ಚಂದಾ ಕೊಚ್ಚಾರ್: ಕಾರ್ಪೊರೇಟ್ ಜಗತ್ತಿನ ‘ಸೆಲೆಬ್ರಿಟಿ ಸಿಇಓ’ ಒಬ್ಬರ ದುರಂತ ಕತೆ
ತಮ್ಮ ಬಹಿರಂಗ ವ್ಯಕ್ತಿತ್ವದ ಬಗ್ಗೆ ವಿಪರೀತ ಎನ್ನಿಸುವಷ್ಟು ಗಮನ ಹರಿಸಿದಾಕೆ ತನ್ನ ವೃತ್ತಿ ಬಗ್ಗೆ ಆ ಕಾಳಜಿ ವಹಿಸಲಿಲ್ಲ. ಪರಿಣಾಮ ಆಕೆ ಪರ್ವತದ ತುತ್ತ ತುದಿಯಿಂದ ಪ್ರಪಾತಕ್ಕೆ ಬೀಳಬೇಕಾಯಿತು. ಇದು ಅಪರೂಪದಲ್ಲಿ ಅಪರೂಪದ ವ್ಯಕ್ತಿಚಿತ್ರ.
ಇದು ಭಾರತದ ಕಾರ್ಪೊರೇಟ್ ಜಗತ್ತಿನ ಸೆಲೆಬ್ರಿಟಿ ಸಿಇಒ ಒಬ್ಬರ ದುರಂತ ಕಥೆ.
ಆಕೆ ವೃತ್ತಿ ಬದುಕು ಆರಂಭಿಸಿದ ಕಂಪನಿಯಲ್ಲಿಯೇ ಒಂದು ದಿನ ಸಿಇಒ ಆಗಿ ಕುಳಿತುಕೊಂಡಿದ್ದರು. ಹಲವರು ಹಿರಿಯ ಮುಖಗಳನ್ನು ಹಿಂದಿಕ್ಕಿ ಭಾರತದ ಮೂರನೇ ಅತಿ ದೊಡ್ಡ ಬ್ಯಾಂಕ್ನ ಸಿಇಒ ಹುದ್ದೆಗೇರಿದ್ದರು. ಅವೆಲ್ಲಾ ಸುಲಭದ ಮಾತಾಗಿರಲಿಲ್ಲ. ಅದೂ ಪುರುಷರ ಅಧಿಪತ್ಯವೇ ಆಗಿದ್ದ ಸಿಇಒಗಳ ವಲಯದಲ್ಲಿ ಸೀರೆ ಉಟ್ಟು, ಮಿರಿ ಮಿರಿ ಮಿಂಚುವ ವಜ್ರದ ಆಭರಣ ತೊಟ್ಟ ಆಕೆ ಹಲವರ ಹುಬ್ಬೇರಿಸಿದ್ದರು. ದೇಶದ ವೃತ್ತಿಪರ ಮಹಿಳೆಯರ ಪಾಲಿಗೆ ಮಾದರಿಯಾಗಿದ್ದವರು.
ಆಕೆ ತಾನು ಬೆಳೆದಿದ್ದಲ್ಲದೆ, ತನ್ನ ಸಂಸ್ಥೆಯನ್ನು ಬೆಳೆಸಿದ್ದಲ್ಲದೆ ತನ್ನ ಸುತ್ತ ನಾಜೂಕಾದ ಪ್ರಭಾವಳಿಯನ್ನು ಬೆಳಿಸಿಕೊಂಡಿದ್ದರು. ಪರಿಣಾಮ ಆಕೆಯಂಥ ಸಿಇಒ ನಮ್ಮ ಬ್ಯಾಂಕ್ಗೂ ಬೇಕು ಎಂದು ಸಾರ್ವಜನಿಕ ರಂಗದ ಬ್ಯಾಂಗ್ಗಳೇ ಹೇಳುವಷ್ಟರ ಮಟ್ಟಿಗೆ ಚಂದಾ ಕೊಚ್ಚಾರ್ ಎಂಬ ಹೆಸರು ಉದ್ಯಮ ವಲಯದಾಚೆಗೆ ಹಬ್ಬಿತ್ತು.
