samachara
www.samachara.com
ದೀದಿ v/s ಮೋದಿ: ಬಂಗಾಳದಲ್ಲಿ ಸಿಬಿಐ ಅಧಿಕಾರಿಗಳ ಬಂಧನ, ಕೇಂದ್ರದ ವಿರುದ್ಧ ಮಮತಾ ಧರಣಿ
COVER STORY

ದೀದಿ v/s ಮೋದಿ: ಬಂಗಾಳದಲ್ಲಿ ಸಿಬಿಐ ಅಧಿಕಾರಿಗಳ ಬಂಧನ, ಕೇಂದ್ರದ ವಿರುದ್ಧ ಮಮತಾ ಧರಣಿ

“ಮಮತಾ ಹಲವು ಯುದ್ಧಗಳನ್ನು ಎದುರಿಸಿದ್ದಾರೆ ಮತ್ತು ಮತ್ತೊಂದು ಯುದ್ಧ ಇವತ್ತು ರಾತ್ರಿ 9 ಗಂಟೆಯಿಂದ ಆರಂಭವಾಗಿದೆ” - ಡೆರಿಕ್ ಓಬ್ರಿಯಾನ್.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯ ಸರ್ಕಾರಗಳ ನಡುವೆ ನಡೆಯುತ್ತಿದ್ದ ಶೀತಲ ಸಮರವೀಗ ನಿರ್ಣಾಯಕ ಘಟ್ಟ ತಲುಪಿದೆ. ತನಿಖೆಯ ನೆಪದಲ್ಲಿ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕೊತ್ತಾಗೆ ಬಂದಿಳಿದ ಕೇಂದ್ರ ತನಿಖಾ ದಳ (ಸಿಬಿಐ)ದ ಅಧಿಕಾರಿಗಳ ತಂಡವನ್ನು ಸ್ಥಳೀಯ ಪೊಲೀಸರು ಬಂಧಿಸಿದ ಅಪರೂಪದ ಬೆಳವಣಿಗೆ ನಡೆದಿದ್ದು, ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇರ ಸಮರ ಸಾರಿದ್ದಾರೆ.

ಆಗಿದ್ದೇನು?

ದೇಶದಾದ್ಯಂತ ಗಮನ ಸೆಳೆದ ಶಾರದಾ ಚಿಟ್ ಫಂಡ್‌ ಮತ್ತು ರೋಸ್ ವ್ಯಾಲೆ ಹಗರಣಕ್ಕೆ ಸಂಬಂಧಿಸಿದಂತೆ ಕೊಲ್ಕೊತ್ತಾ ಪೊಲೀಸ್‌ ಆಯುಕ್ತ ರಾಜೀವ್‌ ಕುಮಾರ್‌ರನ್ನು ಪ್ರಶ್ನಿಸಲು ಇಂದು ಸಂಜೆ ಸಿಬಿಐ ಅಧಿಕಾರಿಗಳ ತಂಡ ಆಯುಕ್ತರ ಮನೆ ಮುಂದೆ ಪ್ರತ್ಯಕ್ಷವಾಗಿತ್ತು. ಆದರೆ ಅವರ ನಿವಾಸದೊಳಕ್ಕೆ ಸಿಬಿಐ ಅಧಿಕಾರಿಗಳಿಗೆ ಪೊಲೀಸರು ಪ್ರವೇಶ ನಿರಾಕರಿಸಿದರು. ಬೆನ್ನಿಗೆ ಒಂದಷ್ಟು ಸಿಬಿಐ ಅಧಿಕಾರಿಗಳನ್ನು ಪಕ್ಕದ ಪೊಲೀಸ್‌ ಠಾಣೆಗೆ ಚರ್ಚೆಗಾಗಿ ಕರೆದೊಯ್ಯಲಾಯಿತು.

