samachara
www.samachara.com
ಜಿಲ್ಲಾಧಿಕಾರಿ ಆದೇಶಕ್ಕೂ ಸಿಗದ ಕಿಮ್ಮತ್ತು; ಮತ್ತೆ ಜಲ್ಲಿಯಾಗುತ್ತಿದೆ ಬೇಬಿ ಬೆಟ್ಟ
COVER STORY

ಜಿಲ್ಲಾಧಿಕಾರಿ ಆದೇಶಕ್ಕೂ ಸಿಗದ ಕಿಮ್ಮತ್ತು; ಮತ್ತೆ ಜಲ್ಲಿಯಾಗುತ್ತಿದೆ ಬೇಬಿ ಬೆಟ್ಟ

ಸಚಿವ ಪುಟ್ಟರಾಜು ನೇತೃತ್ವದ ಅಕ್ರಮ ಗಣಿಗಾರಿಕೆಗೆ ಅಂತ್ಯ ಹಾಡದಿದ್ದರೆ, ಮಂಡ್ಯ- ಮೈಸೂರು ಭಾಗದ ಎಲ್ಲಾ ಬೆಟ್ಟಗಳೂ ಜಲ್ಲಿ, ಜಲ್ಲಿಪುಡಿಯಾಗಲಿವೆ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತಲ 20 ಕಿಮೀ ಪ್ರದೇಶವನ್ನು ಅರಣ್ಯ ಸಂರಕ್ಷಣಾ ಹಾಗೂ ಜೀವ ವೈವಿಧ್ಯ ವಲಯದ ಅಡಿಯಲ್ಲಿ ಗುರುತಿಸಲಾಗಿದೆ. ಗಣಿಗಾರಿಕೆ ಕಾಯ್ದೆ -1952 ರ ಪ್ರಕಾರ ಈ ಭಾಗದಲ್ಲಿ ಗಣಿಗಾರಿಕೆಗೆ ಕಡ್ಡಾಯ ನಿಷೇಧವಿದೆ. ಅರಣ್ಯ ಪ್ರದೇಶ, ಕೃಷಿ ಭೂಮಿ ಹಾಗೂ ಸೂಕ್ಷ್ಮ ವಲಯಗಳಾದ ಅಣೆಕಟ್ಟು ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅವಕಾಶವೇ ಇಲ್ಲ.

ಹಾಗಿದ್ದರು ಕೆಆರ್‌ಎಸ್ ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶದಲ್ಲಿ ಸಚಿವ ಸಿ.ಎಸ್.ಪುಟ್ಟರಾಜು ಅಂಡ್ ಕಂಪೆನಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿದೆ. ಈ ಕುರಿತು ‘ಸಮಾಚಾರ’ ನಾಲ್ಕು ದಿನಗಳ ಹಿಂದೆ (ಜನವರಿ 31) ಸಚಿವ ಪುಟ್ಟರಾಜುರಿಂದ ಕೆಆರ್‌ಎಸ್‌ ರಕ್ಷಿಸಿ : ಅಕ್ರಮ ಗಣಿಗಾರಿಕೆ, ಅಪಾಯದಲ್ಲಿದೆ ಐತಿಹಾಸಿಕ ಅಣೆಕಟ್ಟುಎಂಬ ವರದಿ ಮಾಡಿತ್ತು.

Also read: ‘ಸಚಿವ ಪುಟ್ಟರಾಜುರಿಂದ ಕೆಆರ್‌ಎಸ್ ರಕ್ಷಿಸಿ’: ಅಕ್ರಮ ಗಣಿಗಾರಿಕೆ, ಅಪಾಯದಲ್ಲಿದೆ ಐತಿಹಾಸಿಕ ಅಣೆಕಟ್ಟು

