samachara
www.samachara.com
‘ನಾಡ ದೊರೆ’ಗೆ ಅರ್ಥವಾಗದೆ ಹೋದ ಮೊರೆ;  ನಡೆದು ಬಂದವರು ಹೇಳಿದ ಮದ್ಯಪಾನದ ಕರಾಳ ಕತೆಗಳು...
COVER STORY

‘ನಾಡ ದೊರೆ’ಗೆ ಅರ್ಥವಾಗದೆ ಹೋದ ಮೊರೆ; ನಡೆದು ಬಂದವರು ಹೇಳಿದ ಮದ್ಯಪಾನದ ಕರಾಳ ಕತೆಗಳು...

ಮದ್ಯಪಾನ ಮಾಡಿ ಹೋಟೆಲ್‌ ಒಂದರಲ್ಲಿ ಹೊಡೆದಾಡುವ ಶಾಸಕರನ್ನು ಭೇಟಿ ಮಾಡುವ ಮುಖ್ಯಮಂತ್ರಿ ಅದೇ ಮದ್ಯಪಾನವನ್ನು ನಿಷೇಧಿಸಲು 12 ದಿನಗಳಿಂದ ನಡೆದು ಬಂದ ಮಹಿಳೆಯರ ಸಮಸ್ಯೆಗಳನ್ನು ಆಲಿಸಲು ಮೀನಾಮೇಷ ಎಣಿಸಿದರು. ಅವರಿಗಾಗಿ ಈ ಕತೆಗಳು...

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ನೀರು ಕೇಳಿದರೆ ಬೀರು ಕೊಡ್ತೀರ...ವಸತಿ ಕೇಳಿದರೆ ವಿಸ್ಕಿ ಕೊಡ್ತೀರ...ಶಿಕ್ಷಣ ಕೇಳದರೆ ಸಾರಾಯಿ ಕೊಡ್ತೀರ...ನಾಚಿಕೆಗೆಟ್ಟ ಸರಕಾರಕ್ಕೆ ಧಿಕ್ಕಾರ ಧಿಕ್ಕಾರ.

ಹೀಗೆ ಘೋಷಣೆ ಕೂಗುತ್ತಾ ಚಿತ್ರದುರ್ಗದಿಂದ 12 ದಿನ ಪಾದಯಾತ್ರೆ ಬೆಳೆಸಿ ಸುಮಾರು 210 ಕಿಮೀ ನಡೆಯುತ್ತಾ ಬೆಂಗಳೂರಿಗೆ ಬಂದವರು ಮದ್ಯಪಾನ ನಿಷೇಧ ಜನಾಂದೋಲನದ ಭಾಗವಾದ ಸಾವಿರಾರು ಮಹಿಳೆಯರು.

ಅಸಲಿಗೆ ಈ ಜನಾಂದೋಲನವನ್ನು ಯಾವುದೇ ಸಂಸ್ಥೆ ಸಂಘಟನೆ ಅಥವಾ ಮುಖಂಡರು ಮುಂದೆ ನಿಂತು ಆಯೋಜಿಸಿದಲ್ಲ ಎಂಬುದು ಗಮನಾರ್ಹ. ಇದಕ್ಕೆ ನಾಯಕರಿಲ್ಲ, ಯೋಜನೆ ಇಲ್ಲ, ಪೂರ್ವ ಸಿದ್ಧತೆಗಳು ಇರಲಿಲ್ಲ. ಬದಲಿಗೆ ಉತ್ತರ ಕರ್ನಾಟಕದ ಮಹಿಳೆಯರಿಗೆ ಕೆಲವು ಸಾಮಾಜಿಕ ಹೋರಾಟಗಾರರು ಅವರು ಅನುಭವಿಸುತ್ತಿದ್ದ ನಿತ್ಯ ಕಷ್ಟಗಳಿಂದ ಬಿಡುಗಡೆ ಪಡೆದುಕೊಳ್ಳಲು ಸೂಚಿಸಿದ ಮಾರ್ಗವಾಗಿತ್ತು.

