samachara
www.samachara.com
ಮಲ್ಪೆ ಟು ಮುಂಬೈ ಟು ದುಬೈ; ಭೂಗತ ಪಾತಕಿ ರವಿ ಪೂಜಾರಿ ನಟೋರಿಯಸ್‌ ಜರ್ನಿ
COVER STORY

ಮಲ್ಪೆ ಟು ಮುಂಬೈ ಟು ದುಬೈ; ಭೂಗತ ಪಾತಕಿ ರವಿ ಪೂಜಾರಿ ನಟೋರಿಯಸ್‌ ಜರ್ನಿ

ದಶಕಗಳ ಕಾಲ ಭೂಗತವಾಗಿದ್ದುಕೊಂಡೇ ಮೆರೆದ ರವಿ ಪೂಜಾರಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪೂಜಾರಿಯ ನಟೋರಿಯಸ್‌ ಹಿಸ್ಟರಿ ಇಲ್ಲಿದೆ.

Team Samachara

ಕೊಲೆ, ಸುಲಿಗೆ, ವಸೂಲಿ, ಅಪಹರಣ ಸೇರಿದಂತೆ ನಾನಾ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಒಂದೂವರೆ ದಶಕದಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ರವಿಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೂರ್ವ ಆಫ್ರಿಕಾದ ಸೆನೆಗಲ್‍ನ ಡೆಕಾರ್‌ನಲ್ಲಿ ರವಿ ಪೂಜಾರಿಯನ್ನು ಪ್ರಕರಣವೊಂದರ ಸಂಬಂಧ ವಶಕ್ಕೆ ಪಡೆಯಲಾಗಿದೆ. ಅತ್ತ ರವಿ ಪೂಜಾರಿ ಬಂಧನವಾಗುತ್ತಿದ್ದಂತೆ ಆತನನ್ನು ವಶಕ್ಕೆ ಪಡೆಯಲು ಭಾರತದ ತನಿಖಾ ಸಂಸ್ಥೆಯು ಈಗಾಗಲೇ ಸೆನೆಗಲ್ ಸರ್ಕಾರದ ಜೊತೆ ಮಾತುಕತೆ ನಡೆಸಿದೆ.

ಎರಡು ರಾಷ್ಟ್ರಗಳ ನಡುವೆ ಅಪರಾಧಿಗಳ ಹಸ್ತಾಂತರ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ರವಿಪೂಜಾರಿಯನ್ನು ಯಾವುದೇ ಸಂದರ್ಭದಲ್ಲಿ ಸೆನೆಗಲ್ ನಿಂದ ಭಾರತಕ್ಕೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ರವಿಪೂಜಾರಿಯ ಬಂಧನದಿಂದ ಹಲವಾರು ಪ್ರಕರಣಗಳು ಮತ್ತೆ ಮರುಜನ್ಮ ಪಡೆಯಲು ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

15 ವರ್ಷಗಳಿಂದ ಆರೋಪಿ ರವಿ ಪೂಜಾರಿ ದುಬೈ ಹಾಗೂ ಆಸ್ಟ್ರೇಲಿಯಾದಲ್ಲಿ ತಲೆಮರಿಸಿಕೊಂಡಿದ್ದ. ಭೂಗತವಾಗಿದ್ದುಕೊಂಡೇ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರೆಸಿದ್ದ. ಅಲ್ಲದೆ ರಾಜಕಾರಣಿಗಳು, ಉದ್ಯಮಿಗಳಿಗೆ ಬೆದರಿಕೆ ಹಾಕುವುದೂ ಸೇರಿದಂತೆ ರವಿ ಪೂಜಾರಿ ವಿರುದ್ಧ ಸುಮಾರು 60ಕ್ಕೂ ಅಧಿಕ ಪ್ರಕರಣಗಳಿವೆ. ಈ ಹಿನ್ನೆಲೆ ರವಿ ಪೂಜಾರಿ ಬಂಧನಕ್ಕೆ ಕೇಂದ್ರ ಗುಪ್ತಚರ ಇಲಾಖೆ ರೆಡ್ ಕಾರ್ನರ್‌ ನೋಟಿಸ್ ಜಾರಿ ಮಾಡಿತ್ತು.