ಅಕ್ರಮ ಕಲ್ಲುಗಣಿಗಾರಿಕೆಗೆ ನೆರವು ನೀಡುವ ನಿಟ್ಟಿನಲ್ಲಿ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಪುಣೆ ಮೂಲದ ವಿಜ್ಞಾನಿಗಳ ತಂಡವನ್ನು ಕೆಲ ದಿನಗಳ ಹಿಂದೆ ಜಿಲ್ಲಾಡಳಿತವೇ ಕರೆಸಿತ್ತು. ಆದರೆ ಜಿಲ್ಲಾಧಿಕಾರಿ ಹಾಗೂ ನೀರಾವರಿ ಇಲಾಖೆಯ ಈ ನಡೆಗೆ ಜಿಲ್ಲಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಕೆಆರ್‌ಎಸ್ ಉಳಿಸಿ ಜನಾಂಧೋಲನ ಸಮಿತಿ ಉಗ್ರ ಹೋರಾಟ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಪುಣೆ ವಿಜ್ಞಾನಿಗಳ ತಂಡ ಜಿಲ್ಲೆಯಿಂದ ವಾಪಸ್‌ ಹೋಗಿತ್ತು. ಆದರೆ ಸಚಿವ ಸಿ.ಎಸ್. ಪುಟ್ಟರಾಜು ಅಂಡ್ ಕಂಪೆನಿ ಬೇಬಿ ಬೆಟ್ಟದಲ್ಲಿ ಸದ್ದಿಲ್ಲದೆ ಮತ್ತೆ ಗಣಿಗಾರಿಕೆ ಆರಂಭಿಸಿದೆ. ಪ್ರಶ್ನಿಸಲು ಹೋದ ಪತ್ರಕರ್ತರಿಗೂ ಧಮಕಿ ಹಾಕಲಾಗಿದೆ.

ಪುಟ್ಟರಾಜು ಮತ್ತು ನಿಲ್ಲದ ಅಕ್ರಮ:

ಸಚಿವ ಸಿ.ಎಸ್. ಪುಟ್ಟರಾಜು ಇಂದು ರಾಜ್ಯ ಸರಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದಾರೆ. ಅಲ್ಲದೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರೂ ಹೌದು. ಒಮ್ಮೆ ಮಂಡ್ಯ ರಾಜಕಾರಣದ ಕಡೆಗೆ ಕಣ್ಣಾಯಿಸಿದರೆ ಎಲ್ಲೆಡೆ ತೆನೆಹೊತ್ತ ಮಹಿಳೆಯ ಕಾರುಬಾರೇ ಕಣ್ಣಿಗೆ ರಾಚುತ್ತದೆ. ಇಂದು ಇಡೀ ಮಂಡ್ಯ ಸಂಪೂರ್ಣ ಜೆಡಿಎಸ್ ಮಯವಾಗಿದೆ. ಓರ್ವ ಸಂಸದ ಹಾಗೂ ಏಳು ಜನ ಶಾಸಕರು ಜೆಡಿಎಸ್ ಪಕ್ಷದವರೇ.

ಇಡೀ ಮಂಡ್ಯ ಜೆಡಿಎಸ್ ತೆಕ್ಕೆಗೆ ಹೀಗೆ ಜಾರಿದ ಮೇಲೆ ಹಾಗೂ ಜೆಡಿಎಸ್‌ ಪಕ್ಷದವರೇ ಮುಖ್ಯಮಂತ್ರಿಯಾಗಿರುವಾ ಜಿಲ್ಲೆಯಲ್ಲಿ ಇನ್ನು ಇವರನ್ನು ಪ್ರಶ್ನಿಸುವವರು ಯಾರು ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಅಕ್ಷರಶಃ ಜಿಲ್ಲಾಧಿಕಾರಿಯೂ ಇವರ ವಿರುದ್ಧ ಸೊಲ್ಲೆತ್ತುವ ವಾತಾವರಣ ಮಂಡ್ಯದಲ್ಲಿಲ್ಲ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ನೀವೆ ಊಹಿಸಿಕೊಳ್ಳಿ.

ಇದೆಲ್ಲದರ ಪರಿಣಾಮ ಜಿಲ್ಲಾಧಿಕಾರಿಯ ಆದೇಶದ ಹೊರತಾಗಿಯೂ ಮತ್ತೆ ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮುಂದುವರಿದಿದೆ. ಬೇಬಿ ಬೆಟ್ಟ ಮಾತ್ರವಲ್ಲ ಮುಖ್ಯಮಂತ್ರಿ ಕುಮಾರಸ್ವಾಮಿಯ ಸಂಪೂರ್ಣ ಬೆಂಬಲವಿರುವ ಸಚಿವ ಸಿ.ಎಸ್.ಪುಟ್ಟರಾಜು ತೆಕ್ಕೆಯಿಂದ ಮೈಸೂರು- ಮಂಡ್ಯ ಜಿಲ್ಲೆಯ ಯಾವ ಬೆಟ್ಟವನ್ನೂ ಉಳಿಸುವುದು ಇದೀಗ ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಅಕ್ರಮ ಕಲ್ಲುಗಣಿಗಾರಿಕೆಯಿಂದ ನಾಮಾವಶೇಷವಾಗಿರುವ ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟ.
ಅಕ್ರಮ ಕಲ್ಲುಗಣಿಗಾರಿಕೆಯಿಂದ ನಾಮಾವಶೇಷವಾಗಿರುವ ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟ.