“ರಾಯಚೂರು ಹಳ್ಳಿಗಳಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಪಡೆದುಕೊಳ್ಳುತ್ತಿದ್ದ ಮಹಿಳೆಯರಿಗೆ ಅನ್ಯಾಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರಿಗಾಗಿ ‘ಗ್ರಾಮೀಣ ಕೂಲಿಕಾರರ ಸಂಘ’ ಹೆಸರಿನಲ್ಲಿ 2009ರಲ್ಲಿ ಸಂಘಟನೆಯೊಂದನ್ನು ಹುಟ್ಟು ಹಾಕಿದರು ಸ್ವರ್ಣಕ್ಕ ಮತ್ತು ಇತರರು,’’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ನೂರ್ ಶ್ರೀಧರ್.

ಈ ಸ್ವರ್ಣಕ್ಕ ಬೇರೆ ಯಾರೂ ಅಲ್ಲ, ಸುಮಾರು 12 ದಿನಗಳ ಕಾಲ ಮಹಿಳೆಯರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಸುರಕ್ಷಿತವಾಗಿ ಕರೆತಂದು, ಅವರ ದನಿಯನ್ನು ವಿಧಾನಸೌಧಕ್ಕೆ ಮುಟ್ಟಿಸಿದ ಸ್ವರ್ಣ ಭಟ್.

ಯಾವಾಗ ಮಹಿಳೆಯರು ಒಂದು ವೇದಿಕೆ ಅಡಿ ಬಂದರೋ, ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆರಂಭಿಸಿದರು. “ಪ್ರತಿಯೊಬ್ಬರ ಮನೆಗಳಲ್ಲೂ ಒಂದೇ ಸಮಸ್ಯೆ. ಒಂದೋ ಗಂಡ ಕುಡಿಯುತ್ತಾನೆ, ಇಲ್ಲ ಮಗ ಕುಡಿಯುತ್ತಾರೆ. ಕುಡಿತದಿಂದ ಸಂಸಾರಗಳು ಹಾಳಾಗುತ್ತಿವೆ. ಏನೇ ಇತರೆ ಸಮಸ್ಯೆ ಮಾತನಾಡಿಕೊಂಡು ಮನೆಗೆ ಹೋದರೆ ಅಲ್ಲಿ ಮತ್ತದೇ ಮದ್ಯಪಾನ ದುರಂತ ಕತೆಗಳು. ಇದಕ್ಕೇನು ಪರಿಹಾರ ಎಂದು ಸಂಘಟನೆಗೆ ಬಂದಿದ್ದ ಮಹಿಳೆಯರು ಕೇಳಲು ಶುರುಮಾಡಿದರು,’’ ಎನ್ನುತ್ತಾರೆ ಸ್ವರ್ಣ ಭಟ್.

ಅವು ಆರಂಭದ ದಿನಗಳು. ಸರಕಾರದ ಯೋಜನೆಯೊಂದರಲ್ಲಿ ಜನರಿಗೆ ಅನ್ಯಾಯವಾಗದ ನೋಡಿಕೊಳ್ಳಲು ಹುಟ್ಟಿದ ಸಂಘ ಅದು. ಆದರೆ ಸರಕಾರವೇ ಮುಂದೆ ನಿಂತು ಕುಡಿಸುತ್ತಿರುವ ಮದ್ಯಪಾನದ್ದೇ ಸಮಸ್ಯೆ ಎಂದು ಗೊತ್ತಾದ ಮೇಲೆ ಏನು ಮಾಡಬೇಕು? “ಅದೊಂದು ದೊಡ್ಡ ಲಾಬಿ. ಅವರೆಲ್ಲಾ ದೂರದ ಬೆಂಗಳೂರಿನಲ್ಲಿ ಕುಳಿತು ಇದನ್ನು ನಡೆಸುತ್ತಾರೆ. ಅವರನ್ನು ಎದುರಿಸುವುದು ಕಷ್ಟ,’’ ಎಂದು ಕೂಲಿಕಾರ ಮಹಿಳೆಯರಿಗೆ ತಿಳಿ ಹೇಳುವ ಪ್ರಯತ್ನ ಮಾಡಲಾಯಿತು. ಆದರೆ ಮದ್ಯಪಾನದ ಸಮಸ್ಯೆಗಳಿಗೆ ಮುಕ್ತಿ ಸಿಗದೆ ಬದುಕಿಲ್ಲ ಎಂಬುದನ್ನು ತಲೆಮಾರುಗಳ ಅಂತರದಲ್ಲಿ ಅರ್ಥ ಮಾಡಿಕೊಂಡಿದ್ದ ಮಹಿಳೆಯರು ಪಟ್ಟು ಬಿಡಲಿಲ್ಲ. ಕೊನೆಗೆ ಕೂಲಿಕಾರರ ಸಂಘ, ಮದ್ಯ ನಿಷೇಧ ಆಂದೋಲನದ ರೂಪ ಪಡೆದುಕೊಂಡಿತು.

