samachara
www.samachara.com
ಹಿಂದೂ ಮಹಾಸಭಾ ವೆಬ್‌ಸೈಟ್‌ ಹ್ಯಾಕ್‌: ಯಾರಿವರು ಕೇರಳ ಸೈಬರ್ ವಾರಿಯರ್ಸ್‌? 
COVER STORY

ಹಿಂದೂ ಮಹಾಸಭಾ ವೆಬ್‌ಸೈಟ್‌ ಹ್ಯಾಕ್‌: ಯಾರಿವರು ಕೇರಳ ಸೈಬರ್ ವಾರಿಯರ್ಸ್‌? 

ಇದು ಗಾಂಧಿಜೀ ಹಾಗೂ ರಾಷ್ಟ್ರಕ್ಕೆ ಹಿಂದೂ ಮಹಾಸಭಾ ಮಾಡಿದ ಅಪಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ಮರಣ ದಿನದಂದು ಭಾವಚಿತ್ರಕ್ಕೆ ಗುಂಡು ಹೊಡೆಯುವ ಮೂಲಕ ಗಾಂಧಿ ಹತ್ಯೆಯನ್ನು ಮರುಸೃಷ್ಟಿಸಿ ಉದ್ಧಟತನ ಮೆರೆದಿದ್ದ ಹಿಂದೂ ಮಹಾಸಭಾದ ವೆಬ್‌ಸೈಟ್‌ನ್ನೇ ‘ಕೇರಳ ಸೈಬರ್ ವಾರಿಯರ್ಸ್' ಹ್ಯಾಕ್ ಮಾಡಿದ್ದಾರೆ.

ವೆಬ್‌ಸೈಟ್‌ ಹ್ಯಾಕ್ ಮಾಡಿರುವ ಹ್ಯಾಕರ್‌ಗಳು, ಹಿಂದೂ ಮಹಾಸಭಾ ಮುರ್ದಾಬಾದ್ ಎಂಬ ಘೋಷವಾಕ್ಯಗಳನ್ನು ವೆಬ್‌ಸೈಟ್‌ನ ಲ್ಯಾಂಡಿಂಗ್ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ. ಅಹಿಂಸೆಯನ್ನು ಬೋಧಿಸಿದ ಗಾಂಧಿ ಆ ಮಾರ್ಗವನ್ನು ಅನುಸರಿಸಲು ಇಂದಿನ ಜನರಿಗೆ ಸ್ಫೂರ್ತಿಯಾಗಿದ್ದಾರೆ ಎಂಬ ಸಂದೇಶವನ್ನು ಹರಿಯಬಿಡಲಾಗಿದೆ.

“ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸುವುದಿಲ್ಲ. ಒಂದು ಕಣ್ಣಿಗೆ ಮತ್ತೊಂದು ಕಣ್ಣು ಪಡೆಯುವುದಾದರೆ ಇಡೀ ವಿಶ್ವವೇ ಕುರುಡಾಗಲಿದೆ,” ಎಂಬ ಗಾಂಧಿಯವರ ಖ್ಯಾತ ಹೇಳಿಕೆಯೊಂದನ್ನು ಹಿಂದೂ ಮಹಸಭಾ ವೆಬ್‌ಸೈಟಿನಲ್ಲಿ ಹಾಕಿರುವ ಹ್ಯಾಕರ್ಸ್‌ಗಳು, ಹ್ಯಾಕಿಂಗ್ ಮೂಲಕ ಇಂತವರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ. ಅಲ್ಲದೆ ಇವರನ್ನು ದೇಶದ್ರೋಹದ ಆರೋಪದ ಮೇಲೆ ಕೂಡಲೇ ಬಂಧಿಸಬೇಕು ಎಂದು ಪೊಲೀಸರನ್ನು, ಸರಕಾರಗಳನ್ನು ಒತ್ತಾಯಿಸಿದ್ದಾರೆ.

ಹಿಂದೂ ಮಹಾಸಭಾ ವೆಬ್‌ಸೈಟ್‌ ಹ್ಯಾಕ್‌: ಯಾರಿವರು ಕೇರಳ ಸೈಬರ್ ವಾರಿಯರ್ಸ್‌? 

ಹಿನ್ನೆಲೆ ಏನು..?