ಸಣ್ಣ ಪಾತಕಿಗೆ ದೊಡ್ಡ ಜಾಲದ ನಂಟು:

ಮುಂಬೈನ ಅಂಧೇರಿಯಲ್ಲಿ ಭೂಗತ ಜಗತ್ತಿಗೆ ಕಾಲಿಟ್ಟಿದ್ದ ರವಿ ಪೂಜಾರಿ ಚಿಕ್ಕ ವಯಸ್ಸಿನಲ್ಲೇ ಶಾಲೆ ಬಿಟ್ಟು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ. ರವಿ ಪೂಜಾರಿ, ಬಾಲ ಸಾಲ್ತೆ ಕೊಲೆ ಮಾಡಿ ಚೋಟಾ ರಾಜನ್ ಶಿಷ್ಯನಾಗಿದ್ದ. ರವಿ ಪೂಜಾರಿ 1990ರಲ್ಲಿ ದುಬೈನ ರಿಯಲ್ ಎಸ್ಟೇಟ್ ದಂಧೆಯಲ್ಲಿ ಭಾಗಿಯಾಗಿದ್ದ.

ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ರವಿ ಪೂಜಾರಿ, 2000 ಇಸ್ವಿಯ ಆಸುಪಾಸಿನಲ್ಲಿ ದಾವೂದ್ ಇಬ್ರಾಹಿಂ ತನ್ನನ್ನು ಕೊಲ್ಲಲು ಸುಪಾರಿ ನೀಡಿದ್ದ ಹಿನ್ನೆಲೆಯಲ್ಲಿ ಛೋಟಾ ರಾಜನ್‍ನಿಂದಲೂ ದೂರ ಉಳಿದಿದ್ದ. ರವಿ ಪೂಜಾರಿಯ ಮೊದಲ ಟಾರ್ಗೆಟ್ ಬಾಲಿವುಡ್ ನಟರಾಗಿದ್ದರು. ಬಾಲಿವುಡ್ ನಟಿ ಕರಿಶ್ಮಾ ಕಪೂರ್ ಹಾಗೂ ಆಕೆಯ ಪತಿ ಸಂಜಯ್ ಕಪೂರ್‍ಗೆ ಬೆದರಿಕೆ ಹಾಕಿ 50 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ.

ರವಿ ಪೂಜಾರಿಗೆ ಪದ್ಮಾ ಪೂಜಾರಿ ಎಂಬ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಇತ್ತೀಚೆಗೆ ಪ್ರಕರಣವೊಂದರಲ್ಲಿ ರವಿ ಪೂಜಾರಿ ಮಗನನ್ನು ಬಂಧಿಸಲಾಗಿತ್ತು. ಸದ್ಯ ಆತ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ರಿಮೋಟ್ ರೌಡಿಸಂ ನಡೆಸಿದ ಮೊದಲ ಭೂಗತ ಪಾತಕಿ ಎಂಬ ಕುಖ್ಯಾತಿಯೂ ರವಿ ಪೂಜಾರಿಗಿದೆ. ಇಂಟರ್‍ಪೋಲ್‌ನಿಂದಲೂ ಪೂಜಾರಿ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.

