samachara
www.samachara.com
ಮೋದಿ-ಪುಟಿನ್ ಕಾರ್ಪೊರೇಟ್ ಡೀಲ್: ಎಸ್ಸಾರ್‌ಗೆ 82,000 ಕೋಟಿ; ಸರಕಾರಿ ಸ್ವಾಮ್ಯದ ಓಎನ್‌ಜಿಸಿಗೆ ನಾಮ
COVER STORY

ಮೋದಿ-ಪುಟಿನ್ ಕಾರ್ಪೊರೇಟ್ ಡೀಲ್: ಎಸ್ಸಾರ್‌ಗೆ 82,000 ಕೋಟಿ; ಸರಕಾರಿ ಸ್ವಾಮ್ಯದ ಓಎನ್‌ಜಿಸಿಗೆ ನಾಮ

ಒಂದು ಕಡೆ ರಷ್ಯಾದ ಬೆಳವಣಿಗೆಗಳಲ್ಲಿ ಅನುಮಾನದ ಹೊಗೆಯಾಡುತ್ತಿರುವಾಗಲೇ 2016ರ ಅಕ್ಟೋಬರ್‌ನಲ್ಲಿ ರೋಸ್‌ನೆಫ್ಟ್‌ ಗುಜರಾತ್‌ಗೆ ಕಾಲಿಟ್ಟಿತ್ತು.

Team Samachara

ವಿಶ್ವದಲ್ಲಿ ಎಲ್ಲಾ ರಾಜಕಾರಣಗಳದ್ದು ಒಂದು ತೂಕವಾದರೆ ತೈಲ ರಾಜಕಾರಣದ್ದೇ ಇನ್ನೊಂದು ತೂಕ. ಅಂತಹುಗಳಲ್ಲೇ ಒಂದು ಈ ಒಎನ್‌ಜಿಸಿ-ರೋಸ್‌ನೆಫ್ಟ್‌-ಎಸ್ಸಾರ್‌ ಡೀಲ್‌.

2014ರ ಡಿಸೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾರತಕ್ಕೆ ಭೇಟಿ ನೀಡಿದ್ದು ಸುದ್ದಿಯಾಯಿತೇ ಹೊರತು ಈ ಭೇಟಿ ಹಿಂದೆ ಅಡಗಿದ್ದ ತೈಲ ಒಪ್ಪಂದಗಳು ಸುದ್ದಿಯಾಗಲೇ ಇಲ್ಲ. ಮುಂದಿನ ಎರಡು ವರ್ಷಗಳಲ್ಲಿ ಭಾರತದ ಸಾರ್ವಜನಿಕ ರಂಗದ ಕಂಪನಿಗಳು ರಷ್ಯಾದ ಸರಕಾರಿ ಪ್ರಾಯೋಜಿತ ತೈಲ ಕಂಪನಿ ಜತೆ ಒಪ್ಪಂದ ಕುದುರಿಸಿದ್ದವು.

ಮೊದಲ ಒಪ್ಪಂದ ಸೆಪ್ಟೆಂಬರ್‌ 2015ರಲ್ಲಿ ನಡೆದರೆ ಎರಡನೇ ಒಪ್ಪಂದ 2016ರ ಅಕ್ಟೋಬರ್‌ನಲ್ಲಿ ನಡೆಯಿತು. ರಷ್ಯಾ ಸರಕಾರಿ ಸ್ವಾಮ್ಯದ ತೈಲ ಕಂಪನಿ ಕ್ರೆಮ್ಲಿನ್‌ನ ನಿಯಂತ್ರಣಕ್ಕೆ ಒಳಪಟ್ಟಿರುವ ಸಂಸ್ಥೆ ರೋಸ್‌ನೆಫ್ಟ್‌. ಈ ಸಂಸ್ಥೆಗೆ ಪೂರ್ವ ಸೈಬೀರಿಯಾದಲ್ಲಿ ‘ವ್ಯಾಂಕೊರ್‌’ ಎಂಬ ತೈಲ ಉತ್ಪಾದನಾ ಘಟಕ ಇದೆ. ಇದರಲ್ಲಿದ್ದ ತನ್ನ ಶೇಕಡಾ 49.9 ಶೇರನ್ನು ರೋಸ್‌ನೆಫ್ಟ್‌ ಭಾರತದ ಸಾರ್ವಜನಿಕ ರಂಗದ ಕಂಪನಿಗಳಿಗೆ ಮಾರಾಟ ಮಾಡಿತ್ತು. ಭಾರತ ಮತ್ತು ರಷ್ಯಾದ ತೈಲ ತಜ್ಞರ ಪ್ರಕಾರ ಭಾರತದ ಕಂಪನಿಗಳು ಅಂದಾಜಿಗಿಂತ ಹೆಚ್ಚಿನ ಹಣವನ್ನು ರಷ್ಯಾದ ಕಂಪನಿಗಳಿಗೆ ಪಾವತಿಸಿದ್ದವು.

