samachara
www.samachara.com
ಚುನಾವಣೆ ಹೊಸ್ತಿಲಲ್ಲಿ ಓಲೈಕೆಗಿಳಿದ ಕೇಂದ್ರ; ಜನಪ್ರಿಯ ಘೋಷಣೆಗಳ ಪಿಯೂಷ್ ಬಜೆಟ್!
COVER STORY

ಚುನಾವಣೆ ಹೊಸ್ತಿಲಲ್ಲಿ ಓಲೈಕೆಗಿಳಿದ ಕೇಂದ್ರ; ಜನಪ್ರಿಯ ಘೋಷಣೆಗಳ ಪಿಯೂಷ್ ಬಜೆಟ್!

ರೈತಾಪಿ ವರ್ಗ, ಕಾರ್ಮಿಕರು, ಮಧ್ಯಮ ವರ್ಗದವರು, ಹಿರಿಯ ನಾಗರಿಕರು, ವ್ಯಾಪಾರಸ್ಥರು ಹಾಗೂ ಗ್ರಾಮೀಣ ಜನರನ್ನು ಓಲೈಸುವ ಸಮತೋಲನದ ಬಜೆಟ್ ಮಂಡಿಸಿದ್ದಾರೆ ಪಿಯೂಷ್ ಗೋಯಲ್.

Team Samachara

ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಲು ಸಣ್ಣ ಮತ್ತು ಅತಿಸಣ್ಣ ರೈತರ ಖಾತೆಗೆ ವಾರ್ಷಿಕ 6000 ರೂಪಾಯಿ ಜಮೆ, ಮಧ್ಯಮ ವರ್ಗ ಹಾಗೂ ತೆರಿಗೆ ಪಾವತಿದಾರರ ಸಂತೃಪ್ತಿಗೊಳಿಸಲು ಆದಾಯ ತೆರಿಗೆ ಮಿತಿ 5 ಲಕ್ಷ ರೂಪಾಯಿಗೆ ಏರಿಕೆ, ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನ ಪಿಂಚಣಿ ಯೋಜನೆ ಜಾರಿ, ಸಿನಿಮಾ ಟಿಕೆಟ್,ಗೃಹಬಳಕೆ ವಸ್ತುಗಳು, ತಂಬಾಕು ಉತ್ಪನ್ನಗಳ ಬೆಲೆ ಹೆಚ್ಚಿಸಿ ಟಿವಿ, ಫ್ರಿಡ್ಜ್, ವಾಷಿಂಗ್ ಮಿಷನ್‍ಗಳ ದರ ಇಳಿಕೆ - ಹೀಗೆ ದೇಶದ ಎಲ್ಲಾ ವರ್ಗದವರನ್ನು ಸಂತೃಪ್ತಿಪಡಿಸುವ ಲೋಕಸಭಾ ಚುನವಣೆಯ ದೃಷ್ಟಿಕೋನದ ಬಜೆಟ್ ಇಂದು ಮಂಡನೆಯಾಗಿದೆ.

ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರದ ಈ ಅವಧಿಯ ಕೊನೆಯ ಹಾಗೂ 2019-20ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಿದ ಹಣಕಾಸು ಖಾತೆ ಸಚಿವ ಪಿಯೂಷ್‌ ಗೋಯಲ್, ಹೆಚ್ಚು ಹೊಸ ಯೋಜನೆಗಳನ್ನು ಘೋಷಣೆ ಮಾಡದೆ ರೈತಾಪಿ ವರ್ಗ, ಕಾರ್ಮಿಕರು, ಮಧ್ಯಮ ವರ್ಗದವರು, ಹಿರಿಯ ನಾಗರಿಕರು, ವ್ಯಾಪಾರಸ್ಥರು ಹಾಗೂ ಗ್ರಾಮೀಣ ಭಾಗದವರನ್ನು ಓಲೈಕೆ ಮಾಡುವ ಸಮತೋಲನದ ಬಜೆಟ್ ಮಂಡಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೋಟು ರದ್ಧತಿಯ ಪರಿಣಾಮದಿಂದ ಉಂಟಾಗಿರುವ ನಿರುದ್ಯೋಗ ಹೆಚ್ಚಳ, ಹಣದುಬ್ಬರ, ಬೆಲೆ ಏರಿಕೆ ನಿಯಂತ್ರಣ, ತೆರಿಗೆ ಸಂಗ್ರಹಕ್ಕೆ ಒತ್ತು ಕೊಟ್ಟು ಎಲ್ಲರನ್ನು ಸಂತೃಪ್ತಿಗೊಳಿಸುವ ಕಸರತ್ತಿಗೆ ಕೈ ಹಾಕಿದೆ ಕೇಂದ್ರ ಸರಕಾರ.

