samachara
www.samachara.com
ಮದ್ಯ ನಿಷೇಧ ಆಂದೋಲನ; ಮಲ್ಲೇಶ್ವರದಿಂದ ಫ್ರೀಡಂ ಪಾರ್ಕ್‌ವರೆಗೆ...
COVER STORY

ಮದ್ಯ ನಿಷೇಧ ಆಂದೋಲನ; ಮಲ್ಲೇಶ್ವರದಿಂದ ಫ್ರೀಡಂ ಪಾರ್ಕ್‌ವರೆಗೆ...

ತನ್ನ ಜೀವನವಿಡೀ ಮದ್ಯದ ವಿರುದ್ಧ ಹೋರಾಡಿದ ಮಹಾತ್ಮಾ ಗಾಂಧಿ ಅವರ ಸ್ಮರಣೆಯ ದಿನದಿಂದೇ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಅವರು ಬೆಂಗಳೂರು ಚಲೋ ನಡೆಸಿದ್ದು ವಿಶೇಷವಾಗಿತ್ತು. 

ಅಶೋಕ್ ಎಂ ಭದ್ರಾವತಿ

ಅಶೋಕ್ ಎಂ ಭದ್ರಾವತಿ

ರಾಜ್ಯದಲ್ಲಿ ಮದ್ಯಪಾನ ನಿಷೇಧಿಸಲು ಒತ್ತಾಯಿಸಿ ಜನವರಿ 19ರಂದು ಚಿತ್ರದುರ್ಗದಿಂದ ಪಾದಯಾತ್ರೆ ಹೊರಟ ಮಹಿಳಾ ಜನಾಂದೋಲನ ಕೊನೆಗೂ ಬೆಂಗಳೂರಿಗೆ ತಲುಪಿತು. ನಿನ್ನೆ ರಾತ್ರಿಯೇ ರಾಜಧಾನಿಗೆ ಬಂದವರು ಮಲ್ಲೇಶ್ವರಂ ಕ್ರೀಡಾಂಗಣದಲ್ಲಿ ಉಳಿದುಕೊಂಡಿದ್ದ ಮಹಿಳೆಯರು ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮಹತ್ವಾಕಾಂಕ್ಷೆ ಹೊಂದಿದ್ದರು.

ತನ್ನ ಜೀವನವಿಡೀ ಮದ್ಯದ ವಿರುದ್ಧ ಹೋರಾಡಿದ ಮಹಾತ್ಮಾ ಗಾಂಧಿ ಅವರ ಸ್ಮರಣೆಯ ದಿನದಿಂದೇ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಅವರು ಬೆಂಗಳೂರು ಚಲೋ ನಡೆಸಿದ್ದು ವಿಶೇಷ.

ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವ ಅವರ ಮಹತ್ವಾಕಾಂಕ್ಷೆ ಇಡೇರಲಿಲ್ಲ. ಆದರೆ ಉತ್ತರ ಕರ್ನಾಟಕದ ಮಹಿಳೆಯರು ಮುಂದಿಟ್ಟ ಹೆಜ್ಜೆಯನ್ನು ಹಿಂದಡಿ ಇಡುವವರಲ್ಲ, ಪಟ್ಟು ಸಡಿಲಿಸುವವರಲ್ಲ ಎಂಬ ಮಾತಿಗೆ ಪೂರಕವಾಗಿತ್ತು ಇಂದಿನ ಅವರ ಹೋರಾಟ.

ಮಲ್ಲೇಶ್ವರಂನಿಂದ ಕೆಆರ್ ವೃತ್ತದ ಕಡೆಗೆ

ಮಲ್ಲೇಶ್ವರಂ ನಿಂದ ಫ್ರೀಡಂ ಪಾರ್ಕ್ ಕಡೆಗೆ ಹೆಜ್ಜೆ ಹಾಕುತ್ತಿರುವ ಮಹಿಳಾ ಜನಾಂದೋಲನ.
ಮಲ್ಲೇಶ್ವರಂ ನಿಂದ ಫ್ರೀಡಂ ಪಾರ್ಕ್ ಕಡೆಗೆ ಹೆಜ್ಜೆ ಹಾಕುತ್ತಿರುವ ಮಹಿಳಾ ಜನಾಂದೋಲನ.

ಬೆಳಗ್ಗೆ ಮಲ್ಲೇಶ್ವರಂನಿಂದ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದರು. ಪೊಲೀಸರು ಅದಕ್ಕೆ ಅವಕಾಶ ಕೊಡದಿದ್ದರೆ ಕೆ. ಆರ್. ವೃತ್ತ ಬಳಿ ಧರಣಿ ನಡೆಸಲು ನಿಶ್ಚಯಿಸಲಾಗಿತ್ತು.

ಮಧ್ಯಾಹ್ನ 12 ರ ಸುಮಾರಿಗೆ ಮಲ್ಲೇಶ್ವರಂನಿಂದ ಹೊರಟ ಮಹಿಳೆಯರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ವಿಧಾನಸೌಧದ ಕಡೆಗೆ ಸಾಗಿದ್ದರು. ಕೆಲವರು ಬಂಡಾಯ ಸಾಹಿತ್ಯದ ಹಾಡುಗಳನ್ನುಹಾಡುವ ಮೂಲಕ ಹೋರಾಟಗಾರರಲ್ಲಿ ಹುರುಪು ತುಂಬುತ್ತಿದ್ದರು. ಆದರೆ ಮಹಿಳಾ ಚಳುವಳಿಯ ರೂಪುರೇಷೆ ಕುರಿತು ಮೊದಲೇ ಅರಿತಿದ್ದ ಪೊಲೀಸ್ ಇಲಾಖೆ ಫ್ರೀಡಂ ಪಾರ್ಕ್‌ ವೃತ್ತದದಲ್ಲೇ ಮಹಿಳೆಯರನ್ನು ತಡೆದು ನಿಲ್ಲಿಸಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಫ್ರೀಡಂ ಪಾರ್ಕ್ ವೃತ್ತದ ಬಳಿ ಜಾಮಾಯಿಸಿದ ಮಹಿಳೆಯರು ಎಷ್ಟೇ ಕೇಳಿಕೊಂಡರು ವಿಧಾನಸೌಧದ ಬಳಿ ಹೋಗಲು ಮಹಿಳೆಯರಿಗೆ ಅವಕಾಶ ಕಲ್ಪಿಸಿರಲಿಲ್ಲ.

ಮಹಿಳೆಯರ ತಡೆಯಲು ಫಿರಂಗಿ

ಮಲ್ಲೇಶ್ವರಂ ಕೆ. ಸಿ. ಜನರಲ್ ಆಸ್ಪತ್ರೆಯಿಂದ ಮೆಜೆಸ್ಟಿಕ್ ಹಾಗೂ ಕೆ.ಆರ್ ಸರ್ಕಲ್‌ನಿಂದ ಮೆಜೆಸ್ಟಿಕ್‌ಗೆ ಹೋಗುವ ದಾರಿಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಪ್ರತಿಯೊಂದು ವೃತ್ತದ ಬಳಿ ಹಿಂಡು ಗಟ್ಟಲೆ ಪೊಲೀಸರನ್ನು ನಿಯೀಜಿಸಲಾಗಿತ್ತು. ಅಲ್ಲದೆ ಫ್ರೀಡಂ ಪಾರ್ಕ್ ಮೊದಲೇ ಬ್ಯಾರಿಕೇಡ್‌ ಹಾಕಿ ರಸ್ತೆಯನ್ನು ಅಡ್ಡ ಗಟ್ಟಿದ್ದ ಪೊಲೀಸರು ಜಲ ಫಿರಂಗಿ ಹಾಗೂ ಅಶ್ರುವಾಯು ವಾಹನಗಳನ್ನು ಮಹಿಳೆಯರಿಗೆ ಗುರಿ ಮಾಡಿ ಸಾಲುಗಟ್ಟಿ ನಿಲ್ಲಿಸಿದ್ದರು.

ಫ್ರೀಡಂ ಪಾರ್ಕ್ ವೃತ್ತದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಫ್ರೀಡಂ ಪಾರ್ಕ್ ವೃತ್ತದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ನೂರಾರು ಮೈಲಿ ನಡೆದು ದಣಿದು ಬಂದ ಮಹಿಳೆಯರಿಗಾಗಿ ಕನಿಷ್ಟ ಒಂದು ಆಂಬ್ಯುಲೆನ್ಸ್ ವಾಹನವನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ನಿಯೋಜಿಸಬೇಕು ಎಂಬ ಪ್ರಜ್ಞೆ ಪೊಲೀಸ್ ಇಲಾಖೆಗೆ ಇದ್ದಂತೆ ಕಾಣಲಿಲ್ಲ.

ಶತಾಯಗತಾಯ ಮಹಿಳೆಯರಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಅವಕಾಶ ನೀಡಬಾರದು ಎಂದು ಮೊದಲೇ ನಿಶ್ಚಯಿಸಿದ್ದ ಪೊಲೀಸ್ ಇಲಾಖೆ, ಕೆಎಸ್‌ಆರ್‌ಪಿ ಹಾಗೂ ಗೃಹರಕ್ಷಕ ದಳದಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಂಡಿತ್ತು. ಪ್ರೀಡಂ ಪಾರ್ಕ್ ಬಳಿ ಹೋರಾಟಗಾರರಿಗಿಂತ ಪೊಲೀಸರ ಸಂಖ್ಯೆಯೇ ಹೆಚ್ಚು ಎಂಬಂತೆ ಭಾಸವಾಗುವಂತಿತ್ತು ಪರಿಸ್ಥಿತಿ.

ಕೈಜೋಡಿಸಿದ ನಗರವಾಸಿಗಳು

ಫ್ರೀಡಂ ಪಾರ್ಕ್‌ನಲ್ಲಿ ಯಾವಾಗಲೂ ಹೋರಾಟ ಚಳುವಳಿ ಮಾಮೂಲಿ. ಹೀಗಾಗಿ ಇಲ್ಲಿ ನಡೆಯುವ ಹೋರಾಟದ ಕುರಿತು ಬಹುತೇಕ ನಗರವಾಸಿಗಳು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಹೋರಾಟದಿಂದ ಟ್ರಾಫಿಕ್ ಜಾಮ್‌ ಆದರೆ ಎಲ್ಲರನ್ನೂ ಶಪಿಸುತ್ತಾ ಮುಂದೆ ಸಾಗುವುದು ಮಾಮೂಲಿ.

ಆದರೆ ಮದ್ಯ ನಿಷೇಧ ಜನಾಂದೋಲನದ ಕುರಿತು ನಗರವಾಸಿ ಜನರಲ್ಲೂ ಮೃದು ದೋರಣೆ ಮನೆಮಾಡಿದ್ದು ವಿಶೇಷ. ಟ್ರಾಫಿಕ್ ಕಿರಿಕಿರಿಯ ನಡುವೆಯೂ ಜನ ಮಹಿಳೆಯರ ಈ ಆಂದೋಲನಕ್ಕೆ ಬೆಂಬಲ ಸೂಚಿಸಿದ್ದು ಕಂಡು ಬಂತು.

ಈ ಚಳುವಳಿ ತುಮಕೂರು, ನೆಲಮಂಗಲ, ದಾಬಸ್‌ಪೇಟೆಗೆ ಬರುತ್ತಿದ್ದಂತೆ ನಗರದ ಜನರು ಇದರ ಭಾಗವಾಗಿದ್ದಾರೆ. ಮಲ್ಲೇಶ್ವರದಲ್ಲೂ ಅನೇಕ ಬೆಂಗಳೂರಿಗರು ಈ ಚಳುವಳಿಗೆ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಂದಾಜಿನ ಪ್ರಕಾರ ಚಿತ್ರದುರ್ಗದಲ್ಲಿ ಚಳುವಳಿ ಆರಂಭವಾದಾಗ 3 ಸಾವಿರ ಮಹಿಳೆಯರ ತಂಡವಿತ್ತು. ಆದರೆ ಈ ಜನಾಂದೋಲನ ಬೆಂಗಳೂರಿಗೆ ಬಂದಾಗ ಸುಮಾರು 5 ಸಾವಿರ ಸಂಖ್ಯೆ ಮೀರಿತ್ತು. ಈ ಆಂದೋಲನ ಜನರ ಮನಸ್ಸಿನಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದಕ್ಕೆ ಇದು ಸಾಕ್ಷಿ.

ಮಹಿಳಾ ಆಂದೋಲನದ ಭಾಗವಾದ ಮೋಟಮ್ಮ

ಮದ್ಯ ನಿಷೇಧ ಜನಾಂದೋಲನಕ್ಕೆ ಬೆಂಬಲ ಸೂಚಿಸಿದ ಮಾಜಿ ಸಚಿವೆ ಮೋಟಮ್ಮ.
ಮದ್ಯ ನಿಷೇಧ ಜನಾಂದೋಲನಕ್ಕೆ ಬೆಂಬಲ ಸೂಚಿಸಿದ ಮಾಜಿ ಸಚಿವೆ ಮೋಟಮ್ಮ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಮಾಜಿ ಸಚಿವೆ ಮೋಟಮ್ಮ ಸಹ ಇಂದು ಮದ್ಯ ನಿಷೇಧ ಜನಾಂದೋಲನದ ಭಾಗವಾಗಿ ಗಮನ ಸೆಳೆದರು. ಫ್ರೀಡಂ ಪಾರ್ಕ್‌ ಬಳಿ ಜಮಾಯಿಸಿದ್ದ ಮಹಿಳೆಯರ ಗುಂಪಿನ ಬಳಿ ಸಾಮಾನ್ಯರಂತೆ ಆಗಮಿಸಿದ ಮೋಟಮ್ಮ ತಾವು ಸಹ ಮದ್ಯ ನಿಷೇಧವಾಗಬೇಕು ಎಂದು ಒತ್ತಾಯಿಸಿದರು.

ನಿಮ್ಮದೇ ಸರಕಾರ ಅಸ್ಥಿತ್ವದಲ್ಲಿದೆ ಹೀಗಾಗಿ ನೀವು ಈ ಚಳುವಳಿಯ ಭಾಗವಾದರೆ ಪಕ್ಷ ನಿಮ್ಮ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವುದಿಲ್ಲವೇ ಎಂಬ ಪ್ರಶ್ನೆಗೆ ದಿಟ್ಟ ಉತ್ತರ ಕೊಟ್ಟ ಅವರು, “ಒಳ್ಳೆಯ ಕೆಲಸಗಳಿಗೆ ಪಕ್ಷಭೇದ ಮರೆತು ಒಗ್ಗೂಡಬೇಕು. ಮದ್ಯ ನಿಷೇಧದ ಕುರಿತು ನಾನು ಎಸ್‌. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಹೋರಾಡುತ್ತಿದ್ದೇನೆ. ಹೀಗಾಗಿ ಒಳ್ಳೆ ಕೆಲಸಕ್ಕೆ ಕೈ ಜೋಡಿಸಿದರೆ ಅದ್ಯಾವ ಪಕ್ಷ ಶಿಸ್ತುಕ್ರಮ ಜರುಗಿಸುತ್ತೆ ನೋಡೊಣ,” ಎಂದರು

ಮೋಟಮ್ಮ ಜೊತೆಗೆ ಮಹಿಳಾ ಕಾಂಗ್ರೆಸ್ ಘಟಕದ ಕೆಲವು ಮಹಿಳೆಯರು ಸಹ ಮದ್ಯ ನಿಷೇಧ ಜನಾಂದೋಲನದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಸಚಿವರ ಭೇಟಿ ನಾಟಕ

2 ಗಂಟೆಗೆ ಫ್ರೀಡಂ ಪಾರ್ಕ್ ಬಳಿ ಆಗಮಿಸಿದ್ದ ಮಹಿಳಾ ಹೋರಾಟಗಾರರು ವಿಧಾನಸೌಕ್ಕೆ ಮುತ್ತಿಗೆ ಹಾಕಲು ಹೊರಟಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ಕೊಡದಿದ್ದಾಗ ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ನಂತರ ಹೋರಾಟಗಾರರು ಮುಖ್ಯಮಂತ್ರಿ ಸ್ಥಳಕ್ಕೆ ಆಗಮಿಸಿ ನಮ್ಮ ಕೋರಿಕೆಯನ್ನು ಆಲಿಸಬೇಕು. ಅವರು ಬರುವವರೆಗೆ ನಾವು ಈ ಸ್ಥಳದಿಂದ ಕದಲುವುದಿಲ್ಲ ಎಂದು ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಕರಗುವ ಸ್ಥಿತಿಯಲ್ಲಿ ಮಹಿಳೆಯರು ಇರಲಿಲ್ಲ. ಆದರೆ ತೆನೆಹೊತ್ತ ಮಹಿಳೆಯ ಮನನಾನು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ಸ್ಥಳಕ್ಕೆ ಬರಲೇ ಇಲ್ಲ.

ಮಧ್ಯಾಹ್ನ 3.30ರ ಸುಮಾರಿಗೆ ನೆಪಮಾತ್ರಕ್ಕೆ ಎಂಬಂತೆ ಸಹಕಾರಿ ಸಚಿವ ಬಂಡೆಪ್ಪ ಕಾಶೆಂಪೂರ ಸ್ಥಳಕ್ಕೆ ಅಗಮಿಸಿದ್ದರು. ಆದರೆ ಮಹಿಳೆಯರ ಎದುರು ಮಾತನಾಡಿದ ಸಚಿವರಿಗೆ ಈ ಹೋರಾಟದ ಯಾವ ಹಿನ್ನೆಲೆಯೂ ತಿಳಿದಿಲ್ಲ ಎಂಬುದು ಅವರ ಮಾತಿನಲ್ಲೇ ಎದ್ದು ಕಾಣುತ್ತಿತ್ತು. ಹೀಗಾಗಿ ಮಹಿಳಾ ಹೋರಾಟಗಾರರಾಗಲಿ, ಮುಖಂಡರಾಗಲಿ ಸಚಿವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕೊನೆಗೆ “ನಾನು ಮುಖ್ಯಮಂತ್ರಿಯ ಬಳಿ ನಿಮ್ಮ ಸಮಸ್ಯೆಯ ಕುರಿತು ಚರ್ಚಿಸುತ್ತೇನೆ” ಎಂಬ ಹಾರಿಕೆಯ ಮಾತನಾಡಿ ಸ್ಥಳದಿಂದ ಕಾಲ್ಕಿತ್ತರು.

ಮುಖಂಡರ ಜೊತೆ ಸಿಎಂ ಚರ್ಚೆ

ಸಚಿವ ಬಂಡೆಪ್ಪ ಕಾಶೆಂಪೂರ ಸರಕಾರದ ಪ್ರತಿನಿಧಿಯಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಆದರೆ ಅವರದು ವ್ಯರ್ಥ ಪ್ರಯತ್ನ ಎಂದು ತಿಳಿದ ತಕ್ಷಣ ಎಚ್ಚೆತ್ತ ಕುಮಾರಸ್ವಾಮಿ ಪ್ರತಿಭಟನೆಯ ತೀವ್ರತೆ ಅರಿತು 4 ಗಂಟೆ ಸುಮಾರಿಗೆ ತಮ್ಮ ಆಪ್ತ ಸಹಾಯಕ ನಾಗರಾಜುರನ್ನು ಸ್ಥಳಕ್ಕೆ ಕಳುಹಿಸಿದರು. ಅಲ್ಲದೆ ಹೋರಾಟಗಾರರ ಒಂದು ತಂಡವನ್ನು ಮಾತುಕತೆಗೆ ಆಹ್ವಾನಿಸಿದರು.

ಮುಖ್ಯಮಂತ್ರಿಯ ಈ ಆಹ್ವಾನದ ಕುರಿತು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಮದ್ಯಪಾನ ನಿಷೇಧ ಆಂದೋಲನದ ಮುಖಂಡರು 5.30ರ ಸುಮಾರಿಗೆ ಮುಖ್ಯಮಂತ್ರಿಯೇ ನಮಗೆ ಕರೆಮಾಡಿ ಮಾಡಿ ಮಾತುಕತೆಗೆ ಆಹ್ವಾನಿಸಬೇಕು, ಹಾಗೂ ಇಡೀ ಚರ್ಚೆಯನ್ನು ವಿಡಿಯೋ ಮಾಡಲು ಅನುಮತಿ ನೀಡುವುದಾದರೆ ನಾವು ಮಾತುಕತೆಗೆ ಸಿದ್ಧ. ಆದರೆ ಯಾವುದೇ ಕಾರಣಕ್ಕೂ ಮದ್ಯ ನಿಷೇಧವಾಗದೆ ನಾವು ಇಲ್ಲಿಂದ ಕದಲುವವರಲ್ಲ ಎಂದು ಘೋಷಿಸಿದರು. ಕೊನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಕರೆ ಮಾಡಿ ಮಾತುಕತೆಗೆ ಕರೆದು, ಚರ್ಚೆಯನ್ನು ಸ್ವತಃ ತಾವೇ ವಿಡಿಯೋ ಮಾಡಿ ಕೊಡುತ್ತೇವೆ ಎಂಬ ಭರವಸೆ ನೀಡದ ನಂತರ ಮುಖಂಡರು ಮಾತುಕತೆಗೆ ತೆರಳಿದರು.

“ಭಾರತ ಹಳ್ಳಿಗಳ ರಾಷ್ಟ್ರ. ಹಳ್ಳಿಯ ಹೊರತಾದ ಭಾರತವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಆದರೆ ಇಂದು ಕುಡಿತ ಎಂಬ ಸಾಮಾಜಿಕ ಪಿಡುಗು ಹಳ್ಳಿಯ ಕೌಟುಂಬಿಕ ಹಾಗೂ ಆರ್ಥಿಕ ಪರಿಸ್ಥಿತಿಯನ್ನೇ ಹರಿದು ಮುಕ್ಕುತ್ತಿದೆ. ಪ್ರತ್ಯಕ್ಷವಾಗಿ ಸರಕಾರವೇ ಇದಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಗಾಂಧಿ ರಾಷ್ಟ್ರಕ್ಕೆ ಕ್ಷೋಭೆಯಲ್ಲ. ಉತ್ತರ ಕರ್ನಾಟಕದ ಮಹಿಳೆಯರು 12 ದಿನಗಳ ಕಾಲ 250 ಕ್ಕೂ ಹೆಚ್ಚು ಕಿಮೀ ನಡೆದೆ ಬೆಂಗಳೂರಿಗೆ ಬಂದಿದ್ದಾರೆ ಎಂದರೆ ಅವರ ಧೀಶಕ್ತಿಯನ್ನು ಎಂಥದ್ದು? ಅವರನ್ನು ಇಲ್ಲಿಯವರೆಗೆ ನಡೆಸಿದ ಕಷ್ಟ ಯಾವುದು? ಎಂದು ಸರಕಾರ ಗಮನಿಸಿ ಮದ್ಯ ನಿಷೇಧಿಸಬೇಕು,” ಎಂದು ಪ್ರತಿಭಟನೆ ಜತೆಯಲ್ಲಿದ್ದ ದೇಸಿ ಚಿಂತಕ ಪ್ರಸನ್ನ ಆಗ್ರಹಿಸಿದರು.