samachara
www.samachara.com
ಬಹಿರಂಗ ಪತ್ರ, ಜನ ಬೆಂಬಲ & ‘ನಗರ ನಕ್ಸಲ್‌’ ಆನಂದ್‌ ತೇಲ್ತುಂಬ್ಡೆ ಬಂಧನ
COVER STORY

ಬಹಿರಂಗ ಪತ್ರ, ಜನ ಬೆಂಬಲ & ‘ನಗರ ನಕ್ಸಲ್‌’ ಆನಂದ್‌ ತೇಲ್ತುಂಬ್ಡೆ ಬಂಧನ

ಅತ್ತ ಪುಣೆ ಪೊಲೀಸರು ಶನಿವಾರ ಬೆಳಗಿನ ಜಾವ ಆನಂದ್ ತೇಲ್ತುಂಬ್ಡೆ ಅವರನ್ನು ಬಂಧಿಸಿದ್ದಾರೆ. ಈ ಬಂಧನ ವಿರೋಧಿಸಿ ಪ್ರಗತಿಪರರು, ಹೋರಾಟಗಾರರು ಈಗ ಬೀದಿಗಿಳಿಯುತ್ತಿದ್ದಾರೆ.

Team Samachara

ಎಂಜಿನಿಯರ್‌, ಪ್ರೊಫೆಸರ್‌, ದಲಿತ ಸಂಶೋಧಕ, ಸಾಮಾಜಿಕ ಕಾರ್ಯಕರ್ತ, ಲೇಖಕ - ಹೀಗೆ ಹಲವು ಆಯಾಮಗಳಲ್ಲಿ ಗುರುತಿಸಿಕೊಂಡಿದ್ದ ಆನಂದ್‌ ತೇಲ್ತುಂಬ್ಡೆ ಅವರನ್ನು ಕೊನೆಗೂ ಪುಣೆ ಪೊಲೀಸರು ‘ನಗರ ನಕ್ಸಲ್ ಹಾಗೂ ಮೋದಿ ಹತ್ಯೆ ಸಂಚಿನ ಆರೋಪ’ದ ಮೇಲೆ ಬಂಧಿಸಿದ್ದಾರೆ. ಹೋರಾಟಗಾರರ ಬೆಂಬಲ ಹಾಗೂ ಕಾನೂನಿನ ನೆರವಿನಿಂದ ಬಂಧನದಿಂದ ಪಾರಾಗುವ ಅವರ ನಿರೀಕ್ಷೆ ಕೊನೆಗೂ ಹುಸಿಯಾಗಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಪಡಿಸಲು ಸುಪ್ರೀಂಕೋರ್ಟ್‌ ಹಿಂದೇಟು ಹಾಕಿದ ಬಳಿಕ ಜನವರಿ 16ರಂದು ಸಾರ್ವಜನಿಕ ಬೆಂಬಲ ಕೋರಿ ಬಹಿರಂಗ ಪತ್ರವೊಂದನ್ನು ಅವರು ಬರೆದಿದ್ದರು. ಇದರಲ್ಲಿ ಪುಣೆ ಪೊಲೀಸರ ಆರೋಪಗಳನ್ನು ಅಲ್ಲಗಳೆದಿದ್ದ ತೇಲ್ತುಂಬ್ಡೆ 2017ರ ಡಿಸೆಂಬರ್‌ 31ರಂದು ನಡೆದಿದ್ದ ಎಲ್ಗಾರ್‌ ಪರಿಷತ್‌ ಸಭೆಯಲ್ಲಿ ತಾವು ಭಾಗಿಯಾಗಿರಲಿಲ್ಲ ಎಂದು ಹೇಳಿದ್ದರು. ಅಲ್ಲದೆ, ಎಲ್ಗಾರ್‌ ಪರಿಷತ್‌ ಸಮಾಜ ವಿರೋಧಿಯಲ್ಲ ಎಂದಿದ್ದ ಅವರು ಕೋರೆಗಾಂವ್‌ ಹಿಂಸಾಚಾರಕ್ಕೂ ಈ ಸಭೆಗೂ ಯಾವುದೇ ಸಂಬಂಧವಿಲ್ಲ. ಆದರೂ ಪೊಲೀಸರು ಆ ಸಭೆಗೂ ಕೋರೆಗಾಂವ್‌ ಹಿಂಸಾಚಾರಕ್ಕೂ ಸಂಬಂಧ ಕಲ್ಪಿಸಿದ್ದಾರೆ ಎಂದು ದೂರಿದ್ದರು.

Also read: ನಿಲ್ಲದ ‘ನಗರ ನಕ್ಸಲ’ರ ಬಂಧನ ಸರಣಿ; ಮುಂಬೈನಲ್ಲಿ ಮುಂಜಾನೆ 3.30ಕ್ಕೆ ತೇಲ್ತುಂಬ್ದೆ ಬಂಧನ

"ನನಗೆ ನನ್ನ ಬಂಧನ ಎಂದರೆ ಕೇವಲ ಜೈಲುವಾಸವಲ್ಲ. ನನ್ನ ಬಂಧನ ನನ್ನ ಅವಿಭಾಜ್ಯ ಅಂಗವಾಗಿರುವ ನನ್ನ ಲ್ಯಾಪ್‌ಟಾಪ್‌ನಿಂದ ನನ್ನನ್ನು ದೂರ ಮಾಡುತ್ತದೆ. ನನ್ನ ಬದುಕಿನ ಭಾಗವಾಗಿರುವ ನನ್ನ ಗ್ರಂಥಾಲಯದಿಂದ ನನ್ನನ್ನು ದೂರ ಮಾಡುತ್ತದೆ. ನನ್ನ ವಿದ್ಯಾರ್ಥಿಗಳಿಂದ, ನನ್ನ ಸಂಶೋಧನೆಗಳಿಂದ ನನ್ನನ್ನು ದೂರ ಮಾಡುತ್ತದೆ"

"ನನ್ನ ಬಂಧನ ನನ್ನ ಗೆಳೆಯರು, ನನ್ನ ಕುಟುಂಬ, ಅಂಬೇಡ್ಕರ್‌ ಅವರ ಮೊಮ್ಮಗಳಾಗಿರುವ ನನ್ನ ಹೆಂಡತಿ ಹಾಗೂ ನನ್ನ ಮಕ್ಕಳಿಂದ ನನ್ನನ್ನು ದೂರ ಮಾಡುತ್ತದೆ. ಕಳೆದ ವರ್ಷದ ಆಗಸ್ಟ್‌ ತಿಂಗಳಿಂದ ನನ್ನ ಸುತ್ತ ನಡೆಯುತ್ತಿರುವ ಬೆಳವಣಿಗೆಗಳಿಂದ ನನ್ನ ಮಕ್ಕಳು ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದಾರೆ. "

“ಅತ್ಯಂತ ಬಡ ಕುಟುಂಬದಿಂದ ಬಂದ ನಾನು ದೇಶದ ಉತ್ತಮ ವಿದ್ಯಾಸಂಸ್ಥೆಗಳಲ್ಲಿ ಕಲಿತು ಈ ಮಟ್ಟಕ್ಕೆ ಬಂದಿದ್ದೇನೆ. ನಾನು ನನ್ನ ಸುತ್ತಮುತ್ತಲಿನ ಸಾಮಾಜಿಕ ಪಿಡುಗುಗಳನ್ನು ನಿರ್ಲಕ್ಷ್ಯ ಮಾಡಿದ್ದರೆ ನಾನು ಕೂಡಾ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ನಾನು ಆ ಜೀವನವನ್ನು ಆಯ್ಕೆ ಮಾಡಿಕೊಳ್ಳಲಿಲ್ಲ.”

“ಸದ್ಯ ನನ್ನ ವಿರುದ್ಧ ಪ್ರಕರಣ ವಿಷಮ ಪರಿಸ್ಥಿತಿಗೆ ಬಂದಿದೆ. ಯಾವುದೇ ಕ್ಷಣದಲ್ಲೂ ನನ್ನನ್ನು ಬಂಧಿಸಬಹುದು. ನನ್ನೊಂದಿಗಿನ ಇತರೆ 9 ಮಂದಿ ಸಹ ಆರೋಪಿತರನ್ನು ಈಗಾಗಲೇ ಜೈಲಿನಲ್ಲಿಡಲಾಗಿದೆ. ನನ್ನನ್ನು ಬಿಟ್ಟರೆ ನಿಮ್ಮ ಸಹಾಯ ಕೇಳಲು ಅವರಿಗೆ ಬೇರೆ ಯಾರೂ ಇಲ್ಲ. ಈಗ ನನಗೆ, ನನ್ನ ಕುಟುಂಬಕ್ಕೆ ಹಾಗೂ ಈ ಪ್ರಕರಣದಲ್ಲಿ ಜೈಲು ಸೇರಿರುವ ಎಲ್ಲರಿಗೆ ನಿಮ್ಮ ಬೆಂಬಲ ಬೇಕಿದೆ. ನಿಮ್ಮ ಒಗ್ಗಟ್ಟಿನ ಬೆಂಬಲದಿಂದ ದೇಶದಲ್ಲಿನ ಫ್ಯಾಸಿಸ್ಟ್ ಆಳ್ವಿಕೆಗೆ ವಿರೋಧ ತೋರಬೇಕಿದೆ. ತಮ್ಮನ್ನು ವಿರೋಧಿಸುವ ಜನ ಭಾರತದಲ್ಲಿ ಇದ್ದಾರೆ ಎಂಬುದನ್ನು ಅವರಿಗೆ ಕಾಣಿಸಬೇಕಿದೆ" ಎಂದು ಮನವಿ ಮಾಡಿದ್ದರು.