ಪ್ರತಿಯಾಗಿ ಈ ಹಣಕಾಸು ವ್ಯವಹಾರ ಮುಗಿದ ಬಳಿಕ ಅಕ್ಟೋಬರ್‌ 2016ರಲ್ಲಿ ರೋಸ್‌ನೆಫ್ಟ್‌ ಗುಜರಾತ್‌ನಲ್ಲಿ ಎಸ್ಸಾರ್‌ ಗ್ರೂಪ್‌ಗೆ ಸೇರಿದ ಸಂಸ್ಕರಣಾ ಘಟಕ ಮತ್ತು ಬಂದರನ್ನು ಖರೀದಿ ಮಾಡುವ ಘೋಷಣೆ ಮಾಡಿತು. ಇಲ್ಲೂ ಆರಂಭಿಕ ಲೆಕ್ಕಾಚಾರಗಳಿಗಿಂತ ತುಂಬಾ ದೊಡ್ಡ ಮೊತ್ತವನ್ನು ರಷ್ಯಾದ ಕಂಪನಿ ಪಾವತಿ ಮಾಡಿ ಎರಡೂ ದೇಶಗಳ ತಜ್ಞರು ಹುಬ್ಬೇರುವಂತೆ ಮಾಡಿತ್ತು.

ಎಷ್ಟರಮಟ್ಟಿಗೆ ಎಂದರೆ ಇದು ಭಾರತದಲ್ಲಿ ನಡೆದ ವಿದೇಶಿ ಕಂಪನಿಯೊಂದರ ಅತ್ಯಂತ ದೊಡ್ಡ ಖರೀದಿ ಪ್ರಕ್ರಿಯೆ ಎಂಬುದಾಗಿ ರಾಯ್ಟರ್ಸ್‌ ಬಣ್ಣಿಸಿತ್ತು. ಪರಿಣಾಮ ಸಾಲದ ಸುಳಿಯಲ್ಲಿ ಸಿಲುಕಿ ದಿವಾಳಿಯ ಅಂಚಿನಲ್ಲಿ ನಿಂತಿದ್ದ ‘ಎಸ್ಸಾರ್‌ ಆಯಿಲ್‌’ಗೆ ಆಮ್ಲಜನಕ ಸಿಕ್ಕ ಹಾಗಾಗಿತ್ತು. ಜತೆಗೆ ರಷ್ಯಾದಲ್ಲೂ ಸಾಲದ ಸುಳಿಯಲ್ಲಿದ್ದ ರೋಸ್‌ನೆಫ್ಟ್‌ಗೂ ದೊಡ್ಡ ಮಟ್ಟದ ಲಾಭ ಸಿಕ್ಕಿತ್ತು. ಜತೆಗೆ ಅಮೆರಿಕಾದಿಂದ ನಿರ್ಬಂಧದ ನಡುವೆಯೂ ಭಾರತದ ವಿಸ್ತರಿತ ಮಾರುಕಟ್ಟೆಯ ಸಂಪರ್ಕ ರಷ್ಯಾದ ಕಂಪನಿಗೆ ಸಿಕ್ಕಿತ್ತು.

ಭಾರತದ ಸರಕಾರಿ ಸ್ವಾಮ್ಯದ ಕಂಪನಿಗಳ ಕಥೆ ಏನಾಯ್ತು?

ಪ್ರಶ್ನೆ ಇರುವುದೇ ಇಲ್ಲಿ. ಆರಂಭದಲ್ಲಿ ಆಗಸ್ಟ್‌ 2015ರಲ್ಲಿ ರೋಸ್‌ನೆಫ್ಟ್‌ಗೆ ಸೇರಿದ ವ್ಯಾಂಕೋರ್‌ ಆಯಿಲ್‌ಫೀಲ್ಡ್‌ನಲ್ಲಿ ಒಎನ್‌ಜಿಸಿ ಅಧೀನದ 'ಒಎನ್‌ಜಿಸಿ ವಿದೇಶ್‌' ಕಂಪನಿ ಸುಮಾರು 900 ಮಿಲಿಯನ್‌ ಡಾಲರ್‌ ಹೂಡಿಕೆಗೆ ಮುಂದಾಗಿತ್ತು. ಈ ಮೂಲಕ ಶೇಕಡಾ 15ರಷ್ಟು ಶೇರು ಖರೀದಿ ಸಾಧ್ಯವಾಗಲಿದೆ ಎಂದು ‘ಬ್ಲೂಂಬರ್ಗ್‌’ ಬರೆದಿತ್ತು.