ಅಷ್ಟೊತ್ತಿಗೆ ವಿಷಯ ಪ್ರಾದೇಶಿಕ ಸಿಬಿಐ ಕಾರ್ಯಾಯ ತಲುಪಿ ಮತ್ತಷ್ಟು ಸಿಬಿಐ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವ ಮೂಲಕ ಒಟ್ಟು 40 ಕ್ಕೂ ಹೆಚ್ಚು ಅಧಿಕಾರಿಗಳು ಕುಮಾರ್‌ ಮನೆ ಜಮಾಯಿಸಿದರು. ಅದೇ ಸಮಯಕ್ಕೆ ಹೆಚ್ಚಿನ ಕೊಲ್ಕೊತ್ತಾ ಪೊಲೀಸರೂ ಸ್ಥಳದಲ್ಲಿ ಜಮಾವಣೆಗೊಳ್ಳುವುದರೊಂದಿಗೆ ಸಿಬಿಐ ಅಧಿಕಾರಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ಆರಂಭಗೊಂಡಿತು. ಈ ಸಂದರ್ಭದಲ್ಲಿ ಪೊಲೀಸರು ಸಿಬಿಐ ಅಧಿಕಾರಿಗಳನ್ನು ಬಲವಂತವಾಗಿ ಹತ್ತಿರದ ಪೊಲೀಸ್‌ ಠಾಣೆಗೆ ಕರೆದೊಯ್ಯುವ ಮೂಲಕ ಕೇಂದ್ರ ತನಿಖಾ ದಳದ ತಂಡ ಇದೀಗ ಕೊಲ್ಕೊತ್ತಾ ಪೊಲೀಸರ ವಶದಲ್ಲಿದೆ.

ನಿನ್ನೆಯಷ್ಟೇ ಸಿಬಿಐ ಅಧಿಕಾರಿಗಳು ‘ರಾಜೀವ್‌ ಕುಮಾರ್‌ ತಲೆ ಮರೆಸಿಕೊಂಡಿದ್ದಾರೆ, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಹೇಳಿದ್ದರು. ಇದೀಗ ಅವರ ವಿಚಾರಣೆಗಾಗಿ ನಿವಾಸದ ಮುಂದೆ ಪ್ರತ್ಯಕ್ಷರಾಗಿದ್ದ ತನಿಖಾಧಿಕಾರಿಗಳು ಪಕ್ಕದ ಶೇಕ್ಸ್‌ಪಿಯರ್‌ ಸರಣಿ ಪೊಲೀಸ್‌ ಠಾಣೆಯಲ್ಲಿ ಬಂಧಿಯಾಗಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬೆನ್ನಿಗೆ ಸ್ಥಳಕ್ಕೆ ತುರ್ತಾಗಿ ಧಾವಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ಕೇಂದ್ರದ ವಿರುದ್ಧ ಧರಣಿ ಕೂರುವುದಾಗಿ ತಮ್ಮ ಎಂದಿನ ದಾಟಿಯಲ್ಲಿ ಆರ್ಭಟಿಸಿದ್ದಾರೆ. ‘ಬಿಜೆಪಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪೊಲೀಸ್‌ ಮತ್ತು ಎಲ್ಲಾ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ’ ಎಂದು ದೀದಿ ದೂರಿದ್ದಾರೆ.

ಸಿಬಿಐಗೆ ರಾಜೀವ್‌ ಕುಮಾರ್‌ ಸಡ್ಡು:

ಶಾರದಾ ಚಿಟ್‌ ಫಂಡ್‌ ಮತ್ತು ರೋಸ್‌ ವ್ಯಾಲೆ ಹಗರಣಗಳ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರುಗಳನ್ನು ಸಿಬಿಐ ವಿಚಾರಣೆ ನಡೆಸಲು ಬಯಸಿತ್ತು. ಪ್ರಕರಣದ ತನಿಖೆ ವೇಳೆ ನಾಪತ್ತೆಯಾಗಿವೆ ಎನ್ನಲಾದ ಕೆಲವು ದಾಖಲೆಗಳ ಸಂಬಂಧ ಸಿಬಿಐ ತನ್ನ ಮುಂದೆ ಹಾಜರಾಗುವಂತೆ ರಾಜೀವ್‌ ಕುಮಾರ್‌ಗೆ ನೋಟಿಸ್‌ ನೀಡಿತ್ತು. ಆದರೆ ಕುಮಾರ್‌ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗಿರಲಿಲ್ಲ.

1989ರ ಬ್ಯಾಚ್‌ನ ಪಶ್ಚಿಮ ಬಂಗಾಳ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ರಾಜೀವ್‌ ಕುಮಾರ್‌ ಈ ರೀತಿಯ ಭಿನ್ನ ನಡವಳಿಕೆಗಳನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ಚುನಾವಣಾ ಸಿದ್ಧತೆ ಸಂಬಂಧ ಚುನಾವಣಾ ಆಯೋಗ ಕರೆದ ಸಭೆಗೂ ಅವರು ಬೆನ್ನು ತೋರಿದ್ದರು.