ಮಹಾತ್ಮಾ ಗಾಂಧಿ ಮೃತಪಟ್ಟ ದಿನವನ್ನು ದೇಶದಾದ್ಯಂತ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ ಇಷ್ಟು ವರ್ಷಗಳ ಕಾಲ ಜನವರಿ 30 ರಂದು ಹಿಂದೂ ಮಹಾಸಭಾ ‘ಶೌರ್ಯ ದಿನ’ ಎಂದು ಆಚರಿಸಿಕೊಂಡು ಬರುತ್ತಿತ್ತು. ಗಾಂಧಿ ಕೊಲೆಯಾದ ದಿನವನ್ನು ಸಿಹಿ ಹಂಚಿ ಸಂಭ್ರಮಿಸುತ್ತಿತ್ತು. ಆದರೆ ಈ ವರ್ಷ ಮೊದಲ ಬಾರಿಗೆ ಗಾಂಧಿ ಹತ್ಯೆಯನ್ನು ಮರುಸೃಷ್ಟಿಸಿ ವಿವಾದಕ್ಕೆ ಈಡಾಗಿದೆ.

ಉತ್ತರ ಪ್ರದೇಶದ ಅಲಿಘಡದಲ್ಲಿ ಗಾಂಧಿ ಪ್ರತಿಕೃತಿಗೆ ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ನಕಲಿ ಗನ್‌ನಲ್ಲಿ ಗುಂಡಿಕ್ಕಿದ್ದರು. ಈ ಸಂದರ್ಭದಲ್ಲಿ ರಕ್ತವರ್ಣದ ದ್ರವ ಹರಿದು ಮತ್ತೊಮ್ಮೆ ಗಾಂಧಿಯನ್ನು ಹತ್ಯೆ ಮಾಡಿದಂತೆ ಸಂಭ್ರಮಿಸಲಾಗಿತ್ತು. ಇಡೀ ಹಿಂದೂ ಮಹಾಸಭಾ ತಂಡ ಗೋಡ್ಸೆ ಅಮರ್ ರಹೇ ಎಂದು ಘೋಷಣೆ ಕೂಗಿ ಸಿಹಿ ಹಂಚಿ ಸಂಭ್ರಮಿಸಿತ್ತು.

ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಇದು ಗಾಂಧಿಜೀ ಹಾಗೂ ರಾಷ್ಟ್ರಕ್ಕೆ ಹಿಂದೂ ಮಹಾಸಭಾ ಮಾಡಿದ ಅಪಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಹ್ಯಾಕರ್‌ಗಳು ಹಿಂದೂ ಮಹಾಸಭಾ ವೆಬ್‌ಸೈಟ್‌ನ್ನೇ ಹ್ಯಾಕ್ ಮಾಡುವ ಮೂಲಕ ಹೊಸ ಮಾದರಿಯ ಸೈದ್ಧಾಂತಿಕ ಸಮರಕ್ಕೆ ದೇಶ ಸಾಕ್ಷಿಯಾಗುವಂತಾಗಿದೆ.

ಯಾರೀ ಕೇರಳ ಸೈಬರ್ ವಾರಿಯರ್ಸ್?

ಸಮಾಜದಲ್ಲಿ ನಡೆಯುವ ಕೆಲವು ಅಹಿತಕರ ಘಟನೆಗಳನ್ನು ಬೀದಿಗಿಳಿದು ಪ್ರಶ್ನಿಸುವುದು, ಹೋರಾಟ ನಡೆಸುವುದು ಒಂದು ಬಗೆಯಾದರೆ ತಂತ್ರಜ್ಞಾನವನ್ನು ಬಳಸಿಕೊಂಡು ಹೋರಾಡುವುದು, ನ್ಯಾಯ ಕೇಳುವುದು ಮತ್ತೊಂದು ಬಗೆ. ಹೀಗೆ ಎರಡನೇ ಉದ್ದೇಶದೊಂದಿಗೆ ಅಕ್ಟೋಬರ್ 23, 2015 ರಂದು ಆರಂಭವಾದ ಸ್ವಯಂ ಸೇವಾ ಸಂಸ್ಥೆಯೇ ‘ಕೇರಳ ಸೈಬರ್ ವಾರಿಯರ್ಸ್’. ಸಾಮಾನ್ಯವಾಗಿ ‘ವೈಟ್‌ ಹ್ಯಾಕರ್ಸ್‌’ ಎಂದು ಕರೆಯುವ ಇವರದ್ದು ಏನಿದ್ದರೂ ಸೈಬರ್‌ ಜಗತ್ತಿನ ಕಾರ್ಯಾಚರಣೆಗಳು.