ಆದರೆ ದಂತ ಗೋಪುರ ರಾತೋ ರಾತ್ರಿ ಕುಸಿದು ಬಿದ್ದಿದೆ. ವೃತ್ತಿ ಬದುಕು ಆರಂಭಿಸಿದ, ದೀರ್ಘ ಕಾಲ ಮುನ್ನಡೆಸಿದ ಸಂಸ್ಥೆಯೇ ಆಕೆಯನ್ನು ಹೊರಗಟ್ಟಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಆಕೆಯ ಪತಿಯ ಉದ್ಯಮ ಸಂಬಂಧಗಳು.
ಚಂದಾ ಕೊಚ್ಚಾರ್ ಪತಿ ಒಂದಷ್ಟು ಉದ್ಯಮಗಳನ್ನು ನಡೆಸುತ್ತಿದ್ದರು; ಹೆಸರು ದೀಪಕ್ ಕೊಚ್ಚಾರ್. ಆಕೆಯ ಪತಿಗೂ ವಿಡಿಯೋಕಾನ್ ಮಾಲಿಕ ವೇಣುಗೋಪಾಲ್ ಧೂತ್ಗೂ ಒಂದಷ್ಟು ವ್ಯಾವಹಾರಿಕ ಸಂಬಂಧಗಳಿದ್ದವು. ಈ ಸಂದರ್ಭದಲ್ಲಿ ತಾನು ಸಿಇಒ ಆಗಿದ್ದ ಐಸಿಐಸಿಐ ಬ್ಯಾಂಕ್ನಿಂದ ಧೂತ್ಗೆ ಚಂದಾ ಕೊಚ್ಚಾರ್ ಒಂದಷ್ಟು ಸಾಲ ನೀಡಿದ್ದರು. ಇದೇ ವೇಳೆ ಕೊಚ್ಚಾರ್ ಪತಿಯ ಉದ್ಯಮದಲ್ಲಿ ಧೂತ್ ಹಣ ಹೂಡಿದ್ದರು. ಹೀಗಾಗಿ ಕೊಚ್ಚಾರ್ ಸ್ವ ಹಿತಾಸಕ್ತಿಯನ್ನು ಬ್ಯಾಂಕ್ ಮೇಲೆ ಹೇರಿದ್ದಾರೆ ಎನ್ನುವುದು ಅವರ ಮೇಲಿರುವ ಆರೋಪ.
ಈ ಆರೋಪದ ಹಿನ್ನೆಲೆಯಲ್ಲಿ ಐಸಿಐಸಿಐ ಬ್ಯಾಂಕ್ ಕಳೆದ ಬುಧವಾರ, ‘ಕೊಚ್ಚಾರ್ ಬ್ಯಾಂಕ್ನ ಆಂತರಿಕ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಮತ್ತು ವೃತ್ತಿಪರ ತಪ್ಪುಗಳನ್ನು ಎಸಗಿದ್ದಾರೆ’ ಎಂದು ಹೇಳಿದೆ. ಆಕೆಯ ಮೇಲೆ ಕೇಳಿ ಬಂದ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಆಂತರಿಕ ಸಮಿತಿಯ ವರದಿಯನ್ನಾಧರಿಸಿ ಈ ಹೇಳಿಕೆ ಬಿಡುಗಡೆ ಮಾಡಿದೆ.
ಸಿಇಒ ಹುದ್ದೆಯಲ್ಲಿದ್ದ ಚಂದಾ ಕೊಚ್ಚಾರ್ ಕಡ್ಡಾಯವಾಗಿದ್ದ ಕೆಲವು ಸ್ವ ಘೋಷಣೆಗಳನ್ನು ಮಾಡಿಕೊಂಡಿರಲಿಲ್ಲ. ಜತೆಗೆ ಆಕೆ ಬ್ಯಾಂಕ್ನ ಆಂತರಿಕ ಪ್ರಕ್ರಿಯೆಗಳನ್ನು ಪಾಲಿಸುತ್ತಿರಲಿಲ್ಲ ಎಂದು ಐಸಿಐಸಿಐ ಹೇಳಿದೆ. ಈ ಹೇಳಿಕೆ ಬೆನ್ನಲ್ಲೇ ಆಕೆಗೆ 2009ರ ಏಪ್ರಿಲ್ನಿಂದ 2018ರ ಮಾರ್ಚ್ವರೆಗೆ ನೀಡಿದ್ದ ಎಲ್ಲಾ ಬೋನಸ್ಗಳನ್ನು ಹಿಂಪಡೆಯುವುದಾಗಿ ಹೇಳಿದೆ. ಈ ಮೊತ್ತವೇ ಸುಮಾರು 300 ಕೋಟಿ ರೂಪಾಯಿಗಳನ್ನು ದಾಟುತ್ತದೆ!