ಆದರೆ ಅವರು ನಾಪತ್ತೆಯಾಗಿರಲಿಲ್ಲ ಎಂದು ಭಾನುವಾರ ಬೆಳಿಗ್ಗೆ ಕೊಲ್ಕೊತ್ತಾ ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ‘ಅವರು ತಮ್ಮ ಕೆಲಸಗಳಿಗೆ ಹಾಜರಾಗುತ್ತಿದ್ದಾರೆ. ಜನವರಿ 31ರಂದು ಮಾತ್ರ ಅವರು ರಜೆಯಲ್ಲಿದ್ದರು. ಯಾರೇ ಆದರೂ ಸುಳ್ಳು ಸುದ್ದಿ ಹರಡಿದರೆ ಅವರ ವಿರುದ್ಧ ಕೊಲ್ಕೊತ್ತಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಪರೋಕ್ಷವಾಗಿ ಸಿಬಿಐಗೆ ತೀಕ್ಷಣ ಪ್ರತಿಕ್ರಿಯೆ ನೀಡಲಾಗಿತ್ತು.

ಇದೀಗ ಕುಮಾರ್‌ ವಿಚಾರಣೆಗೆ ಆಗಮಿಸಿದ ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಕೊಲ್ಕೊತ್ತಾದಲ್ಲಿರುವ ಸಿಬಿಐ ಪ್ರಾದೇಶಿಕ ಕಚೇರಿ ಸಿಜಿಒ ಕಾಂಪ್ಲೆಕ್ಸ್‌ ಸುತ್ತ ಬಿಧಾನ್ನಗರ್‌ ಪೊಲೀಸರು ನಿಯೋಜನೆಗೊಂಡಿದ್ದಾರೆ. ಪ್ರತಿಯಾಗಿ ಕೇಂದ್ರದ ಕಡೆಯಿಂದ ಸಿಆರ್‌ಪಿಎಫ್‌ ಪಡೆಗಳನ್ನು ಪ್ರಾದೇಶಿಕ ಕಚೇರಿ ಇರುವ ಸ್ಥಳಕ್ಕೆ ಕೆರೆಸಿಕೊಳ್ಳಲಾಗಿದೆ.

ಮೋದಿ ವಿರುದ್ಧ ದೀದಿ ಧರಣಿ:

ಸ್ಥಳಕ್ಕೆ ಧಾವಿಸಿದ ದೀದಿ ಪೊಲೀಸ್‌ ಆಯುಕ್ತರ ಮನೆಯಲ್ಲಿ ಕೊಲ್ಕೊತ್ತಾ ಮೇಯರ್ ಫಿರ್ಹಾದ್‌ ಹಕೀಂ, ಡಿಜಿಪಿ ಮತ್ತು ಉನ್ನತ ಪೊಲೀಸ್‌ ಅಧಿಕಾರಿಗಳ ಜತೆ ತುರ್ತು ಸಭೆ ನಡೆಸಿದರು. ನಂತರ ಮಾಧ್ಯಮಗಳಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಇದೊಂದು ರಾಜಕೀಯ ‍ಷಡ್ಯಂತ್ರ. ಬಿಜೆಪಿ ಬಂಗಾಳಕ್ಕೆ ಹಿಂಸೆ ನೀಡುತ್ತಿದೆ. ನಾನು ಬ್ರಿಗೇಡ್‌ ರ್ಯಾಲಿ (ಮಹಾಘಟಬಂಧನ್‌ ಸಮಾವೇಶ) ನಡೆಸಿದ್ದಕ್ಕೆ ಬಂಗಾಳವನ್ನು ಬಲವಂತವಾಗಿ ನಾಶಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಆರ್ಭಟಿಸಿದ್ದಾರೆ.

“ನಾವು ಕೇಂದ್ರದ ಸಂಸ್ಥೆಗಳನ್ನು ಗೌರವಿಸುತ್ತೇವೆ. ಆದರೆ ಇದು ಒಟ್ಟಾರೆ ಸಾಂವಿಧಾನಿಕ ಕುಸಿತ. ನಮ್ಮ ಪೊಲೀಸರಿಗೆ ರಕ್ಷಣೆ ನೀಡುವುದು ನನ್ನ ಜವಾಬ್ದಾರಿ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ಸೂಚನೆ ಇಲ್ಲದೆ, ನೀವು ಕೊಲ್ಕತ್ತಾ ಪೊಲೀಸ್ ಆಯುಕ್ತರ ಮನೆಗೆ ಬಂದಿದ್ದೀರಿ. ನಾವು ಸಿಬಿಐ ಅಧಿಕಾರಿಗಳನ್ನು ಬಂಧಿಸಬಹುದಾಗಿತ್ತು. ಆದರೆ ಬಿಟ್ಟು ಕಳುಹಿಸಿದ್ದೇವೆ,” ಎಂದು ಅವರು ಹೇಳಿದ್ದಾರೆ.

