samachara
www.samachara.com
ಸುಪ್ರೀಂ ಹಾದಿಯಲ್ಲಿ ನ್ಯಾ. ಸೂರ್ಯಕಾಂತ್‌; ಈ ಜಡ್ಜ್‌ ಮೇಲಿದೆ ಕೋಟಿ ಕೋಟಿ ಹಗರಣದ ಆರೋಪ
COVER STORY

ಸುಪ್ರೀಂ ಹಾದಿಯಲ್ಲಿ ನ್ಯಾ. ಸೂರ್ಯಕಾಂತ್‌; ಈ ಜಡ್ಜ್‌ ಮೇಲಿದೆ ಕೋಟಿ ಕೋಟಿ ಹಗರಣದ ಆರೋಪ

ಈ ಎಲ್ಲಾ ದೂರುಗಳು ಕೊಲಿಜಿಯಂ ಮುಂದೆ ಇದ್ದಾಗಲೂ ಅಕ್ಟೋಬರ್‌ 2018ರವರೆಗೆ 6 ವರ್ಷಗಳ ಕಾಲ ಸೂರ್ಯಕಾಂತ್‌ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನಿರಾಳವಾಗಿ ಮುಂದುವರಿದಿದ್ದರು.

Team Samachara

ಅಪರೂಪದ ಬೆಳವಣಿಗೆಯಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ಸರಣಿ ವಿವಾದಗಳಿಗೆ ಗುರಿಯಾಗುತ್ತಿದೆ.

ವರ್ಷದ ಹಿಂದೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಐತಿಹಾಸಿಕ ಪತ್ರಿಕಾಗೋಷ್ಠಿಗೆ ಈ ದೇಶ ಸಾಕ್ಷಿಯಾಗಿತ್ತು. ಕೆಲವು ದಿನಗಳ ಹಿಂದೆ ಅದಾಗಲೇ ಕೊಲಿಜಿಯಂ ಶಿಫಾರಸ್ಸು ಮಾಡಿದ್ದ ಇಬ್ಬರು ನ್ಯಾಯಮೂರ್ತಿಗಳ ಹೆಸರನ್ನು ಕೈಬಿಟ್ಟು ಹೊಸ ವಿವಾದವನ್ನು ನ್ಯಾಯಾಲಯ ಮೈಮೇಲೆ ಎಳೆದುಕೊಂಡಿತ್ತು.

ಹಲವು ಅಪಸ್ವರಗಳ ನಡುವೆ ಇವರ ಜಾಗಕ್ಕೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ದಿನೇಶ್‌ ಮಹೇಶ್ವರಿ ಮತ್ತು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಸಂಜೀವ್‌ ಖನ್ನಾರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಇದೀಗ ಇನ್ನೂ ಇಬ್ಬರು ನ್ಯಾಯಮೂರ್ತಿಗಳ ಪದೋನ್ನತಿಗೆ ಕೊಲಿಜಿಯಂ ಚಿಂತನೆ ನಡೆಸುತ್ತಿದೆ. ಅವರೇ ನ್ಯಾ. ಭೂಷಣ್‌ ಗಗಾವಿ ಮತ್ತು ಸೂರ್ಯಕಾಂತ್‌.

ನ್ಯಾ. ಸೂರ್ಯಕಾಂತ್‌ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹಾಲಿ ಮುಖ್ಯನ್ಯಾಯಮೂರ್ತಿಗಳು. ಅವರ ವಿರುದ್ಧ ತಪ್ಪು ನಡವಳಿಕೆಯ ಗಂಭೀರ ಆರೋಪಗಳಿದ್ದು, ಸೂಕ್ತ ತನಿಖೆ ನಡೆಸದೆ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಬಾರದು ಎಂಬ ಒತ್ತಾಯ ಕೇಳಿ ಬಂದಿದೆ. ಈ ಸಂಬಂಧ ಹಿರಿಯ ವಕೀಲ ಪ್ರಶಾಂತ್‌ ಭೂಷಣ್, ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯಿ ಅವರಿಗೆ ಪತ್ರವನ್ನೂ ಬರೆದಿದ್ದಾರೆ.

ಹಾಗಂಥ ನ್ಯಾ. ಸೂರ್ಯಕಾಂತ್ ಮೇಲೆ ಆರೋಪ ಕೇಳಿ ಬರುತ್ತಿರುವುದು ಇಂದು ನಿನ್ನೆಯಲ್ಲ. 2012ರಲ್ಲಿ ಮೊದಲ ಬಾರಿಗೆ ‘ನ್ಯಾ. ಸೂರ್ಯಕಾಂತ್‌ ಅಕ್ರಮ ಆಸ್ತಿ ವಹಿವಾಟು ನಡೆಸಿದ್ದಾರೆ’ ಎಂದು ರಿಯಲ್‌ ಎಸ್ಟೇಟ್‌ ಮಧ್ಯವರ್ತಿಯೊಬ್ಬರು ಆರೋಪ ಹೊರಿಸಿದ್ದರು. ಆಮೇಲೆ 2017ರಲ್ಲಿ ಪಂಜಾಬ್‌ನ ಖೈದಿಗಳು 8 ಪ್ರಕರಣಗಳ ಪಟ್ಟಿ ಮಾಡಿ, ಈ ಎಲ್ಲಾ ಪ್ರಕರಣಗಳಲ್ಲಿ ಸೂರ್ಯಕಾಂತ್‌ ಜಾಮೀನು ಮಂಜೂರುಗೊಳಿಸಲು ಲಂಚ ಸ್ವೀಕರಿಸಿದ್ದಾರೆ ಎಂದು ದೂರು ನೀಡಿದ್ದರು.

ಈ ಎಲ್ಲಾ ದೂರುಗಳು ಕೊಲಿಜಿಯಂ ಮುಂದೆ ಇದ್ದಾಗಲೂ, ಅಕ್ಟೋಬರ್‌ 2018ರವರೆಗೆ 6 ವರ್ಷಗಳ ಕಾಲ ಸೂರ್ಯಕಾಂತ್‌ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿ ನಿರಾಳವಾಗಿ ಮುಂದುವರಿದಿದ್ದರು. ನಂತರ ಅವರಿಗೆ ಮದೋನ್ನತಿ ನೀಡಿ ಹಿಮಾಚಲ ಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ಅವರ ಮೇಲೆ ಕೇಳಿ ಬಂದ ದೂರುಗಳ ಬಗ್ಗೆ ಒಂದು ಸಣ್ಣ ತನಿಖೆಯೂ ನಡೆಸದೆ ಈ ಎಲ್ಲಾ ಬೆಳವಣಿಗೆಗಳು ನಡೆದಿದ್ದವು. ಇದೀಗ ಇದೇ ರೀತಿ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡುವ ಸಮಯವೂ ಸಮೀಪಿಸಿದೆ.

ಹಿಸ್ಸಾರ್‌ ಟು ಸುಪ್ರೀಂ ಕೋರ್ಟ್‌:

1984ರಲ್ಲಿ ಹರ್ಯಾಣದ ಹಿಸ್ಸಾರ್‌ ಜಿಲ್ಲೆಯಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದವರು ಸೂರ್ಯಕಾಂತ್‌. ಅವರನ್ನು 2000ನೇ ಇಸವಿಯಲ್ಲಿ ಹರ್ಯಾಣ ಸರಕಾರ ಅಡ್ವೊಕೇಟ್‌ ಜನರಲ್‌ ಆಗಿ ನೇಮಿಸಿತು. ಮುಂದೆ 2004ರಲ್ಲಿ ಅವರು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕವಾಗುವವರೆಗೆ ಇದೇ ಹುದ್ದೆಯಲ್ಲಿದ್ದರು.

ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದಾಗ ಮೊದಲ ಬಾರಿಗೆ 2012ರಲ್ಲೊಮ್ಮೆ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂತು. ರಿಯಲ್‌ ಎಸ್ಟೇಟ್‌ ಮತ್ತು ನಿರ್ಮಾಣ ಸಂಬಂಧಿ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಸತೀಶ್‌ ಕುಮಾರ್‌ ಜೈನ್‌ ಆಗಿನ ಮುಖ್ಯ ನ್ಯಾಯಮೂರ್ತಿ ಎಚ್‌. ಎಚ್‌. ಕಪಾಡಿಯಾ ಅವರಿಗೊಂದು ಪತ್ರ ಬರೆದು, “ಕಾಂತ್‌ 7.63 ಕೋಟಿ ರೂಪಾಯಿಗಳ ಸಾಲ ಮತ್ತು ತೆರಿಗೆ ವಂಚನೆಯ ಮೊತ್ತವನ್ನು ಪಾವತಿಸಬೇಕಿದೆ,” ಎಂದು ಹೇಳಿದ್ದರು. ಇದಕ್ಕೆ ಸಾಕ್ಷಿಯಾಗಿ 2010ರ ಮಾರ್ಚ್‌ ನಿಂದ 2011ರ ಮಾರ್ಚ್‌ ನಡುವೆ ಕಾಂತ್‌ಗೆ ಮಾರಾಟ ಮಾಡಿದ ಮತ್ತು ಖರೀದಿಸಿದ ಆಸ್ತಿಗಳ ಕ್ರಯ ಪತ್ರಗಳನ್ನು ಅವರು ದೂರಿನ ಜತೆ ಲಗತ್ತಿಸಿದ್ದರು.

ಜೈನ್‌ ದೂರು ಸಲ್ಲಿಸಿದ ಮೂರು ವಾರಗಳ ನಂತರ, ಅಂದರೆ 11 ಸೆಪ್ಟೆಂಬರ್‌ 2012ರಂದು ಈ ಸಂಬಂಧ ಮುಖ್ಯ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯಿಂದ ಪ್ರತಿಕ್ರಿಯೆಯನ್ನು ಪಡೆದುಕೊಂಡರು. ದೂರಿಗೆ ಪೂರಕವಾಗಿ "ನಾಲ್ಕು ವಾರಗಳ ಒಳಗೆ ಪರಿಶೀಲಿಸಲ್ಪಟ್ಟ ದಾಖಲೆಗಳು ಮತ್ತು ಅಫಿಡವಿಟ್‌ ಸಲ್ಲಿಸದೆ ಈ ದೂರನ್ನು ಪರಿಗಣಿಸಲು ಸಾಧ್ಯವಿಲ್ಲ," ಎಂದು ಪ್ರತಿಕ್ರಿಯೆಯಲ್ಲಿ ಹೇಳಲಾಗಿತ್ತು.

ಕೋರ್ಟ್‌ ರಿಜಿಸ್ಟ್ರಿಯ ಸೂಚನೆ ಮೇರೆಗೆ ಲಗುಬಗೆಯಲ್ಲಿ ವಾರದ ಒಳಗೆ ಅಂದರೆ ಆರನೇ ದಿನ ಜೈನ್‌, ತಾವು ನೀಡಿದ ದೂರಿನ ಎಲ್ಲಾ ಹೇಳಿಕೆಗಳಿಗೆ ಪ್ರಮಾಣ ಪತ್ರ ಮತ್ತು ಸಹಿ ಹಾಕಿದ ಅಫಿಡವಿಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಅಫಿಡವಿಟ್‌ ಸಲ್ಲಿಸುವುದಕ್ಕೂ ಮುನ್ನ ಆಗಸ್ಟ್‌ನಲ್ಲಿ ತಾವು ಸಲ್ಲಿಸಿದ ದೂರಿನಲ್ಲಿ ಜೈನ್‌ ಹೀಗೆ ಬರೆದಿದ್ದರು: ಕಾಂತ್‌ ತಮ್ಮ ಮೂರು ಮನೆಗಳನ್ನು ನವೀಕರಣ ಮಾಡಲು ನನ್ನನ್ನು ಸಂಪರ್ಕಿಸಿದರು - ಚಂಡೀಗಢದ ಸೆಕ್ಟರ್‌ 10ರಲ್ಲಿರುವ ಅವರ ಅಧಿಕೃತ ನಿವಾಸ, ಸೆಕ್ಟರ್‌ 16ರಲ್ಲಿರುವ ಎರಡು ಬೆಡ್‌ರೂಂ ಮನೆ ಮತ್ತು ಹರ್ಯಾಣದ ಪಂಚಕುಲಾದಲ್ಲಿರುವ 15 ಎಕರೆ ಫಾರ್ಮ್ ಹೌಸ್‌ಗಳು ಇವಾಗಿದ್ದವು. ಈ ಮನೆಗಳ ನವೀಕರಣಕ್ಕೆ 19 ಲಕ್ಷ ರೂಪಾಯಿ ಖರ್ಚಾಯಿತು. ಆದರೆ ಇದರಲ್ಲಿ ಒಂದೇ ಒಂದು ರೂಪಾಯಿಯನ್ನೂ ಕಾಂತ್‌ ನನಗೆ ಪಾವತಿಸಿಲ್ಲ ಎಂದು ಬರೆದಿದ್ದರು.

ಸೆಪ್ಟೆಂಬರ್‌ನಲ್ಲಿ ಅಫಿಡವಿಟ್‌ ಸಲ್ಲಿಸುವ ವೇಳೆ ಜೈನ್‌, ಆಗಸ್ಟ್‌ನಲ್ಲಿ ತಾನು ದೂರು ದಾಖಲಿಸಿದ ನಂತರ ಕಾಂತ್‌ ತಮಗೆ ಆರು ಲಕ್ಷ ರೂಪಾಯಿ ಪಾವತಿಸಿರುವುದಾಗಿ ತಿಳಿಸಿದ್ದರು. ಈ ಸಂದರ್ಭದಲ್ಲಿ ಕಾಂತ್‌ ಮತ್ತು ಜೈನ್‌ ಮಧ್ಯೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ನ್ಯಾಯಮೂರ್ತಿಗಳ ಎಲ್ಲಾ ಆಸ್ತಿ ಖರೀದಿ ವಿವರಗಳನ್ನೂ ಜೈನ್‌ ಸುಪ್ರೀಂ ಕೋರ್ಟ್‌ ಮುಂದೆ ಬಾಯಿ ಬಿಟ್ಟಿದ್ದರು. ನವೀಕರಣದ ಜತೆಗೆ ನ್ಯಾಯಮೂರ್ತಿಗಳಿಗಾಗಿ ತೆಗೆದ ಎರಡು ಆಸ್ತಿಗಳನ್ನು ಹಾಗೂ ಅವರಿಗೆ ಮಾರಾಟ ಮಾಡಿದ ಎರಡು ಆಸ್ತಿಗಳ ದಾಖಲೆಗಳನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದ್ದರು.

ಈ ಸಂದರ್ಭದಲ್ಲಿ ಸೇಲ್‌ ಡೀಡ್‌ನಲ್ಲಿ ಉಲ್ಲೇಖಿಸಿದ ಮೊತ್ತಕ್ಕೂ ನಿಜವಾದ ಮಾರಾಟದ ಮೊತ್ತಕ್ಕೂ ತುಂಬಾ ವ್ಯತ್ಯಾಸಗಳಿವೆ. ಈ ವ್ಯತ್ಯಾಸದ ಹಣವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎಂಬುದಾಗಿಯೂ ಜೈನ್‌ ಸಿಜೆಐ ಗಮನಕ್ಕೆ ತಂದಿದ್ದರು.

ಜೈನ್ ಅಫಿಡವಿಟ್‌ ಪ್ರಕಾರ, ಮೊದಲ ಆಸ್ತಿಯ ಮಾರಾಟ ಮಾರ್ಚ್‌ 2010ರಲ್ಲಿ ನಡೆದಿತ್ತು. ಹಿಮಾಚಲ ಪ್ರದೇಶದ ಕುಮಾರ್‌ಹಟ್ಟಿಯ ನಿಹಾನ್‌ ರಸ್ತೆಯಲ್ಲಿರುವ ಬೇನಾಮಿ ಆಸ್ತಿಯನ್ನು ಮಾರಾಟ ಮಾಡಲು ಕಾಂತ್‌ ಜೈನ್‌ರನ್ನು ಸಂಪರ್ಕಿಸಿದ್ದರು. ಈ ಆಸ್ತಿ 2.32 ಕೋಟಿ ರೂಪಾಯಿಗೆ ಮಾರಾಟಗೊಂಡಿತ್ತು. ಆದರೆ ಸೇಲ್‌ ಡೀಡ್‌ನಲ್ಲಿ ಕೇವಲ 13 ಲಕ್ಷ ರೂಪಾಯಿಗಳನ್ನು ನಮೂದಿಸಲಾಗಿತ್ತು. ಬಾಕಿ ಉಳಿದ 2.20 ಕೋಟಿ ರೂಪಾಯಿಗಳನ್ನು ಜೈನ್‌ ನಗದು ರೂಪದಲ್ಲಿ ಸ್ವೀಕರಿಸಿ, ‌ಅದನ್ನು ನ್ಯಾಯಮೂರ್ತಿಗಳಿಗೆ ಹಸ್ತಾಂತರಿಸಿದ್ದರು.

ಇದೇ ರೀತಿ 2011ರ ಏಪ್ರಿಲ್‌ನಲ್ಲಿ ಜೈನ್‌ ಮೂಲಕ ಕಾಂತ್‌ ಇನ್ನೊಂದು ಆಸ್ತಿ ಮಾರಾಟ ಮಾಡಿದ್ದರು. ಇದೊಂದು 441 ಚದರ ಮೀಟರ್‌ಗಳ ಪಂಚಕುಲದಲ್ಲಿರುವ ನಿವೇಶನದ ಜಾಗವಾಗಿತ್ತು. ಕ್ರಯ ಪತ್ರದಲ್ಲಿ ಈ ಜಾಗವನ್ನು 1.50 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ತೋರಿಸಲಾಗಿತ್ತು. ಆದರೆ ಇಲ್ಲಿಯೂ ಜಾಗವನ್ನು 3.10 ಕೋಟಿ ರೂಪಾಯಿಗೆ ಮಾರಾಟ ಮಾಡಿ ಈ ಹಿಂದಿನಂತೆಯೇ ಬಾಕಿ ಹಣವನ್ನು ನಗದು ರೂಪದಲ್ಲಿ ಸ್ವೀಕರಿಸಿದ ಜೈನ್‌ ಅದನ್ನು ನ್ಯಾಯಮೂರ್ತಿಗಳಿಗೆ ತಲುಪಿಸಿದ್ದರು.

ಜೈನ್‌ ಪ್ರಕಾರ, ಕಾಂತ್‌ ಆಸ್ತಿ ಖರೀದಿ ವೇಳೆಯೂ ಇದೇ ಮಾದರಿಯನ್ನು ಅನುಸರಿಸಿದ್ದರು. ದೆಹಲಿಯಲ್ಲಿ ಒಂದು ಮನೆ ಹುಡುಕಿಕೊಡುವಂತೆ ಜೈನ್‌ಗೆ ಕಾಂತ್‌ ಸೂಚಿಸಿದ್ದರು. ಅದರಂತೆ ದೆಹಲಿಯ ಗ್ರೇಟರ್‌ ಕೈಲಾಶ್‌-1 ರಲ್ಲಿ 285 ಚದರ ಯಾರ್ಡ್‌ನ ಮನೆ ಹುಡುಕಿಕೊಟ್ಟರು. 2003ರಲ್ಲಿ ಬಿಜೆಪಿ ಸೇರಿದ ಜೈಫುರದ ರಾಜಕುಟುಂಬದ ಸದಸ್ಯೆ ದಿಯಾ ಕುಮಾರಿ ಹೆಸರಿನಲ್ಲಿ ಈ ಆಸ್ತಿಯಿತ್ತು. 2010ರ ಸೆಪ್ಟೆಂಬರ್‌ನಲ್ಲಿ ಕಾಂತ್‌ ಇದನ್ನು ಖರೀದಿಸಿದ್ದರು. ಇದರ ಖರೀದಿಗೆ 3.50 ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಾಗಿತ್ತು. ಆದರೆ ಸೇಲ್‌ ಡೀಡ್‌ನಲ್ಲಿ ಕೇವಲ 1.50 ಕೋಟಿ ರೂಪಾಯಿಗಳನ್ನು ತೋರಿಸಲಾಯಿತು ಎನ್ನುತ್ತಾರೆ ಜೈನ್.

ಈ ಡೀಲ್‌ನಲ್ಲಿ ಬಾಕಿ ಉಳಿದ ಎರಡು ಕೋಟಿ ರೂಪಾಯಿ ನಗದನ್ನು ಕಾಂತ್‌ ಪತ್ನಿ ನವದೆಹಲಿಯ ಮಹಾರಾಣಿ ಬಾಗ್‌ನಲ್ಲಿರುವ ದಿಯಾ ಕುಮಾರಿ ಮನೆಗೆ ತೆರಳಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಂತ್‌ ಪತ್ನಿ ಜತೆ ತಾನೂ ಇದ್ದಿದ್ದಾಗಿ ಜೈನ್‌ ದೂರಿನಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ಇದೇ ಮಾದರಿಯಲ್ಲಿ ಚಂಡೀಗಢದ ಸೆಕ್ಟರ್‌ 18ರಲ್ಲಿ ಕಾಂತ್‌ 190 ಚದರ ಯಾರ್ಡ್‌ ವಿಸ್ತೀರ್ಣದ ಆಸ್ತಿ ಖರೀದಿಸಿದ್ದರು. ಇದಕ್ಕೂ 3.08 ಕೋಟಿ ರೂಪಾಯಿ ಬೆಲೆ ನಿಗದಿ ಪಡಿಸಲಾಗಿತ್ತು. ಆದರೆ ಕ್ರಯ ಪತ್ರದಲ್ಲಿ ಇದರ ಬೆಲೆ ಕೇವಲ 1.25 ಕೋಟಿ ರೂಪಾಯಿ ಎಂದು ನಮುದಾಗಿತ್ತು. ಇಲ್ಲೂ ಉಳಿಕೆ ಹಣವನ್ನು ನಗದು ರೂಪದಲ್ಲಿ ಪಾವತಿ ಮಾಡಲಾಗಿತ್ತು.

ಆದರೆ ಜೈನ್ ಸಲ್ಲಿಸಿದ ದಾಖಲೆಗಳು ಸ್ವಲ್ಪ ಗೊಂದಲಕ್ಕೆ ಕಾರಣವಾಗಿದ್ದವು. ಮಾರ್ಚ್‌ ಮತ್ತು ಏಪ್ರಿಲ್‌ 2011 ಎಂದು ಉಲ್ಲೇಖಿಸಲಾದ ಎರಡು ಕ್ರಯ ಪತ್ರಗಳಲ್ಲಿ, ಒಂದರಲ್ಲಿ ಜಾಗದ ಮೊತ್ತ 3.08 ಕೋಟಿ ರೂಪಾಯಿ ಎಂದೂ ಇನ್ನೊಂದರಲ್ಲಿ 1.45 ಕೋಟಿ ರೂಪಾಯಿ ಎಂದು ನಮೂದಾಗಿತ್ತು.

ಕಾಂತ್ ಖರೀದಿಸಿದ ಎರಡೂ ಆಸ್ತಿಗಳು ನಗರದ ದುಬಾರಿ ಪ್ರದೇಶಗಳಲ್ಲೇ ಇದ್ದವು. ದೆಹಲಿಯ ಗ್ರೇಟರ್‌ ಕೈಲಾಶ್‌ನ ಮನೆ ಸರಕಾರಿ ಭೂಮಿಯ ದರಗಳ ಅಂದಾಜು ಪ್ರಕಾರ ಸುಮಾರು 3 ಕೋಟಿ ರೂ. ಮತ್ತು ಚಂಡೀಗಢದ ಮನೆ 6.63 ಕೋಟಿ ರೂಪಾಯಿ ಬೆಲೆ ಬಾಳುತ್ತಿತ್ತು.

ಇದನ್ನೆಲ್ಲಾ ನೋಡಿದಾಗ ಒಂದಕ್ಕಿಂತ ಹೆಚ್ಚು ಬಾರಿ ನ್ಯಾಯಮೂರ್ತಿಗಳು ತೆರಿಗೆ ಮತ್ತು ಸ್ಟ್ಯಾಂಪ್‌ ಡ್ಯೂಟಿ ತಪ್ಪಿಸಲು ಅಡ್ಡ ವ್ಯವಹಾರ ನಡೆಸಿದ್ದರು. ಎಲ್ಲಾ ಲೆಕ್ಕಾ ಹಾಕಿದಾಗ ಒಟ್ಟು 7.63 ಕೋಟಿ ರೂಪಾಯಿಗಳ ವಂಚನೆ ಪ್ರಕರಣ ಇದಾಗಿತ್ತು.

ಜೈನ್‌ ಹೀಗೊಂದು ದೂರು ದಾಖಲಿಸಿ ಐದು ವರ್ಷ ಕಳೆದ ಮೇಲೂ ಏನೂ ಆಗಿರಲಿಲ್ಲ. ಅದಾದ ಬಳಿಕ ಮತ್ತೊಂದು ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾದರು ಸೂರ್ಯಕಾಂತ್‌. ಈ ಬಾರಿ ಆರೋಪದ ಮೂಲ ಪಂಜಾಬ್‌ ಜೈಲಿನಲ್ಲಿತ್ತು.

ಪಟಿಯಾಲಾದ ಅತೀ ಹೆಚ್ಚಿನ ಭದ್ರತೆ ಇರುವ ಜೈಲಿನಿಂದ ಸುರ್ಜಿತ್‌ ಸಿಂಗ್‌ ಎಂಬ ಖೈದಿಯೊಬ್ಬರು ನ್ಯಾಯಮೂರ್ತಿಗಳ ಗಂಭೀರ ತಪ್ಪೆಸಗಿದ್ದಾರೆ ಎಂದು ಆರೋಪಿಸಿದ್ದರು. ಮಾದಕ ವಸ್ತುಗಳಿಗೆ ಸಂಬಂಧಿಸಿದ ಕಾಯ್ದೆಯಲ್ಲಿ ಜೈಲು ಪಾಲಾದವರಿಗೆ ಜಾಮೀನು ನೀಡಲು ಕಾಂತ್‌ ಲಂಚ ಸ್ವೀಕರಿಸಿದ್ದಾರೆ ಎಂಬುದು ಅವರ ಆರೋಪವಾಗಿತ್ತು. ದೂರಿನಲ್ಲಿ ಸಿಂಗ್, ‘ನ್ಯಾಯಮೂರ್ತಿಗಳ ಸಹೋದರರು, ಸಂಬಂಧಿಗಳು ಮತ್ತು ಇಬ್ಬರು ವಕೀಲರು ಗಿರಾಕಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದ್ದರು. ತಮ್ಮ ಆರೋಪಕ್ಕೆ ಮತ್ತಷ್ಟು ಪುರಾವೆ ನೀಡಿದ್ದ ಸುರ್ಜಿತ್‌ 2015ರ ಅಕ್ಟೋಬರ್‌ನಿಂದ 2017ರ ಫೆಬ್ರವರಿಯವರೆಗೆ ಕಾಂತ್‌ ಜಾಮೀನು ನೀಡಿದ್ದ 8 ಪ್ರಕರಣಗಳನ್ನು ಪಟ್ಟಿ ಮಾಡಿದ್ದರು.

ವಿಚಿತ್ರವೆಂದರೆ ಸುಪ್ರೀಂ ಕೋರ್ಟ್‌ ಆಡಳಿತ ಜೈನ್‌ ಆರೋಪಗಳ ಮೇಲಾಗಲಿ, ಸಿಂಗ್‌ ನೀಡಿದ ದೂರಿನ ಮೇಲಾಗಲಿ ತನಿಖೆಗೆ ಆದೇಶ ನೀಡಲಿಲ್ಲ. ಬದಲಿಗೆ ನ್ಯಾ. ಕಾಂತ್‌ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲೇ ಮುಂದುವರಿದರು. ಅವರು 14 ವರ್ಷಗಳನ್ನು ಚಂಡೀಗಢದಲ್ಲಿ ಕಳೆದ ನಂತರ 2018ರ ಅಕ್ಟೋಬರ್‌ 3ರಂದು ಅವರನ್ನು ಹಿಮಾಚಲ ಪ್ರದೇಶದ ಮುಖ್ಯನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು.

ಈ ಸಂದರ್ಭದಲ್ಲೂ ವಿವಾದ ಕೇಳಿ ಬಂತು. ಕಾಂತ್‌ಗಿಂತ ನಾಲ್ಕು ವರ್ಷ ಹಿರಿಯರಾದ, ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲೇ ಇದ್ದ ಎ. ಕೆ. ಮಿತ್ತಲ್‌ ಅವರನ್ನು ಕಡೆಗಣಿಸಿ ಅವರ ನೇಮಕ ನಡೆದಿತ್ತು. ಈ ನೇಮಕದ ಸಂದರ್ಭದಲ್ಲಿ ಕಾಂತ್‌ ಹೆಸರನ್ನು ಹೈಕೋರ್ಟ್‌ ಸಿಜೆ ಸ್ಥಾನಕ್ಕೆ ಕೊಲಿಜಿಯಂ ಶಿಫಾರಸ್ಸು ಮಾಡುತ್ತಿದ್ದಂತೆ ಸ್ವತಃ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ. ಕೆ. ಗೋಯಲ್‌ ಅಸಮಧಾನ ಹೊರ ಹಾಕಿದ್ದರು. ಹೀಗಿದ್ದೂ ಕಾಂತ್‌ ಮುಖ್ಯ ನ್ಯಾಯಮೂರ್ತಿಯಾದರೆ ಮಿತ್ತಲ್‌ ಚಂಡೀಗಢದಲ್ಲೇ ಉಳಿದುಬಿಟ್ಟರು.

ನ್ಯಾಯಾಂಗದ ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಇದ್ದ ವ್ಯಕ್ತಿಯೊಬ್ಬರ ಪ್ರಕಾರ, ಮಿತ್ತಲ್‌ ಅವರನ್ನು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಮಾಡುವುದೆಂದು 2017ರ ಏಪ್ರಿಲ್‌ನಲ್ಲಿ ಪ್ರಸ್ತಾಪವಾಗಿತ್ತು. ಆದರೆ ಮಿತ್ತಲ್‌ ಮತ್ತು ಕಾಂತ್‌ಗಿಂತ ಎಸ್‌.ಎಸ್‌. ಸರೋನ್‌ ಹಿರಿಯರಾಗಿದ್ದರು. ಮತ್ತು ಅವರ ನಿವೃತ್ತಿಗೆ ಕೆಲವೇ ಸಮಯ ಮಾತ್ರ ಬಾಕಿ ಉಳಿದಿತ್ತು. ಅವರು ನಿವೃತ್ತರಾದ ಬಳಿಕ ಮಿತ್ತಲ್‌ ಹೆಸರು ಕಳುಹಿಸಬಹುದು ಎಂದು ಆಗ ಅಂದುಕೊಳ್ಳಲಾಗಿತ್ತು. ಆದರೆ ಹಾಗಾಗಲಿಲ್ಲ.

ಸರೋನ್‌ ನಿವೃತ್ತಿಯ ನಂತರ ಮಿತ್ತಲ್‌ ಬದಿಗೊತ್ತಿ ಕಾಂತ್‌ರನ್ನು ಹಿಮಾಚಲ ಪ್ರದೇಶ ಹೈಕೋರ್ಟ್‌ಗೆ ಬಡ್ತಿ ನೀಡುವ ತೀರ್ಮಾನವನ್ನು ಕೊಲಿಜಿಯಂ ತೆಗೆದುಕೊಂಡಿತು. ನಿರ್ಧಾರ ತೆಗೆದುಕೊಂಡ ಕೊಲಿಜಿಯಂನಲ್ಲಿ ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ, ರಂಜನ್‌ ಗೊಗೋಯಿ, ಜಸ್ತಿ ಚೆಲಮೇಶ್ವರ್‌ ಮತ್ತು ಕುರಿಯನ್‌ ಜೋಸೆಫ್‌ ಇದ್ದರು.

ಇಲ್ಲೊಂದು ಮಹತ್ವದ ಬೆಳವಣಿಗೆ ನಡೆದಿತ್ತು. ಹಾಗೆ ನೋಡಿದರೆ ಜೆ. ಎಸ್‌. ಖೇಹರ್‌ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾಗಲೇ ಪದೋನ್ನತಿಗಾಗಿ ಮಿತ್ತಲ್‌ ಹೆಸರು ಕೇಳಿ ಬಂದಿತ್ತು. ಆದರೆ ಸರೋನ್‌ರಿಂದಾಗಿ ಅವರು ಕಾಯಬೇಕಾಯಿತು. ಮುಂದೆ ಸರೋನ್‌ ನಿವೃತ್ತರಾದಾಗ ದೀಪಕ್‌ ಮಿಶ್ರಾ ಸಿಜೆಐ ಆಗಿ ಬಂದರು. ಈ ಸಂದರ್ಭದಲ್ಲಿ ಅವರು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸಿ ಸುಪ್ರೀಂ ಕೋರ್ಟ್‌ಗೆ ಬಂದಿದ್ದ ಎ. ಕೆ. ಸಿಕ್ರಿ ಮತ್ತು ರಂಜನ್‌ ಗೊಗೋಯಿ ಅವರಲ್ಲಿ ಯಾರಿಗೆ ಪದೋನ್ನತಿ ನೀಡಬೇಕು ಎಂಬ ಅಭಿಪ್ರಾಯ ಕೇಳಿದ್ದರು. ಇಬ್ಬರೂ ಮಿತ್ತಲ್ ಹೆಸರಿಗೆ ಮಣೆ ಹಾಕದೇ ಸೂರ್ಯಕಾಂತ್‌ರತ್ತ ಒಲವು ತೋರಿದ್ದರು.

ಗೊಗೋಯಿ ಪಂಜಾಬ್‌ ಮತ್ತು ಹರ್ಯಾಣ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಕಾಂತ್‌ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ 2018ರ ಜನವರಿ 10ರ ಕೊಲಿಜಿಯಂ ಸಭೆಯಲ್ಲಿ ಮಿತ್ತಲ್‌ ಹೆಸರನ್ನು ಬದಿಗೆ ತಳ್ಳಿ ಕಾಂತ್‌ ಹೆಸರನ್ನು ಹಿಮಾಚಲ ಪ್ರದೇಶ ಹೈಕೋರ್ಟ್‌ ಸಿಜೆ ಸ್ಥಾನಕ್ಕೆ ಶಿಫಾರಸ್ಸು ಮಾಡಲಾಯಿತು.

