samachara
www.samachara.com
ಕೇಂದ್ರ ಸರಕಾರಕ್ಕೆ ಸಿಬಿಐ ಅಸ್ತ್ರ; ಮಮತಾ ಬ್ಯಾನರ್ಜಿಗೆ ಸಿಕ್ಕಿದ ರಾಜಕೀಯ ಪ್ರತ್ಯಸ್ತ್ರ
COVER STORY

ಕೇಂದ್ರ ಸರಕಾರಕ್ಕೆ ಸಿಬಿಐ ಅಸ್ತ್ರ; ಮಮತಾ ಬ್ಯಾನರ್ಜಿಗೆ ಸಿಕ್ಕಿದ ರಾಜಕೀಯ ಪ್ರತ್ಯಸ್ತ್ರ

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದರೂ, ಹೇರದಿದ್ದರೂ ಟಿಎಂಸಿ ಈ ಘಟನೆಯನ್ನು ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಬಳಸಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.

Team Samachara

ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ನೂತನ ನಿರ್ದೇಶಕರ ನೇಮಕವಾದ ಮರುದಿನವೇ ಸಿಬಿಐ ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ಸುದ್ದಿಯಾಗಿದೆ. ಈ ಬಾರಿ ಸಿಬಿಐ ಅಧಿಕಾರಗಳನ್ನೇ ವಶಕ್ಕೆ ತೆಗೆದುಕೊಳ್ಳುವ ಮೂಲಕ ಪಶ್ಚಿಮ ಬಂಗಾಳ ರಾಜ್ಯ ಸರಕಾರ ಕೇಂದ್ರಕ್ಕೆ ಹೊಸ ಕಾನೂನಾತ್ಮಕ ಸವಾಲು ಒಡ್ಡಿದೆ. ಅಲ್ಲದೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಸಂವಿಧಾನದ ಉಳಿವಿಗಾಗಿ’ ಭಾನುವಾರ ರಾತ್ರಿಯಿಂದಲೇ ಧರಣಿ ಆರಂಭಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಭಾನುವಾರ ನಡೆದ ಬೆಳವಣಿಗೆಗಳು ಸೋಮವಾರವೂ ಮುಂದುವರಿದಿವೆ. ಸುಪ್ರೀಂಕೋರ್ಟ್‌ನಲ್ಲಿ ಈ ವಿಚಾರ ಇಂದು ವಿಚಾರಣೆಗೆ ಬಂದಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ನೇತೃತ್ವದ ನ್ಯಾಯಪೀಠವು ಈ ಪ್ರಕರಣದಲ್ಲಿ ಯಾವುದೇ ಮಹತ್ವದ ಆದೇಶ ನೀಡದೆ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.

ಕೋಲ್ಕತ್ತ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಸಾಕ್ಷ್ಯನಾಶ ಪಡಿಸುವ ಆರೋಪ ಮಾಡುತ್ತಿರುವ ಸಿಬಿಐ ಅದನ್ನು ಸಾಬೀತು ಪಡಿಸಲು ಸೂಕ್ತ ಪುರಾವೆಗಳನ್ನು ಒದಗಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ, ಒಂದು ವೇಳೆ ರಾಜೀವ್ ಕುಮಾರ್ ತಪ್ಪು ಮಾಡಿರುವುದು ನಿಜವಾದರೆ ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಸಾಲಿಟರ್‌ ಜನರಲ್‌ ತುಷಾರ್‌ ಮಿಶ್ರಾ, “ಪಶ್ಚಿಮ ಬಂಗಾಳದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ. ಭಾನುವಾರ ಸಿಬಿಐ ಜಂಟಿ ನಿರ್ದೇಶಕರನ್ನು ಸಿಬಿಐ ಕಚೇರಿಯಲ್ಲೇ ವಶಕ್ಕೆ ಪಡೆಯಲಾಗಿದೆ. ಸ್ವಾಯತ್ತ ತನಿಖಾ ಸಂಸ್ಥೆಯ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ” ಎಂದು ವಾದಿಸಿದ್ದಾರೆ.

ರಾಜೀವ್‌ ಕುಮಾರ್ ಎಲ್ಲಾ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯ ಒಪ್ಪಿಸುವಂತೆ ನ್ಯಾಯಪೀಠ ಆದೇಶ ನೀಡಬೇಕು. ಇಲ್ಲವಾದರೆ ಎಲೆಕ್ಟ್ರಾನಿಕ್‌ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಇದೆ ಎಂದು ಮಿಶ್ರಾ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

“ಕೋಲ್ಕತ್ತಾ ಪೊಲೀಸರು ಸಾಕ್ಷ್ಯ ನಾಶ ಪಡಿಸುತ್ತಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಒಂದು ವೇಳೆ ಪುರಾವೆ ಒದಗಿಸಿದರೆ ನಾವು ಮುಂದಿನ ಕ್ರಮ ಕೈಗೊಳ್ಳಬಹುದು” ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯಿ ಅಭಿಪ್ರಾಯ ಪಟ್ಟಿದ್ದಾರೆ.

ದೀದಿ ವರ್ಸಸ್‌ ನರೇಂದ್ರ ಮೋದಿ. 
ದೀದಿ ವರ್ಸಸ್‌ ನರೇಂದ್ರ ಮೋದಿ. 

ಲೋಕಸಭೆಯಲ್ಲಿ ಗದ್ದಲ:

ಪಶ್ಚಿಮ ಬಂಗಾಳದ ಬೆಳವಣಿಗೆ ಸೋಮವಾರ ಲೋಕಸಭೆಯಲ್ಲೂ ಸದ್ದು ಮಾಡಿದೆ. ವಿಪಕ್ಷ ಸದಸ್ಯರು ಕೇಂದ್ರ ಸರಕಾರ ಹಾಗೂ ಸಿಬಿಐ ವಿರುದ್ಧ ಘೋಷಣೆ ಕೂಗಿದ್ದಾರೆ. ವಿಪಕ್ಷಗಳ ಗದ್ದಲದ ನಡುವೆಯೇ ಮಾತನಾಡಿದ ಗೃಹ ಸಚಿವ ರಾಜನಾಥ್‌ ಸಿಂಗ್‌, “ಕಾನೂನು ಜಾರಿಯ ಯಾವುದೇ ತನಿಖಾ ಸಂಸ್ಥೆಗಳ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಸಿಬಿಐ ಅಧಿಕಾರಿಗಳನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸುವುದು ಕಾನೂನು ಬಾಹಿರ” ಎಂದಿದ್ದಾರೆ.

