂದಾಜು 10,329 ರೂಪಾಯಿಯಷ್ಟಿದೆ ಎಂದು 'ಹಿಂದೂಸ್ತಾನ್‌ ಟೈಮ್ಸ್‌'ನ ವಿಶ್ಲೇಷಣೆ ಹೇಳುತ್ತದೆ. ವರ್ಷಕ್ಕೆ ಅಂದಾಜು 1,23,948 ರೂಪಾಯಿ ತಲಾ ಆದಾಯ ಪಡೆಯುವ ಈ ರೈತರಿಗೆ ಅವರ ಒಟ್ಟು ವಾರ್ಷಿಕ ಆದಾಯದ ಶೇಕಡ 5ಕ್ಕಿಂತ ಕಡಿಮೆ ಮೊತ್ತವಾದ 6000 ರೂಪಾಯಿಯನ್ನು ಸಹಾಯ ಧನವಾಗಿ ಕೊಡಲು ಕೇಂದ್ರ ಸರಕಾರ ಮುಂದಾಗಿದೆ. ಅಲ್ಲದೆ, ಈ ಸಹಾಯ ಧನದಿಂದಲೇ ಸಣ್ಣ ರೈತರ ಬಾಳು ಹಸನಾಗುತ್ತದೆ ಎಂದು ಎನ್‌ಡಿಎ ಸರಕಾರ ಬಿಂಬಿಸಿಕೊಳ್ಳಲು ಶುರು ಮಾಡಿದೆ.

ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್‌ಎಸ್‌ಎಸ್‌ಒ) ಮಾಹಿತಿಯನ್ನು ಆಧರಿಸಿ ನಡೆಸಿರುವ ಈ ವಿಶ್ಲೇಷಣೆಯಲ್ಲಿ ಕೃಷ್ಣಮೂರ್ತಿ ಸುಬ್ರಮಣಿಯನ್‌ ಉಲ್ಲೇಖಿಸಿರುವ ತಲಾ ಆದಾಯಕ್ಕಿಂತ ಹೆಚ್ಚೇ ಆದಾಯವನ್ನು ದೇಶದ ಸಾಮಾನ್ಯ ರೈತರು ಪಡೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

2012-13ರಲ್ಲಿ 6,426 ರೂಪಾಯಿ ಇದ್ದ ಸಾಮಾನ್ಯ ರೈತರ ಮಾಸಿಕ ತಲಾ ಆದಾಯ 2018-19ರಲ್ಲಿ 10,329 ರೂಪಾಯಿಯಷ್ಟಿದೆ ಎಂದು ಎನ್‌ಎಸ್‌ಎಸ್‌ಒ ಅಂಕಿಸಂಖ್ಯೆ ಹಾಗೂ ಆರ್‌ಬಿಐ ಮಾಹಿತಿ ಆಧರಿಸಿದ 'ಹಿಂದೂಸ್ತಾನ್‌ ಟೈಮ್ಸ್‌' ವಿಶ್ಲೇಷಣೆ ಹೇಳುತ್ತದೆ. ಬಹುಶಃ ಈ ಕಾರಣಕ್ಕೆ ಕೆಂಪಣ್ಣನ ರೀತಿಯ ರೈತರು ಸರಕಾರದ ಇಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ಮೊದಲೇ ಅಲ್ಲಗೆಳೆಯುತ್ತಿದ್ದಾರೆ.