ವ್ಯಾಂಕೋರ್‌ ಆಯಿಲ್‌ಫೀಲ್ಡ್‌.
ವ್ಯಾಂಕೋರ್‌ ಆಯಿಲ್‌ಫೀಲ್ಡ್‌.
/ಸೈಬೀರಿಯನ್‌ಟೈಮ್ಸ್‌

ಆದರೆ ಅಂತಿಮ ಹಂತದಲ್ಲಿ ಡೀಲ್‌ ನಡೆದಾಗ ಹಾಗಾಗಲಿಲ್ಲ. ಸೆಪ್ಟೆಂಬರ್‌ 2015ರಲ್ಲಿ 1.25 ಬಿಲಿಯನ್ ಡಾಲರ್‌ಗೆ ಈ ಖರೀದಿ ಪ್ರಕ್ರಿಯೆ ನಡೆಯಿತು. ಜೂನ್‌ 2016ರಲ್ಲಿ ಸಾರ್ವಜನಿಕ ರಂಗದ ಮೂರು ಕಂಪನಿಗಳಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಆಯಿಲ್‌ ಇಂಡಿಯಾ ಮತ್ತು ಭಾರತ್‌ ಪೆಟ್ರೋ ರಿಸೋರ್ಸಸ್‌ (ಭಾರತ್‌ ಪೆಟ್ರೋಲಿಯಂ ಉಪ ಸಂಸ್ಥೆ) ಒಟ್ಟಾಗಿ 2.1 ಬಿಲಯನ್‌ ಡಾಲರ್‌ ಹಣ ನೀಡಿ ವ್ಯಾಂಕೋರ್‌ ಕ್ಲಸ್ಟರ್‌ನಲ್ಲಿ ಶೇ. 23.9ರಷ್ಟು ಶೇರುಗಳನ್ನು ಖರೀದಿಸಿದವು. ಒಂದು ತಿಂಗಳ ನಂತರ ಅಕ್ಟೋಬರ್‌ 2016ರಲ್ಲಿ ಒಎನ್‌ಜಿಸಿ ವಿದೇಶ್‌ ಮತ್ತೆ 930 ಮಿಲಿಯನ್‌ ಡಾಲರ್‌ ಹಣ ಹೂಡಿ ಇನ್ನೂ ಶೇಕಡಾ 11ರಷ್ಟು ಶೇರುಗಳನ್ನು ತನ್ನದಾಗಿಸಿಕೊಂಡಿತು. ಹೀಗೆ ಒಟ್ಟು 4.23 ಬಿಲಿಯನ್‌ ಡಾಲರ್‌ ಹಣ ತೆತ್ತು ವ್ಯಾಂಕೋರ್‌ನಲ್ಲಿ ಶೇಕಡಾ 49.9 ಶೇರುಗಳ ಖರೀದಿ ಪ್ರಕ್ರಿಯೆ ಮುಗಿದಿತ್ತು.

ಈ ಖರೀದಿ ಹಲವು ಕಾರಣಗಳಿಗಾಗಿ ವಿವಾದಕ್ಕೆ ಗುರಿಯಾಯಿತು. ಮೊದಲನೆಯದಾಗಿ ಖರೀದಿ ಚರ್ಚೆಗಳು ನಡೆಯುತ್ತಿರುವಾಗಲೇ ವ್ಯಾಂಕೋರ್‌ನಲ್ಲಿ ತೈಲ ಉತ್ಪಾದನೆಯ ಕುಸಿತ ಆರಂಭವಾಗಿತ್ತು. 2014, 15ರಲ್ಲಿ ವಾರ್ಷಿಕ 22 ಮಿಲಿಯನ್‌ ಟನ್‌ ತೈಲ ಉತ್ಪಾದನೆ ಕಂಡಿದ್ದ ಘಟಕದ ಉತ್ಪಾದನೆಗಳೀಗ 2016ರಲ್ಲಿ 20.7 ಮಿ. ಟನ್‌ ಹಾಗೂ 2017ರಲ್ಲಿ 17.6 ಮಿ. ಟನ್‌ಗೆ ಕುಸಿತಗೊಂಡಿತ್ತು. ಹೀಗೆ ಮುಂದುವರಿದರೆ 2020ರ ವೇಳೆಗೆ ತೈಲ ಉತ್ಪಾದನೆ 13 ಮಿಲಿಯನ್‌ ಟನ್‌ಗೆ ಕುಸಿತಗೊಳ್ಳಲಿದೆ ಎನ್ನುತ್ತದೆ ‘ನ್ಯೂಸ್‌ ಬೇಸ್‌’ ಎಂಬ ವೆಬ್‌ಸೈಟ್‌.

ಇದಕ್ಕೆ ಪರಿಹಾರವಾಗಿ ಸುತ್ತ ಮುತ್ತಲಿದ್ದ ಸುಝನ್ಸ್‌ಕೊಯೆ, ತಗಲ್ಸ್‌ಕೊಯೆ ಮತ್ತು ಲೊಡೊಸ್ಕೊಯೆ ತೈಲ ಉತ್ಪಾದನಾ ಘಟಕಗಳಲ್ಲಿ ಕಂಪನಿ ಉತ್ಪಾದನೆಯ ವೇಗವನ್ನು ಹೆಚ್ಚಿಸಿದೆ. ಆದರೆ ಇವೆಲ್ಲಾ ಸಣ್ಣ ಸಣ್ಣ ಉತ್ಪಾದನಾ ಘಟಕಗಳು. ಉದಾಹರಣೆಗೆ ವ್ಯಾಂಕೋರ್‌ ಪ್ರತಿದಿನ 4,42,000 ಬ್ಯಾರಲ್‌ ತೈಲ ಉತ್ಪಾದಿಸಿದರೆ ಉಳಿದ ಘಟಕಗಳಲ್ಲಿ ಕ್ರಮವಾಗಿ 90,000 ಬ್ಯಾರೆಲ್‌, 1,00,000 ಬ್ಯಾರಲ್‌ ಮತ್ತು 40,000 ಬ್ಯಾರಲ್‌ ಉತ್ಪಾದನೆಯಾಗುತ್ತದೆ. ಈ ಎಲ್ಲಾ ಘಟಕಗಳು ಸದ್ಯದಲ್ಲೇ ತಮ್ಮ ಗರಿಷ್ಠ ಉತ್ಪಾದನಾ ದಿನಗಳನ್ನು ಕಾಣಲಿದ್ದು ಅಲ್ಲಿಂದ ಇಲ್ಲೂ ತೈಲ ಉತ್ಪಾದನೆ ಇಳಿಕೆಯಾಗಲಿದೆ.

