samachara
www.samachara.com
ಬಜೆಟ್‌ ಹೆಸರಲ್ಲಿ ರೈತರ ಮೂಗಿಗೆ ತುಪ್ಪ; 3 ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ನೇರ ಖಾತೆಗೆ
COVER STORY

ಬಜೆಟ್‌ ಹೆಸರಲ್ಲಿ ರೈತರ ಮೂಗಿಗೆ ತುಪ್ಪ; 3 ಕಂತುಗಳಲ್ಲಿ ವರ್ಷಕ್ಕೆ 6 ಸಾವಿರ ನೇರ ಖಾತೆಗೆ

ಲೋಕಸಭಾ ಚುನಾವಣೆಗೆ ರೈತ ವರ್ಗವನ್ನು ಸೆಳೆಯುವ ತಂತ್ರಗಳನ್ನಂತೂ ಈ ಬಜೆಟ್‌ ಮೂಲಕ ಮಾಡಲಾಗಿದೆ.

Team Samachara

ಕೇಂದ್ರ ಸರಕಾರ ಶುಕ್ರವಾರ ಮಂಡಿಸಿರುವ ಚುನಾವಣಾ ಪೂರ್ವ ಮಧ್ಯಂತರ ಬಜೆಟ್‌ನಲ್ಲಿ ಕೃಷಿಕ ವರ್ಗಕ್ಕೆ ಜನಪ್ರಿಯ ಉಡುಗೊರೆಗಳನ್ನು ಘೋಷಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ದೊಡ್ಡ ಮತಬ್ಯಾಂಕ್‌ ಆಗಿರುವ ಕೃಷಿಕರನ್ನು ಓಲೈಸುವ ಪ್ರಯತ್ನ ನಡೆಸಿದೆ.

ಪಿಯೂಷ್‌ ಗೋಯಲ್‌ ಮಂಡಿಸಿದ ಬಜೆಟ್‌ನಲ್ಲಿ ಸಣ್ಣ ಹಾಗೂ ಮಧ್ಯಮ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದಾರೆ. 'ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ'ಯ ಮೂಲಕ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ದೇಶದ ಸುಮಾರು 12 ಕೋಟಿ ರೈತ ಕುಟುಂಬಗಳಿಗೆ ಈ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಗೋಯಲ್‌ ಹೇಳಿದ್ದಾರೆ.

ವಾರ್ಷಿಕ 3 ಕಂತುಗಳಲ್ಲಿ ಈ ಪ್ರೋತ್ಸಾಹ ಧನವನ್ನು ರೈತರ ಖಾತೆಗಳಿಗೇ ನೇರವಾಗಿ ಜಮಾ ಮಾಡುವುದಾಗಿ ಹೇಳಲಾಗಿದೆ. 2018ರ ಡಿಸೆಂಬರ್‌ನಿಂದಲೇ ಈ ಯೋಜನೆ ಪೂರ್ವಾನ್ವಯವಾಗುವುದರಿಂದ ಚುನಾವಣೆಗೂ ಮೊದಲೇ ಈ ಯೋಜನೆಯ ಮೊದಲ ಕಂತಿನ 2 ಸಾವಿರ ರೂಪಾಯಿ ಹಣ ರೈತರ ಖಾತೆಗೆ ಜಮೆಯಾಗಲಿದೆ. ಈ ಮೂಲಕ ಚುನಾವಣೆಗೂ ಮುನ್ನಾ ರೈತರ ಮನವೊಲಿಸುವ ಕೆಲಸಕ್ಕೆ ಕೇಂದ್ರ ಮುಂದಾಗಿದೆ.

'ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ'ಗೆ 2019-20ನೇ ಸಾಲಿಗಾಗಿ ಒಟ್ಟು 75 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುವುದು. ಮೊದಲ ಕಂತಿನ ಹಣ ಜಮೆ ಮಾಡಲು 20 ಸಾವಿರ ಕೋಟಿ ವೆಚ್ಚವಾಗಲಿದೆ.

ಓಡಿಶಾ ಮತ್ತು ತೆಲಂಗಾಣ ರಾಜ್ಯಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಈಗಾಗಲೇ ಅಲ್ಲಿನ ರಾಜ್ಯ ಸರಕಾರಗಳು ಜಾರಿಗೆ ತಂದಿವೆ. ತೆಲಂಗಾಣದಲ್ಲಿ ವಾರ್ಷಿಕ 8 ಸಾವಿರ ರೂಪಾಯಿ ಹಾಗೂ ಓಡಿಶಾದಲ್ಲಿ ವಾರ್ಷಿಕ 10ರಿಂದ 12,500 ರೂಪಾಯಿ ಪ್ರೋತ್ಸಾಹ ಧನವನ್ನು ರೈತರಿಗೆ ನೀಡಲಾಗುತ್ತಿದೆ.

ಚುನಾವಣೆ ಪೂರ್ವದಲ್ಲಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಕೇಂದ್ರ ಸರಕಾರ ಈ ಬಜೆಟ್‌ ಮೂಲಕ ಮಾಡಿದೆ. ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೇ ಹಾಕುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಆದರೆ, ಈ ನೇರ ಲಾಭದ ಪ್ರಯೋಜನ ಪಡೆಯುವವರು 12 ಕೋಟಿ ರೈತರು ಮಾತ್ರ. ದೇಶದಲ್ಲಿ 70 ಕೋಟಿ ರೈತರಿದ್ದಾರೆ. ಈ ಯೋಜನೆಯ ಪ್ರಯೋಜನ ಎಲ್ಲಾ ರೈತರಿಗೂ ಸಿಗಬೇಕು. ರೈತರಿಗೆ ನಿಶ್ಚಿತವಾದ ಆದಾಯ ಸಿಗುವಂಥ ಯೋಜನೆಗಳನ್ನು ತರದೆ ಕೇವಲ ಹಣ ನೀಡುವುದರಿಂದ ದೀರ್ಘಾವಧಿ ಪರಿಣಾಮ ಸಾಧ್ಯವಿಲ್ಲ.
- ಕುರುಬೂರು ಶಾಂತಕುಮಾರ್‌, ಹಿರಿಯ ರೈತ ಮುಖಂಡ

ಈ ಬಾರಿಯ ಬಜೆಟ್‌ನಲ್ಲಿ ರೈತರ ಸಾಲಮನ್ನಾ ಘೋಷಣೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಕೇಂದ್ರ ಸರಕಾರ ಸಾಲಮನ್ನಾಗೆ ಕೈ ಹಾಕಿಲ್ಲ. 2018-19ರಲ್ಲಿ 11.64 ಲಕ್ಷ ಕೋಟಿ ರೂಪಾಯಿ ಬೆಳೆ ಸಾಲ ವಿತರಣೆಯಾಗಿದ್ದು, ಕಳೆದ 5 ವರ್ಷಗಳಿಂದ ಕೃಷಿಗೆ ನೀಡಿರುವ ಪ್ರೋತ್ಸಾಹದಿಂದ ರೈತರ ಆದಾಯ ದುಪ್ಪಟ್ಟಾಗಿದೆ ಎಂದು ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

ಈ ವರ್ಷ ರಾಷ್ಟ್ರೀಯ ಗೋಕುಲ್‌ ಮಿಷನ್‌ಗೆ 750 ಕೋಟಿ ರೂಪಾಯಿ ಮೀಸಲಿಡಲಾಗಿದ್ದು, ದನಗಳ ಕಲ್ಯಾಣ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳಿಗೆ 566 ಕೋಟಿ ರೂಪಾಯಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಒಟ್ಟಾರೆ ಕೃಷಿ ವಲಯಕ್ಕೆ ಈ ಬಜೆಟ್‌ನಲ್ಲಿ 1,49,981 ಕೋಟಿ ರೂಪಾಯಿ ಹಾಗೂ ಗ್ರಾಮೀಣಾಭಿವೃದ್ಧಿಗಾಗಿ 1,38,962 ಕೋಟಿ ರೂಪಾಯಿಯನ್ನು ಕಾಯ್ದಿರಿಸಲಾಗಿದೆ. ಕೃಷಿ ವಲಯದ ಮೇಲೆ ದೀರ್ಘಾವಧಿ ಪರಿಣಾಮ ಬೀರುವ ಯಾವುದೇ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿಲ್ಲ. ಆದರೆ, ಚುನಾವಣೆಗೆ ರೈತ ವರ್ಗವನ್ನು ಸೆಳೆಯುವ ತಂತ್ರಗಳನ್ನಂತೂ ಈ ಬಜೆಟ್‌ ಮೂಲಕ ಮಾಡಲಾಗಿದೆ.