ಕಳೆದ ವರ್ಷ ರಾಯಚೂರಿನಲ್ಲಿ ಸಾವಿರಾರು ಮಹಿಳೆಯರು ಅದರ ಬಲ ಪ್ರದರ್ಶನವನ್ನೂ ನಡೆಸಿದರು. ಅವತ್ತು ಸಿದ್ದರಾಮಯ್ಯ ನೇತೃತ್ವದ ಸರಕಾರ ವಿಚಾರವನ್ನು ತಣ್ಣಗೆ ಬದಿಗೆ ಸರಿಸಿತು. ಇದಾದ ನಂತರ ಅವರು ಈ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಬೆಂಗಳೂರಿಗೆ ಬಂದು ತಮ್ಮ ಜೀವಂತಿಕೆಯನ್ನೂ, ತಳಮಟ್ಟದಲ್ಲಿ ಆಗುತ್ತಿರುವ ಸಮಸ್ಯೆಗಳನ್ನೂ ಬಿಡಿಸಿಟ್ಟು ಹೋಗಿದ್ದಾರೆ. ಮುಖ್ಯಮಂತ್ರಿ ಹೀಗೊಂದು ಫೇಸ್‌ಬುಕ್ ಪೋಸ್ಟ್‌ ಹಾಕುವ ಕ್ರಮ ಕೈಗೊಂಡಿದ್ದಾರೆ.

ಸರಕಾರ ಮದ್ಯಪಾನವನ್ನು ನಿಷೇಧ ಮಾಡಲು ಯಾಕೆ ಸಿದ್ಧವಿಲ್ಲ ಎಂಬುದಕ್ಕೆ ಸಕಾರಣಗಳೂ ಇರಬಹುದು. ಪರ್ಯಾಯ ಆದಾಯ ಮೂಲವನ್ನು ಕಂಡುಕೊಳ್ಳಲು ನಿಧಾನವೂ ಆಗಬಹುದು. ಆದರೆ ಮದ್ಯಪಾನದಿಂದ ಸಮಾಜದ ಕಟ್ಟಕಡೆಯಲ್ಲಿ ಬದುಕು ಜನರ ನಿತ್ಯ ಬದುಕು ಏನಾಗಿದೆ ಎಂಬುದನ್ನು ಕೇಳಿಸಿಕೊಳ್ಳಲೇಬೇಕಿದೆ. ಆ ಕಾರಣಕ್ಕಾಗಿಯೇ ಬೆಂಗಳೂರಿನವರೆಗೂ ನಡೆದು ಬಂದ ಸಾವಿರಾರು ಜನರ ಪೈಕಿ ಒಂದಷ್ಟು ಮಹಿಳೆಯರ ಕತೆಗಳನ್ನು ಇಲ್ಲಿ ಹೆಕ್ಕಿ ಕೊಡುತ್ತಿದ್ದೇವೆ. ಸುಮ್ಮನೆ ಓದಿಕೊಳ್ಳಿ.

ರಾಯಚೂರಿನ ಬಸಮ್ಮ. 
ರಾಯಚೂರಿನ ಬಸಮ್ಮ. 
/ಸಮಾಚಾರ. 

ಆಕೆಯ ಹೆಸರು ಬಸಮ್ಮ; ವಯಸ್ಸು 85 ಮೀರಿದೆ. ಏಷ್ಯಾದಲ್ಲೇ ಅತೀ ಹಿಂದುಳಿದ ರಾಯಚೂರಿನ ದೇವದುರ್ಗದವರು.

ಚಿಕ್ಕ ವಯಸ್ಸಿಗೆ ಮದುವೆಯಾಯಿತು. ವಿಪರೀತ ಕುಡಿತದ ಚಟಕ್ಕೆ ಬಿದ್ದ ಈಕೆಯ ಗಂಡ ಬೇಗೆನೇ ಸಾವನ್ನಪ್ಪಿದ. ಮೂವರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅಕ್ಷರಶಃ ಬೀದಿ ಪಾಲಾದ ಬಸಮ್ಮ, ತಾನೇ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕಿದ್ದಾರೆ. ಐದು ಜನ ಮಕ್ಕಳನ್ನು ಮಹಿಳೆಯೊಬ್ಬಳೆ ದುಡಿದು ಸಾಕುವುದು ಎಂಬುದು ಅಷ್ಟು ಸುಲಭದ ಮಾತಲ್ಲ. ಆದರೆ ಬಸಮ್ಮ ಒಬ್ಬಂಟಿಯಾಗಿ ತನ್ನ ಮಕ್ಕಳನ್ನು ದಡ ಮುಟ್ಟಿಸಿದ್ದಳು.

ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿಕೊಟ್ಟಿದ್ದಳು. ಮೂವರು ಗಂಡು ಮಕ್ಕಳಿಗೂ ಮದುವೆಯಾಗಿದೆ. ಆದರೆ ಯಾವ ಕುಡಿತ ಆಕೆಯ ಗಂಡನ ಪ್ರಾಣವನ್ನು ಹೆಕ್ಕಿ ತಿಂದಿತ್ತೋ ಇಂದು ಅದೇ ಕುಡಿತ ಆಕೆಯ ಮಕ್ಕಳನ್ನೂ ಬಿಟ್ಟಿಲ್ಲ. ಸೊಸೆಯರು ಕೂಲಿ ಮಾಡಿ ಬರುವ ಹಣವನ್ನೂ ಕಸಿದು ಹೋಗುವ ಮಕ್ಕಳು ಕುಡಿದು ಮನೆ ಸೇರಿದರೆ, ಮೊಮ್ಮಕ್ಕಳು ಒಪ್ಪೊತ್ತಿನ ಊಟಕ್ಕೆ ತೃಪ್ತಿಪಟ್ಟು ಮಲಗಬೇಕು ಅಷ್ಟೇ.

ಹೀಗೆ ಕುಡಿದು ಕುಡಿದು ತನ್ನ ಗಂಡ ಕಣ್ಣೆದುರೇ ನರಳಿ ನರಳಿ ಸತ್ತ ದೃಶ್ಯ ಆಕೆಯನ್ನು ಮತ್ತೆ ಮತ್ತೆ ಕಾಡದೆ ಬಿಡಲಿಲ್ಲ. ಮಕ್ಕಳಿಗೂ ಇದೇ ಕಥೆಯಾದರೆ..? ಹೆತ್ತ ಕರುಳು ಸಹಿಸೀತೆ. ವಯಸ್ಸನ್ನೂ ದೇಹದ ಶಕ್ತಿಯನ್ನೂ ಲೆಕ್ಕಿಸದೆ ಕೈನಲ್ಲೊಂದು ಜೋಳಿಗೆ ಹಿಡಿದು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಡೆದೇ ಬಂದವರಲ್ಲಿ ಬಸಮ್ಮ ಒಬ್ಬರು. "ನನಗೆ ಎದುರಾದ ಪರಿಸ್ಥಿತಿ ನನ್ನ ಸೊಸೆ ಮೊಮ್ಮಕ್ಕಳಿಗೆ ಬಾರದೆ ಇರಲಿ," ಎಂಬುದು ಅವರ ಆಶಯವಾಗಿತ್ತು.

ಜಂಪಣ್ಣ. 
ಜಂಪಣ್ಣ. 
/ಸಮಾಚಾರ. 