ವರ್ಷುಕ್ಕೆ ಆರ್‌ ಸಾವ್ರ ಕೊಟ್ಟು ರೈತ್ರುನ್‌ ಉದ್ಧಾರ ಮಾಡ್ತೀವಿ ಅನ್ನದು ಬರೀ ಓಟ್‌ ರಾಜ್‌ಕೀಯ. ಮಾರ್ಚ್‌ ಕೊನೆಹೊತ್‌ಗೆ ಎರಡ್‌ ಸಾವ್ರ ಅಕೌಂಟ್‌ಗೆ ಹಾಕ್ತೀವಿ ಅಂತಾವ್ರೆ. ಮೊದ್ಲು ಸರ್ವೆ ಆಗ್ಬೇಕಂತೆ, ಮೊದ್ಲು ಕಂತು ಎರಡ್‌ ಸಾವ್ರ ಬರಬೋದು ಅಷ್ಟೆ. ಆಮೇಲೆ ಯಾವ್‌ ಸರ್‌ಕಾರ ಬತ್ತದೋ ಯಾರಿಗ್‌ ಗೊತ್ತು. ಅಷ್ಟುಕ್ಕೂ ಗೌರ್ಮೆಂಟ್‌ ಎರಡ್ ಸಾವ್ರ ಕೊಡ್ತದೆ ಅಂತ ರೈತ್ರೇನು ಅದುನ್ನೇ ನೆಚ್‌ಕಂಡ್‌ ಕುಂತಿಲ್ಲ.
- ಕೆಂಪಣ್ಣ, ಸಣ್ಣ ರೈತ

ಎನ್‌ಎಸ್‌ಎಸ್‌ಒ 2016ರಲ್ಲಿ ಪ್ರಕಟಿಸಿದ 2012ರ ಜುಲೈನಿಂದ 2013ರ ಜೂನ್‌ವರೆಗಿನ ವಾರ್ಷಿಕ ವರದಿಯ ಪ್ರಕಾರ ದೇಶದ ಸಾಮಾನ್ಯ ರೈತರ ಮಾಸಿಕ ತಲಾ ಆದಾಯ 6,426 ರೂಪಾಯಿ, ವರ್ಷಕ್ಕೆ 77,112 ರೂಪಾಯಿ. ಅಂದರೆ, ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರುವ ಒಂದು ವರ್ಷದ ಹಿಂದೇ ದೇಶದ ಸಾಮಾನ್ಯ ರೈತರ ಮಾಸಿಕ ಆದಾಯವೇ 6 ಸಾವಿರಕ್ಕಿಂತ ಹೆಚ್ಚಾಗಿತ್ತು.

ಹತ್ತು ಗುಂಟೆಯಿಂದ 1 ಎಕರೆ ಕೃಷಿ ಭೂಮಿ ಇರುವ ಸಣ್ಣ ರೈತರ ತಲಾ ಮಾಸಿಕ ಆದಾಯ 4,152 ರೂಪಾಯಿ ಇದ್ದರೆ, 25 ಎಕರೆ ಅಥವಾ ಅದಕ್ಕಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರ ಮಾಸಿಕ ತಲಾ ಆದಾಯ 41,388 ರೂಪಾಯಿಯಷ್ಟಿರಲಿದೆ ಎಂಬ ಅಂದಾಜು 'ಹಿಂದೂಸ್ತಾನ್‌ ಟೈಮ್ಸ್‌'ನ ವಿಶ್ಲೇಷಣೆಯಲ್ಲಿದೆ.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗಾಗಿ ನಿಗಧಿ ಪಡಿಸಿರುವ ಮಾನದಂಡದ ಐದು ಎಕರೆ ಕೃಷಿ ಭೂಮಿಯ ಹೊಂದಿರುವ ರೈತರು ತಿಂಗಳಿಗೆ ಕನಿಷ್ಠ ಎಂದರೂ 5,240 ರೂಪಾಯಿ ಗಳಿಸುವ ಅಂದಾಜಿದೆ. ಅಂಕಿಸಂಖ್ಯೆಗಳ ಹೊರತಾಗಿಯೂ ಸಣ್ಣ ಹಿಡುವಳಿದಾರರೆಂದು ಸರಕಾರ ಗುರುತಿಸುವ 2.5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರೂ ಅತಿ ಕಡಿಮೆ ಮಳೆಗೆ ಕನಿಷ್ಠ ಹುರುಳಿ ಬೆಳೆದುಕೊಂಡರೂ 2.5 ಎಕರೆ ಜಮೀನಿನಲ್ಲಿ ಕನಿಷ್ಠ 4 ಕ್ವಿಂಟಾಲ್‌ ಹುರುಳಿ ಬೆಳೆದುಕೊಳ್ಳಬಹುದು. ಇದನ್ನು ಮಾರಿಕೊಂಡರೇ ಕನಿಷ್ಠ 12 ಸಾವಿರ ರೂಪಾಯಿ ಆದಾಯ ಸಣ್ಣ ರೈತರಿಗೆ ಸಿಗಲಿದೆ.