ಈ ಬಾರಿಯ ಬಜೆಟ್‍ನಲ್ಲಿ ಪ್ರಮುಖವಾಗಿ ದೇಶದ ಬೆನ್ನೆಲುಬಾದ ರೈತರನ್ನು ಓಲೈಸಿಕೊಳ್ಳಲು ನರೇಂದ್ರ ಮೋದಿ ಸರಕಾರ ಮುಂದಾಗಿದೆ. 2 ಹೆಕ್ಟೇರ್ ಅಥವಾ 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ವಾರ್ಷಿಕ 6000 ರೂಪಾಯಿ ಜಮೆ ಮಾಡುವ 'ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ'ಯನ್ನು ಘೋಷಿಸಲಾಗಿದೆ.

ಈ ನೂತನ ಯೋಜನೆಯು 2018ರ ಡಿಸೆಂಬರ್ 1ರಿಂದಲೇ ಪೂರ್ವಾನ್ವಯವಾಗಲಿದ್ದು, ಇದರಿಂದ ದೇಶದ 12 ಕೋಟಿ ರೈತರು ಲಾಭ ಪಡೆಯಲಿದ್ದಾರೆ. ಈ ಯೋಜನೆಗೆ ಪ್ರಸಕ್ತ ವರ್ಷ 75 ಸಾವಿರ ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಇನ್ನು ಮುಂದೆ ಈ ಯೋಜನೆಯ ಪ್ರಕಾರ ಓರ್ವ ರೈತ 5 ಎಕರೆಗಿಂತ ಕಡಿಮೆ ಜಮೀನು ಹೊಂದಿದ್ದರೆ, ವಾರ್ಷಿಕ 3 ಕಂತುಗಳಲ್ಲಿ 6000 ರೂಪಾಯಿಗಳನ್ನು ಅವರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಇಲ್ಲವೇ ಮಾಸಿಕವಾಗಿ 500 ರೂಪಾಯಿಗಳನ್ನು ಪಡೆಯಬಹುದು.

ಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರ ಕಲ್ಯಾಣಕ್ಕಾಗಿ 'ಪ್ರಧಾನಮಂತ್ರಿ ಶ್ರಮ್‍ಯೋಗಿ ಮಾನ್‍ಧನ್' ಎಂಬ ವಿನೂತನ ಯೋಜನೆಯನ್ನು ಸಹ ಗೋಯಲ್ ಪ್ರಕಟಿಸಿದರು. ಈ ಯೋಜನೆಯ ಪ್ರಕಾರ ಇನ್ನು ಮುಂದೆ ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯಬಹುದು. ಯೋಜನೆಗೆ ಒಳಪಡುವವರು 100 ರೂಪಾಯಿ ಶುಲ್ಕ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದ್ದು, ಸುಮಾರು 10 ಕೋಟಿ ಕಾರ್ಮಿಕರು ಇದರ ಲಾಭವನ್ನು ಪಡೆಯಲಿದ್ದಾರೆ. 60 ವರ್ಷಗಳ ಮೇಲ್ಪಟ್ಟ ನಿವೃತ್ತ ಅಸಂಘಟಿತ ಕಾರ್ಮಿಕರನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಚುನಾವಣೆ ಹೊಸ್ತಿಲಲ್ಲಿ ಓಲೈಕೆಗಿಳಿದ ಕೇಂದ್ರ; ಜನಪ್ರಿಯ ಘೋಷಣೆಗಳ ಪಿಯೂಷ್ ಬಜೆಟ್!