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಶಿಡ್ಲಾಕೋಣ ಗ್ರಾಮದ ಜಂಪಣ್ಣನ ಕಥೆ ಇದಕ್ಕಿಂತ ಹೃದಯವಿದ್ರಾವಕ. ವಯಸ್ಸು 75 ಮೀರಿದೆ. ತೀರಾ ಬಡತನದಲ್ಲೇ ಬೆಳೆದ ಜಂಪಣ್ಣ ಬಡತನದ ಕಾರಣಕ್ಕೆ ಓದನ್ನು ನಾಲ್ಕನೇ ತರಗತಿಗೆ ನಿಲ್ಲಿಸಿದ್ದರು. ಜಂಪಣ್ಣ ಹಣವಿಲ್ಲದೆ ಶಾಲೆ ಬಿಡುವ ಪರಿಸ್ಥಿತಿ ಎದುರಾಗಾದ ಅವರ ತಂದೆ ಅತ್ತಿದ್ದರಂತೆ. ತೀರಾ 10ರ ಹರೆಯದಲ್ಲೇ ಗ್ಯಾರೇಜಿನಿಂದ ಹೋಟೆಲ್ ಕ್ಲೀನರ್ ಕೆಲಸದವರೆಗೆ ಎಲ್ಲಾ ಕೆಲಸವನ್ನು ಮಾಡಿ ಕಷ್ಟಪಟ್ಟು ದುಡಿದ ಜಂಪಣ್ಣ, ಹಣ ಕೂಡಿಟ್ಟು ಮಕ್ಕಳಿಗಿರಲಿ ಎಂದು ಶಿಡ್ಲಾಕೋಣದಲ್ಲಿ 40 ವರ್ಷಗಳ ಹಿಂದೆಯೇ 12 ಎಕರೆ ಜಮೀನು ಖರೀದಿಸಿದ್ದರು. ಅದರಲ್ಲಿ ಮೂರು ಎಕರೆ ನೀರಾವರಿ ಜಮೀನು. ಶಿಕ್ಷಣ ಇಲ್ಲದಿದ್ದರೂ ಅವರು ಬದುಕಿನ ಹಾದಿ ಕಂಡುಕೊಂಡಿದ್ದರು.

ಇವರಿಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ. ಹೆಣ್ಣುಮಕ್ಕಳಿಗೆ ಅದ್ದೂರಿಯಾಗಿ ಮದುವೆ ಮಾಡಿಸಿಕೊಟ್ಟಿದ್ದಾರೆ. ಮಗನಿಗೂ ಮದುವೆ ಮಾಡಿಸಿ ಬದುಕಿಗಾಗಿ ಕಾರೊಂದನ್ನು ಕೊಡಿಸಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಗ, ಕುಡಿತದ ಚಟಕ್ಕೆ ಒಳಗಾಗಿದ್ದಾನೆ. ಕೊನೆಗೆ ಕಾರನ್ನೂ ಅವರ ಬದುಕನ್ನು ಕುಡಿತವೇ ಕಿತ್ತುಕೊಂಡಿದೆ.

ಕೊನೆಗೆ ಜಂಪಣ್ಣ ಸಹಕಾರಿ ಬ್ಯಾಂಕ್‌ನಿಂದ 2.5 ಲಕ್ಷ ಸಾಲ ಮಾಡಿ ಮಗನಿಗೆ ಕೊಟ್ಟಿದ್ದಾರೆ. ಆದರೆ ಸಾಲ ತೀರಿಸದ ಆತ ಆ ಹಣವನ್ನೂ ಗೆಳೆಯರೊಂದಿಗೆ ಪಾರ್ಟಿ ಮಾಡಿ ಖಾಲಿ ಮಾಡಿದ್ದಾನೆ. ಇದೀಗ ತಂದೆಯಿಂದ ಜಮೀನನ್ನು ಕಸಿದುಕೊಂಡಿರುವ ಮಗ ಮತ್ತು ಸೊಸೆ ಜಂಪಣ್ಣನನ್ನೇ ಹಿಗ್ಗಾಮುಗ್ಗಾ ಥಳಿಸಿ ಮನೆಯಿಂದ ಆಚೆ ಹಾಕಿದ್ದಾರೆ.

ಸಣ್ಣ ವಯಸ್ಸಿನಿಂದ ಟೀ-ಕಾಫಿಯನ್ನು ಕುಡಿದು ಅಭ್ಯಾಸವಿಲ್ಲದ ಜಂಪಣ್ಣನಿಗೆ ಕುಡಿತ ಎಂದರೆ ಆಗದು. ಆದರೆ ಆತನ ಮಗ ಪರಮಪಾಪಿ ಕುಡುಕ. ಪರಿಣಾಮ 12 ಎಕರೆ ಜಮೀನಿನ ಒಡೆಯ ಇಂದು ಮಗನ ಕುಡಿತದ ಚಟದಿಂದಾಗಿ ತುಮಕೂರಿನ ಬಸ್ಟ್ಯಾಂಡ್‌ ಬಳಿ ಭಿಕ್ಷೆ ಬೇಡಿ ತಿನ್ನುವ ದುಸ್ಥಿತಿಗೆ ಒಳಗಾಗಿದ್ದಾರೆ. ವಯೋ ಸಹಜ ಖಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಒದ್ದಾಡುತ್ತಿರುವ ಜಂಪಣ್ಣನಿಗೆ ತುಮಕೂರು ಬಸ್ಟ್ಯಾಂಡ್ ಬಳಿಯೇ ವಾಸ್ತವ್ಯ ಊಟ ಎಲ್ಲಾ.

"ತುಮಕೂರಿನ ಬಳಿ ಮಹಿಳೆಯರು ಪಾದಯಾತ್ರೆ ಬರುತ್ತಿದ್ದರು. ನಾನು ಏನೆಂದು ವಿಚಾರಿಸಿದೆ. ಮದ್ಯ ನಿಷೇಧಕ್ಕಾಗಿ ಮಹಿಳೆಯರು ಒಗ್ಗಟ್ಟಾಗಿ ಚಿತ್ರದುರ್ಗದಿಂದ ಬಂದಿದ್ದಾರೆ ಎಂಬ ವಿಷಯ ತಿಳಿಯಿತು. ಮದ್ಯಪಾನದಿಂದ ನನ್ನ ಬದುಕೇ ಇಂದು ಸರ್ವನಾಶವಾಗಿದೆ. ಜೀವ ಹೋದರೆ ಈ ಹೋರಾಟದಲ್ಲೇ ಹೋಗಲಿ ಎಂದು ಇವರ ಜೊತೆಗೆ ನಾನು ನಡೆದೆಬಿಟ್ಟೆ. ನನಗಾದ ಪರಿಸ್ಥಿತಿ ಯಾವ ತಂದೆಗೂ ಬಾರದೆ ಇರಲಿ," ಎಂದು ಬಿಕ್ಕಿ ಬಿಕ್ಕಿ ಅತ್ತರು ಜಂಪಣ್ಣ.

ಬೆಂಗಳೂರಿಗೆ ನಡೆದು ಬಂದ ಸಾವಿರಾರು ಮಹಿಳೆಯರ ಪ್ರತಿಭಟನೆ ಒಂದು ದೃಶ್ಯ. 
ಬೆಂಗಳೂರಿಗೆ ನಡೆದು ಬಂದ ಸಾವಿರಾರು ಮಹಿಳೆಯರ ಪ್ರತಿಭಟನೆ ಒಂದು ದೃಶ್ಯ. 
/ಸಮಾಚಾರ. 

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಗುಳೆಗುಡ್ಡದ ಮಾಂತವ್ವನಿಗೆ ಈಗಿನ್ನು ವಯಸ್ಸು 24. ಈಕೆಯ ಗಂಡ ತೀರಿಕೊಂಡು 5 ವರ್ಷವಾಗಿದೆ. ಖಂಡಿತ ಇದು ವಿಧವೆಯಾಗುವ ವಯಸ್ಸಲ್ಲ. ಆದರೆ, "ನನ್ನನ್ನು ಈ ವಯಸ್ಸಿನಲ್ಲೇ ವಿಧವೆ ಮಾಡಿದ ಪುಣ್ಯ ಸಾರಾಯಿ ಮಾರಿ ಕುಟುಂಬವನ್ನು ಹಾಳು ಮಾಡುತ್ತಿರುವ ಸರಕಾರಕ್ಕೆ ಸಲ್ಲುತ್ತದೆ," ಎಂದು ತನ್ನ ಆಕ್ರೋಶವನ್ನು ಹೊರ ಹಾಕುತ್ತಾರೆ ಮಾಂತವ್ವ.

16ರಲ್ಲಿಯೇ ಮಾಂತವ್ವಳಿಗೆ 30 ವರ್ಷದವನ ಜೊತೆ ಮದುವೆ ಮಾಡಿಸಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡು ಶಾಲೆ ಮೆಟ್ಟಿಲು ಹತ್ತದ ಆಕೆ ಸೋದರ ಮಾವ ಎಂಬ ಸಲುಗೆಯಿಂದ ಮದುವೆಗೆ ಒಪ್ಪಿದ್ದಾಳೆ. ಆದರೆ ಆಕೆಯ ಗಂಡನಿಗೋ 24 ಗಂಟೆಯೂ ಕುಡಿತದ ಚಟ. ಮುಂಜಾನೆಯಿಂದ ರಾತ್ರಿ ಮಲಗುವವರೆಗೆ ಆತನಿಗೆ ಸಾರಾಯಿಬೇಕು.