ಮಲ್ಪೆ ಟು ಮುಂಬೈ ಟು ದುಬೈ; ಭೂಗತ ಪಾತಕಿ ರವಿ ಪೂಜಾರಿ ನಟೋರಿಯಸ್‌ ಜರ್ನಿ

ಕರ್ನಾಟಕ, ಮಹಾರಾಷ್ಟ್ರದ ಹಲವೆಡೆ ರವಿ ಪೂಜಾರಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದಷ್ಟೇ ಮುಂಬೈ ಪೊಲೀಸರು ರವಿ ಪೂಜಾರಿ ಗ್ಯಾಂಗ್‍ನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದರು. ಈ ಬಂಧಿತರಲ್ಲಿ ಬೆಂಗಳೂರಿನ ಆಕಾಶ್ ಶೆಟ್ಟಿ ಕೂಡ ಒಬ್ಬ. ಭೂಗತ ಪಾತಕಿಯು ಬಿಲ್ಡರ್‌ ಒಬ್ಬರಿಗೆ ಫೋನ್‌ನಲ್ಲಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ರವಿ ಪೂಜಾರಿಗೆ ನಗರದಲ್ಲಿರುವ ಬಿಲ್ಡರ್‌ಗಳ ಬಗ್ಗೆ ಮಾಹಿತಿ ಕೊಡುತ್ತಿದ್ದುದು ಆಕಾಶ್ ಶೆಟ್ಟಿ ಮತ್ತು ವಿಲಿಯಮ್ ರಾಡ್ರಿಕ್ಸ್. ಇದೇ ಕಾರಣಕ್ಕೆ ಪೊಲೀಸರು ಇವರಿಬ್ಬರನ್ನು ಬಂಧಿಸಿ ಎಂಕೋಕಾ ಕಾಯ್ದೆಯಡಿ ಮೊಕದ್ದಮೆ ಹಾಕಿದ್ದರು.

ಇದೀಗ ರವಿ ಪೂಜಾರಿಯೇ ಬಂಧಿತನಾಗಿದ್ಧಾನೆ. 90ರ ದಶಕದಲ್ಲಿ ಭೂಗತ ಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕೂತೇ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಿಯಂತ್ರಿಸುತ್ತಿದ್ದ ಎನ್ನಲಾಗಿದೆ. ಇದೀಗ, ಆಫ್ರಿಕನ್ ರಾಷ್ಟ್ರದಲ್ಲಿ ಬಂಧಿತನಾಗಿರುವ ರವಿ ಪೂಜಾರಿಯನ್ನು ಭಾರತಕ್ಕೆ ಕರೆತರುವ ಸಾಧ್ಯತೆ ಇದೆ.

ಮಲ್ಪೆ ಮೂಲದ ಪೂಜಾರಿ:

ಉಡುಪಿಯ ಜಿಲ್ಲೆ ಮಲ್ಪೆಯವನಾದ ರವಿ ಪೂಜಾರಿ ಪಾತಕ ಲೋಕಕ್ಕೆ ಕಾಲಿಟ್ಟಿದ್ದರ ಹಿಂದೆ ರೋಚಕ ಕಥೆ ಇದೆ. ಅಷ್ಟೇನೂ ಹೆಚ್ಚು ಓದದ ರವಿ ಪೂಜಾರಿ ಜೀವನಕ್ಕಾಗಿ ಮುಂಬೈಗೆ ತೆರಳಿದ. ಪಾತಕಲೋಕದ ಅಡ್ಡೆಯಂತಿದ್ದ ಅಂಧೇರಿಯಲ್ಲಿ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದ ಆತನಿಗೆ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುತ್ತಿದ್ದವರ ಪರಿಚಯವಾಯಿತು. ಮುಂದೆ ಮುಂಬೈನ ಭೂಗತ ಲೋಕದ ಪಾತಕಿ ಛೋಟಾ ರಾಜನ್ ಜೊತೆ ಸೇರಿಕೊಂಡು ಹಫ್ತಾ ವಸೂಲಿ ದಂಧೆಗಿಳಿದ.

ಕೈಗೆ ಹೆಚ್ಚು ಹಣ ಸಿಗುತ್ತಿದ್ದಂತೆ ಮೊದಲ ಬಾರಿಗೆ ತನ್ನ ಭವಿಷ್ಯದಲ್ಲಿ ವಿರೋಧಿಯಾಗಬಹುದಾದ ಬಾಲನ ಕೊಲೆ ಮಾಡುವ ಮೂಲಕ ಅಧಿಕೃತವಾಗಿ ಪಾತಕಿಗಳ ಪ್ರಪಂಚಕ್ಕೆ ಪ್ರವೇಶ ಪಡೆದ. ಅದೇ ವೇಳೆಗೆ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟಿಸಿ ನೂರಾರು ಜನ ಸಾವನ್ನಪ್ಪಿದ ಪ್ರಕರಣದಲ್ಲಿ ಪಾತಕಿ ದಾವೂದ್ ಇಬ್ರಾಹಿಂ ಕೈವಾಡವಿರುವುದು ಖಚಿತವಾಯಿತು.

ರವಿಪೂಜಾರಿ, ಛೋಟಾ ರಾಜನ್ ಸಹಾಯದಿಂದಲೇ ದಾವೂದ್ ಇಬ್ರಾಹಿಂ ಸರಣಿ ಬಾಂಬ್ ಸ್ಫೋಟ ನಡೆಸಿದ್ದಾನೆ ಎಂಬ ಶಂಕೆ ವ್ಯಕ್ತವಾಯಿತು. ತನಗಿನ್ನು ಭಾರತದಲ್ಲಿ ಉಳಿಗಾಲವಿಲ್ಲ ಎಂಬುದನ್ನು ಅರಿತ ರವಿ ಪೂಜಾರಿ ಅಲ್ಲಿಂದ ನೇರವಾಗಿ ದುಬೈಗೆ ಹಾರಿದವನು ಇಂದಿಗೂ ಭಾರತಕ್ಕೆ ಹಿಂತಿರುಗದೆ ವಿದೇಶದಲ್ಲೇ ತಲೆಮರೆಸಿಕೊಂಡಿದ್ದ.

ದಶಕಗಳ ಕಾಲ ಭೂಗತ ಜಗತ್ತಿನಲ್ಲಿ ನಿಗೂಢವಾಗೇ ಇದ್ದ ರವಿ ಪೂಜಾರಿ ಮತ್ತೆ ಸುದ್ದಿಗೆ ಬಂದಿದ್ದು 2000ರಲ್ಲಿ. ಬ್ಯಾಂಕಾಕ್‍ನಲ್ಲಿ ರವಿ ಪೂಜಾರಿ ಮತ್ತು ಛೋಟಾ ರಾಜನ್‌ನನ್ನು ದಾವೂದ್ ಇಬ್ರಾಹಿಂ ಸುಪಾರಿ ನೀಡಿ ಮುಗಿಸಲು ಯತ್ನಿಸಿದ್ದ. ಭಾರತದ ತನಿಖಾಧಿಕಾರಿಗಳಿಗೆ ಈ ಇಬ್ಬರು ತನ್ನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆಂಬ ಸಂಶಯದ ಮೇಲೆ ಒಂದು ಕಾಲದ ಬಲಗೈ ಮತ್ತು ಎಡಗೈಯಂತಿದ್ದ ಈ ಇಬ್ಬರಿಗೆ ಖೆಡ್ಡಾ ತೋಡಿಸಲು ದಾವೂದ್‌ ಮುಂದಾಗಿದ್ದ. ದುಬೈನಿಂದ ಆಸ್ಟ್ರೇಲಿಯಾಕ್ಕೆ ಹೋದ ರವಿ ಪೂಜಾರಿ ನಂತರ ಏನು ಮಾಡುತ್ತಿದ್ದಾನೆ, ಎಲ್ಲಿದ್ದಾನೆ ಎಂಬುದರ ಬಗ್ಗೆ ಹೊರ ಜಗತ್ತಿಗೆ ತಿಳಿಯಲೇ ಇಲ್ಲ.

ಹಿಂಸೆ ಅನುಭವಿಸಿದ ಸೋದರಿಯರು:

ರವಿ ಪೂಜಾರಿಯ ಇಬ್ಬರು ಸಹೋದರಿಯರಿಯರಾದ ಜಯಲಕ್ಷ್ಮಿ ಸಾಲಿಯಾನ್ ಮತ್ತು ನೈನಾ ಪೂಜಾರಿ ಇಬ್ಬರೂ ಅವರ ಜೊತೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಸಹೋದರ ಮಾಡುತ್ತಿರುವ ಕೃತ್ಯಗಳಿಂದಾಗಿ ತಲೆ ಎತ್ತಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ರವಿಪೂಜಾರಿಯ ಸಹೋದರಿಯರು ಎಂದು ಹೇಳದಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿಯಲು ಈ ಇಬ್ಬರು ಸಹೋದರಿಯರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ರವಿ ಪೂಜಾರಿಯ ಸಹೋದರಿಯರು ಎಂಬ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ಇವರು ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿತ್ತು. ಯಾರೊಬ್ಬರೂ ಇವರಿಗೆ ಬಾಡಿಗೆ ಮನೆಯನ್ನೂ ಕೊಡುತ್ತಿರಲಿಲ್ಲ.