ಈ ಅಂಕಿಸಂಖ್ಯೆಗಳ ಮಾಹಿತಿಯನ್ನು ಇಟ್ಟುಕೊಂಡು ನಾವು ಹೇಳಲು ಹೊರಟಿರುವುದು ದೇಶದ ರೈತರು ಕೃಷಿ ಬಿಕ್ಕಟ್ಟಿನಲ್ಲಿಲ್ಲ, ರೈತರೆಲ್ಲರೂ ಲಕ್ಷ ಲಕ್ಷ ಎಣಿಸಿಕೊಂಡು ಸುಖವಾಗಿದ್ದಾರೆ ಎಂದಲ್ಲ. ಕೇಂದ್ರ ಸರಕಾರ ಬಿಂಬಿಸುತ್ತಿರುವುದಕ್ಕಿಂತ ರೈತರ ಸ್ಥಿತಿ ಸಾಕಷ್ಟು ಉತ್ತಮವಾಗಿದೆ ಎಂಬುದು ಈ ಅಂಕಿಸಂಖ್ಯೆ- ಅಂದಾಜುಗಳಿಂದ ಗೊತ್ತಾಗುತ್ತದೆ.

ಮಾರುಕಟ್ಟೆ ವ್ಯವಸ್ಥೆ ಬಲಪಡಿಸುವುದು, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ದಾಸ್ತಾನಿಗೆ ವ್ಯವಸ್ಥೆ ಮಾಡುವುದು, ಗ್ರಾಮೀಣ ರಸ್ತೆ ಸುಧಾರಣೆ, ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ, ರೈತರು ಹಾಗೂ ಕೃಷಿ ಇಲಾಖೆ, ಕೃಷಿ ತಜ್ಞರ ನಡುವಿನ ಕಂದರ ಕಡಿಮೆ ಮಾಡುವ ಕಡೆಗೆ ಸರಕಾರ ಯೋಜನೆಗಳನ್ನು ತರಬೇಕು.

ಕೃಷಿಕರಿಗೆ ಪ್ರಯೋಜನವಾಗುವ ದೀರ್ಘಾವಧಿಯ ಯೋಜನೆಗಳನ್ನು ಸರಕಾರ ಜಾರಿಗೆ ತರಬೇಕಿದೆಯೋ ಹೊರತು, ಚುನಾವಣಾ ಪೂರ್ವದಲ್ಲಿ ನೇರವಾಗಿ ರೈತರ ಬ್ಯಾಂಕ್‌ ಅಕೌಂಟ್‌ಗಳಿಗೆ ಹಣ ಹಾಕುವ ಚುನಾವಣಾ ಗಿಮಿಕ್‌ಗಳಿಂದ ರೈತರಿಗೆ ಹೆಚ್ಚೇನೂ ಪ್ರಯೋಜನವಿಲ್ಲ. ಈ ಅರಿವು ದೇಶದ ಸಾಮಾನ್ಯ ತಿಳಿವಳಿಕೆ ಇರುವ ರೈತರಿಗೂ ಇದೆ ಎಂಬ ಸತ್ಯ ಮೊದಲು ಸರಕಾರ ಹಾಗೂ ವಿರೋಧ ಪಕ್ಷಗಳಿಗೆ ಅರ್ಥವಾಗಬೇಕಿದೆ.