ಕೆಲಸಕ್ಕೆ ಹೋಗದ ಆತ ಸಾರಾಯಿಗೆ ಹಣ ಕೊಡದಿದ್ದರೆ ಹೆಂಡತಿಯನ್ನೇ ಹಿಗ್ಗಾ ಮುಗ್ಗಾ ಥಳಿಸುತ್ತಿದ್ದ. ಕೂಲಿ ಮಾಡಿ ಬರುತ್ತಿದ್ದ ಆಕೆ ಗಂಡನಿಗೆ ಹಣ ನೀಡಿ ತಾನು ಉಪವಾಸ ಮಲಗುತ್ತಿದ್ದಳು. ಕೊನೆಗೂ ಕುಡಿದು ಕುಡಿದು ಕರುಳು ಸಂಪೂರ್ಣ ಸುಟ್ಟು ಹೋಗಿ ಕೇವಲ 33 ವರ್ಷಕ್ಕೆ ಪ್ರಾಣ ಬಿಟ್ಟಿದ್ದಾನೆ. ಮೊದಲೇ ಅನಾಥೆಯಾಗಿದ್ದ ಮಾಂತವ್ವಳಿಗೆ ಮಕ್ಕಳೂ ಇಲ್ಲದ ಕಾರಣ ಇಂದು ಕೇಳುವವರೇ ಗತಿಯಿಲ್ಲದಂತಾಗಿದೆ. ಬದುಕು ಮೂರಾಬಟ್ಟೆಯಾಗಿದೆ.

"ಬಾಗಲಕೋಟೆ ಜಿಲ್ಲೆಯಲ್ಲಿ ನನ್ನಂತೆ ಅನೇಕ ಹೆಣ್ಣು ಮಕ್ಕಳು ಸಣ್ಣ ವಯಸ್ಸಿಗೆ ವಿಧವೆಯರಾಗುತ್ತಿದ್ದಾರ. ಸಾರಾಯಿ ಅಂಗಡಿಯ ಮುಂದೆ ದಿನನಿತ್ಯ ಹೆಣ ಬೀಳ್ತದ. ನಮ್ಮ ಗಂಡಂದಿರನ್ನು ಕೊಂದು ಆ ಹೆಣದ ಮೇಲೆ ಸರಕಾರ ನಡೆಸ್ಬೇಕೇನ್ರಿ?,”ಎಂದವರು ಪ್ರಶ್ನಿಸುತ್ತಾರೆ.

ರಾಯಚೂರಿನ ರೇಣುಕಮ್ಮ ಮಾರ್ಗ ಮಧ್ಯದಲ್ಲಿಯೇ ಅಪಘಾತದಿಂದ ತೀರಿಕೊಂಡರು. ಅವರ ಭಾವಚಿತ್ರವನ್ನು ಬೆಂಗಳೂರಿಗೆ ಹೊತ್ತು ತಂದ ಸಂಗಾತಿಗಳು ಮದ್ಯಪಾನದ ವಿರುದ್ಧ ಘೋಷಣೆ ಕೂಗಿದರು. 
ರಾಯಚೂರಿನ ರೇಣುಕಮ್ಮ ಮಾರ್ಗ ಮಧ್ಯದಲ್ಲಿಯೇ ಅಪಘಾತದಿಂದ ತೀರಿಕೊಂಡರು. ಅವರ ಭಾವಚಿತ್ರವನ್ನು ಬೆಂಗಳೂರಿಗೆ ಹೊತ್ತು ತಂದ ಸಂಗಾತಿಗಳು ಮದ್ಯಪಾನದ ವಿರುದ್ಧ ಘೋಷಣೆ ಕೂಗಿದರು. 
/ಸಮಾಚಾರ. 

ಬಳ್ಳಾರಿಯ 26 ವರ್ಷದ ಅಂಬಿಕಳಿಗೆ ಮದುವೆಯಾಗಿ 9 ವರ್ಷವಾಗಿದೆ. ಮನೆಯಲ್ಲಿ ಹಾಸು ಹೊದ್ದು ಮಲಗಿದ್ದ ಬಡತನದಿಂದಾಗಿ 7 ವರ್ಷದ ಹಿಂದೆಯೇ ಗಂಡ- ಹೆಂಡತಿ ಇಬ್ಬರೂ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ದಾಬಸ್‌ಪೇಟೆಯಲ್ಲಿ ಮನೆ ಮಾಡಿರುವ ಇಬ್ಬರೂ ಕಟ್ಟಡ ಕೆಲಸದ ಕೂಲಿ ಕಾರ್ಮಿಕರು. ಆರಂಭದಲ್ಲಿ ಸರಿಯಾಗಿಯೇ ಇದ್ದ ಆಕೆಯ ಗಂಡ ಬೆಂಗಳೂರಿಗೆ ಬಂದ ಮೇಲೆ ವಿಪರೀತ ಕುಡಿಯಲು ಆರಂಭಿಸಿದ್ದಾನೆ. ದಿನರಾತ್ರಿ ಕುಡಿದುಬಂದು ಹೆಂಡತಿಯನ್ನು ಹಿಗ್ಗಾಮುಗ್ಗ ಹೊಡೆಯುವುದು ಕಳೆದ 6 ವರ್ಷದಿಂದ ದಿನಿತ್ಯದ ನಡೆಯುತ್ತಿರುವ ಬವಣೆ ಎನ್ನುತ್ತಾಳೆ ಅಂಬಿಕಾ.

ಚಿತ್ರದುರ್ಗದಿಂದ ಹೊರಟ ಮಹಿಳಾ ಜನಾಂದೋಲನ ಮಂಗಳವಾರ ದಾಬಸ್‌ಪೇಟೆಯ ಬಳಿ ಬಂದಿದೆ. ಜನಾಂದೋಲನದ ಎದುರೇ ಕುಡಿತಕ್ಕೆ ಹಣಕೊಡಲಿಲ್ಲ ಎಂಬ ಕಾರಣಕ್ಕೆ ಅಂಬಿಕಾಳನ್ನು ಆಕೆಯ ಗಂಡ ಅಟ್ಟಾಡಿಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಕೊನೆಗೆ ಆತನಿಂದ ಅಂಬಿಕಾಳನ್ನು ರಕ್ಷಿಸಿದ ಮಹಿಳೆಯರು ಆಕೆಯನ್ನೂ ಬೆಂಗಳೂರಿಗೆ ಮದ್ಯ ನಿಷೇಧ ಹೋರಾಟಕ್ಕೆ ಕರೆತಂದಿದ್ದಾರೆ.

ಕುಡಿತದ ಚಟ ನಮ್ಮ ಗ್ರಾಮೀಣ ಭಾಗದಲ್ಲಿ ನಮ್ಮ ಕುಟುಂಬ ವ್ಯವಸ್ಥೆಯನ್ನು ಹೇಗೆ ನಾಶ ಮಾಡಿದೆ. ಕುಡಿತದಿಂದಾಗಿ ಸಂಬಂಧಗಳು ಹೇಗೆ ತನ್ನ ಮೌಲ್ಯವನ್ನು ಕಳೆದುಕೊಂಡು ಹಾಳಾಗಿವೆ ಎಂಬುದಕ್ಕೆ ಇವು ಕೇವಲ ನಾಲ್ಕು ಉದಾಹರಣೆಗಳಷ್ಟೇ. ಆದರೆ ಮದ್ಯಪಾನ ನಿಷೇಧ ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಹೆಣ್ಣು ಮಕ್ಕಳ ಹಿಂದೆಯೂ ಇಂತಹ ನೂರಾರು ಸಾವಿರಾರು ಕರುಣಾಜನಕ ಕಥೆಗಳಿವೆ. ಆದರೆ ಅದನ್ನು ಆಲಿಸುವ ಸೌಜನ್ಯವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಬೆಳೆಸಿಕೊಳ್ಳಬೇಕಿದೆ. ಆಗ ಮಾತ್ರವೇ ಇಂತಹ ಸಾಮಾಜಿಕ ಆರ್ಥಿಕ ಸಮಸ್ಯೆಗಳಿಗೆ ಆದಾಯದ ಹೊರತಾಗಿಯೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.