samachara
www.samachara.com
ಸಕ್ಕರೆ ನಾಡಲ್ಲೀಗ ಸಿನಿಮೀಯ ರಾಜಕೀಯ; ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ಒಪ್ಪಿಗೆ   
COVER STORY

ಸಕ್ಕರೆ ನಾಡಲ್ಲೀಗ ಸಿನಿಮೀಯ ರಾಜಕೀಯ; ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ಒಪ್ಪಿಗೆ   

ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಜೆಡಿಎಸ್‌ ಲೆಕ್ಕಾಚಾರ ಹಾಕುತ್ತಿರುವ ಹೊತ್ತಲ್ಲೇ ಸುಮಲತಾ ಮಂಡ್ಯದಿಂದ ಕಣಕ್ಕಿಳಿಯಲು ಸಮ್ಮತಿಸಿದ್ದಾರೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸಕ್ಕರೆ ನಾಡು ಮಂಡ್ಯ ಈ ಬಾರಿ ರಾಷ್ಟ್ರದ ಗಮನ ಸೆಳೆಯುವ ಸಾಧ್ಯತೆ ಇದೆ. ಎರಡು ಪ್ರತಿಷ್ಠಿತ ಕುಟುಂಬಗಳ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಮಂಡ್ಯ ಸಾಕ್ಷಿಯಾಗಲಿದೆ. ತಮಿಳುನಾಡಿನಂತೆ ಚಿತ್ರರಂಗದವರನ್ನು ತಲೆ ಮೇಲೆ ಹೊತ್ತು ತಿರುಗುವ, ಅವರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದರಿರುವ ಮಂಡ್ಯದಲ್ಲಿ ಅಂಬರೀಶ್ ಮತ್ತು ದೇವೇಗೌಡ ಕುಟುಂಬದ ನಡುವೆ ನೇರ ಹಣಾಹಣಿಗೆ ವೇದಿಕೆ ಸಿದ್ದವಾಗುತ್ತಿದೆ. ಈ ಬೆಳವಣಿಗೆ ಮುಂದೆ ದೋಸ್ತಿ ಪಕ್ಷದಲ್ಲಿ ಇನ್ನಷ್ಟು ಕಂದಕ ಸೃಷ್ಟಿಸುವ ಸಾಧ್ಯತೆ ಇದೆ.

ಅಂಬರೀಶ್ ಅವರ ಪತ್ನಿ ಸುಮಲತಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‍ನ ಒಂದು ಗುಂಪು ಸಜ್ಜಾಗಿದ್ದರೆ, ಇತ್ತ ಜೆಡಿಎಸ್‍ನಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ಇತ್ತೀಚೆಗಷ್ಟೇ 'ಸೀತಾರಾಮ ಕಲ್ಯಾಣ' ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ನಟ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹೆಚ್ಚುತ್ತಿದೆ.

ಈಗಾಗಲೇ ದೇವೇಗೌಡರ ಕುಟುಂಬದ ಮೂರನೇ ಕುಡಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ನೆಚ್ಚಿನ ಮೊಮ್ಮಗನ ಸ್ಪರ್ಧೆಗೆ ದೇವೇಗೌಡ ಹಸಿರುನಿಶಾನೆ ತೋರಿದ್ದು, ಹಾಸನ ಕ್ಷೇತ್ರವನ್ನು ಪ್ರಜ್ವಲ್‌ಗೆ ಬಿಟ್ಟುಕೊಟ್ಟು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ಆದರೆ, ಅವರ ಮತ್ತೋರ್ವ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಮಾತ್ರ ದೇವೇಗೌಡ ಬಾಯಿಬಿಡುತ್ತಿಲ್ಲ. ಬದಲಿಗೆ ಎಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕೆಂಬ ಸೂಕ್ಷ್ಮ ಗೊಂದಲಗಳು ಮೈತ್ರಿಯಲ್ಲಿದೆ. ಜೆಡಿಎಸ್‌ನಲ್ಲಿಯೇ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಸದ್ಯದ ಸಂಸದ ಶಿವರಾಮೇಗೌಡರು ಮತ್ತು ಲಕ್ಷ್ಮಿ ಅಶ್ವಿನ್ ಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಇತ್ತ ಕಾಂಗ್ರೆಸ್‍ನಲ್ಲಿ ಪತ್ನಿ ಸುಮಲತಾ ಅವರನ್ನು ಚುನಾವಣಾ ಕಣಕ್ಕೆ ಇಳಿಸಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಮಾಜಿ ಸಂಸದೆ ರಮ್ಯಾ ಸಹ ಮಂಡ್ಯ ಕ್ಷೇತ್ರದ ಮೇಲೆ ಒಂದು ಕಣ್ಣೀಟ್ಟಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ಅಂಬರೀಶ್ ಅಭಿಮಾನಿಗಳ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಸುಮಲತಾ ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.

