samachara
www.samachara.com
ಕೈ ಬಂಡಾಯದಿಂದ ಬೇಸತ್ತ ‘ಸಾಂದರ್ಭಿಕ ಶಿಶು’; ಬಜೆಟ್‌ ವೇಳೆಗೆ ಶಮನವಾಗಲಿದೆಯೇ ಅತೃಪ್ತರ ಬಿಸಿ?
COVER STORY

ಕೈ ಬಂಡಾಯದಿಂದ ಬೇಸತ್ತ ‘ಸಾಂದರ್ಭಿಕ ಶಿಶು’; ಬಜೆಟ್‌ ವೇಳೆಗೆ ಶಮನವಾಗಲಿದೆಯೇ ಅತೃಪ್ತರ ಬಿಸಿ?

ಕಾಂಗ್ರೆಸ್‌ನ ಅತೃಪ್ತ ಶಾಸಕರ ಬಂಡಾಯದ ಬಿಸಿ ಸಮ್ಮಿಶ್ರ ಸರಕಾರವನ್ನು ಕಾಡುತ್ತಲೇ ಇದೆ. ಈ ಮಧ್ಯೆ ಬಜೆಟ್‌ ಅಧಿವೇಶನ ಆರಂಭವಾಗುತ್ತಿದೆ.

Team Samachara

ರಾಜ್ಯ ರಾಜಕಾರಣದಲ್ಲಿ ಇದೀಗ ಎಲ್ಲೆಡೆ ಸರಕಾರ ಉಳಿಸಿಕೊಳ್ಳುವ ಮತ್ತು ಉರುಳಿಸುವ ಮಾತುಗಳೇ ಕೇಳಿಬರುತ್ತಿವೆ. ಸಾರ್ವಜನಿಕ ವಲಯದಲ್ಲೂ ಇಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಶುಕ್ರವಾರ ಬಜೆಟ್ ಮಂಡನೆಗೂ ಮುನ್ನವೇ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಟೊಂಕಕಟ್ಟಿ ನಿಂತಿದೆ. ಇನ್ನೊಂದೆಡೆ ಕುರ್ಚಿಯನ್ನು ಉಳಿಸಿಕೊಳ್ಳಲು ಕಾಂಗ್ರೆಸ್- ಜೆಡಿಎಸ್ ನಾಯಕರು ಅಖಾಡಕ್ಕಿಳಿದಿದ್ದಾರೆ.

ಹೀಗಾಗಿ ರಾಜ್ಯ ರಾಜಕಾರಣ ಮತ್ತೊಮ್ಮೆ ರೋಚಕ ಘಟಕಕ್ಕೆ ತಲುಪಿದ್ದು, ಸದ್ಯಕ್ಕೆ ಯಾರ ಕೈ ಮೇಲಾಗಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಹುಟ್ಟಿಸಿದೆ. ಆಪರೇಷನ್ ಕಮಲದ ಮೂಲಕ ಕೆಲ ಶಾಸಕರನ್ನು ಸೆಳೆದು ಅವರಿಂದ ರಾಜೀನಾಮೆ ಕೊಡಿಸಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಇದಕ್ಕೆ ಪ್ರತಿತಂತ್ರ ಹೆಣೆದಿರುವ ಕಾಂಗ್ರೆಸ್- ಜೆಡಿಎಸ್ ನಾಯಕರು ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಶಾಸಕರೆಲ್ಲರಿಗೂ ವಿಪ್ ಜಾರಿ ಮಾಡುವ ಮೂಲಕ ಪ್ರತಿಪಕ್ಷಗಳ ಅಸ್ತ್ರಕ್ಕೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ.

"ನನ್ನ ಸರ್ಕಾರ ಹೇಗೆ ರಕ್ಷಣೆ ಮಾಡಿಕೊಳ್ಳಬೇಕೆಂಬುದು ನನಗೆ ಗೊತ್ತು. ಸರ್ಕಾರವನ್ನು ಅಸ್ಥಿರಗೊಳಿಸಿ ಮುಖ್ಯಮಂತ್ರಿಯಾಗಲು ಮುಂದಾಗಿರುವ ಯಡಿಯೂರಪ್ಪನವರ ನಡವಳಿಕೆಗೆ ಪಕ್ಷದಲ್ಲೇ ಸಾಕಷ್ಟು ಅಸಮಾಧಾನವಿದೆ. ಯಾವುದೇ ಶಾಸಕರು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ನನ್ನ ಬಳಿಯೇ ಹೇಳಿದ್ದಾರೆ. ಬಿಜೆಪಿಯಲ್ಲಿರುವ ಶಾಸಕರೇ ನನ್ನ ಸರಕಾರವನ್ನು ರಕ್ಷಣೆ ಮಾಡುತ್ತಾರೆ. ಬಿಜೆಪಿ ನಾಯಕರು ಎಷ್ಟೇ ಹಣದ ಅಮಿಷ ಒಡ್ಡಿದರೂ ನಮ್ಮ ಸರಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