“ಇದೊಂದು ಅಹಿತಕರ ಘಟನೆ. ಈ ಮೂಲಕ ದೇಶದ ಸಂವಿಧಾನದ ಮೇಲೆ ಆಕ್ರಮಣವಾಗಿದೆ. ಒಕ್ಕೂಟ ರಚನೆಯ ಮೇಲೆ ದಾಳಿಯಾಗಿದೆ. ನಾವು ಮತ್ತೊಂದು ರ್ಯಾಲಿಯನ್ನು ಸಂಘಟಿಸುತ್ತೇವೆ. ನಾವು ಬೆದರಿಕೆಗಳಿಗೆ ಜಗ್ಗುವುದಿಲ್ಲ,” ಎಂದು ತಮ್ಮ ಎಂದಿನ ಏರುದನಿಯಲ್ಲಿ ಬಿಜೆಪಿಯ ವಿರುದ್ಧ ಅಬ್ಬರಿಸಿದ್ದಾರೆ.

“ನಾವು ಸಂಸ್ಥೆಗಳನ್ನು ಉಳಿಸಬೇಕಾಗಿದೆ. ನಾನು ಮೋದಿಗೆ ಭಯಪಡುವುದಿಲ್ಲ. ನಾನು ಸಂವಿಧಾನವನ್ನು ಉಳಿಸಲು ಬಯಸುತ್ತೇನೆ. ನಾನು ಧರಣಿ ಕುಳಿತುಕೊಳ್ಳುತ್ತೇನೆ,” ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಮೋದಿ ಸೂಚನೆ ಮೇರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಸಿಬಿಐಗೆ ನಿರ್ದೇಶನ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಟಿಎಂಸಿ ವಕ್ತಾರ ಡೆರಿಕ್‌ ಓಬ್ರಿಯಾನ್‌, “ಇವರು ಚಂಬಲ್‌ ಕಣಿವೆ ಡಕಾಯತರಿಗಿಂತಲೂ ಕಡೆ. ಅವರಾದರೂ ನೇರ ಯುದ್ದ ಮಾಡುತ್ತಿದ್ದರು. ಇವರು ವಂಚಕರು. ಸರ್ಚ್‌ ವಾರಂಟ್‌ ಕೂಡ ಇಲ್ಲದೆ 40 ಸಿಬಿಐ ಅಧಿಕಾರಿಗಳೂ ಪೊಲೀಸ್ ಆಯುಕ್ತರ ಮನೆ ಮುಂದೆ ಬಂದಿದ್ದಾರೆ. ಮೋದಿ, ಅಮಿತ್‌ ಶಾ ಮತ್ತು ದೋವಲ್‌ ನಿಜವಾದ ದುಷ್ಕರ್ಮಿಗಳು,” ಎಂದು ಕಿಡಿಕಾರಿದ್ದಾರೆ. ಜತೆಗೆ ಬೆಳವಣಿಗೆ ಬಗ್ಗೆ ಇತರ ಪಕ್ಷಗಳಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

“ಮೋದಿ ತೊಲಗಬೇಕು, ಅಮಿತ್ ಶಾ ತೊಲಗಬೇಕು, ಇಲ್ಲದಿದ್ದರೆ ಸಂವಿಧಾನ ಅಪಾಯದಲ್ಲಿರಲಿದೆ. ಸಾಂವಿಧಾನಿಕ ಸಂಸ್ಥೆಗಳು ಅಪಾಯದಲ್ಲಿದೆ ಮತ್ತು ದೇಶವು ಅಪಾಯದಲ್ಲಿದೆ. ಮಮತಾ ಹಲವು ಯುದ್ಧಗಳನ್ನು ಎದುರಿಸಿದ್ದಾರೆ ಮತ್ತು ಮತ್ತೊಂದು ಯುದ್ಧ ಇವತ್ತು ರಾತ್ರಿ 9 ಗಂಟೆಯಿಂದ ಆರಂಭವಾಗಿದೆ,” ಎಂದು ರಣಕಹಳೆ ಮೊಳಗಿಸಿದ್ದಾರೆ.

ಅವರ ಹೇಳಿಕೆಯಂತೆ ಕೊಲ್ಕೊತ್ತಾ ‘ಮೆಟ್ರೋ ಚಾನಲ್‌’ನಲ್ಲಿ ಮಮತಾ ಮೋದಿ ಮತ್ತು ಕೇಂದ್ರದ ವಿರುದ್ಧ ‘ಸಂವಿಧಾನ ಉಳಿಸಿ’ ಧರಣಿ ಆರಂಭಿಸಿದ್ದಾರೆ.