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್:

ಅಸಲಿಗೆ ಮಂಡ್ಯ ಜಿಲ್ಲೆಯ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಅವಕಾಶ ಇಲ್ಲ. ಕೆಆರ್‌ಎಸ್ ಅಣೆಕಟ್ಟೆಗೆ ಕೇವಲ 20 ಕಿ.ಮೀ. ದೂರವಿರುವ ಈ ಪ್ರದೇಶ ಅರಣ್ಯ ಹಾಗೂ ಜೀವ ವೈವಿಧ್ಯ ವಲಯದ ಅಡಿಯಲ್ಲಿ ಬರುತ್ತದೆ. ಇಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲು ಕೇಂದ್ರ ಅರಣ್ಯ ಇಲಾಖೆಗೂ ಸಹ ಅಧಿಕಾರವಿಲ್ಲ. ಆದರೆ ಅರಣ್ಯ ಇಲಾಖೆಯ ಅನುಮತಿಯೂ ಇಲ್ಲದೆ ದಶಕಗಳಿಂದ ಇಲ್ಲಿ ವ್ಯಾಪಕವಾಗಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದೇ ಈವರೆಗಿನ ದೊಡ್ಡ ಪ್ರಶ್ನೆ.

ಬೇಬಿ ಬೆಟ್ಟ ಸರ್ವೇ ನಂ.1 ರಲ್ಲಿ 1,487 ಎಕರೆ ಪ್ರದೇಶವನ್ನು ಸಚಿವ ಪುಟ್ಟರಾಜು ಅಂಡ್ ಕಂಪೆನಿ ಈಗಾಗಲೇ ಬಂಡೆಗಳನ್ನು ಜಲ್ಲಿ ಮಾಡಿಯಾಗಿದೆ. ಈ ಕುರಿತು ಆರ್‌ಟಿಐ ಕಾರ್ಯಕರ್ತ ಕೆ.ಆರ್. ರವೀಂದ್ರ ಸಲ್ಲಿಸಿದ್ದ ಆರ್‌ಟಿಐ ಅರ್ಜಿ ವರ್ಷಗಳ ಹಿಂದೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ನಂತರ ಪರಿಶೀಲನೆ ನಡೆಸಿದ್ದ ಕರ್ನಾಟಕ ರಾಜ್ಯ ನೈಸರ್ಗಿಕ ಉಪುಸ್ತುವಾರಿ ಕೇಂದ್ರ, ಬೇಬಿ ಬೆಟ್ಟದ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಆಪತ್ತಿದೆ ಎಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿತ್ತು. ಜಿಲ್ಲಾಧಿಕಾರಿ ಎನ್‌. ಮಂಜುಶ್ರೀ 2018ರ ಸೆಪ್ಟೆಂಬರ್ 27 ರಂದು ಈ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಿಸಿ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಿದ್ದರು.

ಆದರೆ ಇದೇ ಸಮಯದಲ್ಲಿ ಇಲ್ಲಿ ಗಣಿಗಾರಿಕೆ ನಡೆಸಿದರೆ ಕೆಆರ್‌ಎಸ್‌ಗೆ ಅಪತ್ತಿದೆಯೇ ಎಂದು ಪರಿಶೀಲನೆ ನಡೆಸಲು ಪುಣೆಯಿಂದ 5 ಜನ ವಿಜ್ಞಾನಿಗಳ ತಂಡವನ್ನು ಕರೆಸಿ ಟ್ರಯಲ್ ಬ್ಲಾಸ್ಟ್ ಮಾಡಿಸುವ ಯೋಜನೆಯೂ ಸದ್ದಿಲ್ಲದೆ ನಡೆದಿತ್ತು. ಗಣಿಗಾರಿಕೆಗೆ ನಿಷೇಧ ಹೇರಿದ ಮೇಲೆ ಮತ್ತೆ ಏಕೆ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಎಂಬ ಪ್ರಶ್ನೆ ಇಡೀ ಜಿಲ್ಲೆಯ ಪ್ರಜ್ಞಾವಂತರನ್ನು ಕಾಡಿದ್ದು ಮಾತ್ರ ಸುಳ್ಳಲ್ಲ.

ಒಂದು ವೇಳೆ ಲಂಚ ಪಡೆದ ಅಧಿಕಾರಿಗಳು ಇಲ್ಲಿ ಗಣಿಗಾರಿಕೆ ನಡೆಸುವುದರಿಂದ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲ ಎಂದು ವರದಿ ನೀಡಿದರೆ ಮತ್ತೆ ಗಣಿಗಾರಿಕೆ ಆರಂಭವಾಗುವ ಅಪಾಯವಿತ್ತು. ಈ ವಿಜ್ಞಾನಿಗಳ ತಂಡಕ್ಕೆ ಈಗಾಗಲೇ ಎಲ್ಲಾ ಅಕ್ರಮ ಗಣಿಧಣಿಗಳು ಒಗ್ಗಟ್ಟಾಗಿ ಲಂಚ ನೀಡಲು ಮೂರು ಕೋಟಿ ಹಣ ವಸೂಲಿ ಮಾಡಿರುವ ಕುರಿತ ಸುದ್ದಿಗಳು ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಅಸಲಿಗೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅರಣ್ಯೇತರ ಚಟುವಟಿಕೆ ನಡೆಸಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕು. ಆದರೆ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಟ್ರಯಲ್ ಬ್ಲಾಸ್ಟ್‌ಗೆ ಜಿಲ್ಲಾಧಿಕಾರಿ ಹೇಗೆ ಅನುಮತಿ ನೀಡಿದರು ಎಂದು ಪ್ರಶ್ನಿಸಿದ ಆರ್‌ಟಿಐ ಕಾರ್ಯಕರ್ತ ಕೆ.ಆರ್. ರವೀಂದ್ರ, ಜಿಲ್ಲಾಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸಿ ಟ್ರಯಲ್‌ ಬ್ಲಾಸ್ಟ್‌ ಅನ್ನು ನಿಲ್ಲಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರಿಗೆ ನೋಟೀಸ್ ನೀಡಿ, ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಪ್ರಕಾರ ಅರಣ್ಯ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಮಾಡಬಾರದು ಹಾಗೂ ಕೇಂದ್ರ ಸರಕಾರದ ಅನುಮತಿ ಇಲ್ಲದೆ ಅರಣ್ಯದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆಗಳನ್ನು ನಡೆಸಬಾರದು ಎಂದು ಆದೇಶಿಸಿದ್ದಾರೆ. ಇದೆಲ್ಲದರ ಪರಿಣಾಮ ಪುಣೆ ವಿಜ್ಞಾನಿಗಳ ತಂಡ ಟ್ರಯಲ್ ಬ್ಲಾಸ್ಟಿಂಗ್ ಕೈಬಿಟ್ಟು ಕಳೆದ ವಾರವೇ ಜಿಲ್ಲೆಯಿಂದ ಹೊರಟಿದೆ.

ಇಲ್ಲಿ ಹುಟ್ಟುವ ಮತ್ತೊಂದು ಪ್ರಶ್ನೆ ಎಂದರೆ ಅರಣ್ಯ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ಇಲ್ಲ ಎಂದಾದರೆ, ಇಷ್ಟು ವರ್ಷಗಳ ಕಾಲ ಅಕ್ರಮ ಗಣಿಗಾರಿಕೆಗೆ ಹೇಗೆ ಅನುಮತಿ ಕೊಟ್ಟರು?, ಅನುಮತಿ ಕೊಟ್ಟವರು ಯಾರು? ಎಂಬ ಪ್ರಶ್ನೆಗಳು ಉಳಿದುಕೊಳ್ಳುತ್ತವೆ.

ಮತ್ತೆ ಶುರುವಾಯ್ತು ಅಕ್ರಮ ಗಣಿಕಾರಿಕೆ:

ಅತ್ತ ಪುಣೆ ವಿಜ್ಞಾನಿಗಳ ತಂಡ ಜಿಲ್ಲೆಯಿಂದ ಹೋಗುತ್ತಿದ್ದಂತೆಯೇ ಇತ್ತ ಜಿಲ್ಲಾಧಿಕಾರಿಯ ಆದೇಶವನ್ನೂ ಲೆಕ್ಕಿಸದೆ ಮತ್ತೆ ಅಕ್ರಮ ಗಣಿಗಾರಿಕೆ ಆರಂಭವಾಗಿದೆ. ಕ್ರಷರ್‌ಗಳ ಆರ್ಭಟ ಜೋರಾಗಿದೆ. ಆದರೆ ಇದನ್ನು ಪ್ರಶ್ನಿಸಬೇಕಾದ ಅಧಿಕಾರಿಗಳು ಮಾತ್ರ ಜಾಣ ಕುರುಡಿಗೆ ಶರಣಾಗಿದ್ದಾರೆ.

ಮಂಡ್ಯದಲ್ಲಿ ಜಿಲ್ಲಾಧಿಕಾರಿಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬದು ಇಲ್ಲಿ ವೇದ್ಯವಾಗುತ್ತಿದೆ. ಸಚಿವ ಸಿ.ಎಸ್. ಪುಟ್ಟರಾಜು ಪ್ರಭಾವ ಬಳಸಿಕೊಂಡು ಪುಡಿ ರೌಡಿಗಳು ಹಿರಿಯ ಅಧಿಕಾರಿಗಳನ್ನೇ ಬೆದರಿಸುವ ಮಟ್ಟಕ್ಕೆ ಬೆಳೆದಿದ್ದಾರೆ. ಹೀಗಾಗಿ ಅಧಿಕಾರಿಗಳ್ಯಾರು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಲೇ ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಭಯಹಸ್ತ ಸಚಿವ ಪುಟ್ಟರಾಜು ಮೇಲಿದೆ. ಇದೇ ಕಾರಣಕ್ಕೆ ಜಿಲ್ಲಾಧಿಕಾರಿಯೂ ಕಾನೂನು ಕ್ರಮ ಜರುಗಿಸುತ್ತಿಲ್ಲ ಎನ್ನಲಾಗುತ್ತಿದೆ.

ಸಚಿವ ಪುಟ್ಟರಾಜು ಬೆಂಬಲಿಗರಿಂದ ಪತ್ರಕರ್ತರ ಮೇಲೆ ಹಲ್ಲೆ ನಡೆದಿದ್ದು ಆ ಕುರಿತ ಎಫ್‌ಐಆರ್ ಪ್ರತಿ.
ಸಚಿವ ಪುಟ್ಟರಾಜು ಬೆಂಬಲಿಗರಿಂದ ಪತ್ರಕರ್ತರ ಮೇಲೆ ಹಲ್ಲೆ ನಡೆದಿದ್ದು ಆ ಕುರಿತ ಎಫ್‌ಐಆರ್ ಪ್ರತಿ.

ಬೇಬಿ ಬೆಟ್ಟದಲ್ಲಿ ಮತ್ತೆ ಅಕ್ರಮ ಗಣಿಗಾರಿಕೆ ಆರಂಭವಾಗಿರುವ ಬಗ್ಗೆ ವರದಿ ಮಾಡಲು ಶನಿವಾರ (ಫೆಬ್ರವರಿ 2) ಕೆಲ ಪತ್ರಕರ್ತರು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದರು. ಸಚಿವ ಪುಟ್ಟರಾಜು ಬೆಂಬಲಿಗರು ಪತ್ರಕರ್ತರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಫೋಟೋ ತೆಗೆಯದಂತೆ, ವಿಡಿಯೊ ಮಾಡದಂತೆ ತಡೆಯೊಡ್ಡಿ, ಬೈಕ್ ಕೀ ಕಸಿದುಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಒಟ್ಟಿನಲ್ಲಿ ಸಚಿವ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯ ಅಂಧಾ ದರ್ಬಾರ್ ನಡೆಯುತ್ತಿದೆ. ಇಲ್ಲಿ ಅಧಿಕಾರಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪತ್ರಕರ್ತರಿಗೆ, ಜನಪರ ಹೋರಾಟಗಾರರಿಗೆ ಭದ್ರತೆ ಇಲ್ಲದಂತಾಗಿದೆ. ಈ ಅಕ್ರಮಗಳಿಗೆ ಅಂತ್ಯ ಹಾಡದಿದ್ದರೆ, ಮಂಡ್ಯ- ಮೈಸೂರು ಭಾಗದ ಎಲ್ಲಾ ಬೆಟ್ಟಗಳೂ ಗಣಿಗಾರಿಕೆ ಹೆಸರಲ್ಲಿ ಜಲ್ಲಿ, ಜಲ್ಲಿಪುಡಿಯಾಗಲಿವೆ. ಈ ಅಕ್ರಮ ಗಣಿಗಾರಿಕೆಯಿಂದ ಕನ್ನಡಿಗರ ಹೆಮ್ಮೆಯ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಾಗುವ ಮುನ್ನ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕಿದೆ.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆಗಾಗಿ ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.