"ನಾವು ಆಪರೇಷನ್ ಕಮಲ ನಡೆಸುವ ಅಗತ್ಯವಿಲ್ಲ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ಮಂಡಿಸುವುದಿಲ್ಲ. ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕೈಕೊಟ್ಟರೆ ಸರ್ಕಾರ ರಚನೆ ಮಾಡಲು ಸಿದ್ಧ. ಆದರೆ, ಅದು ಹೇಗೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡುವುದಿಲ್ಲ" ಎನ್ನುವ ಮೂಲಕ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲ ನಾಳೆ ಆಪರೇಷನ್ ಕಮಲ ನಡೆಯಲಿದೆ ಎಂಬ ಸುಳಿವನ್ನು ನೀಡಿದ್ದಾರೆ.

ಸರಕಾರದ ವಿರುದ್ಧ ಮುನಿಸಿಕೊಂಡು ಕಳೆದ ಮೂರು ವಾರಗಳಿಂದ ಯಾರ ಸಂಪರ್ಕಕ್ಕೂ ಸಿಗದೆ ರಹಸ್ಯ ಸ್ಥಳದಲ್ಲಿರುವ ಭಿನ್ನಮತೀಯ ಶಾಸಕರು ತೆಗೆದುಕೊಳ್ಳುವ ತೀರ್ಮಾನದ ಮೇಲೆ ತೆರೆಮರೆಯ ಆಟಗಳು ಪ್ರಾರಂಭವಾಗಲಿವೆ. ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ನಾಗೇಂದ್ರ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಹಾಗೂ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಂಪ್ಲಿಯ ಗಣೇಶ್, ಹಾಗೂ ಮಸ್ಕಿಯ ಪ್ರತಾಪಗೌಡ ಪಾಟೀಲ್ ಸೇರಿದಂತೆ ಅನೇಕರು ಈಗಲೂ ಬಿಜೆಪಿಯ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಇವರಲ್ಲಿ ನಾಲ್ವರು ಶಾಸಕರಿಗೆ ಕೆಪಿಸಿಸಿ ನೋಟಿಸ್ ಜಾರಿ ಮಾಡಿದೆ.

"ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದೇ ಅನುಮಾನ. ಕಾಂಗ್ರೆಸ್- ಜೆಡಿಎಸ್ ಶಾಸಕರು ಕದ್ದುಮುಚ್ಚಿ ಓಡಾಡುತ್ತಿದ್ದಾರೆ. ಕಳೆದ 20 ದಿನಗಳಿಂದ ಅನೇಕ ಶಾಸಕರು ಸಿಎಂ ಕೈಗೆ ಸಿಗುತ್ತಿಲ್ಲ. ಸರಕಾರ ರಚಿಸಲು ನಾವು ಸಿದ್ಧರಿದ್ದೇವೆ. ಅಲ್ಲಿಯವರೆಗೂ ಕಾದು ನೋಡಿ" ಎಂದು ಬಿಜೆಪಿ ಮುಖಂಡ ಆರ್. ಅಶೋಕ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿರುವುದು ಕೂಡಾ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈವಾಡವಿರುವ ಬಗ್ಗೆ ನಾನು ಆಧಾರರಹಿತವಾಗಿ ಏನನ್ನೂ ಹೇಳಲಾರೆ. ಆದರೆ, ಕರ್ನಾಟಕದ ಬಿಜೆಪಿ ನಾಯಕರು ಇಲ್ಲಿ ಸರಕಾರ ಬೀಳಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಯಡಿಯೂರಪ್ಪನವರಿಗೆ ನಾನು ಮೂರು ದಿನ ಮುಖ್ಯಮಂತ್ರಿಯಾದೆನಲ್ಲ ಎಂಬ ನೋವಿದೆ.
- ಎಚ್‌.ಡಿ. ದೇವೇಗೌಡ, ಜೆಡಿಎಸ್ ವರಿಷ್ಠ

ಸರಕಾರ ಉಳಿಸಿಕೊಳ್ಳುವ ಪ್ರಯತ್ನದ ಜತೆಯಲ್ಲೇ ವಿಧಾನಸಭೆಯಲ್ಲಿ ಹಣಕಾಸು ವಿಧೇಯಕ ಅಂಗೀಕಾರವಾಗುವಂತೆ ನೋಡಿಕೊಳ್ಳುವ ತಲೆನೋವು ಸರಕಾರವನ್ನು ಕಾಡುತ್ತಿದೆ. ಕುಮಾರಸ್ವಾಮಿ ಫೆ. 8ರಂದು 2019-20ನೇ ಸಾಲಿನ ಬಜೆಟ್‌ ಮಂಡಿಸಲಿದ್ದು, 15ರಂದು ಹಣಕಾಸು ವಿಧೇಯಕ ಲೇಖಾನುದಾನ ಪಡೆಯಲಿದ್ದಾರೆ. ವಿಧೇಯಕಕ್ಕೆ ಒಪ್ಪಿಗೆ ಪಡೆಯುವುದು ಕುಮಾರಸ್ವಾಮಿ ಮುಂದಿರುವ ದೊಡ್ಡ ಸವಾಲು.

ಬಜೆಟ್ ಅಂಗೀಕಾರವಾಗದೆ ಬೊಕ್ಕಸದಿಂದ ಒಂದು ಪೈಸೆ ಖರ್ಚು ಮಾಡಲೂ ಸಾಧ್ಯವಿಲ್ಲವಾದ್ದರಿಂದ ಮೈತ್ರಿ ಸರಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಅವಿಶ್ವಾಸ ಮಂಡನೆ ಅವಕಾಶವನ್ನು ಕಾಯ್ದಿರಿಸಿಕೊಂಡು ಬಜೆಟ್ ಬಿದ್ದು ಹೋಗುವಂತೆ ನೋಡಿಕೊಳ್ಳಲು ಇರುವ ಅವಕಾಶವನ್ನು ಬಿಜೆಪಿ ಬಳಸಿಕೊಳ್ಳಬಹುದೆಂಬ ಅನುಮಾನವೂ ಸರಕಾರದಲ್ಲಿ ಇಮ್ಮಡಿಗೊಳ್ಳುತ್ತಿದೆ.

ಆಡಳಿತ ಪಕ್ಷದ ಜತೆ ಕೈಜೋಡಿಸಿದ್ದ ಇಬ್ಬರು ಪಕ್ಷೇತರರು ಬಿಜೆಪಿ ಕಡೆ ಹೋಗಿದ್ದಾರೆ. ಹೀಗಾಗಿ ಸ್ಪೀಕರ್ ಹಾಗೂ ಆಂಗ್ಲೋ ಇಂಡಿಯನ್ ಸದಸ್ಯರು ಸೇರಿ ಆಡಳಿತ ಪಕ್ಷದ ಸದಸ್ಯ ಬಲ 119 ಇದೆ. ಬಿಜೆಪಿಗೆ ಪಕ್ಷೇತರರು ಸೇರಿ 108 ಸದಸ್ಯರ ಬಲ ಇದೆ. ಬಿಜೆಪಿ ಲೆಕ್ಕ ಹಾಕಿರುವ ರೀತಿಯಲ್ಲೇ ಹನ್ನೊಂದು ಆಡಳಿತಾರೂಢ ಶಾಸಕರು ಗೈರಾದರೆ ಬಜೆಟ್‍ಗೆ ಒಪ್ಪಿಗೆ ಸಿಗುವ ಸಾಧ್ಯತೆಗಳಿಲ್ಲ. ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿ ಬಗ್ಗೆ ನಂಬಿಕೆ ಇಲ್ಲದ ಶಾಸಕರು ಬಜೆಟ್ ಅಂಗೀಕಾರಕ್ಕೆ ಅವಕಾಶ ನೀಡಲಾರರು ಎಂಬುದು ಬಿಜೆಪಿ ನಂಬಿಕೆ.

ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಸಿಗದೇ ಅಂತರ ಕಾಯ್ದುಕೊಂಡಿರುವ ಅತೃಪ್ತ ಶಾಸಕರ ನಡೆ ಕಾಂಗ್ರೆಸ್‍ನಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದು, ಬಜೆಟ್ ಅವೇಶನದ ಮೇಲೆ ಕರಿನೆರಳು ಬೀರಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ, ಸರಕಾರದ ಬಹುಮತಕ್ಕೆ ತಕ್ಷಣವೇ ಧಕ್ಕೆ ಉಂಟಾಗದಿರಬಹುದು.

ಆದರೆ, ಜಂಟಿ ಅವೇಶನ ಹಾಗೂ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ಬಜೆಟ್‍ಗೆ ಒಪ್ಪಿಗೆ ಪಡೆಯುವ ಸಂದರ್ಭದಲ್ಲಿ ಸರಕಾರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಈ ಸಂಕಷ್ಟ ಪರಿಹಾರಕ್ಕಾಗಿ ಕಾಂಗ್ರೆಸ್‌ ವಿಪ್‌ ಅಸ್ತ್ರ ಬಳಸಲಿದೆ. ಒಂದೊಮ್ಮೆ ಅತೃಪ್ತ ಶಾಸಕರು ಗೈರಾದರೆ ಶಾಸಕತ್ವವನ್ನೇ ಕಳೆದುಕೊಳ್ಳುವ ತೂಗುಗತ್ತಿಯೂ ಅತೃಪ್ತರ ಮೇಲಿದೆ.