ಸುಮಲತಾ ಚುನಾವಣೆಗೆ ನಿಲ್ಲುವ ಇಂಗಿತ ವ್ಯಕ್ತಪಡಿಸಿರುವುದರಿಂದ ಅನಿವಾರ್ಯವಾಗಿ ಜೆಡಿಎಸ್ ಈ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡಬೇಕಾಗುತ್ತದೆ. ಏಕೆಂದರೆ, ಅಂಬರೀಷ್‌ ಅಭಿಮಾನಿಗಳನ್ನು ಎದುರು ಹಾಕಿಕೊಳ್ಳುವ ಧೈರ್ಯವನ್ನು ಜೆಡಿಎಸ್ ತೋರಲಾರದು. ಇದೇ ಉದ್ದೇಶದಿಂದ ಕಾಂಗ್ರೆಸ್ ಮುಖಂಡರು ಸುಮಲತಾ ಅವರನ್ನು ಸ್ಪರ್ಧೆಗೆ ಇಳಿಯುವಂತೆ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮೂಲಕ ಒತ್ತಡ ಹಾಕಿಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಸಕ್ಕರೆ ನಾಡಲ್ಲೀಗ ಸಿನಿಮೀಯ ರಾಜಕೀಯ; ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ಒಪ್ಪಿಗೆ   

ದಾಯಾದಿ ಕಲಹಕ್ಕೆ ವೇದಿಕೆಯಾಗುತ್ತಾ ಮಂಡ್ಯ?

ಈ ಹಿಂದೆ ಜೆಡಿಎಸ್‌ನಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ವಿಚಾರ ಪ್ರಸ್ತಾಪವಾದಾಗ ಸಚಿವ ಹೆಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅಸಮಾಧಾನ ಹೊರಹಾಕಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಒಬ್ಬ ಮೊಮ್ಮಗನಿಗೆ ಟಿಕೆಟ್ ಕೊಟ್ಟು ಮತ್ತೋರ್ವನಿಗೆ ಕೊಡದೇ ಇದ್ದರೆ, ಕುಟುಂಬದಲ್ಲಿಯೇ ಭಿನ್ನಮತ ಸ್ಫೋಟವಾಗುತ್ತದೆಯೇ ಎಂಬ ಪ್ರಶ್ನೆಯೂ ಈಗ ಎದುರಾಗಿದೆ.

ಜೆಡಿಎಸ್ ಮಂಡ್ಯ ಕ್ಷೇತ್ರವನ್ನು ಸುಮಲತಾ ಅವರಿಗೆ ಬಿಟ್ಟುಕೊಡಲು ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ.

ಸದ್ಯ ಮಂಡ್ಯ ಜಿಲ್ಲೆ ಸಂಪೂರ್ಣ ಜೆಡಿಎಸ್ ಮಯವಾಗಿದೆ. ಏಳು ಶಾಸಕರು, ಒಬ್ಬ ಸಂಸದರು ಹೀಗೆ ಎಲ್ಲರೂ ಜೆಡಿಎಸ್‌ನವರೇ ಆಗಿದ್ದಾರೆ. ಇಲ್ಲಿ ಜೆಡಿಎಸ್‌ನಿಂದ ಯಾರೇ ಸ್ಪರ್ಧಿಸಿದರೂ ಅವರು ಗೆಲ್ಲುತ್ತಾರೆ ಎಂಬ ಲೆಕ್ಕಚಾರವಿದೆ. ಇದನ್ನು ಮನಗಂಡೇ ಜೆಡಿಎಸ್ ವರಿಷ್ಠ ದೇವೇಗೌಡ ಮೊಮ್ಮಗ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕೇವಲ ಚಿತ್ರರಂಗದಲ್ಲಷ್ಟೇ ಅಲ್ಲದೆ ರಾಜಕೀಯದಲ್ಲೂ ಸಕ್ರಿಯರಾಗಿದ್ದವರು ಅಂಬರೀಶ್. ಕಾಂಗ್ರಸ್ ಪಕ್ಷದಲ್ಲಿ ಗುರುತಿಸಿಕೊಂಡು ಶಾಸಕರಾಗಿ ಮತ್ತು ಸಚಿವರಾಗಿದ್ದ ಅಂಬರೀಶ್‌ ಅವರ ರಾಜಕೀಯ ಶೂನ್ಯ ತುಂಬಲು ಅವರ ಪತ್ನಿ ಸುಮಲತಾ ನಿರ್ಧರಿಸಿದ್ದಾರೆ. ತಮ್ಮ ಪತಿ ಸ್ಪರ್ಧಿಸುತ್ತಿದ್ದ ಕಾಂಗ್ರೆಸ್‌ನಿಂದಲೇ ಕಣಕ್ಕಿಳಿಯುವುದಾಗಿ ಸುಮಲತಾ ಹೇಳಿಕೊಂಡಿದ್ದಾರೆ.

ಸುಮಲತಾ ನಿರ್ಧಾರಕ್ಕೆ ಚಿತ್ರರಂಗದ ಸಂಪೂರ್ಣ ಬೆಂಬಲ ಇದೆ ಎನ್ನಲಾಗಿದೆ. ಅಂಬರೀಶ್ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಜೆಡಿಎಸ್‍ಗೆ ಬಾಹ್ಯ ಬೆಂಬಲ ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಅವರ ಮತ್ತು ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿತ್ತು. ಕಾಂಗ್ರೆಸ್ ಚುನಾವಣೆಯ ವೇಳೆ ನೀಡಿದ್ದ ಬಿ ಫಾರ್ಮ್ ಅನ್ನು ಕಡೆಯ ಕ್ಷಣದಲ್ಲಿ ಅಂಬರೀಶ್ ತಿರಸ್ಕರಿಸಿದ್ದರು. ಆ ಮೂಲಕ ಕಾಂಗ್ರೆಸ್‍ಗಿದ್ದ ಒಕ್ಕಲಿಗ ಸಮುದಾಯದ ಕಡೆಯ ಕೊಂಡಿ ಮಂಡ್ಯದಲ್ಲಿ ಕಳಚಿದಂತಾಗಿತ್ತು.

ಆದರೆ, ಅಂಬರೀಶ್ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ಹೇಳಿಕೊಂಡಿದ್ದರಂತೆ. ಆದರೆ, ಅವರ ಇಚ್ಛೆ ಈಡೇರುವ ಮೊದಲೇ ಅವರು ಮೃತಪಟ್ಟರು. ಈಗ ಅವರ ಕಡೆಯ ಆಸೆಗೆ ಜೀವ ತುಂಬುವ ನಿರ್ಧಾರಕ್ಕೆ ಸುಮಲತಾ ಮುಂದಾಗಿದ್ದಾರೆ ಎನ್ನಲಾಗಿದೆ.

2018ರ ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ಕಾಂಗ್ರೆಸ್‍ನಿಂದ ಅಂಬರೀಶ್ ದೂರವಾಗಿದ್ದರು. ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ನಿರಾಕರಿಸಿದ್ದರು. ಅಂತಿಮವಾಗಿ ಕಾಂಗ್ರೆಸ್‍ನಿಂದ ಗಾಣಿಗ ರವಿ ಕಣಕ್ಕಿಳಿದು ಚುನಾವಣೆಯಲ್ಲಿ ಸೋಲು ಕಂಡಿದ್ದರು. ಕಾಂಗ್ರೆಸ್‍ನಿಂದ ದೂರವಾದ ಅಂಬರೀಶ್ ಅವರು ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. ಆದರೆ, ಪಕ್ಷಕ್ಕೆ ಸೇರಿರಲಿಲ್ಲ.

ಮೊದಲಿಗೆ ಮಂಡ್ಯದಿಂದ ದೇವೇಗೌಡ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯಿತ್ತು. ಹೀಗಾಗಿ ಹಿರಿಯ ನಾಯಕರು ಎಂಬ ಕಾರಣಕ್ಕೆ ಮಂಡ್ಯದ ಕೆಲವು ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದರು. ಆದರೆ ಅದು ಬದಲಾಗಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರತೊಡಗಿತೋ ಕಾಂಗ್ರೆಸ್ ನಾಯಕರಲ್ಲಿಯೂ ಅಸಮಾಧಾನ ಆರಂಭವಾಗಿದೆ. ಜತೆಗೆ ಮುಂದೊಂದು ದಿನ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಳ್ಳಬಹುದು ಎಂಬ ಭಯವೂ ಆರಂಭವಾಗಿದೆ.

ಇವತ್ತೇನಾದರೂ ಮಂಡ್ಯದಲ್ಲಿ ಕಾಂಗ್ರೆಸ್‌ನ ಅಸ್ಥಿತ್ವ ಉಳಿಸುವ ನಾಯಕ ಇದ್ದರೆ ಅದು ಅಂಬರೀಶ್ ಅವರ ಪುತ್ರ ಅಭಿಷೇಕ್ ಮಾತ್ರ ಎಂಬ ಮಾತುಗಳೂ ಇವೆ. ಅಂಬರೀಶ್ ಅವರಿಗೆ ಯಾವ ರೀತಿಯ ಪ್ರೀತಿಯನ್ನು ತೋರಿಸುತ್ತಿದ್ದರೋ ಅದೇ ಪ್ರೀತಿಯನ್ನು ಜಿಲ್ಲೆಯ ಜನ ಅಭಿಷೇಕ್ ಅವರ ಮೇಲೆ ತೋರಿಸುತ್ತಿದ್ದಾರೆ. ಜತೆಗೆ ಅಭಿಷೇಕ್ ಜನರ ಅಭಿಮಾನ ಗಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ಅಭಿಷೇಕ್ ಅವರು ಚುನಾವಣೆಗೆ ಸ್ಪರ್ಧಿಸಲಿ ಆ ಮೂಲಕ ಕಾಂಗ್ರೆಸ್ ಮಂಡ್ಯದಲ್ಲಿ ಉಳಿಯುವಂತೆ ಮಾಡಲಿ ಎಂದೂ ಬಹಳಷ್ಟು ಕಾಂಗ್ರೆಸ್‌ ಮುಖಂಡರು ಅಭಿಪ್ರಾಯಪಟ್ಟಿದ್ದರು.

ಅಭಿಮಾನಿಗಳಿಗೆ ಉಚಿತ ಸಿನಿಮಾ ಟಿಕೆಟ್!

ಮಂಡ್ಯದಿಂದ ಕಣಕ್ಕಿಳಿಯಲು ಎಲ್ಲಾ ಸಿದ್ಧತೆಗಳಲ್ಲಿ ತೊಡಗಿರುವ ನಿಖಿಲ್‌ 'ಸೀತಾರಾಮ ಕಲ್ಯಾಣ' ಚಿತ್ರದ ಟಿಕೆಟ್‍ಗಳನ್ನು ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚುವ ಹೊಸ ಜವಾಬ್ದಾರಿ ಸದ್ಯ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರ ಮೇಲೆ ಬಿದ್ದಿದೆ!