“ಪಶ್ಚಿಮ ಬಂಗಾಳದ ಬೆಳವಣಿಗೆಗಳ ಬಗ್ಗೆ ಅಲ್ಲಿನ ರಾಜ್ಯಪಾಲರೊಂದಿಗೆ ಮಾತನಾಡಿದ್ದೇನೆ. ಅಲ್ಲಿನ ಪೊಲೀಸ್ ಮಹಾನಿರ್ದೇಶಕರು ಹಾಗೂ ಪ್ರಧಾನ ಕಾರ್ಯದರ್ಶಿಯೊಂದಿಗೆ ಮಾತನಾಡುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಇಡೀ ಘಟನೆಯ ಬಗ್ಗೆ ವಿವರವಾದ ವರದಿ ನೀಡುವಂತೆ ರಾಜ್ಯಪಾಲರನ್ನು ಕೇಳಿದ್ದೇನೆ. ಸುಪ್ರೀಂಕೋರ್ಟ್‌ ಕೂಡಾ ಈ ವಿಷಯದಲ್ಲಿ ತನಿಖಾ ಸಂಸ್ಥೆಗಳ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ವಿಶ್ವಾಸವಿದೆ” ಎಂದಿದ್ದಾರೆ ರಾಜನಾಥ್‌ ಸಿಂಗ್‌.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಿಬಿಐ ಅನ್ನು ವಿಪಕ್ಷಗಳ ವಿರುದ್ಧ ಬಳಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದ ತೃಣಮೂಲ ಕಾಂಗ್ರೆಸ್‌ ಸಂಸದ ಸುಗತ್‌ ರಾಯ್‌, “ಕೋಲ್ಕತ್ತಾದಲ್ಲಿ ಬಿಜೆಪಿಗೆ ವಿರುದ್ಧವಾಗಿ ನಡೆದ ಮಹಾಘಟಬಂಧನ್‌ ರ್ಯಾಲಿಯ ಬಳಿಕ ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಕೇಂದ್ರ ಸರಕಾರ ಕಾರ್ಯಾಚರಣೆಗೆ ಇಳಿದಿದೆ. ಪಶ್ಚಿಮ ಬಂಗಾಳದಲ್ಲಿ ಸಿಬಿಐ ಅನ್ನು ಅಸ್ತ್ರವನ್ನಾಗಿ ಬಳಸಿಕೊಂಡು ವಿಪಕ್ಷಗಳನ್ನು ತುಳಿಯುವ ಕೆಲಸವನ್ನು ಕೇಂದ್ರ ಮಾಡುತ್ತಿದೆ” ಎಂದಿದ್ದಾರೆ.

ಅತ್ತ ಧರಣಿ ಕುಳಿತಿರುವ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರದ ವಿರುದ್ಧ ಸಡ್ಡು ಹೊಡೆದಿದ್ದಾರೆ. ಕೇಂದ್ರ ಸರಕಾರ ಅದು ಹೇಗೆ ರಾಷ್ಟ್ರಪತಿ ಆಡಳಿತ ಹೇರಲಿದೆಯೋ ನೋಡುತ್ತೇನೆ ಎಂದಿರುವ ಮಮತಾ ಬ್ಯಾನರ್ಜಿ ಧರಣಿಯ ಮೂಲಕ ಕೇಂದ್ರ ಸರಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

ಸಿಬಿಐ ಪ್ರಕರಣವನ್ನು ರಾಜಕೀಯವಾಗಿಯೂ ಬಳಸಿಕೊಳ್ಳಲು ಮಮತಾ ಮುಂದಾಗಿರುವಂತೆ ಕಾಣುತ್ತಿದೆ. ನೇರವಾಗಿ ಕೇಂದ್ರದ ಬಿಜೆಪಿ ಸರಕಾರವನ್ನು ಗುರಿಯಾಗಿಸಿಕೊಂಡು ಧರಣಿಯನ್ನು ತೀವ್ರಗೊಳಿಸಿದ್ದಾರೆ. ಮಮತಾ ಬ್ಯಾನರ್ಜಿ ಧರಣಿಗೆ ವಿಪಕ್ಷಗಳು ಬೆಂಬಲ ಸೂಚಿಸಿವೆ. ಟಿಎಂಸಿ ಸಂಸದರು ಹಾಗೂ ಸಚಿವರು ಮಮತಾ ಜತೆಗೆ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಮಮತಾ ನಡೆಯನ್ನು ನೋಡಿದರೆ ಈ ಪ್ರಕರಣವನ್ನು ಇಲ್ಲಿಗೇ ಬಿಡುವಂತೆ ಕಾಣುತ್ತಿಲ್ಲ.