ಕೇರಳ ಸೈಬರ್ ವಾರಿಯರ್ಸ್ 2015 ರಲ್ಲಿ ನಡೆಸಿದ ಮೊದಲ ಹ್ಯಾಕ್ ಇಡೀ ಪಾಕಿಸ್ತಾನವನ್ನೇ ಬೆಚ್ಚಿ ಬೀಳಿಸಿತ್ತು. 2008 ನವೆಂಬರ್ 26ರ ಮುಂಬೈ ತಾಜ್ ಹೋಟೆಲ್‌ ಮೇಲಿನ ಉಗ್ರರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಸೈನಿಕರು ಹಾಗೂ ಪೊಲೀಸರ ಸ್ಮರಣಾರ್ಥ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ವೇಳೆ ಪಾಕಿಸ್ತಾನದ ಸರಕಾರಿ ವೆಬ್‌ಸೈಟ್‌ಗಳೂ ಸೇರಿದಂತೆ ಸುಮಾರು 2000 ಕ್ಕೂ ಅಧಿಕ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಕೇರಳ ಸೈಬರ್ ವಾರಿಯರ್ಸ್ ಹುತಾತ್ಮರಾದವರಿಗೆ ಗೌರವ ಸಲ್ಲಿಸಿತ್ತು.

ಕೇರಳ ಸೈಬರ್‌ ವಾರಿಯರ್ಸ್‌ ಸೃಷ್ಟಿಸಿದ ಒಂದು ಲ್ಯಾಂಡಿಂಗ್ ಪೇಜ್. 
ಕೇರಳ ಸೈಬರ್‌ ವಾರಿಯರ್ಸ್‌ ಸೃಷ್ಟಿಸಿದ ಒಂದು ಲ್ಯಾಂಡಿಂಗ್ ಪೇಜ್. 

ಸುಳ್ಳು ಸುದ್ದಿ ಹರಡುವ ಮಾಧ್ಯಮಗಳಿಗೆ ತಕ್ಕ ಶಾಸ್ತಿ ಮಾಡಿದ್ದ ಕೇರಳ ಸೈಬರ್ ವಾರಿಯರ್ಸ್, 2015 ನವೆಂಬರ್‌ನಲ್ಲಿ ಎಲ್ಲಾ ಸ್ಥಳೀಯ ಮಾಧ್ಯಮಗಳ ವೆಬ್‌ಸೈಟ್ ಹ್ಯಾಕ್ ಮಾಡಿತ್ತು. ಸುಳ್ಳು ಸುದ್ದಿಗಳನ್ನು ಅಶ್ಲೀಲ ಶೀರ್ಷಿಕೆಗಳ ಮೂಲಕ ಹರಿಯ ಬಿಡುವ ‘ಕ್ಲಿಕ್ ಬೈಟ್‌ ಪತ್ರಿಕೋದ್ಯಮ’ದ ವಿರುದ್ಧ ಹೀಗೊಂದು ಪ್ರತಿಭಟನೆ ದಾಖಲಿಸಿದ್ದರು. ಇದರಿಂದ ಆಘಾತಕ್ಕೀಡಾದ ಸ್ಥಳೀಯ ಚಾನೆಲ್‌ಗಳು ಕೆಲವು ಸುದ್ದಿ ಹಾಗೂ ಶೀರ್ಷಿಕೆಗಳನ್ನು ಡಿಲೀಟ್ ಮಾಡಲು ಹರಸಾಹಸ ಪಡಬೇಕಾಯಿತು. ನಂತರ ಸುದ್ದಿ ಮಾದ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡದಂತೆ, ಅಶ್ಲೀಲ ಶೀರ್ಷಿಕೆಗಳನ್ನು ಬಳಸದಂತೆ ಕೇರಳ ಸೈಬರ್ ವಾರಿಯರ್ಸ್ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿತ್ತು.