ಕೊಲಿಜಿಯಂನ ಈ ತೀರ್ಮಾನ ವೆಬ್‌ಸೈಟ್‌ವೊಂದರಲ್ಲಿ ಪ್ರಕಟವಾಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಗೋಯಲ್‌ ಭಿನ್ನ ರಾಗ ತಾಳಿದರು. ಅವರು ಇದೇ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ವಕೀಲರಾಗಿ 20 ವರ್ಷಗಳನ್ನು ಕಳೆದಿದ್ದರು ಮತ್ತು ನ್ಯಾಯಮೂರ್ತಿಗಳಾಗಿ 10 ವರ್ಷ ಕಾರ್ಯ ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಕಂಡ ಅನುಭವಗಳ ಮೇಲೆ ದೀಪಕ್‌ ಮಿಶ್ರಾ ಅವರಿಗೆ ಜನವರಿ 12ರಂದು ಪತ್ರ ಬರೆದ ಗೋಯಲ್‌, "ನಾನು ಈ ತೀರ್ಮಾನವನ್ನು ಗೌರವಯುತವಾಗಿ ವಿರೋಧಿಸುತ್ತಿದ್ದೇನೆ," ಎಂದು ಹೇಳಿ ಬಿಟ್ಟರು.

ಮತ್ತು, “2017ರ ಮಾರ್ಚ್‌ನಲ್ಲೇ ನನ್ನ ಅಭಿಪ್ರಾಯವನ್ನು ಕೇಳಲಾಗಿತ್ತು, ಈ ಸಂದರ್ಭದಲ್ಲಿ ನಾನು ನ್ಯಾಯಮೂರ್ತಿ ಕಾಂತ್‌ ಖರೀದಿಸಿದ ಆಸ್ತಿಗಳ ಸ್ವತಂತ್ರ ಮೌಲ್ಯಮಾಪನ ಮಾಡುವಂತೆ ನನ್ನ ಅಭಿಪ್ರಾಯ ತಿಳಿಸಿದ್ದೆ. ಭ್ರಷ್ಟಾಚಾರ ಮತ್ತು ಜಾತೀಯತೆ ಬಗೆಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ನನ್ನ ಅಭಿಪ್ರಾಯದಲ್ಲಿ, ಈ ಪ್ರಕರಣದ ಬಗ್ಗೆ ಆಳವಾದ ತನಿಖೆ ನಡೆಸುವವರೆಗೆ ನ್ಯಾ. ಸೂರ್ಯಕಾಂತ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳಲು ಅರ್ಹರಲ್ಲ," ಎಂದಿದ್ದರು.

ಆದರೆ ಇವೆಲ್ಲದರ ನಡುವೆ ಕಾಂತ್‌ ಹೆಸರನ್ನು ಕೊಲಿಜಿಯಂ ಕೇಂದ್ರಕ್ಕೆ ಕಳುಹಿಸಿಕೊಟ್ಟಿತು. ಅಪರೂಪದ ಬೆಳವಣಿಗೆಯಲ್ಲಿ ಶಿಫಾರಸ್ಸುಗೊಂಡ 9 ತಿಂಗಳ ನಂತರ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಕಾಂತ್‌ರನ್ನು ಹಿಮಾಚಲ ಪ್ರದೇಶ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳಿಸಿತು.

ಈ 9 ತಿಂಗಳಲ್ಲಿ ಏನು ನಡೆಯಿತು ಎಂಬುದು ನಿಗೂಢವಾಗಿಯೇ ಇದೆ. ಕೊಲಿಜಿಯಂ ಶಿಫಾರಸ್ಸನ್ನು ಒಪ್ಪಿಕೊಳ್ಳಲು ಕೇಂದ್ರ ಸರಕಾರ ತಡ ಮಾಡಿದ್ದೇಕೆ? ಯಾವುದಾದರೂ ಆರೋಪಗಳಿದ್ದರೆ ಅವುಗಳನ್ನು ಹೇಗೆ ನಿವಾರಿಸಲಾಯಿತು ಎಂಬುದರ ಬಗ್ಗೆ ವಿವರಗಳು ಲಭ್ಯವಿಲ್ಲ.

ಇದೀಗ ನ್ಯಾ. ಕಾಂತ್‌ರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಳಿಸಲು ಶಿಫಾರಸ್ಸು ಮಾಡುವ ಸಾಧ್ಯತೆಗಳಿವೆ ಎಂದು ಇಬ್ಬರು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹೇಳಿದ್ದಾರೆ. ಒಂದೊಮ್ಮೆ ಇದು ನಿಜವಾದರೆ ಸೂರ್ಯ ಕಾಂತ್‌ 15 ತಿಂಗಳ ಕಾಲ ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶವನ್ನೂ ಪಡೆದುಕೊಳ್ಳಲಿದ್ದಾರೆ. ಇದು ನ್ಯಾಯಾಂಗ ವಲಯದಲ್ಲಿ, ಸಮಾಜದಲ್ಲಿ ಆತಂಕ ಮೂಡಿಸಿದೆ.

ಚಿತ್ರ ಕೃಪೆ: ಅಮರ್‌ ಉಜಾಲಾ

ಕೃಪೆ: ದಿ ಕ್ಯಾರವಾನ್