ಹೀಗಿದ್ದೂ ಭಾರತದ ಕಂಪನಿಗಳು ರೋಸ್‌ನೆಫ್ಟ್‌ನ ಘಟಕಗಳ ಮೇಲೆ ಇಷ್ಟೊಂದು ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿರುವುದು ಹಲವರ ಹುಬ್ಬೇರಿಸಿದೆ. ಮತ್ತು ಅನುಮಾನಕ್ಕೂ ಕಾರಣವಾಗಿದೆ. "ಖರೀದಿದಾರರು ಹೆಚ್ಚಿನ ಹಣವನ್ನು ಪಾವತಿ ಮಾಡಿದ್ದಾರೆ. ಕಾರಣ ಈ ಖರೀದಿ ಪ್ರಕ್ರಿಯೆ ನಿರ್ಬಂಧಗಳ ಸಮಯದಲ್ಲಿ ನಡೆದಿದೆ," ಎನ್ನುತ್ತಾರೆ ಲಂಡನ್‌ ಮೂಲಕ ಚಥಮ್‌ ಹೌಸ್‌ನ ಪ್ರಾಧ್ಯಾಪಕಿ ಲಿಲಿಯಾ ಶೆವ್ಸೋವಾ.

ಭಾರತದ ಕಂಪನಿಗಳು ಹೂಡಿಕೆ ಮಾಡಲು ಮುಂದೆ ಬಂದ ಸಮದಲ್ಲಿ ರಷ್ಯಾದ ಮೇಲೆ ಅಮೆರಿಕಾ ಮತ್ತು ಯುರೋಪ್‌ ರಾಷ್ಟ್ರಗಳು ಆರ್ಥಿಕ ನಿರ್ಬಂಧ ಹೇರಿದ್ದವು. ಉಕ್ರೇನ್‌ ಮೇಲೆ ಸೇನೆ ನುಗ್ಗಿಸಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು. ಇಂಥಹದ್ದೊಂದು ಸಂಕಷ್ಟದ ಸಮಯದಲ್ಲಿ ಹೆಚ್ಚಿನ ಬೆಲೆ ನೀಡುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಆರಂಭದಲ್ಲಿ ಇದೇ ಘಟಕ ಖರೀದಿಗೆ ಚೀನಾದ ಕಂಪನಿಗಳು ಮುಂದೆ ಬಂದು ನಂತರ ಹಿಂದೇಟು ಹಾಕಿದ್ದವು. ಈ ಸಂದರ್ಭದಲ್ಲಿ ಹೆಚ್ಚಿನ ಬೆಲೆ ನೀಡಿ ಭಾರತ ಈ ತೈಲ ಉತ್ಪಾದನಾ ಘಟಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದು ಅನುಮಾನ ಹುಟ್ಟಿಸದೇ ಇರದು.

ಇದರ ಜತೆಗೆ ಡೀಲ್‌ ನಡೆದು ತುಂಬಾ ಸಮಯದ ನಂತರ ಹಣ ಪಾವತಿ ಮಾಡಿದ್ದರಿಂದ ಒಐಎಲ್‌-ಐಒಸಿ-ಬಿಪಿಸಿಎಲ್‌ ಒಕ್ಕೂಟಗಳು ಒಟ್ಟಾಗಿ ಇದಕ್ಕೆ ಬಡ್ಡಿಯನ್ನೂ ಪಾವತಿ ಮಾಡಿದ್ದವು. ಇದು ಇನ್ನೂ ವಿಚಿತ್ರ. "ನಾನು ಈ ತರಹದ ಬೆಳವಣಿಗೆ ಬಗ್ಗೆ ಕೇಳಿಲ್ಲ," ಎನ್ನುತ್ತಾರೆ ಬ್ಯಾಂಕ್‌ ಆಫ್‌ ಬರೋಡದ ಮಂಡಳಿ ಮಾಜಿ ಸದಸ್ಯರೊಬ್ಬರು. ಸಾಲ ಪಡೆದಿದ್ದರೆ ಮಾತ್ರ ಬಡ್ಡಿ ಪಾವತಿ ಮಾಡಲಾಗುತ್ತದೆ. ಅದರ ಬದಲು ಹೂಡಿಕೆಗೆ ಬಡ್ಡಿ ಪಾವತಿಸುವುದು ತೀರಾ ಅಪರೂಪ ಎನ್ನುತ್ತಾರೆ ಅವರು.