ಶಾರದಾ ಚಿಟ್ ಫಂಡ್‌ ಮತ್ತು ರೋಸ್ ವ್ಯಾಲೆ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ ಅವರನ್ನು ಪ್ರಶ್ನಿಸಲು ಭಾನುವಾರ ಸಿಬಿಐ ಅಧಿಕಾರಿಗಳ ತಂಡ ರಾಜೀವ್‌ ಮನೆ ಮುಂದೆ ಜಮಾಯಿಸಿತ್ತು. ನಿವಾಸದೊಳಕ್ಕೆ ಸಿಬಿಐ ಅಧಿಕಾರಿಗಳಿಗೆ ಪೊಲೀಸರು ಪ್ರವೇಶ ನಿರಾಕರಿಸಿದ್ದರು. ಒಂದಷ್ಟು ಸಿಬಿಐ ಅಧಿಕಾರಿಗಳನ್ನು ಪಕ್ಕದ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಸಿಬಿಐ ಅಧಿಕಾರಿಗಳ ತಂಡವನ್ನೇ ರಾಜ್ಯ ಪೊಲೀಸರು ವಶಕ್ಕೆ ಪಡೆದಿದ್ದರು.

Also read: ದೀದಿ v/s ಮೋದಿ: ಬಂಗಾಳದಲ್ಲಿ ಸಿಬಿಐ ಅಧಿಕಾರಿಗಳ ಬಂಧನ, ಕೇಂದ್ರದ ವಿರುದ್ಧ ಮಮತಾ ಧರಣಿ

ಸಿಬಿಐ ಕೇಂದ್ರ ತಂಡದ ಅಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದ ಸುದ್ದಿ ಪ್ರಾದೇಶಿಕ ಸಿಬಿಐ ಕಚೇರಿಗೆ ತಲುಪಿ ಇನ್ನಷ್ಟು ಹಿರಿಯ ಸಿಬಿಐ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಆದರೆ, ಆ ವೇಳೆಗೆ ಕೋಲ್ಕತ್ತಾ ಪೊಲೀಸರೂ ಹೆಚ್ಚಿನ ಸಂಖ್ಯೆಯಲ್ಲಿ ರಾಜೀವ್‌ ಕುಮಾರ್ ಮನೆಯ ಎದುರು ಜಮಾಯಿಸಿದ್ದರು. ಸಿಬಿಐ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದು, ಕೊನೆಗೆ ಎಲ್ಲಾ ಸಿಬಿಐ ಅಧಿಕಾರಿಗಳನ್ನು ಕೋಲ್ಕತ್ತಾ ಪೊಲೀಸರು ವಾಹನಗಳಿಗೆ ತುಂಬಿಕೊಂಡಿದ್ದರು.

ಈ ಬೆಳವಣಿಗೆಗಳ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಕಿಡಿಕಾರಿ, ಧರಣಿಗೆ ಮುಂದಾದರು. ರಾಜೀವ್‌ ಕುಮಾರ್‌ ನಿವಾಸದ ಎದುರು ಭಾನುವಾರ ರಾತ್ರಿಯೇ ಧರಣಿ ಆರಂಭಿಸಿದ ಮಮತಾ ಬ್ಯಾನರ್ಜಿ, ಈವರೆಗೂ ಧರಣಿ ಸ್ಥಳದಿಂದ ಕದಲಿಲ್ಲ. ಅಲ್ಲದೆ, ಸೋಮವಾರ ಬೆಳಿಗ್ಗೆ ಫೋನ್‌ ಮೂಲಕವೇ ಸಭೆಗಳನ್ನು ನಿಭಾಯಿಸಿದ್ದಾರೆ.

“ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ” ಎಂದು ಆರೋಪಿಸಿರುವ ಮಮತಾ ಬ್ಯಾನರ್ಜಿ ಧರಣಿ ಮುಂದುವರಿಸಿದ್ದಾರೆ. ರಾಜ್ಯ ಸರಕಾರದ ಈ ನಡೆಯಿಂದ ಕೇಂದ್ರ ಸರಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮಾತುಗಳೂ ಕೇಳಿಬರುತ್ತಿವೆ. ರಾಷ್ಟ್ರಪತಿ ಆಳ್ವಿಕೆ ಹೇರಿದರೂ, ಹೇರದಿದ್ದರೂ ಟಿಎಂಸಿ ಈ ಘಟನೆಯನ್ನು ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಬಳಸಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ.