samachara
www.samachara.com
ಸರ್ವೆಯೂ ಆಗಿದೆ, ದುಡ್ಡೂ ಇದೆ; ಆದರೂ ಜಾರಿಯಾಗುತ್ತಿಲ್ಲ ಈ ರೈಲ್ವೆ ಯೋಜನೆ
COVER STORY

ಸರ್ವೆಯೂ ಆಗಿದೆ, ದುಡ್ಡೂ ಇದೆ; ಆದರೂ ಜಾರಿಯಾಗುತ್ತಿಲ್ಲ ಈ ರೈಲ್ವೆ ಯೋಜನೆ

ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ರೈಲ್ವೆ ಯೋಜನೆಯೊಂದು ನನೆಗುದಿಗೆ ಬಿದ್ದಿದೆ.

ರಮೇಶ್‌ ಹಳೇಕಾನಗೋಡು

ರಮೇಶ್‌ ಹಳೇಕಾನಗೋಡು

ಕೇಂದ್ರ ಸರಕಾರದ ಈ ಬಾರಿ ಬಜೆಟ್‌ ಬಂದು ಹೋಗಿದೆ. ರಾಜ್ಯಕ್ಕೆ ಘೋಷಣೆಯಾಗಿದ್ದ ಹಳೆಯ ರೈಲ್ವೆ ಯೋಜನೆಗಳನ್ನೇ ಹೊಸತೆನ್ನುವಂತೆ ಕೆಲವರು ಬಿಂಬಿಸುವ ಕಾರ್ಯವೂ ನಡೆದಿದೆ. ಆದರೆ, ಸುಮಾರು ಆರು ದಶಕಗಳಿಂದ ರೈಲ್ವೆ ಯೋಜನೆ ಅನುಷ್ಠಾನಕ್ಕಾಗಿ ನಡೆಯುತ್ತಿರುವ ಹೋರಾಟ ಹೆಚ್ಚು ಸದ್ದು ಮಾಡುತ್ತಿಲ್ಲ.

1960ರ ದಶಕದಿಂದಲೂ ತಾಳಗುಪ್ಪದಿಂದ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದವರೆಗೆ ರೈಲು ಮಾರ್ಗ ನಿರ್ಮಾಣಕ್ಕೆ ಇಲ್ಲಿನ ಜನ ಹೋರಾಟ ನಡೆಸುತ್ತಿದ್ದಾರೆ. ಶಿರಸಿ ಮೂಲಕ ಹಾವೇರಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದ ಕುರಿತೂ ಜನಾಂದೋಲನ ನಡೆಯುತ್ತಿದೆ. ಆದರೆ, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಯೋಜನೆ ಇನ್ನೂ ಕೈಗೂಡಿಲ್ಲ.

ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿದ ತಾಳಗುಪ್ಪ ರೈಲ್ವೆ ನಿಲ್ದಾಣದಿಂದ ಸಿದ್ದಾಪುರ ಪಟ್ಟಣದವರೆಗೆ ರೈಲು ಮಾರ್ಗ ಮುಂದುವರೆಸುವಂತೆ ಒತ್ತಾಯಿಸಿ 1967ರಿಂದಲೇ ಸಿದ್ದಾಪುರ ಹಾಗೂ ಶಿರಸಿ ಭಾಗದ ಜನತೆ ಸರಕಾರಕ್ಕೆ ಮೊರೆ ಇಡುತ್ತಿದ್ದಾರೆ. ಇದರ ಫಲವಾಗಿ ಕೇಂದ್ರ ಸರಕಾರದಿಂದ ಎರಡು ಸಲ ಹಣ ಬಿಡುಗಡೆ ಮಾಡಲಾಯಿತಾದರೂ ಕಾಣದ ಕೈಗಳ ಕುತಂತ್ರದಿಂದ ಈ ಹಣ ವ್ಯವಸ್ಥಿತವಾಗಿ ಬೇರೆಡೆಗೆ ವರ್ಗಾವಣೆಯಾಗಿದೆ ಎಂಬ ಆರೋಪಗಳಿವೆ.

ತಾಳಗುಪ್ಪದಿಂದ ಸಿದ್ದಾಪುರದವರೆಗೆ ಸುಮಾರು 18 ಕಿ.ಮೀ. ಹೊಸದಾಗಿ ರೈಲು ಮಾರ್ಗ ನಿರ್ಮಾಣ ಮಾಡಬೇಕಿದೆ. ಹೆಚ್ಚಾಗಿ ಸಮತಟ್ಟು ಭೌಗೋಳಿಕ ಪ್ರದೇಶ ಹೊಂದಿರುವುದರಿಂದ ಬೃಹತ್ ಪ್ರಮಾಣದ ಸೇತುವೆ, ಸುರಂಗಗಳನ್ನು ನಿರ್ಮಿಸುವ ಅವಶ್ಯಕತೆ ಇಲ್ಲಿಲ್ಲ. ಹೀಗಾಗಿ ರೈಲು ಮಾರ್ಗ ನಿರ್ಮಾಣವೂ ಸುಲಭವಾಗಲಿದೆ.

ಖಾಸಗಿ ಭೂಮಿಗಳಲ್ಲಿ ಹೆಚ್ಚಿನ ಪಾಲು ಭತ್ತದ ಗದ್ದೆಗಳೇ ಆಗಿರುವುದರಿಂದ ಭೂ ಸ್ವಾಧೀನ ಪ್ರಕ್ರಿಯೆಯೂ ಹೆಚ್ಚು ತೊಡಕಾಗದು. ಅಲ್ಲದೆ ಈ ಭಾಗದಲ್ಲಿ ಅರಣ್ಯ ಪ್ರದೇಶವೂ ತೀರ ಕಡಿಮೆ ಇರುವುದರಿಂದ ಹೆಚ್ಚುವರಿ ರೈಲು ಮಾರ್ಗ ನಿರ್ಮಾಣದಿಂದ ಅರಣ್ಯ ನಾಶದ ಪ್ರಶ್ನೆಯೂ ಇಲ್ಲ. ಇದಲ್ಲದೆ ಈ ಉದ್ದೇಶಿತ ರೈಲು ಮಾರ್ಗದಲ್ಲಿ ಆನೆ, ಹುಲಿ, ಸಿಂಗಳಿಕ, ಜಿಂಕೆ, ಕಾಡೆಮ್ಮೆ ಮುಂತಾದ ವನ್ಯಜೀವಿಗಳ ಕಾರಿಡಾರ್‌ಗಳಿಲ್ಲ.

ತಾಳಗುಪ್ಪ - ಸಿದ್ದಾಪುರ ರೈಲ್ವೆ ಯೋಜನೆಗೆ 320 ಕೋಟಿ ರೂಪಾಯಿ ಮೀಸಲಿದೆ. ಈ ಮಾರ್ಗದ ಸರ್ವೆ ಕಾರ್ಯವೂ ನಡೆದಿದೆ. ಆದರೆ, ಯೋಜನೆಗೆ ಶಿಲಾನ್ಯಾಸ ನೆರವೇರಿಸಲು ವಿಳಂಬವಾಗುತ್ತಿದೆ. ಒಮ್ಮೆ ಶಿಲಾನ್ಯಾಸ ನೆರವೇರಿಸಿದರೆ ಕಾಮಗಾರಿ ನಡೆಯುತ್ತಾ ಹೋಗುತ್ತದೆ. ಆದರೆ, ಯೋಜನೆ ಜಾರಿಯಾಗುವವರೆಗೂ ನಮ್ಮ ಹೋರಾಟ ನಡೆಯುತ್ತದೆ.ಈ ಯೋಜನೆ ಕೈಗೂಡದಿರುವುದಕ್ಕೆ ಜನಪ್ರತಿನಿಧಿಗಳ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿಯ ಕೊರತೆಯೇ ಕಾರಣ.
- ವಾಸುದೇವ ಬಿಳಗಿ, ಜಂಟಿ ಕಾರ್ಯದರ್ಶಿ, ಜಾಗೃತ ನಾಗರಿಕ ವೇದಿಕೆ ಸಿದ್ದಾಪುರ, ಉತ್ತರಕನ್ನಡ

ಈ ರೈಲು ಯೋಜನೆಗೆ 1969ರ ಜನವರಿ 2ರಂದು ಒಗ್ಗೂಡಿದ ಜನಧ್ವನಿ ಅಂದಿನ ಲೋಕಸಭಾ ಸದಸ್ಯ ದಿನಕರ ದೇಸಾಯಿಯವರನ್ನು ಕಾರ್ಯೋನ್ಮುಖರಾಗುವಂತೆ ಮಾಡಿತು. ಅವರು ಕೇಂದ್ರ ಸರಕಾರದ ರೈಲ್ವೆ ಮಂತ್ರಿಗಳಿಗೆ ಪತ್ರವೊಂದನ್ನು ಬರೆದು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆದರೂ ಹೆಚ್ಚೇನೂ ಪ್ರಯೋಜನವಾಗದೆ ಅಂದಿನ ಕೇಂದ್ರ ರೈಲ್ವೆ ಮಂತ್ರಿಯಿಂದ ಆಶ್ವಾಸನೆ ಪಡೆಯುವಷ್ಟಕ್ಕೇ ಅದು ಸೀಮಿತವಾಯಿತು. ಅಂದಿನ ಲೋಕಸಭಾ ಸದಸ್ಯ ದಿನಕರ ದೇಸಾಯಿಯವರು ತಾಳಗುಪ್ಪ- ಸಿದ್ದಾಪುರ ರೈಲು ಮಾರ್ಗ ನಿರ್ಮಾಣಕ್ಕೆ ನನ್ನ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಜನರಿಗೆ ನೀಡಿದ ಆಶ್ವಾಸನೆಯೂ ವ್ಯರ್ಥವಾಯಿತು.

ಜನರ ಧ್ವನಿ ಸರಕಾರದ ಕಿವಿ ತಲುಪದಾದಾಗ ಈ ಹೋರಾಟವನ್ನು ಸಾಂಘಿಕ ವ್ಯವಸ್ಥೆಗೆ ತರಲಾಯಿತು. ಇದರ ಫಲವಾಗಿ ಸಿದ್ದಾಪುರದ ಡಾ. ಶ್ರೀಧರ ವೈದ್ಯ ಅಧ್ಯಕ್ಷತೆಯಲ್ಲಿ 'ರೈಲ್ವೆ ಸಂಚಾರ ಸಂಚಲನ ಸಮಿತಿ' ಮತ್ತು ಗುರುನಾಥ ವೆರ್ಣೇಕರ ಅಧ್ಯಕ್ಷತೆ ಹಾಗೂ ವಾಸುದೇವ ಬಿಳಗಿ ಜಂಟಿ ಕಾರ್ಯದರ್ಶಿತ್ವದಲ್ಲಿ 'ಜಾಗೃತ ನಾಗರಿಕ ವೇದಿಕೆ- ಸಿದ್ದಾಪುರ' ಎಂದು ಎರಡು ಸಂಸ್ಥೆಗಳು ಹುಟ್ಟಿಕೊಂಡು ಜನಪರ ಹೋರಾಟ ಮುಂದುವರೆಸಿದವು.

ಸಿದ್ದಾಪುರದಲ್ಲಿ ಸಾಂಘಿಕ ವ್ಯವಸ್ಥಿತ ಹೋರಾಟ ಪ್ರಾರಂಭವಾದೊಡನೆ ಜಿಲ್ಲೆಯ ಇತರ ತಾಲ್ಲೂಕುಗಳ ಜನಪರ ಸಂಘ, ಸಂಸ್ಥೆಗಳೂ ಈ ಹೋರಾಟದಲ್ಲಿ ಜೊತೆಯಾಗಿ ಬೆಂಬಲ ಸೂಚಿಸಿದವು. ಹೋರಾಟ ನಡೆದೇ ಇತ್ತು. ಸುರೇಶ್ ಪ್ರಭು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗಲೂ ಪ್ರಯತ್ನ ನಡೆದು ಮರಾಠಿಯಲ್ಲಿ ಆಶ್ವಾಸನೆಯ ಪತ್ರ ಪಡೆಯಲಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ರೈಲ್ವೆ ಪ್ರಯಾಣಕ್ಕಾಗಿ ತಾಳಗುಪ್ಪ ಮತ್ತು ಹಾವೇರಿಗಳಿಗೆ ಉತ್ತರಕನ್ನಡದ ಘಟ್ಟದ ಮೇಲಿನ ಜನ ಅಧಿಕ ಪ್ರಮಾಣದಲ್ಲಿ ಹೋಗುತ್ತಾರೆ. ಆದ್ದರಿಂದ ಜನಾನುಕೂಲಕ್ಕಾಗಿ ಘಟ್ಟದ ಮೇಲಿನ ತಾಲ್ಲೂಕುಗಳನ್ನೂ ಸೇರಿಸುವ ರೈಲ್ವೆ ಮಾರ್ಗ ನಿರ್ಮಾಣ ತುರ್ತು ಅಗತ್ಯ.
- ಗಣಪತಿ ಬೆಳ್ಳೇಕೇರಿ, ನಿರ್ದೇಶಕರು, ಯಡಳ್ಳಿ ಸಹಕಾರಿ ಸಂಘ, ಶಿರಸಿ