ಈ ಎಲ್ಲಾ ಬೆಳವಣಿಗೆಗಳ ನೋಡಿದಾಗ ‘ಭಾರತೀಯ ಕಂಪನಿಗಳು ಸ್ಪಷ್ಟವಾಗಿ ಹೆಚ್ಚಿನ ಹಣ ಪಾವತಿಸಿವೆ ಎನ್ನುತ್ತಾರೆ’ 2002ರಲ್ಲಿ ರಷ್ಯಾದ ಇಂಧನ ಖಾತೆ ಉಪಸಚಿವರಾಗಿದ್ದ ವ್ಲಾಡಿಮೀರ್‌ ಮಿಲೋವ್‌.

ಆದರೆ ಇದು ಇಲ್ಲಿಗೇ ನಿಲ್ಲುವುದಿಲ್ಲ. 2013ರಲ್ಲಿ ರೋಸ್‌ನೆಫ್ಟ್‌ ರಷ್ಯಾದ ಇನ್ನೊಂದು ತೈಲ ಕಂಪನಿ ಟಿವೈಎನ್‌ಜಿಡಿಯಲ್ಲಿ 2.1 ಬಿಲಿಯನ್ ಡಾಲರ್‌ ಪಾವತಿ ಮಾಡಿ ಶೇಕಡಾ 65ರಷ್ಟು ಶೇರುಗಳನ್ನು ಖರೀದಿಸಿತ್ತು. ಇದರಲ್ಲಿ ಶೇಕಡಾ 29.9 ಶೇರುಗಳನ್ನು ಭಾರತದ ತೈಲ ಕಂಪನಿಗಳ ಒಕ್ಕೂಟಕ್ಕೆ 2016ರಲ್ಲಿ ಅದೇ ಬೆಲೆಗೆ ಮಾರಾಟ ಮಾಡಿತ್ತು.

ವಿಶೇಷ ಇರುವುದೇ ಇಲ್ಲಿ, 2013ರಲ್ಲಿ ರೋಸ್‌ನೆಫ್ಟ್‌ ಟಿವೈಎನ್‌ಜಿಡಿ ಮೌಲ್ಯ 3.3 ಬಿಲಿಯನ್‌ ಡಾಲರ್‌ ಎಂದು ಲೆಕ್ಕ ಹಾಕಿತ್ತು. ಬಳಿಕ ಆರ್ಥಿಕ ನಿರ್ಬಂಧ, ತೈಲ ಬೆಲೆ ಇಳಿಕೆ ನಡೆದಾಗಲೂ ಟಿವೈಎನ್‌ಜಿಡಿ ಮೌಲ್ಯ 4.01 ಬಿಲಿಯನ್ ಡಾಲರ್‌ ಎಂದು ಭಾರತದ ಕಂಪನಿಗಳ ಲೆಕ್ಕ ಹಾಕಿದ್ದವು!

ಈ ಬಗ್ಗೆ ‘ಸ್ಕ್ರಾಲ್‌ ಡಾಟ್‌ ಇನ್‌’ ಒಎನ್‌ಜಿಸಿ ವಿದೇಶ್‌, ಇಂಡಿಯನ್‌ ಆಯಿಲ್‌, ಇಂಧನ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌, ರೋಸ್‌ನೆಫ್ಟ್‌ಗೆ ಪ್ರಶ್ನೆಗಳನ್ನು ಕಳುಹಿಸಿದ್ದು ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಭಾರತಕ್ಕೆ ರೋಸ್‌ನೆಫ್ಟ್‌ ಪ್ರವೇಶ:

ಒಂದು ಕಡೆ ರಷ್ಯಾದ ಬೆಳವಣಿಗೆಗಳಲ್ಲಿ ಅನುಮಾನದ ಹೊಗೆಯಾಡುತ್ತಿರುವಾಗಲೇ 2016ರ ಅಕ್ಟೋಬರ್‌ನಲ್ಲಿ ರೋಸ್‌ನೆಫ್ಟ್‌ ಗುಜರಾತ್‌ಗೆ ಕಾಲಿಟ್ಟಿತ್ತು. ಇಲ್ಲಿ ಎಸ್ಸಾರ್‌ ಅಯಿಲ್‌ಗೆ ಸೇರಿದ ಸಂಸ್ಕ್ರರಣಾ ಘಟಕ ಮತ್ತು ತೈಲ ಪಂಪಿಂಗ್‌ ಘಟಕವನ್ನು ಬರೋಬ್ಬರಿ 72,800 ಕೋಟಿ ರೂಪಾಯಿಗೆ ಖರೀದಿಸಿತ್ತು. ಇದರ ಜತೆಗೆ ವಡಿನಾರ್ ಬಂದರು ಮತ್ತು ಒಂದಷ್ಟು ಮೂಲಸೌಕರ್ಯ ಖರೀದಿಗೆ ಮತ್ತೆ 13,300 ಕೋಟಿ ರೂಪಾಯಿಗಳನ್ನು ಸುರಿದಿತ್ತು. ಇಲ್ಲೂ ಖರೀದಿಗೆ ಹೆಚ್ಚಿನ ಮೊತ್ತ ನೀಡಿದ ಅನುಮಾನಗಳು ಹುಟ್ಟಿಕೊಂಡಿದ್ದವು.