ದೆಹಲಿ, ಲಖನೌ, ಮುಂಬೈ ಸೇರಿದಂತೆ ಅನೇಕ ಕಡೆ ರಾತ್ರೋರಾತ್ರಿ ಇವರ ಮನೆಯನ್ನೇ ಖಾಲಿ ಮಾಡಿಸಿದ್ದರು. ಹೀಗಾಗಿ ಸಹೋದರರು ಮತ್ತು ಸಹೋದರಿಯರು ರವಿ ಪೂಜಾರಿಯನ್ನು ಸಹೋದರನೆಂದು ಹೇಳಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಈ ಕುಟುಂಬ ರವಿ ಪೂಜಾರಿಯನ್ನು ಮರೆತು ದಶಕಗಳೇ ಕಳೆದಿವೆ.

'ಹಿಂದೂ ಡಾನ್‌' ಎಂಬ ಹುಚ್ಚು:

ರವಿ ಪೂಜಾರಿ ತಾನು ಮಾಡಿದ ಪಾಪದ ಕೃತ್ಯಗಳಿಗೆ ರಕ್ಷಣೆ ಪಡೆಯಲು ತಾನೊಬ್ಬ ಹಿಂದೂ ರಕ್ಷಕನೆಂದು ಬಿಂಬಿಸಿಕೊಳ್ಳುತ್ತಿದ್ದ. ದಾವೂದ್ ಇಬ್ರಾಹಿಂ, ಚೋಟ ಶಕೀಲ್, ಅಬ್ಬು ಸಲೀಂ, ಟೈಗರ್ ಮೆನನ್ ಸೇರಿದಂತೆ ಅನೇಕ ಭೂಗತ ಪಾತಕಿಗಳ ಮಾಹಿತಿಯನ್ನು ಕೇಂದ್ರ ಸರಕಾರಕ್ಕೆ ಗೌಪ್ಯವಾಗಿ ಕೊಡುತ್ತಿದ್ದ ಎನ್ನಲಾಗಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳೇ ಆಡಳಿತ ನಡೆಸಬೇಕೆಂಬುದು ಆತನ ಧೋರಣೆಯಾಗಿತ್ತು. ಹೀಗಾಗಿ ಅನೇಕ ಮುಸ್ಲಿಂ ಮುಖಂಡರಿಗೆ ಜೀವ ಬೆದರಿಕೆ ಹಾಕುತ್ತಿದ್ದ.

ಬಾಲಿವುಡ್ ನಿರ್ದೇಶಕರು, ನಿರ್ಮಾಪಕರು, ನಟ-ನಟಿಯರು, ಪ್ರಸ್ತುತ ಎನ್‍ಐಎ ವಶದಲ್ಲಿರುವ ಯಾಸಿನ್ ಭಟ್ಕಳ್, ಕಾಶ್ಮೀರ ಪ್ರತ್ಯೇಕ ಹೋರಾಟಗಾರ ಸಯ್ಯದ್ ಮೊಹಮ್ಮದ್ ಗಿಲಾನಿ, ಕರ್ನಾಟಕದ ಮಾಜಿ ಸಚಿವ ಅಭಯ್‍ಚಂದ್ರ ಜೈನ್‌, ಹೋಟೆಲ್‌ ಉದ್ಯಮಿಗಳಿಗೂ ಕೂಡ ಬೆದರಿಕೆ ಹಾಕಿದ್ದ ಆರೋಪ ರವಿ ಪೂಜಾರಿ ಮೇಲಿದೆ. ಹೀಗೆ ದಶಕಗಳ ಕಾಲ ಭೂಗತವಾಗಿದ್ದುಕೊಂಡೇ ಮೆರೆದ ರವಿ ಪೂಜಾರಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.