ಇದು ಮುಖ್ಯಮಂತ್ರಿಗಳು ಸೂಚನೆಯೂ ಆಗಿರುವ ಕಾರಣ ಎಲ್ಲಾ ಶಾಸಕರು ಕಳೆದೊಂದು ವಾರದಿಂದ ಚಾಚೂ ಟಿಕೆಟ್ ಹಂಚುತ್ತಿದ್ದಾರೆ ಎನ್ನಲಾಗಿದೆ. ಮುಖಂಡರು ಹಲವು ಹಳ್ಳಿಗಳಲ್ಲಿ ಮನೆಮನೆಗೆ ತೆರಳಿ ತಲೆಗೊಂದು ಟಿಕೆಟ್ ಹಂಚುತ್ತಿದ್ದಾರೆ. ಊರಿಗೊಂದು ಟಿಕೆಟ್ ಬುಕ್ ವಿತರಣೆ ಮಾಡಲಾಗಿದ್ದು ಜನರು ಟ್ರ್ಯಾಕ್ಟರ್‍ಗಳಲ್ಲಿ ತೆರಳಿ ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಜೆಡಿಎಸ್ ಮುಖಂಡರು ಮಾತ್ರವಲ್ಲದೇ ಎಲ್ಲಾ ತಾಲ್ಲೂಕುಗಳಲ್ಲಿರುವ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಸದಸ್ಯರೂ ಕೇಳಿದವರಿಗೆಲ್ಲಾ ಉಚಿತವಾಗಿ ಟಿಕೆಟ್ ಹಂಚಿಕೆ ಮಾಡುತ್ತಿದ್ದಾರೆ.

ಟಿಕೆಟ್ ಹಂಚುವುದು ಮಾತ್ರವಲ್ಲದೇ ಇಡೀ ದಿನದ ಪ್ರದರ್ಶನವನ್ನು ಶಾಸಕರೇ ಪ್ರಾಯೋಜನೆ ಮಾಡುತ್ತಿದ್ದಾರೆ. ಶಾಸಕ ರವೀಂದ್ರ ಶ್ರೀಕಂಠಯ್ಯ ಒಂದು ದಿನ ಜನರಿಗೆ ಉಚಿತವಾಗಿ ಚಿತ್ರ ತೋರಿಸಿದ್ದಾರೆ. ಶಾಸಕ ಎಂ. ಶ್ರೀನಿವಾಸ್ ಅವರ ಅಳಿಯ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್.ಯೋಗೇಶ್ ಅವರೂ ಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಯಾ ಶಾಸಕರ ನೇತೃತ್ವದಲ್ಲಿ ಉಚಿತವಾಗಿ ಚಿತ್ರ ತೋರಿಸಲಾಗುತ್ತಿದೆ.

ಇಲ್ಲಿಯವರೆಗೂ ಮಂಡ್ಯದಲ್ಲಿ ಜೆಡಿಎಸ್‌ ಜಯ ಸಾಧಿಸಲಿದೆ ಎನ್ನಲಾಗುತ್ತಿತ್ತು. ಆದರೆ, ಈ ನಡುವೆ ಸುಮಲತಾ ರಾಜಕೀಯ ಪ್ರವೇಶ ಖಚಿತ ಪಡಿಸಿರುವುದರಿಂದ ಹಾಗೂ ಮಂಡ್ಯದಿಂದಲೇ ಕಣಕ್ಕಿಳಿಯುವ ಮಾತನಾಡಿರುವುದರಿಂದ ಜೆಡಿಎಸ್‌ ಇಲ್ಲಿ ಸ್ಪರ್ಧೆಯಿಂದ ಹಿಂದುಳಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ದೇವೇಗೌಡ, ನಿಖಿಲ್‌ ಕುಮಾರಸ್ವಾಮಿಗೆ ಬೇರೆ ಕ್ಷೇತ್ರ ತೋರಿಸಬಹುದು ಇಲ್ಲವೇ ಈ ರಾಜಕೀಯ ತಾಳ್ಮೆಗಾಗಿ ಕಾಯುವಂತೆ ಸೂಚಿಸಲೂಬಹುದು.