ಗುಜರಾತ್‌ನ ವಡಿನಾರ್‌ನಲ್ಲಿರುವ ಎಸ್ಸಾರ್‌ ತೈಲ ಸಂಸ್ಕರಣಾ ಘಟಕ.
ಗುಜರಾತ್‌ನ ವಡಿನಾರ್‌ನಲ್ಲಿರುವ ಎಸ್ಸಾರ್‌ ತೈಲ ಸಂಸ್ಕರಣಾ ಘಟಕ.
/ಐಬಿಟೈಮ್ಸ್‌

2015ರಲ್ಲಿ ಈ ಸಂಸ್ಕರಣಾ ಘಟಕ ಮತ್ತು ಬಂದರಿನ ಮೌಲ್ಯ 34,200 ಕೋಟಿ ರೂಪಾಯಿ ಎಂಬುದಾಗಿ ರೋಸ್‌ನೆಫ್ಟ್‌ ಅಂದಾಜಿಸಿತ್ತು. ತನ್ನ ಕಡೆಯಿಂದ ಇದರ ಮೌಲ್ಯ 54,000 ಕೋಟಿ ರೂಪಾಯಿ (ವಡಿನಾರ್‌ ಬಂದರು ಬಿಟ್ಟು) ಎಂದು ಎಸ್ಸಾರ್‌ ಲೆಕ್ಕ ಹಾಕಿತ್ತು ಎಂಬುದಾಗಿ ‘ಎಕಾನಾಮಿಕ್‌ ಟೈಮ್ಸ್‌’ ವರದಿ ಹೇಳುತ್ತದೆ.

ಹೀಗಿದ್ದೂ ದೊಡ್ಡ ಮೊತ್ತಕ್ಕೆ ಖರೀದಿ ನಡೆದಿದ್ದಕ್ಕೆ ಬೇರೆಯದೇ ಕಾರಣ ಇತ್ತು ಎನ್ನುತ್ತಾರೆ ಎಸ್ಸಾರ್ ವಕ್ತಾರರು. ‘ವಡಿನಾರ್‌ ಸಂಸ್ಕರಣಾ ಘಟಕ, ಅದಕ್ಕೆ ವಿದ್ಯುತ್‌ ಸರಬರಾಜು ಮಾಡುವ ಘಟಕ, ವಡಿನಾರ್‌ ಆಯಿಲ್‌ ಟರ್ಮಿನಲ್‌ ಮತ್ತು 3500 ರಿಟೇಲ್‌ ಔಟ್‌ಲೆಟ್‌ಗಳ ಖರೀದಿಗೆ ಜಾಗತಿಕ ಕಂಪನಿಗಳು ಮುಗಿಬಿದ್ದಿದ್ದರಂದ ದರ ಏರಿಕೆಯಾಯಿತು,’ ಎಂಬುದು ಅವರ ವಾದ.

ಆದರೆ ನಿರ್ವಹಣಾ ವೆಚ್ಚಕ್ಕೆ ಖರ್ಚಿಗೆ ಹೋಲಿಸಿದರೆ ಎಸ್ಸಾರ್‌ನಲ್ಲಿ ಲಾಭವೂ ಕಡಿಮೆ ಇತ್ತು. ಹೀಗಾಗಿ ‘ಇದರ ಖರೀದಿಯಿಂದ ನಿಜವಾಗಿಯೂ ರೋಸ್‌ನೆಫ್ಟ್‌ಗೆ ಲಾಭವಾಗಲಿದೆಯಾ’ ಎಂಬುದಾಗಿ ರಷ್ಯಾದ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದ್ದವು. ಈ ಕುರಿತು ವಿಶ್ಲೇಷಣಾ ವರದಿ ಪ್ರಕಟಿಸಿದ್ದ ಹೂಡಿಕೆ ಸಂಶೋಧನಾ ಸಂಸ್ಥೆ ‘ಸ್ಬೆರ್‌ಬ್ಯಾಂಕ್‌’, “ರೋಸ್‌ನೆಫ್ಟ್‌ ಎಸ್ಸಾರ್‌ಗೆ ಮೌಲ್ಯಕ್ಕಿಂತ ಎರಡು ಪಟ್ಟು ಹೆಚ್ಚಿನ ಮೊತ್ತವನ್ನು ಪಾವತಿ ಮಾಡಿದೆ,” ಎಂದು ಸ್ಪಷ್ಟವಾಗಿ ವರದಿ ಮಾಡಿತ್ತು.

ಸಾಲದ ಸುಳಿಯಲ್ಲಿ...

