samachara
www.samachara.com
ಲೋಕಸಭೆಗಾಗಿ ಈ ‘ಮೂರು’ ವಿಷಯಗಳು; ಎನ್‌ಡಿಎ ಮಣಿಸಲು ವಿಪಕ್ಷಗಳ ತಂತ್ರ!
COVER STORY

ಲೋಕಸಭೆಗಾಗಿ ಈ ‘ಮೂರು’ ವಿಷಯಗಳು; ಎನ್‌ಡಿಎ ಮಣಿಸಲು ವಿಪಕ್ಷಗಳ ತಂತ್ರ!

ಈ ಮೂರು ವಿಷಯಗಳನ್ನೇ ಕೇಂದ್ರೀಕರಿಸಿಕೊಂಡು ಚುನಾವಣೆ ಎದುರಿಸಿದರೆ, ಇದು ಎನ್‌ಡಿಎ ಮೈತ್ರಿಕೂಟಕ್ಕೆ ಭಾರೀ ಹೊಡೆತ ಕೊಡಲಿದೆ ಎಂಬ ಲೆಕ್ಕಾಚಾರ ಮಹಾಮೈತ್ರಿ ಕೂಟದಲ್ಲಿದೆ.

Team Samachara

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಮಣಿಸಲು ಚುನಾವಣಾ ರಣತಂತ್ರ ರೂಪಿಸಿರುವ ವಿಪಕ್ಷಗಳ ಮಹಾಮೈತ್ರಿಕೂಟ ಚುನಾವಣಾ ವಿಷಯವಾಗಿ ಮೂರು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ನಿರ್ಧರಿಸಿವೆ. ಈ ಮೂರು ಪ್ರಮುಖ ವಿಚಾರಗಳನ್ನೇ ಕೇಂದ್ರೀಕರಿಸಿಕೊಂಡು ಎನ್‌ಡಿಎ ಮೈತ್ರಿಕೂಟವನ್ನು ಹಣಿಸಲು ವಿಪಕ್ಷಗಳು ಮುಂದಾಗಿವೆ.

ಏಪ್ರಿಲ್‌- ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈಗಾಗಲೇ ವಿಪಕ್ಷಗಳ ಮೈತ್ರಿಕೂಟ ಬೃಹತ್‌ ಸಮಾವೇಶ ಹಾಗೂ ಮೈತ್ರಿಕೂಟದ ಪಕ್ಷಗಳ ಮುಖಂಡರ ಸಭೆಗಳನ್ನು ನಡೆಸುತ್ತಿದೆ. ಕೋಲ್ಕತ್ತಾದಲ್ಲಿ ನಡೆದ ತೃಣಮೂಲ ಕಾಂಗ್ರೆಸ್‌ನ ಬೃಹತ್‌ ಸಮಾವೇಶದ ಯಶಸ್ಸಿನ ಬಳಿಕ ಮಹಾಮೈತ್ರಿಕೂಟವನ್ನು ಮತ್ತಷ್ಟು ಬಲ ಪಡಿಸಲು ವಿಪಕ್ಷಗಳು ಮುಂದಾಗಿವೆ. ಚುನಾವಣಾ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಸಂಸತ್‌ನ ಬಜೆಟ್‌ ಅಧಿವೇಶನ ಮುಗಿದ ನಂತರ ಸಭೆ ಸೇರಲು ನಿರ್ಧರಿಸಿವೆ.

ಕೃಷಿ ಬಿಕ್ಕಟ್ಟು, ನಿರುದ್ಯೋಗ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿ - ಈ ಮೂರು ಪ್ರಮುಖ ವಿಚಾರಗಳನ್ನು ಗುರಿಯಾಗಿಟ್ಟುಕೊಂಡು ಚುನಾವಣೆ ಎದುರಿಸುವ ಸಂಬಂಧ ಮುಂದಿನ ಮಹಾಮೈತ್ರಿಕೂಟದ ಸಭೆಯಲ್ಲಿ ಚರ್ಚೆ ನಡೆಸಲು ವಿಪಕ್ಷಗಳು ನಿರ್ಧರಿಸಿವೆ. ಶುಕ್ರವಾರ ನಡೆದ ವಿಪಕ್ಷಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಬಜೆಟ್ ಅಧಿವೇಶನ ಮುಗಿದ ಬಳಿಕ ಆಂಧ್ರಪ್ರದೇಶದಲ್ಲೇ ಈ ಸಭೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಫೆಬ್ರುವರಿ 13ರಂದು ಸಂಸತ್‌ನ ಬಜೆಟ್‌ ಅಧಿವೇಶನ ಮುಗಿಯಲಿದ್ದು, ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಮಹಾಮೈತ್ರಿಕೂಟದ ಸಭೆ ನಡೆಸಲು ಚಂದ್ರಬಾಬು ನಾಯ್ಡು ಪ್ರಸ್ತಾಪಿಸಿದ್ದಾರೆ. ಇದಕ್ಕೆ ವಿಪಕ್ಷಗಳ ಮುಖಂಡರೂ ಒಪ್ಪಿದ್ದು, ದಿನಾಂಕ ನಿಗದಿಯಷ್ಟೇ ಬಾಕಿ ಉಳಿದಿದೆ. ಅಮರಾವತಿಯಲ್ಲಿ ನಡೆಯಲಿರುವ ಸಭೆಯಲ್ಲೂ ಉದ್ದೇಶಿತ ಮೂರು ಪ್ರಮುಖ ವಿಷಯಗಳ ಮೇಲಷ್ಟೇ ಗಮನ ಕೇಂದ್ರೀಕರಿಸಲು ನಿರ್ಧರಿಸಲಾಗಿದೆ.