2016 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್ ಫೈನಲ್ ಪಂದ್ಯಾವಳಿಯ ಹಿಂದಿನ ದಿನ ಕೆಲವು ಬಾಂಗ್ಲಾದೇಶದ ಅಭಿಮಾನಿಗಳು ಬಾಂಗ್ಲಾ ಬೌಲರ್ ಟಸ್ಕಿನ್ ಅಹಮದ್ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಲೆಯನ್ನು ಕೈಯಲ್ಲಿ ಹಿಡಿದು ಕೇಕೆ ಹಾಕುವಂತ ಫೋಟೊ ಮಾರ್ಪಿಂಗ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ಪೋಟೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶದ 6 ಸರಕಾರಿ ವೆಬ್‌ಸೈಟ್ ಸೇರಿದಂತೆ ಸುಮಾರು 20 ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದ ಕೇರಳ ಸೈಬರ್ ವಾರಿಯರ್ಸ್ “ಭಾರತ ತಂಡದ ಎದುರು ನೀವು ನಗಣ್ಯ. ನಾವು ಭಾರತೀಯರು ಎನ್ನಲು ಹೆಮ್ಮೆ ಪಡುತ್ತೇವೆ. ಆದರೆ ದೇಶದ ಮೇಲೆ ನಡೆಯುವ ಇಂತಹ ಅಕ್ರಮಣಗಳನ್ನು ಸಹಿಸಿಕೊಂಡು ಸುಮ್ಮನೆ ಕೂರುವುದಿಲ್ಲ,” ಎಂಬ ಸಂದೇಶವನ್ನು ಬರೆದಿದ್ದರು. ಆ ಪಂದ್ಯದಲ್ಲಿ ಧೋನಿ ಪಡೆ ಗೆಲುವು ಸಾಧಿಸುವ ಮೂಲಕ ಬಾಂಗ್ಲಾ ತಂಡ ಹಾಗೂ ಅಭಿಮಾನಿಗಳಿಗೆ ತಕ್ಕ ಉತ್ತರ ನೀಡಿತ್ತು.

2017 ರಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯ ನೆಹರೂ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಮೊದಲ ವರ್ಷದ ಬಿಟೆಕ್ ವಿದ್ಯಾರ್ಥಿ ಜಿಷ್ಣು ಪ್ರಣಾಯ್ ಎಂಬ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದ. ಇದಕ್ಕೆ ಪ್ರತೀಕಾರವಾಗಿ 2017 ಜನವರಿ 10 ರಂದು ಕಾಲೇಜಿನ ವೆಬ್‌ಸೈಟ್ ಹ್ಯಾಕ್ ಮಾಡಿದ್ದ ಕೇರಳ ಸೈಬರ್ ವಾರಿಯರ್ಸ್ “ನಾವು ಓರ್ವ ಲೆಜೆಂಡ್‌ನನ್ನು ಕಳೆದುಕೊಂಡಿದ್ದೇವೆ. ಶಿಕ್ಷಣ ಇಂದು ಸಂಪೂರ್ಣ ವ್ಯಾಪಾರೀಕರಣವಾಗಿದೆ. ಈ ಸಾವಿಗೆ ನ್ಯಾಯ ದೊರಕುವವರೆಗೆ ಪ್ರಣಾಯ್ ಆತ್ಮಕ್ಕೆ ಶಾಂತಿ ಲಭಿಸುವುದಿಲ್ಲ,” ಎಂದು ಬರೆಯುವ ಮೂಲಕ ಪ್ರತಿಭಟಿಸಿದ್ದರು.

ಇದಲ್ಲದೆ ಫೇಸ್‌ಬುಕ್‌ ಹಾಗೂ ಆನ್‌ಲೈನ್ ಮುಖಾಂತರ ವೇಶ್ಯಾವಾಟಿಕೆ ನಡೆಸುವ ಸುಮಾರು 100 ಕ್ಕೂ ಅಧಿಕ ಫೇಸ್‌ಬುಕ್‌ ಪೇಜ್‌ಗಳ ಬಣ್ಣ ಬಯಲು ಮಾಡಿತ್ತು. 24 ಜನವರಿ 2018 ರಂದು ವಿಸರ್ಜಿಸಲಾದ ಈ ತಂಡ 8 ಆಗಸ್ಟ್ 2018ರಿಂದ 17 ಜನ ಸದಸ್ಯರು ಇಬ್ಬರು ಅಡ್ಮಿನ್‌ಗಳ ಜೊತೆ ಮತ್ತೆ ಕೆಲಸ ಆರಂಭಿಸಿದೆ.

ಹೀಗೆ ಕಾಲಕಾಲಕ್ಕೆ ತಮ್ಮದೇ ಮಾದರಿಯ ಸೈಬರ್ ಹೋರಾಟ ನಡೆಸಿಕೊಂಡ ಬಂದ ಇವರೀಗ ಹಿಂದೂ ಮಹಾಸಭಾ ವೆಬ್‌ಸೈಟ್‌ ಹ್ಯಾಕ್‌ ಮಾಡುವ ಮೂಲಕ ತಮ್ಮ ಕಾರ್ಯಾಚರಣೆ ಜೀವಂತವಾಗಿದೆ ಎಂದು ತೋರಿಸಿದ್ದಾರೆ.