ಅಚ್ಚರಿಕೆಯ ಕತೆಯೆಂದರೆ ಈ ಡೀಲ್‌ನಲ್ಲಿ ಪಾಲ್ಗೊಂಡಿದ್ದ ಎರಡೂ ಕಂಪನಿಗಳು ಸಾಲದ ಸುಳಿಯಲ್ಲಿದ್ದವು. 2013-14ರಲ್ಲಿ ಟಿಎನ್‌ಕೆ-ಬಿಪಿ ಎಂಬ ಬೃಹತ್‌ ಕಂಪನಿಯನ್ನು 55 ಬಿಲಿಯನ್‌ ಡಾಲರ್‌ಗೆ ಖರೀದಿಸಿದ ನಂತರ ರೋಸ್‌ನೆಫ್ಟ್‌ ಕಂಪನಿ ಸಾಲದ ಸುಳಿಯಲ್ಲಿ ಸಿಲುಕಿತ್ತು. ಇಲ್ಲೂ ರೋಸ್‌ನೆಫ್ಟ್‌ ಹೆಚ್ಚಿನ ಮೊತ್ತ ಪಾವತಿಸಿದೆ ಎಂಬ ಆರೋಪಕ್ಕೆ ಗುರಿಯಾಗಿತ್ತು.

ಈ ಹಂತದಲ್ಲಿ ಸಾಲದಿಂದ ತನ್ನನ್ನು ತಾನು ಪಾರು ಮಾಡಿಕೊಳ್ಳಲು ಹೂಡಿಕೆದಾರರ ಹುಡುಕಾಟದಲ್ಲಿ ರೋಸ್‌ನೆಫ್ಟ್‌ ನಿರತವಾಗಿತ್ತು. ಆಗ ನೆರವಿಗೆ ಬಂದಿದ್ದೇ ಭಾರತದ ಸಾರ್ವಜನಿಕ ರಂಗದ ತೈಲ ಕಂಪನಿಗಳು.

ಇದೇ ಕಾಲಕ್ಕೆ ಇತ್ತ ಎಸ್ಸಾರ್‌ ಸಾಲದ ಸುಳಿಯಲ್ಲಿ ಸಿಲುಕಿತ್ತು. ಬ್ಯಾಂಕ್‌ಗಳು ಸಾಲ ಪಾವತಿ ಮಾಡುವಂತೆ 2010ರಿಂದ ಕಂಪನಿ ಮೇಲೆ ಒತ್ತಡ ಹೇರುತ್ತಿದ್ದರು. ಹೀಗಾಗಿ 2012ರಿಂದ ಕಂಪನಿ ಮಾರಾಟಕ್ಕೆ ಎಸ್ಸಾರ್‌ ವಿಫಲ ಯತ್ನಗಳನ್ನು ನಡೆಸುತ್ತಲೇ ಬಂದಿತ್ತು. ಈ ಸಂದರ್ಭದಲ್ಲಿ ರೋಸ್‌ನೆಫ್ಟ್‌ ಖರೀದಿ ನೆಪದಲ್ಲಿ ನೆರವಿಗೆ ಧಾವಿಸಿತ್ತು.

ಈ ಬೆಳವಣಿಗೆ ನಡೆದಿದ್ದು ಹೀಗೆ:

ಸೆಪ್ಟೆಂಬರ್‌ 2015ರಲ್ಲಿ ರೋಸ್‌ನೆಫ್ಟ್‌ ವ್ಯಾಂಕೋರ್‌ನಲ್ಲಿದ್ದ ತನ್ನ ಶೇಕಡಾ 15 ಶೇರುಗಳನ್ನು ಒಎನ್‌ಜಿಸಿ ವಿದೇಶ್‌ಗೆ ಮಾರಾಟ ಮಾಡಿತ್ತು. ಅದೇ ಕಾಲಕ್ಕೆ ಎಸ್ಸಾರ್‌ ಜತೆ ಪ್ರಾಥಮಿಕ ಹಂತದ ಮಾತುಕತೆಗಳು ಚಾಲ್ತಿಯಲ್ಲಿದ್ದವು. ಸೌದಿ ಅರೇಬಿಯಾದ ಸರಕಾರಿ ಸ್ವಾಮ್ಯದ ‘ಅರಾಮ್ಕೋ’ ಕಂಪನಿ ಎಸ್ಸಾರ್‌ ಖರೀದಿಗೆ ಮುಂದೆ ಬಂದಿತ್ತು. ಅದು ಕಂಪನಿಗೆ 54,000 ಕೋಟಿ ರೂಪಾಯಿಗಳ ಬೆಲೆ ಕಟ್ಟಿತ್ತು. ಆದರೆ ಆಗಿದ್ದೇ ಬೇರೆ. ಎಲ್ಲರಿಗಿಂತ ಹೆಚ್ಚು ಹಣ ನೀಡಿ ರೋಸ್‌ನೆಫ್ಟ್‌ ಎಸ್ಸಾರ್‌ನ್ನು ಬುಟ್ಟಿಗೆ ಹಾಕಿಕೊಂಡಿತ್ತು.

ಈ ಡೀಲ್‌ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸಮ್ಮುಖದಲ್ಲಿ ನಡೆದಿತ್ತು. ಉಫಾದಲ್ಲಿ ನಡೆದ ಉಭಯ ನಾಯಕರ ಭೇಟಿ ವೇಳೆ ರೋಸೆನೆಫ್ಟ್‌ನಲ್ಲಿ ಭಾರತದ ತೈಲ ಕಂಪನಿಗಳು ಹಣ ಹೂಡುವ ಡೀಲ್‌ ಪೂರ್ಣಗೊಂಡಿತ್ತು. ಜತೆಗೆ ರೋಸ್‌ನೆಫ್ಟ್‌‌ಗೆ ಹಣ ಪಾವತಿ ಮಾಡುವ ನಿರ್ಧಾರವನ್ನು ಆಯಿಲ್‌ ಕಂಪನಿಗಳ ಬದಲಿಗೆ ಆರ್ಥಿಕ ವ್ಯವಹಾರಗಳ ಬಗೆಗಿನ ಕ್ಯಾಬಿನೆಟ್‌ ಸಮಿತಿ ತೀರ್ಮಾನ ತೆಗೆದುಕೊಂಡಿತ್ತು. ಅಂದ ಹಾಗೆ ಇದರ ಅಧ್ಯಕ್ಷರಾಗಿದ್ದವರು ಪ್ರಧಾನಿ ನರೇಂದ್ರ ಮೋದಿ.

ಮುಂದೆ ಗೋವಾದಲ್ಲಿ ನವೆಂಬರ್‌ 2016ರಲ್ಲಿ ನಡೆದ ಬ್ರಿಕ್ಸ್‌ ಶೃಂಗ ಸಭೆಯ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಎಸ್ಸಾರ್‌ನ್ನು ರೋಸ್‌ನೆಫ್ಟ್‌ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಲಾಭ ಯಾರಿಗೆ, ನಷ್ಟ ಯಾರಿಗೆ?

ಇಡೀ ಡೀಲ್‌ನಲ್ಲಿ ಯಾರಿಗೆ ಲಾಭ ಯಾರಿಗೆ ನಷ್ಟ ಎಂಬುದು ಇವತ್ತು ಸ್ಪಷ್ಟವಾಗಿ ಗೋಚರವಾಗುತ್ತಿದೆ. 2016ರವರೆಗೆ ತನ್ನ ಸಾಲದ ಮೇಲಿನ ಬಡ್ಡಿ ಕಟ್ಟಲೂ ಒದ್ದಾಡುತ್ತಿದ್ದ ರೋಸ್‌ನೆಫ್ಟ್‌ ಬರೋಬ್ಬರಿ 82,000 ಕೊಟಿ ರೂಪಾಯಿಗಳನ್ನು ಜೇಬಿಗಿಳಿಸಿಕೊಂಡಿತು. ಈ ಮೂಲಕ ತನ್ನ ಅರ್ಧ ಸಾಲವನ್ನು ಸುಲಭದಲ್ಲಿ ಕಟ್ಟುವಂತಾಯಿತು.

ಅತ್ತ ಅಮೆರಿಕಾದ ಆರ್ಥಿಕ ನಿರ್ಬಂಧಗಳಲ್ಲಿ ತೊಳಲಾಡುತ್ತಿದ್ದ ರೋಸ್‌ನೆಫ್ಟ್‌ ಕೂಡ ಲಾಭ ಮಾಡಿಕೊಂಡಿತು. ಜತೆಗೆ ಭಾರತದ ಮಾರುಕಟ್ಟೆಗೆ ಪ್ರವೇಶವನ್ನೂ ಪಡೆಯಿತು.

ಹೀಗೆ ಭಾರತದ ತೈಲ ಕಂಪನಿಗಳಿಂದ ರಷ್ಯಾಕ್ಕೆ ಹೊರಟ ಹಣ ಪ್ರಧಾನಿ ಮೋದಿ ಮುಖ್ಯಮಂತ್ರಿಯಾಗಿದ್ದ ಗುಜರಾತ್‌ನ ಎಸ್ಸಾರ್‌ ಕಂಪನಿಗೆ ಪರೋಕ್ಷವಾಗಿ ಬಂದು ಬಿತ್ತು. ಅಲ್ಲಿಗೆ ಹೂಡಿಕೆಯ ಒಂದು ವೃತ್ತ ಪೂರ್ಣಗೊಂಡಿತ್ತು. ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅವರ ಬೆನ್ನಿಗೆ ನಿಂತಿದ್ದ ಎಸ್ಸಾರ್‌, ಅದೇ ವ್ಯಕ್ತಿ ಪ್ರಧಾನಿಯಾಗಿದ್ದಾಗ ಅವರ ಕೃಪಾಕಟಾಕ್ಷದಿಂದ ಮರುಜೀವ ಪಡೆದುಕೊಂಡಿತು.

Also read: ‘ಒಎನ್‌ಜಿಸಿಗೆ ಮೋದಿ ನಿರ್ಧಾರಗಳೇ ಮಾರಕ’: 25,000 ಕೋಟಿ ಸಾಲದ ಸುಳಿಯಲ್ಲಿ ಸಾರ್ವಜನಿಕ ಕಂಪನಿ