ರೈತರು ಹಾಗೂ ಕಾರ್ಮಿಕರ ಜೊತೆಗೆ ಮಧ್ಯಮ ವರ್ಗದವರ ಮನ ಗೆಲ್ಲಲು ಮುಂದಾಗಿರುವ ಕೇಂದ್ರ ಸರ್ಕಾರ, ಆದಾಯ ತೆರಿಗೆ ಮಿತಿಯಲ್ಲಿ ವಿನಾಯ್ತಿ ಘೋಷಿಸುವ ಮೂಲಕ ಅವರನ್ನು ಸಹ ಸಂತೃಪ್ತಿಪಡಿಸುವ ಕಸರತ್ತಿಗೆ ಕೈ ಹಾಕಿದೆ. 5 ಲಕ್ಷದವರೆಗೆ ವೈಯಕ್ತಿಕ ತೆರಿಗೆ ಮಿತಿಯನ್ನು ಏರಿಕೆ ಮಾಡಲಾಗಿದೆ. 3 ಕೋಟಿ ತೆರಿಗೆ ಪಾವತಿದಾರರು ಇದರ ಲಾಭ ಪಡೆಯಲಿದ್ದಾರೆ.

ಸಂಬಳ ಪಡೆಯುವ ಉದ್ಯೋಗಿಯ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು 40 ಸಾವಿರದಿಂದ 50 ಸಾವಿರ ರೂಪಾಯಿಗೆ ಏರಿಸಲಾಗಿದೆ. ಅಲ್ಲದೆ, ಬಡ್ಡಿ ಆದಾಯ ತೆರಿಗೆ ಮಿತಿಯನ್ನು 10 ಸಾವಿರದಿಂದ 40 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಗೃಹ ಸಾಲಕ್ಕೆ 2 ಲಕ್ಷದವರೆಗೂ ತೆರಿಗೆ ವಿನಾಯಿತಿ ನೀಡಲಾಗಿದೆ. ಶೈಕ್ಷಣಿಕ ಸಾಲ ಪಡೆದಿದ್ದರೂ ತೆರಿಗೆ ವಿನಾಯಿತಿ ಪಡೆಯಬಹುದು. ಈ ಮೂಲಕ ಮಧ್ಯಂತರ ಬಜೆಟ್‍ನಲ್ಲಿ ಕೇಂದ್ರದ ಮೋದಿ ಸರಕಾರ ಮಧ್ಯಮವರ್ಗದ ತೆರಿಗೆದಾರರಿಗೆ ಬಂಪರ್ ಕೊಡುಗೆ ನೀಡಿದೆ.

ಕಾಮಧೇನು ಆಯೋಗ ರಚಿಸಿರುವ ಕೇಂದ್ರ ಸರಕಾರ ದೇಶದಲ್ಲಿ ಗೋವುಗಳ ಸಂರಕ್ಷಣೆಗೆ ಮತ್ತು ತಳಿಗಳ ಅಭಿವೃದ್ಧಿಗೆ ವಿಶೇಷ ಕ್ರಮ ಕೈಗೊಂಡಿದ್ದು, ರಾಷ್ಟ್ರೀಯ ಗೋ ಯೋಜನೆಗೆ ನೀಡುವ ಅನುದಾನದಲ್ಲಿ ಹೆಚ್ಚಳ ಮಾಡಿದೆ. ಅಲ್ಲದೆ ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪಿಸಿ, ಮೀನುಗಾರರಿಗೆ ನೆರವಾಗಲು ಯೋಜನೆ ರೂಪಿಸಲಾಗಿದೆ.

2019-20ರ ಮೋದಿ ಸರಕಾರದ ಕೊನೆಯ ಬಜೆಟ್‍ನಲ್ಲಿ ಗ್ರಾಚ್ಯೂಟಿ ತೆರಿಗೆ ಮಿತಿಯಲ್ಲಿ ಭಾರಿ ಏರಿಕೆ ಮಾಡಲಾಗಿದೆ. ಇಲ್ಲಿಯವರೆಗೂ 10 ಲಕ್ಷ ರೂಪಾಯಿಯಷ್ಟಿದ್ದ ಗ್ರಾಚ್ಯೂಟಿ ತೆರಿಗೆ ಮಿತಿಯನ್ನು 30 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದ ಸಾಲಿನಲ್ಲಿ 10 ಲಕ್ಷದೊಳಗಿನ ಗ್ರಾಚ್ಯೂಟಿಗೆ ತೆರಿಗೆ ವಿನಾಯಿತಿ ಇತ್ತು. ಈಗ 30 ಲಕ್ಷದೊಳಗಿನ ಗ್ರಾಚ್ಯೂಟಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹೊಸ ತೆರಿಗೆ ಮಿತಿಯನ್ವಯ 30 ಲಕ್ಷ ರೂ.ಗೆ ಗ್ರಾಚ್ಯೂಟಿ ಪಡೆಯುವವರು ಯಾವುದೇ ತೆರಿಗೆಯನ್ನು ಕಟ್ಟುವಂತಿಲ್ಲ. 30 ಲಕ್ಷ ರೂಪಾಯಿಗಿಂತ ಹೆಚ್ಚು ಗ್ರಾಚ್ಯೂಟಿ ಪಡೆದವರು ಮಾತ್ರ ತೆರಿಗೆ ಕಟ್ಟಬೇಕು.

ಚುನಾವಣೆ ಹೊಸ್ತಿಲಲ್ಲಿ ಓಲೈಕೆಗಿಳಿದ ಕೇಂದ್ರ; ಜನಪ್ರಿಯ ಘೋಷಣೆಗಳ ಪಿಯೂಷ್ ಬಜೆಟ್!

ಈ ಬಾರಿ ಬಜೆಟ್‍ನಲ್ಲಿ ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಗೆ 3 ಲಕ್ಷ ಕೋಟಿ ಅನುದಾನವನ್ನು ನೀಡಿದೆ. ಆಯುಷ್ಮಾನ್ ಭಾರತ್ ಯೋಜನೆ ಮೂಲಕ 50 ಕೋಟಿ ಜನರಿಗೆ ಆರೋಗ್ಯ ಸೇವೆ ನೆರವು ಒದಗಿಸಲಾಗಿದೆ. ಈ ಯೋಜನೆ ಮೂಲಕ ಬಡವರ 3000 ಕೋಟಿ ರೂಪಾಯಿ ವೈದ್ಯಕೀಯ ವೆಚ್ಚ ಉಳಿತಾಯವಾಗಿದೆ. ಜನೌಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜನರಿಗೆ ಔಷಧಿ ಒದಗಿಸಲಾಗುತ್ತಿದೆ ಎಂದು ಗೋಯಲ್ ತಿಳಿಸಿದರು.

ಕಳೆದ 5 ವರ್ಷಗಳಲ್ಲಿ ಶೇ.98ರಷ್ಟು ಗ್ರಾಮೀಣ ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ. 5.45 ಲಕ್ಷ ಗ್ರಾಮಗಳಲ್ಲಿ ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗಿದ್ದು ಬಯಲು ಶೌಚ ಮುಕ್ತಗೊಳಿಸಲಾಗಿದೆ. ಶೇ.98 ಗ್ರಾಮಗಳಲ್ಲಿ ನೈರ್ಮಲ್ಯ ಸಾಧಿಸಲಾಗಿದೆ. ಒಂದು ಲಕ್ಷ ಹಳ್ಳಿಗಳನ್ನು ಡಿಜಿಟಲ್ ಗ್ರಾಮಗಳಾಗಿ ಘೋಷಿಸಲು ಸರಕಾರ ಮುಂದಾಗಿದ್ದು, ಗ್ರಾಮೀಣ ಸೊಗಡಿಗೆ ಧಕ್ಕೆಯಾಗಂದತೆ ಹಳ್ಳಿಗಳಲ್ಲಿ ನಗರಕ್ಕೆ ಸರಿಸಮಾನವಾದ ಮೂಲಸೌಕರ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ.

ಕಳೆದ 5 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಮನೆ ನಿರ್ಮಾಣ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 10 ಲಕ್ಷ ಜನರಿಗೆ ಆಯುಷ್ಮಾನ್ ಯೋಜನೆ ಅಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಲ್ಲಿದ್ದಲು, ತರಂಗಾಂತರಗಳ ಹಂಚಿಕೆ ಸಮರ್ಪಕ ನಿರ್ವಹಣೆ ಮಾಡಲಾಗಿದೆ. ನಮ್ಮ ಸರಕಾರ ಆರಂಭಿಸಿದ್ದ ಎಲ್ಲ ಯೋಜನೆಗಳೂ ಪೂರ್ಣಗೊಂಡಿವೆ ಎಂದು ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿ ಓಲೈಕೆಗಿಳಿದ ಕೇಂದ್ರ; ಜನಪ್ರಿಯ ಘೋಷಣೆಗಳ ಪಿಯೂಷ್ ಬಜೆಟ್!

2014ರಲ್ಲಿ 1.5 ಕೋಟಿ ಕುಟುಂಬಗಳಿಗೆ ವಿದ್ಯುತ್ ವ್ಯವಸ್ಥೆ ಇರಲಿಲ್ಲ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸೌಭಾಗ್ಯ ಯೋಜನೆಯಡಿ ಎಲ್ಲರಿಗೂ ಉಚಿತ ವಿದ್ಯುತ್ ನೀಡಲಾಗಿದೆ. 143 ಕೋಟಿ ಎಲ್‍ಇಡಿ ಬಲ್ಬ್ ವಿತರಣೆ ಮಾಡಲಾಗಿದೆ. ಹಸಿವು ಮುಕ್ತ ಸಮಾಜ ನಿರ್ಮಾಣ ನಮ್ಮ ಸರ್ಕಾರದ ಗುರಿಯಾಗಿದ್ದು ಅದರಂತೆ ನಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ನಮ್ಮ ಸರಕಾರದ ಆಡಳಿತದಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ನರೇಗಾ ಯೋಜನೆಗೆ 60 ಸಾವಿರ ಕೋಟಿ ರೂಪಾಯಿ ಮೀಸಲು ಇಡಲಾಗಿದೆ. ಗ್ರಾಮೀಣ ರಸ್ತೆಗಳಿಗಾಗಿ 15 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಹಾಗೇ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ ರೂಪಾಯಿ ಮೀಸಲು ಇಡಲಾಗಿದೆ ಎಂದು ಗೋಯಲ್‌ ಹೇಳಿದ್ದಾರೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣಕ್ಕೆ ಈ ಮಧ್ಯಂತರ ಬಜೆಟ್‌ ಮಂಡಿಸಿದ ಹಂಗಾಮಿ ಹಣಕಾಸು ಸಚಿವ ಪಿಯೂಷ್‌ ಗೋಯಲ್‌ 'ಮಂಡನೆ ಕಾರ್ಯ'ವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದನದಲ್ಲಿ ಪಿಯೂಷ್‌ ಬಜೆಟ್ ಮಂಡನೆಗೆ ಪ್ರಧಾನಿ ಮೋದಿ ಸೇರಿದಂತೆ ಆಡಳಿತ ಪಕ್ಷದ ಸಂಸದರೆಲ್ಲರೂ ಮೇಜು ಕುಟ್ಟಿ ಸಂಭ್ರಮಿಸಿದರೆ, ವಿಪಕ್ಷಗಳ ಸದಸ್ಯರು ಆರಂಭದಲ್ಲಿ ಹಾಗೂ ನಡುನಡುವೆ ಗದ್ದಲ ಎಬ್ಬಿಸಿದ್ದರು.