ದಕ್ಷಿಣ ರೈಲ್ವೆಯ ಟರ್ಮಿನಲ್ ಪಾಯಿಂಟ್‌ಗಳಲ್ಲಿ ಒಂದಾದ ತಾಳಗುಪ್ಪವನ್ನು ಹುಬ್ಬಳ್ಳಿ ಜಂಕ್ಷನ್‌ಗೆ ಸೇರಿಸಲು 2011ರಲ್ಲಿ ಅಂದಿನ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಮುನಿಯಪ್ಪ ಅವರಿಗೆ ಜಾಗೃತ ನಾಗರಿಕ ವೇದಿಕೆಯಿಂದ ಮನವಿ ಸಲ್ಲಿಸಲಾಗಿತ್ತು. ಅವರಿಂದ ಸೂಕ್ತ ಪ್ರತಿಕ್ರಿಯೆ ಬರದಾದಾಗ ಮತ್ತೆ 2012ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರಿಗೂ ಮನವಿ ಮಾಡಲಾಗಿತ್ತು. ಪರಿಣಾಮವಾಗಿ ತಾಳಗುಪ್ಪ- ಸಿದ್ದಾಪುರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸರ್ವೆ ಕಾರ್ಯಕ್ಕೆ ಮಂಜೂರಾತಿ ದೊರೆಯಿತು. ಅದಕ್ಕೆ ಹಣ ಬಿಡುಗಡೆಯಾಗಿ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವ್ಯವಸ್ಥಾಪಕರಿಂದ ಸರ್ವೆ ಕಾರ್ಯಕ್ಕೆ ಆದೇಶ ಹೊರಡಿಸಲಾಗಿತ್ತು.

ಇಷ್ಟೆಲ್ಲ ಪ್ರಯತ್ನಗಳು ನಡೆದಿರುವಾಗಲೇ ಸಿದ್ದಾಪುರದ ಪಕ್ಕದ ತಾಲೂಕು ಶಿರಸಿ ಭಾಗದಿಂದಲೂ ಶಿರಸಿಗೆ ರೇಲ್ವೆ ವ್ಯವಸ್ಥೆ ಕಲ್ಪಿಸುವ ಕುರಿತು ಉದ್ಭವಿಸಿದ ಜನರ ಬೇಡಿಕೆಯನ್ನು ಪರಿಗಣಿಸಿದ ಹೋರಾಟ ಸಮಿತಿಗಳು ತಾಳಗುಪ್ಪ-ಸಿದ್ದಾಪುರ-ಶಿರಸಿ-ಹಾವೇರಿಗಳನ್ನು ಜೋಡಿಸಲು ಅನುಕೂಲವಾದರೆ ಎಲ್ಲ ರೀತಿಯಿಂದಲೂ, ಎಲ್ಲ ವರ್ಗದ ಜನರಿಗೆ ಅನುಕೂಲವಾಗುತ್ತದದೆಂದು ತಾಳಗುಪ್ಪದಿಂದ ಹಾವೇರಿ ಜೋಡಿಸುವ ಮಾರ್ಗವಾಗಬೇಕೆಂದು ಹೋರಾಟ ನಡೆಸಿವೆ. ಸಂಸದ ಅನಂತಕುಮಾರ ಹೆಗಡೆ ತಾವು ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಜೊತೆ ಮಾತನಾಡಿದ್ದೇನೆ ಎಂದು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಈ ಯೋಜನೆ ಮಾತ್ರ ಕಾರ್ಯರೂಪಕ್ಕೆ ಬಂದಿಲ್ಲ.

ಈ ರೈಲ್ವೆ ಮಾರ್ಗಗಳಿಂದ ಸ್ಥಳೀಯ ವಾಹನ ದಟ್ಟಣೆ ಕಡಿಮೆಯಾಗಲಿದೆ. ಸರಕು ಸಾಗಾಣಿಕೆ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ. ಲೋಡ್ ಲಾರಿಗಳ ಸಂಚಾರವೂ ಈ ಭಾಗದಲ್ಲಿ ಕಡಿಮೆಯಾಗಲಿದೆ. ಇದರಿಂದ ಈ ಭಾಗದಲ್ಲಿ ವಾಯು ಮಾಲಿನ್ಯ ಪ್ರಮಾಣ ಕೊಂಚ ಕಡಿಮೆಯಾಗಲಿದೆ. ಆದರೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇಂಥ ಯೋಜನೆಯೊಂದು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದೆ.