samachara
www.samachara.com
ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ, ಟಿಡಿಎಸ್‌ ಮಿತಿ ಏರಿಕೆ: ಏನು? ಎತ್ತ?
COVER STORY

ಮಧ್ಯಮ ವರ್ಗಕ್ಕೆ ತೆರಿಗೆ ವಿನಾಯಿತಿ, ಟಿಡಿಎಸ್‌ ಮಿತಿ ಏರಿಕೆ: ಏನು? ಎತ್ತ?

ಕೇಂದ್ರ ಸರಕಾರದ ಈ ತೀರ್ಮಾನದಿಂದ ಸುಮಾರು 3 ಕೋಟಿ ಮಧ್ಯಮ ವರ್ಗದ ಜನರಿಗೆ ಲಾಭವಾಗಲಿದೆ ಎಂದು ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

ಚುನಾವಣೆಗೂ ಮೊದಲು ನಿರೀಕ್ಷೆಯಂತೆ ಮಧ್ಯಮ ವರ್ಗದ ಓಲೈಕೆಗೆ ಇಳಿದಿರುವ ಕೇಂದ್ರ ಸರಕಾರ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿಗಳನ್ನು ಏರಿಕೆ ಮಾಡಿದೆ.

ಬಜೆಟ್‌ ಘೋಷಣೆ ಪ್ರಕಾರ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಆದಾಯ ಇರುವವರು ಇನ್ನು ಮುಂದೆ ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ. ಇದರ ಜತೆಗೆ ಪ್ರಾವಿಡೆಂಟ್‌ ಫಂಡ್‌, ಕೆಲವು ನಿರ್ದಿಷ್ಟ ಉಳಿತಾಯ ಖಾತೆಗಳು ಮತ್ತು ವಿಮೆಯಲ್ಲಿ ಹಣ ಹೂಡುವ ನೌಕರರು 6.50 ಲಕ್ಷ ರೂಪಾಯಿಗಳವರೆಗೂ ಆದಾಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಬಹುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಇಷ್ಟಲ್ಲದೆ 2 ಲಕ್ಷ ರೂಪಾಯಿವರೆಗಿನ ಗೃಹ ಸಾಲದ ಮೇಲಿನ ಬಡ್ಡಿ, ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ, ರಾಷ್ಟ್ರೀಯ ಪಿಂಚಣಿ ಯೋಜನೆಯ ಕಂತಿನ ಮೊತ್ತ, ಆರೋಗ್ಯ ವಿಮೆ ಮತ್ತು ಹಿರಿಯ ನಾಕರೀಕರ ಮೇಲಿನ ಆರೋಗ್ಯ ವೆಚ್ಚಗಳಿಗೂ ತೆರಿಗೆ ವಿನಾಯಿತಿ ಪಡೆದುಕೊಳ್ಳುವ ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ 3 ಲಕ್ಷ ರೂಪಾಯಿ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಲಭ್ಯವಿತ್ತು. ಇದನ್ನೀಗ 5 ಲಕ್ಷಕ್ಕೆ ಏರಿಕೆ ಮಾಡಿರುವುದರಿಂದ ಸುಮಾರು 3 ಕೋಟಿ ಮಧ್ಯಮ ವರ್ಗದ ಜನರಿಗೆ ಲಾಭವಾಗಲಿದೆ ಎಂದು ಪಿಯೂಷ್‌ ಗೋಯಲ್‌ ಹೇಳಿದ್ದಾರೆ.

ಆದರೆ ಗೋಯಲ್‌ ಹೇಳಿಕೆಗೆ ಆರ್ಥಿಕ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ. “ಐದು ಲಕ್ಷದವರೆಗಿನ ಆದಾಯ ಇರುವವರು ಮಧ್ಯಮ ವರ್ಗ ಎಂಬ ವ್ಯಾಖ್ಯಾನವನ್ನು ಇವರಿಗೆ ಯಾರು ಕೊಟ್ಟಿದ್ದು ಎಂಬುದೇ ತಿಳಿದಿಲ್ಲ. ಇವತ್ತಿನ ಜೀವನಮಟ್ಟದಲ್ಲಿ ಮಧ್ಯಮ ವರ್ಗವೆಂದರೆ ಕನಿಷ್ಠ 10 ಲಕ್ಷದವರೆಗಾದರೂ ಆದಾಯವಿರಬೇಕು ಎಂಬುದು ನನ್ನ ಭಾವನೆ. ಐದು ಲಕ್ಷದವರೆಗಿನ ಆದಾಯವನ್ನು ಎಲ್ಲೂ ಮಧ್ಯಮ ವರ್ಗ ಎಂದು ಕರೆಯುವುದಿಲ್ಲ,” ಎನ್ನುತ್ತಾರೆ ಬೆಂಗಳೂರು ವಿವಿ ಅರ್ಥಶಾಸ್ತ್ರ ಪ್ರಧ್ಯಾಪಕ ಪ್ರೊ. ಕೇಶವ್‌.

10 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ನೀಡಿದ್ದರೆ ಹೆಚ್ಚಿನ ಲಾಭವಾಗುತ್ತಿತ್ತು. ಡಿಮಾನಟೈಸೇಷನ್‌, ಜಿಎಸ್ಟಿಯಿಂದ ಆದಾಯ ತೆರಿಗೆ ಹೆಚ್ಚಳವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ನಿರ್ಧಾರದಲ್ಲಿ ಅದೆಲ್ಲೂ ಕಾಣಿಸುತ್ತಿಲ್ಲ. ಈ ತೀರ್ಮಾನದಿಂದ ಸುಮಾರು ಒಬ್ಬರಿಗೆ 9 ಸಾವಿರ ರೂಪಾಯಿ ಲಾಭ ಸಿಗಬಹುದು ಅಷ್ಟೇ. ದೊಡ್ಡ ಬದಲಾವಣೆಯೇನೂ ಆಗುವುದಿಲ್ಲ ಎನ್ನುತ್ತಾರೆ ಅವರು.

ಇನ್ನೊಂದು ಕಡೆ ಶ್ರೇಣಿಕೃತ ತೆರಿಗೆ ವ್ಯವಸ್ಥೆ ಇರಬೇಕಾಗಿತ್ತು ಎನ್ನುವುದು ಅವರ ಅಭಿಪ್ರಾಯ. “ಶೇಕಡಾ 5, 10, 15 ಹೀಗೆ ತೆರಿಗೆ ವ್ಯವಸ್ಥೆ ಇರಬೇಕಾಗಿತ್ತು. ಆದರೆ ಇಲ್ಲಿ 5 ಲಕ್ಷ ರೂಪಾಯಿ ದಾಟುತ್ತಿದ್ದಂತೆ ಶೇಕಡಾ 20ರಷ್ಟು ತೆರಿಗೆ ಇದೆ. ವಿನಾಯಿತಿ ನೀಡುವುದರ ಜತೆಗೆ 1 ಕೋಟಿ ರೂ. ಮೇಲಿನ ಆದಾಯ ಇರುವವರ ತೆರಿಗೆ ಹೆಚ್ಚಿಸಬಹುದಾಗಿತ್ತು. ದೇಶದಲ್ಲಿ ಅಸಮಾನತೆ ಹೆಚ್ಚಾಗುತ್ತಿರುವುದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಬಹುದಾಗಿತ್ತು,” ಎನ್ನುತ್ತಾರೆ ಕೇಶವ್‌. ಆದರೆ ಹಾಗೊಂದು ಚಿಂತನೆ ಮಾಡದೆ ಕೇವಲ ಕ್ಷಣಿಕ ಓಲೈಕೆಗೆ ಕೇಂದ್ರ ಸರಕಾರ ಇಳಿದಿದೆ ಎಂಬುದು ಅವರ ಆರೋಪ.

ಸ್ಟಾಂಡರ್ಡ್‌ ಡಿಡಕ್ಷನ್‌ ಏರಿಕೆ

ಆದಾಯ ತೆರಿಗೆ ಮಿತಿ ಏರಿಕೆ ಸಂದರ್ಭದಲ್ಲೇ ಹಾಲಿ 40,000 ರೂಪಾಯಿ ಇರುವ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50,000 ರೂಪಾಯಿಗಳಿಗೆ ಏರಿಕೆ ಮಾಡಿದ್ದಾರೆ. ಈ ಹಿಂದೆ ಸಂಬಳ ಪಡೆಯುವ ನೌಕರರಿಗೆ 15,000 ರೂ.ಗಳ ವೈದ್ಯಕೀಯ ವೆಚ್ಚ ಮತ್ತು 19,200 ರೂ.ಗಳ ಪ್ರಯಾಣ ವೆಚ್ಚಗಳಿಗೆ ತೆರಿಗೆ ವಿನಾಯಿತಿ ಪಡೆದುಕೊಳ್ಳುವ ಅವಕಾಶವಿತ್ತು. ಅದನ್ನು ಒಟ್ಟುಗೂಡಿಸಿ 2017-18ರಲ್ಲಿ ‘ಸ್ಟ್ಯಾಂಡರ್ಡ್‌ ಡಿಡಕ್ಷನ್‌’ ರೂಪದಲ್ಲಿ 40,000 ರೂಪಾಯಿಗಳ ಹಣಕ್ಕೆ ತೆರಿಗೆ ವಿನಾಯಿತಿ ನೀಡುವ ಪರಿಪಾಠ ಆರಂಭಿಸಲಾಗಿತ್ತು.