ವಿಪಕ್ಷಗಳ ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿಕೊಳ್ಳುವ ಸಂಬಂಧವೂ ಮಾತುಕತೆ ನಡೆಯುತ್ತಿದ್ದು, ಬಿಜೆಪಿ ಮಣಿಸಲು ವಿಪಕ್ಷಗಳು ಒಗ್ಗಟ್ಟಿನಿಂದ ಒಮ್ಮತದ ನಿರ್ಧಾರಕ್ಕೆ ಬರಬೇಕಾದ ಅನಿವಾರ್ಯತೆಯ ಬಗ್ಗೆಯೂ ಶುಕ್ರವಾರದ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ಹೀಗಾಗಿ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಕ್ಕಿಂತ ಈ ಮೂರು ಪ್ರಮುಖ ವಿಚಾರಗಳನ್ನಷ್ಟೇ ಚುನಾವಣಾ ವಿಷಯವಾಗಿಸಿಕೊಳ್ಳಲು ವಿಪಕ್ಷಗಳು ಮುಂದಾಗಿವೆ. ಅಲ್ಲದೆ, ಈ ಮೂರು ಪ್ರಮುಖ ವಿಚಾರಗಳಿಗೆ ವಿಪಕ್ಷ ಮೈತ್ರಿಕೂಟದ ಎಲ್ಲಾ ಪಕ್ಷಗಳ ಮುಖಂಡರೂ ಒಪ್ಪಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಆಮ್‌ ಆದ್ಮಿ ಪಕ್ಷದ ಮುಖಂಡರು ದೇಶದಲ್ಲಿ ಹೆಚ್ಚಾಗಿರುವ ಕೋಮುವಾದವನ್ನೂ ಚುನಾವಣೆಗೆ ಪ್ರಮುಖ ವಿಷಯವನ್ನಾಗಿ ಸೇರಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಆದರೆ, ಬಹುತೇಕ ವಿಪಕ್ಷ ಮುಖಂಡರು ಈ ಸಲಹೆಯನ್ನು ನಿರಾಕರಿಸಿದರು ಎನ್ನಲಾಗಿದೆ.

Also read: 21 ಪಕ್ಷಗಳ ‘ವಿಪಕ್ಷ ಮೈತ್ರಿಕೂಟ’ ಸಜ್ಜು; ಬಿಜೆಪಿ ಮಣಿಸುವ ತಂತ್ರಕ್ಕಾಗಿ ಮಹಾಮೈತ್ರಿ ಸಭೆ

"ಕೋಮುವಾದದ ಬಗ್ಗೆ ವ್ಯಗ್ರವಾಗಿ ಮಾತನಾಡುತ್ತಾ ಕೃಷಿ ಬಿಕ್ಕಟ್ಟು ಹಾಗೂ ನಿರುದ್ಯೋಗದ ಸಮಸ್ಯೆಗಳ ಗಂಭೀರತೆ ಹಿನ್ನೆಲೆಗೆ ಸರಿಯಬಹುದು ಎಂದು ಹಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಪ್ರಮುಖ ಚುನಾವಣಾ ವಿಷಯಗಳಿಂದ ಕೋಮುವಾದವನ್ನು ಹೊರಗಿಡಲಾಗಿದೆ" ಎಂದು ಮಹಾಮೈತ್ರಿಕೂಟದ ಮುಖಂಡರೊಬ್ಬರು ಹೇಳಿದ್ದಾರೆ. ಆದರೆ, ಸಂದರ್ಭಕ್ಕೆ ಅನುಗುಣವಾಗಿ ಕೋಮುವಾದ ಹಾಗೂ ಗೋ ರಕ್ಷಣೆಯ ಹಲ್ಲೆಗಳನ್ನು ಚುನಾವಣಾ ಸಮಾವೇಶಗಳಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ.

ವಿಪಕ್ಷಗಳ ಮೈತ್ರಿಕೂಟದ ಈ ಹಿಂದಿನ ಸಭೆಯಲ್ಲಿ ಇವಿಎಂ ವಿಷಯವಾಗಿ ಮೈತ್ರಿಕೂಟದೊಳಗೇ ಭಿನ್ನದನಿಗಳು ಕೇಳಿಬಂದಿದ್ದವು. ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಇವಿಎಂ ಬದಲಿಗೆ ಬ್ಯಾಲಟ್‌ ಪೇಪರ್‌ ಬಳಸುವ ವಿಚಾರಗಳನ್ನು ಪ್ರಸ್ತಾಪಿಸಿದ್ದರೆ, ಸಿಪಿಐ (ಎಂ) ಇವಿಎಂ ವ್ಯವಸ್ಥೆ ಬದಲಾವಣೆಗೆ ವಿರೋಧ ತೋರಿತ್ತು. ಹೀಗಾಗಿ ಈ ವಿಚಾರದಲ್ಲಿ ಒಳಜಗಳವಾದಂತೆ ಮಧ್ಯಮ ಮಾರ್ಗದ ನಿರ್ಧಾರಕ್ಕೆ ಬರಲಾಗಿತ್ತು.

"ಇವಿಎಂ ನಿಷೇಧ ಹಾಗೂ ಇವಿಎಂ ವ್ಯವಸ್ಥೆ ಇರಬೇಕೆಂಬ ವಿಚಾರಕ್ಕೆ ನಮ್ಮಲ್ಲೇ ತಿಕ್ಕಾಟ ನಡೆಯಬಾರದೆಂಬ ಕಾರಣಕ್ಕೆ ಒಂದು ಮಧ್ಯಮ ಮಾರ್ಗದ ನಿರ್ಧಾರಕ್ಕೆ ಬಂದಿದ್ದೇವೆ. ಅಭ್ಯರ್ಥಿಯ ಗೆಲುವಿನ ಅಂತರ ಶೇಕಡ 5ಕ್ಕಿಂತ ಕಡಿಮೆ ಇರುವ ಕ್ಷೇತ್ರಗಳಲ್ಲಿ ವಿವಿಪ್ಯಾಟ್‌ ಮರು ಎಣಿಕೆ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಗಿದೆ. ಇದಕ್ಕೆ ಎಲ್ಲಾ ಪಕ್ಷಗಳ ಮುಖಂಡರೂ ಒಪ್ಪಿದ್ದಾರೆ" ಎಂದು ಮಹಾಮೈತ್ರಿಕೂಟದ ಮುಖಂಡರೊಬ್ಬರು ಹೇಳಿದ್ದಾರೆ.

ಈ ಬಗ್ಗೆ ವಿಪಕ್ಷಗಳು ಸೋಮವಾರ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಲು ನಿರ್ಧರಿಸಿವೆ. ಒಂದು ವೇಳೆ ಚುನಾವಣಾ ಆಯೋಗ ನಮ್ಮ ಪ್ರಸ್ತಾವವನ್ನು ಒಪ್ಪದಿದ್ದರೆ, ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದ ದೆರೆಕ್‌ ಒ’ಬ್ರಾಯಿನ್‌ ಹೇಳಿದ್ದಾರೆ.

ಈ ಮನವಿ ಪತ್ರಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಬಿಎಸ್‌ಪಿ ಮುಖಂಡ ಸತಿಶ್‌ ಮಿಶ್ರಾ, ಎಸ್‌ಪಿ ಮುಖಂಡ ರಾಮ್‌ಗೋಪಾಲ್‌ ಯಾದವ್‌, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಟಿಎಂಸಿ ಪಕ್ಷದ ಮುಖಂಡ ದೆರೆಕ್‌ ಒ’ಬ್ರಾಯಿನ್‌, ಸಿಪಿಐ (ಎಂ) ಮುಖಂಡ ಮಹಮದ್‌ ಸಲೀಮ್‌ ಸೇರಿದಂತೆ ಪ್ರಮುಖ ಮುಖಂಡರು ಸಹಿ ಮಾಡಿದ್ದಾರೆ ಎನ್ನಲಾಗಿದೆ.

ಚುನಾವಣೆ ಮುಗಿಯುವವರೆಗಾದರೂ ವಿಪಕ್ಷಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಈ ಮೂರು ವಿಷಯಗಳ ಬಗ್ಗೆ ಗಂಭೀರವಾಗಿ ಕೆಲಸ ಮಾಡುವಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಮೈತ್ರಿಕೂಟದ ಮುಖಂಡರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಮೂರು ವಿಷಯಗಳನ್ನೇ ಕೇಂದ್ರೀಕರಿಸಿಕೊಂಡು ಚುನಾವಣೆ ಎದುರಿಸಿದರೆ ಇದು ಎನ್‌ಡಿಎ ಮೈತ್ರಿಕೂಟಕ್ಕೆ ಭಾರೀ ಹೊಡೆತ ಕೊಡಲಿದೆ ಎಂಬ ಲೆಕ್ಕಾಚಾರ ಮಹಾಮೈತ್ರಿ ಕೂಟದಲ್ಲಿದೆ. ಈ ಲೆಕ್ಕಾಚಾರದ ಫಲಿತಾಂಶದ ದಿನಗಳೂ ದೂರವಿಲ್ಲ.