ಒಂದು ಸಂಸ್ಥೆಯಲ್ಲಿ ತಳ ಮಟ್ಟದಿಂದ ಬೆಳೆದು ಬಂದು ಮುಖ್ಯಸ್ಥರ ಹುದ್ದೆಯಲ್ಲಿ ಕುಳಿತ ಮೇಲೆ ಇಂಥಹ ಅವಮಾನವನ್ನು ಅನುಭವಿಸುವುದು ಕೊಚ್ಚಾರ್ ಪಾಲಿಗೆ ಅತ್ಯಂತ ಮುಜುಗರದ ಸಂಗತಿ. ಅದಕ್ಕಾಗಿಯೇ ಅವರು ಈ ಘೋಷಣೆ ಬೆನ್ನಲ್ಲೇ, ‘ನಾನು ಈ ತೀರ್ಮಾನದಿಂದ ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ, ಆಘಾತಗೊಂಡಿದ್ದೇನೆ ಮತ್ತು ನೊಂದಿದ್ದೇನೆ,’ ಎಂದರು.
ಇವತ್ತು ನೊಂದು ಪ್ರತಿಕ್ರಿಯೆ ನೀಡಿರುವ ಚಂದಾ ಕೊಚ್ಚಾರ್ ನಿಜಕ್ಕೂ ಯಾರು? ಆಕೆ ಬೆಳದು ಬಂದ ಬಗೆ ಹೇಗಿದೆ? ಕುತೂಹಲಕಾರಿ ಅಂಶಗಳನ್ನು ಒಳಗೊಂಡ ಅಪರೂಪದಲ್ಲಿ ಅಪರೂಪ ಅನ್ನಿಸುವ ವ್ಯಕ್ತಿಚಿತ್ರ ಇಲ್ಲಿದೆ.
1984-2019
ಚಂದಾ ಕೊಚ್ಚಾರ್ ಐಸಿಐಸಿಐ ದಿನಗಳು ಆರಂಭವಾಗಿದ್ದು 1984ರಲ್ಲಿ. ಅವತ್ತಿಗೆ ಆಕೆ ಎಂಬಿಎ ಪದವೀಧರೆ. ಐಸಿಐಸಿಐ ಇನ್ನೂ ಬ್ಯಾಂಕ್ ಆಗಿರಲಿಲ್ಲ. ಖಾಸಗಿ ಕಂಪನಿಗಳ ಪ್ರಾಜೆಕ್ಟ್ಗಳಿಗೆ ಹಣ ಒದಗಿಸುವ ಒಂದು ಖಾಸಗಿ ಹಣಕಾಸು ಸಂಸ್ಥೆಯಾಗಿತ್ತು.
1994ರಲ್ಲಿ ಭಾರತದ ಆರ್ಥಿಕತೆಯಲ್ಲಿ ಉದಾರೀಕರಣ ಆರಂಭವಾದ ನಂತರ ಐಸಿಐಸಿಐಗೆ ಬ್ಯಾಂಕಿಂಗ್ ಪರವಾನಿಗೆ ಸಿಕ್ಕಿತ್ತು. ಇಲ್ಲಿಂದ ಐಸಿಐಸಿಐ ಎಂಬ ಬ್ಯಾಂಕ್ನ ಪಯಣದ ಜತೆ ಜತೆಯಲ್ಲೇ ಚಂದಾ ಕೊಚ್ಚಾರ್ ಕೂಡ ಹೆಜ್ಜೆ ಹಾಕಿದರು.
ಬ್ಯಾಂಕಿಂಗ್ ವಹಿವಾಟುಗಳನ್ನು ಆರಂಭಿಸಿದ ಐಸಿಐಸಿಐ ಹಾಲಿ ಬ್ರಿಕ್ಸ್ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ವಿ. ಕಾಮತ್ ನೇತೃತ್ವದಲ್ಲಿ ತಂತ್ರಜ್ಞಾನವನ್ನೇ ತನ್ನ ಯಶಸ್ಸಿನ ಮೆಟ್ಟಿಲಾಗಿರಿಸಿಕೊಂಡು ಬಲುಬೇಗ ಜನಪ್ರಿಯತೆ ಪಡೆದುಕೊಂಡಿತು.
1990ರ ದಶಕ ಮತ್ತು 2000ನೇ ದಶಕದುದ್ದಕ್ಕೂ ಬ್ಯಾಂಕ್ನ್ನು ಮುನ್ನಡೆಸಿದ ಕಾಮತ್, ಸಣ್ಣ ಹಣಕಾಸು ಸಂಸ್ಥೆಯನ್ನು ಭಾರತದ ಮೂರನೇ ಅತಿ ದೊಡ್ಡ ಬ್ಯಾಂಕ್ ಎನ್ನುವಲ್ಲಿವರೆಗೆ ತಂದು ಮುಟ್ಟಿಸಿದರು. ಇದರಲ್ಲಿ ಕೊಚ್ಚಾರ್ ಕೊಡುಗೆಯೂ ನಿರ್ಣಾಯಕವಾಗಿತ್ತು.
ಬ್ಯಾಂಕಿಂಗ್ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸ್ಥಾಪಿಸಿದ್ದ ಸಾರ್ವಜನಿಕ ರಂಗದ ಬ್ಯಾಂಕ್ಗಳ ನಡುವೆ ಕೆಲವು ಗಮನಾರ್ಹ ಯೋಜನೆಗಳ ಮೂಲಕ ಅವರು ಐಸಿಐಸಿಐಗೆ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಿದ್ದರು.
ಇದೇ ಕಾರಣಕ್ಕೆ ಕೇವಲ 48ರ ಹರೆಯದಲ್ಲಿ, ಹಲವು ಹಿರಿಯರು, ಗಟ್ಟಿ ಕುಳಗಳನ್ನು ಹಿಂದಿಕ್ಕಿ 2009ರಲ್ಲಿ ಕೆ. ವಿ. ಕಾಮತ್ ಜಾಗದಲ್ಲಿ ಬಂದು ಕುಳಿತುಕೊಂಡರು. ಆದರೆ ಆಕೆ ಕೆ. ವಿ. ಕಾಮತ್ ಹಾದಿಯಲ್ಲಿ ನಡೆಯಲಿಲ್ಲ ಎನ್ನುವುದು ವಿಶೇಷ.

ಈ ಹಿಂದಿನವರು ಎಲ್ಲರನ್ನೂ ಒಳಗೊಳ್ಳುವ ಮಾದರಿಯನ್ನು ಅನುಸರಿಸುತ್ತಿದ್ದರೆ, ಕೊಚ್ಚಾರ್ ಎಲ್ಲವನ್ನೂ ತನ್ನ ಬಿಗಿ ಹಿಡಿತಕ್ಕೆ ತಂದುಕೊಂಡರು. ಅಂದುಕೊಂಡಂತೆ ಕಂಪನಿಯನ್ನು ಚೆನ್ನಾಗಿಯೇ ಮುನ್ನಡೆಸಿದರು. ಅದರಲ್ಲೂ 2008ರ ಜಾಗತಿಕ ಆರ್ಥಿಕ ಹಿಂಜರಿತದಿಂದ ಸಂಸ್ಥೆಯನ್ನು ಕಾಪಾಡಿದ್ದರಲ್ಲಿ ಆಕೆಯ ಪಾತ್ರ ಹಿರಿದು.
ಚಂದಾ ಕೊಚ್ಚಾರ್ ಬ್ಯಾಂಕ್ಗೆ ಹೇಗೆ ಪ್ರಾಮುಖ್ಯತೆ ನೀಡುತ್ತಿದ್ದರೋ ಅದೇ ರೀತಿಯಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ನೀಡುತ್ತಿದ್ದರು. ಆಕೆ ತನ್ನ ಸುತ್ತ ನಾಜೂಕಾದ ಒಂದು ಪಿಆರ್ ಮ್ಯಾನೇಜ್ಮೆಂಟ್ ನಡೆಸಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ, ಸಂದರ್ಶನಗಳನ್ನು ನೀಡುವಾಗ ತುಂಬಾ ಸೂಕ್ಷ್ಮತೆಯಿಂದ ತಮ್ಮ ವ್ಯಕ್ತಿತ್ವವನ್ನು ಹೊರಗೆ ಕಟ್ಟಿಕೊಡುತ್ತಿದ್ದರು.
2002ರಲ್ಲಿ ಸಂದರ್ಶನವೊಂದರ ಸಂಬಂಧ ಸಂಪರ್ಕಿಸಿದಾಗ ಆಕೆಯ ಸಂವಹನ ವಿಭಾಗದವರು, ಯಾವ ಪ್ರಶ್ನೆ, ಯಾವುದರ ಕುರಿತು ಎಂಬುದರಿಂದ ಹಿಡಿದು ಕ್ಯಾಮೆರಾ ಕೋನ, ಅಲ್ಲಿರಬೇಕಾದ ಗಿಡ, ಅದರ ಗಾತ್ರದ ಬಗ್ಗೆಯೆಲ್ಲಾ ವಿಚಾರಣೆ ನಡೆಸಿದ್ದರು ಎಂದು ಬರೆಯುತ್ತಾರೆ ಬಿಬಿಸಿ ವಾಣಿಜ್ಯ ವಿಭಾಗದ ಪ್ರತಿನಿಧಿ ಸಮೀರ್ ಹಶ್ಮಿ.
ಸೀರೆ, ವಜ್ರಾಭರಣಗಳ ಮೇಲಿನ ಆಕೆಯ ಮೋಹವಂತೂ ಆಗಾಗ ಬಹಿರಂಗಗೊಳ್ಳುತ್ತಿತ್ತು. ಸಭೆ, ಭೇಟಿಗಳ ಸಂದರ್ಭ ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಆಕೆ ಸೀರೆಗಳನ್ನು ಉಡುತ್ತಿದ್ದರು. ದಾವೋಸ್ನಲ್ಲಿ ವರ್ಲ್ಡ್ ಎಕಾನಾಮಿಕ್ ಫೋರಂನಲ್ಲಿಯೂ ಸೀರೆಯಲ್ಲೇ ಭಾಗವಹಿಸಿ ಇದೇ ನನ್ನ ಫ್ಯಾಷನ್ ಎಂದಿದ್ದರು ಚಂದಾ ಕೊಚ್ಚಾರ್.
ತಮ್ಮ ಬಹಿರಂಗ ವ್ಯಕ್ತಿತ್ವದ ಬಗ್ಗೆ ಹೀಗೊಂದು ವಿಪರೀತ ಎನ್ನಿಸುವಷ್ಟು ಗಮನ ಹರಿಸಿದಾಕೆ ತನ್ನ ವೃತ್ತಿ ಬಗ್ಗೆ ಆ ಕಾಳಜಿ ವಹಿಸಲಿಲ್ಲ. ಪರಿಣಾಮ ಆಕೆ ಪರ್ವತದ ತುತ್ತ ತುದಿಯಿಂದ ಪ್ರಪಾತಕ್ಕೆ ಬೀಳಬೇಕಾಯಿತು. ಅದರಲ್ಲೂ ತನ್ನ ಬ್ಯಾಂಕ್ನ ಗ್ರಾಹಕನ ಜತೆ ತನ್ನ ಪತಿಗಿರುವ ವ್ಯಾವಹಾರಿಕ ಸಂಬಂಧಗಳ ಬಗ್ಗೆ ಆಕೆ ತುಟಿ ಬಿಚ್ಚದೆ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡರು.
2016ರ ಅಕ್ಟೋಬರ್ನಿಂದ ಆಕೆಯ ಸಮಸ್ಯೆಯ ದಿನಗಳು ಆರಂಭಗೊಂಡವು. ಮೊದಲ ಬಾರಿಗೆ ಸಂಸ್ಥೆಯ ವಿಷಲ್ ಬ್ಲೋವರ್ ಒಬ್ಬರು ಆಕೆಯ ಮೇಲೆ ಹಿತಾಸಕ್ತಿಗಳ ಸಂಘರ್ಷದ ಬಗ್ಗೆ ಆರೋಪ ಹೊರಿಸಿದರು. ಆರಂಭದಲ್ಲಿ ಇದು ಅಷ್ಟೇನು ಸುದ್ದಿಯಾಗಲೇ ಇಲ್ಲ. ಆದರೆ 2018ರಲ್ಲಿ ಮೊದಲ ಬಾರಿಗೆ ಮಾಧ್ಯಮಗಳಲ್ಲಿ ಇದು ಬಿಸಿ ದೋಸೆಯಂತೆ ಖರ್ಚಾಗಲು ಆರಂಭಿಸಿತು.
ಆಗಿದ್ದಿಷ್ಟೇ. ಕೊಚ್ಚಾರ್ ವೇಣುಗೋಪಾಲ್ ಧೂತ್ ಒಡೆತನದ ವಿಡಿಯೋಕಾನ್ ಕಂಪನಿಗೆ 3,250 ಕೋಟಿ ರೂಪಾಯಿ ಸಾಲ ನೀಡಿದ್ದರು. ಇದರಲ್ಲಿ ಶೇಕಡಾ 86 ಅಂದರೆ 2,810 ಕೋಟಿ ರೂಪಾಯಿಗಳನ್ನು ವಿಡಿಯೋಕಾನ್ ಬ್ಯಾಂಕ್ಗೆ ಕಟ್ಟಿರಲಿಲ್ಲ. ಬದಲಿಗೆ 2017ರಲ್ಲಿ ಸಾಲ ಕಟ್ಟದ ವಿಡಿಯೋಕಾನ್ ಖಾತೆಯನ್ನೇ ‘ಎನ್ಪಿಎ’ (ವಸೂಲಾಗದ ಸಾಲ) ಎಂದು ಘೋಷಿಸಲಾಗಿತ್ತು.
ಇದೇ ವಿಡಯೋಕಾನ್ ಮಾಲಿಕ ಧೂತ್ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಂಕ್ನ ಸಾಲ ನೀಡುವ ಪ್ರಕ್ರಿಯೆಗಳನ್ನು ಉಲ್ಲಂಘಿಸಿ ಧೂತ್ಗೆ ಕೊಚ್ಚಾರ್ ಸಾಲ ನೀಡಿದ್ದಾರೆ ಎಂಬುದು ಆರೋಪವಾಗಿತ್ತು.

ಏಪ್ರಿಲ್ನಲ್ಲಿ ಈ ಆರೋಪ ಕೇಳಿ ಬಂದಾಗ ಕೊಚ್ಚಾರ್, ಆಕೆಯ ಪತಿ ದೀಪಕ್ ಮತ್ತು ಧೂತ್ ಎಲ್ಲರೂ ಆರೋಪವನ್ನು ನಿರಾಕರಿಸಲು ಆರಂಭಿಸಿದರು. ಇವೆಲ್ಲವೂ ‘ಸುಳ್ಳು ಆರೋಪ’ ಎಂದಿದ್ದರು ಕೊಚ್ಚಾರ್. "ಐಸಿಐಸಿಐ ಬ್ಯಾಂಕ್ ಭಾರತದ ಎಲ್ಲಾ ಕಾರ್ಪೊರೇಟ್ ಸಂಸ್ಥೆಗಳ ಜತೆ ಸಂಬಂಧ ಹೊಂದಿದೆ. ಹಾಗಂಥ ನಾನು ಉದ್ಯಮ ನಡೆಸದೇ ಇರಲು ಸಾಧ್ಯವೇ?” ಎಂದು ಇಂಡಿಯಾ ಟುಡೇಗೆ ಪ್ರತಿಕ್ರಿಯೆ ನೀಡುತ್ತಾ ಪ್ರಶ್ನಿಸಿದ್ದರು ದೀಪಕ್ ಕೊಚ್ಚಾರ್.
“ನನಗೆ ಅರ್ಹತೆ ಮೇಲೆಯೇ ಸಾಲ ನೀಡಿದ್ದಾರೆ” ಎಂದು ಹೇಳಿದ್ದರು ವೇಣುಗೋಪಾಲ್ ಧೂತ್. ಆರಂಭದಲ್ಲಿ ಐಸಿಐಸಿಐ ಮಂಡಳಿ ಆರೋಪವನ್ನು ನಿರಾಕರಿಸಿತ್ತು. ಆದರೆ ಪದೇ ಪದೇ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಲೇ ಬಂದಾಗ ಬ್ಯಾಂಕ್ ಆಂತರಿಕ ತನಿಖೆಗೆ ಆದೇಶ ನೀಡಿತು.
ತನ್ನ ವಿರುದ್ಧವೇ ತನಿಖೆಗೆ ಆದೇಶ ನೀಡಿದರೂ ಕೊಚ್ಚಾರ್ ಹುದ್ದೆಯಿಂದ ಕೆಳಗಿಳಿಯಲಿಲ್ಲ. ಬದಲಿಗೆ ಜೂನ್ 2018ರಿಂದ ಅನಿರ್ಧಿಷ್ಟಾವಧಿ ರಜೆ ಮೇಲೆ ತೆರಳಿದರು. ಆದರೆ ನಾಲ್ಕು ತಿಂಗಳು ಬಿಟ್ಟು ಆಕೆ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಗಿ ಬಂತು.
ವಿಚಿತ್ರವೆಂದರೆ ಆ ರಾಜೀನಾಮೆಯನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಐಸಿಐಸಿಐ ಮಂಡಳಿ ಇರಲಿಲ್ಲ. ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖಾ ವರದಿ ತರಿಸಿಕೊಂಡ ಮಂಡಳಿ ಆಕೆಯ ರಾಜೀನಾಮೆಯನ್ನು ವಜಾ ಎಂದು ಪರಿಗಣಿಸಲು ನಿರ್ಧಿರಿಸಿತ್ತು. ಹೀಗೆ 2018ರ ಅಕ್ಟೋಬರ್ನಲ್ಲಿ ತಾನೇ ಕಟ್ಟಿ ಬೆಳೆಸಿದ ಕಂಪನಿಯಿಂದ ಹೊರ ದಬ್ಬಿಸಿಕೊಂಡರು ಚಂದಾ ಕೊಚ್ಚಾರ್.
ಆದರೆ ಆಕೆಯ ಪತನ ಇಲ್ಲಿಗೇ ನಿಂತಿಲ್ಲ. ಕಳೆದ ವಾರ ಆಕೆ ಮತ್ತು ಆಕೆಯ ಪತಿಯ ವಿರುದ್ಧ ಸಿಬಿಐ ಕ್ರಿಮಿನಲ್ ಸಂಚು, ವಂಚನೆ ದೂರು ದಾಖಲಿಸಿದೆ. ಹೀಗೆ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಚಂದಾ ಕೊಚ್ಚಾರ್ ಎಂಬ ಸೂಪರ್ ಸ್ಟಾರ್ ಸಿಇಒ ಕಥೆ ದುರಂತದಲ್ಲಿ ಕೊನೆಯಾಗುವ ಮುನ್ಸೂಚನೆ ನೀಡಿದೆ. ವಿಶ್ವದ ಪ್ರಭಾವಿ ಸಿಇಒ ಎಂದು ಕಾರ್ಪೊರೇಟ್ ಜಗತ್ತು ಎತ್ತಿ ಆಡಿಸಿದ ವ್ಯಕ್ತಿ ಬದುಕಿನ ಸಂಕೀರ್ಣ ದಿನಗಳನ್ನು ಎದುರಿಸುತ್ತಿದ್ದಾರೆ.
ಪೂರಕ ಮಾಹಿತಿ: ಬಿಬಿಸಿ