ಇದೀಗ ಈ ಮೊತ್ತವನ್ನು 50,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದ್ದು ಒಂದೊಮ್ಮೆ ಯಾವುದೇ ಹೂಡಿಕೆ ಇಲ್ಲದೆಯೂ 5,50,000 ರೂಪಾಯಿ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ.

ಇದರಿಂದ ತಿಂಗಳ ಸಂಬಳ ಪಡೆಯುವ ಮೂರು ಕೋಟಿ ನೌಕರರಿಗೆ ವಾರ್ಷಿಕ 4,700 ಉಳಿತಾಯವಾಗಲಿದೆ ಎಂದು ಪಿಯೂಷ್‌ ಗೋಯಲ್‌ ಹೇಳಿದ್ದಾರೆ. ಇನ್ನೊಂದು ವಿಶೇಷವೆಂದರೆ ಇದೀಗ ಎರಡನೇ ಮನೆಯ ಮೇಲಿನ ಬಾಡಿಗೆಗೂ ತೆರಿಗೆ ವಿನಾಯಿತಿ ಪಡೆದುಕೊಳ್ಳುವ ಅವಕಾಶವನ್ನು ಸರಕಾರ ಕಲ್ಪಿಸಿದೆ. ತಮ್ಮ ಮನೆಯಲ್ಲದೆ, ಮಕ್ಕಳು ಅಥವಾ ಪೋಷಕರಿಗಾಗಿ ಪಡೆದ ಮನೆಯ ಬಾಡಿಗೆ ವೆಚ್ಚಕ್ಕೂ ವಿನಾಯಿತಿ ತೆಗೆದುಕೊಳ್ಳುವ ಆಯ್ಕೆ ಇದೆ.

ಇನ್ನು ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಠೇವಣಿ ಇಡುವ ಹಣದ ಮೇಲಿನ ಬಡ್ಡಿಗೆ ಪಡೆದುಕೊಳ್ಳಬಹುದಾದ ತೆರಿಗೆ ವಿನಾಯಿತಿ ಮಿತಿಯನ್ನು 10,000 ರೂಪಾಯಿಯಿಂದ 40,000 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರಿಂದ ಇನ್ನು ಮುಂದೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟ ಹಣಕ್ಕೆ ಬರುವ 40,000 ರೂಪಾಯಿವರೆಗಿನ ಬಡ್ಡಿಯ ಹಣಕ್ಕೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.

ಇದೇ ವೇಳೆ ಮನೆ ಬಾಡಿಗೆ ನೀಡಿ ಹಣ ಸಂಪಾದಿಸುವವರಿಗೂ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ. ಸದ್ಯ 1,80,000 ರೂಪಾಯಿವರೆಗಿನ ಮನೆ ಬಾಡಿಗೆಗೆ ಟಿಡಿಎಸ್‌ ವಿನಾಯಿತಿ ನೀಡಲಾಗಿತ್ತು. ಇದನ್ನು 2,40,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

ಇನ್ನುಳಿದ ಆದಾಯ ತೆರಿಗೆ ಮಿತಿಯಲ್ಲಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. 5,00,001ರಿಂದ 10 ಲಕ್ಷ ರೂಪಾಯಿ ಆದಾಯ ಇರುವವರು ಶೇಕಡಾ 20ರಷ್ಟು ಮತ್ತು 10 ಲಕ್ಷಕ್ಕಿಂತ ಮೇಲಿನ ಆದಾಯ ಇರುವವರು ಶೇಕಡಾ 30ರಷ್ಟು ತೆರಿಗೆಯನ್ನು ಸರಕಾರಕ್ಕೆ ಪಾವತಿಸುವುದು ಕಡ್ಡಾಯವಾಗಿದೆ.

ಚಿತ್ರ ಕೃಪೆ: ಐಪ್ಲೀಡರ್ಸ್‌ ಬ್ಲಾಗ್‌