ಜನವರಿ 16ರಂದು ತೇಲ್ತುಂಬ್ಡೆ ಮನವಿ ಪತ್ರ ಬರೆದಿದ್ದರೂ ದೊಡ್ಡ ಮಟ್ಟದ ಜನಬೆಂಬಲ ಅವರ ಪತ್ರಕ್ಕೆ ವ್ಯಕ್ತವಾಗಿರಲಿಲ್ಲ. ಜನವರಿ 22ರಂದು ಸಾಮಾಜಿಕ ಜಾಲತಾಣಗಳಲ್ಲಿ #StandWithAnand ಹ್ಯಾಷ್‌ಟ್ಯಾಗ್‌ ಜತೆಗೆ ತೇಲ್ತುಂಬ್ಡೆ ಅವರಿಗೆ ಬೆಂಬಲ ಸೂಚಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರ ಪರವಾಗಿ ನಿಂತಿದ್ದು ಬಿಟ್ಟರೆ ಹೋರಾಟಗಾರರು ತೇಲ್ತುಂಬ್ಡೆ ಪರವಾಗಿ ಬೀದಿಗಿಳಿದಿರಲಿಲ್ಲ.

ತೇಲ್ತುಂಬ್ಡೆ ಬಂಧನದ ಬಳಿಕ ಅವರನ್ನು ಬೆಂಬಲಿಸಿ ಹಲವು ಸಂಘಟನೆಗಳು ಶನಿವಾರ ಬೀದಿಗಿಳಿಯುತ್ತಿವೆ. ಬೆಂಗಳೂರಿನ ಪುರಭವನದ ಎದುರು ಶನಿವಾರ ಸಂಜೆ ಪ್ರತಿಭಟನೆ ನಡೆಸಲು ಪ್ರಗತಿಪರ ಸಂಘಟನೆಗಳು ಕರೆ ಕೊಟ್ಟಿವೆ.

Also read: ಯಾರು ಈ ‘ನಗರ ನಕ್ಸಲರು’; ಏನಿದು ಸರಕಾರಿ ಪ್ರಾಯೋಜಿತ ‘ಸಂಚಿ’ನ ನಾಟಕ?

ತೇಲ್ತುಂಬ್ಡೆ ಮನವಿಗೆ ಸ್ಪಂದಿಸಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟಗಾರರು ತೇಲ್ತುಂಬ್ಡೆ ಅವರನ್ನು ಬಂಧಿಸದಂತೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದರು. ಅಲ್ಲದೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಈ ವಿಷಯದಲ್ಲಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.

ಜನವರಿ 14ರಂದು ತೇಲ್ತುಂಬ್ಡೆ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತ್ತು. ಆದರೆ, ವಿಚಾರಣಾ ನ್ಯಾಯಾಲಯದಿಂದ ಜಾಮೀನು ಪಡೆಯಲು ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು. ವಿಚಾರಣಾ ನ್ಯಾಯಾಲಯ ತೇಲ್ತುಂಬ್ಡೆ ಅವರ ಜಾಮೀನು ಅರ್ಜಿ ತಿರಸ್ಕೃರಿಸಿದ್ದರಿಂದ ಅವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಆದರೆ, ನಾಲ್ಕು ವಾರಗಳ ಗಡುವಿಗೂ ಮೊದಲೇ ತೇಲ್ತುಂಬ್ಡೆ ಅವರನ್ನು ಬಂಧಿಸಲಾಗಿದ್ದು, ಇದು ಸುಪ್ರೀಂಕೋರ್ಟ್‌ ಆದೇಶದ ಉಲ್ಲಂಘನೆ ಎಂದು ಕೆಲವರು ವಾದಿಸಿದ್ದಾರೆ.

ಬಂಧನಕ್ಕೆ ಕಾರಣವಾದ ‘ಕಾಮ್ರೇಡ್‌ ಆನಂದ್‌’:

ಅಷ್ಟಕ್ಕೂ ಭೀಮಾ ಕೊರೆಗಾಂವ್‌ನಾಚೆಗೆ ಆನಂದ್ ತೇಲ್ತುಂಬ್ಡೆ ಬಂಧನಕ್ಕೆ ಕಾರಣವಾಗಿದ್ದು ‘ಕಾಮ್ರೇಡ್‌ ಆನಂದ್‌’ ಎಂಬ ಹೆಸರು. ಅವರ ಸಹೋದರ ಮಿಲಿಂದ್‌ ತೇಲ್ತುಂಬ್ಡೆ ಒಂದು ಕಾಲದಲ್ಲಿ ಮಹಾರಾಷ್ಟ್ರ ಸಿಪಿಐ (ಮಾವೋವಾದಿ) ಗುಂಪಿನ ಮುಖ್ಯಸ್ಥರಾಗಿದ್ದವರು. ಸದ್ಯ ಭೂಗತರಾಗಿರುವ ಅವರ ತಲೆಗೆ ಸರಕಾರ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಇವರಿಗೆ ಸಂಬಂಧಿಸಿದ ತನಿಖೆ ವೇಳೆ ಕೆಲವು ಪತ್ರಗಳಲ್ಲಿ ‘ಕಾಮ್ರೇಡ್‌ ಆನಂದ್‌’ ಎಂಬ ಹೆಸರು ಕಂಡು ಬಂದಿದೆ. ಹೀಗಾಗಿ ಆನಂದ್‌ ತೇಲ್ತುಂಬ್ಡೆಯೂ ನಕ್ಸಲ್‌ ಸಿಪಿಐ-ಎಂನ ಸಕ್ರಿಯ ಸದಸ್ಯರು ಎಂಬುದು ಪೊಲೀಸರ ವಾದ.

ಈ ಕಾರಣಕ್ಕೆ ‘ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (ಯುಎಪಿಎ) - 1967’ ಅಡಿಯಲ್ಲಿ ಆನಂದ್‌ ತೇಲ್ತುಂಬ್ಡೆಯವರನ್ನು ಶುಕ್ರವಾರ ಬೆಳಿಗ್ಗೆ ಕೊಚ್ಚಿಯಿಂದ ಬಂದಿಳಿಯುತ್ತಿದ್ದಂತೆ ಬಂಧಿಸಲಾಗಿದೆ.

ಯಾರು ಈ ಆನಂದ್‌ ತೇಲ್ತುಂಬ್ಡೆ?:

ಭಾರತದ ದಲಿತರ ಸ್ಥಿತಿ, ಅಸ್ಪೃಶ್ಯತೆ, ದಲಿತರ ಮೇಲಿನ ಶೋಷಣೆ ಬಗ್ಗೆ ಹಲವು ಪುಸ್ತಕಗಳನ್ನು ಬರೆದಿರುವ ತೇಲ್ತುಂಬ್ಡೆ ದಲಿತ ಹೋರಾಟಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡವರು. ಇಂಗ್ಲಿಷ್‌ ಹಾಗೂ ಮರಾಠಿಯಲ್ಲಿ ಬರೆಯುವ ತೇಲ್ತುಂಬ್ಡೆ ಅವರ ಪುಸ್ತಕಗಳು ಕನ್ನಡ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.

ಮಹಾರಾಷ್ಟ್ರದ ರಜೂರ್‌ನಲ್ಲಿ ಹುಟ್ಟಿದ ತೇಲ್ತುಂಬ್ಡೆ ನಾಗಪುರದ ವಿಶ್ವೇಶ್ವರಯ್ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪಡೆದರು. ಎಂಜಿನಿಯರಿಂಗ್ ಓದಿದ ಬಳಿಕ ಕೆಲ ಕಾಲ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ ತೇಲ್ತುಂಬ್ಡೆ ಬಳಿಕ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸೇರಿದರು. ನಂತರ ಮುಂಬೈ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪಡೆದರು.

‘ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌’ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ, ಪೆಟ್ರೊನೆಟ್‌ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ್ದ ಅವರು ಕೆಲ ಕಾಲ ಐಐಟಿ ಖರಗ್‌ಪುರದಲ್ಲಿ ಅಧ್ಯಾಪಕರಾಗಿದ್ದರು. ಸದ್ಯ ಗೋವಾದ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪ್ರಾಧ್ಯಾಪಕರಾಗಿದ್ದರು.

ಭಾರತದಲ್ಲಿ ದಲಿತ ಹೋರಾಟ, ಅಸ್ಪೃಶ್ಯತೆ ವಿರುದ್ಧದ ಚಳವಳಿಗಳಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಆನಂದ್‌ ತೇಲ್ತುಂಬ್ಡೆ. ಸುಮಾರು 22 ಪುಸ್ತಕಗಳನ್ನು ಬರೆದಿರುವ ಅವರು 'ಖೈರ್ಲಾಂಜಿ' ಪುಸ್ತಕದ ಮೂಲಕ ದಲಿತ ಭಾರತದ ಕಥನವನ್ನು ಕಟ್ಟಿಕೊಟ್ಟಿದ್ದರು. ಇಂಥ ತೇಲ್ತುಂಬ್ಡೆ 'ನಗರ ನಕ್ಸಲ್‌' ಆರೋಪ ಹೊತ್ತು ಈಗ ಈ ಪ್ರಕರಣದ ಹತ್ತನೆಯವರಾಗಿ ಜೈಲು ಸೇರಿದ್ದಾರೆ.